ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಣಯ ಮುರಿಯಲಿದ್ದೇವೆಂಬುದು ಗೊತ್ತಿರುವುದೂ ನಿರ್ಣಯವೇ!

By Staff
|
Google Oneindia Kannada News


‘ಒಳ್ಳೆಯದಾಗಲಿದೆ’ ಅಂದುಕೊಳ್ಳುವುದು ಆಶಾವಾದದ ಲಕ್ಷಣ. ಒಳ್ಳೆಯನ್ನು ಮಾಡಿಕೊಳ್ಳುತ್ತೇನೆ ಅಂತ ತೀರ್ಮಾನಿಸುವುದು ಬುದ್ಧಿವಂತರ ಲಕ್ಷಣ. ಮತ್ತು ಅಂತ ನಿರ್ಣಯವನ್ನು ನಮ್ಮ ಬಗ್ಗೆ ನಾವು ಮಾತ್ರ ಮಾಡಿಕೊಳ್ಳಲು ಸಾಧ್ಯ. 2007ನ್ನು ನಿಮ್ಮದಾಗಿಸಿಕೊಳ್ಳಲು ಇಲ್ಲೊಂದಿಷ್ಟು ಟಿಪ್ಸ್‌.

  • ರವಿ ಬೆಳಗೆರೆ
New Year Resolutions : How would you want 2007 to be?ಕೈ ಚಾಚಿದರೆ ಹೊಸ ವರ್ಷ. ನನಗೆ ಹಬ್ಬಗಳು, ಹೊಸ ವರ್ಷಗಳು, ಹುಟ್ಟುಹಬ್ಬಗಳೂ ಇವೆಲ್ಲ ದೊಡ್ಡ ಸೆಂಟಿಮೆಂಟು ಉಂಟು ಮಾಡುವ ಸಂಗತಿಗಳಲ್ಲ. ಅವತ್ತು ನನ್ನ ಮನೆಯಾಕೆಯ ಬರ್ತ್‌ಡೇ ಇರುತ್ತದಾದ್ದರಿಂದ ನಮ್ಮ ಮನೆಮಂದಿಯೆಲ್ಲ ಒಟ್ಟಿಗಿರಲು ಪ್ರಯತ್ನಿಸುತ್ತೇವೆ. ಈ ಸಲ ಕೂಡ ಪ್ರತೀ ವರ್ಷದಂತೆ ಅಮ್ಮನ ಬರ್ತ್‌ಡೇನ ಎಲ್ಲಾದರೂ ದೂರ ಹೋಗಿ ವಿಶೇಷವಾಗಿ ಸೆಲಬ್ರೇಟ್‌ ಮಾಡೋಣ ಅಂತ ನಾನು-ಮಕ್ಕಳು ಮಾತಾಡಿಕೊಂಡಿದ್ದಾಯಿತೇ ಹೊರತು, ಇರುವ ಜಂಜಡ ಬಿಟ್ಟು ಎಲ್ಲಿಗೂ ಹೋಗಲಾಗುತ್ತಿಲ್ಲ. ಎಲ್ಲಿದ್ದರೂ ದಡಬಡಿಸಿ ಬಂದು ಡಿಸೆಂಬರ್‌ 31ರ ರಾತ್ರಿ ಒಟ್ಟಿಗೆ ಸೇರಿ ಮೇಣ ಕರಗಿಸುವ ಬೆಳಕಿನಲ್ಲಿ ನಗೆಯ ಹೊಳಪು ಕಾಣುತ್ತೇವೆ. ಯಥಾ ಪ್ರಕಾರ ಜ.1ರ ಸೋಮವಾರ ನಮ್ಮ ನಮ್ಮ ಹೆಗಲ ಚೀಲ ಹೊತ್ತು ಕೆಲಸಗಳಿಗೆ ಹೊರಡುತ್ತೇವೆ.

