• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಸಲದ ಖಿನ್ನತೆ ಬಗೆಹರಿಸಲು ಚಲಂ ಕೂಡ ವಿಫಲನಾಗಿದ್ದ!

By Staff
|

ಯಾವುದಕ್ಕೋಸ್ಕರ ನಾನು ಅಳುತ್ತಿದ್ದೆನೋ, ಕಣ್ಣೀರಿಡುತ್ತಿದ್ದೇನೋ -ಅದು ಅಷ್ಟೆಲ್ಲ ಪ್ರಾಮುಖ್ಯತೆಗೆ ಅರ್ಹವಲ್ಲ ಅಂತ ಅನ್ನಿಸಿಬಿಟ್ಟಿತು. ಹಾಗಂತ ನನಗೆ ಮನವರಿಕೆಯಾಯಿತು. ಬದುಕಿಗೆ ಬೇರೆಯದೇ ದಿಕ್ಕು ತೋರಿಸಿದ್ದ ಚಲಂ.

The most influential personalities in Ravi Belageres life!ಮೊದಲೆಲ್ಲ ಹೀಗಾಗುತ್ತಿರಲಿಲ್ಲ. ಮನಸಿನ ಬೇಸರ ಆರು ತಿಂಗಳಗಟ್ಟಲೆ ನನ್ನನ್ನು ಕೆಡವಿ ಹಾಕುತ್ತಿತ್ತು. ನೀವು ನಂಬಲಿಕ್ಕಿಲ್ಲ : ತಿಂಗಳುಗಟ್ಟಲೆ ಅಳುತ್ತ, ಕೋಣೆಯಲ್ಲಿ ಸುಮ್ಮನೆ ರೇಡಿಯೋ ಅವುಚಿಕೊಂಡು ಮಲಗಿಬಿಟ್ಟಿರುತ್ತಿದ್ದೆ.

ಬಳ್ಳಾರಿಯಲ್ಲಿ ಅಮ್ಮ ಐದು ಚಿಕ್ಕಚಿಕ್ಕ ಮನೆಗಳನ್ನು ಕಟ್ಟಿಸಿದ್ದಳು. ಅವುಗಳ ಮಧ್ಯೆ ತನ್ನ ತಂದೆಗೆ ಕೊನೆಗಾಲದಲ್ಲಿ ಆರಾಮವಾಗಿರಲಿ ಅಂತ ಒಂದು ಪುಟ್ಟ ರೂಮು ಕಟ್ಟಿಸಿದ್ದಳು. ತೀರ ಚಿಕ್ಕ ಕೋಣೆಯದು. ಹೆಚ್ಚೆಂದರೆ ಆರು ಅಡಿ ಅಗಲವಿತ್ತು. ಸುಮಾರು ಹದಿನೈದು ಅಡಿ ಉದ್ದಕ್ಕೆ ರೇಲ್ವೆ ಕಂಪಾರ್ಟ್‌ಮೆಂಟಿನಂತಿತ್ತು. ಅದರಲ್ಲೇ ಪುಟ್ಟದೊಂದು ಬಚ್ಚಲು. ಎರಡು ಅಡಿ ಅಗಲದ, ನಾಲ್ಕು ಅಡಿ ಎತ್ತರದ ಒಂದು ಕಿಟಕಿ ಬಿಟ್ಟರೆ ಆ ಕೋಣೆಗೆ ಮತ್ತೇನೂ ಇರಲಿಲ್ಲ. ಒಲ್ಲದ ಸಾಮಾನು ಒಂದು ಕಡೆ ಒಟ್ಟಿ ಇಡಲಿಕ್ಕೆ ಅಂತ ಚಿಕ್ಕದೊಂದು ಅಟ್ಟವಿತ್ತು.

