ಬಂದಿರುವ ಖಾಯಿಲೆಗೆ ಎಷ್ಟೂಂತ ಹೆದರೋದು ಹೇಳಿ?
ಈ ಹಾಗಲ, ನಿತ್ಯಪುಷ್ಪ ಇವೆಲ್ಲ absolutely ಕೆಲಸವೇ ಮಾಡುವುದಿಲ್ಲ. ಸುಮ್ಮನೆ ಒಪ್ಪದ ಕಹಿಯನ್ನು ತಿಂದು-ಕುಡಿದು ಹಿಂಸೆ ಪಡುವುದಷ್ಟೆ ಬಂತು. ನಿಜಕ್ಕೂ ಮಧುಮೇಹಕ್ಕೆ ಔಷಧಿಯಾಗಿ ಕೆಲಸ ಮಾಡುವ ಏಕೈಕ ವಸ್ತವೆಂದರೆ...
- ರವಿ ಬೆಳಗೆರೆ
ಮೊನ್ನೆ ಡಯಾಬಿಟಿಸ್ ದಿನಾಚರಣೆ ಅಂತ ಮಾಡಿದರೆಂದು ಪತ್ರಿಕೆಗಳಲ್ಲಿ ಓದಿದೆ. ಜಗತ್ತಿನಲ್ಲಿ 230 ಮಿಲಿಯನ್ ಮಧುಮೇಹಿಗಳಲ್ಲಿ 35.5ಮಿಲಿಯನ್ ಮಧುಮೇಹಿಗಳು ಭಾರತದಲ್ಲೇ ಇದ್ದಾರೆ ಅಂತ ಬರೆದರು. ಭಾರತದ ಪ್ರತಿ ಐವರಲ್ಲಿ ಒಬ್ಬ ಡಯಾಬಿಟಿಕ್ ಇದ್ದಾನೆ ಅಂತ ಬರೆದರು. ಜಗತ್ತಿನಾದ್ಯಂತದ ಮಧುಮೇಹಿಗಳ ಚಿಕಿತ್ಸೆಗೆ ಪ್ರತಿ ವರ್ಷ 15ಬಿಲಿಯನ್ ಡಾಲರ್ ವ್ಯಯವಾಗುತ್ತಿದೆ(ಅಷ್ಟು ಖರ್ಚು ಮಾಡಿ ಮಧುಮೇಹಿಗಳು ಔಷಧಿ ಖರೀದಿಸುತ್ತಿದ್ದಾರೆ) ಅಂತ ಬರೆದರು. ಚಿಕಿತ್ಸೆ ಪಡೆಯದಿದ್ದರೆ ಕಾಲು ಕತ್ತರಿಸುತ್ತಾರೆ, ಕಣ್ಣು ಹೋಗುತ್ತದೆ, ಹೃದಯರೋಗ ಬರುತ್ತೆ, ಕಿಡ್ನಿ ಕೈಕೊಡುತ್ತದೆ -ಎಲ್ಲ ಬರೆದರು.
ಈ ಪೈಕಿ ಯಾವುದಕ್ಕೆ, ಎಷ್ಟು ಹೆದರಬೇಕು? ಸುಮಾರು ಹದಿನಾಲ್ಕು ವರ್ಷಗಳಿಂದ ಈ ಖಾಯಿಲೆ ನನ್ನೊಂದಿಗಿದೆ. ಬದುಕಿರುವಷ್ಟು ದಿನ ಇರುತ್ತದೆ. ಅನುವಂಶಿಕವಾಗಿ, ನಮ್ಮಪ್ಪನಿಂದ ನನಗೆ ಬಂದದ್ದು ಡಯಾಬಿಟಿಸ್ ಒಂದೇ.
