ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ದೇಹ ಆಡುವ ಮಾತಲ್ಲದ ಮಾತುಗಳಿರುತ್ತವೆ!

By Staff
|
Google Oneindia Kannada News


ತಮ್ಮ ಮಾತು ಯಾರೂ ಕೇಳಿಸಿಕೊಳ್ಳುತ್ತಿಲ್ಲ, ತಾವು ಯಾರಿಗೂ ಬೇಕಾಗಿಲ್ಲ ಎಂಬ ನರಳಿಕೆ ತುಂಬ ಜನಕ್ಕಿರುತ್ತದೆ. ಅವರಲ್ಲಿ ತಮ್ಮೆಡೆಗೇ ತಾತ್ಸಾರ ಬೆಳೆದಿರುತ್ತದೆ. ಅಂಥವರ ಮಾತು ಕೇಳಿಸಿಕೊಳ್ಳಿ.

  • ರವಿ ಬೆಳಗೆರೆ
Be a good listener, care the speakerಬೆಳಗ್ಗೆ ನೀನು ರೇಡಿಯೋದಲ್ಲಿ ಮಾತು ಶುರುಮಾಡೋ ಹೊತ್ತಿಗೆ ನಾನು ಅಡುಗೆ ಮನೇಲಿರ್ತೀನಿ. ಪಾತ್ರೆಗೆ ಪಾತ್ರೆ ತಾಕಿ ಶಬ್ದವಾದರೆ ನಿನ್ನ ಮಾತು ಕೇಳಿಸದೆ ಹೋದೀತೇನೋ ಅಂತ ಶಬ್ದವಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡುತ್ತೇನೆ ಅಂತ ಹೆಣ್ಣು ಮಗಳೊಬ್ಬಾಕೆ ಪತ್ರ ಬರೆದಿದ್ದಾಳೆ. ನಾನು ಕೇಳಿಸಿಕೊಳ್ಳುವುದರ ಬಗ್ಗೆ ಬೇರೆಯೇ ಆಲೋಚನೆ ಮಾಡತೊಡಗಿದ್ದೇನೆ.

ನೀವು ಏನನ್ನಾದರೂ ಗಂಭೀರವಾಗಿ ಹೇಳುತ್ತಿರುವಾಗ ನಿಮ್ಮೆದುರಿಗೆ ನಿಂತ ಹುಡುಗ ಅಥವಾ ಹುಡುಗಿ ಮತ್ಯಾವುದೋ ಕಡೆಗೆ ನೋಡತೊಡಗಿದರೆ, ಇನ್ಯಾವುದೋ ಯೋಚನೆಯಲ್ಲಿದ್ದಂತೆ ಕಂಡುಬಂದರೆ, ಪರಧ್ಯಾನ ತೋರ್ಪಡಿಸಿದರೆ ನಿಮಗೆ ಕಿರಿಕಿರಿಯಾಗುತ್ತದಲ್ಲವಾ? ಅಂಥ ಕಿರಿಕಿರಿಯನ್ನು ನಾವೂ ಇತರರಿಗೆ ಉಂಟು ಮಾಡುತ್ತಿರುತ್ತೇವೆ: ನಮ್ಮ ಅನಾದರ ಅಥವಾ ಪರಧ್ಯಾನದಿಂದಾಗಿ: ಅವನ ಮಾತೇನು ಕೇಳೋದು? ಎಂಬಂತಹ ಉಡಾಫೆಯನ್ನಷ್ಟೆ ಇದು ಸೂಚಿಸುವುದಿಲ್ಲ. ನಮ್ಮ ವ್ಯಕ್ತಿತ್ವದಲ್ಲಿರುವ ಕಾನ್ಫಿಡೆನ್ಸ್‌ನ ಕೊರತೆಯನ್ನೂ ಇದು ಸೂಚಿಸುತ್ತದೆ.

ಸಾಮಾನ್ಯವಾಗಿ ನನ್ನನ್ನು ಭೇಟಿಯಾಗಲಿಕ್ಕೆ, ಏನನ್ನಾದರೂ ಹೇಳಿಕೊಳ್ಳಲಿಕ್ಕೆ ಅಥವಾ ಕೇಳಲಿಕ್ಕೆ ಬಂದವರಿಗೆ ಇಂತಿಷ್ಟು ನಿಮಿಷ ಅಂತ ನಾನೇ ಒಂದು ಅವಧಿ ನಿಗದಿ ಮಾಡುತ್ತೇನೆ. ಅವರ ಸಮಸ್ಯೆ ಅಥವಾ ನನ್ನ ಒಟ್ಟಾರೆ ಕೆಲಸಗಳ ಹೊರೆಯ ಮೇಲೆ ಇದು ಆಧಾರಪಟ್ಟಿರುತ್ತದೆ.