ನನ್ನ ತಾಯಿಯ ತಂದೆ, ಬೆಳಗೆರೆ ಚಂದ್ರಶೇಖರ ಶಾಸ್ತ್ರಿಗಳು ಆಶು ಕವಿಗಳು. ಅವರಿಗೆ ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ನಿಟ್ಟೂರು ಶ್ರೀನಿವಾಸರಾಯರು, ತ.ಸು.ಶಾಮರಾಯರು -ಎಲ್ಲ ಗೆಳೆಯರೇ. ಕಾದಂಬರಿಕಾರ ತ.ರಾ.ಸು. ನಮ್ಮ ಸೋದರತ್ತೆಯ ಅಣ್ಣನ ಮಗ. ತಿಂಗಳುಗಟ್ಟಲೆ ಈ ಗೆಳೆಯರ ಮನೆಗಳಿಗೆ ಹೋಗಿ ಇದ್ದು ಬಿಡುತ್ತಿದ್ದರು ನನ್ನ ತಾತ. ಆತ ಯಾವ ಮನೆಗೆ ಕಾಲಿಟ್ಟರೂ, ಆ ಮನೆ ಮಂದಿಗೆಲ್ಲ ತಾತನೇ.

ಅಂಥ ಹಿರಿಯ ಲೇಖಕರಾದ ಮಾಸ್ತಿಯವರು ನನ್ನ ತಾತನನ್ನು ಹಿರಿಯಣ್ಣನಂತೆ ಕಾಣುತ್ತಿದ್ದರು. ಕೈ ಹಿಡಿದು toiletಗೆ ಕರೆದೊಯ್ಯುತ್ತಿದ್ದರು. ಆ ದಿನಗಳಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಕವಿ ಕೆ.ಎಸ್‌.ನಿಸಾರ್‌ ಅಹಮದ್‌ ಅವರು ಚಿಕ್ಕದೊಂದು ರೂಮು ಮಾಡಿಕೊಂಡು ಒಬ್ಬಂಟಿಗರಾಗಿರುತ್ತಿದ್ದರಂತೆ. ಅವರು ಬರೆದ ಆರಂಭಿಕ ಕವಿತೆಗಳನ್ನು ಎಲ್ಲೋ ಓದಿ, ಯಾರ ಬಾಯಲ್ಲೋ ಕೇಳಿ ‘ಎಷ್ಟು ಚೆನ್ನಾಗಿ ಬರೀತಿಯಪ್ಪಾ! ನಿನ್ನನ್ನೊಂದು ಸಲ ನೋಡಿ ಹೋಗೋಣ ಅಂತ ಬಂದೆ’ ಎಂದು ನನ್ನ ಅಜ್ಜ ನಿಸಾರ್‌ ಅಹಮದ್‌ ರೂಮಿಗೆ ಹೋಗಿದ್ದರಂತೆ.

ಅಂಥ ಅಜ್ಜನಿಗೆ ಒಂದು ತೆರನಾದ ಅವಧೂತ ಗುಣವಿತ್ತು. ಚೆಲ್ಲಣ ಅಥವಾ ಚೆಲ್ಲಾಣ ಅಂತ ಕರೆಯಲ್ಪಡುತ್ತಿದ್ದ, ಇವತ್ತಿನ ಬರ್ಮುಡಾಗಳನ್ನು ಹೋಲುವ ನಿಕ್ಕರೊಂದನ್ನು ಅಜ್ಜ ಧರಿಸುತ್ತಿದ್ದ. ಮೇಲೊಂದು ಅರ್ಧ ತೋಳಿನ ಗೀಟು ಗೀಟಿನ ಶರಾಯಿಯಂಥ ಅಂಗಿ. ಅದೆಲ್ಲವನ್ನೂ ಅಡಗಿಡುವಂಥ ದೊಡ್ಡದೊಂದು ಕಂಬಳಿ. ಕೈಯಲ್ಲಿ ತನ್ನಷ್ಟೇ ಎತ್ತರದ ಒಂದು ಕೋಲು. ನನ್ನ ಅಜ್ಜ ಆರಡಿ ಎತ್ತರದ, ತುಂಬ fair complexion ಇದ್ದ ಸ್ಫುರದ್ರೂಪಿ ವೃದ್ಧ. ಆತನ ಹಲ್ಲು ತೊಂಬತ್ತನೆಯ ವಯಸ್ಸಿನಲ್ಲೂ ಗಟ್ಟಿಯಾಗಿದ್ದವು.

