• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅರವತ್ತು ತುಂಬಿದ ಕವಿಗೆ ‘ಲಕ್ಷ್ಮಣಾಭಿವಂದನಂ’ ಅಂದ ಸಂದರ್ಭದಲ್ಲಿ...

By Staff
|
Ravi Belagere on Thatskannada.com ರವಿ ಬೆಳಗೆರೆ

ಈ ವರ್ಷ ಒಂದೇ ಒಂದೂ ಭಾಷಣ ಮಾಡುವುದಿಲ್ಲ ಅಂತ ಪ್ರತೀವರ್ಷ ಆಣೆ ಮಾಡುತ್ತೇನೆ. ಆ ವರ್ಷ ಹಿಂದಿನ ಎಲ್ಲ ವರ್ಷಗಳಿಗಿಂತಲೂ ಹೆಚ್ಚಿನ ಭಾಷಣವನ್ನು ಮಾಡಿರುತ್ತೇನೆ.

ಪತ್ರಿಕೆ ಆರಂಭಿಸುವುದಕ್ಕೆ ಮುಂಚೆಯೇ ನಾನು ಮದುವೆ, ಮುಂಜಿ, ನಾಮಕರಣ ಪೂಜೆ ಇತ್ಯಾದಿ ಧಾರ್ಮಿಕ ಸಮಾರಂಭಗಳಿಗೆ ಹೋಗುವುದಿಲ್ಲ ಅಂತ ಶಪಥ ಮಾಡಿದ್ದೆ. ಅದು ಈತನಕ ತೀರ ಚಿಕ್ಕ ಪುಟ್ಟ ವಯೆಲೇಷನ್ನುಗಳೊಂದಿಗೆ ವ್ರತವಾಗಿಯೇ ನಡೆದುಕೊಂಡು ಬಂದಿದೆ. ಆದರೆ ಸಭೆಸಮಾರಂಭಗಳ ವಿಷಯದಲ್ಲಿ ಹಾಗಾಗುವುದಿಲ್ಲ. ಕೆಲವಕ್ಕೆ ನಾನೇ ಕುಣಕೊಂಡು ಹೋಗುತ್ತೇನೆ.

ಹಾಗೆ ಮೊನ್ನೆ ಭಾನುವಾರ ಹೋದದ್ದು ‘ಲಕ್ಷ್ಮಾಣಾಭಿವಂದನಂ’ ಕಾರ್ಯಕ್ರಮಕ್ಕೆ. ನನ್ನ ಮೆಚ್ಚಿನ ಕವಿ ಬಿ.ಆರ್‌.ಲಕ್ಷ್ಮಣರಾಯರಿಗೆ ಅರವತ್ತು ತುಂಬಿದ ಸಂದರ್ಭದಲ್ಲಿ ಡಾ.ಅನಂತಮೂರ್ತಿ, ಎಚ್‌.ಎಸ್‌.ವೆಂಕಟೇಶಮೂರ್ತಿ, ಲಕ್ಷ್ಮಣರಾವ್‌ ಮತ್ತು ಅವರ ಪತ್ನಿ ಗಿರಿಜಾ ಮುಂತಾದವರೊಂದಿಗೆ ಕವಿಯ ಸನ್ಮಾನದಲ್ಲಿ ಪಾಲ್ಗೊಂಡಿದ್ದೆ.

B.R. Lakshman Raoನನಗೆ ತುಂಬ ಆಶ್ಚರ್ಯವಾದದ್ದು ಹಿರಿಯರಾದ ಜಿ.ಎಸ್‌.ಎಸ್‌ ಆ ಸಮಾರಂಭಕ್ಕೆ ‘ಸುಮ್ನೆ ಮನೆ ಹಿರಿಯನಾಗಿ ಬಂದಿದ್ದೇನೆ’ಅನ್ನುತ್ತಲೇ, ಲಕ್ಷ್ಣಣರಾಯರ ಕಾವ್ಯದ ಬಗ್ಗೆ ಅದ್ಭುತವಾದ ಭಾಷಣ ಮಾಡಿದ್ದು. ಅದು ಅಪ್ಪಟ ಪ್ರಬಂಧ ಮಂಡನೆಯಂತಿತ್ತು. ತಮಗಿಂತ ಒಂದು ತಲೆಮಾರು ಚಿಕ್ಕವರ ಬಗ್ಗೆ ಅಷ್ಟು ಶ್ರದ್ಧೆಯಿಂದ ಪ್ರಿಪೇರ್‌ ಆಗಿ ಬಂದು ಹಿರಿಯರೊಬ್ಬರು ಮಾತನಾಡಿದುದನ್ನು ಇತ್ತೀಚಿನ ವರ್ಷಗಳಲ್ಲಿ ಕಂಡಿರಲಿಲ್ಲ. ಕೇಳಿರಲಿಲ್ಲ. ಲಕ್ಷ್ಮಣರಾಯರಿಗಿಂತಲೂ ವರ್ಷ-ಎರಡು ವರ್ಷಕ್ಕೆ ಹಿರಿಯರಾದ ಎಚ್‌.ಎಸ್‌.ವೆಂಕಟೇಶ್‌ ಮೂರ್ತಿಯವರಲ್ಲೂ ಅಂಥದ್ದೇ ಶ್ರದ್ಧೆ-ಸಿದ್ಧತೆಗಳಿದ್ದವು.

