• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರಣ್‌-ಅರ್ಜುನ್‌ ಕಾಳಗದಲ್ಲಿ ಸೋತಿದ್ದು ಅರ್ಜುನ್‌!

By Staff
|
Ravi Belagere on Thatskannada.com ರವಿ ಬೆಳಗೆರೆ
ಮೀಸಲಾತಿ ನೀತಿಯ ಬಗ್ಗೆ ಭಯಂಕರ ಗೊಂದಲವೆದ್ದಿರುವ ಈ ದಿನಗಳಲ್ಲಿ ಕೇಂದ್ರ ಮಂತ್ರಿ ಅರ್ಜುನ್‌ಸಿಂಗ್‌ರನ್ನು ಖ್ಯಾತ ಪತ್ರಕರ್ತ ಕರಣ್‌ ಥಾಪರ್‌ ದೂರದರ್ಶನದಲ್ಲಿ ಸಂದರ್ಶಿಸಿದ್ದು, ಅದೊಂದು ಐತಿಹಾಸಿಕ ದಾಖಲೆ. ಮೀಸಲಾತಿ ಒಪ್ಪುವುದು ಅಥವಾ ಒಪ್ಪದೆ ಇರುವುದು-ಅದು ಬೇರೆ ಮಾತು. ನಮ್ಮ ರಾಜಕಾರಣಿಗಳು ಮನಸ್ಸಿನಲ್ಲಿ ಏನಿಟ್ಟುಕೊಂಡು ಮೀಸಲಾತಿಯಂಥ ಪಾಲಸಿಗಳನ್ನ ಘೋಷಿಸುತ್ತಾರೆ ಎಂಬುದನ್ನು ಸಾರಾಸಗಟಾಗಿ ಬಯಲಿಗೆಳೆದ ಸಂದರ್ಶನವದು.

ಅದರ ಕೆಲವು ಆಯ್ದ ಭಾಗಗಳನ್ನು ಮಾತ್ರ ಅನಂತ್‌ ಚಿನಿವಾರ್‌ ಕನ್ನಡಕ್ಕೆ ತರ್ಜುಮೆ ಮಾಡಿಕೊಟ್ಟಿದ್ದಾರೆ.

*

ಮತ್ತೆ ಕರಣ್‌ ಥಾಪರ್‌ ಬಗ್ಗೆ, ಅವನ ಇಂಟರ್‌ವ್ಯೂ ಬಗ್ಗೆ ಬರೆಯಬೇಕಾಗಿದೆ. ಅನೇಕರಿಗೆ ಥಾಪರ್‌ ಇಷ್ಟವಾಗಲಿಕ್ಕಿಲ್ಲ. ಅವನು ಅರೋಗೆಂಟ್‌ ಅನ್ನಿಸಬಹುದು, ಒರಟ ಅನ್ನಿಸಬಹುದು, ತಲೆಹರಟೆ ಅನ್ನಿಸಬಹುದು ; ಆದರೆ, ಇಂಟರಾಗೇಟಿವ್‌ ಸಂದರ್ಶನಗಳ ಮಟ್ಟಿಗೆ ಇವತ್ತು ಇಂಡಿಯಾದಲ್ಲಿ at least, ಇಂಡಿಯಾದ ಟೀವಿಯಲ್ಲಿ ಕರಣ್‌ ಬಿಟ್ಟರೆ ಮತ್ತೊಬ್ಬರಿಲ್ಲ.

Karan Thaperಮೊನ್ನೆ ಸಿಎನ್‌ಎನ್‌-ಐಬಿಎನ್‌ನ ಡೆವಿಲ್ಸ್‌ ಅಡ್ವೊಕೇಟ್‌ನಲ್ಲಿ ಅವನು ಮಾಡಿದ ಸಂದರ್ಶನವೊಂದು ಬಂದಿತ್ತು. ಕರಣ್‌ನ ತನಿಖೆಗೆ ತಲೆಯಾಡ್ಡಲು ಕುಳಿತಿದ್ದದ್ದು, ರಾಜಕೀಯದ ಅನುಭವೀ ಹುಲಿ, ಅರ್ಜುನ್‌ಸಿಂಗ್‌ ; ಹಟಕ್ಕೆ ಬಿದ್ದವನಂತೆ ರಿಸರ್ವೇಷನ್ನಿನ ಬಂದೂಕು ಹಿಡಿದು ಈ ದೇಶದ ಹುಡುಗ-ಹುಡುಗಿಯರನ್ನು ಬೆದರಿಸುತ್ತಿರುವ ಮನುಷ್ಯ. ಏನೋನೂ ಯೋಚಿಸದೆ, ಏನೇನೂ ತಯಾರಿ ಮಾಡಿಕೊಳ್ಳದೆ, ಕೇವಲ ರಾಜಕೀಯದಾಟಕ್ಕಾಗಿ ನಮ್ಮ ನಾಯಕರುಗಳು ಎಂತೆಂಥ ಅನಾಹುತ ಮಾಡಿಬಿಡಬಲ್ಲರು ಅನ್ನುವುದು ಅವತ್ತು ಅರ್ಜುನ್‌ಸಿಂಗ್‌ ಮೂಲಕ ಬಯಲಾಗಿ ಹೋಯಿತು.

