• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸತ್ತುಹೋದ ಅಮ್ಮನ ಕನ್ನಡಕ ದೇವರ ಗೂಡಲ್ಲಿ!

By Staff
|
Ravi Belagere on Thatskannada.com ರವಿ ಬೆಳಗೆರೆ

ಅದೊಂದು ಸರಳ ಐಡಿಯಾ ಅಷ್ಟೆ.

ಅಮ್ಮನನ್ನು ದತ್ತು ತಗೊಳ್ಳೋದು! ಈ ಹಿಂದೆ ತ್ಸುನಾಮಿ ಸಾವುಗಳಾದಾಗ ತುಂಬ ಜನ ಹೆಣ್ಣು ಮಕ್ಕಳು ನನಗೆ ಫೋನು ಮಾಡಿ ‘ಯಾವುದಾದರೂ ಅನಾಥ ಮಗು ಇದ್ರೆ ನಂಗೆ ಕೊಡಿಸ್ತೀರಾ’ ಅಂತ ಕೇಳುತ್ತಿದ್ದರು.

ಈ ತನಕ ಯಾರೂ ನಂಗೊಬ್ಬ ಅಮ್ಮನನ್ನು ದತ್ತಕಕ್ಕೆ ಕೊಡಿಸುತ್ತೀರಾ ಅಂತ ಕೇಳಿಲ್ಲ. ಏಕೆಂದರೆ, ಮಗು ಬೆಳೆಯುತ್ತದೆ. ಅಮ್ಮ ಬೆಳೆಯುವುದಿಲ್ಲ. ಆಕೆಯದು ಇಳಿ ಸಂಜೆಯ ಹಂತ. ಬೆಳೆಯಲಾರದ್ದನ್ನು ಮನುಷ್ಯ ಇಷ್ಟಪಡುವುದಿಲ್ಲ. ದತ್ತು ಮಗ ಆಸ್ತಿಗೆ ವಾರಸುದಾರನಾಗುತ್ತಾನೆ. ಕೊನೆಯ ಘಳಿಗೆಯಲ್ಲಿ ಬಾಯಿಗೆ ನೀರು ಬಿಡುತ್ತಾನೆ. ಸತ್ತಮೇಲೆ ಪಿಂಡ ಹಾಕುತ್ತಾನೆ. ಇವೆಲ್ಲ ದೂರದ ಮಾತುಗಳಿರಬಹುದು : ಈಗ ಸದ್ಯಕ್ಕೆ ಒಂದು ಮಗುವನ್ನು ಅಡಾಪ್ಟ್‌ ಮಾಡಿಕೊಂಡರೆ ಆಡಲಿಕ್ಕೊಂದು ಮಗು ಸಿಗುತ್ತಲ್ಲ? ಅದನ್ನು ನಮಗೆ ಬೇಕಾದ ಹಾಗೆ ಬೆಳೆಸಬಹುದು.

A single old woman is always in need of some helpನಂಗೊತ್ತು, ದತ್ತಕಕ್ಕೆ ಮಕ್ಕಳನ್ನು ತೆಗೆದುಕೊಂಡವರು ಅನುಭವಿಸಿದ ರಗಳೆಗಳು. ಅನಾಥಮಗುವನ್ನು ತಂದು ಸಾಕಿದವರ ಫಜೀತಿಗಳನ್ನು ನೋಡಿದ್ದೇನೆ. ಹೆತ್ತ ಮಕ್ಕಳೇ ‘ತೋಬಾತೋಬಾ ಅನ್ನಿಸಿಬಿಡುವಾಗ, ತಂದು ಸಾಕಿದ ಮಕ್ಕಳ ಬಗ್ಗೆ ಹೇಳುವುದೇನಿದೆ?’

