ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಥ ಭಸ್ಮಾಸುರನ ಕೆಲಸ ಮಾಡಿದರಲ್ಲವೆ ದೇವೇಗೌಡರು?

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಕುಮಾರ್‌ ಮುಖ್ಯಮಂತ್ರಿ!

ದೇವೇಗೌಡರ ಕಣ್ಣಲ್ಲಿ ನೀರು. ಏನೇ ಆದರೂ ನಮ್ಮ ಸರ್ಕಾರಕ್ಕೆ ಆತಂಕವಿಲ್ಲ ಅಂತಲೇ ಮಾತಾಡುತ್ತಿರುವ ಧರಂಸಿಂಗ್‌. ಬರಗೆಟ್ಟ ಬಿಜೆಪಿ ಶಾಸಕರ ತೆರೆದ ಬಾಯಿಗಳಲ್ಲಿ ರಣ ಹಸಿವು. ರಚನೆಯಾಗಲಿರುವ ಸರ್ಕಾರ ಹಾವು- ನರಿ ಮಧ್ಯದ ಸ್ನೇಹದಂತಹುದು. ಧೃತರಾಷ್ಟ್ರ ಪಿತ ದೇವೇಗೌಡರ ಕಣ್ತುಂಬ ಮೊಸಳೆ ಕಣ್ಣೀರು.

‘ ಮೊದಲ ಇಪ್ಪತ್ತು ತಿಂಗಳು ಹೇಗೋ ಮಾಡಿ ಕುಮಾರಸ್ವಾಮಿ ಒಳ್ಳೆಯ ಆಡಳಿತವನ್ನೇ ಕೊಡುತ್ತಾನೆ, ನೋಡ್ತಿರಿ’ ಅಂತ ಆಸೆಯಿಟ್ಟುಕೊಂಡು ಮಾತನಾಡ್ತುತಿರುವ ಭೋಳೆ ಮಂದಿಗೆ ಕುಮಾರಸ್ವಾಮಿಯ ಬೆನ್ನಲ್ಲಿ ಠಳಾಯಿಸುತ್ತಿರುವ ಜಮೀರ್‌, ಕಬಡಿ ಬಾಬು, ಬಾಂಬ್‌ನಾಗ, ಚಲುವರಾಯಸ್ವಾಮಿ, ಚೆನ್ನಿಗಪ್ಪ, ಆರ್ಕೆ ರಾಠೋಡ್‌, ಬಾಂಬ್‌ ಕೃಷ್ಣಮೂರ್ತಿ ಮುಂತಾದ ಎಲಿಮೆಂಟುಗಳು ಕಾಣಿಸುತ್ತಿಲ್ಲ. ಸಾಕ್ಷಾತ್ತು ಹೆತ್ತ ತಂದೆಗೂ ನಿಷ್ಠರಾಗಿರಲು ಒಪ್ಪದ ಬಳ್ಳಾರಿಯ ಎನ್‌.ತಿಪ್ಪಣ್ಣ ತಮ್ಮ ಅಗಾಧವಾದ ಐರನ್‌ ಲೆಗ್‌ನೊಂದಿಗೆ ಹೋಗಿ ಕುಮಾರಸ್ವಾಮಿಯ ಕ್ಯಾಂಪಿನಲ್ಲಿ ತಳವೂರಿರುವುದು ಆತಂಕ ಹುಟ್ಟಿಸುತ್ತಿದೆ. ಸಕಲ ಒಕ್ಕಲಿಗ ಪೊಲೀಸ್‌ ಆಫೀಸರುಗಳ ಮಲ ಅಣ್ಣನಂತಿರುವ ಜಾಯಿಂಟ್‌ ಕಮೀಶನರ್‌ ನಾರಾಯಣ ಗೌಡ ಹೊಸ ಯೂನಿಫಾರ್ಮು ಹೊಲಿಸಿ ಕೊಂಡಿರುವುದು ಗಮನಕ್ಕೆ ಬರುತ್ತಿಲ್ಲ.

ಒಳ್ಳೆಯ ದಿನಗಳು ಹತ್ತಿರದಲ್ಲೆಲ್ಲೂ ಕಾಣುತ್ತಿಲ್ಲ.