*

ಥಾಪರ್‌ : ಮಿಸ್ಟರ್‌ ಸಿಂಗ್‌, ಹಿಂದುಳಿದ ವರ್ಗಗಳವರಿಗೆ ಉನ್ನತ ಶಿಕ್ಷಣ ಸುಲಭವಾಗಿ ಸಿಗುವಂತಾಗಬೇಕು ಅನ್ನುವ ಬಗ್ಗೆ ಬಹುಶಃ ಯಾರಿಗೂ ಆಕ್ಷೇಪ ಇರಲಾರದು. ಆದರೆ ಹಾಗೆ ಮಾಡೋದಕ್ಕೆ ಮೀಸಲಾತಿಯ ದಾರೀನೇ ಬೆಸ್ಟ್‌ ಅಂತ ನಿಮಗ್ಯಾಕನ್ಸತ್ತೆ?

ಸಿಂಗ್‌ : ನೋಡಿ, ಇದು ನನ್ನೊಬ್ಬನ ಡಿಸಿಷನ್‌ ಅಲ್ಲ. ಪಾರ್ಲಿಮೆಂಟೇ ಅಪರೂಪದ ಒಗ್ಗಟ್ಟಿನಿಂದ(ಮೀಸಲಾತಿ ಬಗೆಗಿನ)ಈ ನಿರ್ಧಾರ ತಗೊಂಡಿದೆ.

ಥಾಪರ್‌ : ಆದ್ರೆ ಪಾರ್ಲಿಮೆಂಟ್‌ ತಪ್ಪೇ ಮಾಡೋಲ್ಲ ಅಂತೇನಿಲ್ವಲ್ಲ ಮಿಸ್ಟರ್‌ ಸಿಂಗ್‌? ತುರ್ತು ಪರಿಸ್ಥಿತಿ ಹೇರೋದಿಕ್ಕಾಗಿ ಪಾರ್ಲಿಮೆಂಟು ನಮ್ಮ ಸಂವಿಧಾನವನ್ನೇ ತಿದ್ದುಪಡಿ ಮಾಡಿತ್ತು, ಗೊತ್ತು ತಾನೆ? ಸೋ, ಪಾರ್ಲಿಮೆಂಟು ತಪ್ಪು ಮಾಡೋದಿಲ್ಲ ಅಂತೇನಿಲ್ಲ. ಈಗ ರಿಸರ್ವೇಷನ್‌ ವಿಷಯಕ್ಕೆ ಬಂದ್ರೆ, ಹಿಂದುಳಿದ ವರ್ಗಗಳವರಿಗೆ ಸಹಾಯ ಮಾಡೋದಿಕ್ಕೆ ಮೀಸಲಾತಿಯೇ ಸರಿಯಾದ ದಾರಿ ಅಂತ ಸಂಸತ್ತು ಭಾವಿಸಿದ್ದಕ್ಕೆ ಏನಾದ್ರೂ ಬಲವಾದ ಕಾರಣ ಇದೆಯಾ?

ಸಿಂಗ್‌ : ನಂಗೊತ್ತು, ಯಾರೂ infalliable ಅಲ್ಲ. ಆದ್ರೆ, ಪಾರ್ಲಿಮೆಂಟು ಈ ದೇಶದ ಸರ್ವೋನ್ನತ ಸಂಸ್ಥೆ. ಅದರ ಒಬ್ಬ ಸದಸ್ಯನಾಗಿ ನಾನು ಅದರ ನಿರ್ಧಾರಕ್ಕೆ ಬದ್ಧನಾಗಿರಲೇಬೇಕು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕು ಅನ್ನುವುದು ಪಾರ್ಲಿಮೆಂಟಿನ ಇಚ್ಛೆ ಮತ್ತು ನಿರ್ಧಾರ.