ಆದರೆ, ತುಂಬ ಜನಕ್ಕೆ-ಅದರಲ್ಲೂ ಕಿರಿಯರಿಗೆ ಹೊಸ ವರ್ಷದ ಹೊಸ್ತಿಲು ಪ್ರಮುಖವಾದದ್ದು. ಮಾಡಬೇಕೆಂದುಕೊಂಡ ಒಳ್ಳೆಯ ಕೆಲಸಗಳನ್ನೆಲ್ಲ ಹೊಸ ವರ್ಷದಿಂದಲೇ ಮಾಡಬೇಕು ಅಂದುಕೊಳ್ಳುತ್ತಾರೆ. ಹೀಗಾಗಿ ಅವರಿಗೊಂದಷ್ಟು ಪುಟ್ಟ ಸಲಹೆಗಳಿವೆ ಇಲ್ಲಿ.

ಮೊದಲನೆಯದಾಗಿ : ಹೋದ ವರ್ಷ ಜ.1ರಂದು ತೆಗೆದುಕೊಂಡ ನಿರ್ಣಯಗಳ ಪೈಕಿ ಜಾರಿಗೆ ತರಲು ನಿಮ್ಮಿಂದ ಸಾಧ್ಯವಾದವು ಎಷ್ಟು? ಅವುಗಳದೊಂದು ಪಟ್ಟಿ ಮಾಡಿ. ಅವುಗಳ ಪಕ್ಕದಲ್ಲೇ ಜಾರಿಗೆ ತರಲಾಗದ ರೆಸಲ್ಯೂಷನ್‌ಗಳೆಷ್ಟು? ಅವುಗಳದೂ ಒಂದು ಪಟ್ಟಿ ಮಾಡಿ. ಹಾಗೆ ಪಟ್ಟಿ ಮಾಡುತ್ತ ಕುಳಿತಾಗಲೇ, ‘ಇಷ್ಟೊಂದು ಠರಾವುಗಳನ್ನು ಮಾಡಬಾರದು’ ಎಂಬ ಅತಿ ಮುಖ್ಯ ರೆಸೊಲ್ಯೂಷನ್‌ ಮಾಡಬೇಕೆಂಬುದು ನಿಮಗೆ ಗೊತ್ತಾಗಿರುತ್ತದೆ.

ಈ ವರ್ಷ ತುಂಬ ರೆಸೊಲ್ಯೂಷನ್‌ಗಳನ್ನು ಕೈಗೊಳ್ಳುವುದಿಲ್ಲ ಎಂಬುದು 2007ರ ನಿಮ್ಮ ಮೊದಲನೆಯ ನಿರ್ಣಯವಾಗಿರಲಿ. ಎರಡೇ ಎರಡು ನಿರ್ಣಯಗಳನ್ನು ತೆಗೆದುಕೊಳ್ಳಿ. ಒಂದು ನಿರ್ಣಯ ನಿಮ್ಮ ಬದುಕಿನ ದಿಕ್ಕು ಬದಲಿಸುವಂತಾಗಿರಲಿ. ಅದನ್ನು long term resolution ಅಂತಾರೆ. ಎರಡನೆಯದು, ಈ ಸದ್ಯಕ್ಕೆ -ಈ ವರ್ಷಕ್ಕೆ ಅಥವಾ ವರ್ಷದ ಮೊದಲ ಅರ್ಧಕ್ಕೆ ಮಾತ್ರ ಅನ್ವಯವಾಗುವಂತಹ short term resolution ಆಗಿರಲಿ.

