ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ರಣ ತಯಾರಿಯ ಘಳಿಗೆಯಲ್ಲಿ ಆತ ಮತ್ತು ಆಕೆ!

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಅಂಥದೊಂದು ಅಪರೂಪದ ಕದನಕ್ಕೆ ಪ್ರಧಾನಿ ವಾಜಪೇಯಿ ಹಾಗೂ ಕಾಂಗ್ರೇಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಸಜ್ಜಾಗಿದ್ದಾರೆ.

ಫೆಬ್ರವರಿ ಆರರಂದು ಲೋಕಸಭೆಯನ್ನು ವಿಸರ್ಜಿಸಿ ಅಂತ ರಾಷ್ಟ್ರಪತಿ ಅಬ್ದುಲ್‌ ಕಲಾಮ್‌ ಅವರಿಗೆ ಶಿಫಾರಸ್ಸು ಮಾಡಿದ ವಾಜಪೇಯಿ ಬಳಗಕ್ಕೆ ಗೆಲ್ಲುವ ವಿಶ್ವಾಸ ತುಂಬಿತುಳುಕುತ್ತಿದ್ದರೆ, ಸೋನಿಯಾ ಕೂಡಾ ಹಿಂದೆ ಸರಿದಿಲ್ಲ. ಸಂಸತ್ತನ್ನು ವಿಸರ್ಜಿಸಿ ಅವಧಿಪೂರ್ವ ಚುನಾವಣೆಯನ್ನು ಎದುರಿಸಬೇಕೆಂಬ ಬಯಕೆ ಬಿಜೆಪಿಗೆ ಹಿಂದಿನಿಂದಲೂ ಇತ್ತು. ಗುಜರಾತಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ದಿಗ್ವಿಜಯ ದೊರತಾಗಲಂತೂ ಪಕ್ಷದ ಚಿಂತನ ಕುಲುಮೆ ಒಂದು ಹೆಜ್ಜೆ ಮುಂದಿಟ್ಟಿತ್ತು.

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೆಂಕಯ್ಯನಾಯ್ಡು ಎಷ್ಟು ಎಗ್ರೆಸಿವ್‌ ಅಗಿದ್ದರೆಂದರೆ ಮುಂಬರುವ ಚುನಾವಣೆಗಳಲ್ಲಿ ಹಿಂದುತ್ವವೆ ಪ್ರಧಾನ ಅಸ್ತ್ರವಾಗಿ ಬಳಕೆಯಾಗಲಿದೆ ಅಂದಿದ್ದಾರೆ. ಅಯೋಧ್ಯೆಯ ಸರಯೂ ನದಿಯ ತಟದಲ್ಲಿ ನಿಂತಿದ ್ದ ವಾಜಪೇಯಿ: ರಾಮಮಂದಿರ ಕಟ್ಟ ಬೇಕು ಎಂಬ ಹಿಂದೂಗಳ ಬಯಕೆಯನ್ನು ಬಹುಕಾಲ ತಡೆಹಿಡಿಯಲು ಸಾಧ್ಯವಿಲ್ಲ ಎಂದಬ್ಬರಿಸಿದ್ದರು.

