• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಖಾಸಗಿ ವಲಯದಲ್ಲೂ ಮೀಸಲಾತಿ ಬೇಕು ಅಂತ ಕಾನೂನು ತಂದರೆ ಏನಂತೀರಿ?

By Staff
|

ಖಾಸಗಿ ವಲಯದಲ್ಲೂ ಮೀಸಲಾತಿ ಬೇಕು ಅಂತ ಕಾನೂನು ತಂದರೆ ಏನಂತೀರಿ?

ಟ್ಯಾಕ್ಸು ಕೇಳಿ. ಕೊಡುತ್ತೇವೆ. ನೀವದನ್ನು ಹೇಗೆ ಬೇಕಾದರೂ ತಿಂದು ಹಾಕಿ. ಆದರೂ ಕೊಡುತ್ತೇವೆ. ಇನ್ನೂ ಕೇಳಿ; ಇನ್ನೂ ಕೊಡುತ್ತೇವೆ. ಆದರೆ ನಿಮ್ಮ ಓಟಿಗಾಗಿ ನಮ್ಮ ಫ್ಯಾಕ್ಟರಿಯಲ್ಲಿ ಮಂದಿಗೆ ಕೆಲಸ ಕೊಡಿ ಅನ್ನಬೇಡಿ. ಸರ್ಕಾರದಂತೆ ಫ್ಯಾಕ್ಟರಿಯೂ ಮುಳುಗಿ ಹೋದೀತು! ಅನ್ನೋದು ಒಂದು ವಾದ.

ಖಾಸಗಿ ವಲಯದಲ್ಲೂ ಮೀಸಲಾತಿ ತರಬಹುದು. ಆ ತೆರನಾದ ಉದ್ಯೋಗಗಳೂ ಅಲ್ಲಿವೆ. ಅವುಗಳನ್ನೂ ಕೊಡುವುದಿಲ್ಲವೆಂಬ ಧಣಿಗಳ ಅಹಂಕಾರಕ್ಕೆ ಬುದ್ಧಿ ಹೇಳಲೇಬೇಕು ಅನ್ನೋದು ಇನ್ನೊಂದು ವಾದ.

-ಅದಿರಲಿ, ನೀವೇನಂತೀರಾ?

Ravi Belagere on Thatskannada.com ರವಿ ಬೆಳಗೆರೆ
ನಿಮ್ಮದೊಂದು ಆಫೀಸಿದೆ. ನೀವೇ ಬಂಡವಾಳ ಹಾಕಿ, ನೀವೇ ಇತರರೊಂದಿಗೆ ದುಡಿಯುತ್ತ, ನಿಮ್ಮ ಬದುಕಿಗೆ- ಅಭಿವೃದ್ಧಿಗೆ ಅಂತ ಮಾಡಿಕೊಂಡ ಆಫೀಸು ಅದು. ನಿಮ್ಮದೇ ಜಾತಿಯವರು ಕೆಲಸಕ್ಕಿರಬೇಕು ಅಂತ ನೀವೇನೂ ಅಂದುಕೊಂಡಿಲ್ಲ. ಅವರ ಯೋಗ್ಯತೆಗೆ, ಇಚ್ಛೆಗೆ ಕೆಲಸಗಾರರನ್ನು ತೆಗೆದುಕೊಂಡು ಕೆಲಸ ಮಾಡಿಸುತ್ತಿರುತ್ತೀರಿ. ಆದರೆ ಒಂದು ದಿನ ಇದಕ್ಕಿದ್ದಂತೆ ಸರ್ಕಾರ ಒಂದು ಕಾನೂನು ಮಾಡುತ್ತದೆ : ‘ನೀವು ಇಂತಿಂಥ ಜಾತಿಯವರನ್ನು, ಇಂತಿಷ್ಟು ಜನರ ಲೆಕ್ಕದಲ್ಲಿ ನಿಮ್ಮ ಆಫೀಸಿನಲ್ಲಿ ಕೆಲಸಕ್ಕೆ ತೆಗೆದುಕೊಳ್ಳಬೇಕು.’

