• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಾತಿ ಮೀಸಲಾತಿ : ರೊಕ್ಕ ಮೀಸಲಾತಿ : ಮತ್ತೊಂದು ಸಂಖ್ಯಾ ಮೀಸಲಾತಿ!

By Staff
|
Ravi Belagere on Thatskannada.com ರವಿ ಬೆಳಗೆರೆ
ಮೀಸಲಾತಿಗೆ ಸಂಬಂಧಿಸಿದಂತೆ ಅಲ್ಲಲ್ಲಿ ಪ್ರಕಟವಾಗುತ್ತಿರುವ ಲೇಖನಗಳನ್ನ ಓದುತ್ತಿದ್ದೇನೆ. ಕೆಲವೆಡೆ ಓದುಗರ ಪತ್ರಗಳ ಹೆಸರಿನಲ್ಲಿ ಪ್ರಕಟವಾಗುತ್ತಿರುವ ಕೆಲಸಕ್ಕೆಬಾರದ rhetoric ಕೂಡ ಗಮನಿಸಿದ್ದೇನೆ. ಆದರೆ ಮೊನ್ನೆ ಹೌದೇ ಹೌದು ಅಂತ ಅನ್ನಿಸಿದ್ದು ಹಳೇ ತಲೆಮಾರಿನ ಪತ್ರಕರ್ತ ಇಂದೂಧರ ಹೊನ್ನಾಪುರ ಅವರು ಮೀಸಲಾತಿಯ ಬಗ್ಗೆ ಬರೆದದ್ದನ್ನು ಓದಿದಾಗ. ಅವರ ಲೇಖನದಲ್ಲಿ ಪ್ರಸ್ತಾಪಿಸಿದ ಎಲ್ಲವನ್ನೂ ನಾನು ಒಪ್ಪಲಿಕ್ಕಿಲ್ಲ. ಉದಾಹರಣೆಗೆ, ಜಾತಿಗಳ ಸಂಖ್ಯಾಬಲದ ಆಧಾರದ ಮೇಲೆ ದೇಶದಲ್ಲಿ ನೌಕರಿಗಳನ್ನು ಕೊಡುವಂತಾಗಬೇಕು ಅಂತ ಬರೆಯುತ್ತಾರೆ ಇಂದೂಧರ ಹೊನ್ನಾಪುರ. ಕೇವಲ ಮೂರು ಪರ್ಸೆಂಟಿನಷ್ಟಿರುವ ಬ್ರಾಹ್ಮಣರಿಗೇಕೆ ಶೇಕಡಾ 70ರಷ್ಟು ನೌಕರಿಗಳು? ಅಂತ ಕೇಳಿದರೆ ಅದು ಸಮಂಜಸವಾದ ಪ್ರಶ್ನೆಯೇ. ನಲವತ್ತು ಪರ್ಸೆಂಟಿನಷ್ಟಿರುವ ಪರಿಶಿಷ್ಟರಿಗೆ ಅವರ ಜಾತಿಗೆ ಸರಿಸಮನಾಗಿ ಮೀಸಲಾತಿ ಕೊಡಿ ಎಂಬ ಮಾತೂ ಒಪ್ಪತಕ್ಕಂಥದೇ.