ಎದುರಿಗೆ ಬಂದು ಕುಳಿತವರು ಯಾರೇ ಆಗಿರಲಿ ಅವರನ್ನು ಮೊದಲು ಸಂಕೋಚ ಬಿಟ್ಟು ಹೋಗಲೆಂಬ ಕಾರಣಕ್ಕೆ ನಿಮ್ಮ ಹೆಸರೇನು? ಏನು ಕೆಲಸ? ಯಾವ ಊರು? ಮುಂತಾದ ಪ್ರಶ್ನೆ ಕೇಳುತ್ತೇನೆ. ಆಮೇಲಿನದೆಲ್ಲ ಅವರದೇ ಮಾತು. ಅವರ ಸಮಸ್ಯೆ ಹೇಳಿಕೊಳ್ಳುತ್ತಾರೆ. ಕೆಲವರು short ಆಗಿ ಹೇಳುತ್ತಾರೆ. ಮತ್ತೆ ಕೆಲವರು ವಿಷಯಾಂತರ ಮಾಡುತ್ತಾ ಹೋಗಿ ಗೊಂದಲಕ್ಕೊಳಗಾಗುತ್ತಾರೆ. ಅಲ್ಲಿಯತನಕ ತುಂಬ ಗಮನವಿಟ್ಟು ಅವರ ಪ್ರತಿ ಮಾತೂ ಕೇಳಿಸಿಕೊಳ್ಳುತ್ತೇನೆ. ಖಂಡಿತವಾಗ್ಯೂ ನಾನು good listener. ತೀರ ಅವರ ಮಾತು ಪಾಯಿಂಟಿಗೆ ಬರುತ್ತಿಲ್ಲ ಅನ್ನಿಸಿದಾಗ ನನ್ನಿಂದ ಏನು ನಿರೀಕ್ಷೆ ಮಾಡ್ತೀರಿ, ಅದನ್ನ ಹೇಳಿ ಅಂತ ನೇರವಾಗಿ ಕೇಳಿಬಿಡುತ್ತೇನೆ.

ನಿಮಗೆ ಆಶ್ಚರ್ಯವಾಗಬಹುದು. ಇವತ್ತಿನ ಸಮಾಜದಲ್ಲಿ ಯಾರಾದರೂ ನಮ್ಮ ಮಾತು ಕೇಳಲಿ ಅಂತ ಬಯಸುವವರು ಲಕ್ಷಾಂತರ, ಕೋಟ್ಯಂತರ ಜನರಿದ್ದಾರೆ. ತಮ್ಮ ಮಾತು ಯಾರೂ ಕೇಳಿಸಿಕೊಳ್ಳುತ್ತಿಲ್ಲ, ತಾವು ಯಾರಿಗೂ ಬೇಕಾಗಿಲ್ಲ ಎಂಬ ನರಳಿಕೆ ತುಂಬ ಜನಕ್ಕಿರುತ್ತದೆ. ಅವರಲ್ಲಿ ತಮ್ಮೆಡೆಗೇ ತಾತ್ಸಾರ ಬೆಳೆದಿರುತ್ತದೆ. ಅಂಥವರ ಮಾತು ಕೇಳಿಸಿಕೊಳ್ಳಿ. ಮಕ್ಕಳು, ತುಂಬ ವಯಸ್ಸಾದವರು, ಕೆಲಸಕ್ಕೆ ಹೋಗದ ಹೆಣ್ಣುಮಕ್ಕಳು- ಯಾರಾದರೂ ತಮ್ಮ ಮಾತು ಕೇಳಿಸಿಕೊಳ್ಳಲಿ ಅಂತ ಎಷ್ಟು ಚಡಪಡಿಸುತ್ತಿರುತ್ತಾರೆ ಗೊತ್ತೆ? ಗಂಡ, ಮನೆ, ಮಕ್ಕಳು, ಲೈಂಗಿಕ ನೆಮ್ಮದಿ-ಎಲ್ಲ ಇದ್ದಾಗ್ಯೂ ಹೊರಗಡೆ ಒಂದು ಸಂಬಂಧ ಇಟ್ಟುಕೊಂಡ ಗೃಹಿಣಿಯರನ್ನು ಯಾಕೆ ಹೀಗೆ ಮಾಡಿಕೊಂಡಿರಿ? ಅಂತ ಕೇಳಿದ್ದಕ್ಕೆ ಹೆಚ್ಚಿನವರು ಹೇಳಿದ್ದು- ನಮ್ಮ ಮಾತು ಕೇಳಿಸಿಕೊಳ್ಳಲಿಕ್ಕೆ ಒಬ್ಬ ಗೆಳೆಯಬೇಕಿತ್ತು ಅಂತ.