ಆಗ ನೀವು ಏನು ಮಾಡುತ್ತೀರಿ?

ಈಗ ಪ್ರಧಾನಿ ಮನಮೋಹನ್‌ ಸಿಂಗ್‌ ಕೇಳುತ್ತಿರುವುದು ಅದನ್ನೇ. ನೀವಾಗೇ ಪ್ರೆೃವೇಟ್‌ ಸೆಕ್ಟರ್‌ನಲ್ಲಿ ಮೀಸಲಾತಿ ಅನ್ವಯಕ್ಕೆ ತಂದು ದಲಿತರಿಗೆ, ಇತರೆ ಹಿಂದುಳಿದವರಿಗೆ ಕೆಲಸ ಕೊಡುತ್ತೀರೋ? ಕೊಡಲೇಬೇಕು ಅಂತ ಒಂದು ಕಾನೂನು ತರೋಣವೋ? ಈಗಾಗಲೇ ಅಂಥದೊಂದು ವಿಧೇಯಕ ತಯಾರಾಗಿದ್ದು ಖಾಸಗಿ ವಲಯದಲ್ಲೂ ಮೀಸಲಾತಿ ಬೇಕು ಎಂಬ ಕಾನೂನು ತರಲು ಎಲ್ಲ ತರಹದ ಸಿದ್ಧತೆಗಳಾಗಿವೆ.

Manmohan Singhಇದಕ್ಕೆ ನೀವೇನಂತೀರಿ?ಎಂಬುದು ಪ್ರಶ್ನೆ. ನಾನು ಚಳವಳಿಯಿಂದ ಬಂದ ಮನುಷ್ಯ. ನನ್ನ ನಿಲುವುಗಳೇ ಬೇರೆ. ಒಂದು ಕಾನೂನು ಜಾರಿಗೆ ಬರುತ್ತದೆ ಅಂದರೆ, ಅದನ್ನು ತರುತ್ತಿರುವವರು ಯಾರು ಅಂತ ಮೊದಲು ಆಲೋಚಿಸುತ್ತೇನೆ. ಮನಮೋಹನ್‌ಸಿಂಗ್‌ ಎಂಥ ಮನುಷ್ಯ, ಅದು ಚರ್ಚೆಯಾಚೆಗಿನ ಮಾತು. ಆದರೆ ಕಾಂಗ್ರೆಸ್ಸಿಗೆ ದಲಿತರ, ಇತರೆ ಹಿಂದುಳಿದವರ ಬಗ್ಗೆ ಎಷ್ಟರಮಟ್ಟಿಗೆ ನಿಜವಾದ ಒಲವಿದೆ; ಅದು ಎಲ್ಲರಿಗೂ ಗೊತ್ತಿರುವ ಸಂಗತಿ. ಇವರು ತರುವ ಕಾನೂನಿನ ಹಿಂದೆ ಒಂದು ವರ್ಗದವರ ಮತ ಗೆಲ್ಲುವ ಹುನ್ನಾರದ ಹೊರತಾಗಿ ಬೇರೇನಾದರೂ ಪ್ರಾಮಾಣಿಕ ಉದ್ದೇಶ ನಿಮಗೆ ಕಾಣುತ್ತಿದೆಯಾ?

ಆದರೆ ಯೋಚಿಸಿ. ಹಿಂದೆ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಅನಂತಮೂರ್ತಿಯವರು ಒಂದು ಮಾತು ಹೇಳಿದ್ದರು. ‘ಈ software industryಯವರಿಗೆ ತಮ್ಮ ಕಚೇರಿ, ಮನೆ, ರಸ್ತೆ ಇತ್ಯಾದಿಗಳನ್ನು ಕಟ್ಟಿಕೊಟ್ಟವರು ಶ್ರಮಿಕರು. ಅವರಿಗೆ ಮೀಸಲಾತಿ ನೀಡಲೇಬೇಕು. ಅವರಿಗೆ ತಮ್ಮ ಲಾಭದಲ್ಲಿ ಪಾಲು ಕೊಡಲೇಬೇಕು’ಎಂದು ವಾದಿಸಿದ್ದರು.

