• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ್ಯಾಯ ಸಿಗಬೇಕೆಂದರೆ ನ್ಯಾಯಾಲಯದ ಹೊರಗೂ ವಾದಿಸುವವರು ಬೇಕೇ?

By Staff
|


Pridarshini Mattooನೋಡಿ, ದಿಲ್ಲಿ ಯೂನಿವರ್ಸಿಟಿಯಲ್ಲಿ ಕಾನೂನು ಪದವಿಗಾಗಿ ಓದುತ್ತಿದ್ದ ಪ್ರಿಯದರ್ಶಿನಿ ಮಟ್ಟೂ ಎಂಬ ಸ್ಫುರದ್ರೂಪಿ ಕಾಶ್ಮೀರಿ ಹುಡುಗಿಗೆ, ಅವಳ ಸೀನಿಯರ್‌ ಸಂತೋಷ್‌ಸಿಂಗ್‌ ಎಂಬುವವನೊಬ್ಬ ಗಂಟು ಬೀಳುತ್ತಾನೆ. ಕಾರಿನಲ್ಲಿ ಹೋಗುವವಳನ್ನು ಹಿಂಬಾಲಿಸುತ್ತಾನೆ. ವಸಂತ್‌ ಕುಂಜ್‌ ಏರಿಯಾದ ಅವಳ ಮನೆಗೆ ನುಗ್ಗುತ್ತಾನೆ. ತನ್ನ ಪ್ರೇಮಕ್ಕೆ ಸಮ್ಮತಿ ನೀಡುವಂತೆ ಹಿಂಸಿಸಿ stalk ಮಾಡುತ್ತಾನೆ. ತಕ್ಷಣ ಪ್ರಿಯದರ್ಶಿನಿ ವಸಂತ್‌ ಕುಂಜ್‌ ಠಾಣೆಗೆ ದೂರು ನೀಡುತ್ತಾಳೆ. ಸಂಜೆ ಐದೂ ಹದಿನೈದಕ್ಕೆ ದೂರು ಕೊಟ್ಟರೆ, ರಾತ್ರಿ ಹನ್ನೆರಡೂವರೆತನಕ ದೂರು ದಾಖಲಾಗುವುದಿಲ್ಲ. ಏಕೆಂದರೆ ಅವಳನ್ನು ಕಾಡಿದ ಸಂತೋಷ್‌ಸಿಂಗ್‌, ಹಿರಿಯ ಐಪಿಎಸ್‌ ಅಧಿಕಾರಿಯ ಮಗ.(ಅವನ ತಂದೆ ಈಗ ಪಾಂಡಿಚೇರಿಯಲ್ಲಿ ಡಿ.ಜಿ.ಪಿ ಆಗಿದ್ದಾರೆ.) ಅವನ ಪರವಾಗಿ ಇಬ್ಬರು ಅನುಭವಿ ಎ.ಸಿ.ಪಿಗಳು ವಸಂತ್‌ ಕುಂಜ್‌ ಠಾಣೆಗೆ ಬಂದು ದೂರು ವಾಪಸು ಪಡೆಯುವಂತೆ ಪ್ರಿಯದರ್ಶಿನಿಗೆ ಮಧ್ಯರಾತ್ರಿಯತನಕ ಅಡ್ವೈಸ್‌ ಮಾಡುತ್ತಾರೆ. ಕಡೆಗೆ ಆಕೆ ಒಪ್ಪದಿದ್ದಾಗ ‘ಇನ್ನು ಮೇಲೆ ಅವಳ ತಂಟೆಗೆ ಹೋಗುವುದಿಲ್ಲ’ ಅಂತ ಮುಚ್ಚಳಿಕೆ ಬರೆಸಿಕೊಟ್ಟು, ಸಂತೋಷ್‌ಸಿಂಗ್‌ನನ್ನು ಅವನ ಮನೆಗೆ ಬಿಟ್ಟು ಬರುತ್ತಾರೆ.