ಈ ಹಿಂದೆ ಕವಿ ನರಸಿಂಹಸ್ವಾಮಿಯವರಲ್ಲೂ ತಮಗಿಂತಲೂ ಚಿಕ್ಕವರ ಕಾವ್ಯದ ಬಗ್ಗೆ, ಕ್ರಿಯೇಟಿವಿಟಿಯ ಬಗ್ಗೆ ಈ ತೆರನಾದ ಆಸಕ್ತಿ ತೋರಿಸುತ್ತಿದ್ದರು. ಅಂಚೆಯಲ್ಲಿ ಪದ್ಯ ಕಳಿಸಿದರೂ ಅವುಗಳನ್ನು ತಿದ್ದಿ, ಓದಿ, ಸಲಹೆ ಕೊಟ್ಟು, ಆಶೀರ್ವಾದಗದ ನಾಲ್ಕು ಸಾಲು ಬರೆದು ಕವಿತೆ ಹಿಂತಿರುಗಿಸುತ್ತಿದ್ದರು. ತೀರ ವಯಸ್ಸಾದ ಮೇಲೆಯೇ, ಅವರೊಂದು ಪತ್ರಿಕಾ ಪ್ರಕಟಣೆ ಕೊಟ್ಟು ‘ಪದ್ಯಗಳನ್ನು ಓದುವುದು, ತಿದ್ದುವುದು ನನ್ನಿಂದಾಗದು. ಇನ್ನು ಕಳಿಸಬೇಡಿ’ ಎಂದು ಕಿರಿಯರಿಗೆ ಹೇಳಿದ್ದು. ಹಳೆಯ ತಲೆಮಾರಿನ ತ.ಸು.ಶಾಮರಾಯರು, ವಿ.ಸೀ ಮುಂತಾದವರ ಶಿಷ್ಯ ಪ್ರೇಮದ ಬಗ್ಗೆ ದಂತಕತೆಗಳೇ ಇವೆ.

ಒಂದು ತಲೆಮಾರನ್ನು ಆ ಹಿರಿಯರು ಹಾಗೆ ಪೊರೆದದ್ದಕ್ಕೆ, ಕೈಹಿಡಿದು ನಡೆಸಿದ್ದಕ್ಕೆ ಅವರಿಗೆ ಪ್ರತಿಯಾಗಿ ನಾವು ಸೂಚಿಸಿದ ಗೌರವವೇನು ಎಂಬ ಪ್ರಶ್ನೆ ಕೇಳಿಕೊಂಡಾಗಲೇ ನನ್ನಲ್ಲಿ ಸಿಡಿಮಿಡಿ ಹುಟ್ಟುತ್ತದೆ. ಭಾರತೀಯರಿಗೆ ಅದರಲ್ಲೂ ಕನ್ನಡಿಗರಿಗೆ ಹಿರಿಯರನ್ನು, ಸಾಹಿತಿಗಳನ್ನು ಗೌರವಿಸಿ ಗೊತ್ತಿಲ್ಲ. ತೀರಾ ತಮಿಳರಷ್ಟಲ್ಲದಿದ್ದರೂ, ತೆಲುಗರಷ್ಟಲ್ಲದಿದ್ದರೂ ಗೆದ್ದವರ ಹಿಂದೆ ದೊಂದಿ ಹೊತ್ತು ಓಡುವುದರಲ್ಲಿ ನಾವು ಕನ್ನಡಿಗರೇನೂ ಹಿಂದೆ ಬಿದ್ದವರಲ್ಲ.

