• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹುಚ್ಚು ಮುಂಡೆಯ ಮದುವೆಯಲ್ಲಿ ಪ್ರಸ್ತವೇ ಆಗಿರಲಿಲ್ಲ ಗೊತ್ತೆ?

By Super
|

ಹುಚ್ಚು ಮುಂಡೆಯ ಮದುವೆಯಾಯಿತು. ಎಲ್ಲರೂ ಗಡದ್ದಾಗಿ ಉಂಡೆದ್ದೂ ಆಯಿತು. ಯಾರೂ ಗಮನಿಸದೇ ಹೋದ ಸಂಗತಿಯೆಂದರೆ, ಪ್ರಸ್ತವೇ ಆಗದೆ ಈ ಸಂಸಾರ ಮುಗಿದು, ಮುರಿದೂ ಹೋಯಿತು.

ಹುಚ್ಚು ಮುಂಡೆ ಧರಂಸಿಂಗ್‌ ತಮ್ಮ ಬಂಗಲೆಯ ಅಂಗಳದಲ್ಲಿ ಹೊಟ್ಟೆ ಸವರಿಕೊಂಡು ನಿಂತಿದ್ದಾರೆ. ಅಲ್ಲಾಗಲೇ ಹೊಸ ಚಪ್ಪರವೇಳುತ್ತಿದೆ. ಯಾವುದನ್ನೂ ತುಂಬ ಪರ್ಸನಲ್‌ ಆಗಿ ತೆಗೆದುಕೊಳ್ಳದ, ಸಿಟ್ಟಿಗೇಳದ, ಸಹನೆ ಕಳೆದುಕೊಳ್ಳದ ಧರಂಸಿಂಗ್‌ ಸಿಂಹಾಸನದಿಂದ ಇಳಿಯುವ ಮುನ್ನ ಶಾಯರಿ ಹೇಳಿದ್ದಾರೆ:‘ಜಗತ್ತು ಗೆದ್ದ ಸಿಕಂದರ್‌ ಖಾಲಿ ಕೈಲಿ ಬಂದಿದ್ದ, ಖಾಲಿ ಕೈಯಲ್ಲಿ ಹೋದ' ಅಂತ.

ದುರಂತವೆಂದರೆ, ಈ ಮುಖ್ಯಮಂತ್ರಿ ಖಾಲಿ ಕೈಯಲ್ಲಿ ಬಂದೂ ಇರಲಿಲ್ಲ. ಖಾಲಿ ಕೈಲಿ ಹೋಗುತ್ತಲೂ ಇಲ್ಲ. ಈತ ಕರ್ನಾಟಕಕ್ಕೆ ತನ್ನ ಕೈಲಾದಷ್ಟೂ ಕೆಟ್ಟ ಆಡಳಿತವನ್ನು ಕೊಟ್ಟ. ಭ್ರಷ್ಟಾಚಾರವನ್ನು ಮುಗಿಲು ಮುಟ್ಟಿಸಿದ. ತಾನು ಹಣ ಕೊಟ್ಟೇ ಅಧಿಕಾರಕ್ಕೆ ಬಂದ. ಹಣ ಕೊಟ್ಟೇ ಮುಂದುವರೆದ. ತಾನೂ ತಿಂದ. ಈಗ ಗಂಟು ಮಾಡಿಕೊಂಡು ಎದ್ದು ಹೊರಟಿದ್ದಾನೆ.