ಆದರೆ ರಾತ್ರೋರಾತ್ರಿ ಊರಿಗೆ ಊರನ್ನೇ, ಹಳ್ಳಿಗೆ ಹಳ್ಳಿಯನ್ನೇ, ಸೀಮೆಗೆ ಸೀಮೆಯನ್ನೇ ತಮ್ಮ ಧರ್ಮಕ್ಕೆ, ಜಾತಿಗೆ ಮತಾಂತರಗೊಳಿಸಿಕೊಳ್ಳುತ್ತಿರುವ ಕ್ರೆೃಸ್ತ ಮಿಷನರಿಗಳೂ, ಕೃಪಾಪೋಷಿತ ಮದರಸಾಗಳೂ ದೇಶಾದ್ಯಂತ ಕೆಲಸ ಮಾಡುತ್ತಿರುವಾಗ- ನಾಳೆ ಜಾತಿಗಳ ಸಂಖ್ಯಾಬಲದ ಮೇಲೆ ಮೀಸಲಾತಿ ಕೊಡುವ ಮಾತು ಸರಿ ಎನ್ನಿಸೀತೇ? ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇಸ್ಲಾಮೀಕರಣದ ಪ್ರಕ್ರಿಯೆಯನ್ನು ಗುರುತಿಸಲು ನೀವು ವಿಫಲರಾದರೆ ದೊಡ್ಡ ಮಟ್ಟದ ಅಪಾಯ ತಪ್ಪಿದ್ದಲ್ಲ. ಅದಕ್ಕೆ ಇಂಡೋನೇಷಿಯಾ, ಉಜ್ಬೆಕಿಸ್ತಾನ್‌, ತಜಕಿಸ್ತಾನದಂತಹ ಸಣ್ಣ ಸಣ್ಣ ರಾಷ್ಟ್ರಗಳ ಉದಾಹರಣೆ ಸಾಕು. ನೋಡನೋಡುತ್ತ ಈ ರಾಷ್ಟ್ರಗಳಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿಬಿಟ್ಟಿತು. ಮಸೀದಿಗಳೆದ್ದವು. ಮದರಸಾಗಳಾದವು. ಚೀನಾದಂತಹ ಪರಮ ಕರ್ಮಠ ಕಮ್ಯೂನಿಸ್ಟ್‌ ದೇಶ ಕೂಡ ತನ್ನ ಪ್ರಾಂತ್ಯಗಳಲ್ಲಿ ತಲೆಯೆತ್ತಿದ್ದ ಮುಸ್ಲಿಂ ಮೂಲಭೂತವಾದ ಕಂಡು ಥರಗುಟ್ಟಿಹೋಯಿತು.

ಇದರರ್ಥ ಮುಸ್ಲಿಮರು ದುಷ್ಟರು, ಧೂರ್ತರು ಅಂತ ಖಂಡಿತ ಅಲ್ಲ. ಆದರೆ ಅವರಲ್ಲಿ ಮತಾಂತರಗೊಳಿಸುವ zeal ಜಾಗತಿಕ ಮಟ್ಟದಲ್ಲಿ ಆರಂಭಗೊಂಡಿದೆ. ಯಾವುದೇ ಜಾತಿಯಲ್ಲಿ ಮತಾಂತರಗೊಂಡ ಹೊಸ ಮಂದಿ ಸೇರ್ಪಡೆಯಾದಾಗ ಹೊಸತೆರನಾದ ಅಪಾಯ ತಲೆಯೆತ್ತುತ್ತದೆ. Neo Convers ಅಂತ ಕರೆಸಿಕೊಳ್ಳುವ ಜನ(ಹೊಸದಾಗಿ ಒಂದು ಜಾತಿಗೆ ಸೇರಿದ ಜನ) ಆ ಜಾತಿಯ ಮೂಲ ಸದಸ್ಯರಿಗಿಂತ ತುಂಬ ಅಗ್ರೆಸಿವ್‌ ಆಗಿರುತ್ತಾರೆ. ಅಪಾಯಕಾರಿಗಳಾಗಿ ಪರಿಣಮಿಸುತ್ತಾರೆ. ಇವತ್ತು ಒಸಾಮಾ ಬಿನ್‌ ಲ್ಯಾಡೆನ್‌, ಕಾರ್ಯಾಚರಣೆ ನಡೆಸಿರುವುದು ಇಂಥ neo convertsನ ಸಹಾಯದಿಂದಲೇ. ಅಂಥದೊಂದು ಬೆಳಸು ಕಾಶ್ಮೀರದಲ್ಲಿ ಅಗಾಧ ಮಟ್ಟದ ಅನಾಹುತಗಳನ್ನು ಮಾಡಿದ್ದು ಗೊತ್ತೇ ಇರುವ ಸಂಗತಿ. ಮೇಲಾಗಿ ಇಸ್ಲಾಮ್‌ನ ತಿಳಿವಳಿಕೆಯನ್ನೇ ತಿರುಚಿ, ಖುರಾನ್‌ನ ಉದ್ದೇಶಗಳನ್ನೇ ಬದಲಿಸಿ ವಿನಾಕಾರಣದ ಹಿಂಸೆಗಳಿಗೆ ತೊಡಗಿ, ಜಗತ್ತಿನಾದ್ಯಂತ ತಮ್ಮ ಧರ್ಮದ(ಅದರಲ್ಲೂ ಷಿಯಾ-ಸುನ್ನಿ ಪ್ರಭೇದಗಳಿವೆ!) ಜನರನ್ನು ಹೆಚ್ಚಿಸಿಕೊಳ್ಳಲು ಹೊರಟಿರುವ ಪ್ರವೃತ್ತಿ ಬೆಳೆದಿರುವಾಗ, ನಾಳೆ ಸಂಖ್ಯಾಬಲದ ಮೇಲೆ ಮೀಸಲಾತಿ ಕೊಟ್ಟರೆ ಇಂದೂಧರರ ವಾದದ ಪರಿಣಾಮ ಏನಾಗಬಹುದು?

