ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್‌ ಎಂಬ ಇಪ್ಪತ್ತೆೈದು ವರ್ಷ ವಯಸ್ಸಿನ ನಾಣಿ ಕಂಪೆನಿ!

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ನಿಮಗಿಷ್ಟವಾದೀತೇ?

ಗೊತ್ತಿಲ್ಲ. ಆದರೆ ಅಚ್ಚರಿಯಂತೂ ಆಗುತ್ತದೆ. ಕಂಪ್ಯೂಟರ್‌ ಜಗತ್ತಿನ ಅನಭಿಷಿಕ್ತ ಸಾಮ್ರಾಟ್‌ ಬಿಲ್‌ಗೇಟ್ಸ್‌ ಭಾರತಕ್ಕೆ ಬಂದರೆ ಬ್ರೇಕ್‌ಫಾಸ್ಟಿಗೆ ತನ್ನ ಜೊತೆ ಇನ್‌ಪೋಸಿಸ್‌ನ ನಾರಾಯಣಮೂರ್ತಿ ಇರಲಿ ಅಂತ ಬಯಸುತ್ತಾನೆ. ಅಮೆರಿಕದ ಸ್ಟಾಕ್‌ ಎಕ್ಸ್‌ಛೇಂಜ್‌ ಮೈಸೂರಿನ ಇನ್‌ಫೋಸಿಸ್‌ ಆವರಣದ ಸಂಜ್ಞೆಯಿಂದ ಒಂದು ದಿನದ ವಹಿವಾಟು ಆರಂಭಿಸಿ, ಈ ತನಕ ಇದು ನಡೆದಿರುವುದು ಮೂರೇ ಸಲ ಅಂತ ಘೋಷಿಸುತ್ತದೆ. ತನ್ನ ಕಂಪನಿಯಲ್ಲಿ ಕೆಲಸ ಮಾಡುವವರಿಗೆ 25ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ 126 ಕೋಟಿ ರುಪಾಯಿಗಳ ಬೋನಸ್‌ ಘೋಷಿಸುತ್ತದೆ ಇನ್‌ಫೋಸಿಸ್‌.

ಮೈಸೂರಿನ ಒಬ್ಬ ಮಧ್ಯಮ ವರ್ಗದ, ಆ್ಯವರೇಜ್‌ ಬುದ್ಧಿವಂತ ಬ್ರಾಹ್ಮಣ ಈ ಮಟ್ಟದ ಸಾಧನೆ ಮಾಡಿದ್ದಾನೆಂದರೆ, ಆಶ್ಚರ್ಯವಂತೂ ಖಂಡಿತ ಆಗುತ್ತದೆ. ನಾರಾಯಣಮೂರ್ತಿ ಬ್ರಾಹ್ಮಣ ಎಂಬುದು ಬಯಾಲಾಜಿಕಲ್‌ ಆ್ಯಕ್ಸಿಡೆಂಟು. ಮೈಸೂರಿನವರು ಎಂಬುದು ಜಿಯಾಗ್ರಫಿಕಲ್‌ ಆ್ಯಕ್ಸಿಡೆಂಟು. ಆದರೆ ಒಬ್ಬ ವ್ಯಕ್ತಿ, ಅದರಲ್ಲೂ ಮಧ್ಯಮ ವರ್ಗದ ಆ್ಯವರೇಜ್‌ ಕ್ರಿಯಾಶೀಲ ಮನುಷ್ಯ ಶ್ರದ್ಧೆಯಿಟ್ಟು ಪ್ರಯತ್ನಿಸಿದರೆ ಯಾವ ಮಟ್ಟಕ್ಕೆ ಬೇಕಾದರೂ ಮುಟ್ಟಬಲ್ಲ ಎಂಬುದಕ್ಕೆ ನಾಣಿ ಸಾಕ್ಷಿ. ಅನುಕರಣೀಯ ಉದಾಹರಣೆ ಕೂಡ.

