• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ್ಯಾಯ ಸಿಗಬೇಕೆಂದರೆ ನ್ಯಾಯಾಲಯದ ಹೊರಗೂ ವಾದಿಸುವವರು ಬೇಕೇ?

By Staff
|

ಯಾಕೆ ನೊಂದವರ ಪರವಾಗಿ ಯಾರೂ ಮಾತನಾಡುತ್ತಿಲ್ಲ? ಕೇಸುಗಳ ವಿಚಾರಣೆಯಲ್ಲಿ ಯಾಕೆ ತಡವಾಗುತ್ತದೆ. ಪ್ರತಿ ಹತ್ಯೆಯೂ ಮೀಡಿಯಾದಲ್ಲಿ ಸೆನ್ಸೇಷನಲೈಸ್‌ ಆಗಬೇಕೇ? ಈ ಪ್ರಶ್ನೆಗಳಿಗೆ ಆಸಕ್ತರು ಉತ್ತರ ಹುಡುಕಬೇಕಿದೆ. ಪತ್ರಿಕೆಗಳಲ್ಲಿ, ಅಂತರ್‌ಜಾಲದಲ್ಲಿ, ಟೀವಿಗಳಲ್ಲಿ ಚರ್ಚೆಯಾಗಬೇಕಿದೆ.

  • ರವಿ ಬೆಳಗೆರೆ
ನಾನು ನ್ಯಾಯಾಧೀಶರನ್ನೇ ದಿಟ್ಟಿಸಿ ನೋಡುತ್ತಿದ್ದೆ. ಕಣ್ಣೆದುರಿಗೆ ನಡೆಯುತ್ತಿದ್ದ ವಿದ್ಯಮಾನಗಳನ್ನು ನೋಡಿ ಅವರಿಗೆ ಸಿಟ್ಟು ಬರುತ್ತಿತ್ತು. ಮುಖದ ಕಳವಳಿಕೆಗಳು ಬದಲಾಗುತ್ತಿದ್ದವು. ಸ್ವಭಾವತಃ ಆ ನ್ಯಾಯಾಧೀಶರು ತುಂಬ jovial ಆದ, ಪ್ರಾಂಜಲ ಮನಸ್ಸಿನ ಕನ್ನಡಪ್ರಿಯ ನ್ಯಾಯಾಧೀಶರು. ತಮಾಷೆಯನ್ನ, ಗೇಲಿಯನ್ನ ಕೆಲವೊಮ್ಮೆ satireನ ಬಳಸದೆ ಅವರು ಮಾತಾಡುತ್ತಿರಲಿಲ್ಲ. ಕೃಷ್ಣ ಎಂಬ ಹೆಸರಿನ ಆರೋಪಿಯಾಬ್ಬ ಅವರೆದುರಿಗೆ ಬಂದು ನಿಂತಾಗ ‘ಎಲ್ಲಯ್ಯಾ ನಿನ್ನ ಕೊಳಲೂ?’ ಅಂತ ತಮಾಷೆ ಮಾಡಿದ್ದರು. ಹಾಗೆಯೇ ನೊಂದವರು ಬಂದು ಎದುರಿಗೆ ನಿಂತಾಗ ಕಣ್ಣುಗಳಲ್ಲಿ ದಯೆ ಮಿನುಗುತ್ತಿತ್ತು.

ಅವತ್ತು ಮಾತ್ರ ಅವರು ವ್ಯಗ್ರರಾಗಿದ್ದರು. ಎದುರಿಗೆ ಕಟಕಟೆಯಲ್ಲಿ ಒಬ್ಬ ಆರೋಪಿ ನಿಂತಿದ್ದ. ಹೆಂಡತಿಯನ್ನು ಚಿತ್ರಹಿಂಸೆಗೆ ಗುರಿಮಾಡಿ, ಆ ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದ. ಘಟನೆ ನಡೆದು ಇನ್ನೂ ಒಂದು ವರ್ಷ ಕೂಡ ಆಗಿರಲಿಲ್ಲ. ಕಟಕಟೆಗೆ ಬಂದು ನಿಂತವನ ಕಣ್ಣಲ್ಲಿ ಭಯವಿತ್ತು. ಘಟನೆ ಕುರಿತಂತೆ ಸಾಕ್ಷ್ಯ ನುಡಿಯುವವರು ಒಬ್ಬೊಬ್ಬರಾಗಿ ಬಂದು ನಿಲ್ಲುತ್ತಿದ್ದರು. ಮೊದಲು, ಆತ್ಮಹತ್ಯೆ ಮಾಡಿಕೊಂಡ ಹುಡುಗಿಯ ತಾಯಿ ಬಂದು ನಿಂತಳು.