ಲಂಚದ ದುಡ್ಡು ಎಣಿಸಲಿಕ್ಕೆ ಮನೆಯಲ್ಲಿ ಕೌಂಟಿಂಗ್‌ ಮಷೀನನ್ನು ಹಾಕಿಕೊಂಡಿದ್ದ ಏಕೈಕ, I mean, ಮೊದಲ ಮುಖ್ಯಮಂತ್ರಿ ಧರಂಸಿಂಗ್‌. ಬಂದ ಹಣವನ್ನು ಏಣಿಸಲಿಕ್ಕೆ money counting machine ಅಲ್ಲದೆ, ಎಣಿಸಿದ ಬಂಡಲುಗಳ ಮಧ್ಯೆ ಅಕಸ್ಮಾತ್‌ಖೋಟಾ ನೋಟುಗಳಿದ್ದರೆ ಅವುಗಳನ್ನು ಪತ್ತೆ ಹಚ್ಚುವ (ಬ್ಯಾಂಕುಗಳಲ್ಲಿ ಬಳಸುವ) ಯಂತ್ರವನ್ನೂ ಈತ ಮನೆಯಲ್ಲಿಟ್ಟುಕೊಂಡಿದ್ದ. ಖರ್ಗೆ ಕಾಲದಲ್ಲಿ ಪೊಲೀಸ್‌ ಟ್ರಾನ್ಸ್‌ಫರುಗಳಾದಾಗ ಲಂಚವೆಂಬುದು ಖರ್ಗೆಯ ಅಳಿಯ ರಾಧಾಕೃಷ್ಣನ ಅಂಗಿಯ ಮೇಲೆ ಅಮೇಧ್ಯದಂತೆ ಬಿದ್ದುದು ಕಾಣಿಸುತ್ತಿತ್ತು. ಧರಂಸಿಂಗ್‌ ಕಾಲಕ್ಕೆ, ಅದು ಅವರ ಮಗನ ಬಾಯ್ತುಂಬ- ಮೈತುಂಬ- ಕಡೆಗೆ ಪೊಲೀಸ್‌ ಸ್ಟೇಷನ್ನುಗಳ ತುಂಬ ರಾರಾಜಿಸಿತು. ಇಷ್ಟು ಭ್ರಷ್ಟಗೊಂಡ ಪೊಲೀಸ್‌ ವ್ಯವಸ್ಥೆಯನ್ನು ಕರ್ನಾಟಕ ಹಿಂದೆಂದೂ ನೋಡಿರಲಿಲ್ಲ. ಈ ಪರಿಯ ಆರ್ಥಿಕ ಅಪರಾಧಗಳು, scamಗಳು ಹಿಂದೆಂದೂ ಆಗಿರಲಿಲ್ಲ. ಇಂಥ ಗುಷ್ಠು ವಾಸನೆಯಲ್ಲೂ ಧರಂ ನಗುನಗುತ್ತ ಇಪ್ಪತ್ತು ತಿಂಗಳು ಬಾಳಿದರು. ಏಕೆಂದರೆ, ಅವರು ಎದ್ದು ಬಂದದ್ದೇ ಕಾಂಗ್ರೆಸ್‌ ಎಂಬ ಶೌಚಾಲಯದಿಂದ.