ಇದಾದ ಮೇಲೆ ಪ್ರಿಯದರ್ಶಿನಿ ತನ್ನ ರಕ್ಷಣೆಗೆಂದು ಒಬ್ಬ ಪೇದೆಯನ್ನು ಸರ್ಕಾರದಿಂದ ಕೇಳಿ ಪಡೆಯುತ್ತಾಳೆ. ಆತ ಜೊತೆಗಿರುವಾಗಲೇ ಯೂನಿವರ್ಸಿಟಿಯ Law Centre ನಲ್ಲಿ ಸಂತೋಷ್‌ಸಿಂಗ್‌ ಅವಳ ಮೇಲೆ ಕೈಹಾಕುತ್ತಾನೆ. ಸಾರ್ವಜನಿಕವಾಗಿ ಅಸಹ್ಯವಾಗಿ ವರ್ತಿಸುತ್ತಾನೆ. ಪೊಲೀಸರು ಅವನ ಮೇಲೆ ಕೇವಲ ‘ಹುಡುಗಿಯನ್ನು ಛೇಡಿಸಿದ’ ಅಂತ ಕೇಸು ಹಾಕಿ, ಬಂಧಿಸಿ, ಐದು ನಿಮಿಷಗಳ ನಂತರ ಬಿಟ್ಟು ಕಳಿಸುತ್ತಾರೆ. ಮುಂದೆ ಕೆಲವೇ ತಿಂಗಳಲ್ಲಿ ಪ್ರಿಯದರ್ಶಿನಿ ಮಟ್ಟೂ ಮನೆಯಲ್ಲಿ ಒಬ್ಬಳೇ ಇದ್ದಾಗ ಅಲ್ಲಿಗೆ ಹೋಗುವ ಸಂತೋಷ್‌ಸಿಂಗ್‌ ಕ್ಷಮೆ ಕೇಳುವ ನೆಪದಲ್ಲಿ ಒಳಕ್ಕೆ ನುಗ್ಗುತ್ತಾನೆ. ಅವಳ ಮೇಲೆ ಅತ್ಯಾಚಾರವೆಸಗುತ್ತಾನೆ. ಹತ್ತೊಂಬತ್ತು ಸಲ ಇರಿದು ಪ್ರಿಯದರ್ಶಿನಿಯನ್ನು ಕೊಂದು ಬಿಡುತ್ತಾನೆ. ಈ ಕದನದಲ್ಲಿ ಅವಳ ಕೈ ಮೂಳೆ ಮುರಿಯುತ್ತದೆ. ಹೆಲ್ಮೆಟ್‌ನ ಗಾಜು ಮುರಿಯುತ್ತದೆ. ಅವನು ಅವಳ ಮನೆಗೆ ಬಂದು ಹೋದದ್ದನ್ನು ಒಬ್ಬಾತ ನೋಡಿಯೂ ಇರುತ್ತಾನೆ.

‘ಈ ಹತ್ಯೆ ಮತ್ತು ಅದಕ್ಕೆ ಮುಂಚಿನ ಬಲಾತ್ಕಾರವನ್ನು ಖಂಡಿತವಾಗ್ಯೂ ಸಂತೋಷ್‌ಸಿಂಗ್‌ ಮಾಡಿದ್ದಾನೆಂಬುದು ನ್ಯಾಯಾಲಯಕ್ಕೆ ಮನವರಿಕೆಯಾಗಿದೆ. ಒಂದು ವರ್ಷ ನಿರಂತರವಾಗಿ ಸಂತೋಷ್‌ ಅವಳನ್ನು ಕಾಡಿದ್ದಾನೆ. ದಿಲ್ಲಿಯ ಇಬ್ಬರು ಎ.ಸಿ.ಪಿಗಳು ಆತನನ್ನು ರಕ್ಷಿಸಿದ್ದಾರೆ. ಪ್ರಿಯದರ್ಶಿನಿ ತನ್ನನ್ನು ರಕ್ಷಿಸಿಕೊಳ್ಳುವ ಎಲ್ಲ ನ್ಯಾಯಸಮ್ಮತ ಪ್ರಯತ್ನಗಳನ್ನು ಮಾಡಿದಾಗ್ಯೂ ಮಾನಭಂಗಕ್ಕೆ ಈಡಾಗಿ, ಕೊಲೆಯಾಗಿದ್ದಾಳೆ. ಅದನ್ನು ಮಾಡಿದ್ದು ಸಂತೋಷನೇ ಎಂಬುದು ಕೂಡ ಸಾಬೀತಾಗಿದೆ. ಆದರೂ ಬೆನಿಫಿಟ್‌ ಆಫ್‌ ಡೌಟ್‌ ನೀಡಿ, ಅವನು ಈ ಹತ್ಯೆಯನ್ನು ಮಾಡಿಲ್ಲದೆಯೂ ಇರಬಹುದು ಅಂತ ಭಾವಿಸಿ ಅವನನ್ನು ಈ ಪ್ರಕರಣದಲ್ಲಿ ಖುಲಾಸೆ ಮಾಡುತ್ತಿದ್ದೇನೆ’ ಅಂತ ಷರಾ ಬರೆದುಬಿಟ್ಟರು ನ್ಯಾಯಾಧೀಶ ತೆರೇಜಾ.