‘ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಗೊತ್ತಾದ ಮೇಲೆ ಊರಿಂದ ಬಂದೆ. ಶವವನ್ನು ನೋಡಿದೆ...’ ಅಂತ ಹೇಳಿದಳು.

‘ಹಾಗೆ ಆತ್ಮಹತ್ಯೆ ಮಾಡಿಕೊಳ್ಳಲಿಕ್ಕೆ ನಿನ್ನ ಅಳಿಯ, ಅಂದ್ರೆ ನಿನ್ನ ಮಗಳ ಗಂಡ ವರದಕ್ಷಿಣೆಗೋಸ್ಕರ ಹಿಂಸೆ ಮಾಡ್ತಿದ್ದ. ಅವನಿಗೆ ಬೇರೆ ಹೆಂಗಸಿನ ಜೊತೆಗೆ ಸಂಬಂಧವಿತ್ತು. ಅದು ನಿನಗೆ ಗೊತ್ತಿತ್ತಾ?’ ಅಂತ ಪ್ರಶ್ನೆ ಕೇಳಲಾಯಿತು.

‘ಇಲ್ವಲ್ಲಾ? ಯಾವತ್ತೂ ನಮ್ಮ ಅಳಿಯ ನಮ್ಮನ್ನ ದುಡ್ಡು ಕೇಳಿಲ್ಲ. ಮದುವೆಯಲ್ಲೂ ನಾವು ದುಡ್ಡು ಕೊಟ್ಟಿಲ್ಲ’ ಅಂದಳು ತಾಯಿ.

ನ್ಯಾಯಾಧೀಶರು ಗಂಭೀರವಾದರು.

‘ನಿನ್ನ ಅಳಿಯನಿಗೆ ಬೇರೊಬ್ಬ ಹೆಂಗಸಿನ ಜೊತೆಗೆ ಸಂಬಂಧವಿತ್ತು. ಅದರಿಂದಾಗಿ ಮನೆಯಲ್ಲಿ ಪದೇ ಪದೆ ಜಗಳವಾಗ್ತಾ ಇತ್ತು. ನಿಮಗಿದು ಗೊತ್ತಾ’ ಅಂತ ಕೇಳಲಾಯಿತು.

‘ಛೇ, ಅಂಥದ್ದೇನೂ ಇರಲಿಲ್ಲ. ನನ್ನ ಮಗಳು, ಅಳಿಯ ಅನ್ಯೋನ್ಯವಾಗಿದ್ದರು. ತುಂಬ ಚೆನ್ನಾಗಿ ನೋಡಿಕೊಳ್ತಾ ಇದ್ದ. ನನ್ನ ಮಗಳೇ ಆವಾಗಾವಾಗ ಹೊಟ್ಟೆ ನೋವು ಬರ್ತಾ ಇತ್ತು’ ಅಂದಳು ತಾಯಿ.

ನ್ಯಾಯಾಧೀಶರ ಮುಖದಲ್ಲಿ ಸಣ್ಣದೊಂದು ಕೋಪದ ಅಲೆ ಹಾಯ್ದು ಹೋಯಿತು. ಆನಂತರ ಸಾಲಾಗಿ ಆರು ಜನ, ತೀರಿಕೊಂಡು ಆ ಹುಡುಗಿಯ ಅಕ್ಕಂದಿರು ಕಟಕಟೆಗೆ ಬಂದು ನಿಂತರು. ಪ್ರತಿಯಾಬ್ಬರೂ ಹೇಳಿದ್ದು ಅದೇ ಮಾತು : ‘ನಮ್ಮ ತಂಗೀನ ಅವಳ ಗಂಡ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಅವರು ಅನ್ಯೋನ್ಯವಾಗಿದ್ದರು. ಅವರಿಗೆ ನಾವು ಹಣ ಕೊಟ್ಟಿಲ್ಲ. ಅವರು ಹಣ ಕೇಳಿರಲಿಲ್ಲ!’