ಎರಡನೆಯದಾಗಿ : ಜನವರಿ ಒಂದರ ಬೆಳಗ್ಗೆ ಅಥವಾ ಡಿ.31ರ ಮಧ್ಯರಾತ್ರಿ ನೀವು ಕೈಗೊಂಡ ನಿರ್ಣಯವು ಒಂದು ವಾರ ಕಳೆಯುವುದರೊಳಗಾಗಿ ವಿಫಲವಾಗಲಿದೆ, ಸಡಿಲಾಗಲಿದೆ, ನೀವೇ ನಿಮ್ಮ ಠರಾವನ್ನು ಮುರಿಯಲಿದ್ದೀರಿ ಎಂಬುದು ನಿಮಗೆ ಗೊತ್ತಿರಲಿ. ಆದ್ದರಿಂದ, ಮುರಿದು ಬೀಳುವ ನಿರ್ಣಯವೊಂದನ್ನು ಮತ್ತೆ ಕೈಗೆತ್ತಿಕೊಳ್ಳುತ್ತೇನೆಂಬ ನಿರ್ಣಯವೊದನ್ನು ಕೂಡ ಹೊಸ ವರ್ಷದ ಹೊಸ್ತಿಲಲ್ಲೇ ನಿಂತು ತೆಗೆದುಕೊಂಡು ಬಿಡಿ. ಎಷ್ಟೇ ಗಟ್ಟಿ ಮನಸ್ಸಿನಿಂದ ಒಂದು ನಿರ್ಣಯ ಕೈಗೊತ್ತಿಕೊಂಡರೂ ಮನಸ್ಸು ಸಡಿಲಗೊಂಡು ತನಗೆ ತಾನೇ ಧೋಕಾ ಮಾಡಿಕೊಂಡು ಬಿಡುತ್ತದೆ. ಮತ್ತೊಮ್ಮೆ ಆ ನಿರ್ಣಯಕ್ಕೆ ಬರಲಿಕ್ಕಾಗಿ ಇನ್ನೊಂದು ಜ.1ಕ್ಕಾಗಿ ಕಾಯುತ್ತ ಕೂಡುವುದರಲ್ಲಿ ಅರ್ಥವಿಲ್ಲ.

ಮೂರನೆಯದಾಗಿ : ಸಿಗರೇಟು ಸೇದುವುದಿಲ್ಲ, ಕುಡಿಯುವುದಿಲ್ಲ ಎಂಬಂತಹ ನಿರ್ಣಯಗಳನ್ನು ತೆಗೆದುಕೊಳ್ಳುವುದು ಒಳ್ಳೆಯದೇ. ಆದರೆ ಈ ನಿರ್ಣಯಗಳನ್ನು ಪ್ರತಿ ನಿತ್ಯ ತೆಗೆದುಕೊಳ್ಳಬೇಕಾಗುತ್ತಾದ್ದರಿಂದ ಇಂಥ ನಿರ್ಣಯಗಳ ಜೊತೆಯಲ್ಲಿ ಪಾಸಿಟಿವ್‌ ದನಿಯಿರುವ ನಿರ್ಣಯಗಳನ್ನು ತೆಗೆದುಕೊಳ್ಳಿ. ಉದಾಹರಣೆಗೆ, ಈ ವರ್ಷದಲ್ಲಿ ಸೈಟು ಖರೀದಿಸುತ್ತೇನೆ, ಪೈಲಟ್‌ ತರಬೇತಿ ಸಂಪೂರ್ಣಗೊಳಿಸುತ್ತೇನೆ, ವರ್ಷದ ಅಂತ್ಯದ ಹೊತ್ತಿಗೆ ಕಾರು ಖರೀದಿಸುತ್ತೇನೆ ಇತ್ಯಾದಿ.