ತಕ್ಷಣ ತುಂಟ ಓದುಗನೊಬ್ಬ ಪತ್ರಿಕೆಗೆ ಪತ್ರ ಬರೆದಿದ್ದ. ಅವತ್ತು, ಪ್ರಕಟಿಸುವುದು ಸಮಂಜಸವಲ್ಲವೆಂದು ಬಿಟ್ಟಿದ್ದೆ. ಇವತ್ತೂ ನಿಮಗೆ ಸಮಂಜಸವೆನ್ನಿಸಲಿಕ್ಕಿಲ್ಲ ; ಆದರೂ ಪತ್ರದ ಸಾರಾಂಶ ಹೇಳುತ್ತಿದ್ದೇನೆ: ‘ಜ್ಞಾನಪೀಠ ಪುರಸ್ಕೃತ ಕೃತಿಯನ್ನು ಬರೆಯಲು ಅನಂತಮೂರ್ತಿಯವರು ಕುಳಿತಿದ್ದ ಛೇರನ್ನು ಮಾಡಿದವನು ಬಡಗಿ. ಅದರ ಮುಂದಿನ ಟೇಬಲ್ಲು ಮಾಡಿದವನು ಇನ್ನೊಬ್ಬ ಬಡಗಿ. ಹಾಳೆ ತಯಾರಿಸಿದವನು, ಕಾಗದದ ಮಿಲ್‌ ಕಾರ್ಮಿಕ. ರವಿಯವರೇ, ಜ್ಞಾನಪೀಠ ಬಹುಮಾನದ ಅಮೌಂಟಿನಲ್ಲಿ ಅನಂತಮೂರ್ತಿ ಎಷ್ಟೆಷ್ಟನ್ನು, ಯಾರ್ಯಾರಿಗೆ ಹಂಚಿದರು ಸ್ವಲ್ಪ ಕೇಳಿ ಹೇಳಿ?’

ಈ ನಿಲುವಿಗೆ ನೀವೇನಂತೀರಿ.

ಸರ್ಕಾರಿ ಕೆಲಸ, ಸುಮಾರು 1980ರ ದಶಕಕ್ಕೇ ಮರೀಚಿಕೆಯಾಗಿ ಹೋಯಿತು. ಸಾಕಷ್ಟು ಉತ್ತಮ ಅಂಕಗಳಿದ್ದರೂ ಶಿಫಾರಸು ಇರದದ್ದರಿಂದ ನನಗೇ ಸರ್ಕಾರಿ ಕಾಲೇಜಿನ ನೌಕರಿ ಸಿಗದೆ, ಓಡುವ ರೈಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಬೇಕು ಅನ್ನಿಸಿತ್ತು. ಕಡೆಗೆ ಸರ್ಕಾರಿ ನೌಕರಿಯ ಆಸೆಯನ್ನೇ ಬಿಟ್ಟು ಬಿಟ್ಟೆ. ಗಮನವಿಟ್ಟು ನೋಡಿದರೆ, ಸರ್ಕಾರಿ ನೌಕರಿಗಳಲ್ಲಿ ಹೆಚ್ಚಿನವು ರೊಕ್ಕಸ್ತರ ಪಾಲಾಗುತ್ತವೆ. ಉಳಿದಂಥವು ಆ ಕಾಲಕ್ಕೆ KPSCಯಲ್ಲಿ ಯಾವ ಜಾತಿಯವರಿರುತ್ತಾರೋ, ಅವರ ಪಾಲಾಗುತ್ತವೆ. ಮತ್ತೂ ಉಳಿದಂಥವು ಪರಿಶಿಷ್ಟರಲ್ಲೇ ಪ್ರಬಲರು, ದುಡ್ಡಿನವರೂ ಇದ್ದರೆ ಅವರ ಪಾಲಾಗಿ tail endನಲ್ಲಿ ಒಂದಷ್ಟು ಜನ ನಿಜವಾದ ನೌಕರಿಯ ಅವಶ್ಯಕತೆಯುಳ್ಳ ಜನಕ್ಕೆ ಸಿಗುತ್ತದೆ. ಇದು ಸರ್ಕಾರಿ ಮೀಸಲಾತಿ ಪದ್ಧತಿ. ಇನ್ನು ಒಳಮೀಸಲಾತಿ, ಕೊಟ್ಟ ಮೀಸಲಾತಿಗೆ ಕೋರ್ಟು ಕಚೇರಿ ಇತ್ಯಾದಿ ಇತ್ಯಾದಿ.

