• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಪ್ಪತ್ತೊಂದು ವರ್ಷಗಳ ಸುದೀರ್ಘ ಯುದ್ಧ ಗೆದ್ದವರ ಕುರಿತು...

By Staff
|
Ravi Belagere on Thatskannada.com ರವಿ ಬೆಳಗೆರೆ
ಅದೆಲ್ಲ ಆಗಿ ಆಗಲೇ ಇಪ್ಪತ್ತೊಂದು ವರ್ಷಗಳಾದವಾ ಅಂತ ಆಶ್ಚರ್ಯವಾಗಿದ್ದು, ಬೆಳಗಿನ ಪತ್ರಿಕೆ ನೋಡಿದಾಗ. ಬಳ್ಳಾರಿಯಿಂದ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿಗಾರ ಶಾಮ ಸುಂದರ್‌ ತುಂಬ ಸೊಗಸಾಗಿ ವರದಿ ಮಾಡಿದ್ದಾರೆ.

ಅದು ಬಳ್ಳಾರಿ ನ್ಯಾಯಾಲಯವೊಂದರಲ್ಲಿ ಸತತ ಇಪ್ಪತ್ತೊಂದು ವರ್ಷ ನಡೆದ ಒಂದು ಮಾನನಷ್ಟ ಮೊಕದ್ದಮೆಯ ಕೇಸು. ಆರೋಪಿಯಾಗಿ ನಿಂತವರು ಇಪ್ಪತ್ತೊಂದು ವರ್ಷದ ಹಿಂದೆ ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಪ್ರಾಮಾಣಿಕ ಅಧಿಕಾರಿ ಸುಧೀರ್‌ಕುಮಾರ್‌. ಇಪ್ಪತ್ತೊಂದು ವರ್ಷದ ನಂತರ ಅವರ ಮೇಲಿನ ಆರೋಪ ಸಾಬೀತಾಗದೆ, ಅವರನ್ನು ನ್ಯಾಯಾಲಯ ಖುಲಾಸೆ ಮಾಡಿದೆ.

ಶಾಮಸುಂದರ್‌ ಬರೆದ ವರದಿ ಓದುತ್ತಿದ್ದರೆ ಒಂದೊಂದಾಗಿ ನೆನಪುಗಳ ಸರಮಾಲೆ. ಅದು 1984ರ ಮಾತು. ನಾನು ಮೊಟ್ಟ ಮೊದಲ ಬಾರಿಗೆ ಬೆಂಗಳೂರಿಗೆ ಬಂದು, ಇಲ್ಲಿ ಪತ್ರಿಕೋದ್ಯಮದಲ್ಲಿ ನೆಲೆ ನಿಲ್ಲಲು ಯತ್ನಿಸಿ, ವಾಪಸು ಹೋಗಿ ‘ಬಳ್ಳಾರಿ ಪತ್ರಿಕೆ’ ಆರಂಭಿಸಿದ್ದ ದಿನಗಳು. ಅವತ್ತಿಗಾಗಲೇ ಬಳ್ಳಾರಿಯಲ್ಲಿ ಪೊಲೀಸ್‌ ಹತ್ಯಾಕಾಂಡವೊಂದು ಜರುಗಿ ಹನ್ನೊಂದು ಜನ ಸತ್ತಿದ್ದರು. ಅವತ್ತಷ್ಟೆ ಅಧಿಕಾರಕ್ಕೆ ಬಂದಿದ್ದ ರಾಮಕೃಷ್ಣ ಹೆಗಡೆ ಸರ್ಕಾರ ಬಳ್ಳಾರಿಗೆ ಪ್ರಾಮಾಣಿಕ ಪೊಲೀಸ್‌ ಅಧಿಕಾರಿಗಳನ್ನು ಕೊಡುವ ಮಾತನಾಡುತ್ತಿತ್ತು. ಆ ಸರಣಿಯಲ್ಲಿ ಬಂದವರೇ ಜಿಲ್ಲಾ ಎಸ್ಪಿ ಶ್ರೀಕುಮಾರ್‌ ಮತ್ತು ಜಿಲ್ಲೆಯ ಸ್ಪೆಷಲ್‌ ಡಿ.ಸಿ.ರಂಜನಿ ಶ್ರೀಕುಮಾರ್‌. ಅಷ್ಟು ಪ್ರಮಾಣಿಕ, ನೇರ ನಡೆ ನುಡಿಯ ದಂಪತಿಗಳನ್ನು ನಾನು ನೋಡಿಲ್ಲ.