ರಾಜ್‌ಕುಮಾರ್‌ ಸತ್ತಾಗ ಆ ಪರಿ ಗೋಳಾಡಿ, ಬಡಿದಾಡಿ, ಎದೆಎದೆ ಚಚ್ಚಿಕೊಂಡು ಕಡೆಗೆ ಪ್ರಾಣವನ್ನೇ ಬಿಟ್ಟರು-ತೆಗೆದರು. ಕನ್ನಡದ ಪುಸ್ತಕಗಳನ್ನು ನೆತ್ತಿಯ ಮೇಲೆ ಹೊತ್ತುಕೊಂಡು ಮನೆಮನೆ ತಿರುಗಿ ಮಾರಿ, ಪ್ರತಿನಿತ್ಯ ಕನ್ನಡದ ಕೆಲಸ ಮಾಡಿದ ಗಳಗನಾಥರು ತೀರಿಕೊಂಡಾಗ ಅವರ ಮನೆಯ ಮುಂದೆ ಇದ್ದವರು ಎಷ್ಟು ಜನ?

ಎಲ್ಲಿಂದೆಲ್ಲಿಗೋ ಹೋಲಿಕೆ ಮಾಡುತ್ತೇನೆಂದುಕೊಳ್ಳಬೇಡಿ : ರಾಜಕುಮಾರ್‌ ನಟಿಸಿದ ನೂರಾರು ಸಿನಿಮಾಗಳಿಗೆ ಮರೆಯಲಾಗದ ಮಧುರಗೀತೆ ಬರೆದುಕೊಟ್ಟ ಕು.ರಾ.ಸೀತಾರಾಮ ಶಾಸ್ತ್ರಿಯಂಥವರದು ಮನೆಯಲ್ಲಿನ ಮರಣವೇ! ಅವರ ಜನ್ಮದಿನಗಳನ್ನು ಯಾರೂ ಆಚರಿಸುವುದಿಲ್ಲ.

ಆದರೆ ಈಗ ಹಾಗಾಗಬಾರದಲ್ಲ? ನಾವೆಲ್ಲ ಪ್ರಬುದ್ಧರಾಗಿದ್ದೇವೆ. ನಮ್ಮ ಹುಡುಗ ಹುಡುಗಿಯರು ಸಾಫ್ಟ್‌ವೇರ್‌ ಇಂಡಸ್ತ್ರಿಯಲ್ಲಿ ದುಡಿಯುತ್ತಿದ್ದಾರೆ. ಅವರಿಗೆ ಅಮೆರಿಕ ಅನುದಿನದ ಯಾತ್ರೆ. ಅಲ್ಲಿ ‘ಅಕ್ಕ’ ಇದ್ದಾಳೆ. ಇಲ್ಲಿ ತಮ್ಮಂದಿರಿದಿದ್ದಾರೆ. ಸುವರ್ಣ ಕರ್ನಾಟಕದ ಸಂಭ್ರಮಕ್ಕಿಂತಲೂ ದೊಡ್ಡ ನೆಪ ಬೇಕಿಲ್ಲ. ಮೊನ್ನೆ ಲಕ್ಷ್ಮಣರಾಯರ ಅರವತ್ತನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅದನ್ನೇ ಹೇಳಿದೆ. ನಮ್ಮ ಮನೆಯ, ಮನಸ್ಸಿನ ಮೌನಕ್ಕೆ ಗೀತೆಗಳನ್ನು, ಹಾಡುಗಳನ್ನೂ ತುಂಬಿಕೊಟ್ಟವರು ಕವಿಗಳು. ಅವರನ್ನು ಹೀಗೆ ಏನಾದರೊಂದು ನೆಪಮಾಡಿಕೊಂಡು, ಸಭೆ ಕರೆದು, ಹಾರ-ತುರಾಯಿ ಹಾಕಿ, ಅವರ ಪದ್ಯ-ಗದ್ಯಗಳ ಬಗ್ಗೆ ಮಾತನಾಡಿ, ಚಪ್ಪಾಳೆ ಹೊಡೆದು, ಮಾತುಬಾರದ ಪುಟ್ಟ ಮಗುವಿನ ಬರ್ತ್‌ ಡೇ ಮಾಡಿ ಮುಚ್ಚಟೆ ತೀರಿಸಿಕೊಳ್ಳುವಂತೆ, ಇಂಥದ್ದೂ ಒಂದು ಮುಚ್ಚಟೆ, ಒಂದು ಸಂಭ್ರಮ ಆಚರಿಸಿಕೊಳ್ಳೋಣ. ಇದಕ್ಕೆ ಸರ್ಕಾರವೇ ಯಾಕೆ ಬೇಕು?