Former Prime Minister H.D. Devegowdaಕರ್ನಾಟಕದ ರಾಜಕಾರಣದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಂದು ಆಗಲಿದೆ ಎಂಬುದರ ಮೊದಲ ವಾಸನೆ ಹಿಡಿದಿದ್ದು ‘ಕನ್ನಡ ಪ್ರಭ’ದ ದಿಲ್ಲಿ ವರದಿಗಾರ. ದೇವೇಗೌಡ, ವಾಜಪೇಯಿಯನ್ನು ಭೇಟಿ ಮಾಡಿದ್ದಷ್ಟೆ ಸುದ್ದಿಯಾಯಿತು. ಆದರೆ ದೇವೇಗೌಡರು ದಿಲ್ಲಿಯ ಪ್ರಖ್ಯಾತ ವೈದ್ಯರನ್ನೆಲ್ಲ ಒಂದು ಸುತ್ತು ಕಂಡು ಬಂದಿದ್ದರು. ಇಡೀ ದಿವಸ ಡಯಾಗ್ನಸ್ಟಿಕ್‌ ಲ್ಯಾಬುಗಳ ಪಲ್ಲಂಗಗಳ ಮೇಲೆ ಮಲಗಿ ಎಲ್ಲ ರೀತಿಯಿಂದಲೂ ಆರೋಗ್ಯ ಸರಿಯಿದೆಯೇ ಅಂತ ಪರೀಕ್ಷಿಸಿಕೊಂಡಿದ್ದರು. ದೇವೇಗೌಡರು ಹಾಗೆ ವೈದ್ಯರನ್ನೂ, ಜ್ಯೋತಿಷಿಗಳನ್ನೂ ಸುದೀರ್ಘವಾಗಿ ಭೇಟಿಯಾದರೆಂದರೆ- ಅದರರ್ಥ ಇಷ್ಟೇ.

-ದೊಡ್ಡ ಯುದ್ಧಕ್ಕೆ ರೆಡಿ!

ಈ ಮನುಷ್ಯ ಅನೇಕ ಯುದ್ಧಗಳನ್ನು ಮಾಡಿರುವುದು ಹೌದು. ಗೆದ್ದಿರುವುದೂ ಹೌದು. ಈಗ ಮಾಡಿರುವುದು ಮಾತ್ರ ಅಪ್ಪಟ ಶಕುನಿ ಯುದ್ಧ: ಶಿಖಂಡಿ ಯುದ್ಧ! ‘ ನನ್ನ ಮಗ ನನ್ನ ವಿರುದ್ಧ ನಿಂತುಬಿಟ್ಟ. ಇದು ನನ್ನ ಬದುಕಿನಲ್ಲಿ ಕರಾಳದಿನ’ ಅಂತ ಮಾತನಾಡುವ ದೇವೇಗೌಡರ ‘ಬಹಿರಂಗ ಅಸಹ್ಯ’ವನ್ನು ಕರ್ನಾಟಕ ಮೊದಲ ಬಾರಿಗೇನೂ ನೋಡುತ್ತಿಲ್ಲ. ಇದು ಅವರ ಕೊನೆಯ ‘ಸಾರ್ವಜನಿಕ ಅಸಹ್ಯ’ ಅಂತಾದರೆ, ಅಷ್ಟರ ಮಟ್ಟಿಗೆ ಕರ್ನಾಟಕದ ಅದೃಷ್ಟ ದೊಡ್ಡದು.

ಪತ್ರಿಕೆಗಳು, ಛಾನಲ್‌ಗಳು ಅಂದುಕೊಂಡಂತೆ ಇದು ಸೀತಾರಾಂ ಕೇಸರಿಯ ವಿರುದ್ಧದ ಸೇಡಲ್ಲ. ಕಾಂಗ್ರೆಸ್‌ ವಿರುದ್ಧದ ಹೋರಾಟ ಮೊದಲೇ ಅಲ್ಲ. ಸಿದ್ರಾಮಯ್ಯ ಇತ್ತೀಚಿನ ಪಂಚಾಯ್ತಿ ಚುನಾವಣೆಗಳಲ್ಲಿ ಕೊಟ್ಟ ಒಂದೆ knee jerk reaction ಕೂಡ ಅಲ್ಲ. ತೀರ ಎಸ್ಸೆಂ. ಕೃಷ್ಣ ಮತ್ತು ಡೀಕೇಶಿಯನ್ನು ಹಣಿಯುವ ಅಂತಿಮ ಯತ್ನವೂ ಅಲ್ಲ. ಇದು ದೇವೇಗೌಡರ ಮತ್ತು ಅವರ ಮಗನ ಅತ್ಯಂತ ವ್ಯವಸ್ಥಿತ ಸಂಚು. protracted game plan.