ಥಾಪರ್‌ : ಪಾರ್ಲಿಮೆಂಟ್‌ ಸುಪ್ರೀಮ್‌ ಅನ್ನೋದನ್ನ ನಾನು ಪ್ರಶ್ನಿಸ್ತಾ ಇಲ್ಲ. ಆದ್ರೆ ವೈಯಕ್ತಿಕವಾಗಿ ನೀವೂ ಕೂಡ ರಿಸರ್ವೇಷನ್‌ ಒಂದೇ ಸರಿಯಾದ ಮಾರ್ಗ ಅಂತ ನಂಬಿದ್ದೀರಾ?

ಸಿಂಗ್‌ : ಖಂಡಿತ.(ಸಾಮಾಜಿಕ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ)ಅದೊಂದು ಅತ್ಯಂತ ಇಂಪಾರ್ಟಂಟ್‌ ದಾರಿ.

ಥಾಪರ್‌ : ಆದ್ರೆ ಅದೇ ಸರಿಯಾದ ದಾರಿಯಾ?

ಸಿಂಗ್‌ : ಯಸ್‌, its also the right way.

ಥಾಪರ್‌ : ಹಾಗಿದ್ರೆ, ಒಂದಿಷ್ಟು ಬೇಸಿಕ್‌ ಪ್ರಶ್ನೆಗಳ ಕಡೆ ನೋಡೋಣ. ನಾವೀಗ ಪರ್ಟಿಕ್ಯುಲರ್‌ ಆಗಿ ಓಬಿಸಿ ವರ್ಗದವರ ರಿಸರ್ವೇಷನ್‌ ಬಗ್ಗೆ ಮಾತಾಡ್ತಿದೀವಿ. ಇಂಡಿಯಾದ ಒಟ್ಟಾರೆ ಜನಸಂಖ್ಯೆಯಲ್ಲಿ ಓಬಿಸಿಗಳೆಷ್ಟು ಜನ ಇದ್ದಾರೆ ಅನ್ನೋದು ನಿಮಗೆ ಕರೆಕ್ಟಾಗಿ ಗೊತ್ತಾ? ಮಂಡಲ್‌ ಪ್ರಕಾರ ಅವರ ಸಂಖ್ಯೆ ನಮ್ಮ ಪಾಪ್ಯುಲೇಷನ್ನಿನ ಐವತ್ತೆರಡು ಪರ್ಸೆಂಟ್‌ ಆದ್ರೆ, ನ್ಯಾಷನಲ್‌ ಸ್ಯಾಂಪಲ್‌ ಸರ್ವೇ ಆರ್ಗನೈಸೇಷನ್‌ (NSSO) ಪ್ರಕಾರ ಮೂವತ್ತೆರಡು ಪರ್ಸೆಂಟ್‌. ನ್ಯಾಷನಲ್‌ ಫ್ಯಾಮಿಲಿ ಆ್ಯಂಡ್‌ ಹೆಲ್ತ್‌ ಸರ್ವೇ ಪ್ರಕಾರ ಅದು ಇನ್ನೂ ಕಮ್ಮಿ ; ಬರೀ ಇಪ್ಪತ್ತೊಂಬತ್ತು ಪಾಯಿಂಟ್‌ ಎಂಟು ಪರ್ಸೆಂಟ್‌. ಈ ಪೈಕಿ ಯಾವುದು ಸರಿ?

ಸಿಂಗ್‌ : ಅದನ್ನ ಆ ಬಗ್ಗೆ ಹೆಚ್ಚು ತಿಳಿದುಕೊಂಡವರು ಹೇಳಬೇಕು, ನನಗೆ ಗೊತ್ತಿಲ್ಲ. ಆದ್ರೆ ನಮ್ಮ ಜನಸಂಖ್ಯೆಯಲ್ಲಿ ಓಬಿಸಿಗಳ ಪ್ರಮಾಣ ಸಾಕಷ್ಟು ದೊಡ್ಡದಿದೆ ಅನ್ನೋದು ಮಾತ್ರ ನಿಜ.