ಮೇಲೆ ಬರೆದ ಅಷ್ಟೂ ಸಾಲುಗಳನ್ನು ನೀವು ಪೆಂಟಕಾಸ್ಟ್‌ನಂತಹ ನೂರೆಂಟು ಕ್ರೆೃಸ್ತ ಮಿಷನರಿಗಳ ಮತಾಂತರ ಪ್ರಕ್ರಿಯೆಗಳಿಗೂ ಸರಿಹೊಂದಿಸಿಕೊಂಡು ಓದಬಹುದು. ಒಂದೆಡೆ ಮುಸ್ಲಿಮರು ಪ್ರಬಲರಾದರು ಅಂದ ಕೂಡಲೆ ಅಮೆರಿಕದಂತಹ ರಾಷ್ಟ್ರಗಳು ನೂರಾರು ಬೆನ್ನಿಹಿನ್‌ಗಳನ್ನ, ಹಲಲೂಯಾದಂಥ adhoc ಕ್ರೆೃಸ್ತ ಸಂಘಟನೆಗಳನ್ನ ಭಾರತದಂತಹ ರಾಷ್ಟ್ರಗಳ ಮೇಲೆ ಎರಗಲು ಬಿಡುತ್ತಿವೆ. ಇಂದೂಧರ ಹೊನ್ನಾಪುರರಂತಹ ಮಿತ್ರರಿಗೆ ನಾನು ಮತಾಂತರಿಗಳ ಬಗ್ಗೆ ಮಾತಾಡಿದ ತಕ್ಷಣ ನಾನು ಆರೆಸ್ಸೆಸ್ಸು ಅಂತ ಅನ್ನಿಸಬಹುದು. Let me not bother.

ಆದರೆ ಒಂದು ಮಾತು ಸತ್ಯ. ಭಾರತದ ಬಡತನ, ಆರ್ಥಿಕ ಅಸಮಾನತೆ, ಕ್ರೂರ ಜಾತಿ ವ್ಯವಸ್ಥೆ, ಜಾಗತೀಕರಣ-ಇವುಗಳ ಪರಿಣಾಮವಾಗಿ ಕ್ರೆೃಸ್ತ ಹಾಗೂ ಮುಸ್ಲಿಂ ಜನಸಂಖ್ಯೆ ವ್ಯಾಪಕವಾಗಿ ಬೆಳೆಯುತ್ತಿದೆ. ಬೆಳೆಯುತ್ತದೆ. ಒಬ್ಬ ಹುಟ್ಟಾ ಮುಸಲ್ಮಾನ ಅಥವಾ ಕ್ರೆೃಸ್ತ ಈ ದೇಶಕ್ಕೆ ಯಾವತ್ತೂ ದ್ರೋಹ ಬಗೆದಿಲ್ಲ. ಆದರೆ ಒಬ್ಬ neo convertನಲ್ಲಿ ಯಾವ ಮಟ್ಟದ ಮತಾಂಧತೆಯನ್ನೂ ಹುಟ್ಟಿ ಹಾಕಬಹುದು. ಅವರಿಗೆ ಎಂಥ ಮೀಸಲಾತಿ ಕೊಡೋಣ?

