• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವಸರಕ್ಕೆ ಹುಟ್ಟಿದ ಅಂಗವಿಕಲ ಮಗುವಿನಂಥ ಮಂತ್ರಿಮಂಡಲವಿಟ್ಟುಕೊಂಡು...

By Staff
|

ಅವಸರಕ್ಕೆ ಹುಟ್ಟಿದ ಅಂಗವಿಕಲ ಮಗುವಿನಂಥ ಮಂತ್ರಿಮಂಡಲವಿಟ್ಟುಕೊಂಡು...

ಕುಮಾರಸ್ವಾಮಿಗೆ ಕಕಾಕಿಕೀ ಹೇಳಿ ಕೊಡಲು ಹಿಂದೆ ದೇವೇಗೌಡರಿದ್ದಾರೆ. ಯಾವ ಆಧಿಕಾರಿಗೆ ಎಂತಹ ಮೂಗುದಾರ ಹಾಕಬೇಕು? ಅಂತ ಹೇಳಿಕೊಡಲು ಅವರಣ್ಣ ಬಾಲಕೃಷ್ಣ ಗೌಡ ಇದ್ದಾರೆ. ಹೀಗಾಗಿ ಜೆಡಿಎಸ್‌ ಕಡೆಯ ನೊಗ ಹೇಗೋ ನಿಭಾಯಿಸಲ್ಪಡುತ್ತದೆ. ಆದರೆ ಬಿಜೆಪಿ ಕಡೆಯ ನೊಗದ ಗತಿ ಏನು? ಆ ಕಡೆ ಅನುಭವವೂ ಇಲ್ಲ. ಹಿಂದೆ ಕುಂತು ದಾರಿ ತೋರಿಸುವವರಿದ್ದಾರಾ ಅಂದರೆ ಅಲ್ಲಿ ರಕ್ತ ಪಿಶಾಚಿಗಳು, ಬ್ರಹ್ಮರಾಕ್ಷಸರ ಹಿಂಡೇ ಬಂದು ಕುಂತಿದೆ! ಹೊಸ ಸಚಿವರ ಬಗ್ಗೆ ಟೀಕೆ-ಟಿಪ್ಪಣಿ.

Ravi Belagere on Thatskannada.com ರವಿ ಬೆಳಗೆರೆ
ಕುಮಾರಸ್ವಾಮಿ-ಯಡಿಯೂರಪ್ಪ ಸೇರಿ ಅವಸರಕ್ಕೆ ಅಂಗವಿಕಲ ಮಗುವನ್ನು ಹುಟ್ಟಿಸಿದ್ದಾರೆ.

ಧರ್ಮಸಿಂಗ್‌ ನೇತೃತ್ವದ ಪರಮ ಸೋಮಾರಿ ಸರ್ಕಾರವನ್ನು ಬೀಳಿಸಿ ಹೊಸ ದೋಸ್ತಿ ಸರ್ಕಾರ ಕಟ್ಟಿದ ಕುಮ್ಮಿ- ಯಡಿಯೂರಿ, ಇವತ್ತು ವಿಧಾನಸೌಧಕ್ಕೆ ತಂದು ಕೂರಿಸಿದ ಮಂತ್ರಿಗಳ ಮುಖ ನೋಡಿದರೆ ಅನ್ನಿಸುತ್ತಿರುವುದೇ ಇದು.

ಈಶ್ವರಪ್ಪ, ಶಂಕರಮೂರ್ತಿ, ಆಚಾರ್ಯ, ರಾಮಚಂದ್ರೇಗೌಡ, ನಾಗರಾಜ ಶೆಟ್ಟಿ ಹೀಗೆ ಯಾವ ಕಡೆಯಿಂದ ನೋಡುತ್ತಾ ಹೋದರೂ ಬಿಜೆಪಿ ಪಾಳಯದಲ್ಲಿ ನಂಬಿಕೆ ಹುಟ್ಟಿಸುವ ಮುಖಗಳೇ ಕಡಿಮೆ.