ನೀವು ರಷಿಯನ್ನರನ್ನೂ, ಜರ್ಮನ್ನರನ್ನೂ ನೋಡಿದ್ದರೆ ನಿಮಗೊಂದು ಅಂದಾಜಿರುತ್ತದೆ. ನೂರು ಕೇಜಿಗಿಂತ ಹೆಚ್ಚು ತೂಕದ, ಗುಡಾಣದಂಥ ಹೊಟ್ಟೆಯ ದೈತ್ಯದೇಹಿಗಳವರು. ಅವರಿಗೆ ಹೊಟ್ಟೆ ನೇರಾಗಿರುತ್ತದಾದ್ದರಿಂದ ಡಯಾಬಿಟೀಸು ಬರುವುದಿಲ್ಲವೆನ್ನುತ್ತಾರೆ. ನಾವು ಏಷಿಯನ್ನರು. ನೇತಾಡುವ ಹೊಟ್ಟೆಯವರು. ನಮ್ಮ ಹೊಟ್ಟೆಗಳು ಇಳಿಬೀಳುತ್ತವೆ. ಹಾಗೆ ಇಳಿ ಬೀಳುವ ಹೊಟ್ಟೆಗಳಲ್ಲೇ ಪ್ಯಾಂಕ್ರಿಯಾಸ್ ಎಂಬ ಮ್ಯಾಜಿಕ್ ಬಾಕ್ಸ್ ಕೆಲಸ ಮಾಡುವುದನ್ನು ನಿಲ್ಲಿಸಿ -ಈ ಮಧುಮೇಹದ ರೋಗ ಬರುತ್ತದೆ.
ಹಾಗಲಕಾಯಿ ರಸವನ್ನು ಬೇವಿನ ಮರದ ಮೇಲೆ ಕೂತು ಕುಡಿದು, ನಿತ್ಯ ಪುಷ್ಪದ ಎಲೆ ತಿಂದು, ಇಲಿ ಪಾಷಾಣದ ಕಷಾಯ ಮಾಡಿಕೊಂಡು ಕುಡಿಯಿರಿ ಅನ್ನುವುದರ ತನಕ ಡಯಾಬಿಟೀಸಿಗೆ ತಲೆಗೊಬ್ಬರಂತೆ ಪುಗಸಟ್ಟೆ ಸಲಹೆಕೊಡುತ್ತಾರೆ.
ಹಚ್ಚಹಸುರನೆಯ ಬ್ಯಾಡಗಿ ಮೆಣಸಿನಕಾಯಿಯನ್ನು ಹಾಗ್ಹಾಗೆ ನುಂಗಿದರೂ, ಅದು ಹೊಟ್ಟೆಯಾಳಕ್ಕೆ ಹೋಗಿ ಗ್ಲೂಕೋಸೇ(ಸಕ್ಕರೆಯೇ) ಆಗೋದು ಅಂತ ವೈಜ್ಞಾನಿಕವಾಗಿ ಪ್ರೂವ್ ಆಗಿರುವಾಗ ಈ ಹಾಗಲ, ನಿತ್ಯಪುಷ್ಪ ಇವೆಲ್ಲ absolutelyಕೆಲಸವೇ ಮಾಡುವುದಿಲ್ಲ. ಸುಮ್ಮನೆ ಒಪ್ಪದ ಕಹಿಯನ್ನು ತಿಂದು ಕುಡಿದು ಹಿಂಸೆ ಪಡುವುದಷ್ಟೆ ಬಂತು. ನಿಜಕ್ಕೂ ಮಧುಮೇಹಕ್ಕೆ ಔಷಧಿಯಾಗಿ ಕೆಲಸ ಮಾಡುವ ಏಕೈಕ ವಸ್ತವೆಂದರೆ ಮೆಂತ್ಯದ ಕಾಳು. ರಾತ್ರಿ ನೆನೆಸಿಟ್ಟು, ಬೆಳಗ್ಗೆ ಅದರ ನೀರೂ ಕುಡಿದು, ನೆಂದ ಮೆಂತ್ಯ ತಿಂದರೆ ಕೊಂಚ ಮಟ್ಟಿಗೆ ಡಯಾಬಿಟೀಸ್ ಹಿಡಿತಕ್ಕೆ ಬರುತ್ತದೆ ಅಂತಾರೆ. ಉಳಿದಂತೆ, ಇದು ಯಾವತ್ತಿಗೂ ವಾಸಿಯಾಗದ, ಔಷಧಿ ಸಿಗದ ರೋಗ. ತುಂಬ ಕಂಟ್ರೋಲಿನಲ್ಲಿದ್ದೇವೆ ಅಂದುಕೊಂಡು ರಕ್ತ ಪರೀಕ್ಷೆ ಮಾಡಿಸಿದ ದಿನ ಷುಗರು 300ಕ್ಕೆ ಏರಿ, ದೇಹದ ತುಂಬ ಸಕ್ಕರೆ ಫ್ಯಾಕ್ಟರಿಯ ಧಡೋಂಧಡಕಿ ನಡೆದಿರುತ್ತದೆ! ಕೆಲವೊಮ್ಮೆ ದೈವನಿರ್ಣಯವೇನೋ ಎಂಬಂತೆ ತಂತಾನೆ ಕಂಟ್ರೋಲಿಗೆ ಬಂದು ನಿಷ್ಷುಗರ ಸಂತೋಷವನ್ನು ಕೊಡ ಮಾಡಿರುತ್ತದೆ.