ಅವರ ಸುತ್ತ ಇದ್ದವರಾದರೂ ಯಾರು? ಎಂಥವರ ತಲೆಗೂ ಅತ್ತರ್‌ ಅಂತ ನಂಬಿಸಿ ಸೀಮೆಎಣ್ಣೆ ಸುರಿಯಬಲ್ಲ ಕೆ.ಕೆ.ಮೂರ್ತಿ, ದ್ವಾರಕಾನಾಥ್‌ನಂತಹ ಹಸೀಸುಳ್ಳ ಜ್ಯೋತಿಷಿ, ದೇವೇಗೌಡರು ಬಿಟ್ಟಿದ್ದ ವಾತಾಪಿ- ಇಲ್ವಲರಂತಹ ಭಕ್ಷಕರು, ಅಲ್ಲಮಪ್ರಭು ಪಾಟೀಲನಂಥ ಭಟ್ಟಿಂಗಿಗಳು, ಅಹ್ಮದ್‌ ಪಟೇಲ್‌ನಂಥ ದಿಲ್ಲಿ ಬ್ರೋಕರುಗಳು, ಮಲ್ಲಿಕಾರ್ಜುನ ಖರ್ಗೆಯೆಂಬ ಬಗಲ್‌ ಮೆ ಶನಿ-ಇನ್ನು ಧರಂ ಸಿಂಗ್‌ ತಿನ್ನದಿರುವುದಾದರೂ ಹೇಗೆ? ತಿಂದದ್ದನ್ನು ಹಂಚದಿರುವುದಾದರೂ ಹೇಗೆ? ಇಪ್ಪತ್ತು ತಿಂಗಳ ಹಿಂದೆ ಸೋನಿಯಾ ಗಾಂಧಿಯೆದುರು ಗೌಡರನ್ನು ವಿವಾಹವಾದ ಧರಂ ಸಿಂಗ್‌ ಪ್ರಸ್ತ ಮಾಡಿಕೊಳ್ಳುವುದನ್ನೇ ಮರೆತು ಊಟಕ್ಕೆ ಕೂತು ಬಿಟ್ಟರು ಎಂಬುದೇ ವಿಪರ್ಯಾಸ. ಜೆಡಿಎಸ್‌ನೊಂದಿಗೆ ಅವರು ಅಧಿಕಾರ ಹಂಚಿಕೊಳ್ಳಬೇಕಿತ್ತು. ಆದರೆ ಕೇವಲ ಪಂಕ್ತಿ ಹಂಚಿಕೊಂಡರು. ಸರಿಸಮಕ್ಕೆ ಉಂಡರು. ಮದುವೆಯ ಸಂಭ್ರಮ ಮುಗಿದೇ ಹೋಯಿತು. ನೆನಪು ಮಾಡಿಕೊಂಡು ನೋಡಿದರೆ- ಪ್ರಸ್ತವೇ ಮರೆತಿತ್ತು.

ಬಂದ ಹೊಸತರಲ್ಲಿ ಧರಂ ಕೆಲಸ ಮಾಡುವ ಪ್ರಯತ್ನವನ್ನಂತೂ ಮಾಡಿದರು. ಅಗ್ಗದಲ್ಲಿ ಅಕ್ಕಿಕೊಟ್ಟರು. ಕಡಿಮೆ ಬಡ್ಡಿಗೆ ರೈತರಿಗೆ ಸಾಲ ಕೊಟ್ಟರು. ಬಡ್ಡಿ-ಸುಸ್ತಿ ಬಡ್ಡಿ ಮನ್ನಾ ಮಾಡಿದರು. ಇಂಥವೊಂದಿಷ್ಟು ಪಿಳ್ಳೆ ಕೆಲಸಗಳನ್ನು ಹಿಂದೆ ನಿಂತು ಮಾಡಿಸಿದವರು ಬೇರ್ಯಾರೂ ಅಲ್ಲ. ಇದೇ ದೇವೇಗೌಡ ಮತ್ತು ಸಿದ್ರಾಮಯ್ಯ! ಒಲ್ಲೆ ಅನ್ನಲಿಕ್ಕೆ ಧರಂಗೆ ತಾಕತ್ತು, ಬಾಯಿ- ಎರಡೂ ಇರಲಿಲ್ಲ. ಆದರೆ ಪೂರ್ತಿ ಇಪ್ಪತ್ತು ತಿಂಗಳು ಧರಂಸಿಂಗ್‌ರ ಕೈಯಲ್ಲಿ ಒಳ್ಳೆ ಕೆಲಸ ಮಾಡಿಸಲಿಕ್ಕೆ ದೇವೇಗೌಡರಿಗೇನು ಹುಚ್ಚೆ? ತೋರಿಕೆಯ ಮಾತ್ರಕ್ಕೆ ಆರಂಭದಲ್ಲಿ ಒಂದಷ್ಟು ಕೆಲಸ ಮಾಡಿಸಿದರು. ಆ ಕಡೆ ಸೋನಿಯಾ ಕೂಡ ಅದಕ್ಕೆ ಅಡ್ಡಿ ಬರಲಿಲ್ಲ. ಆದರೆ ದಿನಗಳೆದಂತೆಲ್ಲ ದೇವೇಗೌಡ ಮತ್ತು ಸೋನಿಯಾ ಗ್ಯಾಂಗ್‌ಗೆ ಶುರುವಾಯಿತಲ್ಲ ಧಗಭಗ ಹಸಿವು? ಅದಕ್ಕೆ ಧರಂಸಿಂಗ್‌ ಪೂರ್ತಿಯಾಗಿ ಭ್ರಷ್ಟರಾಗಬೇಕಾಯಿತು.