ಹಿರಿಯ ಮಗಳು ಬೆಳಗೆರೆ ಜಾನಕಮ್ಮನವರು(ಆಕೆ ಕವಯಿತ್ರಿ) ತೀರಿ ಹೋದ ಸಂದರ್ಭದಲ್ಲಿ ಮಗಳಿಗಾಗಿ ಅತ್ತೂ ಅತ್ತೂ ನನ್ನ ಅಜ್ಜ ಒಂದು ಕಣ್ಣು ಕಳೆದುಕೊಂಡಿದ್ದ. ಕಡೆಯ ತನಕ ಆತನಲ್ಲಿ ಆ ದುಃಖ ಶಾಶ್ವತವಾಗಿ ಉಳಿದುಬಿಟ್ಟಿತ್ತು. ಆದರೆ ಅಜ್ಜ, ತನಗಿಂತ ಚಿಕ್ಕವರೊಂದಿಗೆ, ಮಕ್ಕಳೊಂದಿಗೆ, ಹೆಣ್ಣು ಮಕ್ಕಳೊಂದಿಗೆ ತುಂಬ ಸಂತೋಷದಿಂದ, ತಾನೇ ಒಂದು ಮಗುವಿನಂತೆ ಬೆರೆತು ಇದ್ದು ಬಿಡುತ್ತಿದ್ದ.

ಯಾರ ಮನೆಗೆ ಹೋದರೂ, ಜಾತಿ ಯಾವುದೇ ಆದರೂ ನೇರವಾಗಿ ಆ ಮನೆಯ ಕಿಚನ್‌ ಹೊಕ್ಕು, ‘ನೋಡಮ್ಮಾ, ಒಂದು ಮುದ್ದೆ, ಸ್ವಲ್ಪ ಸೊಪ್ಪಿನ ಸಾರು ಮಾಡಿಕೊಟ್ಟು ಬಿಡು. ಅವಾಗೊಂದು ಇವಾಗೊಂದು ಅಂತ ಕಾಫಿ ಕೇಳೋದು ಬಿಟ್ರೆ ನನಗೆ ಬ್ಯಾರೆ ಏನೂ ಬೇಕಿಲ್ಲ ಕಣಮ್ಮಾ. ನಿನ್ನ ಕೆಲಸ ಎಲ್ಲ ಮುಗಿದ ಮೇಲೆ ಬಾ: ನಿಂಗೊಂದಷ್ಟು ಹಾಡು ಹೇಳಿಕೊಡ್ತೀನಿ. ಅಲ್ಲೀತಂಕಾ ಮಕ್ಕಳಿಗೆ ಕತೆ ಹೇಳ್ತಾಯಿರ್ತೀನಿ’ ಅಂದು ಹೊರನಡೆಯುತ್ತಿದ್ದ ಅಜ್ಜ. ಹಾಗೆ ಅವರಿವರ ಮನೆಯಲ್ಲಿ ದಿನಗಟ್ಟಲೆ ಇರುತ್ತಿದ್ದ. one fine day, ಆ ಮನೆಯವರಿಗೊಂದು ಮಾತು ಹೇಳದೆ ತನ್ನ ಪಾಡಿಗೆ ತಾನು ಹೆಗಲಿನ ಹಸಿಬೆ ಚೀಲ, ತನ್ನ ಕಂಬಳಿ, ತನ್ನ ಕೈಯ ಕೋಲು ಹಿಡಿದುಕೊಂಡು ಎಲ್ಲಿಗೋ, ಯಾವ ಊರಿಗೋ, ಮತ್ಯಾರ ಮನೆಗೋ ಹೊರಟು ಹೋಗುತ್ತಿದ್ದ. ಆತ ಮತ್ತೆ ಬರುವುದು ಯಾವಾಗಲೋ..?