ನನ್ನ ತಾಯಿಯ ಮೇಷ್ಟ್ರೊಬ್ಬರು ಕಳೆದ ಐವತ್ತೆೈದು ವರ್ಷಗಳಿಂದ ಮಧುಮೇಹದೊಂದಿಗೆ ‘ ಮಜ್ಜರೆ ಮಜ್ಜಾ’ ಎಂಬಂತೆ ಜೀವಿಸುತ್ತಿದ್ದಾರೆ. ಚಿತ್ರದುರ್ಗದ ಯುವ ರಾಜಕಾರಣಿಯಾಬ್ಬ ಮಧುಮೇಹಕ್ಕೆ ಹೆದರಿ ಆತ್ಮಹತ್ಯೆಯನ್ನೇ ಮಾಡಿಕೊಂಡ. ಆರೋಗ್ಯದ ಬಗ್ಗೆ, ಆಯುರ್ವೇದದ ಬಗ್ಗೆ ಭಯಂಕರ ಫೆಂಟಾಸ್ಟಿಕ್ ಆಗಿ ಮಾತನಾಡುವ ನನ್ನ ಅಣ್ಣ ಮೊನ್ನೆ ಸಿಕ್ಕಿದ್ದ. ಆತ ಇಪ್ಪತ್ತೆೈದು ವರ್ಷಗಳಿಂದ ಮಧುಮೇಹಿ. ಎಪ್ಪತ್ತರ ಮೇಲೆ ವಯಸ್ಸಾಗಿದೆ. ಯಾವತ್ತಿಗೂ ಅಳತೆ ಮೀರಲು ಬಿಡದೆ ಷುಗರ್ ಕಂಟ್ರೋಲಿನಲ್ಲಿಟ್ಟುಕೊಂಡಿದ್ದಾನೆ. ಒಂದು ಒಂದು ದುಶ್ಚಟವಿಲ್ಲ. ಆದರೆ ಮೊನ್ನೆ ಸಿಕ್ಕವನು ‘ಡಯಾಬಿಟಿಸ್ ರೆಟಿನೋಪತಿಯಿಂದಾಗಿ ಒಂದು ಕಣ್ಣು ಕಳೆದುಕೊಂಡೆ ಕಣೋ. ಎಷ್ಟು ಕಂಟ್ರೋಲಿನಲ್ಲಿಟ್ಟು ಕೊಂಡರೂ, ಕಾಲಂತರದಲ್ಲಿ ಈ ಖಾಯಿಲೆ ತನ್ನ ಕೆಲಸ ಮಾಡೇ ಮಾಡುತ್ತದೆ. ಒಂದು ಕಣ್ಣಿನಲ್ಲಿ ಓದೋದು ರೂಢಿ ಮಾಡಿಕೊಂಡಿದ್ದೇನೆ ’ಅಂದ ಅಣ್ಣ.