ಇದ್ದುದರಲ್ಲಿ ಕುಮಾರಸ್ವಾಮಿ ಪಡೆಯಲ್ಲಿ ಹೊರಟ್ಟಿ ಥರದ ಜನರಿದ್ದಾರಾದರೂ ಒಟ್ಟಾರೆಯಲ್ಲಿ ನೋಡಿದರೆ ಬಿಜೆಪಿ, ಜೆಡಿಎಸ್‌ ದೋಸ್ತಿ ಸರ್ಕಾರದ ಮಂತ್ರಿಮಂಡಲ ಅವಸರಕ್ಕೆ ಹುಟ್ಟಿದ ಅಂಗವಿಕಲ ಮಗುವೇ. ಹಾಗೆ ನೋಡಿದರೆ ಹೊಸ ಸರ್ಕಾರದಲ್ಲಿ ಅನುಭವಿಗಳ ಸಂಖ್ಯೆಯೇ ಕಡಿಮೆ. ಹೊರಟ್ಟಿ, ಚೆಲುವರಾಯ ಸ್ವಾಮಿ, ಚೆನ್ನಿಗಪ್ಪ, ಜಯಕುಮಾರ್‌ ಅವರಂಥವರೇ ಸೀನಿಯರುಗಳು.

ಬಿಜೆಪಿಯಲ್ಲಿ ಒಬ್ಬ ಉದಾಸಿಯನ್ನು ಬಿಟ್ಟರೆ ಉಳಿದವರ್ಯಾರಿಗೂ ಆಡಳಿತದ ಅನುಭವವೇ ಇಲ್ಲ . ಉದಾಸಿ ಕೂಡ ಎಂಥಾ ಉದಾಸೀನದ ಮನುಷ್ಯ ಎಂದರೆ, ಈ ಹಿಂದೆ ಜನತಾ ದಳ ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗ ತನ್ನ ಆಪ್ತ ಕಾರ್ಯದರ್ಶಿ ಎದುರೇ ಅಸಿಸ್ಟೆಂಟ್‌ ಥರ ವರ್ತಿಸುತ್ತಿದ್ದ ಪುಣ್ಯಾತ್ಮ ಈತ. ಇಂತಹ ಪರಿಸ್ಥಿತಿಯಲ್ಲಿ ಯಾರು ಮಂತ್ರಿಗಳಾಗಬೇಕು, ಅವರ ಹಿನ್ನೆಲೆ ಹೇಗಿರಬೇಕು, ನಿಜಕ್ಕೂ ಅವರಿಗೆ ಜನಪರ ಕಾಳಜಿ ಇದೆಯಾ, ಕರ್ನಾಟಕದ ಪರಿಸ್ಥಿತಿಯ ಬಗ್ಗೆ ಒಂದು ಸ್ಪಷ್ಟ ಚಿತ್ರ ಅವರ ಕಣ್ಣಲ್ಲಿದೆಯಾ? ಎಂಬುದನ್ನು ಬಿಜೆಪಿ ನಾಯಕರು ಗಮನಿಸಬೇಕಿತ್ತು.

ಆದರೆ ವಿಚಿತ್ರ ನೋಡಿ, ಬರೀ ಅರಚುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದ ಯಡಿಯೂರಪ್ಪ ಈಗ ಹಣಕಾಸು, ಅಬಕಾರಿಯಂತಹ ದೊಡ್ಡ ದೊಡ್ಡ ಇಲಾಖೆಗಳನ್ನು ಕೈಲಿಟ್ಟುಕೊಂಡು ‘ನೋಡಿ ಹೆಂಗ್ಮಾಡ್ತೀನಿ’ ಅಂತ ತಿರುಗುತ್ತಿದ್ದಾರೆ. ಮೂಲತಃ ಅವರಿಗೇ ರಾಜ್ಯದ ಬೊಕ್ಕಸಕ್ಕೆ ಹರಿದು ಬರುವ ಆದಾಯ ಎಷ್ಟು, ಯಾವ ಮೂಲೆಗಳನ್ನು ಭದ್ರ ಮಾಡಿದರೆ ಆದಾಯ ಹೆಚ್ಚುತ್ತದೆ, ಸರ್ಕಾರದ ಮೇಲೆ ಯಾವ್ಯಾವ ಲಾಬಿ ಪ್ರಭಾವ ಬೀರುತ್ತದೆ, ಆ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಹೇಗೆ? ಎಂಬುದು ಗೊತ್ತಿಲ್ಲ.