ಹಾಗೆ ಬಂದಾಗಲೆಲ್ಲ ಆತನಿಗೆ ಉಳಿದುಕೊಳ್ಳಲಿಕ್ಕೆ ಅಂತಲೇ ನನ್ನ ಅಮ್ಮ ಒಂದು ಚಿಕ್ಕ ರೂಮು ಕಟ್ಟಿಸಿದ್ದಳು. ಆದರೆ ಆ ರೂಮು ಕಟ್ಟಿಸಿದ ಮೇಲೆ ಅಜ್ಜ ತುಂಬ ವರ್ಷ ಬದುಕಲಿಲ್ಲ. ಅಪ್ಪನಿಗೆ ಅಂತ ಕಟ್ಟಿಸಿದ ರೂಮು ಖಾಲಿ ಬಿತ್ತಲ್ಲ! ಅದನ್ನು ಬಾಡಿಗಗೆ ಕೊಡಲು ಅಮ್ಮನಿಗೆ ಇಷ್ಟವಿರಲಿಲ್ಲ. ತನ್ನ ತಂದೆಯ ವಯಸ್ಸಿನವರ್ಯಾರಾದರೂ ಬಂದು ಅದರಲ್ಲಿರಲಿ ಅಂತ ಬಯಸುತ್ತಿದ್ದಳು. ಅಂಥವರ್ಯಾರಾದರೂ ಬಂದರೆ ಅವರಿಗೆ ಆರೈಕೆ ಮಾಡುತ್ತಿದ್ದಳು. ಹಾಗೆ ಬಂದು, ಅಲ್ಲಿ ಉಳಿದು ತನ್ನ ಬದುಕಿನ ಕೊನೆಗಾಲವನ್ನು ಕಳೆದು ತೀರಿ ಹೋದ ವೃದ್ಧರೊಬ್ಬರಿದ್ದರು. ಅವರ ಹೆಸರು ರಾಮಚಂದ್ರರಾವು. ನನ್ನ ದೂರದ ಬಂಧು ಆತ. ಅವರು ತೀರಿಕೊಂಡ ಮೇಲೆ ನಾನು ಮತ್ತು ಅಮ್ಮ ಆ ಹಿರಿಯನ ಶವ ಸಂಸ್ಕಾರ ಮಾಡಿಬಂದೆವು.

ಆತ ಬರುವಾಗ ತಂದಿದ್ದ ಒಂದಷ್ಟು ಪುಸ್ತಕಗಳು ಆ ಪುಟ್ಟ ಕೋಣೆಯ ಅಟ್ಟದ ಮೇಲೆ ಹಾಗೆ ಉಳಿದು ಹೋಗಿದ್ದವಲ್ಲ? ನನ್ನ ಡಿಪ್ರೆಷನ್ನಿನ ದಿನಗಳಲ್ಲಿ ತುಂಬ ನಿದ್ರೆ ಮಾತ್ರೆ ತೆಗೆದುಕೊಳ್ಳುತ್ತಿದ್ದೆ. ದಿನವಿಡೀ ಮಲಗೇ ಇರುತ್ತಿದ್ದೆ. ಫಲಿಸದ ಪ್ರೀತಿಗಾಗಿ ಅಳುತ್ತಿದ್ದೆ, ಕೊರಗುತ್ತಿದ್ದೆ. ಆದರೆ ಎಷ್ಟು ದಿನ ಅಂತ ಮಲಗಿರಲು ಸಾಧ್ಯ?