ಚೆನ್ನವೀರ ಕಣವಿಯವರಿಗೆ ಎಷ್ಟು ವರ್ಷವಾದವು? ರಾಷವೇಂದ್ರ ಖಾಸನೀಸರ ಡೇಟ್‌ ಆಫ್‌ ಬರ್ತ್‌ ಯಾರಿಗಾದರೂ ನೆನಪಿದೆಯಾ? ತೇಜಸ್ವಿಗೆ ಅರವತ್ತೆೈದಾ, ಅರವತ್ತೇಳಾ, ಹತ್ತತ್ತಿರ ಎಪ್ಪತ್ತಾ? ಇವರಲ್ಲಿ ಹೆಚ್ಚಿನವರು ಪ್ರೊಫೆಸರುಗಳಲ್ಲ. ಯೂನಿವರ್ಸಿಟಿಯ ವೈಸ್‌ ಛಾನ್ಸಲರುಗಳಲ್ಲ. ಇವರಿಗೆ ಶಿಷ್ಯಕೋಟಿ ಅಂತ ಇರುವುದಿಲ್ಲ. ಎಲ್ಲೋ ಕುಳಿತು ಓದಿ, ಹೊಟ್ಟೆ-ನೆತ್ತಿ ತಣ್ಣಗಾದವನಂತೆ ಆನಂದ ಪಡುವ ಓದುಗ ಅಗ್ರೆಸ್ಸಿವ್‌ ಆಗಿ ತನ್ನ ಅಭಿಮಾನ, ಪ್ರೀತಿ ತೋರಿಸಲಾರ.

ಶಿಷ್ಯಕೋಟಿಯಿದ್ದವರಿಗಾದರೆ ಐವತ್ತಕ್ಕೊಮ್ಮೆ, ಅರವತ್ತಕ್ಕೊಮ್ಮೆ, ಎಪ್ಪತ್ತಕ್ಕೊಮ್ಮೆ, ಎಪ್ಪತ್ತೆೈದಕ್ಕೊಮ್ಮೆ -ಅಭಿನಂದನೆಗಳು, ಅಭಿನಂದನಾ ಗ್ರಂಥಗಳೂ ಹೊರಬರುತ್ತಿರುತ್ತವೆ. ಲೈಬ್ರರಿಯ ಪುಸ್ತಕಗಳ ಮರೆಯಲ್ಲೇ ಬದುಕುತ್ತ ಬರೆಯುತ್ತ ಉಳಿದುಬಿಟ್ಟ ರಾಘವೇಂದ್ರ ಖಾಸನೀಸರಿಗೆ ಶಿಷ್ಯರಿರಬಹುದು, ಕೋಟಿ ಎಲ್ಲಿಯದು?

ಮೊನ್ನೆ ಸಿಕ್ಕಾಗ ನಾನು-ಜಯಂತ ಕಾಯ್ಕಿಣಿ ಮಾತಾಡಿಕೊಂಡೆವು. ಇತ್ತೀಚೆಗೆ ಕನ್ನಡದ ಮನೆಗೆ ಹಿರಿಯರೇ ಇಲ್ಲವೆಂಬಂತೆ ಭಣಭಣ ಕಾಡುತ್ತಿದೆ. ಮೊದಲಾದರೇ ಒಂದು ಗೋಷ್ಠಿ, ಒಂದು ಪುಸ್ತಕ ಬಿಡುಗಡೆ, ಒಂದು ನಾಡಹಬ್ಬ ಅಂತ ಮಾಡಿದರೆ ಎಷ್ಟೊಂದು ಜನ ಹಿರಿಯ ಕವಿಗಳ, ಲೇಖಕರು ಬಂದು ಹೋಗುತ್ತಿದ್ದರು. ಹಬ್ಬದ ಮನೆಯಲ್ಲೊಂದು ಗಾಂಭೀರ್ಯ, ಒಂದು ಸಾರ್ಥಕತೆ ಇರುತ್ತಿತ್ತು. ಅವರು ಮಾತನಾಡಲಿ ಬಿಡಲಿ : ಶಿವರಾಮ ಕಾರಂತರು ಬಂದು ಕುಳಿತರೆ, ಅಲ್ಲಿ ಎ.ಎನ್‌.ಮೂರ್ತಿರಾಯರು ಉಪಸ್ಥಿತರಿದ್ದರೆ -ಏನೋ ಸಂತೋಷ. ತೀರ ಚಿಕ್ಕ ಪುಟ್ಟ ಸಮಾರಂಭಗಳಿಗೆ ಕರೆದರೂ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಬರುತ್ತಿದ್ದರು. ಅಡಿಗರು ಬಂದರಂತೂ ಅಲ್ಲಿ ಮಿಂಚಿನ ಸಂಚಾರವೇ. ಅಂಥವರನ್ನೆಲ್ಲ ಕರೆಸಿ, ಕೂರಿಸಿ ಮಾತನಾಡಿಸಿ, ಹಾರ ಹಾಕಿ, ಅವರು ರೇಗಿದರೆ ರೇಗಿಸಿಕೊಂಡು, ಬೈದರೆ ಸುಮ್ಮನಿದ್ದು -ನಾವೆಲ್ಲ ಎಷ್ಟು ಸಂಭ್ರಮಿಸುತ್ತಿದ್ದೆವಲ್ಲವೆ?