H.D. Kumaraswamyಒಂದು ಕಡೆ ಕುಮಾರಸ್ವಾಮಿ ಎರಡು ದಿನಕ್ಕೊಮ್ಮೆ ಧರಂಸಿಂಗ್‌ ವಿರುದ್ಧ ಸೆಟೆಯತೊಡಗಿದ್ದು ಮೊದಲ ಸುತ್ತಿನ ಆಟವಾಗಿತ್ತು. ಹಾಗೆ ಸೆಟೆಯಲು ಕುಮಾರ ಸ್ವಾಮಿಗೆ ಕಾರಣಗಳೇ ಇರಲಿಲ್ಲ. ಧರಂಸಿಂಗ್‌ ಮಂತ್ರಿಮಂಡಲದಲ್ಲಿದ್ದ ಜಾತ್ಯತೀತ ಜನತಾದಳದ ಅಷ್ಟೂ ಮಂತ್ರಿಗಳು ಚೆಂದಾಗಿಯೇ ಉಂಡು-ಉಟ್ಟು- ಉಡಿಕೆ ಮಾಡಿಕೊಂಡಿದ್ದರು. ತಲಹರಟೆ ಅನ್ನಬಹುದಾದಂಥ ಹೇಳಿಕೆಯನ್ನು ನೀಡುತ್ತಿದ್ದುದು ಚೆನ್ನಿಗಪ್ಪ, ಡಿ.ಟಿ.ಜಯಕುಮಾರ್‌ ತರಹದ spent forceನ ಜನ. ಆಗೊಮ್ಮೆ ಈಗೊಮ್ಮೆ ದೇವೇಗೌಡರೇ ಕೊಸರಿದರೂ, ಅದು ದುಡ್ಡಿಗಾಗಿ ಧರಂಸಿಂಗ್‌ರನ್ನು ಕಂಕುಳ ಕೆಳಗೆ ಹಾಕಿಕೊಂಡು ಹಿಸುಕುವ ತಂತ್ರದಂತೆ ಮಾತ್ರ ಕಾಣುತ್ತಿತ್ತು.

ಮೊನ್ನೆ ಮೊನ್ನೆ ಕೂಡ ಧರಂಸಿಂಗ್‌ ‘ಸರ್ಕಾರಕ್ಕೆ ಏನೂ ಆಗಾಂಗಿಲ್ಲ ತಗರೀ. ದುಡ್ಡಿಗೋಸ್ಕರ ಹಿಂಗೆ ಮಾಡ್ತಾನೆ ಗೌಡ...ಪೈಸೇ ಕೇ ಲಿಯೇ...’ಅಂದಿದ್ದರು ಖಾಸಗಿಯಾಗಿ. ಆದರೆ ಸಿದ್ರಾಮಯ್ಯನ ನೆಪವಿಟ್ಟುಕೊಂಡು ರೊಳ್ಳೆ ತೆಗೆದ ದೇವೇಗೌಡ, ಯಾವಾಗ ಲಿಂಗಾಯತ ಗುರುಪೀಠಗಳ ಮುಂದೆ ನೆಲದ ಮೇಲೆ ಕುಳಿತು ಆಗಷ್ಟೇ ಲಿಂಗೋದ್ಭವರಾದವರಂತೆ ಫೊಟೋ ತೆಗೆಸಿಕೊಂಡರೋ ಅವರ ಜಾತಿ ನೆಲೆಗಟ್ಟಿನ ಸಿದ್ಧಾಂತದಲ್ಲಿ ಏಕ್ದಂ ಒಂದು U turn ಅನಾವರಣಗೊಂಡು ಬಿಟ್ಟಿತ್ತು.