ನನ್ನ ಪ್ರಶ್ನೆಯೇನೆಂದರೆ, ಮೀಸಲಾತಿಯಿಂದಾಗಿ- ದುಡ್ಡು ದುಕ್ಕಾಣಿಯಿಂದಾಗಿ ಪ್ರಬಲರೊಂದಿಗೆ ಸಾಧ್ಯವಾಗದ ಪೈಪೋಟಿಯಿಂದಾಗಿ ಈ ಸರ್ಕಾರಿ ನೌಕರಿಯ ಹಂಗೇ ಬೇಡವೆಂದು ಒಂದಷ್ಟು ಜನ ಪ್ರೆೃವೇಟ್‌ ಸೆಕ್ಟರ್‌ನಲ್ಲಿ ಜಾಗ ಮಾಡಿಕೊಂಡಿದ್ದಾರೆ. ಕೆಲವರು ಸಣ್ಣಗೆ ಆರಂಭಗೊಂಡು, ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಸರ್ಕಾರದಿಂದ ಏನನ್ನೂ ಪಡೆಯದೆ ಬೆಳೆದವರಿದ್ದಾರೆ. ಅವರು ಯಾವ ಮರ್ಜಿಗೆ ಬಿದ್ದು, ಕಾಂಗ್ರೆಸ್ಸಿಗರು ಒಂದು ಜಾತಿ-ವರ್ಗವನ್ನು ಓಲೈಸಲು ಜಾರಿಗೆ ತರುವ ಮೀಸಲಾತಿ ಕಾನೂನನ್ನು ಒಪ್ಪಿಕೊಳ್ಳಬೇಕು? ನಿಮ್ಮ ಅಭಿಪ್ರಾಯ ಹೇಳಿ.

ಹಾಗಂತ ಹೊರಟುಬಿಟ್ಟರೆ, ದೈತ್ಯಾಕಾರಕ್ಕೆ ಬೆಳೆದ I.q.ಇಂಡಸ್ಟ್ರಿ, ಎಲ್ಲಿಂದಲೋ ಬಂದು ತಳವೂರಿದ ಆಟೋಮೊಬೈಲ್‌ ಇಂಡಸ್ಟ್ರಿ ಮುಂತಾದವುಗಳು ಜಾಗತೀಕರಣದ ನೆರಳಿನಲ್ಲಿ ನಿಂತು ಒಂದು ವರ್ಗದ ಮಂದಿಯನ್ನು ಹೀರಿ, ಹಿಂಡಿ, ಹಿಪ್ಪೆ ಮಾಡಿ ಬಿಸಾಕುತ್ತಿವೆಯಲ್ಲ ?ಭಯಂಕರವಾದ ಸಾಮಾಜಿಕ ಅಸಮಾನತೆ ಉಂಟುಮಾಡುತ್ತಿದೆಯಲ್ಲ ? ಕೆಲವರು ತಿಂಗಳಿಗೆ ಒಂದೂವರೆ ಲಕ್ಷ ರುಪಾಯಿ ಸಂಬಳ ತೆಗೆದುಕೊಂಡು, ಮತ್ತೆ ಕೆಲವರು ಒಂದೂವರೆ ಸಾವಿರಕ್ಕೆ ದುಡಿಯಬೇಕಾದಂತಹ ಅಸಮಾನತೆ ನಿರ್ಮಾಣವಾಗುತ್ತಿದೆಯಲ್ಲ ? ಅಂಥ ಕಡೆ ಮೀಸಲಾತಿ ಕೇಳುವುದು ತಪ್ಪೆ ?ನಿಮ್ಮ ಅಭಿಪ್ರಾಯ ಹೇಳಿ.