ಸಾಲದೆಂಬಂತೆ ಪಟೇಲರ ಕಾಲದಿಂದ ಹಿಡಿದು ಧರಂಸಿಂಗ್‌ ಕಾಲದವರೆಗೆ ನುಂಗಿ ನೊಣೆದ ಐಎಎಸ್‌ ಅಧಿಕಾರಿಗಳ ಪಡೆಯನ್ನು ತಮ್ಮ ಸುತ್ತ ಕಟ್ಟಿಕೊಳ್ಳುತ್ತಿದ್ದಾರೆ. ಇಂಥವರೆಲ್ಲ ಸೇರಿ ಯಾವ ಪರಿ ದರೋಡೆ ಗಿಳಿಯುತ್ತಾರೆ ಎಂಬ ಸಾಮಾನ್ಯ ಜ್ಞಾನವೂ ಯಡಿಯೂರಪ್ಪ ಅವರಿಗಿದ್ದಂತಿಲ್ಲ. ಅವರ ಪಾಲಿಗೀಗ ಪರಮ ಕಿರಾತಕ ಬಿ.ಎಸ್‌. ಪಾಟೀಲ್‌ ಥರದವರೇ ರಾಜಗುರು.

‘ನೀವೇನೂ ಯೋಚ್ನೆ ಮಾಡಬೇಡಿ. ನಾನು ಒಳ್ಳೇ ಅಧಿಕಾರಿಗಳನ್ನ ಕೊಡ್ತೀನಿ. ಅವರೆಲ್ಲ ಮೆಂಟೇಯ್ನ್‌ ಮಾಡ್ತಾರೆ’ ಅಂತ ಈ ಮಾಜೀ ಅಧಿಕಾರಿ ಹೇಳಿದ್ದನ್ನು ಯಡಿಯೂರಪ್ಪ ಅಕ್ಷರಶಃ ಪಾಲಿಸುತ್ತಿದ್ದಾರೆ. ಅವರ ಪರಿಸ್ಥಿತಿಯೇ ಹೀಗಿರುವಾಗ ಉಳಿದವರ ಪರಿಸ್ಥಿತಿ ಹೇಗಿರಬೇಕು?ಉದಾಹರಣೆಗೆ ಆಚಾರ್ಯ, ಶಂಕರ ಮೂರ್ತಿ, ರಾಮಚಂದ್ರೇಗೌಡ ಅವರಂಥವರನ್ನೇ ತೆಗೆದುಕೊಳ್ಳಿ.

ಆಚಾರ್ಯ ಬುದ್ಧಿವಂತ ಎಂಬುದೇನೋ ನಿಜ. ಆದರೆ ಅಂಥವರನ್ನು ತಂದು ಮೆಡಿಕಲ್‌ ಎಜುಕೇಶನ್‌ ಖಾತೆ ನೋಡ್ಕಳಿ ಅಂತ ಬಿಟ್ಟಿದ್ದಾರೆ. ಆತ ಏನು ಮಾಡಬೇಕು? ಇದುವರೆಗೂ ಆಚಾರ್ಯ ವೈದ್ಯಕೀಯ ಕ್ಷ-ಕಿರಣದ ಆಳ- ಅಗಲ, ಓರೆ-ಕೋರೆಗಳ ಬಗ್ಗೆ ಮಾತಾಡಿದವರಲ್ಲ. ಅವರ ಆಸಕ್ತಿಯ ವಿಷಯವೂ ಅದಲ್ಲ.

ಪರಮೇಶ್ವರ ಅವರಂತಹ ಮನುಷ್ಯನೇ ಈ ಖಾತೆಯನ್ನು ನಿಭಾಯಿಸಲು ಪರದಾಡಬೇಕಾಯಿತು. ಕಾರಣ? ಅದೇನೂ ಸಣ್ಣ ಲಾಬಿಯಲ್ಲ. ಅಂತಹ ಲಾಬಿ ಬಗ್ಗೆ ಏನೂ ಗೊತ್ತಿಲ್ಲದ ಆಚಾರ್ಯ ಈಗ ಮೆಡಿಕಲ್‌ ಎಜುಕೇಶನ್‌ ಮಿನಿಸ್ಟರು. ‘ಲಾಬಿ’ ಯಾಳಗೆ ಈತ ಮುಳುಗಿ ಹೋಗದೇ ಇನ್ನೇನಾಗಬೇಕು? ಇನ್ನು ಶಂಕರಮೂರ್ತಿ- ನಿಪ್ಪಟ್ಟು, ಬೆಣ್ಣೆ ಮುರುಕು ಅಂಗಡಿ ನೋಡಿಕೋ ಎಂದರೆ ದಿವಿನಾಗಿ ಕುಂತು ನೋಡಿಕೊಳ್ಳಬಲ್ಲ ಈತನಿಗೆ ಉನ್ನತ ಶಿಕ್ಷಣ!