ಸಿದ್ರಾಮಯ್ಯನ ಸೋಡಚೀಟಿಯ ನಂತರ ದೇವೇಗೌಡರಿಗೆ ಕುರುಬರ ಮೇಲೆ ವಿಶ್ವಾಸ ಉಳಿಯಲಿಲ್ಲ. ಮುಸ್ಲಿಮರು ಯಾವತ್ತಿಗೂ ಜಾತ್ಯತೀತ ದಳವನ್ನು ನಂಬಿ ಒಗ್ಗಟ್ಟಾಗಿ ನಿಂತವರಲ್ಲ ಎಂಬುದು ಮೊದಲೇ ಗೊತ್ತಿತ್ತು.

ಚಾಮರಾಜಪೇಟೆಯಲ್ಲಿ ಜಮೀರ್‌ ಗೆದ್ದದ್ದು, ರಾಮನಗರದ ಮುಸಲ್ಮಾನರು ಕುಮಾರಣ್ಣನ ಕಾರಿನಲ್ಲಿ ಕಾಣಿಸಿಕೊಳ್ಳುವುದೂ- ಅವೆಲ್ಲ ಮಗನ ಸಾಯಂಕಾಲದ ಖರ್ಚು ವೆಚ್ಚಕ್ಕೇ ಹೊರತು ಓಟು ತಂದುಕೊಡುವ ಲೆಕ್ಕಾಚಾರಗಳಲ್ಲ ಎಂಬುದೂ ಅವರಿಗೆ ಗೊತ್ತು. ಉಳಿದ ಹಿಂದುಳಿದ ಜಾತಿವರ್ಗಗಳಿಗೆ ಕರ್ನಾಟಕದಲ್ಲಿ ಒಬ್ಬ ನಾಯಕ ಅಂತ ಇವತ್ತಿಗೆ ಇಲ್ಲವೇ ಇಲ್ಲ. ಸಮಸ್ತ ವಕ್ಕಲಿಗರಿಗೆ ಕುಮಾರಣ್ಣನೇ ನಾಯಕ ಅಂತ ಘೋಷಿಸಿ, ಅವರೂ ಒಪ್ಪಿಕೊಳ್ಳುವಂತೆ ಮಾಡಿಬಿಟ್ಟರೆ- ಅಲ್ಲಿಗೆ ಅರ್ಧ ಯುದ್ಧ ಗೆದ್ದ ಹಾಗೇ. ಇನ್ನರ್ಧ ಯುದ್ಧ ಲಿಂಗಾಯತರಿಗೆ ಸಂಬಂಧಿಸಿದ್ದು!

ಮಹಾಶಕುನಿ ದೇವೇಗೌಡರು ನೆತ್ತಿ ಸವರುತ್ತಿದ್ದಂತೆಯೇ ಸಫಾರಿ ದುರ್ಯೋಧನ ಯಡಿಯೂರಪ್ಪ ಎದ್ದು ಕೂತೇ ಬಿಟ್ಟರಲ್ಲ ?ಆತನದು ಶತಶತಮಾನದ ಹಸಿವು.‘ಎಲ್ಲ ಅರ್ಹತೆ ಇದ್ದೂ ಕರ್ನಾಟಕದ ಜನತೆ ತನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ’ ಅಂತ ನಂಬಿಕೊಂಡು, ಆ ಕಾರಣಕ್ಕೇ ಸಿಟ್ಟು ಮಾಡಿಕೊಂಡು ‘ಉರಾ- ಉರಾ’