ಹೆಂಡ್ತಿ ಹತ್ರಾ ಏನು ಮಾತಿರುತ್ತೆ ಎಂಬ ಅಸಡ್ಡೆ ಅನೇಕರಿಗಿರುತ್ತದೆ. ಉಳಿದವರಿಗೆ ಮಾತಾಡಲಿಕ್ಕೇ ಬಿಡದೆ ತಾವೇ ಮಾತಾಡುತ್ತ ಹೋಗುವ ಉತ್ಸಾಹ ಕೆಲವರಿಗಿರುತ್ತದೆ. ಎದುರಿನವರು ಏನಾದರೂ ಮಾತನಾಡಲು ಹೊರಟ ತಕ್ಷಣ ನಿಗೇನು ತಿಳೀತದೆ, ಸುಮ್‌ ಕೂಡು ಅನ್ನುವಂಥ ಒರಟುತನ ಕೆಲವರಿಗಿರುತ್ತದೆ. ಎದುರಿನವರು ಏನು ಹೇಳಬಯಸುತ್ತಿದ್ದಾರೆ ಎಂಬುದನ್ನು ಪೂರ್ತಿಯಾಗಿ ಕೇಳಿಸಿಕೊಳ್ಳದೆ ಓ... ಅದಾ? ಅದು ಗೊತ್ತು ಬಿಡು ಅಂದು ಬಿಡುವ ಅವಿವೇಕ ಕೆಲವರಿಗಿರುತ್ತದೆ. ಒಂದ್ಯಾವುದೋ ವಿಷಯದ ಬಗ್ಗೆ ಎದುರಿನವರು ಮಾತನಾಡುತ್ತಿದ್ದರೆ ತಕ್ಷಣ ಅದಕ್ಕೆ ಸಂಬಂಧಿಸಿದ ಇನ್ನೊಂದು ಮಾತನ್ನಾರಂಭಿಸಿಬಿಡುವ ಅಭ್ಯಾಸ ಕೆಲವರಿಗಿರುತ್ತದೆ. ಇವರೆಲ್ಲ ಮೂಲತಃ bad listeners.

ಮತ್ತೆ ಕೆಲವರಿಗೆ non verbal behaviour ಎಂದರೆ ಏನೆಂಬುದು ತುಂಬ ಚೆನ್ನಾಗಿ ಗೊತ್ತಾಗಿರುತ್ತದೆ. ಈ ವರ್ತನೆಯಲ್ಲಿ ಮಾತಿರುವುದಿಲ್ಲ. ಆದರೆ ನಮ್ಮ ದೇಹ, ಹಾವ-ಭಾವಗಳು ತುಂಬ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುತ್ತವೆ. ನಮಗೆ ಆಸಕ್ತಿಯುಂಟು ಮಾಡುವಂಥ ವಿಷಯವನ್ನು ಯಾರಾದರೂ ಹೇಳುವಾಗ ನಾವು ಎಷ್ಟೊಂದು ಶ್ರದ್ಧೆಯಿಂದ, ಕಣ್ಣರಳಿಸಿಕೊಂಡು, ನೆಟ್ಟಗೆ-ನಿಶ್ಚಲವಾಗಿ ನಿಂತು, ಅವರನ್ನೇ ನೋಡುತ್ತ, ಅವರ ಮಾತಿಗೆ ಅಡ್ಡ ಬಾರದೆ, ಆಗಾಗ ಅವರನ್ನು ಉತ್ತೇಜಿಸುತ್ತ ಅವರ ಮಾತು ಕೇಳುತ್ತಿರುತ್ತೇವೆ ನೋಡಿ? ಹಾಗೆ ಎಲ್ಲರ ಮಾತೂ ಕೇಳಿಸಿಕೊಳ್ಳಬೇಕು.ಎಲ್ಲರ ಮಾತಿಗೂ ಕೊಂಚ ಸಮಯ ಕೊಡಬೇಕು: ಅವರು ಯಾರೇ ಆಗಿರಲಿ. ನಿಲ್ಲುವ ಭಂಗಿಯಲ್ಲೇ ನಮಗೆ ಎದುರಿನವರ ಮಾತಿನಲ್ಲಿ ಆಸಕ್ತಿ ಇದೆಯಾ ಇಲ್ಲವಾ ಅಂತ ಗೊತ್ತಾಗಿ ಬಿಡುತ್ತದೆ. ಎದುರಿನವರು ಮಾತನಾಡುತ್ತಿರುವಾಗ ನಮ್ಮ ಕಣ್ಣು ಮತ್ಯಾವುದೋ ಕಡೆಗಿರಬಾರದು. ಅವರನ್ನೇ ನೋಡುತ್ತಿರಬೇಕು. ನೀವು ಅವರ ಮಾತಿಗೆ ಪ್ರತಿಕ್ರಿಯಿಸದಿದ್ದರೂ ಪರವಾಗಿಲ್ಲ. ಅವರು ನಿಮ್ಮ ಕಣ್ಣ ಭಾಷೆ, ಸಮ್ಮತಿ, ಅನುಮೋದನೆಗಳಿಂದ encourage ಆಗ್ತಾರೆ.

