• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದುಡ್ಡು ಕೊಡುವ ದಾರಿಗಳೂ ಹೀಗೂ ಉಂಟು ಗೊತ್ತೆ?

By Staff
|


ಶ್ರೀ ರವಿಶಂಕರನಿಗೆ ಪ್ರಸಾದವನ್ನು ಮಾರುವ ಬುದ್ಧಿ. ಆಧ್ಯಾತ್ಮ ಬಿಡಿ, ಅದರಷ್ಟು ಸೇಲಬಲ್‌ ಕಮಾಡಿಟಿ ಇವತ್ತು ಜಗತ್ತಿನಲ್ಲೇ ಇಲ್ಲ. ಇಂಥವರ ಮಧ್ಯೆ, ಬಡವರ ಮಕ್ಕಳನ್ನು ಮನೆಯ ಜಗುಲಿ ಮೇಲೆ ಕೂಡಿಸಿಕೊಂಡು ಪಾಠ ಹೇಳುವ ಬಡಮೇಷ್ಟ್ರು ದೊಡ್ಡ ಸಂತನೆನ್ನಿಸುತ್ತಾನೆ!

  • ರವಿ ಬೆಳಗೆರೆ
Helping hands...ಕೆಟ್ಟದ್ದು ಹರಡಿದ ಹಾಗೆ ಒಳ್ಳೆಯದೂ ಹರಡುತ್ತೆ. ಹಾಗಂತ ನಂಬಿದವನು ನಾನು. ಹಿಂದೆ ನಾನು ಮೆಡಿಕಲ್‌ ರೆಪ್ರೆಸೆಂಟೆಟಿವ್‌ ಆಗಿದ್ದಾಗ ಗಂಗಾವತಿಯಲ್ಲಿ ರಾಮರಾವ್‌ ಅಂತ ಒಬ್ಬರು ವೈದ್ಯರಿದ್ದರು. ವಿಪರೀತ ಜನಪ್ರಿಯತೆ ಇತ್ತು ಅವರಿಗೆ. ಒಳ್ಳೆಯ ಪ್ರಾಕ್ಟೀಸೂ ಇತ್ತು. ಸುತ್ತಲ ಹಳ್ಳಿಗಳಿಂದ, ಆಂಧ್ರದ ಕ್ಯಾಂಪುಗಳಿಂದ ರಾಮರಾವ್‌ ಅವರನ್ನು ಹುಡುಕಿಕೊಂಡು ಜನ ಬರುತ್ತಿದ್ದರು. ಬಂದವರಿಗೆ ಔಷಧಿ, ಹಣಿಗೆ ಕುಂಕುಮ, ಕೈಗೊಂದು ದಾರ ಕಟ್ಟುತ್ತಿದ್ದರು. ಒಂದು ಚಿಕ್ಕ ಮಂತ್ರ ಹೇಳುತ್ತಿದ್ದರು. ಬಂದ ರೋಗಿ ರಾಮರಾಯರ ಕಾಲಿಗೆ ನಮಸ್ಕರಿಸಿ ಔಷಧ ತೆಗೆದುಕೊಂಡು ಹೋಗುತ್ತಿದ್ದ. ಬಂದವರಲ್ಲಿ ತುಂಬ ಬಡವರೂ ಇರುತ್ತಿದ್ದರು.