ದಿಲ್ಲಿಯವರನ್ನು ಸಂಭಾಳಿಸುತ್ತೇನೆ ಎಂದು ಹೇಳಿಕೊಂಡು ಮಹಾ ಗುರುಮಘಾತಕ ಅಶ್ರಫ್‌ ಪೀರಾನ್‌ ಗೋಣಿ ಚೀಲದ ಸಮೇತ ಬಂದು ಕುಳಿತ. ಈ ಮನುಷ್ಯ ಸೋನಿಯಾ ಗಾಂಧಿ ಕ್ಯಾಂಪಿನ ನಂಬಿಗಸ್ಥ ಮುಸಲ್ಮಾನ ಅಹ್ಮದ್‌ ಪಟೇಲ್‌ಗೆ ತುಂಬ ಆತ್ಮೀಯ. ಹೀಗಾಗಿ ಅಶ್ರಫ್‌ ಪೀರಾನ್‌ನನ್ನು ಓಲೈಸಿ ಕೊಂಡಿದ್ದರೆ ಸೋನಿಯಾ ಕಣ್ಣು ತಮ್ಮೆಡೆಗೆ ತಣ್ಣಗಿರುತ್ತವೆ ಅಂತ ಭಾವಿಸಿಬಿಟ್ಟರು ಧರಂಸಿಂಗ್‌. ಹಾಗೆ ಕೂಡಿಸಿಕೊಳ್ಳುವಾಗ ಪೀರಾನ್‌ ಎಸಗಿದ್ದ ಹಳೆಯ ಪಾತಕಗಳೆಂಥವು ಎಂಬುದನ್ನು ಧರಂ ಪರಿಶೀಲಿಸುವ ಗೊಡವೆಗೆ ಹೋಗಲೇ ಇಲ್ಲ. ಆತ ಎಸ್ಸೆಂ. ಕೃಷ್ಣರ ಕಾಲದಲ್ಲೂ ಕುಂತು ಉಂಡ ಭೂಪ. ಅಹ್ಮದ್‌ ಪಟೇಲರಿಗೆ ಕೃಷ್ಣರ ಸೂಟ್‌ ಕೇಸುಗಳನ್ನು ಒಯ್ದು ಕೊಡುತ್ತಿದ್ದವನೇ ಪೀರಾನ್‌. ಆ ಕಾರಣಕ್ಕಾಗಿಯೇ ‘ಯಾವುದಾದರೂ ಇಂಡಸ್ಟ್ರಿ ಮಾಡಿಕೊಳ್ಳಿ'ಅಂತ ಎಸ್ಸೆಂ ಕೃಷ್ಣ ಬೆಂಗಳೂರಿನ ಬಳಿ ಇನ್ನೂರು ಎಕರೆ ದಾನ ಕೊಟ್ಟಿದ್ದರು: ಸಭ್ಯ ಅತ್ತೆಯ ಅಳಿಯನಂತೆ. ಆದರೆ ಎರಡು ವರ್ಷಗಳ ನಂತರ ಅಶ್ರಫ್‌ ಪೀರಾನ್‌ ಮತ್ತು ಅಹ್ಮದ್‌ ಪಟೇಲ್‌- ಇಬ್ಬರನ್ನು ತಪ್ಪಿಸಿ ಮೋತಿಲಾಲ್‌ ವೋರಾ ಅವರ ಕೈಗೆ ರೊಕ್ಕ ತಲುಪಿಸುವ ವ್ಯವಸ್ಥೆ ಮಾಡಿತ್ತು ಅಕ್ಕಯ್ಯ ಸೋನಿಯಾ. ಆದರೆ ಅದೇ ಜೋಡಿ, ಧರಂಸಿಂಗ್‌- ದೇವು ಕೂಡಿಕೆಯಾದ ಮರುಕ್ಷಣ ದಿಲ್ಲಿ ಏಜೆಂಟರಾಗಿ ಬಂದು ಧರಂ ಬಂಗಲೆಯಲ್ಲಿ ವಸೂಲಿಗೆ ಕುಳಿತುಬಿಟ್ಟಿತು.