ಗಂಡ ಐಪಿಎಸ್‌ ಅಧಿಕಾರಿ, ಹೆಂಡತಿ ಐ.ಎ.ಎಸ್ಸು! ಆದರೂ ತಮ್ಮ ಅಡುಗೆ ತಾವೇ ಬೇಯಿಸಿಕೊಂಡು ತಿನ್ನುತ್ತಿದ್ದರು. ಬರುವ ಸಂಬಳದಲ್ಲೇ ಸಣ್ಣಪುಟ್ಟ ಉಳಿತಾಯ. ಕಿರಾಣಿ ಅಂಗಡಿಯವನು ಜಾಸ್ತಿ ಲಾಭ ಹೊಡೆದು ಬಿಟ್ಟು ತಮಗೆ ಮೋಸವಾದೀತೇನೋ ಅಂತ ಆತಂಕಗೊಂಡೇ ದಿನಸಿ ತಂದುಕೊಳ್ಳುತ್ತಿದ್ದ ದಂಪತಿಗಳವರು. ಮುಂದೆ ಶ್ರೀಕುಮಾರ್‌ ಸಿಬಿಐಗೆ ಹೋದರು. ರಷೀದ್‌ ಮರ್ಡರ್‌ ಕೇಸಿನಿಂದ ಹಿಡಿದು, ರಾಜೀವ್‌ಗಾಂಧಿ ಹಂತಕರನ್ನು ಬೇಟೆಯಾಡಿದ ಕಥನದ ತನಕ ಶ್ರೀಕುಮಾರ್‌ ತಮ್ಮದೇ ಆದ ಛಾಪು ಮೂಡಿಸಿದ ವಿಶಿಷ್ಟ ಕೇಸುಗಳಿವೆ.

ಹೀಗೆ ಒಂದು ಕಡೆ ಶ್ರೀಕುಮಾರ್‌, ಹದಗೆಟ್ಟು ಹೋಗುತ್ತಿದ್ದ ಬಳ್ಳಾರಿಯನ್ನು ಒಂದು ತಹಬಂದಿಗೆ ತರುತ್ತಿದ್ದರೆ ಅವರಿಗೆ ಜೊತೆಯಾಗಿ ನಿಂತವರು, ಬಳ್ಳಾರಿಗೆ ಡಿಸಿಯಾಗಿ ಬಂದ ಸುಧೀರ್‌ ಕುಮಾರ್‌! ಅವರು ಬನಾರಸ್‌ನವರು ಅಂತ ನೆನಪು. ಬೆಳ್ಳಗೆ, ಕೊಂಚ plumpy ಆಗೇ ಇದ್ದ, ದಪ್ಪ ಕನ್ನಡಕದ, ಅವಸರವಸರ ಮಾತಿನ ಅತ್ಯಂತ ದಿಟ್ಟ ಪ್ರಾಮಾಣಿಕ ಅಧಿಕಾರಿ. ಈ ಮೂವರು ಜನ ಅಧಿಕಾರಿಗಳದೊಂದು ಕಾಂಬಿನೇಷನ್‌ ಬಳ್ಳಾರಿಯಲ್ಲಿ ಅನೇಕ ಬದಲಾವಣೆಗಳನ್ನು ತಂದಿತ್ತು. ಆ ದಿನಗಳಲ್ಲಿ ಸ್ಫೋಟಗೊಂಡದ್ದೇ ಬಂದೂಕು ಲಕ್ಷ್ಮಣ್‌ ಪ್ರಸಂಗ.