ಒಂದು ಬೆಳಗ್ಗೆ ಎದ್ದವನೇ ಬೇರೇನೂ ತೋಚದೆ ಆ ತೀರಿ ಹೋದ ರಾಮಚಂದ್ರರಾವ್‌ ಅವರ ಪುಸ್ತಕದ ಗಕ್ಷಿಂಟು ಕೆಳಗಿಳಿಸಿದೆ. ಅದರಲ್ಲಿ ನಾಲ್ಕಾರು ಸೆಕ್ಸ್‌ ಮ್ಯಾಗರಿkುೕನ್‌ಗಳಿದ್ದವು. ‘ಚಂದಮಾಮ’ ಪತ್ರಿಕೆ ಪ್ರಕಟಿಸುವ ಮದರಾಸಿನ ಡಾಲ್ಟನ್‌ ಪಬ್ಲಿಕೇಷನ್ಸ್‌ ಅವರೇ ಆ ಕಾಲಕ್ಕೆ ‘ರಮಣಿ’ ಅನ್ನುವಂಥ ಸೆಕ್ಸ್‌ ಮ್ಯಾಗರಿkುೕನ್‌ಗಳನ್ನು ಪ್ರಕಟಿಸುತ್ತಿತ್ತು. ಅವನ್ನೆಲ್ಲ ಒಂದು ಸುತ್ತು ಓದಿ ಮುಗಿಸಿದ ಮೇಲೆ , ರಾಮಚಂದ್ರರಾವ್‌ನ ಖಾಸಗಿ ಲೈಬ್ರರಿ(?)ಯಲ್ಲಿದ್ದ ಪತ್ತೆದಾರಿ ಪುಸ್ತಕಗಳನ್ನೂ ಓದಿದೆ.

ಕೊನೆಯಲ್ಲಿ ನಾನು ಕೈಯಿರಿಸಿದ್ದು ‘ಮೈದಾನಂ’ ಎಂಬ ಕಾದಂಬರಿಯ ಮೇಲೆ. ನನ್ನ ಬದುಕು ಖಚಿತವಾದದ್ದೊಂದು ತಿರುವು ಪಡೆದದ್ದೇ, ಆ ಕಾದಂಬರಿ ಓದಿದ ಮೇಲೆ. ಅದನ್ನು ಬರೆದಾತ ತೆಲುಗಿನ ಪ್ರಖ್ಯಾತ-ಕುಖ್ಯಾತ ಲೇಖಕ ಗುಡಿಪಾಟು ವೆಂಕಟಚಲಂ! ಹೀಗೂ ಬರೆಯಲಿಕ್ಕೇ, ಹೀಗೂ ಆಲೋಚನೆ ಮಾಡಲಿಕ್ಕೆ ಸಾಧ್ಯವಾ ಅಂತ ಅನ್ನಿಸಿದ್ದೇ ಆ ಕಾದಂಬರಿಯನ್ನು ಓದಿದಾಗ. ಆಮೇಲೆ ನಾನು ಚಲಂನ ಬೆನ್ನು ಬಿದ್ದೆ. ಆವರಿಸಿಕೊಂಡಿದ್ದ ಅನೇಕ ತಿಂಗಳುಗಳ ಡಿಪ್ರೆಷನ್ನಿನ ಮಂಜು ನನಗೆ ಗೊತ್ತಿಲ್ಲದೆ ಕರಗಿ ಹೋಗಿತ್ತು.