‘ ಇದೆ ಡಯಾಬಿಟೀಸು, ಏನೀಗ?’ ಅಂತ ಬದುಕುವವರನ್ನೂ ನೋಡಿದ್ದೇನೆ. ಅಂತಿಮವಾಗಿ ನನ್ನಲ್ಲಿ ಉಳಿಯುವ ಪ್ರಶ್ನೆಯೆಂದರೆ, ಈ ರೋಗಕ್ಕೆ ಎಷ್ಟು ಹೆದರಬೇಕು? ಎಷ್ಟೂಂತ?
‘ವಾರದಲ್ಲಿ ಮೂರು-ನಾಲ್ಕು ದಿನ ತಲಾ ನಲವತ್ತು ನಿಮಿಷದಂತೆ ಬ್ರಿಸ್ಕ್ ಆಗಿ ವಾಕ್ ಮಾಡಿ ಬಿಡಿ. ಔಷಧಿ ಸರಿಯಾಗಿ ತಗೊಳ್ಳಿ. ಕಡಿಮೆ ತಿನ್ನಿ. ಸಿಗರೇಟು ಬಿಡಿ. ಕುಡೀಬೇಡಿ. ಎಲ್ಲ ಕಂಟ್ರೋಲಿನಲ್ಲಿರುತ್ತೆ’ ಅನ್ನುತ್ತಿದ್ದರು. ಈಗ ಡೋಸೇಜ್ ಬದಲಿಸಿದ್ದಾರೆ. ಬ್ರಿಸ್ಕ್ ವಾಕ್ ಆರೂ ದಿನ ಮಾಡಿ. ಜಾಸ್ತಿ ಔಷಧಿ ತಗೊಳ್ಳಿ, ಕೆಲಸವನ್ನೇ ಮೈಡಬೇಡಿ, ಲೈಫ್ಸ್ಟೈಲ್ ಬದಲಿಸಿಕೊಳ್ಳಿ, ನೀವು ಪಾಪ ಪತ್ರಕರ್ತರು... ಸ್ಟ್ರೆಸ್ ಇದೆಯಲ್ವಾ? ಆದರಿಂದ ಬರುತ್ತೆ. ಅದರಿಂದಲೇ ಹೆಚ್ಚಾಗುತ್ತೆ. ಒಂದು ಹೊಸ ಡ್ರಗ್ ಬಂದಿದೆ ನೋಡೀ ಅಂತ ಶುರು ಮಾಡುತ್ತಾರೆ. ಹೊಸ ಡ್ರಗ್ಗುಗಳು ಬರುತ್ತಲೇ ಇವೆ : ಖಾಯಿಲೆಗಳಿಗಿಂತ ದೊಡ್ಡ ಸಂಖ್ಯೆಯಲ್ಲಿ!
ಪ್ರತಿ ಐದು ಜನರಲ್ಲಿ ಒಬ್ಬರಿಗೆ ಡಯಾಬಿಟಿಸ್ ಇದೆ ಅಂತ ಯಾವನು, ಅದೆಂಥ ಸರ್ವೆ ಮಾಡಿ ತೀರ್ಮಾನಿಸಿದನೋ? ಈ ದೇಶದಲ್ಲಿ ಲೆಕ್ಕ ಕೇಳುವವರ್ಯಾರು? ಮೊದಲೆಲ್ಲ ನಿಮ್ಮ ರಕ್ತದ ಒತ್ತಡ ಇಷ್ಟರ ಮಧ್ಯೆ ಇದ್ದರೆ ಸಾಕು ಅನ್ನುತ್ತಿದ್ದರು. ಈಗ ‘ಇಲ್ಲಿಲ್ಲಿಲ್ಲ... ಅದಕ್ಕಿಂತ ಕಡಿಮೆ ಇರಬೇಕು... ಅಕಾರ್ಡಿಂಗ್ ಟು ವರ್ಲ್ಡ್ ಸ್ಟ್ಯಾಂಡರ್ಡ್ಸ್’ ಅಂತಾರೆ. ಇವರ ವರ್ಲ್ಡ್ ಸ್ಟ್ಯಾಂಡರ್ಡ್ಸ್ ಬದಲಾಗುತ್ತವೋ? ಮನುಷ್ಯನ ರಕ್ತ ಮತ್ತು ಒತ್ತಡಗಳೇ ಬದಲಾಗ್ತವೋ, ಭಗವಂತ ಬಲ್ಲ. ಹೊಸದೊಂದು ಡ್ರಗ್ ಮಾರುಕಟ್ಟಗೆ ಬರುವಾಗಲೇ ಹೊಸ ವರ್ಲ್ಡ್ ಸ್ಟ್ಯಾಂಡರ್ಡ್ ಸೃಷ್ಟಿಸಿಕೊಂಡು ಬರುತ್ತದೆ.