ಪ್ರಸ್ತದ ಮಾತೇ ಮರೆತ ಧರ್ಮೂ, ಅವರಿಬ್ಬರನ್ನೂ ಸಂಪ್ರೀತಗೊಳಿಸುತ್ತ, ಬಡಿಸುತ್ತ ನಿಂತು ಬಿಟ್ಟರು. ಹಂದರದ ಮತ್ತೊಂದು ಮೂಲೆಯಲ್ಲಿ ಅಧಿಕಾರಕ್ಕಾಗಿ ಜೆಡಿಎಸ್‌ನದೊಂದು ಹಿಂಡೇಕಾಯುತ್ತಿದೆ ಎಂಬುದನ್ನು ಧರಂಸಿಂಗ್‌ ಗಮನಿಸಲೇ ಇಲ್ಲ. ಸೋನಿಯಾ ಗಾಂಧಿಯ ಮುಂದೆ ನಿಂತು ‘ಖಾತೆ ಹಂಚಿಕೆ ಸರಿಯಾಗಿ ನಡೆಯಬೇಕಿದೆ. ಗೃಹ ಮತ್ತು ನೀರಾವರಿ ಇಲಾಖೆಗಳನ್ನ ಜೆಡಿಎಸ್‌ನವರಿಗೆ ಬಿಟ್ಟು ಬಿಡೋಣ. ಅರ್ಧದಷ್ಟು ನಿಗಮ ಮಂಡಳಿಗಳನ್ನು ಅವರಿಗೆ ಬಿಟ್ಟು ಕೊಡುವುದರಲ್ಲಿ ನ್ಯಾಯವಿದೆ. ಈ ರೀತಿ ಹಂಚಿಕೆ ಮಾಡಿಕೊಡದಿದ್ದರೆ ಮಾರಾಮಾರಿಯಾಗಿ ಮಂಗಳ ಸೂತ್ರಕ್ಕೆ ಅಪಾಯವುಂಟಾಗುತ್ತದೆ' ಅಂತ ಧೃಡವಾದ ದನಿಯಲ್ಲಿ ಹೇಳುವ ಪ್ರಯತ್ನವನ್ನೇ ಧರಂಸಿಂಗ್‌ ಮಾಡಲಿಲ್ಲ. ರಾಜ್ಯವಾಳುವುದೆಂದರೆ, ಹಣ ಹಂಚುವುದು. ದೇವೇಗೌಡರನ್ನು ಸರಿ ಮಾಡಿ ಇಟ್ಟುಕೊಳ್ಳುವುದು ಅಂತಲೇ ಭಾವಿಸಿಕೊಂಡಿದ್ದರು.