ಥಾಪರ್‌ : ಆದ್ರೆ ಸರ್‌, ಅವ್ರಿಗೆ ರಿಸರ್ವೇಷನ್‌ ನಿಗದಿ ಮಾಡೋಕೆ ಮುಂಚೆ ನಮ್ಮ ಪಾಪ್ಯುಲೇಷನ್ನಿನಲ್ಲಿ ಅವರ ಪ್ರಮಾಣ ಕರೆಕ್ಟಾಗಿ ಎಷ್ಟಿದೆ ಅನ್ನೋದನ್ನ ತಿಳ್ಕೋಬೇಕಲ್ವೆ? ಡೋಂಟ್‌ ಯು ಥಿಂಕ್‌ ಇಟೀಸ್‌ ಇಂಪಾರ್ಟಂಟ್‌? ಹಾಗಿಲ್ದೆ ಹೋದ್ರೆ, ಅವ್ರ ಜನಸಂಖ್ಯೆಗೆ ತಕ್ಕಷ್ಟು ರಿಸರ್ವೇಷನ್‌ ಅವ್ರಿಗೆ ಈಗಾಗ್ಲೇ ಸಿಕ್ಕಿದ್ಯೋ ಇಲ್ವೋ ಅನ್ನೋದು ನಿಮ್ಗೆ ಹೇಗೆ ಗೊತ್ತಾಗುತ್ತೆ?

ಸಿಂಗ್‌ : ನೋನೋ, ಅವ್ರಿಗದು ಸಿಕ್ಕಿಲ್ಲ ಅನ್ನೋದು ಗ್ಯಾರಂಟಿ. it’s obvious.

ಥಾಪರ್‌ : obvious ಅಂತ ಹ್ಯಾಗೆ ಹೇಳ್ತೀರಿ?

ಸಿಂಗ್‌ : ಅದು ಕಣ್ಣಿಗೇ ಕಾಣತ್ತಲ್ರೀ...

ಥಾಪರ್‌ : ಬಹುಶಃ ಅದು NSSOಗೆ ಕಾಣ್ತಿಲ್ಲ ಅನ್ಸತ್ತೆ. ಸರ್ಕಾರದಿಂದಲೇ ಅಪಾಯಿಂಟ್‌ ಆದ ಆ ಸಂಸ್ಥೆಯವರು 1999ರಲ್ಲಿ ಒಂದು ಸರ್ವೇ ಮಾಡಿ ರಿಪೋರ್ಟ್‌ ಕೊಟ್ಟಿದ್ದಾರೆ. ಅದರ ಪ್ರಕಾರ, ಈಗಾಗ್ಲೇ ನಮ್ಮ ಯೂನಿವರ್ಸಿಟಿಗಳ ಇಪ್ಪತ್ಮೂರೂವರೆ ಪರ್ಸೆಂಟ್‌ ಸೀಟುಗಳು ಓಬಿಸಿ ವರ್ಗದ ಕೈಯಲ್ಲಿವೆ. ಅಂದ್ರೆ, ಒಟ್ಟಾರೆ ಓಬಿಸಿ ಜನಸಂಖ್ಯೆಗಿಂತ ಅವರಿಗಿರೋ ರಿಸರ್ವೇಷನ್‌ ಬರೀ ಎಂಟೂವರೆ ಪರ್ಸೆಂಟ್‌ ಕಡಿಮೆ ಅಷ್ಟೆ! ಈ ಎಂಟೂವರೆ ಪರ್ಸೆಂಟ್‌ ಜನಕ್ಕೆ ನೀವೀಗ ರಿಸರ್ವೇಷನ್‌ ಕೊಡೋಕೆ ಹೊರಟಿದ್ದೀರಿ...

ಸಿಂಗ್‌ : ಇದೆಲ್ಲಾ ನಂಗೆ ಬೇಕಾಗಿಲ್ಲ ಕರಣ್‌... ನಾನಾಗ್ಲೇ ಹೇಳಿದ್ನಲ್ಲಾ ; ಈ ಡಿಸಿಷನ್ನು ಪಾರ್ಲಿಮೆಂಟ್‌ದು. ಪಾರ್ಲಿಮೆಂಟಿನ ಸೇವಕನಾಗಿ ನಾನು ಅದನ್ನ ಜಾರಿ ಮಾಡೋಕೆ ಹೊರಟಿದೀನಿ ಅಷ್ಟೆ...