ಅನ್ನುತ್ತಾ ಅಲೆದಾಡುವ ಅತೃಪ್ತ ಆತ್ಮವರು. ಅತ್ತ ರಾಷ್ಟ್ರಮಟ್ಟದ ರಾಜಕಾರಣದಲ್ಲೂ ಸೈದ್ಧಾಂತಿಕ ಬದಲಾವಣೆಗಳಾಗಿದ್ದವು. ಗುಜರಾತದ ರಕ್ತಪಾತವೆಲ್ಲ ಈಗ ಬಿಜೆಪಿಯನ್ನು ದೂರವಿಡುವಂಥ ಕಾರಣವಾಗಿ ಗೋಚರವೇ ಆಗುತ್ತಿಲ್ಲ. ಸಾಬರನ್ನು ಕಟ್ಟಿಕೊಳ್ಳದೆಯೂ ಚುನಾವಣೆ ಗೆಲ್ಲಬಹುದು ಎಂಬ ಭರವಸೆ ಎಲ್ಲ ಕಾಂಗ್ರೆಸ್ಸೇತರ ಪಕ್ಷಗಳಲ್ಲಿ ಗಟ್ಟಿಗೊಂಡಾಗಿದೆ. ಅಲ್ಲದೆ, ಆಂಧ್ರದಲ್ಲಿ ವರ್ಷಗಳ ಕೆಳಗೆ ಚಂದ್ರ ಬಾಬು ನಾಯಡು ಮಾಡಿ ಗೆದ್ದುದನ್ನೇ ಇಲ್ಲಿ ಕರ್ನಾಟಕದಲ್ಲಿ ಮಾಡಿ ದಕ್ಕಿಸಿಕೊಳ್ಳಬಹುದು ಎಂಬ ಭಂಡತನ ಮೈಗೂಡಿತ್ತು.

ದೇವೇಗೌಡರು, ವಾಜಪೇಯಿಯ ಹೆಗಲು ನೀವಿದರು. ಅಡ್ವಾಣಿಯ ಮೂಲಕ ಅನಂತ ಕುಮಾರ್‌ ತಲೆ ಸವರಿದರು. ಯುಡಿಯೂರಪ್ಪನ ಪರಿಸ್ಥಿತಿ ಎಲ್ಲಿಗೆ ಬಂದಿತ್ತೆಂದರೆ, ರಾಷ್ಟ್ರಮಟ್ಟದ ತಮ್ಮ ನಾಯಕರನ್ನು ಧಿಕ್ಕರಿಸಿ ಸಂಡೂರಿನ ಅನಿಲ್‌ಲಾಡ್‌ ಕೊಡುವ ಥೈಲಿ ಬಳಸಿಕೊಂಡು ಯಾರೊಂದಿಗೆ ಬೇಕಾದರೂ ಕೈ ಜೋಡಿಸಿ ವಿಧಾನಸೌಧದ ಮೂರನೇ ಮಹಡಿಗೆ ಬಂದು ಬಿಡಲು ಅವರು ಸಿದ್ಧರಿದ್ದರು.

ಈ ಕಡೆ ಕಾಂಗ್ರೆಸ್ಸೂ ರೋಸಿ ಹೋಗಿತ್ತು. ಅಗಾಧ ಸಹನೆಯ ಮನುಷ್ಯ ಧರಂಸಿಂಗ್‌ ಕೂಡ ದೇವೇಗೌಡರು ಘಳಿಗೆಗೊಮ್ಮೆ ಮಾಡುತ್ತಿದ್ದ ‘ಐವತ್ತು ಕೊಡು, ನೂರು ಕೊಡು’ಎಂಬಂಥ ಬ್ಲ್ಯಾಕ್‌ ಮೇಲ್‌ಗೆ ಸಿಕ್ಕಿ ಹೈರಾಣಾಗಿದ್ದರು. ಇನ್ನೊಂದು ಕಡೆ ಅವರಿಗೆ ಕೃಷ್ಣರ ಚುಟುಗುಮುಳ್ಳಿನ ಕಾಟವಿದ್ದೇ ಇತ್ತು. ಎಲ್ಲಕ್ಕಿಂತ ಮಿಗಿಲಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ಗೆ ‘ಸುಯಿಸೈಡ್‌ ಬಾಂಬರ್‌’ ಥರದ ಮನುಷ್ಯ ಮಲ್ಲಿಕಾರ್ಜುನ ಖರ್ಗೆಯನ್ನು ತಂದುಕೂಡಿಸಿ ಅನಾಹುತ ಎಸಗಲಾಗಿತ್ತು.