ಈ ನಿಷ್ಕಿೃಯತೆಯನ್ನು ಕಂಡ ದಿನದಿಂದಲೇ ಎಸ್ಸೆಂ ಕೃಷ್ಣ ಇನ್ಫೋಸಿಸ್‌ ನಾರಾಯಣ ಮೂರ್ತಿಯನ್ನು ಕಂಕುಳಲ್ಲಿಟ್ಟುಕೊಂಡು ಸೋನಿಯಾ ಮತ್ತು ರಾಹುಲ್‌ರ ಎದುರಿನಲ್ಲಿ ಧರಂಸಿಂಗ್‌ರನ್ನು ‘ಅಭಿವೃದ್ಧಿ ವಿರೋಧಿ' ಎಂಬಂತೆ ಬಿಂಬಿಸುತ್ತಿದ್ದರೆ, ಅದನ್ನು ಅಲ್ಲ ಗಳೆಯುವ ಪ್ರಯತ್ನವನ್ನು ಕೂಡ ಧರಂಸಿಂಗ್‌ ಮಾಡಲಿಲ್ಲ. ಒಬ್ಬ ದೇವೇಗೌಡರನ್ನು ಸರಿಯಾಗಿಟ್ಟುಕೊಂಡು ಕಾಲಕಾಲಕ್ಕೆ ಸೋನಿಯಾಗೆ ಕಪ್ಪ ಒಪ್ಪಿಸುತ್ತಿದ್ದರೆ ಸಾಕು ಎಂಬ ನಿಲುವು ತಳೆದು ನಿರ್ಲಕ್ಷ್ಯ ಮಾಡಿಬಿಟ್ಟರು. ಅರ್ಜುನ್‌ ಸಿಂಗ್‌ ಮಗ ಅಭಿಮನ್ಯು ಸಿಂಗ್‌ಗೆ ಕರ್ನಾಟಕದಲ್ಲಿ ಉಪಕರಿಸಿದ್ದು, ಕೇಂದ್ರ ಗೃಹ ಮಂತ್ರಿ ಶಿವರಾಜ ಪಾಟೀಲರ ಗೆಳೆತನ, ಗುಲಾಮ್‌ ನಬಿ ಅಜಾದ್‌ ಅವರ ನೆಂಟರಿಗೆ ಸಹಾಯ ಮಾಡುತ್ತಿರುವುದು ಇಂಥವುಗಳಿಂದಲೇ ದಿಲ್ಲಿ ದೊರೆಗಳನ್ನು ಮ್ಯಾನೇಜ್‌ ಮಾಡಿಬಿಡಬಹುದು ಅಂದು ಕೊಂಡರು ಧರಂಸಿಂಗ್‌. ಹಿಂದೆ ಮೊಯ್ಲಿ ಗುಂಡೂರಾವ್‌ ಕಾಲದಲ್ಲಿ ಇಷ್ಟು ಮಾಡಿದ್ದಿದ್ದರೆ ಸಾಕಾಗಿರುತ್ತಿತ್ತು. ಈಗಿನ ಖತರ್‌ನಾಕ್‌ ರಾಜಕೀಯ ವ್ಯವಸ್ಥೆಯಲ್ಲಿ ಇದೆಲ್ಲ ಎಲ್ಲಿ ಸಾಕಾಗುತ್ತವೆ? ಎಸ್ಸೆಂ ಕೃಷ್ಣರ ಶೈಲಿಯ ಸೊಫೆಸ್ಟಿಕೇಟೆಡ್‌ ರಾಜಕಾರಣವನ್ನ ಧರಂಸಿಂಗ್‌ರಿಂದ ಸೋನಿಯಾ ನಿರೀಕ್ಷಿಸಿದ್ದರು. ಕಡೆಕಡೆಗಂತೂ ಆಕೆಗೆ ಧರಂಸಿಂಗ್‌ರ ಮಾತು ಕೇಳಿಸುತ್ತಲೇ ಇರಲಿಲ್ಲ.