ನಾನು ನಡೆದು ಬಂದ ಚಳವಳಿಯ ದಾರಿ ನನಗೆ ಹೇಳಿಕೊಟ್ಟದ್ದೆನೆಂದರೆ, ದಲಿತ-ಹಿಂದುಳಿದವ ಎಂಬುದು ಒಂದು ಜಾತಿ ಸಮೂಹವಲ್ಲ. ಎಲ್ಲ ಜಾತಿಯ ನಿರ್ಗತಿಕರೂ ದಲಿತರೇ, ಹಿಂದುಳಿದವರೇ. (ಈ ಬಗ್ಗೆ ನಿಮಗೆ ಭಿನ್ನಾಭಿಪ್ರಾಯವಿರಬಹುದು) ಒಂದು ಸಮಾಜ ತೀವ್ರತರನಾದ ಅಸಮಾನತೆಯಿಂದ ಯಾವತ್ತಿಗೂ ನರಳಬಾರದು. ವಿನಿವಿಂಕ್‌ ಶಾಸ್ತ್ರಿ ಮತ್ತು ಹೆಣ ಹೊರುವ ಕೂಳಿಲ್ಲದ ಬ್ರಾಹ್ಮಣ-ನನಗೆ ಬೇರೆ ಬೇರೆ ವರ್ಗದವರಾಗಿ ಕಾಣುತ್ತಾರೆ. ಶ್ರೀಮಂತ ತಂದೆಯ ದಲಿತ ಅಧಿಕಾರಿ ಮಗ ಮತ್ತು ರಸ್ತೆ ಪಕ್ಕದ ಮೋಚಿಯ ಮಗ ನನಗೆ ಬೇರೆ ಬೇರೆ ವರ್ಗದವರಾಗಿ ಕಾಣುತ್ತಾರೆ. ಮೀಸಲಾತಿ ಬೇಕಾಗಿರುವುದು ಆ ಎರಡನೇ ವರ್ಗಕ್ಕೆ. (ಇದೆಲ್ಲ ಜಾಣ ಕಮ್ಯುನಿಸ್ಟ್‌ ಬ್ರಾಹ್ಮಣರ ವಾದ ಕಣ್ರೀ-ಅನ್ನುವವರೂ ಇದ್ದಾರೆ. ಅವರ ಭಿನ್ನಾಭಿಪ್ರಾಯಕ್ಕೆ ಜಯವಾಗಲಿ.)