‘ಏಳೇಳು ಜನ್ಮಗಳ ಮೈತ್ರಿ ನಮ್ಮದು’ ಅಂದುಕೊಳ್ಳುತ್ತಿದ್ದ ಖರ್ಗೆ-ಧರಂ ಒಳಗಿಂದೊಳಗೇ ಭರ್ಚಿ ಮಸೆಯತೊಡಗಿದ್ದರು. ಸ್ವಪ್ನ ದೋಷಕ್ಕೊಳಗಾದವನಂತೆ ಡೀಕೇಶಿ ಸುಮ್ಮನಾಗಿದ್ದ. ಪಂಚಾಯ್ತಿ ಚುನಾವಣೆಗಳ ಗೆಲುವು ತಂದ ಸಂತೋಷವನ್ನು ಕಾಂಗ್ರೆಸ್ಸಿಗರು ಸೆಲಬ್ರೇಟ್‌ ಮಾಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.

ಇಂಥದ್ದೊಂದು ಅನುಕೂಲಕರ ಪರಿಸ್ಥಿತಿಯಲ್ಲಿ ಮಗನಿಗೆ ಪಟ್ಟ ಕಟ್ಟಲು ಮುಂದಾದರೆ ಜಾತ್ಯತೀತ ಜತನಾದಳದಲ್ಲಿರುವ ಇತರೆ ಸೀನಿಯರ್‌ಗಳು ಬಂಡಾಯವೇಳುತ್ತಾರಾ? ಬಹುಶಃ ದೇವೆಗೌಡರು ಕೇಳಿಕೊಂಡ ಕೊನೆಯ ಪ್ರಶ್ನೆ ಇದು. ಅಲ್ಲೂ ಅವರಿಗೆ ಅನುಕೂಲಕರ ಉತ್ತರವೇ ದೊರೆತಿದೆ. ಎಂ.ಪಿ.ಪ್ರಕಾಶ್‌ಗೆ ಹೋರಾಡಿ ಕಸಿದುಕೊಳ್ಳುವ ಕಸುವು, ಜಾಯಮಾನ- ಎರಡೂ ಇಲ್ಲ. ಸಿಂಧ್ಯಾ, ಅಡಿಗೆ ಆಗುವುದಕ್ಕೆ ಮುಂಚೆ ತಪ್ಪಲೆಗೆ ಕೈಯಿಟ್ಟು ಸುಟ್ಟುಕೊಳ್ಳುವ ಅವರಸಗೇಡಿಯಲ್ಲ. ಸಿದ್ರಾಮಯ್ಯನಂಥ ಹಟಮಾರಿಯೇ ಹೊರಟು ಹೋಗಿಯಾಗಿದೆ. ದಳದಲ್ಲಿನ್ನು ತೀವ್ರವಾಗಿ ಬಂಡಾಯವೆದ್ದು, ಗೌಡರ ನಿರ್ಣಯವನ್ನು ಛಾಲೆಂಜು ಮಾಡಬಲ್ಲ ನಾಯಕರೇ ಇಲ್ಲ.

ಕಟ್ಟ ಕಡೆಯದು, ಮನೆಯ ಪ್ರಶ್ನೆ. ರೇವಣ್ಣ ಬಂಡಾಯವೇಳುತ್ತಾನಾ?ಈ ಪ್ರಶ್ನೆ ಕೇಳಿಕೊಂಡಾಗ ದೇವೆಗೌಡರಿಗೇ ನಗು ಬಂದಿರಬೇಕು.‘ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ವರ್ಷಕ್ಕೆ ಒಂದು ಸಾವಿರ ಆತ್ಮಹತ್ಯೆಗಳಾಗುತ್ತವೆ’ ಅಂತ ಸರ್ಕಾರ ಹೇಳಿದರೆ‘ನಮ್ಮ ಹೊಳೆನರಸೀಪುರಕ್ಕೆ ಐನೂರು ಮಂಜೂರು ಮಾಡಿ!’ ಅನ್ನುವಂಥ ಅವಿವೇಕಿ ರೇವಣ್ಣ. ಒಬ್ಬ ಚೆನ್ನಮ್ಮ ಬೆನ್ನಿಗಿಲ್ಲದೆ ಹೋಗಿದ್ದಿದ್ದರೆ ಅದ್ಯಾವ ಕೀಳರಿಮೆಯಲ್ಲಿ ಮುಳುಗಿ ನಾಶವಾಗುತ್ತಿದ್ದನೋ ಆತ.