ನಿಜ ಹೇಳಬೇಕೆಂದರೆ ಶಂಕರಮೂರ್ತಿ ಥರದವರಿಂದ ಪಕ್ಷಕ್ಕೆ ನಾಲ್ಕು ಓಟೂ ಬರುವುದಿಲ್ಲ. ಸರ್ಕಾರಕ್ಕೆ ಶಕ್ತಿಯೂ ಬರುವುದಿಲ್ಲ. ರಾಮಚಂದ್ರೇಗೌಡರ ಕತೆಯೂ ಅಷ್ಟೆ. ಈಯಪ್ಪ ಲಾಟರಿ, ಸಣ್ಣ ಉಳಿತಾಯ, ವಿಜ್ಞಾನ ತಂತ್ರಜ್ಞಾನ ಸಚಿವ. ಆದರೆ ಅವರ ಆಸಕ್ತಿ ಕೇಂದ್ರಗಳೇ ಬೇರೆ. ಉಳಿದಂತೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು : ಉದ್ದಕ್ಕೂ ಆತ ಬೆಳೆದು ಬಂದಿದ್ದೇ ಲ್ಯಾಂಡು ವ್ಯವಹಾರಗಳಲ್ಲಿ. ಆತನಿಗೆ ರೇಷ್ಮೆ, ಸಣ್ಣ ಕೈಗಾರಿಕೆ.

ಹೀಗೆ ನೋಡುತ್ತಾ ಹೋದರೆ ಯಾರಿಗೆ ಯಾವ ಖಾತೆ ಕೊಡಬೇಕು ಎಂಬ ವಿಷಯದಲ್ಲಿ ಯಡಿಯೂರಪ್ಪ ಅವರ ಕಾಮನ್‌ಸೆನ್ಸು ಕೆಲಸ ಮಾಡಿಲ್ಲ. ಒಂದು ಸರ್ಕಾರ ಅಂದರೆ ತಿನ್ನಲು ಎಲ್ಲೆಲ್ಲಿ ಜಾಗ ಇದೆಯೋ ಎಂಬುದನ್ನು ನೋಡುವುದಿಲ್ಲ. ಯಾವ ಜಾಗಕ್ಕೆ ಯಾರನ್ನು ತಂದು ಕೂರಿಸಿದರೆ ಕೆಲಸ ಸಾಂಗೋಪ ಸಾಂಗವಾಗಿ ನಡೆಯುತ್ತದೆ ಎಂಬುದನ್ನು ಸರಿಯಾಗಿ ನಿರ್ಧರಿಸುವವನೇ ಲೀಡರು.

ಆದರೆ ಯಡಿಯೂರಪ್ಪ ಜಪ್ಪಯ್ಯ ಅಂದರೂ ಅಂತಹ ಲೀಡರ್‌ಷಿಷ್‌ ಗುಣವನ್ನು ತೋರಿಸಿಲ್ಲ. ದಿಲ್ಲಿ ಬಿಜೆಪಿಯಲ್ಲೀಗ ಅನಂತ್‌ ಕುಮಾರ್‌ ವಿರೋಧಿಗಳ ಪಡೆ ಹೆಚ್ಚಾಗಿದೆ. ಆ ಪಡೆಗೀಗ ಅನಂತ್‌ಕುಮಾರರನ್ನು ತುಳಿಯುವುದೇ ಒನ್‌ ಪಾಯಿಂಟ್‌ ಪ್ರೋಗ್ರಾಂ. ಹೀಗಾಗಿ ಆ ಪಡೆ ಕರ್ನಾಟಕದ ಪಡಸಾಲೆಯಲ್ಲಿ ಯಡಿಯೂರಪ್ಪ ಮಾಡಿದ್ದೇ ಸರಿ. ಆದ್ದರಿಂದ ಅವರು ಯಾರ ಹೆಸರು ಹೇಳುತ್ತಾರೋ ಅವರು ಮಂತ್ರಿಯಾಗಲಿ, ಯಾರ್ಯಾರಿಗೆ ಯಾವ ಖಾತೆ ಕೊಡಬೇಕು ಅಂತ ಅವರಿಗೆ ಮನಸ್ಸು ಬರುತ್ತದೋ ಹಾಗೇ ಮಾಡಲಿ ಅನ್ನುತ್ತಿದೆ.