‘ದಿಲ್ಲಿಯ ಪೊಲೀಸರು ಸಂತೋಷ್‌ಸಿಂಗ್‌ನನ್ನು ವಿಪರೀತ ವಿ.ಐ.ಪಿಯಂತೆ ನೋಡಿಕೊಂಡಿದ್ದಾರೆ. ಸರಿಯಾದ ಸಾಕ್ಷ್ಯ ಸಂಗ್ರಹಿಸಿಲ್ಲ. ಸಿಬಿಐನವರಂತೂ ಅವಶ್ಯಕ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ತರಲೇ ಇಲ್ಲ. ಹೈದರಾಬಾದ್‌ನ ಎಫ್‌.ಎಸ್‌.ಎಲ್‌ನಲ್ಲೂ ಅವಘಡಗಳಾಗಿವೆ... ’ ಅಂತ ಪ್ರತಿಯಾಬ್ಬರ ಮೇಲೂ ರೇಗಿದ ನ್ಯಾಯಾಧೀಶರು ಉಳಿದವರನ್ನೆಲ್ಲ ತಪ್ಪಿತಸ್ಥರ ಜಾಗದಲ್ಲಿ ನಿಲ್ಲಿಸಿ, ಅಸಲಿ ಹಂತಕನಿಗೆ ಬೆನಿಫಿಟ್‌ ಆಫ್‌ ಡೌಟ್‌ ಕೊಟ್ಟು ಬಿಡುಗಡೆ ಮಾಡಿ ಬಿಟ್ಟಿದ್ದರು.

ಆಗ ಎಚ್ಚೆತ್ತದ್ದೇ ಮೀಡಿಯಾ. ಪ್ರಿಯದರ್ಶಿನಿ ಮಟ್ಟೂಗೆ ನ್ಯಾಯ ಸಿಗಲಿ ಅಂತ ಪತ್ರಿಕೆಗಳು, ಟೀವಿ ಚಾನಲ್‌ಗಳು ಗದ್ದಲವೆಬ್ಬಿಸಿದ್ದೇ ತಡ- ವ್ಯಾಪಕವಾದುದೊಂದು ಚಳವಳಿಯೇ ನಡೆಯಿತು. ಇಂಟರ್‌ನೆಟ್‌ನಲ್ಲಿ blog ಗಳು ಹುಟ್ಟಿಕೊಂಡವು. ಪ್ರಿಯಾ ಕೊಲೆಯಾಗಿ ಹತ್ತು ವರ್ಷಗಳಾದರೂ ಈ ಹೋರಾಟದ ಕಾವು ಆರಲಿಲ್ಲ. ಸಿ.ಬಿ.ಐ ಕೂಡ ಇದನ್ನೊಂದು ಘನತೆಯ ಪ್ರಶ್ನೆಯನ್ನಾಗಿ ಸ್ವೀಕರಿಸಿತು. ಉಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿತು. ಹತ್ತು ವರ್ಷಗಳ ನಂತರ ಉಚ್ಚ ನ್ಯಾಯಾಲಯವು ಸಂತೋಷ್‌ಸಿಂಗ್‌ನನ್ನು ಈ ಪ್ರಕರಣದಲ್ಲಿ ಆರೋಪಿ ಅಂತ ಘೋಷಿಸಿ ತೀರ್ಪು ನೀಡಿದೆ. ಈ ಹೊತ್ತಿಗಾಗಲೇ ಸಂತೋಷ್‌ ವಕೀಲನಾಗಿ, ಮದುವೆಯಾಗಿ, ಅವರಪ್ಪ ಡಿ.ಜಿ.ಪಿಯಾಗಿ ಇಷ್ಟೆಲ್ಲ ಆಗಿದೆ.