ಇದೆಲ್ಲ ಭೂಮಿಕೆ ಸಿದ್ಧಗೊಂಡ ನಂತರವೇ ದೇವೇಗೌಡರು ಕುಮಾರಸ್ವಾಮಿಗೆ ಮನೆಹಾಳ ಕೆಲಸಕ್ಕಿಳಿಯುವಂತೆ ಆದೇಶ ನೀಡಿದ್ದು ಮತ್ತು ಕುಮಾರ ಅದನ್ನು ಆರಂಭಿಸಿದ್ದು. ಅಕಸ್ಮಾತ್‌ ಕುಮಾರಸ್ವಾಮಿ ಸ್ವಯಂ ಸ್ಫೂರ್ತಿಯಿಂದ, ರಾಜ್ಯದ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆಯಿಂದ, ದಳ ಮತ್ತು ಬಿಜೆಪಿ ಶಾಸಕರು ತನ್ನನ್ನು ಬೆಂಬಲಿಸುತ್ತಾರೆ ಎಂಬ ಖಚಿತ ನಂಬಿಕೆಯಿಂದ ನಿನ್ನೆ ರಾಜ್ಯಪಾಲರ ಬಂಗಲೆಗೆ ಜಮೀರನ ಬಸ್ಸಿನಲ್ಲಿ ಹೊರಟ ಅಂತ ಯಾರಾದರೂ ಭಾವಿಸಿದ್ದರೆ- ಅವರು ತೀರಾ ಅಮಾಯಕರು.

ಇವತ್ತು ಕುಮಾರಸ್ವಾಮಿಗಿರುವ ಏಕೈಕ ರಾಜಕೀಯ ಅರ್ಹತೆ ಅಂದರೆ, ಆತ ದೇವೇಗೌಡರ ಮಗ, ಮಗ ಮತ್ತು ಮಗ! ದೇವೇಗೌಡರು ನಶಿಸಿದ ಮಾರನೆಯ ದಿನ ರೇವಣ್ಣ ಹೊಳನರಸೀಪುರಕ್ಕೆ, ಕುಮಾರಣ್ಣ ಬಾಳೆಕಾಯಿ ಮಂಡಿಗೆ ಹಿಂತಿರುಗುವುದು ಖಚಿತ ಸತ್ಯ. ಅಂಥ ಕುಮಾರಸ್ವಾಮಿ ಜನತಾದಳದ ಹಿರಿಯ ನಾಯಕರೆದುರು ಸೆಟೆದು‘ ಇನ್ನೂ ಎಷ್ಟು ದಿನ ಅಂತ ಆ ಇಟಲಿ... ಳೆ ಕಾಲಿನ ಬೂಟಿಗೆ ಪಾಲಿಶ್‌ ಮಾಡ್ಕಂಡಿರ್ತೀರಿ?’ಅಂತ ಕೇಳುತ್ತಾನೆಂದರೆ:

ಅದಕ್ಕೆ ಕಾರಣ, ಆತ ದೇವೇಗೌಡರ ಮಗ. ಮತ್ತು ಅದು ಕುಮಾರಸ್ವಾಮಿಯ ಮಟ್ಟ.

ಇಂಥ ಕುಮಾರಸ್ವಾಮಿಯನ್ನು ಇಪ್ಪತ್ತು ತಿಂಗಳು ಮುಖ್ಯಮಂತ್ರಿಯನ್ನಾಗಿ ಸಹಿಸಿಕೊಳ್ಳಬೇಕು. ಅದಕ್ಕಿಂತ ಘೋರವೆಂದರೆ, ಆನಂತರ ಯಡಿಯೂರಪ್ಪನನ್ನು ಸಹಿಸಿಕೊಳ್ಳಬೇಕು. ಎಂಥ ಕೆಲಸ ಮಾಡಿದರಲ್ಲವೆ ದೇವೇಗೌಡರು?

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X