ನನಗೆ ನೆನಪಿದ್ದಂತೆ, ಬಳ್ಳಾರಿಯ ಪಾಲಿಟೆಕ್ನಿಕ್‌ನಲ್ಲಿ ಇನ್‌ಸ್ಟ್ರಕ್ಟರ್‌ ಆಗಿದ್ದ ಗೊಲ್ಲ ಲಕ್ಷ್ಮಣ ಎಂಬಾತ ಸೈಕಲ್ಲಿನಲ್ಲಿ ಓಡಾಡುತ್ತಿದ್ದ. ಆತನಿಗೆ ಆಯುಧ-ಮದ್ದು ಗುಂಡುಗಳ ಪ್ರಪಂಚಕ್ಕೆ ಹೇಗೆ ಪ್ರವೇಶ ಸಿಕ್ಕಿತೋ ಗೊತ್ತಿಲ್ಲ. ಬಳ್ಳಾರಿಯಲ್ಲಿ ‘ದ್ವಾರಕಾ ಆರ್ಮ್ಸ್‌’ ಎಂಬ ಫ್ಯಾಕ್ಟರಿಯಾಂದನ್ನು ತೆರೆದ. ಗಾಂಧೀನಗರದ ಮುಖ್ಯರಸ್ತೆಯಲ್ಲಿ, ನಾವು ನಿತ್ಯ ಓಡಾಡುತ್ತಿದ್ದ ರಸ್ತೆಯಲ್ಲೇ ಆ ಕಾಲಕ್ಕೊಂದು ಭವ್ಯ ಬಂಗಲೆ ಕಟ್ಟಿಸಿ ಅದಕ್ಕೂ ‘ದ್ವಾರಕಾ’ ಅಂತಲೇ ಹೆಸರಿಟ್ಟಿದ್ದ. ಮುಖಾಮುಖಿ ಆತನನ್ನು ನಾವು ನೋಡಿದ್ದೇ ಕಡಿಮೆ. ಆತ ಬಳ್ಳಾರಿಯಲ್ಲಿ ಕಮರ್ಷಿಯಲ್‌ ಟ್ಯಾಕ್ಸ್‌ ಅಧಿಕಾರಿಯಾಗಿದ್ದ ರಘು ಎಂಬುವವರ ಕಪಾಳಕ್ಕೆ ಹೊಡೆದನಂತೆ ಎಂಬಲ್ಲಿಂದ ಬಿಚ್ಚಿ ಕೊಂಡಿತು ನೋಡಿ ಬಂದೂಕು ರಾದ್ಧಾಂತ.

ತಮಾಷೆಯೆಂದರೆ, ಅತ್ಯುತ್ತಮವಾದ ಡಬಲ್‌ ಬ್ಯಾರಲ್‌ ಬಂದೂಕು ಮತ್ತು ಇವತ್ತಿಗೆ ದೇಶಾದ್ಯಂತ ಬಳಕೆಯಾಗುವ ಟ್ವೆಲ್ವ್‌ ಬೋರ್‌ನ ‘ಶಕ್ತಿಮಾನ್‌’ ಕಾಡತೂಸು ತಯಾರಿಸುತ್ತಿದ್ದ ‘ದ್ವಾರಕಾ ಆರ್ಮ್ಸ್‌’ ಫ್ಯಾಕ್ಟರಿ ನನ್ನ ಮನೆಗೆ ಕೂಗಳತೆ ದೂರದಲ್ಲೇ ಇತ್ತು. ಅದರ ಮೇಲೆ ತೆರಿಗೆ ದಾಳಿ ಮಾಡಿದ ಅಧಿಕಾರಿ ರಘು ಎಂಬುವವರಿಗೆ ಬಂದೂಕು ಲಕ್ಷ್ಮಣ್‌ ಕಪಾಳಕ್ಕೆ ಹೊಡೆದ ಅಂದರು. ಹೊಡೆದ ಮರುಕ್ಷಣ ಬೆಂಗಳೂರಿಗೆ ಹೋಗಿ ರಾಮಕೃಷ್ಣ ಹೆಗಡೆ ಮಗಳ ಮದುವೆ ಹಂದರದಲ್ಲೇ ರಘು ಅವರನ್ನು ಟ್ರಾನ್ಸ್‌ಫರ್‌ ಮಾಡಿದ ಆಜ್ಞೆಗೆ ಸಹಿ ಮಾಡಿಸಿ ತಂದ ಅಂದರು. ಅದೆಲ್ಲ ನಡೆಯುತ್ತಿದ್ದಾಗಲೇ ಎಸ್ಪಿ ಶ್ರೀಕುಮಾರ್‌ ಮತ್ತು ಡಿಸಿ ಸುಧೀರ್‌ ಕುಮಾರ್‌ ಜಂಟಿಯಾಗಿ ಬಂದೂಕು ಫ್ಯಾಕ್ಟರಿಯ ಮೇಲೆ ರೇಡ್‌ ಆರಂಭಿಸಿದ್ದು.