ಒಮ್ಮೆ ನಾನು ಮತ್ತು ರೋಷ್‌ ಕಂಪನೆಯ ಒಬ್ಬ ರೆಪ್ರೆಸೆಂಟೆಟಿವ್‌ ಮಾತನಾಡುತ್ತ ಕುಳಿತಿದ್ದೆವು, ರಾಮರಾಯರೊಂದಿಗೆ. ಆಗಷ್ಟೇ ಆತ ರಾಮರಾಯರಿಗೆ ಒಂದು ಮೊಲದ ಬಿಳುಪಿನ, ದೊಡ್ಡ ಟರ್ಕಿ ಟವೆಲ್‌ನ ಗಿಫ್ಟ್‌ ಮಾಡಿದ್ದ. ವೈದ್ಯರಿಗೆ ಗಿಫ್ಟುಗಳನ್ನು ಕೊಡುವುದು ಆಗಿನ ಕಂಪೆನಿಗಳ ವಾಡಿಕೆ. ಆಷ್ಟರಲ್ಲಿ ಒಬ್ಬ ಹಣ್ಣು ಮುದುಕಿ ರಾಮರಾಯರಲ್ಲಿಗೆ ಬಂತು. ವೃದ್ಧೆಗೆ ಚಳಿ ಜ್ವರ. ರಾಯರು ಮಂತ್ರ ಹೇಳಿದರು, ದಾರಕಟ್ಟಿದರು, ಹಣೆಗಿಟ್ಟರು, ಔಷಧಿ ಕೊಟ್ಟರು.

‘ಫೀಜು ಕೊಡೋಕೆ ನನ್ನತ್ರ ಏನೂ ಇಲ್ಲ ಸ್ವಾಮೀ.. ’ಅಂದಿತು ಅಜ್ಜಿ.

ರಾಮರಾಯರು ವೃದ್ಧೆಯ ಕೈಗೆ ಹತ್ತು ರೂಪಾಯಿ ಬಸ್‌ ಛಾರ್ಜಿಗೆ ಅಂತ ಕೊಟ್ಟು, ರೋಷ್‌ ಕಂಪೆನಿಯವನು ಆಗಷ್ಟೆ ಕೊಟ್ಟ ಹೊಸ ಟವಲ್‌ ಕೊಡವಿ ಹೊದಿಸಿ ‘ಜ್ವರ ವಾಸಿಯಾಗುತ್ತದೆ ಹೋಗು!’ ಅಂದರು.

ಅದರಲ್ಲಿ ಅವರ ದಯೆಯಿತ್ತು, ಕರುಣೆಯಿತ್ತು. ಜೊತೆಗೆ, ಅಸಹಜವಲ್ಲದ-ಅನಾರೋಗ್ಯಕಾರಿಯೂ ಅಲ್ಲದ ಚಿಕ್ಕದೊಂದು ವ್ಯಾಪಾರೀ ಸ್ವಾರ್ಥವೂ ಇತ್ತು. ರೋಷ್‌ ಕಂಪೆನಿಯವನು ಕೊಟ್ಟ ಟರ್ಕಿ ಟವಲಿನಂಥವು ಮನೆಯಲ್ಲಿ ಹತ್ತಾರಿವೆ. ಬೇಕು ಅಂದರೆ ಅಂಥ ಟವಲು ಹತ್ತು ಕೊಳ್ಳಬಹುದು. ಇಲ್ಲಿ ವೃದ್ಧೆ ಚಳಿಯಲ್ಲಿ ನಡುಗುತ್ತಿದ್ದಾಳೆ. ಈಕೆಗೆ ಹೊದಿಕೆಯ ನೀಡ್‌ ಇದೆ. ಬಸ್‌ ಛಾರ್ಜಿಗೆ ಹತ್ತು ರೂಪಾಯಿ ಕೊಟ್ಟರೆ ಊರು ತಲುಪಿಕೊಳ್ಳುತ್ತಾಳೆ.