ಇನ್ನೊಂದು ಸಮಸ್ಯೆ ಇಂದೂಧರ ಅವರದು. ಕೆಲವು ಬಲಿಷ್ಠ ಜಾತಿಗಳು ರಾಜಕೀಯ ಕುತಂತ್ರ ಮಾಡಿ ಹಿಂದುಳಿದವರ ಪಟ್ಟಿಗೆ ಸೇರಿಕೊಂಡು ಬಿಟ್ಟಿವೆ. ಆ ಜಾತಿಗಳವರು ಈಗ ಮೀಸಲಾತಿ ಪಡೆದು, ನಿಜವಾದ ಪರಿಶಿಷ್ಟರ-ಹಿಂದುಳಿದವರ ನೌಕರಿಗಳನ್ನು ಆಕ್ರಮಿಸಿಕೊಂಡು ಬಿಡುತ್ತಾರೆ- ಅಂತ ಇಂದೂಧರ ಹೊನ್ನಾಪುರ ಮರಗುತ್ತಾರೆ. ಮಾಲೇರು ಎಂಬ ಬ್ರಾಹ್ಮಣ ಉಪ ಪಂಗಡದ ಕೆಲವರು ತಮ್ಮನ್ನು ತಾವು ಹಿಂದುಳಿದ(ನಿಜವಾದ ಶೂದ್ರರು) ಮಾಲೇರರು ಅಂತ ಘೋಷಿಸಿಕೊಂಡು ನೌಕರಿ ಪಡೆದ ಉದಾಹರಣೆಗಳಿವೆ.

ದುರಂತ ಅಂದರೆ, ಬ್ರಾಹ್ಮಣ ಮಾಲೇರರನ್ನು ಇತರೆ ಬ್ರಾಹ್ಮಣರೇ ಶೂದ್ರರನ್ನು ನೋಡಿದಂತೆ ನೋಡುತ್ತಾರೆ. ಉಳಿದಂತೆ ಕೆಲವು ಜಂಗಮರು ತಮ್ಮ ಉಪಪಂಗಡ ಸುಳ್ಳು ಹೇಳಿ ನೌಕರಿಗಳನ್ನು ಪಡೆದಿರುವುದುಂಟು. ಕುರುಬರಲ್ಲಿ ಕೆಲವರು ಜೇನು ಕುರುಬ, ಕಾಡು ಕುರುಬ ಅಂತ ಹೇಳಿಕೊಂಡು ನೌಕರಿ ಪಡೆದಿರುವುದುಂಟು. ಆದರೆ ಇಂಥವರ ಸಂಖ್ಯೆ ತೀರ ಚಿಕ್ಕದು. ಉಪ್ಪಾರ, ಸುಡುಗಾಡು ಸಿದ್ಧ, ಜೋಗಿ ಮುಂತಾದ ಮಿನಿಸ್ಕೂಲ್‌ ಮೈನಾರಿಟಿಯ ಜನ ಅತ್ತ ರಾಜಕೀಯ ಪ್ರಾಬಲ್ಯವೂ ಇಲ್ಲದೆ, ಇತ್ತ ಸರಿಯಾದ ಮೀಸಲಾತಿ ಪಟ್ಟಿಗಳಲ್ಲೂ ಕಾಣಿಸಿಕೊಳ್ಳದೆ ನರಳುತ್ತಾರಲ್ಲ? ಅವರನ್ನು ರಕ್ಷಿಸುವವರು ಯಾರು? ಅವರ ಜನಸಂಖ್ಯೆ ತೀರ ಚಿಕ್ಕದು. ಸಂಖ್ಯಾಬಲದ ಮೀಸಲಾತಿ ಅನ್ವಯಿಸಿದರೆ ಅವರ ಗತಿಯೇನು?

ಆದರೆ ಇಂದೂಧರ ಹೊನ್ನಾಪುರ ಪ್ರಸ್ತಾಪಿಸುವ ಬಹುಮುಖ್ಯವಾದ್ದೊಂದು ವಿಷಯ ಇಲ್ಲಿ ಚರ್ಚೆಗೆ ಅರ್ಹ. ನೀವು ಶೇಕಡಾ 50 ಮಾರ್ಕು ಬಂದ ದಲಿತನಿಗೆ ಸೀಟು ಕೊಟ್ಟರೆ ಕೆಂಡ ಕಾರುತ್ತೀರಿ. ಆದರೆ ಅದೇ ಶೇಕಡಾ 50 ಮಾರ್ಕು ತಂದುಕೊಂಡ ಶ್ರೀಮಂತನ ಮಗನೊಬ್ಬ ಲಕ್ಷಗಟ್ಟಲೆ ಕ್ಯಾಪಿಟೇಷನ್‌ ಹಣ ಕೊಟ್ಟು ಸೀಟು ಪಡೆಯುತ್ತಾನಲ್ಲ? ಆಗ ಯಾಕೆ ಬಾಯಿ ಮುಚ್ಚಿಕೊಂಡಿರುತ್ತೀರಿ? ಎಂದು ಪ್ರಶ್ನಿಸುತ್ತಾರೆ. ಅತ್ಯಂತ ಸೂಕ್ತ, ನ್ಯಾಯಬದ್ಧ ಪ್ರಶ್ನೆಯಿದು.