ಆ ರೇಡುಗಳ ವಿವರ ನನಗೆ ಯಾಕಿಷ್ಟು ಸ್ಪಷ್ಟವಾಗಿ ನೆನಪಿದೆ ಅಂದರೆ, ಇಬ್ಬರೂ ಅಧಿಕಾರಿಗಳಿಗೆ ನನ್ನ ಮೇಲೊಂದು ವಿಶ್ವಾಸವಿತ್ತು. ಅವರು ಮಾಡಿದ ದಾಳಿಗಳಿಗೆ ಕೆಲವೆಡೆ ಜೊತೆಯಾಗಿ ನನ್ನನ್ನು ಕರೆದೊಯ್ದರು. ನನ್ನನ್ನು ಒಂದೆರಡು ಕಡೆ ಪಂಚನಾಮೆಗೆ ಸಹಿ ಹಾಕಿಸಿ, ಸಾಕ್ಷೀದಾರನನ್ನಾಗಿ ಮಾಡಿದರು. ಬಂದೂಕು ಲಕ್ಷ್ಮಣ್‌ ಕೆಲಕಾಲ ತಲೆ ಮರೆಸಿಕೊಂಡ. ಆತ ನೇರವಾಗಿ ಜೈಲ್‌ಸಿಂಗ್‌(ಆಗಿನ ರಾಷ್ಟ್ರಪತಿ) ಮನೆಯಾಳಕ್ಕೆ ನಡೆದು ಹೋಗಿ ಬಿಡಬಲ್ಲಷ್ಟು ಪ್ರಭಾವಶಾಲಿಯಂತೆ ಅಂದರು. ಕೇಂದ್ರ ಸರ್ಕಾರದ ಗೃಹ ಸಚಿವಾಲಯದವರು ಬಳಸುವ ಕೆಲವು ಲೆಟರ್‌ಪ್ಯಾಡ್‌ಗಳು ಲಕ್ಷ್ಮಣ್‌ ಮನೆಯಲ್ಲಿ ಸಿಕ್ಕವು ಅಂದರು.

ನನಗೆ ತುಂಬ ಸ್ಪಷ್ಟವಾಗಿ ನೆನಪಿರುವುದೆಂದರೆ, ಗೃಹಸಚಿವಾಲಯದ ಶಸ್ತ್ರಾಸ್ತ್ರ ವಿಭಾಗದಲ್ಲಿ ಅತ್ಯಂತ ಹಿರಿಯ ಹುದ್ದೆಯಲ್ಲಿದ್ದು ನಿವೃತ್ತನಾಗಿದ್ದ ಡಂಗ್‌ವಾಲ್‌ ಎಂಬ ವೃದ್ಧನೊಬ್ಬನನ್ನು ಈ ಪ್ರಕರಣಕ್ಕೆ ದಿಲ್ಲಿಯಿಂದ ಹಿಡಿದುಕೊಂಡು ಬಂದು ಬಳ್ಳಾರಿಯ ಗಾಂಧೀನಗರದ ಲಾಕಪ್‌ನಲ್ಲಿ ಇರಿಸಿದ್ದರು ಶ್ರೀಕುಮಾರ್‌. ಭಯಂಕರ ಬುದ್ಧಿವಂತನಾಗಿದ್ದ ಡಂಗ್‌ವಾಲ್‌ ರಾತ್ರಿಯಿಡೀ ಪೊಲೀಸರನ್ನು ಶಪಿಸುತ್ತಾ ವಾಚಾಮಗೋಚರವಾಗಿ ಸಿಗರೇಟು ಸೇದುತ್ತಿದ್ದ. ಇದೆಲ್ಲದರ ಮಧ್ಯೆ ಅಕ್ಟೋಬರ್‌ 18, 1984ರಂದು ಗಾಂಧಿನಗರ ಠಾಣೆಯಲ್ಲಿ ಬಂದೂಕು ಲಕ್ಷ್ಮಣ್‌ ವಿರುದ್ಧ ಒಂದು ಮೊಕದ್ದಮೆ ದಾಖಲಾಯಿತು. ಎಲ್ಲ ಪ್ರಕರಣಗಳಂತೆ ಈ ಪ್ರಕರಣವೂ ಕಡತಗಳ ಮಧ್ಯೆ ಉಸಿರು ಕಳೆದುಕೊಳ್ಳುತ್ತಿತ್ತೇನೋ?