ಫೈನ್‌! ಆದರೆ ಅಜ್ಜಿ ತಾನು ಬದುಕಿರುವ ತನಕ ಡಾಕ್ಟ್ರು ಸ್ವಾಮಿಯ ಗುಣಗಾನ ಮಾಡುತ್ತಾಳೆ. ಊರತುಂಬ ಹೇಳಿಕೊಂಡು ಬರುತ್ತಾಳೆ. ಬಾಯಿಂದ ಬಾಯಿಗೆ ವೈದ್ಯರ ಹೆಸರು, ಒಳ್ಳೆತನ, ಕೈಗುಣ, ಕೀರ್ತಿ ಹಬ್ಬುತ್ತದೆ. ಅವರು ಹಣೆಗೆ ಹಚ್ಚಿದ ಅಂಗಾರ, ಕೈಗೆ ಕಟ್ಟಿದ ದಾರ ಕೆಲಸ ಮಾಡುತ್ತವೆಯೋ ಇಲ್ಲವೋ? ಮಂತ್ರ ಕೆಲಸ ಮಾಡುತ್ತದೋ ಇಲ್ಲವೋ? ಔಷಧಿಯಂತೂ ಕೆಲಸ ಮಾಡುತ್ತದೆ. ಇವತ್ತಿನ ಮಟ್ಟಿಗೆ ಟವಲ್‌ ಹೊದಿಕೆಯಾಗುತ್ತದೆ. ಹತ್ತು ರೂಪಾಯಿ ಆಕೆಯನ್ನು ಊರು ತಲುಪಿಸುತ್ತದೆ. ರಾಮರಾಯರು ಖರ್ಚು ಅಂತ ಮಾಡಿಕೊಂಡದ್ದು ಎರಡು ಚಿಟಿಕೆ ಔಷಧಿ. ಹತ್ತು ರೂಪಾಯಿ, ತಟುಗು ಒಳ್ಳೇತನ.

ಇದನ್ನ ನೀವು ನಾಟಕವೆನ್ನಬಹುದು. ಆದರೆ ಅದು ನಿರುಪದ್ರವಿ ನಾಟಕ. ನಾನದನ್ನು ದಯೆ, ಅನುಕಂಪಗಳೊಂದಿಗೆ ಬೆರೆತ ಸ್ಟ್ರೀಟ್‌ ಸ್ಮಾರ್ಟ್‌ನೆಸ್‌ ಅನ್ನುತ್ತೇನೆ. ನಮ್ಮ ಬಗ್ಗೆ ನಾಲ್ಕು ಮಂದಿ ಒಳ್ಳೆಯ ಮಾತಾಡಲಿ ಅಂತ ಬಯಸುವುದರಲ್ಲಿ ತಪ್ಪಿಲ್ಲ. ಒಳ್ಳೆಯ ಮಾತಿಗೆ ಅರ್ಹವಾಗುವಂಥ ಚಿಕ್ಕಪುಟ್ಟ ಕೆಲಸಗಳನ್ನು ಮಾಡುವುದು ತಪ್ಪಲ್ಲ. ಆ ಚಿಕ್ಕ ಪುಟ್ಟ ಕೆಲಸಗಳು ಎಲ್ಲೋ ಒಂದು ಕಡೆ ಸಣ್ಣಗೆ ಪಬ್ಲಿಸಿಟಿ ಮಟೀರಿಯಲ್ಲಿನಂತೆ ಕೆಲಸ ಮಾಡಿದರೆ, ಮಾಡಲಿ ಅಂತ ಯಾರಾದರೂ ನಿರೀಕ್ಷಿಸಿದರೆ -ಅದು ಕೂಡ ತಪ್ಪಲ್ಲ.

ತನ್ನ ಮನೆಯಿರುವ ಬೀದಿಯ ಇಕ್ಕೆಲಗಳಿಗೂ ಮುನಿಸಿಪಾಲಿಟಿಯವರು ಹಚ್ಚಿಹೋದ ಸಸಿಗಳಿಗೆ ನೀರು ಹಾಕಿ, ಅವು ಮರಗಳಾಗುವಂತೆ ಮಾಡಿ ಕೂಡ ಒಬ್ಬವ್ಯಕ್ತಿ ಪ್ರಚಾರಕ್ಕೆ ಮುಂದಾಗದೆ ಮನೆಯಲ್ಲೇ, ಮರೆಯಲ್ಲೇ ಉಳಿದರೆ, ಆತ ಸಂತ. ತಾನು ನೀರು ಹಾಕಿದ, ಬೆಳೆಸಿದ ಮರಗಳಿಗೆ ತನ್ನ ಸಂಸ್ಥೆಯ ಚಿಕ್ಕದೊಂದು ತಗಡಿನ ಬೋರ್ಡ್‌ ಹೊಡೆಸಿದರೆ ಸ್ಟ್ಟ್ರೀಟ್‌ ಸ್ಮಾರ್ಟ್‌.