ಇಂಥದೊಂದು ದಡ್ಡತನದ ಜೊತೆಗೆ ಧರಂಸಿಂಗ್‌ ಅವರಿಗೆ ಹೊಡೆತ ಕೊಟ್ಟದ್ದು ಅವರಿಗಿದ್ದ ಜ್ಯೋತಿಷಿಗಳ ಮೇಲಿನ ನಂಬಿಕೆ ಮತ್ತು ದಗಲ್ಬಾಜಿ ಗೆಳೆಯರ ಮೇಲಿನ ವಿಶ್ವಾಸ. ಅತ್ತ ಕೆ.ಕೆ. ಮೂರ್ತಿ ಎಂಬ ಜಂತು‘ಮಲ್ಲಿಕಾರ್ಜುನ ಖರ್ಗೆ ಮತ್ತು ದೇವೇಗೌಡ ಇಬ್ಬರನ್ನೂ ನಾನು ಸಂಭಾಳಿಸ್ತೀನಿ, ನನಗೆ ಬಿಡಿ' ಎಂಬ ಹುಸಿ ಭರವಸೆ ತುಂಬುತ್ತಾ ಹೋಯಿತು. ಇನ್ನೊಂದು ಕಡೆ, ‘ನಿಮಗಿರೋ ರಾಜಯೋಗ ನೋಡಿದರೆ ಇನ್ನು ಹತ್ತು ವರ್ಷ ನಿಮ್ಮುನ್ನ ಯಾರೂ ಅಲ್ಲಾಡಿಸೋಕಾಗಲ್ಲ' ಅಂತ ಗಿಳಿಶಾಸ್ತ್ರದ ಜ್ಯೋತಿಷಿ ದ್ವಾರಕಾನಾಥ್‌ ನಂಬಿಕೆ ಹುಟ್ಟಿಸುತ್ತಾ ಹೋದ. ಶಕ್ತಿ ಗಣಪತಿ, ಕೊಲ್ಲೂರು ಮೂಕಾಂಬಿಕೆ, ಸುಬ್ರಮಣ್ಯ, ಮಹಾಲಕ್ಷ್ಮಿ ಅಂತ ಧರಂಸಿಂಗರನ್ನು ಗುಡಿ-ಗುಡಿ ಅಲೆಸಿ ತಾನು ಕಾಸು ಕಿತ್ತಿಕೊಂಡನೇ ಹೊರತು ದ್ವಾರಕಾನಾಥನೆಂಬ ಸಿರ್‌ಪಕಡುವಿನಿಂದ ಧರಂಸಿಂಗ್‌ರಿಗೆ ನಯಾಪೈಸೆಯ ಫಾಯ್ದೆಯಾಗಲಿಲ್ಲ. ಆತ ಉಳಿಸಿದ ಅಷ್ಟಿಷ್ಟನ್ನ ಸೋಮಯಾಜಿ ಉಡುಪರಂಥ ಕಾಂಜಿಪೀಂಜಿ ಜ್ಯೋತಿಷಿಗಳು ಕೆದರಿ ತಿಂದವರು. ಇವರೆಲ್ಲರಿಂದ ಧರಂ ಮನಸ್ಸಿನಲ್ಲಿ ತಾನು ಬಹುಕಾಲ ಅಧಿಕಾರದಲ್ಲಿ ಉಳಿಯಲಿರುವವನು ಎಂಬ ಭ್ರಮೆ ಮೂಡಿತೇ ಹೊರತು, ತಮ್ಮ ರಾಶಿಯಾಳಕ್ಕೆ ಕುಮಾರಣ್ಣನೆಂಬ ಶನಿಯ ಪ್ರವೇಶವಾಗಿದೆಯೆಂಬುದನ್ನು ಯಾವ ಜ್ಯೋಷಿಯೂ ಗುರುತಿಸಿ ಹೇಳಲಿಲ್ಲ.