ಆದರೆ ಹಿಂದುತ್ವದ ಈ ಬಿರುಸು ಮುಂದೆ ನಡೆದ ಕೆಲ ಚುನಾವಣೆಗಳ ನಂತರ ಹಿಂದಕ್ಕೆ ಬಂತು. ಮತ್ತು ಹಿಂದುತ್ವದ ಗಾಳಿ ಬೀಸದೇ ಮತದಾರರನ್ನು ಒಲಿಸಿಕೊಳ್ಳುವ ಪರ್ಯಾಯ ಮಾರ್ಗದ ಬಗ್ಗೆ ಬಿಜೆಪಿ ಚಿಂತನೆ ಶುರುವಿಟ್ಟುಕೊಂಡಿತು. ಇದಕ್ಕೆ ವೇದಿಕೆಯಾಗಿ ಸಿಕ್ಕಿದ್ದು ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡದಲ್ಲಿ ಸರ್ಕಾರ ರಚಿಸುವ ನಂಬಿಕೆ ಬಿಜೆಪಿಗೇ ಇರಲಿಲ್ಲ. ಆದರೂ ಅಭಿವೃದ್ಧಿಯ ವಿಷಯ, ವಾಜಪೇಯಿ ವರ್ಚಸ್ಸು ಪ್ರಚಂಡವಾಗಿ ಕೆಲಸ ಮಾಡಿತು. ಸಂಸತ್‌ಗೆ ಅವಧಿಪೂರ್ವ ಚುನಾವಣೆ ನಡೆಯಬೇಕು ಎಂಬ ಬಿಜೆಪಿಯ ಕನಸಿಗೆ ಕಣ್ಣು ಸಿಕ್ಕಿದ್ದೇ ಈ ಚುನಾವಣೆಯ ನಂತರ.

ಶುರುವಿನಲ್ಲೇನೋ ನಮಗೆ ಅವಧಿ ಪೂರ್ವ ಚುನಾವಣೆ ಬೇಕಿಲ್ಲ ಅಂತ ಬಿಜೆಪಿ ನಾಯಕರು ಹೇಳಿದರೂ ಅದೇ ಕಾಲಕ್ಕೆ ಸಮರಕ್ಕೆ ಸಜ್ಜಾಗತೊಡಗಿದ್ದು ನಿಜ. ಕಾಂಗ್ರೇಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ದಿಗಿಲು ಬಿದ್ದು ಬೀದಿಗಿಳಿದಿದ್ದೇ ಅಂತಹ ಬೆಳವಣಿಗೆಯಿಂದ. ಆ ಕಾಲಕ್ಕೆ ಪರಿಸ್ಥಿತಿ ಹೇಗಿತ್ತೆಂದರೆ ಬಿಹಾರದಲ್ಲಿ ಲಾಲೂ ಪ್ರಸಾದ್‌ ಯಾದವ್‌ ಒಬ್ಬರನ್ನು ಹೊರತು ಪಡಿಸಿದರೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೇಸ್‌ಗೆ ಹೇಳಿಕೊಳ್ಳುವಂತಹ ಮಿತ್ರರೇ ಇರಲಿಲ್ಲ. ಆದರೆ ಅದೇ ಕಾಲಕ್ಕೆ ಬಿಜೆಪಿಯ ರೆಕ್ಕೆಗಳು ಅಲ್ಪಸಂಖ್ಯಾತ ಮಿತ್ರರ ಬಲದೊಂದಿಗೆ ಘಡಘಡಿಸತೊಡಗಿದ್ದವು. ತಮಿಳುನಾಡಿನಲ್ಲಿ ಜಯಲಲಿತಾ, ಆಂಧ್ರದಲ್ಲಿ ಚಂದ್ರಬಾಬು ನಾಯ್ಡು , ಪಂಜಾಬಿನಲ್ಲಿ ಅಕಾಲಿದಳ, ಈಶಾನ್ಯ ರಾಜ್ಯಗಳಲ್ಲಿ ಹೊಸಶಕ್ತಿಯಾಗಿ ರೂಪುಗೊಂಡಿರುವ ಸಂಗ್ಮಾ. ಹೀಗೇ ಒಂದೇ ಸಮನೇ ಬಲಿಷ್ಠ ಮಿತ್ರರ ಸಖ್ಯ ಬೆಳೆಯತೊಡಗಿತು. ಸಾಲದೆಂಬಂತೆ ಉತ್ತರಪ್ರದೇಶದಲ್ಲಿ ಮಾಯಾವತಿ ಜತೆಗಿನ ವಿರಸಕ್ಕೆ ಪ್ರತಿಯಾಗಿ ಕಲ್ಯಾಣ ಸಿಂಗ್‌ರನ್ನು ಬರಸೆಳೆದ ವಾಜಪೇಯಿ, ಅಲ್ಲೂ ಬಿಜೆಪಿಯ ಮತಬ್ಯಾಂಕನ್ನು ಬಲಿಷ್ಠಗೊಳಿಸಿದ್ದಾರೆ. ಇದಕ್ಕಿಂತ ಆಶ್ಚರ್ಯಕರ ಸಂಗತಿ ಎಂದರೆ ಒಂದು ಕಾಲದಲ್ಲಿ ಬಿಜೆಪಿಯ ಪರಮ ಶತ್ರು ಅನ್ನಿಸಿಕೊಂಡಿದ್ದ ಮುಲಾಯಂ ಸಿಂಗ್‌ ಯಾದವ್‌ ಒಳಗಿಂದೊಳಗೇ ಬಿಜೆಪಿಯ ಸಖ್ಯಕ್ಕೆ ಹಾತೊರೆಯತೊಡಗಿದ್ದು !