ಆ ಸಂದರ್ಭವನ್ನು ಬಳಸಿಕೊಂಡು ಯಡಿಯೂರಪ್ಪ ಎಂತಹ ಟೀಮು ಕಟ್ಟ ಬಹುದಿತ್ತು? ಅವರ ಮಗ್ಗುಲಲ್ಲೇ ಆರಗ ಜ್ಞಾನೇಂದ್ರರಂತಹ ಉತ್ಸಾಹಿ, ತಿಳಿವಳಿಕೆಯ ಯುವ ನಾಯಕರಿದ್ದರು. ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜೇಂದ್ರ ವರ್ಮ, ಪ್ರಕಾಶ್‌ ಖಂಡ್ರೆ ಥರವರಿದ್ದರು. ಅಂಗಾರ, ಯೋಗೀಶ್‌ ಭಟ್‌ ಅವರಂತಹ ಜನರಿದ್ದರು.

ಇಂಥವರ ಪಡೆಯಲ್ಲೇ ಕೆಲವರಿಗೆ ಅವಕಾಶ ಕೊಟ್ಟಿದ್ದರೆ ಬಿಜೆಪಿಯ ಟೀಮು ನೋಡುವಂಗೆ ಇರುತ್ತಿತ್ತು. ಆದರೆ ಯಡಿಯೂರಪ್ಪ ಮತ್ತವರ ದಿಲ್ಲಿ ಗಾಡ್‌ಫಾದರುಗಳಿಗೆ ಅನಂತ್‌ರನ್ನು ತುಳಿಯುವ ಚಪಲ. ಹೀಗಾಗಿ ಯಾರು ಅನಂತ್‌ಕುಮಾರ್‌ ಗುಂಪಿನವರು ಅನ್ನಿಸಿತೋ ಅವರನ್ನು ನಿರ್ದಾಕ್ಷಿಣ್ಯವಾಗಿ ದೂರವಿಟ್ಟರು. ಅವಕಾಶ ಕೊಟ್ಟರೆ ಆರಗ ಜ್ಞಾನೇಂದ್ರ ಥರದವರು ತಮ್ಮನ್ನೇ ಮೀರಿ ನಿಂತು ಬಿಡುತ್ತಾರೆ ಅಂತ ತಮಗೆ ತಾವೇ ಕಲ್ಪಿಸಿಕೊಂಡು ಉತ್ಸಾಹಿಗಳು, ಶ್ರದ್ಧಾನಂತರನ್ನು ದೂರವಿಟ್ಟರು. ಹಾಗೆ ನೋಡಿದರೆ ಬಿಜೆಪಿಗೆ ಒಂದು ತಾಕತ್ತು ಅಂತ ಕೊಟ್ಟದ್ದೇ ಉತ್ತರ ಕರ್ನಾಟಕ. ಆದರೆ ಆ ಭಾಗವನ್ನೇ ನಿರ್ಲಕ್ಷಿಸಿ ಹಳೇ ಮೈಸೂರಿನವರಿಗೆ ಆದ್ಯತೆ ಕೊಟ್ಟರು.

ಈ ಪೈಕಿ ಬಹುತೇಕ ಜನ ಪಕ್ಷಕ್ಕೆವೋಟು, ಸರ್ಕಾರಕ್ಕೆ ಗೌರವ ತರುವವರೇ ಅಲ್ಲ. ಒಟ್ಟಿನಲ್ಲಿ ಅಯಾಚಿತವಾಗಿ ತಮಗೆ ದೊರೆತ ಬಲವನ್ನು ಇಷ್ಟ ಬಂದಂಗೆ ಬಳಸಿ ಯಡವಟ್ಟು ಮಾಡಿಬಿಟ್ಟರು ಯಡಿಯೂರಪ್ಪ.

ಜೆಡಿಎಸ್‌ನಲ್ಲೂ ಕಥೆ ಇದಕ್ಕಿಂತ ಭಿನ್ನವಿಲ್ಲ. ಆದರೆ ಕುಮಾರಸ್ವಾಮಿಗೆ ಕಕಾಕಿಕೀ ಹೇಳಿ ಕೊಡಲು ಹಿಂದೆ ದೇವೇಗೌಡರಿದ್ದಾರೆ. ಯಾವ ಆಧಿಕಾರಿಗೆ ಎಂತಹ ಮೂಗುದಾರ ಹಾಕಬೇಕು? ಅಂತ ಹೇಳಿಕೊಡಲು ಅವರಣ್ಣ ಬಾಲಕೃಷ್ಣ ಗೌಡ ಇದ್ದಾರೆ. ಹೀಗಾಗಿ ಜೆಡಿಎಸ್‌ ಕಡೆಯ ನೊಗ ಹೇಗೋ ನಿಭಾಯಿಸಲ್ಪಡುತ್ತದೆ.