ನಾಲ್ಕನೆಯದಾಗಿ : ಆರೋಗ್ಯ ಸಂಬಂಧಿ ರೆಸೊಲ್ಯಾಷನ್ನುಗಳಿಗೆ ಮಹತ್ವಕೊಡಿ. ಔಷಧಿಯಷ್ಟೇ ಅಲ್ಲದೇ ವ್ಯಾಯಾಮದಿಂದ, ಪಥ್ಯದಿಂದ ಕಳೆದುಕೊಳ್ಳಬಹುದಾದ ಖಾಯಿಲೆಗಳು, ಕಂಟ್ರೋಲಿಗೆ ತಂದುಕೊಳ್ಳಬಹುದಾದ ಖಾಯಿಲೆಗಳು ಇದ್ದರೆ -ಆ ಬಗ್ಗೆ ಗಟ್ಟಿ ನಿರ್ಣಯ ತೆಗೆದುಕೊಳ್ಳಿ. Body build ಮಾಡುವ, ತೂಕ ಇಳಿಸುವ, ಅಥ್ಲೆಟಿಕ್‌ ಸಾಧನೆಗಳನ್ನು ಪಟ್ಟಿ ಮಾಡುವ ವಿಷಯಗಳಲ್ಲಿ ಹೊಸ ವರ್ಷದ ನಿರ್ಣಯಗಳು ತುಂಬ ಸಹಾಯಕ. ಇವುಗಳಿಗೆ ವರ್ಷದುದ್ದಕ್ಕೂ ಲೆಕ್ಕ ಸಿಗುತ್ತವೆ. ಕ್ಯಾಲೆಂಡರಿನ ಪುಟಗಳೇ ಅಳತೆಗೋಲುಗಳಾಗುತ್ತವೆ. ‘ಆಗಸ್ಟ್‌ ಹೊತ್ತಿಗೆ ಹತ್ತು ಕೇಜಿ ತೂಕ ಕಳೆದುಕೊಂಡಿರುತ್ತೇನೆ’ ಅಂತ ಒಂದು ನಿರ್ಣಯ ತೆಗೆದುಕೊಂಡರೆ ಜನವರಿ 1ರಿಂದಲೇ ಭೂಭಾರ ಕಡಿಮೆ ಮಾಡಲಾರಂಭಿಸುತ್ತೇವೆ.

ಐದನೆಯದಾಗಿ : ಒಂದು ದೂರದೂರಿಗೆ, ಜಾಗಕ್ಕೆ, ವಿದೇಶಕ್ಕೆ, ಪರ್ವತ ಪ್ರದೇಶಕ್ಕೆ ಈವರ್ಷ ಹೋಗಿ ಬರುತ್ತೇನೆಂದು ನಿರ್ಣಯಿಸಿ. ಸ್ವಲ್ಪ ದುಸ್ತರವಾದದ್ದನ್ನೇ, ದುಬಾರಿಯಾದುದನ್ನೇ ಆಯ್ಕೆ ಮಾಡಿಕೊಳ್ಳಿ. ಈ ವರ್ಷ ಅರ್ಜೆಂಟೀನಾಕ್ಕೆ ಹೋಗುತ್ತೇನೆಂದು ತೀರ್ಮಾನಿಸಿದರೆ ಆ ದೇಶದ ಬಗ್ಗೆ ಪುಸ್ತಕಗಳಲ್ಲಿ, ಇಂಟರ್‌ನೆಟ್‌ನಲ್ಲಿ, ಅಲ್ಲಿಂದ ಬಂದ ಗೆಲೆಯರಲ್ಲಿ ಮಾಹಿತಿ ಪಡೆದುಕೊಳ್ಳಿ. ಪ್ರವಾಸಕ್ಕಾಗಿ ದುಡ್ಡು ಜೋಡಿಸುವುದರಲ್ಲಿ ಖುಷಿಯಿದೆ. ರಜೆ ಹೊಂದಿಸುವುದಕ್ಕಾಗಿ extra ದುಡಿಮೆ ಮಾಡುವುದರಲ್ಲಿ ಸಂತೋಷವಿದೆ. ಒಬ್ಬರೇ ಹೋಗಲು ಬೋರ್‌ ಅನ್ನಿಸಿದರೆ, ಭಯವಾದರೆ, ಹಿಂಜರಿಕೆಯಾದರೆ ಜೊತೆಗೊಬ್ಬರನ್ನು ಸೇರಿಸಿಕೊಂಡು ಅವರಿಗೂ ಅರ್ಜೆಂಟೀನಾದ ಹುಚ್ಚು ಹಿಡಿಸಬಹುದು. ಅದರಲ್ಲೂ ಸುಖವಿದೆ.