ಯಾವ ಯೂನಿವರ್ಸಿಟಿಯ ಉಸ್ತಾದನಿಗೂ ಸಿಕ್ಕದ ಗೌರವ, ಮನ್ನಣೆ ನಮ್ಮ ಬೇಂದ್ರೆಯಜ್ಜನಿಗೆ ಸುಮ್ಮನೆ ಸಪ್ತಾಪುರದ ಬೀದಿಯಲ್ಲಿ ನಡೆದು ಬಂದರೆ ಸಿಗುತ್ತಿತ್ತು, ಸಾಧನಕೇರಿಯ ತಿರುವಿನಲ್ಲಿ ಅಜ್ಜ ಇದಿರಾದರೆ ಗೌರವದಿಂದ ಕೈಗಳು ನಮನ ಹೇಳುತ್ತಿದ್ದವು.

ಮತ್ತೆ ಆ ಸಂಭ್ರಮ ಕನ್ನಡದ ವಾತಾವರಣಕ್ಕೆ ಹಿಂತಿರುಗಬೇಕು. ಯಾವನೋ ಕೆಲಸಕ್ಕೆ ಬಾರದ ಕೌನ್ಸಿಲರ್‌ನ ಹುಟ್ಟುಹಬ್ಬಕ್ಕೆ ಬೀದಿಯ ತುಂಬ ಫ್ಲೆಕ್ಸ್‌-ಪೋಸ್ಟರು ರಾರಾಜಿಸುತ್ತವೆ. ಮಂತ್ರಿಗೆ ಐವತ್ತೊಂಬತ್ತು ತುಂಬಿದರೆ ಪತ್ರಿಕೆಗಳ ತುಂಬ ಜಾಹೀರಾತು. ಆದರೆ ಮನೆಯ ಮಂದಿಗೆ ಸೌಜನ್ಯ ಕಲಿಸಿದ, ದಾಂಪತ್ಯಕ್ಕೆ ಆದರ್ಶ ಕಲಿಸಿದ, ಇಬ್ಬರ ನಡುವಿನ ಮೌನಕ್ಕೆ ಪಿಸುಮಾತು ಒದಗಿಸಿದ, ಮೂಢ ಅಂಧಕಾರಕೆ ಬೆಳಕಿನ ಕಿರಣ ಒದಗಿಸಿದ ಮೆಚ್ಚಿನ ಕವಿ-ಸಾಹಿತಿಗಳಿಗೆ ನಾವು ಸಂಭ್ರಮಿಸಿ ಕೃತಜ್ಞತೆ ಹೇಳಿದಿದ್ದರೆ ಹೇಗೆ?