ಹೀಗೆ ಮೀಸಲಾತಿ ಪಡೆಯುವ ಎರಡನೇ ವರ್ಗವಿದೆಯಲ್ಲ ? ಇದಕ್ಕೆ ಪುಗಸಟ್ಟೆಯಾಗಿ ಮೀಸಲಾತಿ ಕೊಡಬೇಡಿ ಅನ್ನುವುದು ನನ್ನ ವಾದದ ಮುಂದುವರಿಕೆ. ಅವರಿಗೆ ಮೊದಲು ಓದಲು ಕೊಡಿ. ಐದನೇ ಕ್ಲಾಸಿನ ಹೊತ್ತಿಗೆ ಒಂದು ಮಗುವಿನ ಐ.ಕಿ ಮತ್ತು ಅದರ ವಿಸ್ತರಣಾ ಸಾಧ್ಯತೆಗಳು ಏನೆಂಬುದು ಗೊತ್ತಾಗುತ್ತದೆ. ಐದನೇ ಕ್ಲಾಸಿನ ತನಕ ಅಷ್ಟೂ ವಿದ್ಯಾಭ್ಯಾಸವನ್ನು ಮಕ್ಕಳಿಗೆ ಸರ್ಕಾರವೇ ಕೊಡಲಿ. ಉಚಿತವಾಗಿ ಕೊಡಲಿ. ವಿದ್ಯಾಭ್ಯಾಸವನ್ನು ಕಡ್ಡಾಯ ಮಾಡಲಿ. ಅಲ್ಲಿಂದ ಮುಂದಕ್ಕೆ ಆರ್ಥಿಕ ಯೋಗ್ಯತೆಗಳ ಅನುಸಾರವಾಗಿ ಮಕ್ಕಳನ್ನು ವಿಂಗಡಿಸಿ, ಒಂದೇ ಶಾಲೆಯಲ್ಲಿ ಫೀ ಕಟ್ಟಬಹುದಾದ ಪೋಷಕರ ಮಕ್ಕಳು ಮತ್ತು ಫೀ ಕಟ್ಟಲಾಗದ ಪೋಷಕರ ಮಕ್ಕಳು-ಇಬ್ಬರನ್ನೂ ಓದಿಸಲಿ.

ಫೀ ಕಟ್ಟಲಾಗದವರ ಮಕ್ಕಳನ್ನು ಓದಿಸುವ ಜವಾಬ್ದಾರಿಯನ್ನು ಶಾಲೆಗಳ ಮ್ಯಾನೇಜ್‌ಮೆಂಟುಗಳಿಗೆ ವಹಿಸಿಕೊಡಲಿ. ಪಿಯುಸಿಯ ತನಕ ಇದೇ ಮುಕ್ತ ಅವಕಾಶ ನೀಡಿ, ಮಗುವಿನ ಯೋಗ್ಯತೆ ಮತ್ತು ಆಸೆ ಎರಡನ್ನೂ ಗಮನಿಸಿ ಅದಕ್ಕೆ ಕೊಡಬಹುದಾದ ಶಿಕ್ಷಣವನ್ನು ಡೊನೇಷನ್‌ಗಳ ಹಂಗೇ ಇಲ್ಲದೆ ಕೊಡಮಾಡಲಿ. ಈಗ, ಎಲ್ಲ ಜಾತಿಯ-ಎಲ್ಲ ಬಡ ಮಕ್ಕಳಿಗೂ ಸಮಾನಾಂತರ ಅವಕಾಶ ಕಲ್ಪಿಸಿಕೊಟ್ಟಂತಾಯಿತು. ಅವರೆಲ್ಲರ ಶಿಕ್ಷಣದ (ಇಂಜಿನೀರಿಂಗ್‌, ಮೆಡಿಸಿನ್‌ ಇತ್ಯಾದಿ) ಖರ್ಚನ್ನು ಭಾರತದ ಅಷ್ಟೂ ದೈತ್ಯ ಇಂಡಸ್ಟ್ರಿಗಳು ಹಂಚಿಕೊಳ್ಳಲಿ.

ಜರ್ನಲಿಸಂ ಕಾಲೇಜುಗಳ ಖರ್ಚನ್ನು ಕೋಟಿ ಗಟ್ಟಲೆ ಲಾಭ ದುಡಿಯುವ ಪತ್ರಿಕಾ-ಟೀವಿ ಸಂಸ್ಥೆಗಳು ವಹಿಸಿಕೊಳ್ಳಲಿ. ಡಾಕ್ಟರಿಕೆ, ನರ್ಸು, ಲ್ಯಾಬ್‌ ಟೆಕ್ನೀಷಿಯನ್‌ಗಳನ್ನು ಮಲ್ಯ, ಅಪೋಲೋದಂಥ ಆಸ್ಪತ್ರೆಗಳು ಓದಿಸಲಿ. ಅಲ್ಲಿಗೆ ಮಕ್ಕಳು ಮುಕ್ತ ಅವಕಾಶ, ಸಮಾನ ಅವಕಾಶ ಮತ್ತು ಸಂಪೂರ್ಣ ಸಹಾಯ ದೊರಕಿಸಿಕೊಂಡು ಓದಿದವರಾಗುತ್ತಾರೆ.