N.R. Narayanmurthyಒಂದಷ್ಟು ಮಿತ್ರರೊಂದಿಗೆ ಕುಳಿತು ಮಾತನಾಡಿ ಇನ್ಫೋಸಿಸ್‌ ಬಗ್ಗೆ ರಫ್‌ ಆಗಿ ಕಲೆ ಹಾಕಿದ ಕೆಲವು ವಿವರಗಳನ್ನಿಲ್ಲಿ ಕೊಡುತ್ತೇನೆ, ನೋಡಿ. ಇಪ್ಪತ್ತೆೈದು ವರ್ಷಗಳ ಹಿಂದೆ 1981ರಲ್ಲಿ ಖಾಸಗಿ ಕಂಪ್ಯೂಟರ್‌ ಸಂಸ್ಥೆಯಾಂದರಲ್ಲಿ ಉದ್ಯೋಗಿಯಾಗಿದ್ದರು ನಾರಾಯಣಮೂರ್ತಿ. ಸುಧಾಮೂರ್ತಿ ಕೂಡ ಇಂಜಿನೀರಿಕೆ ಮಾಡಿಕೊಂಡಿದ್ದರು. ಆಗ ಹುಟ್ಟಿದ ಯೋಚನೆಯೇ ಇಂದಿನ ಇನ್‌ಫೋಸಿಸ್‌. ಅವತ್ತು ಕೇರಳದ ಕ್ರಿಸ್‌ ಗೋಪಾಲಕೃಷ್ಣ, ನಂದನ್‌ ನಿಲೇಕಣಿ, ರಾಘವನ್‌, ಮಾರವಾಡಿ ಶಿಬುಲಾಲ್‌ ಮುಂತಾದವರನ್ನು ಕರೆದು ನಾರಾಯಣಮೂರ್ತಿ ಸ್ವಂತ ಕಂಪೆನಿಯ ಸ್ಥಾಪನೆ ಬಗ್ಗೆ ಮಾತನಾಡಿದಾಗ ಯಾರೂ ಒಪ್ಪಿರಲಿಲ್ಲವಂತೆ. ಕಡೆಗೆ ನಂದನ್‌ ವಯಸ್ಸಿನ ಯುವಕರನ್ನು ಅವರ ಭಾವೀ ಪತ್ನಿಯರ ಸಮೇತ ಊಟಕ್ಕೆ ಕರೆದು ನಾಣಿ-ಸುಧಕ್ಕ ಈ ಪ್ರಾಜೆಕ್ಟ್‌ನ ಬಗ್ಗೆ ಕನ್ವಿನ್ಸ್‌ ಮಾಡಿದರಂತೆ.

ಹೀಗೆ ಶುರುವಾದ ಸಂಸ್ಥೆ ಮೊದಲ 10 ವರ್ಷ ಪಡಬಾರದ ಕಷ್ಟಪಟ್ಟಿದೆ. ಅದೆಲ್ಲ ಹೆಚ್ಚಿನದಾಗಿ ನಾಣಿ ಅನುಭವಿಸಿದ ಕಷ್ಟವಿರಬೇಕು. ಅವತ್ತಿಗೂ ಇವತ್ತಿಗೂ ಇನ್ಫೋಸಿಸ್‌ನದು ಸ್ವಂತ ಪ್ರಾಡಕ್ಟು ಅಂತ ಇಲ್ಲ. ನೀವು ಏನಾದರೂ ಮಾಡಬಯಸಿದರೆ, ಅದನ್ನು ಸುಲಭವಾಗಿ ಮಾಡಲಿಕ್ಕೆ ನಿಮಗೆ ಸಹಾಯ ಮಾಡುತ್ತದೆ ಇನ್ಫೋಸಿಸ್‌ : ಅಷ್ಟೆ. ಇವತ್ತಿಗೂ ಅದರ ಕೆಲಸ ಅಷ್ಟೆ. ಇದಕ್ಕೆ ಬುದ್ಧಿವಂತಿಕೆ ಬೇಕಾಗಿಲ್ಲ. ಕಾರ್ಯಕ್ಷಮತೆ ಬೇಕು. ಮನಸು-ಬೆನ್ನು ಕತ್ತೆಯಾಗಿದ್ದಷ್ಟೂ ಇನ್ಫೋಸಿಸ್‌ನಲ್ಲಿ ಬೆಳವಣಿಗೆ ಚಕಚಕ. ಅಕಸ್ಮಾತ್‌ ಅವನು ಜೀನಿಯಸ್‌ ಅಂತ ತನ್ನನ್ನು ತಾನು ಭಾವಿಸಿದನಾ? ಅದು ನಿಜವೂ ಹೌದಾ? ಆ ನೌಕರ ತಕ್ಷಣ ಇನ್ಫೋಸಿಸ್‌ ಬಿಟ್ಟು ಹೋಗುತ್ತಾನೆ. ಆ ಜೀನಿಯಸ್ಸು ಕೆಲಸಕ್ಕೆ ಬರಲಿಲ್ಲವಾ? ಇನ್ಫೋಸಿಸ್‌ಗೆ ವಾಪಸು ಬರುತ್ತಾನೆ. ಇಪ್ಪತ್ತೆೈದು ವರ್ಷಗಳ ಹಿಂದೆ ಜಗತ್ತಿನಲ್ಲಿ ಯಾರೂ ಮಾಡದೆ ಇದ್ದ ordinary ಕೆಲಸವನ್ನೇ ಇನ್ಫೋಸಿಸ್‌ ಅತ್ಯಂತ ಶ್ರದ್ಧೆಯಿಂದ, ಕಾರ್ಯಕ್ಷಮತೆಯಾಂದಿಗೆ ಮಾಡಿತು. ಅದೊಂದೇ ಈ ಸಂಸ್ಥೆಯ ಹೆಗ್ಗಳಿಕೆ. ಆದರೆ ನಿಜವಾದ ಹೆಗ್ಗಳಿಕೆ!