ಒಂದು ಮನೆಗೆ, ಅಂಗಡಿಗೆ ಅಥವಾ ಹೊಟೇಲಿಗೆ ಹೋದರೆ ಅಲ್ಲಿರುವವರನ್ನ, ಕೆಲಸ ಮಾಡುವವರನ್ನ ಒಮ್ಮೆ ಪರಿಚಯ ಮಾಡಿಕೊಳ್ಳಿ. ಹೆಸರು, ಕುಲ, ಗೋತ್ರ ಕೇಳಬೇಕೆಂದಿಲ್ಲ. ಇನ್ನೊಂದು ಬಾರಿ ಅದೇ ಜಾಗಕ್ಕೆ ಹೋದರೆ ಹಲೋ ಎಂಬಂತೆ ಚಿಕ್ಕದೊಂದು ನಗೆ, ತಲೆದೂಗುವಿಕೆ- ಅಷ್ಟಾದರೆ ಸಾಕು. ಅವರಲ್ಲೊಂದು sense of importance ನೀವು ಬೆಳೆಸಿದಂತಾಗುತ್ತದೆ. ಚಿಕ್ಕ ನಮಸ್ಕಾರ, ಮಕ್ಕಳಿಗೆ ಟಾಟಾ, ಪರಿಚಿತರೊಂದಿಗೆ ಷೇಕ್‌ಹ್ಯಾಂಡ್‌, ಆತ್ಮೀಯರಿಗೊಂದು ಅಪ್ಪುಗೆ- ಇವೆಲ್ಲ ನಮ್ಮ non verbal behaviourಗಳಲ್ಲಿ ಸೇರ್ಪಡೆಯಾಗುತ್ತವೆ.

ಹಿರಿಯರ್ಯಾರಾದರೂ ಮನೆಗೆ ಬಂದಾಗ ಕೂತ ಕೂತಲ್ಲೇ ಬನ್ನಿ ಬನ್ನಿ ಅನ್ನೋದಕ್ಕೂ ಬಾಗಿಲತನಕ ಎದ್ದುಹೋಗಿ ಕೈ ಹಿಡಿದುಕೊಂಡು ಕರೆತರುವುದಕ್ಕೂ ವ್ಯತ್ಯಾಸವಿರುತ್ತದಲ್ಲ? ಹಾಗೇನೇ ಯಾರಾದರೂ ತೀರಿ ಹೋದಾಗ ಅವರ ಮನೆಗೆ ಹೋಗಿ ಸುಮ್ಮನೆ ಕೂತಿದ್ದು ಬುರುವುದೂ ಒಂದು ಸಾಂತ್ವನ. ಕೈ ಹಿಡಿದು ಪಕ್ಕದಲ್ಲಿ ಕುಳಿತರೆ ಅದೇ ಸಮಾಧಾನ. ಅನೇಕರು ಇಂಥ non verbal behaviour ಬಗ್ಗೆ ಯೋಚನೆಯೇ ಮಾಡಿರುವುದಿಲ್ಲ.

ಯೋಚನೆ ಮಾಡದಿದ್ದರೂ ಪರವಾಗಿಲ್ಲ: ಸೂಕ್ತವಾಗಿ ಬಿಹೇವ್‌ ಮಾಡಿದರೆ ಸಾಕು!

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X