ಕಡೆ ಕಡೆಗೆ, ತೀರಿಕೊಂಡ ಹುಡುಗಿಯ ಕುಟುಂಬದವರ ಮೇಲೆ ನ್ಯಾಯಾಧೀಶರಿಗೆ ಎಷ್ಟು ಕೋಪ ಬಂದಿತ್ತೆಂದರೆ, ‘ನಿಮಗೆ ಹೀಗೆ ಸುಳ್ಳು ಸಾಕ್ಷ್ಯ ಹೇಳೋದಕ್ಕೆ ನಾಚಿಕೆ ಆಗಲ್ವಾ?’ ಅಂತ ರೇಗಿಯೇ ಬಿಟ್ಟರು. ತೀರ ಪ್ರಮುಖ ಸಾಕ್ಷಿದಾರರೇ ಹಾಗೆ hostile ಆದಾಗ ನ್ಯಾಯಾಧೀಶರಾದರೂ ಏನು ಮಾಡಲು ಸಾಧ್ಯ? ಮದುವೆಯಾದ ಕೆಲವೇ ದಿನಗಳಲ್ಲಿ ನೇಣುಹಾಕಿಕೊಂಡು ಸತ್ತ ಯುವತಿಯ ಕೇಸು ಅಲ್ಲಿಗೇ ಮಗುಚಿ ಬೀಳುತ್ತದೆ. ಜೈಲು ಕಾಣಬೇಕಾದವನು ಖುಲಾಸೆಯಾಗಿ ಕೇಸಿನಿಂದ ಹೊರಬೀಳುತ್ತಾನೆ.

‘ನಮ್ಮ ಪ್ರಪಂಚದಲ್ಲಿ ಹಾಗಿಲ್ಲ ನೋಡಿ ಸಾರ್‌. ನಾವು ಕೂಡ ಕೋರ್ಟಿಗೆ ಹೋಗಿ ಸಾಕ್ಷೀದಾರರಾಗಿ ನಿಂತ್ಕೋತೀವಿ. ಮರ್ಡರು ನಮ್ಮ ಕಣ್ಣೆದುರಿಗೆ ನಡೆದಿರುತ್ತೆ. ಆದ್ರೂ ನಾವು ಸಾಕ್ಷ್ಯ ಹೇಳಲ್ಲ. ಕೊಂದವರು ಯಾರು ಅಂತ ಚೆನ್ನಾಗಿ ಗೊತ್ತಿದ್ರೂ-ಇವರನ್ನ ನಾನು ನೋಡೇ ಇಲ್ಲ ಅಂತ ಹೇಳ್ತೀವಿ. ಅದು ಅಂಡರ್‌ವರ್ಲ್ಡ್‌ನ ನಿಯಮ. ಕೋರ್ಟಿನಲ್ಲಿ ಸಾಕ್ಷ್ಯ ಹೇಳಿ, ಇನ್ನೂ ನಾಲ್ಕು ಜನರಿಂದ ಹೇಳಿಸಿ ಒಬ್ಬನಿಗೆ ಸಜಾ ಕೊಡಿಸಿದರೆ, ಅದು ಗಂಡಸುತನ ಅಲ್ಲ. ಅವನು ಕೋರ್ಟಲ್ಲಿ ನಿರಪರಾಧಿ ಅಂತ ಆಗಬೇಕು. ಜೈಲಿಂದ ಈಚೆಗೆ ಬರಬೇಕು. ಆಗ ತೆಗೀತೀವಿ ಅವನನ್ನ! ಅದು ನಮ್ಮ ನ್ಯಾಯ... ’ ಅಂದಿದ್ದು ಒಬ್ಬ ಭೂಗತ ಜೀವಿ.

ಬೆಂಗಳೂರಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನೂರಾರು ಭೂಗತ ಜೀವಿಗಳ ಕೊಲೆಯಾಗಿದೆ. ಶಿಕ್ಷೆಯಾದದ್ದು ತೀರ ಅಪರೂಪ. ಅಲ್ಲಿ threat ಕೆಲಸ ಮಾಡುತ್ತೆ. ರಾಜಿ-ಕಬೂಲಿ ಕೆಲಸ ಮಾಡುತ್ತೆ. ದುಡ್ಡು, ಅವರಿವರಿಂದ ಹೇಳಿಸೋದು, ವಕೀಲರನ್ನೇ ಖರೀದಿ ಮಾಡಿಬಿಡೋದು- ಎಲ್ಲ ನಡೆಯುತ್ತವೆ. ನೂರಾರು ಜನರ ಕಣ್ಣೆದುರಿನಲ್ಲೇ ನಡೆದ ಹಾಡಹಗಲಿನ ಕೊಲೆಗಳು ರಾಜಾರೋಷವಾಗಿ ಖುಲಾಸೆಯಲ್ಲಿ ಅಂತ್ಯಗೊಂಡು ಹಂತಕರು ಜೈಲಿಂದ ಬಿಡುಗಡೆಯಾಗುತ್ತಾರೆ. ಆದರೆ, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅವರೂ ಕೊಲೆಯಾಗುತ್ತಾರೆ.