ಅತ್ತ ಲಕ್ಷ್ಮಣ್‌ ಅಕ್ಟೋಬರ್‌ 26, 1984ರಂದು ಜಿಲ್ಲಾಧಿಕಾರಿ ಸುಧೀರ್‌ ಕುಮಾರ್‌ ಅವರ ಮೇಲೊಂದು ಮಾನನಷ್ಟ ಮೊಕದ್ದಮೆ ದಾಖಲಿಸಿದ. ತನ್ನನ್ನು ನೌಕರರೆದುರಿಗೆ ಸುಧೀರ್‌ ಬೈದು, ನಿಂದಿಸಿ ಅವಮಾನಿಸಿದರು ಎಂಬುದು ದೂರು. ಈ ಘಟನೆ ಅಕ್ಟೋಬರ್‌ 20ರ ಸಂಜೆ ನಡೆಯಿತು ಅಂತ ಲಕ್ಷ್ಮಣ್‌ ದಾಖಲಿಸಿದ್ದ. ಆದರೆ ದೂರು ಕೊಡಲಿಕ್ಕೆ ಆತ ಆರು ದಿನ ತೆಗೆದುಕೊಂಡಿದ್ದ. ತಾನು ತಯಾರಿಸುವ ಬಂದೂಕುಗಳ ಡೀಲರ್‌ಷಿಪ್‌ನ್ನು ಆಜಂಗಢದಲ್ಲಿರುವ ತಮ್ಮ ಸಂಬಂಧಿಯಾಬ್ಬರಿಗೆ ಕೊಡಬೇಕೆಂದು ಸುಧೀರ್‌ ಒತ್ತಾಯಿಸಿದರು. ಅದನ್ನು ಕೊಡಲು ತಾನು ಒಪ್ಪದೇ ಇದ್ದಾಗ ಪೊಲೀಸರನ್ನಿಟ್ಟು ತನ್ನ ಮೇಲೆ ದಾಳಿ ಮಾಡಿಸಿದ್ದಲ್ಲದೆ, ತನ್ನನ್ನು ವಾಚಾಮಗೋಚರವಾಗಿ ನೌಕರರೆದುರಿಗೆ ಬೈದರು ಅಂತ ದೂರು ದಾಖಲಿಸಿದ್ದ.

ತಮಾಷೆಯೆಂದರೆ, ಪೊಲೀಸರು ಶ್ರೀಕುಮಾರ್‌ ನೇತೃತ್ವದಲ್ಲಿ ಬಂದೂಕು ಫ್ಯಾಕ್ಟರಿಯ ಮೇಲೆ ದಾಳಿ ನಡೆಸಿದಾಗ ಅಲ್ಲಿಗೆ ಜಿಲ್ಲಾಧಿಕಾರಿ ಸುಧೀರ್‌ ಕುಮಾರ್‌ ಸಹಜವಾಗಿಯೇ ಬಂದಿದ್ದರು. ಹಾಗೆ ಬರಲಿಕ್ಕೆ ಅವರಿಗೆ ಜಿಲ್ಲಾ ದಂಡಾಧಿಕಾರಿಯಾಗಿ ಸಹಜ ಅಧಿಕಾರವಿತ್ತು. ಆದರೆ ಶ್ರೀಕುಮಾರ್‌ ಮತ್ತು ಸುಧೀರ್‌ ಕುಮಾರ್‌ ಬರುವ ಹೊತ್ತಿಗೆ ಬಂದೂಕು ಲಕ್ಷ್ಮಣ ತನ್ನ ಕಾರ್ಖಾನೆಯಲ್ಲಿ ಇರಲೇ ಇಲ್ಲ. ಆತ ಮತ್ತು ಸುಧೀರ್‌ ಒಬ್ಬರನ್ನೊಬ್ಬರು ಭೇಟಿಯಾಗಿರಲೇ ಇಲ್ಲ. ಆಜಂಗಢದಲ್ಲಿ ಸುಧೀರ್‌ ಯಾರಿಗೂ ಬಂದೂಕು ಡೀಲರ್‌ಷಿಷ್‌ ಕೊಡಿಸಬೇಕಾಗಿಯೇ ಇರಲಿಲ್ಲ. ಎದುರಾ ಎದುರು ಭೇಟಿಯಾಗಲೇ ಇಲ್ಲವೆಂದ ಮೇಲೆ ಬಯ್ಯುವ, ಅವಮಾನಿಸುವ ಪ್ರಶ್ನೆಯೇ ಇಲ್ಲವಲ್ಲ? ಆದರೂ 21ವರ್ಷಗಳ ಹಿಂದೆ ನ್ಯಾಯಾಲಯ, ಸುಧೀರ್‌ ಕುಮಾರ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಬಂದೂಕು ಲಕ್ಷ್ಮಣ್‌ಗೆ ಅನುಮತಿ ನೀಡಿತ್ತು. ಕರ್ನಾಟಕದ ಕ್ರಿಮಿನಲ್‌ ಅಡ್ವೊಕೇಟ್‌ಗಳ ಸಾಲಿನಲ್ಲಿ ಪ್ರಮುಖರಾದ, ಬಳ್ಳಾರಿಯ ವಕೀಲ ಅರವಿಂದ ಮಳೇಬೆನ್ನೂರ್‌ ಈ ಪ್ರಕರಣದಲ್ಲಿ ಬಂದೂಕು ಲಕ್ಷ್ಮಣ್‌ ಪರ ವಕೀಲರಾಗಿ ನಿಂತರು.