ಆಗ ಶುರು ಮಾಡಲಿ, ಆಯ್ಕೆ ಮತ್ತು ಮೀಸಲಾತಿ. ಆಗ ಬುದ್ಧಿವಂತರಿಗೆ, ಯೋಗ್ಯರಿಗೆ, ಶ್ರದ್ಧಾವಂತರಿಗೆ, ಕಷ್ಟಪಟ್ಟವರಿಗೆ ಕ್ರಿಯಾಶೀಲರಿಗೆ, ಆಸಕ್ತರಿಗೆ ನೌಕರಿ ದೊರೆಯುತ್ತದೆ. ಇವ್ಯಾವೂ ಇಲ್ಲದೆ ಅವರಿವರ ಖರ್ಚಿನಲ್ಲಿ ಉಚಿತ ಹಾಸ್ಟೆಲುಗಳಲ್ಲಿ ಓದಿದಂತೆ ಮಾಡಿ, ಪಾಸಾದಂತೆ ಆಗಿ-ಒಂದಷ್ಟು ಜನ ಬಂದಿರುತ್ತಾರಲ್ಲ ಸ್ಪರ್ಧೆಗೆ? ಅವರನ್ನು ಯಾವುದೇ ಜಾತಿಬೇಧವಿಲ್ಲದೆ ಸರ್ಕಾರ ಒಳ-ಹೊರ ಮೀಸಲಾತಿಗಳೆರಡನ್ನೂ ಕೊಟ್ಟು ನೌಕರಿಗೆ ತೆಗೆದುಕೊಳ್ಳಲಿ. ಬೇಡವೆಂದವರು ಯಾರು?ಈ ವಾದಕ್ಕೆ ನಿಮ್ಮ ಅಭಿಪ್ರಾಯವೇನು?

ಕೆಲವರು ಹೀಗೂ ಅನ್ನಬಹುದು. ಶತಮಾನಗಳಿಂದ ತುಳಿತಕ್ಕೊಳಗಾದ ಒಂದು ವರ್ಗದ ಮಗು ಎಷ್ಟೇ ಮುಕ್ತ ಅವಕಾಶ ನೀಡಿದರೂ, ಅದು ಇತರೆ ಮುಂದುವರೆದ ವರ್ಗದ ಮಕ್ಕಳೊಂದಿಗೆ ಸ್ಪರ್ಧಿಸಲಾರದು. ಈ ಮಾತೂ ನಿಜವೇ.