ಕೈಯಲ್ಲಿ ಗೃಹ ಖಾತೆಯಿತ್ತಾದರೂ ಇಂಟೆಲಿಜೆನ್ಸ್‌ ವಿಭಾಗ fail ಆದದ್ದು ಮುಖ್ಯಮಂತ್ರಿಯ ಗಮನಕ್ಕೆ ಬರಲೇ ಇಲ್ಲ. ವಾಟಾಳ್‌ ನಾಗರಾಜರಿಂದ ಹಿಡಿದು ಅಮರೇಗೌಡ ಭಯ್ಯಾಪೂರರ ತನಕ ಎಲ್ಲರಿಗೂ ಉಣ್ಣಲಿಕ್ಕೆ ಇಕ್ಕಿದೆ: ಇನ್ನು ಭಯವಿಲ್ಲ ಅಂದುಕೊಂಡರು ಧರಂ.‘ಒಬ್ಬ ರಾಜಕಾರಣಿ ಕೇವಲ ಉಂಡು ತೃಪ್ತನಾಗುವುದಿಲ್ಲ. ಅಧಿಕಾರ ಬಯಸುತ್ತಾನೆ' ಎಂಬ ಸರಳ ಸತ್ಯ ಧರಂಸಿಂಗ್‌ರಿಗೆ ಅರ್ಥವಾಗಲಿಲ್ಲ. ಜೆಡಿಎಸ್‌ನಲ್ಲಿ ಅಂಥ ಅಧಿಕಾರದಾಹಿಗಳ ಹಿಂಡೇ ಇದೆ. ಅವರಲ್ಲಿ ಹೆಚ್ಚಿನವರನ್ನು ದೂರವಿರಿಸಿದ ಧರಂಸಿಂಗ್‌, ಅವರೆಲ್ಲರನ್ನೂ ದೇವೇಗೌಡರು ನೋಡಿಕೊಳ್ಳುತ್ತಾರೆ ಎಂದು ನಂಬಿದರು.

ನೋಡಿದವನು ಕುಮಾರ. ಕೊಂಡವನೂ ಕುಮಾರನೇ! ಒಬ್ಬೊಬ್ಬ ಶಾಸಕನಿಗೂ ತಲಾ ಎರಡು ಕೋಟಿ ಈ ಸದ್ಯಕ್ಕೆ. ಆನಂತರ ಮೂರು ಕೋಟಿ ರುಪಾಯಿ ಕೊಡುವ ರಹಸ್ಯ ಒಪ್ಪಂದಗಳಾಗಿ ಬಳ್ಳಾರಿಯಿಂದ ಲಾಡ್‌ಗಳು ಥೈಲಿಥೈಲಿ ತಂದು ಸುರಿಯುತ್ತಿದ್ದರೆ, ಭರ್ಜರಿ ಬಂಡಾಯ ಹುರಿಗೊಂಡು ‘ಧರ್ಮಪೀಠ' ಮುಗ್ಗರಿಸಿ ಬೀಳುವ ಘಳಿಗೆ ಆಸನ್ನವಾಗಿದ್ದರೆ- ಈ ಮನುಷ್ಯ ಶಾಯರಿ ಹೇಳುತ್ತ ಅಂಗಳದಲ್ಲಿ ನಿಂತಿದ್ದ. ಒಳಗೆ ಈತನ ಮಕ್ಕಳು, ಸ್ವಾಮಿ ಮುಂತಾದವರೆಲ್ಲ ನೋಟು ಎಣಿಸುವ ಮಷೀನು ಮಡುಚಿ ಗೋಣಿ ಚೀಲಕ್ಕೆ ತುಂಬುತ್ತಿದ್ದರು.

ಕಡುಭ್ರಷ್ಟ ಸರ್ಕಾರದ ಹೊರತು ಕರ್ನಾಟಕಕ್ಕೆ ಏನನ್ನೂ ಕೊಡದೆ ಹೊರಟಿರುವ ಈ ಸಿಕಂದರ್‌ ಖಾಲಿ ತಲೆಯ ಅವಿವೇಕಿ, ಅಷ್ಟೆ. ಹೋಗಿ ಬರಲಿ.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dharam Singh lead Congress-JDS Coalition Government was full of corruption, says Ravi Belagere, Suryashikari Columnist.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more