ಇಷ್ಟಾಗಿ ಹದಿನಾಲ್ಕು ವರ್ಷ ವನವಾಸದಂತೆ ನನ್ನ ಅನುಭವಕ್ಕೆ ಬಂದಿರುವ ಡಯಾಬಿಟೀಸು ನನ್ನ ಮೇಲೆ ಅಂಥ ಪರಿಣಾಮ ಬೀರಿಲ್ಲ. ನನ್ನ ದುಡಿಯುವ ಕೆಪ್ಯಾಸಿಟಿ ಕಡಿಮೆಯಾಗಿಲ್ಲ. ಲವ್ವವಿಕೆ ಮತ್ತು ಕೇಳಿಗಳೂ ಸರಿಯಾಗಿವೆ. ಮೂರು ತಿಂಗಳಿಗೊಮ್ಮೆ ಕಿಡ್ನಿ, ಹೃದಯ, ಕೊಲೆಸ್ಟ್ರಾಲು, ಲಿವರು ಇತ್ಯಾದಿಗಳನ್ನು ಪರೀಕ್ಷೆ ಮಾಡಿಸಿಕೊಳ್ಳುತ್ತೇನೆ. ಎಲ್ಲ ಸರಿಯಾಗೇ ಇವೆ. ತೂಕ ಇಳಿಸಿ ಅಂದರು. ಇಳಿಸುತ್ತಿದ್ದೇನೆ. ಕೊಟ್ಟ ಔಷಧಿ ತೆಗೆದುಕೊಳ್ಳುತ್ತಿದ್ದೇನೆ. ಬಿಡುವಾದಾಗ ವಾಕ್ ಮಾಡುತ್ತೇನೆ. ಬ್ರಿಸ್ಕೋ, ಸುಡುಗಾಡೋ ಗೊತ್ತಿಲ್ಲ : ವಾಕ್ ಮುಗಿಯುವ ಹೊತ್ತಿಗೆ ಕುದುರೆಯಂತೆ ಬೆವೆತಿರುತ್ತೇನೆ. ತಲೆ ಕೆಡಿಸಿಕೊಂಡಷ್ಟೂ ಸ್ಟ್ರೆಸ್ ಜಾಸ್ತಿ. ತಿನ್ನುವುದರಲ್ಲಿ ಸಂಯಮ ರೂಢಿಸಿಕೊಂಡಿದ್ದೇನೆ. ಇಷ್ಟಾಗಿ ಮಧುಮೇಹ ಕೊಡುವ ಚಿಕ್ಕಪುಟ್ಟ ತೊಂದರೆಗಳನ್ನು, ಅದಾದರೂ ಮನಃಪೂರ್ತಿಯಾಗಿಯೇ ಕೊಟ್ಟಿದೆ. ಅದರ ಜಾಗದಲ್ಲಿ ಮೈಗ್ರೇನು, ಆರ್ಥರೈಟಿಸ್ಸು, ಕುಷ್ಠರೋಗ ಯಾವುದು ಬಂದಿದ್ದರೂ ಅಷ್ಟರ ಮಟ್ಟಿಗೆ ತೊಂದರೆ ಕೊಟ್ಟೇ ಕೊಡುತ್ತಿದ್ದವು.