ನಿಮಗೆ ಆಶ್ಚರ್ಯವಾಗಬಹುದು: 1986ರಲ್ಲಿ ತಮ್ಮ ಅವಧಿ ಮುಗಿಸಿ ಬಳ್ಳಾರಿ ಬಿಟ್ಟು ಬೆಂಗಳೂರು ಮತ್ತು ದಿಲ್ಲಿಯಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿದ್ದ ಸುಧೀರ್‌ ಕುಮಾರ್‌ ಈ ಕೇಸಿಗೆ ಅಂತ 45ಸಲ ಬಳ್ಳಾರಿಗೆ ಬಂದು ಹೋಗಿದ್ದಾರೆ. ಸ್ವತಃ ಜಿಲ್ಲಾ ಮ್ಯಾಜಿಸ್ಟ್ರೇಟರಾಗಿದ್ದ ಅವರು, ಆರೋಪಿಯ ಸ್ಥಾನದಲ್ಲಿ ಕಟಕಟೆ ಹತ್ತಿ ನಿಂತಿದ್ದಾರೆ. ಒಬ್ಬರಾದ ಮೇಲೊಬ್ಬರಂತೆ ಈ 21ವರ್ಷಗಳಲ್ಲಿ ಯಾರ್ಯಾರು ಮ್ಯಾಜಿಸ್ಟ್ರೇಟರು ಬಂದು ಹೋದರೋ, ಅವರಿಗೆಲ್ಲ ಕೈ ಮುಗಿದಿದ್ದಾರೆ. ಹನ್ನೆರಡು ಸಾವಿರ ರೂಪಾಯಿ ಒತ್ತೆ ಹಣ ಕಟ್ಟಿ ಜಾಮೀನಿನ ಮೇಲೆ ಹನ್ನೆರಡೂವರೆ ವರ್ಷ ಕಳೆದಿದ್ದಾರೆ. ಸರ್ಕಾರಿ ನಿಯಮದ ಪ್ರಕಾರ ಒಬ್ಬ ಐಎಎಸ್‌ ಅಧಿಕಾರಿಯ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಾದರೆ, ಅದರ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯ ನಡೆಸಬೇಕು. ಸುಧೀರ್‌ಕುಮಾರ್‌ರ ವಿಷಯದಲ್ಲಿ JMFC ನ್ಯಾಯಾಲಯ ಕೇಸು ನಡೆಸಿತು. ಅಷ್ಟೇ ಅಲ್ಲ, ಕರ್ನಾಟಕದ ಇತಿಹಾಸದಲ್ಲೇ ಒಬ್ಬ IAS ಅಧಿಕಾರಿಯ ವಿರುದ್ಧ ದಾಖಲಾದ ಮೊದಲ ಕ್ರಿಮಿನಲ್‌ ಕೇಸು ಇದು ಅನ್ನಿಸಿಕೊಂಡಿತ್ತು.