ಆದರೆ ಬಿಜೆಪಿ ಕಡೆಯ ನೊಗದ ಗತಿ ಏನು? ಆ ಕಡೆ ಅನುಭವವೂ ಇಲ್ಲ. ಹಿಂದೆ ಕುಂತು ದಾರಿ ತೋರಿಸುವವರಿದ್ದಾರಾ ಅಂದರೆ ಅಲ್ಲಿ ರಕ್ತ ಪಿಶಾಚಿಗಳು, ಬ್ರಹ್ಮರಾಕ್ಷಸರ ಹಿಂಡೇ ಬಂದು ಕುಂತಿದೆ.

ಇದಕ್ಕಿಂತ ಮುಖ್ಯವೆಂದರೆ ಯಡಿಯೂರಪ್ಪ ಮಾಡಿಕೊಂಡಿರುವ ಯಡವಟ್ಟು ಕೆಲಸವನ್ನು ಕಂಡು ಅನಂತ್‌ ಗ್ಯಾಂಗು ಕೆರಳಿ ಕುಂತಿದೆ. ಇಂತಹ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ತಮ್ಮ ಕಡೆಯ ನೊಗ ಹೊರುವುದು ಕಷ್ಟ. ಅದಕ್ಕಿಂತ ದೊಡ್ಡ ಅಪಾಯ ಇನ್ನೊಂದಿದೆ. ಈವತ್ತು ಬಿಜೆಪಿಯ ಮಂತ್ರಿ ಪಡೆಯನ್ನೇ ನೋಡಿ ಮೂವತ್ತು-ಮೂವತ್ತೆೈದು ಶಾಸಕರು ಕಿರಿಪಿರಿ ಶುರುಮಾಡಿಬಿಟ್ಟಿದ್ದಾರೆ. ಆ ಕಿರಿಪಿರಿಗೆ ಅನಂತ್‌ಕುಮಾರ್‌ ಒಬ್ಬರೇ ಅಲ್ಲ, ರಣಚಂಡಿಯಂತಹ ಉಮಾಭಾರತಿ ಕೂಡಾ ದನಿ ಆಗುವ ಸಾಧ್ಯತೆಗಳಿವೆ. ಯಾವ ಶಕ್ತಿಗಳು ಇವತ್ತು ದಿಲ್ಲಿಯಲ್ಲಿ ಅನಂತ್‌ಕುಮಾರ್‌ ಅವರನ್ನು ತುಳಿಯಲು ಹೊರಟಿವೆಯೋ? ಆ ಶಕ್ತಿಗಳ ವಿರುದ್ಧವೇ ಉಮಕ್ಕ ಕೂಡಾ ಹೋರಾಡಾತ್ತಿರುವುದು.

ಅನಂತ್‌ರನ್ನು ತುಳಿಯಲು ಯತ್ನಿಸುತ್ತಿರುವ ಜೇಟ್ಲಿ, ಪ್ರಮೋದ್‌ ಮಹಾಜನ್‌ ಅವರಂಥವರು ಈಕೆಯನ್ನು ತುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿರುವ ಅನಂತ್‌ ಕ್ಯಾಂಪಿಗೆ, ಯಡಿಯೂರಪ್ಪ ಅವರನ್ನು ವಿರೋಧಿಸುವ ಜನರಿಗೆ ಉಮಕ್ಕ ಅಪ್ಯಾಯಮಾನವಾಗಿ ಕಂಡರೆ ಅಚ್ಚರಿ ಏನಿಲ್ಲ.

ಅಲ್ಲಿಗೆ ಏನಾಗುತ್ತದೆ? ಕುಮ್ಮಿ- ಯಡಿಯೂರಿಯ ದೋಸ್ತಿಗಾಗಿ ಸ್ವಲ್ಪ ದೂರ ಹೋಗುವಷ್ಟರಲ್ಲೇ ಉಸ್ಸಪ್ಪೋ ಅನ್ನುತ್ತದೆ. ನಿಜವಾದ ಅಸ್ಥಿರತೆ ಶುರುವಾಗುವುದು ಅಲ್ಲಿಂದ. ದೊರೆತ ಅವಕಾಶವನ್ನು ಯಡಿಯೂರಪ್ಪ ಅವರಂತವರು ಹಾಳು ಮಾಡಿಕೊಳ್ಳುವುದು ಹೀಗೆ.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more