ಇದನ್ನೆಲ್ಲ ಯಾಕೆ ಬರೆದೆ ಅಂದರೆ, ಹಾಗಲಕಾಯಿ ರಸ ಕುಡಿಯುವ ಸ್ಟುಪಿಡಿಟಿ, ಅದನ್ನು ಕುಡಿದು ಸಕ್ಕರೆ ರೋಗ ಕಂಟ್ರೋಲಾಯಿತು ಅಂದುಕೊಳ್ಳುವ ದಡ್ಡತನ ಒಂದು ಕಡೆ. ನಂಗೆ ಆಯುರ್ವೇದ ಅಥವಾ ನಾಟಿ ಅಥವಾ ಹೋಮಿಯೋಪತಿಯಿಂದಾಗಿ ಸಕ್ಕರೆ ರೋಗ ಹೋಗೇಬಿಡ್ತು ಎಂದುಕೊಳ್ಳುವ ಅವಿವೇಕ ಇನ್ನೊಂದು ಕಡೆ! ಗಂಟೆಗೊಮ್ಮೆ ಷುಗರ್ ಚೆಕ್ ಮಾಡಿಕೊಂಡು ನಾಳೆ ಸಾಯಂಕಾಲ ಆರೂ ಮುಕ್ಕಾಲರ ಹೊತ್ತಿಗೆ ಸತ್ತೇ ಹೋಗುತ್ತೇನೆಂದು ಗಾಬರಿಯಾಗುವ ಅತಿರೇಕ ಮತ್ತೊಂದು ಕಡೆ!
ಇವ್ಯಾವುದೂ ಸರಿಯಲ್ಲ. ಅದೊಂದು ಪ್ರೋಗ್ರೆಸಿಂಗ್ ಖಾಯಿಲೆ. ನಿಧಾನವಾಗಿ ಬೆಳೆಯುತ್ತಾ ಹೋಗುತ್ತದೆ. ಬಂದ ಕೂಡಲೆ ಎಚ್ಚರವಹಿಸಿ ಕಸರತ್ತು, ಪಥ್ಯ ಮತ್ತು ಔಷಧಿ ಮಾಡಿಕೊಂಡರೆ ಖಾಯಿಲೆಯ ಸ್ಪೀಡು ಕಂಟ್ರೋಲಿಗೆ ಬರುತ್ತದೆ. ಸಂತೋಷವಾಗಿ ಬದುಕುವುದೆಂದರೆ, qualitativeಆದ ಬದುಕನ್ನು ಅನುಭವಿಸುವುದು ಎಂಬ ಸಿದ್ಧಾಂತ ನನ್ನದು.
ತುಂಬ ತಿನ್ನುವುದು ಸಂತೋಷವಲ್ಲ. ವಿಪರೀತ ಸೋಮಾರಿತನ-ರೆಸ್ಟು ಸಂತೋಷವಲ್ಲ. ಹಾಗಂತ ಜಿಮ್ನೇಷಿಯಮ್ಮಿನಲ್ಲೆ ಮನೆ ಮಾಡಿಕೊಂಡು ಬಿಡುವುದೂ ಸಂತೋಷವಲ್ಲ. ಮನೆಯಲ್ಲಿ ಜಿಮ್ ಇದ್ದರೆ ಸಾಕು. ನಿಯಮಿತವಾಗಿ, ಹಿತಮಿತವಾಗಿ ಎಲ್ಲವನ್ನೂ ಅನುಭವಿಸುತ್ತ, ಇರುವಷ್ಟು ದಿನ ಸಂತೋಷವಾಗಿ ಬದುಕಿದರೆ ಸಾಕು.
ಬಂದಿರುವುದು ನೆಂಟರೇನಲ್ಲವಲ್ಲ? ಆಫ್ಟರ್ಆಲ್ ಡಯಾಬಿಟೀಸು!
ಎಷ್ಟೂಂತ ಹೆದರೋದು?