ಮೀಸಲು ವಿರೋಧಿ ಚಳವಳಿಯಷ್ಟು ಪ್ರಬಲವಾಗಿ ನಾವು ಕ್ಯಾಪಿಟೇಷನ್‌ ವಿರೋಧಿ ಚಳವಳಿ ಮಾಡಲಿಲ್ಲ. ಶತದಡ್ಡರು ದುಡ್ಡುಕೊಟ್ಟು ಡಾಕ್ಟರಾದರೆ, ಇಂಜಿನೀಯರ್‌ ಆದರೆ ಆ ಬಗ್ಗೆ ನಾವು ತಕರಾರೇ ಎತ್ತಲಿಲ್ಲ. ದೇಶಾದ್ಯಂತ ಅಂಥ ದಡ್ಡ ವೈದ್ಯರನ್ನ, ಇಂಜಿನೀಯರ್‌ಗಳನ್ನ ಪ್ರತೀ ವರ್ಷ ಸೃಷ್ಟಿಸುವ ಕಾಲೇಜುಗಳಿವೆ. ಅಲ್ಲಿ ಓದಿ ಬಂದ ದಡ್ಡರಿಗೆ, ಅದೇ ದುಡ್ಡಿನ ಬಲದಿಂದಾಗಿ ಸರ್ಕಾರಿ ನೌಕರಿಗಳೂ ಸಿಕ್ಕುತ್ತಿವೆ. ದಲಿತರ ಬಗ್ಗೆ ಕುಹಕ ಮಾಡುವಾಗ eighteen percent ಅನ್ನುವಂತೆ ಈ ರೊಕ್ಕಸ್ತ ದಡ್ಡರ ಬಗ್ಗೆ ನಾವೇಕೆ payment seat doctors ಅನ್ನುವುದಿಲ್ಲ? ದಡ್ಡತನವೇ ದೇಶದ ಪ್ರಗತಿಗೆ ಮಾರಕ ಅನ್ನೋದಾದರೆ ಶ್ರೀಮಂತ ದಡ್ಡತನ ಮತ್ತೂ ಮಾರಕವಲ್ಲವೇ?

ಇಂದೂಧರ ಹೊನ್ನಾಪುರ ಎತ್ತುವ ಈ ಪ್ರಶ್ನೆ ಅತ್ಯಂತ ಸಮಂಜಸ ಅನ್ನಿಸುತ್ತದೆ. ಮೀಸಲಾತಿಯ ವಿರುದ್ಧ ದನಿಯೆತ್ತುವವರು ಈ ರೊಕ್ಕದ ಮೀಸಲಾತಿಯನ್ನು ಮೊದಲು ವಿರೋಧಿಸಬೇಕು. ಅದು ಸಾಧ್ಯವೇ?

