ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವನ ದೃಷ್ಟಿಯಲ್ಲಿ ಯಾರೂ ಸರಿಯಿಲ್ಲ :ಏನೂ ಸರಿಯಿಲ್ಲ!

By Staff
|
Google Oneindia Kannada News


ಮನೆಯ ಕೆಲಸಗಳ್ನು ಇಷ್ಟು ನೀಟಾಗಿ, ಅಚ್ಚು ಕಟ್ಟಾಗಿ ಮಾಡಬಲ್ಲವನು ಹೊರಗಿನ ವ್ಯವಹಾರಗಳಲ್ಲಿ ಯಾಕೆ ಸೋಲುತ್ತಾನೆ? ಯಾರೊಂದಿಗೂ ಅವನಿಗೆ ಗಾಢ-ಶಾಶ್ವತ ಸ್ನೇಹವಿಲ್ಲ. ಹಾಗಂತ ಜಗಳಗಂಟನಲ್ಲ, ಅಪ್ರಾಮಾಣಿಕನಲ್ಲ. ಅವನ ಸಮಸ್ಯೆಯೆಂದರೆ, ಪ್ರತಿಯೊಬ್ಬರಲ್ಲೂ ತಪ್ಪು ಹುಡುಕುತ್ತಾನೆ. ಆಟೋ ಡ್ರೈವರ್ ಡ್ರೈವಿಂಗ್ ಸರಿಯಿಲ್ಲ ಅಂತ ತಪ್ಪು ಹುಡುಕಿದರೆ ಓ.ಕೆ. ಅವನು ಹಾಕಿಕೊಂಡಿರುವುದು ಸರ್ಕಾರದ ನಿಯಮ ಹೇಳಿರುವಂತಹ ಖಾಕಿಯಲ್ಲ ಎಂದು ರೊಳ್ಳೆ ತೆಗೆದರೆ ಏನು ಗತಿ? ಇವನನ್ನು ಸರಿಮಾಡೋದಾದರೂ ಹ್ಯಾಗೆ ಮಾರಾಯ? ಅಂತ ಕೇಳಿದಳು ಗೆಳತಿ.

ಅವನದು ಫರ್‌ಫೆಕ್ಷನಿಸ್ಟ್ ಖಾಯಿಲೆ. ಪ್ರತಿಯೊಂದನ್ನೂ ದಾರದ ಎಳೆ ಆಚೀಚೆ ಆಗದಂತೆ ಮಾಡಬೇಕು ಅಂತ ಹೊರಡುವವನ ಮನಸ್ಸು. ಅಂಥ ಹಟಗಳು ಅನೇಕರಲ್ಲಿರುತ್ತವೆ. ಆದರೆ ಪ್ರತಿಯೊಂದು ವಿಷಯದಲ್ಲೂ ಆ ಪರಿಯ ಹಟ ಇರಬಾರದು.

ನಾನು ಮುದ್ರಿಸುವ ಪತ್ರಿಕೆ ತಪ್ಪುಗಳಿಲ್ಲದೆ ಇರಬೇಕು ಎಂಬುದು ಸರಿ. ಆದರೆ ಇಡೀ ಪತ್ರಿಕೋದ್ಯಮದಲ್ಲೇ ತಪ್ಪುಗಳಾಗಬಾರದು ಅಂದರೆ ಗತಿ? ತನ್ನ ಕೆಲಸವನ್ನು ತಾನು ಅಚ್ಚುಕಟ್ಟಾಗಿ ಮಾಡಿಟ್ಟು ಹೊರಬಿದ್ದರೆ ಸಾಕು ತಾನೆ? ಇವನು ಇಡೀ ಆಫೀಸಿನ ಅಚ್ಚುಕಟ್ಟುತನ ಎಲ್ಲಿ ಕೆಟ್ಟಿದೆ ಅಂತ ನೋಡಲು ಹೊರಡುತ್ತಾನೆ. ಇದರ ಪರಿಣಾಮವೇನಾಗುತ್ತದೆಂದರೆ, ಪ್ರತಿಯೊಂದರಲ್ಲೂ ಪರ್ಫೆಕ್ಟಾಗಿ ಮಾಡಲು ಹೊರಡುವಾತ ತುಂಬ ಕೆಲಸ ಮಾಡಲಾರ. ಆತನ ಸ್ಪೀಡು ಕುಂಠಿತವಾಗುತ್ತದೆ. ಎಲ್ಲವನ್ನೂ ತಾನೇ ಮಾಡಲು ಹೊರಡುತ್ತಾನಾದ್ದರಿಂದ ಉಳಿದವರಿಂದ ಕೆಲಸ ತೆಗೆಯಲಾರ.

ಎಲ್ಲವನ್ನೂ ಮಾಡಲು ಮುಂದಾದಾಗ ಬೇಗ ದಣಿಯುತ್ತಾನೆ. ಅನಂತರವೂ ಮಾಡಿದ ಕೆಲಸ ತನ್ನ ನಿರೀಕ್ಷೆಯಂತೆ ಪರ್‌ಫೆಕ್ಟಾಗಿ ಆಗುವುದಿಲ್ಲ. ಆಗ ಕೈ ಸೋತು ಕೆಲಸದಿಂದ ಈಚೆಗೆ ಬಂದುಬಿಡುತ್ತಾನೆ.