ಆದರೆ ಅಮ್ಮನನ್ನು ದತ್ತು ತೆಗೆದುಕೊಂಡವರ್ಯಾರೂ ತಮ್ಮ ಅನುಭವಗಳನ್ನು ಬರೆದಿಲ್ಲ. ಇಷ್ಟಕ್ಕೂ ದತ್ತಕಕ್ಕೆ ಅಮ್ಮ ಸಿಗುತ್ತಾಳಾ ಎಂಬುದೇ ವಿಚಿತ್ರ ಪ್ರಶ್ನೆ. ನಮ್ಮ ಸಂಸ್ಥೆಯಿಂದ ಸ್ಕಾಲರ್‌ಷಿಪ್‌ ಪಡೆಯುವ ಹುಡುಗರು ಮಾರ್ಕ್ಸ್‌ ಕಾರ್ಡ್‌ಗಳೊಂದಿಗೆ ಬರುತ್ತಾರೆ. ಮೊನ್ನೆ ಒಬ್ಬ ಹುಡುಗನ ರ್ಯಾಂಕಿಂಗ್‌ ಮೂರು ಸಾವಿರದೊಳಗೇ ಬಂದಿತ್ತು. ಕರ್ನಾಟಕದ ಉತ್ತಮ ಕಾಲೇಜೊಂದರಲ್ಲಿ ಅವನಿಗೆ ಸೀಟು ಸಿಗುತ್ತೆ ಫೀಜು ಕಟ್ಟಲು ಹಣ ಇಸಿದುಕೊಂಡು ಹೋಗಲು ಬಂದಿದ್ದ. ಕಾಲಿಗೆ ನಮಸ್ಕಾರ ಮಾಡುತ್ತೀನಿ ಅಂದ. ಬೈದೆ. ಹತ್ತಿರ ಕರೆದು ತಬ್ಬಿಕೊಂಡು ಬೆನ್‌ತಟ್ಟಿ, ಕೈಗಳು ಕಾಲಿಗಿಂತ ಸುಪೀರಿಯರ್‌ ಆದ್ದರಿಂದ ಕೈ ಕುಲುಕು, ಸಾಕು ಅಂದೆ. ನೀನು ಬಡವನಂತಾಡುವುದು ನನಗಿಷ್ಟವಿಲ್ಲ. ನನ್ನ ರಕ್ಷಣೆಯಲ್ಲಿರುವ ಹುಡುಗ ನೀನು. ಮುಂದೆ ನೂರು ಮಕ್ಕಳನ್ನು ಸಾಕುವಷ್ಟು ಶ್ರೀಮಂತನಾಗಬೇಕು ಅಂದೆ. ಹುಡುಗ ಕುಣಿಯುತ್ತ ಹೋದ.

ಆದರೆ ಆಕೆ ಬರುತ್ತಾಳೆ. ಬಾಗಿಲಲ್ಲೇ ಆಕೆಯ ದನಿ ಕೇಳಿಸುತ್ತದೆ. ನಾನು ಮಗನಾಗಿ ಹೋಗುತ್ತೇನೆ. ಸಂದರ್ಶಕರು ಕೊಡುವ ಛೇರುಗಳ ಮಧ್ಯೆ ಕುಳಿತಿರುತ್ತಾಳೆ. ನಿವೇದಿತಾ ಕರೆದು ಮಾತನಾಡಿಸುತ್ತಾಳೆ. ಆಕೆಯ ಮಗಳಿಗೆ ಕ್ಷಯವಿತ್ತು. ಔಷಧ ಕೊಡಿಸಿದೆವು. ಆದರೂ ಆಕೆ ತೀರಿಹೋದಳು. ಈಗ ಅಮ್ಮನಿಗೆ ಯಾರೂ ಇಲ್ಲ. ಬಾಡಿಗೆಗಿದ್ದ ಮನೆ ಬಿಡಬೇಕಾಗಿದೆ. ಅದರ ಮಾಲೀಕರಿಗೇ ಏನೋ ಬಡತನ. ಮನೆ ಮಾರಿಬಿಟ್ಟಿದ್ದಾರೆ. ಅದನ್ನು ಕೊಂಡವರು ಈಗ ಕೆಡುವುತ್ತಾರೆ. ಅಮ್ಮ ಎಲ್ಲಿರಬೇಕು?