ಮೊನ್ನೆ ಆಗಸ್ಟ್‌ ಎರಡನೇ ವಾರದಲ್ಲಿ ನಿಸ್ಸಾರ್‌ ಅಹ್ಮದ್‌ರನ್ನು ಶಿವಮೊಗ್ಗ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸುದ್ದಿ ಬಂತು. ಅವರಿಗೆ ಚಿಕ್ಕದೊಂದು ಪ್ರಶಸ್ತಿ ಬಂದರೂ, ಪುಟ್ಟ ಸಂತೋಷವಾದರೂ ನಮಗೆ ಅದೆಲ್ಲ ಆಯಿತೆಂಬಂತೆ ಸಂಭ್ರಮಿಸುವ ನಾನು, ನನ್ನ ಮನೆಯ ಮಂದಿ, ಆಫೀಸಿನ ಹುಡುಗ-ಹುಡುಗೀರು ಅವತ್ತು ಬೇಕೆಂದೇ ಸುಮ್ಮನಿದ್ದೆವು. ಏಕೆಂದರೆ ‘ಪ್ರಾರ್ಥನಾ’ದ ಸ್ವಾತಂತ್ರ್ಯತ್ಸವ ಕೈಯಳತೆ ದೂರದಲ್ಲಿತ್ತು. ನಿಸ್ಸಾರ್‌ಗೆ ಚೂರು ಸುಳಿವು ಕೊಡದೆ, ವೇದಿಕೆಗೆ ಕರೆತಂದು, ನೆರೆದ ಹತ್ತು ಸಾವಿರ ಜನರೆದುರು, ನಮ್ಮೆಲ್ಲರ ಪ್ರೀತಿ ಪೋಣಿಸಿ ಕಟ್ಟಿದಂತಿದ್ದ ಟ್ರಕ್ಕಿನ ಟಯರು ಗಾತ್ರದ ಒಂದು ಗುಲಾಬಿ ಹಾರವನ್ನು ಅವರಿಗೆ ಹಾಕಿ, ‘ಸಮ್ಮೇಳನಾಧ್ಯಕ್ಷತೆಯ ಮೊದಲ ಸಂಭ್ರಮವನ್ನು ಆಚರಿಸಿದ್ದು ನಾವೇ, ಪದ್ಮನಾಭನಗರದವರು!’ಅಂತ ಬೀಗಿದೆವು. ಕವಿಯ ಕಣ್ಣಲ್ಲಿ ಅದೆಂಥ ಅಕ್ಕರೆಯಿತ್ತೋ!

ನಾವು ಹೀಗೆ ಬೀಗಬೇಕು. ಬೀಗುವುದು ನಮ್ಮ ಸಂಸ್ಕೃತಿಯ ಒಂದು ಭಾಗವಾಗಬೇಕು. ದೊಡ್ಡ ಸೆಮಿನಾರು, ಕಾವ್ಯದ ಚರ್ಚೆ, ಅಭಿನಂದನಾ ಗ್ರಂಥ-ಅವೆಲ್ಲ ಸರಿಯೇ. ಅದು ಕವಿಯ ಮನಸ್ಸಿಗೆ ಮತ್ತಷ್ಟು ಮುದ ನೀಡುತ್ತದೆ. ಆದರೆ ಕವಿಯನ್ನು ಕೇಂದ್ರವಾಗಿಟ್ಟುಕೊಂಡು ನಲಿಯಬೇಕೆಂಬುದನ್ನು ಜನ ಸಾಮಾನ್ಯರಿಗೆ ಕಲಿಸಿಕೊಡಿ, ಅಂಥ ಸಂಭ್ರಮವನ್ನು ರೂಢಿ ಮಾಡಿಸಿ ‘ನೀವು ಬರೆದದ್ದೆಲ್ಲ ಓದಿದ್ದೇವೆ’ಅಂತ ಹೇಳಿದರೆ ಕವಿಗೆ ತುಂಬ ಸಂತೋಷವಾಗಬಹುದು. ಆದರೆ, ‘ನಿಮ್ಮ ಅರವತ್ತರ ಸಂಭ್ರಮದಲ್ಲಿ ಪಾಲ್ಗೊಂಡು ನಾನೂ ಸಂತೋಷಿಸಿದ್ದೇನೆ ’ ಅಂತ ಹೇಳಿದರೆ, ಸಾಮಾನ್ಯನ ಸಂಭ್ರಮ ಕವಿಯನ್ನು ಹೆಚ್ಚು ಸಂಪ್ರೀತನನ್ನಾಗಿಸುತ್ತದೆ. ಆ ಸಂಸ್ಕೃತಿ ನಮ್ಮಲ್ಲಿ ಬೆಳೆಯಲಿ.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)


ಪೂರಕ ಓದಿಗೆ-
ಬಿ.ಆರ್‌. ಲಕ್ಷ್ಮಣರಾಯರ ಹನಿಗವನಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more