ಈವರೆಗಿನ ಮುಲಾಯಂರ ರಾಜಕೀಯ ನಿಲುವು ಅಧಿಕೃತವಾಗಿ ಪ್ರಕಟವಾಗಿಲ್ಲವಾದರೂ, ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು ಬಿಜೆಪಿಯ ರಾಷ್ಟ್ರೀಯ ನಾಯಕರು ನೀಡಿದ ಬೆಂಬಲವನ್ನು ಮುಲಾಯಂ ಮರೆಯುವಂತೆ ಇಲ್ಲ.

ಇನ್ನು ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳಿ, ಅನಂತ್‌ಕುಮಾರ್‌ ರಾಜ್ಯಾಧ್ಯಕ್ಷರಾಗಿ ಬರುವ ಕಾಲಕ್ಕಾಗಲೇ ಇಲ್ಲಿ ಬಿಜೆಪಿ ಕುಸಿದು ಹೋಗಿದೆ ಎಂಬ ಭಾವನೆಯಿತ್ತು. ಆದರೆ ಈಗ ? ದೇವೇಗೌಡರ ಜೊತೆ ಕೈಜೋಡಿಸಲು ಬಯಸದ ಎಬಿಪಿಜೆಡಿಯು ಒಂದು ದೊಡ್ಡ ಗುಂಪು ಬಿಜೆಪಿ ಜೊತೆ ಮೈತ್ರಿ ಬಯಸುತ್ತಿದೆ. ಅದರಲ್ಲೂ ಮುಂಬೈ-ಕರ್ನಾಟಕ, ಹೈದರಬಾದ್‌-ಕರ್ನಾಟಕ ಭಾಗದ ಶಾಸಕರು ಬಿಜೆಪಿಯ ಕದ ತಟ್ಟುತ್ತಿದ್ದಾರೆ.

ಇಂತಹ ಬೆಳವಣಿಗೆ ಸಂಭವಿಸಿದ್ದು ಹೇಗೆ? ಕಾಂಗ್ರೇಸ್‌ ಬಗ್ಗೆ ಕುದಿಯುತ್ತಿರುವ ಲಿಂಗಾಯಿತ ವರ್ಗಕ್ಕೆ - ಮೊದಲು ಜನತಾ ಪರಿವಾರದ ಕಡೆ ಕಣ್ಣಿತ್ತು . ಆದರೆ ಅವರದು ಮುಗಿಯದ ಕಾದಾಟವಾದ ಮೇಲೆ ಬಿಜೆಪಿಯ ಮೇಲೆ ಕಣ್ಣು ನೆಟ್ಟಿದೆ. ವಾಜಪೇಯಿಯ ವರ್ಚಸ್ಸು , ಬದಲಾದ ಮತದಾರರ ಮನಸ್ಸನ್ನು ಕಾಣದಿದ್ದರೆ ಎಬಿಪಿಜೆಡಿಯ ಶಾಸಕರು ಬಿಜೆಪಿ ಕಡೆ ಹೋಗುವ ಮನಸ್ಸು ಮಾಡುತ್ತಿದ್ದರೆ?