ಆದರೆ ವಿಚಿತ್ರ ನೋಡಿ, ಇವರ ವ್ಯಾಪಾರ ಒಂದು ಮಿಲಿಯನ್‌ ಡಾಲರ್‌ಗಳ turn over ಪಡೆಯಲಿಕ್ಕೆ ಇಪ್ಪತ್ಮೂರು ವರ್ಷಗಳು ಬೇಕಾದವು. ಅದಾದ ಇಪ್ಪತ್ಮೂರು ತಿಂಗಳುಗಳಲ್ಲಿ ಇವರು ಇನ್ನೊಂದು ಮಿಲಿಯನ್‌ ಡಾಲರುಗಳ ವ್ಯಾಪಾರ ಮಾಡಿಬಿಟ್ಟರು. 1991ರಲ್ಲಿ, ಅಂದರೆ ಸಂಸ್ಥೆ ಆರಂಭವಾದ ಹತ್ತು ವರ್ಷಗಳ ನಂತರ ಪಿ.ವಿ.ನರಸಿಂಹರಾವ್‌-ಮನಮೋಹನ್‌ ಸಿಂಗ್‌ ಏನು ಜಾಗತೀಕರಣದ ಗಾಳಿಗೆ ಭಾರತದ ಬಾಗಿಲು ತೆರೆದರು : ಇನ್ಫೋಸಿಸ್‌ನ ನಸೀಬು ಅದ್ಭುತವಾಗಿ ಬಿಚ್ಚಿಕೊಂಡಿತು. 1993ರಲ್ಲಿ ಇವರ ಕಂಪೆನಿಯ ಷೇರನ್ನು 1 ರುಪಾಯಿ ಕೊಟ್ಟು ಖರೀದಿಸಿದವರ್ಯಾರಾದರೂ ಇದ್ದರೆ, ಅದರ ಬೆಲೆ ಇವತ್ತು ರಫ್ಲಿ 3300 ರುಪಾಯಿ.