ಪುಗಸಟ್ಟೆಯಾಗಿ ಯಾರೂ ಏನನ್ನೂ ಮಾಡಲು ಮುಂದಾಗದಂತಹ ಕಾಲವಿದು. ಪ್ರತಿಯಾಬ್ಬನೂ ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರಕ್ಕೆ ಕಂದಾಯ ಕಟ್ಟುತ್ತಾನಾದ್ದರಿಂದ ರಸ್ತೆಪಕ್ಕದ ಮರಕ್ಕೆ ನೀರು ಹನಿಸುವ, ವೃದ್ದೆಯನ್ನು ಊರು ಮುಟ್ಟಿಸುವ, ಬೀದಿನಾಯಿಗೆ ವ್ಯಾಕ್ಸೀನು ಹಾಕಿಸುವ -ಮುಂತಾದ ಕೆಲಸಗಳನ್ನು ಸರ್ಕಾರವೇ ಮಾಡಲಿ ಅಂತ ತೀರ್ಮಾನಿಸುತ್ತಾನೆ. ವಿದ್ಯೆ ಮತ್ತು ವೇಳೆಗೆ ಬಂದವರಿಗೆ ಊಟ, ಜೊತೆಗೆ ಆಧ್ಯಾತ್ಮ- ಒದಗಿಸಲೆಂದೇ ಅಸ್ತಿತ್ವಕ್ಕೆ ಬಂದ ಮಠ ಮಾನ್ಯಗಳು ಮೂರನ್ನೂ ಮಾರುತ್ತವೆ.

ಮಠಕ್ಕೆ ಮೆಡಿಕಲ್‌ ಕಾಲೇಜು ಬೇಕು. ಶ್ರೀ ಶ್ರೀ ರವಿಶಂಕರನಿಗೆ ಪ್ರಸಾದವನು ಮಾರುವ ಬುದ್ಧಿ. ಆಧ್ಯಾತ್ಮ ಬಿಡಿ, ಅದರಷ್ಟು ಸೇಲಬಲ್‌ ಕಮಾಡಿಟಿ ಇವತ್ತು ಜಗತ್ತಿನಲ್ಲೇ ಇಲ್ಲ. ಇಂಥವರ ಮಧ್ಯೆ, ಬಡವರ ಮಕ್ಕಳನ್ನು ಮನೆಯ ಜಗುಲಿ ಮೇಲೆ ಕೂಡಿಸಿಕೊಂಡು ಪಾಠ ಹೇಳುವ ಬಡಮೇಷ್ಟ್ರು ದೊಡ್ಡ ಸಂತನೆನ್ನಿಸುತ್ತಾನೆ. ಕೆಲಸದವಳ ಮಗನಿಗೆ ಊಟ ಹಾಕಿ, ತನ್ನ ಮಗನದೊಂದು ಹಳೇ ಅಂಗಿ ಕೊಡುವ ಗೃಹಿಣಿ ಶ್ರೇಷ್ಠಳೆನಿಸುತ್ತಾಳೆ. ಅಂಥವರು ತಾವು ಮಾಡಿದುದನ್ನು ನಾಲ್ಕು ಮಂದಿಗೆ ಹೇಳಿಕೊಂಡು ಬಂದರೆ, ಅದನ್ನು ಖಂಡಿಸಬೇಕಿಲ್ಲ ಎಂಬುದು ನನ್ನವಾದ. ‘ಆ ಮೇಷ್ಟ್ರು ಸಿಗರೇಟ್‌ ಸೇದ್ತಾನೆ ಗೊತ್ತಾ’ ಅಂತ ಆತನದೊಂದು ದೌರ್ಬಲ್ಯವನ್ನು ಬುಟ್ಟಿಯಾಳಗಿನಿಂದ ಹಾವನ್ನು ಈಚೆಗೆ ತೆಗೆದಂತೆ ತೆಗೆಯಬೇಕಿಲ್ಲ.