ಅಂಥದ್ದೊಂದು ಫೆಸಿಲಿಟಿ(?) ಭೂಗತದಲ್ಲಿರಬಹುದು. ಆದರೆ ಅದು ಸಜ್ಜನರ ಲೋಕದಲ್ಲಿ ಇಲ್ಲ. ಗಂಡನ ಅಸಡ್ಡೆ, ಹಿಂಸೆ, ವರದಕ್ಷಿಣೆ ಕಾಟ, ಅವನ ಅನೈತಿಕ ಸಂಬಂಧ ಇವುಗಳಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಹುಡುಗಿಯ ಕೇಸು ನ್ಯಾಯಾಲಯದಲ್ಲಿ ನಾನಾ ಕಾರಣಗಳಿಗಾಗಿ ಬಿದ್ದುಹೋಗುತ್ತದೆ. ‘ಹೋದವಳು ಹೋದಳು. ಇವನಿಗೆ ಶಿಕ್ಷೆಯಾದರೆ ತೀರಿಕೊಂಡ ನಮ್ಮ ಹುಡುಗಿಗೇನು ಬಂದ ಹಾಗಾಯ್ತು?’

ಎಂಬ ಶುಷ್ಕ ವೈರಾಗ್ಯದಿಂದ ಹಿಡಿದು, ಹುಡುಗಿಯ ಮನೆಯವರು ಕೈತುಂಬ ಹಣ ತೆಗೆದುಕೊಂಡು ಸಾಕ್ಷ್ಯ ಹೇಳಲು ಹಿಂಜರಿಯುವುದರತನಕ- ಕೇಸು ಖುಲಾಸೆಯಾಗಲಿಕ್ಕೆ ನೂರು ಕಾರಣ. ಹಾಗೆ ಖುಲಾಸೆಯಾಗಿ ಈಚೆಗೆ ಬಂದವನ ವಿರುದ್ಧ ಸೇಡು ತೀರಿಸಿಕೊಳ್ಳಲು ಯಾರಿರುತ್ತಾರೆ? ‘ದೇವರು ನೋಡಿಕೊಳ್ಳುತ್ತಾನೆ ಬಿಡು’ ಎಂಬ ಕೆಲಸಕ್ಕೆ ಬಾರದ ಸಮಾಧಾನ ಅನೇಕರಿಗಿರುತ್ತದೆ. ದುರಂತವೆಂದರೆ, ಇವರ್ಯಾರೂ ಕೂಡ ಜನಸಾಮಾನ್ಯರಿಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಹೋಗಿಬಿಟ್ಟರೆ ಏನು ಗತಿ ಅಂತ ಯೋಚಿಸುವುದಿಲ್ಲ. ಅಪರೂಪಕ್ಕೊಮ್ಮೆ ಉಚ್ಚ ನ್ಯಾಯಾಲಯಗಳು ಇಂಥದ್ದೊಂದು ಯೋಚನೆಯನ್ನು ಮಾಡುತ್ತವೆ. ಹಾಗೆ ಯೋಚಿಸಿದಾಗಲೇ ಪ್ರಿಯದರ್ಶಿನಿ ಮಟ್ಟೂ ಎಂಬ ಸ್ಫುರದ್ರೂಪಿ ಹುಡುಗಿಯ ರೇಪ್‌ ಆ್ಯಂಡ್‌ ಮರ್ಡರ್‌ ಕೇಸಿಗೆ ನ್ಯಾಯ ಸಿಗುತ್ತದೆ. ಮೊನ್ನೆ ದಿಲ್ಲಿಯ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಪರಿಣಾಮಕಾರಿಯಾಗಿದೆಯೆಂದರೆ ಕೆಳಗಿನ ಕೋರ್ಟುಗಳಲ್ಲಿ ನ್ಯಾಯ ನಿರ್ಣಯ ಬರೆಯುವವರು ಸಾವಿರ ಸಲ ಯೋಚಿಸಿ ಲೇಖನಿ ಕೈಗೆತ್ತಿಕೊಳ್ಳುವಂತಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more