ಇಂಥದೊಂದು ಸಂಸ್ಥೆಯನ್ನು ನಾಣಿ ಮತ್ತು ಇತರೆ ಆರು ಮಂದಿ ರೂಪಿಸಿದ ರೀತಿನಿಜಕ್ಕೂಅಗಾಧ. ತಮ್ಮಲ್ಲಿ ಬಂದ ನೌಕರನನ್ನು ಮತ್ತೊಬ್ಬ ಕಂಪ್ಯೂಟರ್‌ ಕಂಪೆನಿಯವನು ಎತ್ತಿಕೊಂಡು ಹೋಗಿ ಬಿಡುತ್ತಿದ್ದನಲ್ಲ? ಹಾಗೆ ನೌಕರರು ಹೋಗುವುದನ್ನು ತಡೆಯಲಿಕ್ಕೆ ಉಳಿದ ಕಂಪೆನಿಗಳವರು ದುಪ್ಪಟ್ಟು ಸಂಬಳ ಕೊಟ್ಟರೆ, ನಾಣಿಯ ಕಂಪೆನಿ, ನೌಕರರಿಗೆ ಷೇರುಗಳನ್ನು ಕೊಟ್ಟಿತು. Employee Stock Option Plan ಅಂತ ಸ್ಕೀಮು ಮಾಡಿತು. 1993ರಿಂದ 2000ದ ಮಧ್ಯೆ ಯಾವ ನೌಕರ ಇವರ ಷೇರುಗಳಲ್ಲಿ ಹಣ ತೊಡಗಿಸಿದನೋ, ಇವತ್ತು ಅವನು ಕರೋಡ್‌ಪತಿ!

‘‘ಅಷ್ಟೇ ಬಿಡ್ರಿ, ದುಡ್ಡು ಮಾಡಿದ್ದು ಬಿಟ್ರೆ ಅಲ್ಲಿ ಬೇರೇನಿದೆ. ಅಮೆರಿಕದವರ ಮೈಕೈ ನೆಕ್ಕಿ, ಅವರ ಕೆಲಸ ಮಾಡಿಕೊಡೋದೊಂದು ಸಾಧನೆಯಾ? ಜೀನಿಯಸ್‌ ಅನ್ನೋ ಮಾತು ಬಿಡಿ, ಅಲ್ಲಿ ಸಾಧಾರಣ ಮಟ್ಟದ ಇಂಟೆಲೆಕ್ಚುಯಲ್‌ ಆ್ಯಕ್ಟಿವಿಟಿ ಕೂಡ ಇಲ್ಲ’’ ಅಂತ ಇವತ್ತಿಗೂ ಇನ್ಫೋಸಿಸ್‌ನ ದೂಷಿಸುವವರಿದ್ದಾರೆ. ಅದು ಭಾಗಶಃ ನಿಜವೂ ಹೌದು. ಅರುಣ್‌ ನೇತ್ರಾವಳಿಯಂಥ ಜೀನಿಯಸ್‌ಗಳು ಇವರೊಂದಿಗೆ ಜಗಳವಾಡಿಕೊಂಡು ಹೊರಟುಹೋಗಿದ್ದಾರೆ. ನೇತ್ರಾವಳಿ ಎಂಬಾತ ಜಗತ್ಪ್ರಸಿದ್ಧ ಬೆಲ್‌ ಲ್ಯಾಬೊರೇಟರೀಸ್‌ ಸೇರಿಕೊಂಡು ಪ್ರಪಂಚಕ್ಕೆ ಹೆಸರಾದ.

ನಾಣಿಯ ಷಡ್ಡಕ ಗುರುರಾಜ ದೇಶ್‌ ದೇಶಪಾಂಡೆ, ವಿನೋದ್‌ ಖೋಸ್ಲಾ ಮುಂತಾದವರೆಲ್ಲ ಅದೇ ಜಾಡಿನ ಜೀನಿಯಸ್‌ಗಳು. ಆದರೆ ಯಾರೇ ಹೋದರೂ, ಯಾರೇ ಬಂದರೂ ಹಳೇ ಕತ್ತೆ ಇನ್ಫೋಸಿಸ್‌ ಇವತ್ತು ಮಿಸುಕಲಾಗದ ಭದ್ರ ಬುನಾದಿಯ ಮೇಲೆ ನಿಂತಿದೆ. ಏಕೆಂದರೆ, ಇನ್ಫೋಸಿಸ್‌ ಜಗತ್ತಿನಲ್ಲೇ ಅನೇಕ ಮೊದಲ ಆವಿಷ್ಕಾರಗಳನ್ನು ಮಾಡಿತು.