ಇನ್ನು ಬಿಜೆಪಿಯ ಬಲ ಮಧ್ಯಪ್ರದೇಶದಲ್ಲಿ, ರಾಜಸ್ಥಾನದಲ್ಲಿ , ಛತ್ತೀಸ್‌ಘಡ್‌ನಲ್ಲಿ ವಿಜೃಂಭಿಸಲಿದೆ ಎಂಬುದಕ್ಕೆ ಯಾವ ಅನುಮಾನಗಳೂ ಕಾಣುತ್ತಿಲ್ಲ. ಮಹರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಕೂಡಾ ಅಷ್ಟೇ ಬಲವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಎನ್‌ ಸಿ ಪಿ ನಾಯಕ ಶರದ್‌ ಪವಾರ್‌ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಸ್ನೇಹ ಕುದುರಿಸಿ ಕೊಂಡಿದ್ದಾರಾದರೂ ಕೆಲ ದಿನಗಳ ಹಿಂದೆ ಅವರೇ ಸೋನಿಯಾಗಾಂಧಿ ವಿದೇಶಿ ಮೂಲದ ಪ್ರಶ್ನೆ ಬಗೆಹರಿಯುವುದಿಲ್ಲ ಅಂತ ಆಡಿದ ಮಾತುಗಳು ಜನರ ಕಿವಿಗಳಲ್ಲಿ ರಿಂಗಿಣಿಸುತ್ತಿವೆ. ಬಿಜೆಪಿಯ ರಣತಯಾರಿ ಕಂಡು ದಿಗಿಲಾದ ಸೋನಿಯಾ: ಮುಂದಿನ ಪ್ರಧಾನಿ ಯಾರು? ಎಂಬುದು ಚುನಾವಣೆಯ ನಂತರ ಇತ್ಯರ್ಥವಾಗುತ್ತದೆ ಅಂತ ಹೇಳಿದ ಮೇಲೆ ತಾನೆ? ಪವಾರ್‌ ಸಾಹೇಬರು ಪ್ರಧಾನಿಗಿರಿಯ ಕನಸನ್ನು ಜೀವಂತವಾಗಿಟ್ಟುಕೊಂಡೇ ಕಣಕ್ಕಿಳಿದಿದ್ದು?

ಇನ್ನು ಕಾಂಗ್ರೇಸ್‌ಜೊತೆ ಕೈಜೋಡಿಸಬಹುದಾದ, ಅಂದರೆ ಸೆಕ್ಯುಲರಿಸಂ ಹೆಸರಿನಲ್ಲಿ ಸ್ನೇಹ ಸಾಧಿಸಬಹುದಾದ ಕಮ್ಯುನಿಷ್ಟರೂ ಅಷ್ಟೇ. ಖುದ್ದು ಹರಿಕಿಶನ್‌ಸಿಂಗ್‌ ಸುರ್ಜಿತರಂತಹ ನಾಯಕರು ಏನು ಹೇಳುತ್ತಾರೆ? ಕಾಂಗ್ರೇಸ್‌ ತನ್ನ ಪಾಡಿಗೆ ತಾನು ಚುನಾವಣೆ ಎದುರಿಸಲಿ. ನಾವು ತೃತೀಯ ರಂಗವೊಂದನ್ನು ಸ್ಥಾಪಿಸುತ್ತೇವೆ. ಹೊಂದಾಣಿಕೆ ಎಂಬುದು ಅನಂತರದ ಮಾತು ಎಂದಲ್ಲವೇ?