ಥಾಪರ್‌ : ಅದ್ಸರಿ ಸಾರ್‌, ಜನ ಈಗ ಕೇಳ್ತಿರೋದು ಒಂದೇ ಪ್ರಶ್ನೆ ; ನಿಜ್ವಾಗ್ಲೂ ರಿಸರ್ವೇಷನ್ನಿನ ಅಗತ್ಯ ಇದೆಯಾ, ಅನ್ನೋದು. ಒಂದ್ಕಡೆ ನೀವು ಒಟ್ಟು ಓಬಿಸಿ ಜನಸಂಖ್ಯೆ ಎಷ್ಟಿದೆ ಅನ್ನೋದು ನಿಮಗೆ ಗೊತ್ತಿಲ್ಲ ಅಂತೀರಿ. ಇನ್ನೊಂದ್ಕಡೆ NSSOನವ್ರು ಈಗಾಗ್ಲೇ ಓಬಿಸಿಗೆ ಇಪ್ಪತ್ಮೂರೂವರೆ ಪರ್ಸೆಂಟ್‌ ಕಾಲೇಜ್‌ ಸೀಟುಗಳಿವೆ ಅಂತ ಹೇಳಿದಾರೆ. ಅವ್ರು ಹೇಳೋದು ನಿಜ ಅಂತಾನೇ ಆದ್ರೆ ಹೊಸ್ದಾಗಿ ರಿಸರ್ವೇಷನ್‌ ಕೊಡೋಕೆ ನಿಮಗೆ ಆಧಾರಾನೇ ಇಲ್ಲ.

ಸಿಂಗ್‌ : ಕಾಲೇಜ್‌ ಸೀಟು ಅಂದ್ರೆ ಏನು, ನಿಮ್ಮರ್ಥದಲ್ಲಿ?

ಥಾಪರ್‌ : ಯೂನಿವರ್ಸಿಟಿ ಸೀಟುಗಳು ; ಅಂದ್ರೆ, ಉನ್ನತ ಶಿಕ್ಷಣದ ಸೀಟುಗಳು.

ಸಿಂಗ್‌ : ಉಹುಂ, ಹಾಗೆ ಅವ್ರಿಗೆ ರಿಸರ್ವೇಷನ್‌ ಇರೋದು ನನ್ನ ಗಮನಕ್ಕೆ ಬಂದಿಲ್ಲ.

ಥಾಪರ್‌ : ಹಾಗಿದ್ದ್ರೆ, ಈಗ ನೀವು ನಿಮ್ಮ ಹೊಸ ರಿಸರ್ವೇಷನ್‌ ಮಾಡ್ಬೇಕು ಅಂದ್ಕೊಂಡಿದೀರಿ?

ಸಿಂಗ್‌ : ಅದನ್ನ ನಾನೀಗ ಹೇಳೋಕಾಗಲ್ಲ. ಯಾಕಂದ್ರೆ ಅದಿನ್ನೂ ತೀರ್ಮಾನ ಆಗಬೇಕಿದೆ.

ಥಾಪರ್‌ : ಅದನ್ನಿನ್ನೂ ನಿರ್ಧಾರ ಮಾಡಿಲ್ಲ ಅಂತಾದ್ರೆ, ಅದು ಇಪ್ಪತ್ತೇಳು ಪರ್ಸೆಂಟಿಗಿಂತ ಕಡಿಮೆಯೂ ಇರಬಹುದು, ಅಥವಾ ಕರೆಕ್ಟಾಗಿ ಇಪ್ಪತ್ತೇಳೇ ಇರಲೂಬಹುದು. ಒಟ್ನಲ್ಲಿ ರಿಸರ್ವೇಷನ್‌ ಪ್ರಮಾಣ ಜಾಸ್ತಿ ಆಗೋದು ನಿಜ. ಹಾಗಿದ್ರೆ, ಬೇರೆ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯ ಆಗ್ದೆ ಇರೋದಿಕ್ಕಾಗಿ ಐಐಟಿ-ಎಐಎಮ್‌ ಮುಂತಾದ ಕಡೆಗಳಲ್ಲಿ ಒಟ್ಟಾರೆ ಸೀಟುಗಳನ್ನು ಜಾಸ್ತಿ ಮಾಡ್ತೀರಾ?

ಸಿಂಗ್‌ : ಅಂಥದ್ದೊಂದು ಸಲಹೆ ಇದೆ. ಮಾಡಬಹುದು.