ಉದಾಹರಣೆಗೆ, ಒಂದು ಮೊಬೈಲ್‌ ಕಂಪೆನಿಯವನು 30 ದಿನಗಳೊಳಗಾಗಿ ತನಗೊಂದು ಪ್ರೋಗ್ರಾಮಿಂಗ್‌ ಮಾಡಿಕೊಡಬೇಕು ಅಂದರೆ, ನಾರಾಯಣಮೂರ್ತಿ ಆ 30 ದಿನಗಳನ್ನು 10 ದಿನಗಳನ್ನಾಗಿ ಮಾರ್ಪಡಿಸಿ, ಅದರಲ್ಲಿ 990ದಿನಗಳ ಕೆಲಸ ತೆಗೆಯುವ ದಾರಿ ಕಂಡುಹಿಡಿದರು. ಭಾರತದಲ್ಲಿ ಎಂಟು ತಾಸು ಹತ್ತು ಜನರ ಕೈಲಿ ಕೆಲಸ ಮಾಡಿಸಿ, ಇಲ್ಲಿ ಹೊತ್ತು ಮುಳುಗಿದ ಮೇಲೆ ಅಮೆರಿಕದಲ್ಲಿ 10 ಜನರ ಕೈಲಿ ಆ ಕೆಲಸ ಮುಂದುವರೆಯಿಸಿ, ಅಲ್ಲಿ ಹೊತ್ತು ಮುಳುಗಿದ ನಂತರ ಜಪಾನದಲ್ಲಿ ಎಂಟು ತಾಸು 10 ಜನರ ಕೈಲಿ ಕೆಲಸ ಮಾಡಿಸಿ ಹತ್ತೇ ದಿನಗಳಲ್ಲಿ ಮೊಬೈಲ್‌ ಕಂಪೆನಿಯವನ ಕೆಲಸ ಮುಗಿಸಿಕೊಡುವುದಿದೆಯಲ್ಲ? (ನಾನು ತುಂಬ ಸ್ಥೂಲವಾಗಿ ವಿವರಿಸಿದ್ದೇನೆ : ಇದನ್ನು ಗ್ಲೋಬಲ್‌ ಡೆಲಿವರಿ ಮಾಡೆಲ್‌ ಅಂತಾರೆ) ಈ ತೆರನಾದ ಜಾಣ್ಮೆಯನ್ನು ಜಾಗತಿಕ ಮಟ್ಟದಲ್ಲಿ ಮೊದಲ ಬಾರಿಗೆ ಪ್ರದರ್ಶಿಸಿದ್ದು ನಾಣಿ. ಇಂಥ ಅನೇಕ ಮೊದಲ ಜಾಣ್ಮೆಗಳ ಪ್ರದರ್ಶನ ಮಾಡಿತೆಂದೇ ಇವತ್ತು ಇನ್ಫೋಸಿಸ್‌ ಗ್ರೇಟು!

ಗಮನಾರ್ಹವೆಂದರೆ, ಇನ್ಫೋಸಿಸ್‌ ಯಾರನ್ನೂ ಕೆಲಸದಿಂದ ತೆಗೆಯುವುದಿಲ್ಲ. ಅಕಸ್ಮಾತ್‌ ತೆಗೆದರೆ ಅದಕ್ಕೆ ethical reasons ಇರುತ್ತವೆ. ನೀವು ಆ ಸಂಸ್ಥೆಯಾಳಕ್ಕೆ ಕಾಲಿಟ್ಟುಬಿಟ್ಟರೆ ‘ಇದಕ್ಕಿಂತ ಭೂಲೋಕ ಸ್ವರ್ಗ ಇನ್ನೊಂದು ಇಲ್ಲ ಇಲ್ಲ ಇಲ್ಲ’ ಅಂದುಬಿಡುತ್ತೀರಿ. ನೌಕರರಿಗೆ ಆ ಪರಿಯ ಸೌಖ್ಯಭಾವ ಕಲ್ಪಿಸುತ್ತದೆ ಇನ್ಫೋಸಿಸ್‌. ‘ನೀನು ಮನೇಲೇ ಕೂತು ಕೆಲಸ ಮಾಡ್ತಿಯಾ? ಆಯ್ತು ಮಾಡು’ ಅನ್ನುತ್ತದೆ. ಅದನ್ನ trust based relationship ಅನ್ನುತ್ತದೆ. ಕನ್ನಡ ಸಂಘ ಕಟ್ಟುತ್ತಿಯಾ? ಓಕೆ! ಗೋಲಿಯಾಡುವವರ ಸಂಘದಿಂದ ಹಿಡಿದು ಗಾಲ್ಫ್‌ ಆಡುವವರ ತನಕ ಯಾರು ಬೇಕಾದರೂ ಸಂಗ-ಸಂಘ ಕಟ್ಟಬಹುದು.