ನಿಮಗೆ ಆಶ್ಚರ್ಯವಾಗಬಹುದು: ಆಂತರ್ಯದ ಮರ್ಮವೇನು ಅಂತ ಗೊತ್ತಿರುವವರು ಒಬ್ಬ ಡಾಕ್ಟರನ ಬಳಿಗೆ ಹೋದಾಗ ನೀವು ಪಿ.ಜಿ., ಮಾಡಿದ್ದು ಎಲ್ಲಿ? ಅಂತ ಡಾಕ್ಟರನನ್ನೇ ಕೇಳುತ್ತಾರೆ. ಲಕ್ಷಗಟ್ಟಲೆ ಹಣ ತೆಗೆದುಕೊಂಡು ಸೀಟು ಕೊಡುವ, ಎಂ.ಡಿ., ಎಂ.ಎಸ್‌., ಡಿಗ್ರಿಗಳನ್ನು ಮಾರುವ ಅನೇಕ ನಟೋರಿಯಸ್‌ ಕಾಲೇಜುಗಳು ಕರ್ನಾಟಕ ಕರ್ನಾಟಕದಲ್ಲಿ ಕೆಲವಾರಿವೆ. ಅಂಥ ಕಾಲೇಜುಗಳ ಪೈಕಿ ಒಂದರಲ್ಲಿ ಓದಿದ್ದೇನೆ ಅಂತ ಡಾಕ್ಟರು ಹೇಳಿದರೆ, ತಕ್ಷಣ ಆತನ ಕೈಯಿಂದ ಚಿಕಿತ್ಸೆ ಪಡೆಯುವುದನ್ನು ರದ್ದು ಮಾಡಿಕೊಂಡು ವಾಪಸು ಬರುವವರಿದ್ದಾರೆ. ಇದು ರೊಕ್ಕದ ಮೀಸಲಾತಿಯ ಪರಿಣಾಮವೇ ಹೊರತು ಮತ್ತೇನಲ್ಲ. ಅಸಮಾನತೆಯೆಂಬುದು ಇಂಗ್ಲಂಡ್‌, ಫ್ರಾನ್ಸ್‌, ಜರ್ಮನಿ, ಜಪಾನ್‌, ರಷಿಯಾ, ಚೀನಾ-ಎಲ್ಲೆಡೆಗೂ ಇದೆ. ಅದನ್ನು ಸರಿಪಡಿಸಲು ಅಲ್ಲೂ ಚಳವಳಿಗಳು, ಪ್ರಯತ್ನಗಳು ನಡೆದಿವೆ. ಆದರೆ ಮೇಲೆ ಹೇಳಿದ ಯಾವ ದೇಶದಲ್ಲೂ ಮೀಸಲಾತಿ ಇಲ್ಲ.

ಅಮೆರಿಕದಲ್ಲಿ ಕರಿಯರಿಗೆ ಇಂತಿಷ್ಟು ಹುದ್ದೆ ಕೊಡಲೇಬೇಕು ಎಂಬ ನಿಯಮವಿಲ್ಲ. ಆದರೆ ತಮ್ಮ ಹುದ್ದೆಗಳ ಅವಶ್ಯಕತೆಗೆ ಕರಿಯರನ್ನು ಸಿದ್ಧಪಡಿಸುವ, ಬೆಳೆಸುವ ಪ್ರಯತ್ನಗಳು ಜಾರಿಯಲ್ಲಿವೆ. ಅವಾದರೂ ಕೂಡ, ಅತ್ಯಂತ ಮಾನವೀಯ ಪ್ರಯತ್ನಗಳೇನಲ್ಲ. ಅವು ಸ್ಪಷ್ಟ, ಸರಳ ವ್ಯಾಪಾರೀ ಪ್ರಯತ್ನಗಳು. ಒಬ್ಬ ಬುದ್ಧಿವಂತ, ಭಾರತೀಯ ಸಾಫ್ಟ್‌ವೇರ್‌ ಇಂಜಿನಿಯರ್‌ ಕಡಿಮೆ ರೇಟಿಗೆ ಸಿಕ್ಕಂತೆಯೇ, ಒಬ್ಬ ಕರಿಯ ಸಿಕ್ಕರೆ ಅಮೆರಿಕನ್ನರಿಗೆ ಬೇಕು. ಅಷ್ಟೇ ಹೊರತು, ದಡ್ಡ ಕರಿಯ-ಕೆಲಸ ಮಾಡಲಾಗದ ಕರಿಯ ‘ನಾನು ಕರಿಯನೆಂಬ ಕಾರಣಕ್ಕೆ ನನಗೆ ಕೆಲಸ ಕೊಡಿ’ ಅಂತ ಕೇಳಿದರೆ ಅಮೆರಿಕ ತಿರುಗಿ ಕೂಡ ನೋಡುವುದಿಲ್ಲ. ವ್ಯಾಪಾರ ಯಾವತ್ತಿದ್ದರೂ ವ್ಯಾಪಾರವೇ. ಅಮೆರಿಕನ್ನರು ಲಾಭವಿಲ್ಲದೆ ಜಗತ್ತಿಗೆ ಕೊಟ್ಟದ್ದು ಏಡ್ಸ್‌ನಂಥ ಖಾಯಿಲೆಯನ್ನು ಮಾತ್ರ!