ಅದರರ್ಥ ಸೋನಿಯಾ ಗಾಂಧಿ, ಬಿಹಾರದ ಲಾಲೂ ಪ್ರಸಾದ್‌ ಜೊತೆ, ಮಹರಾಷ್ಟ್ರದ ಶರದ್‌ ಪವಾರ್‌ ಜೊತೆ, ಉತ್ತರ ಪ್ರದೇಶದ ಮಾಯಾವತಿ, ತಮಿಳುನಾಡಿನ ಕರುಣಾನಿಧಿ ಜೊತೆ ಕೈ ಜೋಡಿಸಿದ ಮೇಲೂ ಬಿಜೆಪಿ ಮೈತ್ರಿ ಕೂಟದ ವಿರೋಧಿ ಪಾಳಯದಲ್ಲಿ ರಣರಂಗದ ಮುಂಚೂಣಿ ನಾಯಕ ಯಾರು? ಎಂಬುದು ಇತ್ಯರ್ಥವಾಗಿಲ್ಲ. ಹೀಗಾಗಿಯೇ ಸಮರವ್ಯೂಹ ತಯಾರಿಸುವಲ್ಲಿ ನಿಸ್ಸೀಮರಾದ ಬಿಜೆಪಿ ಅಧ್ಯಕ್ಷ ವೆಂಕಯಯ್ಯನಾಯ್ಡು ಹಾಗೂ ಪ್ರಮೋದ್‌ ಮಹಾಜನ್‌ ಕಾಂಗ್ರೇಸ್‌ ರಚಿಸಲೆತ್ನಿಸುತ್ತಿರುವ ಚಕ್ರವ್ಯೂಹದ ಹೊರಗೋಡೆಯನ್ನು ಶುರುವಿನಲ್ಲೆ ಪುಡಿಮಾಡಿಬಿಟ್ಟ್ನಿದ್ದಾರೆ.

ಬಿಜೆಪಿ ಮೈತ್ರಿಕೂಟದ ಮಂಚೂಣಿಯಲ್ಲಿ ವಾಜಪೇಯಿ ಇದ್ದಾರೆ. ಆದರೆ ಕಾಂಗ್ರೇಸ್‌ ಮೈತ್ರಿಕೂಟದ ಮುಂಚೂಣಿಯಲ್ಲಿ ಇರುವವರು ಯಾರು? ಎಂಬ ಪ್ರಶ್ನೆಗೆ ಖುದ್ದು ಸೋನಿಯಾರಿಂದ ಹಿಡಿದು ಯಾರೊಬ್ಬರಿಗೂ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ಸಾಲದೆಂಬಂತೆ ಪ್ರಿಯಾಂಕಾ, ರಾಹುಲ್‌ ಮೇಲೂ ಎಗರಿ ಬಿದ್ದಿರುವ ಬಿಜೆಪಿ, ಭಾರತೀಯ ತಂದೆ ತಾಯಿಯರಿಗೆ ಹುಟ್ಟಿದ ಮಕ್ಕಳಿಗೆ ಪ್ರಾಧಾನ್ಯ ನೀಡಬೇಕು ಎಂದು ಹೇಳುತ್ತಾ ಕಾಂಗ್ರೇಸ್‌ನ ಮೂಲಕ್ಕೇ ಕೈಹಾಕುತ್ತಿದೆ. ಈ ವಾದ ಸೋನಿಯಾರಾ ವಿದೇಶಿ ಮೂಲದಷ್ಟು ಗಟ್ಟಿಯಾಗಿಲ್ಲವಾದರೂ, ಅದಕ್ಕೆ ಪ್ರತ್ಯುತ್ತರ ನೀಡುವ ಸಲುವಾಗಿ ಕಾಂಗ್ರೇಸ್‌ ಸಮಯ ವ್ಯಯಿಸಬೇಕಾಗುತ್ತದೆ. ಬಿಜೆಪಿಯ ಚಿಂತನ ಕುಲುಮೆಗೆ ಬೇಕಾಗಿರುವುದು ಈ ಅಂಶ. ಶತ್ರು ತನ್ನನ್ನು ರಕ್ಷಿಸಿಕೊಳ್ಳಲು ಪರದಾಡುವಂತೆ ಮಾಡಿದರೆ, ಹೊಡೆಯುತ್ತಾ ಹೋಗಲು ನಮಗೆ ಕಾಲಾವಕಾಶ ಸಿಗುತ್ತದೆ ಎಂಬುದು ಬಿಜೆಪಿ ತಂತ್ರ.