‘ಇಷ್ಟಾಗಿ, 21ವರ್ಷಗಳ ಹಿಂದೆ ನನ್ನ ಕರ್ತವ್ಯ ನಾನು ಮಾಡಿದ್ದೆ. ನಾನು ಯಾವ ತಪ್ಪೂ ಮಾಡಿರಲಿಲ್ಲ’ ಅಂತ ಮೊನ್ನೆ ಬಿಡುಗಡೆಯಾದ ಸಂದರ್ಭದಲ್ಲಿ ಹೇಳಿದ್ದಾರೆ ಸುಧೀರ್‌. ಅವರ ಪರವಾಗಿ ವಾದಿಸಿದವರು ಈಶ್ವರ ಇಂಗಳಹಳ್ಳಿ ವಕೀಲರು.‘ಸುಧೀರ್‌ ಕುಮಾರ್‌, ಲಕ್ಷ್ಮಣ್‌ ಅವರನ್ನು ಯಾವ ಭಾಷೆಯಲ್ಲಿ ಬೈದರು?’ ಅಂತ ಕೇಳಿದ್ದಕ್ಕೆ ಸಾಕ್ಷೀದಾರರ ಪೈಕಿ ಕೆಲವರು ಇಂಗ್ಲಿಷಿನಲ್ಲಿ ಅಂದರಂತೆ. ಮತ್ತೆ ಕೆಲವರು ಕನ್ನಡದಲ್ಲಿ ಅಂದರಂತೆ. ಬೈಯದೇನೇ ಇದ್ದ ಬೈಗುಳವನ್ನು 21ವರ್ಷ ನೆನಪಿಟ್ಟುಕೊಂಡು ಸಾಕ್ಷ್ಯ ಹೇಳುವ ಸಾಕ್ಷೀದಾರನಾದರೂ ಎಲ್ಲಿ ಸಿಕ್ಕಾನು?ಸುಧೀರ್‌ ಕುಮಾರ್‌ ಕಡೆಗೂ ದೋಷ ಮುಕ್ತರಾದರು ಅಂತ ಗೊತ್ತಾದಾಗ ಬಳ್ಳಾರಿಯಲ್ಲಿ ಯಾರೋ ಪಟಾಕಿ ಹೊಡೆದರಂತೆ. ಆ ಊರಿಗೆ ಅಷ್ಟಾದರೂ ಕೃತಜ್ಞತೆ ಇದೆಯಲ್ಲ? ಅನ್ನಿಸಿತು.

ನನಗೆ ಇದೆಲ್ಲಕ್ಕಿಂತ ನೆನಪಿರುವ ಘಟನೆಯಾಂದಿದೆ, ಸುಧೀರ್‌ಗೆ ಸಂಬಂಧಿಸಿದಂತೆ. ಅದೊಂದು ಮುಂಜಾನೆ ಅನಂತಪುರಂ ಜಿಲ್ಲೆಯ ಕೊರಚರ ಹೆಣ್ಣು ಮಗಳೊಬ್ಬಳು ನನ್ನ ಮನೆಗೆ ಬಂದಿದ್ದಳು. ಆಕೆಯ ಗಂಡ ಎರಿಕುಲ ಕೃಷ್ಣಪ್ಪ ವೃತ್ತಿಯಿಂದ ಡಕಾಯಿತು. ಆತನನ್ನು ಗುಂತಕಲ್ಲಿನ ಸಬ್‌ಇನ್ಸ್‌ಪೆಕ್ಟರ್‌ ನಾಗನ್ನ ಎಂಬಾತ ಭಯಂಕರವಾಗಿ ಬಡಿದು ಕೊಂದಿದ್ದ. ತೀರ ಸಾಯುವ ಮುನ್ನ ಬಳ್ಳಾರಿಯ ಆಸ್ಪತ್ರೆಗೆ ತಂದು ಸೇರಿಸಿ, ಸತ್ತ ಮೇಲೆ ಆಸ್ಪತ್ರೆಯ ಹಿಂದೆಯೇ ಹೂತು ಹಾಕಿ ಹೋಗಿಬಿಟ್ಟಿದ್ದ.