ನನಗೆ ಅಲ್ಲಾಬಕ್ಷ್‌ ಅಂತ ಒಬ್ಬ ಮಿತ್ರನಿದ್ದಾನೆ. ಅವನಿಗೊಂದು ತೆರವಾದ ತಿಕ್ಕಲು. ತಿಂಗಳಿಗೊಂದು ಸ್ಲಮ್‌ ಹುಡುಕುತ್ತಾನೆ. ಅದರ ಮಧ್ಯೆ ಇರುವ ಚಿಕ್ಕ ಕ್ಲಿನಿಕ್ಕೊಂದರಲ್ಲಿ ಸುಮ್ಮನೆ ಅರ್ಧಗಂಟೆ ಕೂತು ಆ ಡಾಕ್ಟರನೊಂದಿಗೆ ಹರಟುತ್ತಾನೆ. ಬರುವ ರೋಗಿಗಳಲ್ಲಿ ಬಡವರೆಷ್ಟು, ಅವರ ಔಷಧಿಗಳಿಗೆಷ್ಟಾಗುತ್ತದೆ, ಆ ಮೊತ್ತ ತಿಂಗಳಿಗೆಷ್ಟಾಗುತ್ತದೆ ಅಂತೆಲ್ಲ ತಿಳಿದುಕೊಳ್ಳುತ್ತಾನೆ. ನಂತರ ಹತ್ತಿರದ ಮೆಡಿಕಲ್‌ ಸ್ಟೋರಿಗೆ ಹೋಗಿ ಒಂದಷ್ಟು ಹಣ ಕೊಟ್ಟು ‘ಆ ಡಾಕ್ಟರು ಯಾರಾದರೂ ಬಡವರಿಗೆ ಕೊಟ್ಟ ಪ್ರಿಸ್ಕಿೃಪ್ಷನ್‌ ಬಂದರೆ, ಈ ದುಡ್ಡಿನಲ್ಲಿ ಅವರಿಗೆ ಔಷಧಿ ಕೊಡಿ’ ಅಂತ ಹೇಳಿ ಬರುತ್ತಾನೆ. ಇಂಥ ಮೆಡಿಕಲ್‌ ಷಾಪಿಗೆ ಅವರನ್ನು ಕಳಿಸಿ ಅಂತ ಡಾಕ್ಟರಿಗೂ ಹೇಳಿರುತ್ತಾನೆ.

‘ಇದರಿಂದ ನಿನಗೇನಯ್ಯಾ ಬರುತ್ತೆ?’ ಅಂತ ಅಲ್ಲಾಬಕ್ಷ್‌ನನ್ನು ಒಮ್ಮೆ ಕೇಳಿದೆ. ಅವನು ಸುಮ್ಮನೆ ನಕ್ಕ.