ಆ ಚಿಕ್ಕ ಕೋಣೆಯಿಂದ ಹೊರಬಿದ್ದು, ಒಂದು ನೀರೊಲೆಗೆ ಉರಿ ಮಾಡಿದೆ. ನನ್ನ ಹುಡುಗಿ ಬರೆದಿದ್ದ ಪತ್ರಗಳು, ಅವಳಿಗೆ ನಾನು ಬರೆದು ಕೊಟ್ಟಿದ್ದ ಪತ್ರಗಳು ಎರಡೂ ನನ್ನಲ್ಲಿದ್ದವು. ತೊರೆದು ಹೋಗುವಾಗ ‘ಇನ್ನು ಇವುಗಳಿಂದ ನನಗೇನು ಕೆಲಸ?’ ಎಂಬಂತೆ ನಾನು ಬರೆದ ಅಷ್ಟೂ ಪತ್ರಗಳನ್ನು ಅವಳು ಹಿಂತಿರುಗಿಸಿ ಹೋಗಿದ್ದಳು. ದಿನಕ್ಕೊಂದು ಪತ್ರ ಬರೆಯದೆ ನನಗೆ ಬೆಳಗೇ ಆಗುತ್ತಿರಲಿಲ್ಲ. ಕೆಲವೊಮ್ಮೆ ದಿನಕ್ಕೆ ಮೂರುನಾಲ್ಕು ಬರೆಯುತ್ತಿದ್ದೆ. ಅವಳವು ಮತ್ತು ನನ್ನ ಪ್ರೇಮಪತ್ರಗಳನ್ನು ನೀರೊಲೆಗೆ ಹಾಕಿ, ಹಂಡೆ ತುಂಬ ನೀರು ಕಾಯಿಸಿಕೊಂಡು ಸ್ನಾನ ಮಾಡಿ ನಿರಾಳವಾದೆ.

ಆಗ ಮುಗಿಯಿತು. ಒಂದು ಹಂತದ ಡಿಪ್ರೆಷನ್ನಿನ ಸಮಸ್ಯೆ. ಆನಂತರವೂ ಸುಮಾರು ಹದಿನಾರು ವರ್ಷ ವಿಫಲ ಪ್ರೇಮದ ಕಹಿಯಲ್ಲಿ ನರಳಿದೆ. ಕಡೆಗೆ ಅದೆಲ್ಲವನ್ನೂ ಬರೆದು ಬರೆದೇ ಕಳೆದುಕೊಳ್ಳಬೇಕಾಯಿತು. ಆದರೆ ಸತ್ತು ಹೋದ ರಾಮಚಂದ್ರರಾವ್‌ ದೊಡ್ಡ ಉಪಕಾರ ಮಾಡಿ ಹೋಗಿದ್ದ. ಚಲಂನನ್ನು ನನ್ನ ಕೋಣೆಯಲ್ಲಿ ತಂದಿಟ್ಟು ಹೋಗಿದ್ದ. ಊರಿನಿಂದ ಊರಿಗೆ ಅಲೆದು ಚಲಂನ ಪುಸ್ತಕಗಳನ್ನೆಲ್ಲ ಸಂಪಾದಿಸಿದೆ. ಓದಿದೆ, ಮತ್ತೆ ಮತ್ತೆ ಓದಿದೆ. ಯಾವುದಕ್ಕೋಸ್ಕರ ನಾನು ಅಳುತ್ತಿದ್ದೆನೋ, ಕಣ್ಣೀರಿಡುತ್ತಿದ್ದೇನೋ -ಅದು ಅಷ್ಟೆಲ್ಲ ಪ್ರಾಮುಖ್ಯತೆಗೆ ಅರ್ಹವಲ್ಲ ಅಂತ ಅನ್ನಿಸಿಬಿಟ್ಟಿತು. ಹಾಗಂತ ನನಗೆ ಮನವರಿಕೆಯಾಯಿತು. ಬದುಕಿಗೆ ಬೇರೆಯದೇ ದಿಕ್ಕು ತೋರಿಸಿದ್ದ ಚಲಂ.

ಈ ಬಾರಿ ಅಂಥ ಚಲಂ ಕೂಡ ನನ್ನ ಖಿನ್ನತೆಗೆ ಔಷಧಿಯಾಗಲಿಲ್ಲ. ತುಂಬ ದಿನಗಳ ನಂತರ ಸತತವಾಗಿ undisturbed ಆಗಿ ಎಂಟು ತಾಸು ನಿದ್ದೆ ಮಾಡಿ ಎದ್ದೆ.

ಮನಸು ಹಗುರಾದಂತೆನಿಸಿ, ನಿಮ್ಮೊಂದಿಗೆ ಮಾತಿಗೆ ಕೂತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X