‘ಅದೆಲ್ಲ ಇರಲಿ ಸರ್‌, ಮೀಸಲಾತಿಗೆ ಅಂತ ಅರ್ಧ ಸೀಟು ಹೋದವು. ಶ್ರೀಮಂತರು ಬಂದು ಇನ್ನರ್ಧ ಸೀಟು ಖರೀದಿಸಿದರು. ವರ್ಷವಿಡೀ ಓದಿ 98ಪರ್ಸೆಂಟ್‌ ಮಾರ್ಕು ತಂದುಕೊಂಡಿದ್ದೇನೆ. ನಂಗೆ ಸೀಟಿಲ್ಲವಲ್ಲ, ಏನು ಮಾಡಲಿ?’ ಅಂತ ಹುಡುಗನೊಬ್ಬ ಬಂದು ಕೇಳಿದರೆ, ನನ್ನಲ್ಲಿ ಉತ್ತರವಿಲ್ಲ. ಬಹುಶಃ ಇಂದೂಧರರಲ್ಲೂ ಇಲ್ಲ.

‘ಏನೇ ಮೀಸಲಾತಿ ಕೊಟ್ಟರೂ, ನನ್ನ ಗುಂಪಿನ ಮಧ್ಯೆಯೇ ನಾನು ಶತಪ್ರಯತ್ನ ಮಾಡಿ, ಅವರೆಲ್ಲರಿಗಿಂತಲೂ ಹೆಚ್ಚಿನ ಮಾರ್ಕ್‌ ತಂದು, ನನಗೆ ಸೀಟು ಕೊಡಿ ಅಂತ ಕೇಳುತ್ತಿದ್ದೇನೆ. ನನ್ನ ಶ್ರಮಕ್ಕೆ ಅರ್ಥವಿಲ್ಲವೆ?ನನಗೆ ದೊರಕಬೇಕಿದ್ದ ಸೀಟು ಜಾತಿಯ ಸಂಖ್ಯಾಬಲದ ಆಧಾರದ ಮೇಲೆ ಕೊಟ್ಟ ಮೀಸಲಾತಿಯಿಂದಾಗಿ ಮತ್ತೊಬ್ಬ ಹಿಂದುಳಿದ ಜಾತಿಯವನ ಪಾಲಾಯಿತು. ನನ್ನ ಗತಿಯೇನು’ ಅಂತ ಒಬ್ಬ ಅಗಸ, ಒಬ್ಬ ದೊಂಬ, ಒಬ್ಬ ಕ್ಷೌರಿಕ ಕೇಳಿದರೆ ಅದಕ್ಕೆಲ್ಲಿ ಉತ್ತರವಿದೆ?

ಈ ಎಲ್ಲಾ ಸಮಸ್ಯೆಗಳ ಮೂಲಕಾರಣ ಜನಸಂಖ್ಯೆ! ಅದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಮುಸ್ಲಿಮರಿಗೆ ನಾಲ್ಕು ಮದುವೆ, ಹದಿನಾರು ಮಕ್ಕಳು ಮಾಡಿಕೊಳ್ಳಲಿಕ್ಕೆ ಅವಕಾಶವಿದೆ. ‘ರೀ ಬೆಳಗೆರೇ, ಈ ಕಾಲದಲ್ಲಿ ಅದೆಲ್ಲ ಯಾರ್ರೀ ಮಾಡ್ಕೋತಾರೇ? ಒಂದು ಮಗುನ ಸಾಕೋದೇ ಎಷ್ಟು ಕಷ್ಟ ಇದೆ ಗೊತ್ತಾ?’ ಅಂತ ಇಂದೂಧರರಂಥ ಸ್ನೇಹಿತರೇ ಗೊಣಗುತ್ತಾರೆ. ‘ಇಲ್ಲೊಬ್ಬ ಮುಸ್ಲಿಮನಿಗೆ ಮೂವರು ಹೆಂಡಿರು, ಹನ್ನೆರಡು ಮಕ್ಕಳು ಇವೆ. ನೋಡ ಬನ್ನಿ ’ ಅಂತ ಕರೆದರೆ, ಛೀ ಬೆಳಗೆರೆ ಆರೆಸ್ಸೆಸ್ಸು!

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಪೂರಕ ಓದಿಗೆ :

ಖಾಸಗಿ ವಲಯದಲ್ಲೂ ಮೀಸಲಾತಿ ಬೇಕು ಅಂತ ಕಾನೂನು ತಂದರೆ ಏನಂತೀರಿ?

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more