ಎರಿಕುಲ ಕೃಷ್ಣಪ್ಪನ ಹೆಂಡತಿ ನೆರವು ಕೇಳಿಕೊಂಡು ನನ್ನಲ್ಲಿಗೆ ಬಂದಿದ್ದಳು, ಅವಳನ್ನೂ ಕರೆದುಕೊಂಡು ಜಿಲ್ಲಾಧಿಕಾರಿಗಳ ಕಚೇರಿಗೆ ಹೋದರೆ, ಅವತ್ತಷ್ಟೇ ಬಂದು charge ತೆಗೆದುಕೊಂಡಿದ್ದರು ಸುಧೀರ್‌. ನಾನು ಹೋದಾಗ ಆಫೀಸರ್ಸ್‌ ಕ್ಲಬ್‌ನಲ್ಲಿ ಬೆಳಗಿನ ತಿಂಡಿ ತಿನ್ನುತ್ತಿದ್ದರು. ‘ವಿಷಯ ಹೀಗಿದೆ’ಅಂತ ತಿಳಿಸಿದೆ. ತಕ್ಷಣ ಕೈಲಿದ್ದ ಪ್ಲೇಟು ಕೆಳಗಿಟ್ಟು ‘ ಹೆಣ ತೆಗೆಸೋಣ ಬನ್ನಿ’ ಅಂತ ಹೊರಟೇ ಬಿಟ್ಟರು. ಅದೇ ಹೆಣ್ಣು ಮಗಳ ಕೈಲಿ ನಾನು ಸುಪ್ರೀಂ ಕೋರ್ಟಿನ ಅಂದಿನ ನ್ಯಾಯಮೂರ್ತಿ ಓ.ಚಿನ್ನಪ್ಪರೆಡ್ಡಿ ಅವರಿಗೊಂದು ಟೆಲಿಗ್ರಾಂ ಕೊಡಿಸಿದ್ದೆ. ಆ ಟೆಲಿಗ್ರಾಮನ್ನೇ ರಿಟ್‌ ಅರ್ಜಿಯನ್ನಾಗಿ ಪರಿಗಣಿಸಿದ ಜಸ್ಟೀಸ್‌ ಚಿನ್ನಪ್ಪ ರೆಡ್ಡಿ ಗುಂತಕಲ್ಲು, ಎಸ್‌ ಐ ನಾಗನ್ನನನ್ನು ಸಸ್ಪೆಂಡ್‌ ಮಾಡಿದ್ದರು.

ಆನಂತರದ ದಿನಗಳಲ್ಲಿ ಸುಧೀರ್‌ನನ್ನೊಂದಿಗೆ ತುಂಬ ಆತ್ಮೀಯರಾಗಿದ್ದರು. ಪರಮನಾಸ್ತಿಕನಾದ ನಾನು ಆ ದಿನಗಳಲ್ಲೇ ರಾಹುಕಾಲದಲ್ಲಿ ನನ್ನ ಪ್ರಿಂಟಿಂಗ್‌ ಪ್ರೆಸ್‌ ಆರಂಭಿಸಿದ್ದೆ. ಅದಕ್ಕೆ ಅವರೇ ಮುಖ್ಯ ಅತಿಥಿ! You are crazyಎಂಬಂತೆ ನೋಡಿದ್ದರು. ಮುಂದೆ ಬೆಂಗಳೂರಿನಲ್ಲೊಮ್ಮೆ ಭೇಟಿಯಾಗಿದ್ದರು. ಅವರ ಪ್ರಾಮಾಣಿಕತೆಯ ಹೊಡೆತ ತಾಳಲಾರದೆ ಅಂದಿನ ವಸತಿ ಸಚಿವ ಗೋಪೀನಾಥ ಸಾಂಡ್ರಾ ಒದ್ದಾಡಿ ಹೋಗಿದ್ದರು.

ಸುಧೀರ್‌ ಅವತ್ತಿಗೂ ಬದಲಾಗಿರಲಿಲ್ಲ.

ಇಪ್ಪತ್ತೊಂದು ವರ್ಷಗಳ ನಂತರ, ಇವತ್ತಿಗೂ ಬದಲಾಗಿಲ್ಲ. ಅವರೀಗ ದಿಲ್ಲಿಯ ಕರ್ನಾಟಕ ಭವನದ ರೆಸಿಡೆಂಟ್‌ ಕಮೀಶನರ್‌ ಆಗಿದ್ದಾರೆ. ಅವರಿಗೀಗ ವಯಸ್ಸು ಎಷ್ಟಾಗಿದೆಯೋ?

(ಸ್ನೇಹ ಸೇತು: ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more