ಈ ಮಧ್ಯೆ ಅಂತರಾಷ್ಟ್ರೀಯ ಮಟ್ಟದಲ್ಲಾದ ಬದಲಾವಣೆಗಳು ಕಾಶ್ಮೀರದಲ್ಲಿ ಶಾಂತಿ ಮೂಡಿಸಲು ನೆರವಾದ ರೀತಿ ಸಹ ಬಿಜೆಪಿಗೆ ಲಾಭದಾಯಕವೇ. ಇಷ್ಟವೋ? ಕಷ್ಟವೋ? ಪಾಕಿಸ್ಥಾನದ ಅಧ್ಯಕ್ಷ ಜನರಲ್‌ ಮುಷರಪ್‌, ಭಾರತದ ಪ್ರಧಾನಿ ವಾಜಪೇಯಿ ಶಾಂತಿಗಾಗಿ ಮಾಡುತ್ತಿರುವ ಪ್ರಯತ್ನಗಳನ್ನು ದೊಡ್ಡ ಕಂಠದಲ್ಲೇ ಹೊಗಳಿದ್ದಾರೆ.

ಅಂತಹ ಬೆಳವಣಿಗೆ ಪರಿಣಾಮ ಏನು? ವಾಜಪೇಯಿ ನಾಯಕತ್ವ ದೇಶವನ್ನು ಶಾಂತಿಯಿಂದಿಡುತ್ತದೆ ಎಂಬ ಸಂದೇಶ ಸಹಜವಾಗಿ ತಲುಪಬೇಕಾದಲ್ಲಿಗೆ ತಲುಪುತ್ತದೆ. ಹಾಗೆಯೇ ಅಲ್ಪ ಸಂಖ್ಯಾತ ಸಮುದಾಯದ ಮತಗಳು ಸಂದರ್ಭಕ್ಕಾನುಸಾರವಾಗಿ ಬಿಜೆಪಿಗೂ ಲಭ್ಯವಾಗುತ್ತದೆ. ವಸ್ತುಸ್ಥಿತಿ ಎಂದರೆ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಘಡ್‌ಗಳಲ್ಲಿ ಇಂತಹುದೇ ಬೆಳವಣಿಗೆಯಾಗಿತ್ತು. ಅಲ್ಪ ಸಂಖ್ಯಾತ ಮತಗಳು ಬಿಜೆಪಿ ಕಡೆ ವಾಲಿದ್ದವು.

ಹೀಗೆ ನೋಡುತ್ತಾ ಹೋದರೆ ವಾಜಪೇಯಿ ಪಡೆಯ ತಯಾರಿ, ಕಾಂಗ್ರೇಸ್‌ ಮೈತ್ರಿಕೂಟದ ತಯಾರಿಗಿಂತ ದೊಡ್ಡಮಟ್ಟದಲ್ಲಿ ಕಾಣತೊಡಗಿದೆ. ಅಷ್ಟೇ ಅಲ್ಲ 544 ಸದಸ್ಯ ಬಲದ ಸಂಸತ್ತಿನಲ್ಲಿ ಅದು ಮುನ್ನೂರಕ್ಕೂ ಹೆಚ್ಚು ಸದಸ್ಯ ಬಲವನ್ನು ಹೊಂದುವ ಲಕ್ಷಣಗಳು ಕಾಣುತ್ತವೆ. ಹಾಗಾಗಿ ಈ ಬಾರಿಯ ಕದನ ಹಿಂದಿಗಿಂತಲೂ ಮಹತ್ವದ್ದಾಗಿ, ಭಾರತದ ಭವಿಷ್ಯವನ್ನು ಬರೆಯುವ ರೀತಿಯಲ್ಲಿ ಕಾಣುತ್ತದೆ.

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X