ಥಾಪರ್‌ : ಹಾಗೆ ಮಾಡೋದಾದ್ರೆ, ಟೈಮ್ಸ್‌ ಆಫ್‌ ಇಂಡಿಯಾ ಪ್ರಕಾರ, ಸುಮಾರು ಐವತ್ಮೂರು ಪರ್ಸೆಂಟ್‌ ಸೀಟು ಜಾಸ್ತಿ ಮಾಡಬೇಕಾಗುತ್ತೆ. ಇಷ್ಟಕ್ಕೆಲ್ಲಾ ಹೊಂದುವಂಥ ಪ್ರಮಾಣದ ಟೀಚರುಗಳನ್ನ, ಮೂಲಭೂತ ಸೌಕರ್ಯಗಳನ್ನ, ಎಲ್ಲಿಂದ ತರ್ತೀರಿ? ಎಜುಕೇಷನ್ನಿನ ಮಟ್ಟವೇ ಕುಸಿದು ಹೋಗಬಹುದಾದ ಅಪಾಯ ಕೂಡ ಇದೆ ಅಲ್ವೆ?

ಸಿಂಗ್‌ : ಪ್ಲೀಸ್‌, ಟೈಮ್ಸ್‌ ಆಫ್‌ ಇಂಡಿಯಾ-ಹಿಂದೂಸ್ತಾನ್‌ ಟೈಮ್ಸ್‌ಗಳ ಮಾತನ್ನ ಲೆಕ್ಕಕ್ಕೆ ತಗೋಬೇಡಿ.

ಥಾಪರ್‌ : ಆಲ್‌ರೈಟ್‌, ಅದನ್ನ ಬಿಡಿ. ನನ್‌ ಹತ್ರ ಯುಜಿಸಿ ಚೇರ್‌ಮನ್‌ ಸುಖದೇವ್‌ ತೋರಟ್‌ ಕೊಟ್ಟಿರೋ ಒಂದು ರಿಪೋರ್ಟ್‌ ಇದೆ. ಅವರ ಪ್ರಕಾರ ಇವತ್ತು ಉನ್ನತ ಶಿಕ್ಷಣದ ಎಲ್ಲ ಹಂತಗಳಲ್ಲೂ ಎಲ್ಲ ಸಂಸ್ಥೆಗಳಲ್ಲೂ ಒಟ್ಟಾರೆ ಸುಮಾರು ಒಂದೂಕಾಲು ಲಕ್ಷ ಹುದ್ದೆಗಳು ಖಾಲಿ ಇವೆ. ಐಐಟಿಗಳಲ್ಲಿ ಸುಮಾರು ಮೂವತ್ತು ಪರ್ಸೆಂಟ್‌ ಟೀಚಿಂಗ್‌ ಹುದ್ದೆಗಳು ಖಾಲಿ ಇವೆ. ಪರಿಸ್ಥಿತಿ ಹೀಗಿರೋವಾಗ, ಸೀಟುಗಳ ಸಂಖ್ಯೆಯನ್ನ ಯಾವ ಧೈರ್ಯದೆ ಮೇಲೆ ಜಾಸ್ತಿ ಮಾಡ್ತೀರಿ?

ಸಿಂಗ್‌ : ಅದನ್ನೆಲ್ಲಾ ಸರಿ ಮಾಡ್ತೀವಿ ಬಿಡಿ.

ಥಾಪರ್‌ : ಅದಕ್ಕೆ ಹಲವಾರು ವರ್ಷಗಳೇ ಬೇಕಾಗಬಹುದು.

ಸಿಂಗ್‌ : ನೋಡೋಣ. ತಕ್ಷಣ ಸೀಟು ಜಾಸ್ತಿಮಾಡೋದೋ, ಹಂತಹಂತವಾಗಿ ಮಾಡೋದೋ, ಇನ್ನೂ ನಾವು ನಿರ್ಧಾರ ಮಾಡಬೇಕು.

*

ಹೀಗೆ ಉತ್ತರಿಸಿದರು ಅರ್ಜುನ್‌ಸಿಂಗ್‌. ಮೀಸಲಾತಿಯ ಬಗ್ಗೆ ಅವರ ನಿಲುವೇನು, ಅವರು ತಿಳಿದುಕೊಂಡಿರುವುದುದೆಷ್ಟು-ವಿವರಿಸಬೇಕಿಲ್ಲ ಅಲ್ಲವೆ?

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಪೂರಕ ಓದಿಗೆ :

ಜಾತಿ ಮೀಸಲಾತಿ : ರೊಕ್ಕ ಮೀಸಲಾತಿ : ಮತ್ತೊಂದು ಸಂಖ್ಯಾ ಮೀಸಲಾತಿ!

ಖಾಸಗಿ ವಲಯದಲ್ಲೂ ಮೀಸಲಾತಿ ಬೇಕು ಅಂತ ಕಾನೂನು ತಂದರೆ ಏನಂತೀರಿ?

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more