ಇದರಿಂದ ಆಗುವ ಪರಿಣಾಮವೆಂದರೆ, ಪದೇಪದೇ ಕೆಲಸ ಕಳೆದುಕೊಳ್ಳುತ್ತಾನೆ. ತನ್ನ ಮೇಲೆ ತಾನೇ ವಿಸ್ವಾಸ ಕಳೆದುಕೊಳ್ಳುತ್ತಾನೆ. ಜಗತ್ತಿನ ಪ್ರತಿಯೊಬ್ಬರನ್ನೂ ದೂಷಿಸುತ್ತಾನೆ. ತಪ್ಪು ಹುಡುಕುತ್ತಾನೆ. ಇದೆಲ್ಲದರಿಂದ ತನಗೇ ರೋಸಿಗೆಯಾಗಿ, ತಾನು ಮಾಡಬಲ್ಲ, ಪರ್‌ಫೆಕ್ಟ್ ಆಗಿ ಮಾಡಬಲ್ಲ ಇಸ್ತ್ರಿ, ಬುಕ್ ಬೈಂಡಿಂಗ್, ನೆಲ ಒರೆಸುವುದು ಮುಂತಾದ ಸೀಮಿತ ವಲಯದ ಚಿಕ್ಕ ಕೆಲಸಗಳಿಗೆ ಗಂಟುಬೀಳುತ್ತಾನೆ. ಇವೆಲ್ಲವೂ ಒಂದಕ್ಕೊಂದು ರಿಲೇಟ್ ಆಗಿವೆ ಎಂಬುದನ್ನು ವಿವರಿಸಿ ಅವನಿಗೆ ತಿಳಿ ಹೇಳಿದೆ.

ಜಗತ್ತಿನಲ್ಲಿ ಪರ್‌ಫೆಕ್ಷನಿಸ್ಟುಗಳಿರುತ್ತಾರೆ, ನಿಜ. ಆದರೆ ಜಗತ್ತು ಅವರಿಂದ ನಡೆಯುತ್ತಿರುವುದಿಲ್ಲ. ರೈಲು ಲೇಟಾಗುತ್ತದೆ, ಟ್ರಾಫಿಕ್ ಜಾಮ್ ಆಗುತ್ತೆ, ಮಗ ಫೇಲಾಗುತ್ತಾನೆ, ಮಗಳ ಆರೋಗ್ಯ ಕೆಡುತ್ತದೆ, ಮೈಕು ಕೈ ಕೊಡುತ್ತೆ.. ಈ ಎಲ್ಲ ಅಪಸವ್ಯಗಳೂ ಆಗುತ್ತಲೇ ಇರುತ್ತವೆ ಮಾರಾಯಾ. ಆದರೂ ದಿನ ಕಳೆಯುತ್ತದೆ. ಕಾಲಚಕ್ರ ತಿರುಗುತ್ತದೆ. ನೀನು ಎಲ್ಲವನ್ನೂ ಪರ್‌ಫೆಕ್ಟಾಗಿ ಮಾಡಿದರೂ, ಮಾಡದಿದ್ದರೂ ನಿನಗೆ ನಲವತ್ತೇಳು ವರ್ಷಗಳಂತೂ ಆಗಿ ಹೋದವು.

ಉಳಿದಿರೋದು ಹೆಚ್ಚೆಂದರೆ, ಹತ್ತು ವರ್ಷ ದುಡಿಯಬಹುದಾದ ಕಾಲ. ಈ ಹತ್ತು ವರ್ಷಗಳನ್ನು ಪರ್ಫೆಕ್ಟಾಗಿ ಬೈಂಡ್ ಹಾಕೋದರಲ್ಲಿ ಕಳೆದುಬಿಟ್ಟರೆ ಹ್ಯಾಗೆ? ರೈತನೊಬ್ಬ ರಾಶಿ ಮಾಡಿ ಚೀಲಗಟ್ಟಲೆ ಜೋಳ ತಂದು ಮನೆಯಲ್ಲಿ ಒಟ್ಟುವುದರನ್ನು ನೋಡುತ್ತಾನೆಯೇ ಹೊರತು, ತೆನೆ ಬಡಿದರೆ ಕಾಳು ಚೆಲ್ಲಾಪಿಲ್ಲಿಯಾಗಿಬಿಡುತ್ತವೆ ಅಂತ ಅಂಜಿ ಕೂಡುವುದಿಲ್ಲ. ಈ ಪರ್‌ಫೆಕ್ಷನಿಜಮ್‌ನ ಖಾಯಿಲೆ ಕೊಡವಿಕೋ. ಮಾಡಬೇಕಾದದ್ದು ತುಂಬ ಇದೆ. ಪುಸ್ತಕ ಎತ್ತಿಡು ಅಂತ ಹೇಳಿದೆ.

ಇಷ್ಟು ಹೇಳಿದ ನಂತರವೂ ಒಪ್ಪಿಕೊಳ್ಳಬೇಕಾದ ಮಾತೊಂದಿದೆ. ಈ ಪರ್‌ಫೆಕ್ಷನ್‌ನ ರೋಗ ನನಗೂ ಇದೆ. ಇರುವುದರಿಂದಲೇ ಚಿಕ್ಕದೆರಡು ಪತ್ರಿಕೆ, ಪುಟ್ಟದೊಂದು ಶಾಲೆ ನಡೆಸಿಕೊಂಡು ಕುಳಿತಿದ್ದೇನೆ.

ಆದರೆ ಒಂದು ಪುಣ್ಯ, ಎಲ್ಲರಲ್ಲೂ ತಪ್ಪು ಹುಡುಕುವ ಮಟ್ಟಿಗೆ ಖಾಯಿಲೆ ಬಿದ್ದಿಲ್ಲ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X