ಅಂಥ ಅಮ್ಮಂದಿರು ನಿಮ್ಮ ಕಣ್ಣಿಗೆ ಬಿದ್ದಿಲ್ಲವಾ? ಬಿದ್ದಿರಬಹುದು. ನೀವೂ ಒಳ್ಳೆಯವರೇ. ಸಹಾಯ ಮಾಡಿರಬಹುದು. ಆದರೆ ದತ್ತಕಕ್ಕೆ ಆಕೆಯನ್ನು ತೆಗೆದುಕೊಳ್ಳಬಹುದು ಅಂತ ಅನಿಸಿರಲಾರದೇನೋ? ಪ್ರಯತ್ನಿಸಿ ನೋಡಿ. ಆಕೆಯನ್ನು ತಂದು ಮನೆಯಲ್ಲಿಟ್ಟುಕೊಳ್ಳುವುದು ಕಷ್ಟ. ಆಕೆಗೂ ಅದು ಹೊಂದಿಕೆಯಾಗಲಾರದು. ನಿಮ್ಮ ಮನೆಯವರು ಒಪ್ಪಲಿಕ್ಕಿಲ್ಲ. ನಿಮಗೆ ನಿಮ್ಮವೇ ನೂರೆಂಟಿರುತ್ತವೆ ಸಮಸ್ಯೆ. ಆದರೆ, ಒಂದು ಸಲ ಆಕೆಯಾಂದಿಗೆ ಸುಮ್ಮನೆ ಹೋಗಿ ಆಕೆಯ ಮನೆ ನೋಡಿಕೊಂಡು ಬನ್ನಿ. ಇನ್ನೊಂದು ಸಲ ಹೋದಾಗ ಹಣ್ಣು ತಗೊಂಡು ಹೋಗಿ ಕೊಡಿ. ಆಕೆ ಪೂಜೆ ಮಾಡುವ ದೇವರ ಫೋಟೊ ಕೊಂಡು, ಅದಕ್ಕೆ ಫ್ರೇಮು ಹಾಕಿಸಿಕೊಂಡು ಒಯ್ದು ಕೊಡಿ. ಸೀರೆ, ಮಾತ್ರೆ, ಆಕೆ ಮನೆಯ ಲೈಟ್‌ ಬಿಲ್ಲು, ಒಂದು ನಾಟಕದ ಟಿಕೀಟು -ಅಮ್ಮನ ಸಂತೋಷಕ್ಕೆ ಅದಕ್ಕಿಂತ ಇನ್ನೇನು ಬೇಕು?

ನೀವ್ಯಾರೋ ಒಬ್ಬರು ಆ ದಿಕ್ಕಿಲ್ಲದ ಜೀವಕ್ಕೆ ಮಗನಾಗಿ, ಮಗಳಾಗಿ ಆಗಾಗ ಬಂದು ಹೋಗುತ್ತೀರಿ ಎಂಬುದೇ ಆಕೆಯ ದೊಡ್ಡ ಸಂತೋಷ. ಅಷ್ಟೇ ಅಲ್ಲ, ಈ ಅನಾಥ ವೃದ್ಧೆಯ ಮನೆಗೆ ನೀವು ಬರುತ್ತೀರುತ್ತೀರಿ ಎಂಬ ಕಾರಣಕ್ಕೆ ಅಕ್ಕಪಕ್ಕದವರೂ ಆಕೆಯನ್ನು ಗೌರವಿಸುತ್ತಾರೆ, ಜೋಪಾನ ಮಾಡುತ್ತಾರೆ. ಅಟ್‌ ಲೀಸ್ಟ್‌ ತೊಂದರೆ ಕೊಡುವುದನ್ನು ನಿಲ್ಲಿಸುತ್ತಾರೆ. ಸಾಧ್ಯವಾದರೆ ನಿಮ್ಮ ಫೋನ್‌ ನಂಬರು ಆಕೆಗೆ ಕೊಟ್ಟು ಬನ್ನಿ. ‘ಏನಾದರೂ ಬೇಕಾದರೆ, ತೊಂದರೆ ಇದ್ದರೆ ನಂಗೆ ಫೋನ್‌ ಮಾಡು’ ಅಂತ ಹೇಳಿ ಬನ್ನಿ. ಆ ವೃದ್ಧ ಜೀವಕ್ಕಾಗುವ ಆನಂದವೇ ಬೇರೆ.