ಆರನೆಯದಾಗಿ : ಒಂದು ವರ್ಷದೊಳಗಾಗಿ ಒಬ್ಬ ಲೇಖಕನ ಅಷ್ಟೂ ಪುಸ್ತಕಗಳನ್ನು ಓದಿ ಮುಗಿಸುತ್ತೇನೆ ಎಂಬಂಥ ಕಡಿಮೆ ಖರ್ಚಿನ ಆದರೆ ಹೆಚ್ಚು ಸಮಯ ತಿನ್ನುವ ನಿರ್ಣಯಗಳನ್ನು ತೆಗೆದುಕೊಳ್ಳಿ. ಇಸ್ಟೀಟಿನಂಥ ಚಟಗಳನ್ನು ದೂರಮಾಡಿಕೊಳ್ಳುವುದಕ್ಕೆ ಇಂತಹ ನಿರ್ಣಯಗಳು ತುಂಬ ಸಹಾಯಕ. ಪುಸ್ತಕಗಳು ಗೆಳೆಯರಲ್ಲಿ, ಲೈಬ್ರರಿಗಳಲ್ಲಿ, ಹಳೇ ಪುಸ್ತಕದ ಅಂಗಡಿಗಳಲ್ಲಿ ಸಿಗುತ್ತವಾದ್ದರಿಂದ ಖರ್ಚಿನ ರಗಳೆ ಇರುವುದಿಲ್ಲ. ಮಾಡುವ ಅಲ್ಪಸ್ವಲ್ಲ ಖರ್ಚು ಕೂಡ ಸಾರ್ಥಕ.

ಏಳನೆಯದಾಗಿ : ಈ ಸಮಾಜದ, ವಿಶೇಷವಾಗಿ ನಿಮ್ಮ ಸುತ್ತಮುತ್ತಲಿನ ವ್ಯವಸ್ಥೆಯಲ್ಲಿ ಯಾರಿಗೆ ನೀವು ಕೊಂಚ ಮಾತ್ರದ ಸಹಾಯ ಮಾಡಬಹುದು ಅಂತ ಆಲೋಚಿಸಿ ಆ ಬಗ್ಗೆ ಒಂದು ನಿರ್ಣಯಕ್ಕೆ ಬನ್ನಿ. ನಿಮ್ಮೂರಿನ ಅಂಧರ ಶಾಲೆ, ಎಚೈವಿ ಬಾಧಿತರ ಸಮೂಹ, ಕುಷ್ಠರ ಕಾಲನಿ, ಅನಾಥಾಲಯ, ಸರ್ಕಾರಿ ಆಸ್ಪತ್ರೆ -ಹೀಗೆ, ಎಲ್ಲಿ ನಿಮ್ಮ ಅವಶ್ಯಕತೆ ಇದೆ ಅಂತ ಗುರುತಿಸಿ. ಈ ಪೈಕಿ ಯಾವುದಾದರೂ ಒಂದಕ್ಕೆ ವಾರದಲ್ಲಿ ಒಂದೇ ಒಂದು ಗಂಟೆಯಷ್ಟು ಸಮಯವನ್ನ spare ಮಾಡುತ್ತೇನೆಂದು ನಿರ್ಧರಿಸಿ. ಯಾವ ಕಾರಣಕ್ಕೂ ಈ ಕೆಲಸವನ್ನು ಫುಲ್‌ಟೈಂ ಕಸುಬನ್ನಾಗಿ ಮಾಡಿಕೊಳ್ಳುವುದಿಲ್ಲವೆಂದು ತೀರ್ಮಾನಿಸಿ. ಈ ಕೆಲಸದಲ್ಲಿ ನೀವು ಲಾಭಪಡೆಯುವುದಿಲ್ಲ ಅಂತಲೂ, ತೀರ ಸಾಲ ಮಾಡಿ(ನೀವು ಉಪವಾಸವಿದ್ದು) ಅವರಿಗೆ ಸಹಾಯ ಮಾಡುವುದಿಲ್ಲ ಅಂತಲೂ, ಕೇವಲ ಹಣದ ಸಹಾಯ ಮಾಡುವುದಿಲ್ಲ ಅಂತಲೂ ನಿರ್ಣಯಿಸಿ.