ಆದರೆ ಈಗಾಗಲೇ ಅದೇ ವರ್ಗದ ಸಾವಿರಾರು ಮಂದಿ ಓದಿ, ಸ್ಪರ್ಧಿಸಿ, ವಿಜಯಿಗಳಾಗಿ ಉನ್ನತ ಸ್ಥಾನಮಾನದಲ್ಲಿದ್ದಾರಲ್ಲ? ಅವರಿಗೆ, ಅವರದೇ ವರ್ಗದ ಹತ್ತು ಮಕ್ಕಳನ್ನು ಓದಿಸುವ ಜವಾಬ್ದಾರಿಯನ್ನು ಯಾಕೆ ಕಡ್ಡಾಯಗೊಳಿಸಬಾರದು? ಬುದ್ಧಿವಂತ ಬ್ರಾಹ್ಮಣ ಸಾಫ್ಟವೇರ್‌ ಇಂಜಿನಿಯರು ತನ್ನ ಜಾತಿಯ ಹತ್ತು ಕಡಿಮೆ ಬುದ್ಧಿವಂತರನ್ನು ಹೆಚ್ಚು ಬುದ್ಧಿವಂತರನ್ನಾಗಿ ಮಾಡುವ ಜವಾಬ್ದಾರಿ ಯಾಕೆ ಹೊರಬಾರದು? ಈ ಕೆಲಸವನ್ನು ಒಬ್ಬ ದಲಿತ ಯಾಕೆ ಮಾಡಬಾರದು? ಮಾಡಲೇಬೇಕೆಂದು ಎಲ್ಲ ಜಾತಿಗಳವರಿಗೂ ಯಾಕೆ ಕಡ್ಡಾಯವಾಗಿ ಒಂದು ಕಾನೂನು ತರಬಾರದು? ಅವರವರ ಜಾತಿಗಳವರನ್ನು ಮುಂದಕ್ಕೆ ತರುವುದು social justice ಅಲ್ಲವೆ? ‘ನಮ್ಮ ಜಾತಿಯಲ್ಲಿ ಮುಂದುವರೆದ ಒಬ್ಬೇ ಒಬ್ಬನಿಲ್ಲ ಕಣ್ರೀ’ ಅನ್ನುವವರೂ ಇರಬಹುದು. ಅಂಥವರನ್ನು ಸರ್ಕಾರ ಜವಾಬ್ದಾರಿ ತೆಗೆದುಕೊಂಡು ಮುಂದಕ್ಕೆ ತರಲಿ? ಈ ವಾದಕ್ಕೇನನ್ನುತ್ತೀರಿ.

ಸದ್ಯಕ್ಕೆ ಖಾಸಗಿ ವಲಯದ ಧಣಿಗಳು ಏನನ್ನುತ್ತಿದ್ದಾರೆ ಗೊತ್ತೆ?

ಟ್ಯಾಕ್ಸು ಕೇಳಿ. ಕೊಡುತ್ತೇವೆ. ನೀವದನ್ನು ಹೇಗೆ ಬೇಕಾದರೂ ತಿಂದು ಹಾಕಿ. ಆದರೂ ಕೊಡುತ್ತೇವೆ. ನೀರಿಗೆ, ವಿದ್ಯುತ್ತಿಗೆ, ರಸ್ತೆಗೆ, ಗಾಳಿಗೆ- ಎಲ್ಲದಕ್ಕೂ ದುಡ್ಡು ಕೊಡುತ್ತೇವೆ. ಇನ್ನೂ ಕೇಳಿ; ಇನ್ನೂ ಕೊಡುತ್ತೇವೆ. ಆದರೆ ನಿಮ್ಮ ಓಟಿಗಾಗಿ ನಮ್ಮ ಫ್ಯಾಕ್ಟರಿಯಲ್ಲಿ ಮಂದಿಗೆ ಕೆಲಸ ಕೊಡಿ ಅನ್ನಬೇಡಿ. ಸರ್ಕಾರದಂತೆ ಫ್ಯಾಕ್ಟರಿಯೂ ಮುಳುಗಿ ಹೋದೀತು! ಈ ಮಾತಿಗೆ ನೀವೇನಂತೀರಿ?

ಆದರೆ, ಖಾಸಗಿ ವಲಯದಲ್ಲೂ ಮೀಸಲಾತಿ ತರಬಹುದು. ಆ ತೆರನಾದ ಉದ್ಯೋಗಗಳೂ ಅಲ್ಲಿವೆ. ಅವುಗಳನ್ನೂ ಕೊಡುವುದಿಲ್ಲವೆಂಬ ಧಣಿಗಳ ಅಹಂಕಾರಕ್ಕೆ ಬುದ್ಧಿ ಹೇಳಲೇಬೇಕು ಅಂತ ಅನ್ನುವವರೂ ಇದ್ದಾರೆ.

ಇವರಿಗೇನನ್ನುತ್ತೀರಿ?

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more