ಆಕೆಯನ್ನು ತಿದ್ದಲು ಹೋಗಬೇಡಿ. ವಿಪರೀತ ಆಸಕ್ತಿಯಿಂದ ಆಕೆಯ ಹಿಂದಿನ ಬದುಕನ್ನು ಕೆದಕಲು ಹೋಗಬೇಡಿ. ಮುದುಕಿಯ ಸಿಟ್ಟು-ಸೆಡವು-ಸಣ್ಣತನ ಸಹಿಸಿಕೊಳ್ಳಿ. ಕೆಲವರು ಮನುಷ್ಯರನ್ನೇ ಸೇರದಂಥ ಮಾನಸಿಕ ಸ್ಥಿತಿಯಲ್ಲಿರುತ್ತಾರೆ. ಅಂಥವರಿಗೆ ದೂರ ನಿಂತೇ ನೆರವಾಗಿ. ಹತ್ತಿರದ ಡಾಕ್ಟರರೊಬ್ಬರನ್ನು ಪರಿಚಯ ಮಾಡಿಕೊಡಿ. ಗ್ಯಾಸು, ಸೀಮೆ ಎಣ್ಣೆ, ರೇಷನ್ನು -ನಿಮ್ಮ ಕೈಲಿ ಸಾಧ್ಯವಾದಷ್ಟು ತಂದುಹಾಕಿ. ಇದನ್ನೆಲ್ಲ ಮಾಡುತ್ತಿರುವ ಹೊತ್ತಿನಲ್ಲಿ ಒಂದು ಸಂಗತಿ ನಿಮಗೆ ನೆನಪಿರಲಿ : ಆಕೆಗೆ ನೀವೊಂದು ಕಂಫರ್ಟ್‌ ಕೊಡುತ್ತಿದ್ದೀರಿ, ಅಷ್ಟೆ. ಆಕೆಯನ್ನು ಋಣದಲ್ಲಿ ಕೆಡವಿಕೊಳ್ಳಲು ಪ್ರಯತ್ನ ಮಾಡದಿರಿ. ಇಳಿಗಾಲ ತಲುಪಿದಾಕೆಗೆ ಆಕಸ್ಮಾತ್‌ ಸಾವು ಬರುವುದಾದರೆ, ಯಾತನೆಯಿಲ್ಲದೆ-ಒಂಟಿತನ ಕಾಡದಂತಹ ಒಂದು ನೆಮ್ಮದಿವಂತ ಸಾವು ಕಲ್ಪಿಸಿಕೊಡಲು ಸಹಾಯಕರಾಗಿ.

ಮಕ್ಕಳನ್ನು ದತ್ತು ತಗೊಂಡರೆ, ಅವುಗಳೆಡೆಗೆ ನಮ್ಮ ಆಸೆ, ನಿರೀಕ್ಷೆಗಳು ಬೆಳೆಯುತ್ತವೆ. ಅವು ಕೂಡ ಅಷ್ಟೆ ; ಮಕ್ಕಳಾಗಿದ್ದಷ್ಟು ಕಾಲ ಮಾತ್ರ ಅನ್‌ಕಂಡೀಷನಲ್‌ ಲವ್‌ ಕೊಡಮಾಡುತ್ತವೆ. ಬೆಳೆಯುತ್ತ ಬೆಳೆಯುತ್ತ ಅವೂ ಸ್ವಾರ್ಥಿಗಳೇ! ಆದರೆ ಅಡಾಪ್ಟೆಡ್‌ ಅಮ್ಮನ ಸ್ವಾರ್ಥ ಚಿಕ್ಕದು, ಅದರ ಅವಧಿಯೂ ಚಿಕ್ಕದು. ನಮ್ಮ ಕಣ್ಣೆದುರಿನಲ್ಲೇ ಸತ್ತು ಹೋಗುವ ಅಮ್ಮ ನಮ್ಮಲ್ಲೊಂದು ದಿವ್ಯವಾದ ಸಮಾಧಾನವನ್ನಷ್ಟೇ ಉಳಿಸಿಹೋಗುತ್ತಾಳೆ. ತೀರಿಕೊಂಡ ಅಂಥ ಅಮ್ಮನ ಹಳೆಯ ಕನ್ನಡಕವನ್ನು ತಂದು ನಿಮ್ಮ ಮನೆಯ ದೇವರ ಗೂಡಿನಲ್ಲಿ ಇಟ್ಟುಕೊಳ್ಳಿ. ಅಮ್ಮ ದೇವರಾಗಿ ನಿಮ್ಮೊಂದಿಗಿರುತ್ತಾಳೆ.

ಅದಕ್ಕಿಂತ ಬೇರೇನು ಬೇಕು? ಬೇಕೆನಿಸಿದರೆ ಇನ್ನೊಬ್ಬ ಅಮ್ಮ ಸಿಗುತ್ತಾಳೆ.

(ಸ್ನೇಹ ಸೇತು : ವಿಜಯ ಕರ್ನಾಟಕ!)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more