ವ್ಯಾಪಾರದಲ್ಲಿರೋರು ನಾವು. ಒಳ್ಳೆಯದೂ ಮಾಡ್ತೀವಿ. ಕೆಟ್ಟದೂ ಮಾಡ್ತೀವಿ. ದುಡ್ಡು ಅನ್ನೋದು ಹಂಗೂ ಬರುತ್ತೆ. ಹಿಂಗೂ ಬರುತ್ತೆ. ಡೈರೆಕ್ಟಾಗಿ ತಗೊಂಡೋಗಿ ಯಾರಿಗಾದರೂ ಕೊಟ್ರೆ ‘ಯಾಕೆ ಕೊಡ್ತಿದಾನೆ? ಏನು ಸ್ವಾರ್ಥ?’ ಅಂದ್ಕೋತಾರೆ. ಯಾರಿಗೆ ಕೊಡ್ತಿದೀವಿ ಅಂತ ಗೊತ್ತಾದರೆ ನಮಗೂ, ‘ಅವರಿಂದ ನಮಗೇನಾಗುತ್ತೆ? ’ ಅಂತ ಇಣುಕಿ ನೋಡೋ ಹಾಗಾಗುತ್ತೆ. ಪರಿಚಿತರಿಗೆ ಉಪಕಾರ ಮಾಡಿದರೆ, ‘ಅವನಿಗಿಷ್ಟೆಲ್ಲ ಮಾಡಿದೆ ’ ಅಂತ ಸಾಯೋತಂಕಾ ನಾವೇ ಹೇಳಿಕೊಳ್ಥಾ ಇರ್ತೀವಿ. ಒಂದೇ ಸ್ಲಮ್‌ನಲ್ಲಿ, ಒಂದೇ ಮೆಡಿಕಲ್‌ ಸ್ಟೋರಿಗೆ ಪ್ರತೀ ತಿಂಗಳು ಕೊಡ್ತಾ ಹೋದರೆ ‘ಇಲ್ಲಿ ಎಲೆಕ್ಷನ್ನಿಗೆ ನಿಲ್ತೀಯಾ? ’ ಅಂತ ಕೇಳ್ತಾರೆ. ಆರು ತಿಂಗಳು ಕಂಟಿನುಯಸ್‌ ಆಗಿ ಕಾಸು ಕೊಟ್ಟೆ ಒಂದೋ, ಮೆಡಿಕಲ್‌ ಸ್ಟೋರ್‌ನವನು ಕಳ್ಳಾ ಆಗ್ತಾನೆ. ಅಥವಾ ಅವನು-ಡಾಕ್ಟ್ರು ಇಬ್ರೂ ಸೇರಿಕೊಂಡೇ ಕಳ್ಳರಾಗ್ತಾರೆ. ಅದಕ್ಕೇ ಸ್ಲಮ್‌ ಬದಲಾಯಿಸ್ತೀನಿ.

ಒಂದೇ ಸ್ವಾರ್ಥ ಅಂದ್ರೆ, ನಮ್ಮ ಜಾತಿಯವರೇ ಹೆಚ್ಚಾಗಿರೋ ಸ್ಲಮ್‌ ಹುಡುಕ್ತೀನಿ! ಇದು ಅಲ್ಲಾಬಕ್ಷ್‌ನ ವಿವರಣೆ.

ನಾನು ವ್ಯಾಪಾರ ಮಾಡಲ್ಲ. ಅಂಥ ದುಡ್ಡೂ ಬರಲ್ಲ. ಹೀಗಾಗಿ ಸ್ಲಮ್ಮೂ ಹುಡುಕಲ್ಲ. ಅದರಲ್ಲಿ ನಮ್ಮವರಿದ್ದಾರಾ ಅಂತಾನೂ ನೋಡಲ್ಲ. ನಾನು ಯಾರಿಗೂ ಏನೂ ಕೊಡಲ್ಲ. ನನ್ನ ಆರೋಗ್ಯಕ್ಕೆ ಬೇಕಾದಷ್ಟು ದುಡ್ಡು ಎತ್ತಿಟ್ಕೊಂಡಿದೀನಿ. ಮೇಲೆ ಇನ್ಯೂರೆನ್ಸ್‌ ಮಾಡಿಸಿದೀನಿ. ಯಾಕಿದ್ದೀತು ಇಂಥದ್ದೆಲ್ಲ ಗೊಡವೆ? ಇದು ಇನ್ನೊಬ್ಬ ಮಿತ್ರನ ಅನಿಸಿಕೆ.

ತಪ್ಪು ಯಾರಲ್ಲಿ ಹುಡುಕಲಿ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more