ಎಂಟನೆಯದಾಗಿ : ಗೆಳೆಯರ ಪಟ್ಟಿಯನ್ನು review ಮಾಡಿ, ಹಳಬರಲ್ಲಿ ನಿರುಪಯೋಗಿಗಳನ್ನ, ನೆಗೆಟಿವ್‌ ವ್ಯಕ್ತಿತ್ವದವರನ್ನ, ನಿಮ್ಮನ್ನು ಗೌರವಿಸದವರನ್ನ drop ಮಾಡಿ. ಹೊಸ ಗೆಳೆಯರ ಪೈಕಿ ವಿವೇಕ, ಸಂತೋಷ, ನಿಮ್ಮ ವ್ಯಕ್ತಿತ್ವಕ್ಕೆ ಹೊಸತನ ನೀಡುವವರನ್ನ ಆಯ್ಕೆ ಮಾಡಿಕೊಳ್ಳಿ. ತುಂಬ ಜನ ಗೆಳೆಯರನ್ನಿಟ್ಟುಕೊಳ್ಳುವುದಕ್ಕಿಂತ, ಆಯ್ದ ಕೆಲವೇ ಅದ್ಭುತವಾದ ಗೆಳೆಯರು ಸಾಕು ಅಂತ ತೀರ್ಮಾನಿಸಿ.

ಒಂದು ವರ್ಷವನ್ನು ಯಶಸ್ಸಿಯಾಗಿ ಕಳೆಯುವುದಕ್ಕೆ ಇಷ್ಟು ಸಾಕು. ಹೊಸ ವರ್ಷಕ್ಕೆ ಕಾಲಿಡುವಾಗ ನಾವು ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ 2005ಕ್ಕಿಂತ 2006ನ್ನು ನಾವು ಹೆಚ್ಚು ಉಪಯುಕ್ತವಾಗಿ ಕಳೆದೆವಾ? ಹೆಚ್ಚು ಸಂತೋಷವಾಗಿ ಕಳೆದೆವಾ? ಕಳೆದ ವರ್ಷಕ್ಕಿಂತ ಈ ವರ್ಷ ಭಿನ್ನವಾಗಿರುದ್ದೆವಾ? ಬರಲಿರುವ ವರ್ಷ ಇವತ್ತಿಗಿಂತ ಹೆಚ್ಚು ಸಂತೋಷವಾಗಿರುತ್ತೇವೆ? ಬದುಕಿನ quality improve ಆಗುತ್ತಿದೆಯಾ? -ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕೇ ಹೊರತು, ‘ನನಗೆ 2006 lucky year ಆಗಿರಲಿಲ್ಲ’ ಅಂತ ಹಲುಬುತ್ತಾ ಲಕ್ಕು ತರಲಿರುವ ಹೊಸ ವರ್ಷದೆಡೆಗೆ ನೋಡುತ್ತ ನಿಲ್ಲುವುದು ದಡ್ಡರ ಮತ್ತು ನಿಸ್ಸಾಹಾಯಕರ ಲಕ್ಷಣ.

‘ಹೊಸ ವರ್ಷ ನಿಮಗೆ ಒಳ್ಳೆಯನ್ನು ಮಾಡಲಿ’ ಅಂತ ಮಾತಾಡುವುದೇನಿದ್ದರೂ ಸಹೃದಯರ ಹಾರೈಕೆ. ಅದು wish thinking. ‘ಒಳ್ಳೆಯದಾಗಲಿದೆ’ ಅಂದುಕೊಳ್ಳುವುದು ಆಶಾವಾದದ ಲಕ್ಷಣ.

ಒಳ್ಳೆಯನ್ನು ಮಾಡಿಕೊಳ್ಳುತ್ತೇನೆ ಅಂತ ತೀರ್ಮಾನಿಸುವುದು ಬುದ್ಧಿವಂತರ ಲಕ್ಷಣ. ಮತ್ತು ಅಂತ ನಿರ್ಣಯವನ್ನು ನಮ್ಮ ಬಗ್ಗೆ ನಾವು ಮಾತ್ರ ಮಾಡಿಕೊಳ್ಳಲು ಸಾಧ್ಯ.

ನಿರ್ಣಯಗಳು ಅಚಲವಾಗಿರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X