ನನ್ನ ಪ್ರಶ್ನೆಯೆಂದರೆ, ಒಂದು ಅಪ್ಪಟ ಮರ್ಡರ್‌ ಕೇಸಿನಲ್ಲಿ ಆರೋಪಿಗೆ ಶಿಕ್ಷೆಯಾಗಲಿಕ್ಕೆ ಇಷ್ಟು ವರ್ಷ ಬೇಕಾ? ಇಷ್ಟು ಚಳವಳಿಗಳಾಗಬೇಕಾ? ಪ್ರಿಯದರ್ಶಿನಿ ಮಟ್ಟೂ ಒಬ್ಬ ಸ್ಫುರದ್ರೂಪಿ ವಿದ್ಯಾರ್ಥಿನಿ. ಗೆಳೆಯರು, ಗೆಳತಿಯರು ಇದ್ದ ಪ್ರತಿಷ್ಠಿತ ಮೇಲ್ಮಧ್ಯಮ ವರ್ಗದ ಯುವತಿ. ಜೆಸ್ಸಿಕಾಲಾಲ್‌ ಒಬ್ಬ ಹೆಸರಾಂತ ರೂಪದರ್ಶಿ. ಇಂಥ ಕೆಲವು ಹತ್ಯೆಗಳಲ್ಲಿ ಹಂತಕರು ಶ್ರೀಮಂತರು ಮತ್ತು ಪ್ರತಿಷ್ಠಿತ ರಾಜಕಾರಣಿಗಳ ಮಕ್ಕಳು ಎಂಬ ಕಾರಣಕ್ಕೆ ದೊಡ್ಡ ಮಟ್ಟದ ಪ್ರತಿಭಟನೆಗಳು, ಚಳವಳಿಗಳು, ಬ್ಲಾಗ್‌ಗಳು ಹುಟ್ಟಿಕೊಂಡು ನ್ಯಾಯಾಲಯಗಳ ಕಣ್ಸೆಳೆಯುತ್ತವೆ.

ಆದರೆ ಬೆಂಗಳೂರಿನ ಕಾನೂನು ವಿದ್ಯಾರ್ಥಿನಿ ಶುಭಾ, ತನ್ನ ಪ್ರಿಯಕರನ ಕೈಯಿಂದ ತಾನು ಮದುವೆಯಾಗಬೇಕಿದ್ದ ಸಾಫ್ಟ್‌ವೇರ್‌ ಇಂಜಿನೀಯರ್‌ನ ಕೊಲೆ ಮಾಡಿಸಿದಳಲ್ಲ? ಆ ಕೇಸು ಯಾವ ಸ್ಥಿತಿಯಲ್ಲಿದೆ? ಯಾವ ಹಂತದಲ್ಲಿದೆ? ದೇವರಾಜು ಅರಸು ಮಗಳು ಚಿತ್ರಲೇಖಾ ಎಂಬಾಕೆಯನ್ನು ಕೊಲ್ಲಿಸಿದಳಲ್ಲ? ಆ ಕೇಸಿನ ಗತಿ ಏನಾಗಿದೆ? ಅವುಗಳ ಬಗ್ಗೆ blogಗಳಿಲ್ಲ? ಯಾಕೆ ನೊಂದವರ ಪರವಾಗಿ ಯಾರೂ ಮಾತನಾಡುತ್ತಿಲ್ಲ? ಆ ಕೇಸುಗಳ ವಿಚಾರಣೆಯಲ್ಲಿ ಯಾಕೆ ತಡವಾಗುತ್ತಿದೆ. ಪ್ರತಿ ಹತ್ಯೆಯೂ ಮೀಡಿಯಾದಲ್ಲಿ ಸೆನ್ಸೇಷನಲೈಸ್‌ ಆಗಬೇಕೇ? ಈ ಪ್ರಶ್ನೆಗಳಿಗೆ ಆಸಕ್ತರು ಉತ್ತರ ಹುಡುಕಬೇಕಿದೆ. ಪತ್ರಿಕೆಗಳಲ್ಲಿ, ಅಂತರ್‌ಜಾಲದಲ್ಲಿ, ಟೀವಿಗಳಲ್ಲಿ ಚರ್ಚೆಯಾಗಬೇಕಿದೆ.

ನ್ಯಾಯ ಬೇಗ ಸಿಗಬೇಕು ಮತ್ತು ಸಿಗಲೇಬೇಕು ಅಂದರೆ, ನ್ಯಾಯಾಲಯದ ಹೊರಗೂ ಪ್ರಕರಣದ ಪರವಾಗಿ ವಾದಿಸುವವರು ಬೇಕಾಗಿದ್ದಾರೆ ಎಂಬಂಥ ಪರಿಸ್ಥಿತಿ ಉದ್ಭವವಾಗಿದೆ. ಅಲ್ಲ ಅಂತೀರಾ?

(ಸ್ನೇಹಸೇತು : ಹಾಯ್‌ ಬೆಂಗಳೂರು)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more