ಮ್ಯಾನೇಜ್‌ಮೆಂಟಿನ ನೀತಿಯನ್ನು ತಮ್ಮ ಮೊಬೈಲ್‌ಗಳಲ್ಲಿ, ಬ್ಲಾಗ್‌ಗಳಲ್ಲಿ ಖಂಡಿಸಬಹುದು. ಯಾರನ್ನೂ ಬೇಕಾದರೂ ಟೀಕಿಸಬಹುದು. ಯಾರ ವಿರುದ್ಧ ಯಾವ ಮಟ್ಟಕ್ಕೆ ಬೇಕಾದರೂ ದೂರು ಒಯ್ಯಬಹುದು. ಏಕ್ದಂ ಅಮೆರಿಕನ್‌ ಶೈಲಿಯ ಪ್ರಜಾಪ್ರಭುತ್ವ, ‘ನನ್ನ ಕೆಲಸ ಮಾಡಿಕೊಟ್ಟೆಯಾ? ನನಗೆ ಲಾಭವಾಯಿತಾ? ಬೇಕಾದ್ದು ಮಾತಾಡಿಕೊ, ನಿನ್ನ ಮಾತು ನನ್ನ ವ್ಯಾಪಾರಕ್ಕೆ ಹಾನಿ ಮಾಡದಿದ್ದರೆ ಸಾಕು!’ ಎಂಬ ತಣ್ಣನೆಯ ಬಂಡವಾಳಶಾಹಿ ನಿಲುವು ಇದು. ಅಕಸ್ಮಾತ್‌ ವ್ಯಾಪಾರಕ್ಕೆ ಅಡ್ಡಿಯಾಗುತ್ತಿದೆ ಅಂತಾದರೆ ‘‘ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ!’’ ಎಂಬಂತಹ ಪರಮ ಮೂರ್ಖ ಹೇಳಿಕೆಯನ್ನು ನೀಡಿಬಿಡಬಲ್ಲ ನಾಣಿ. ಲಾಭದ ವಿಷಯದಲ್ಲಿ ಅವರದು ಆ ಮಟ್ಟಿಗಿನ ತಣ್ಣನೆ ಕ್ರೌರ್ಯ. ಎಲ್ಲ ಅಮೆರಿಕನ್ನು.

ಹೀಗಾಗಿಯೇ ನಾಣಿ ಅಮೆರಿಕನ್ನರಿಗೆ ಇಷ್ಟವಾಗುತ್ತಾರೆ. ಅಮೆರಿಕದಲ್ಲಿ ಇನ್ಫೋಸಿಸ್‌ ಎಂಬುದು ಒಂದು ಜಾಗತಿಕ ಮಟ್ಟದ brand name. ಆದ್ದರಿಂದಲೇ ಅಮೆರಿಕನ್ನರು ಇದಕ್ಕೆ ಹಣ ಹೂಡುತ್ತಾರೆ. ಅಮೆರಿಕನ್ನರು ಇಲ್ಲಿ ನೌಕರಿಗೆ ಸೇರುತ್ತಾರೆ. ನಲವತ್ತು ದೇಶಗಳಲ್ಲಿ 50 ಸಾವಿರ ಜನ ನಾಣಿ ಕಂಪೆನಿಗಾಗಿ ನೌಕರಿ ಮಾಡುತ್ತಾರೆ. ಕಂಪೆನಿಗಿರುವ brand name ಉಳಿಸಿಕೊಳ್ಳಲು ಸತತವಾಗಿ ಕೆಲಸ ಮಾಡಲಿಕ್ಕೆ ಬೇರೆಯೇ ಜನರಿದ್ದಾರೆ. ಕಂಪೆನಿಯ ಪ್ರತಿ ಡೈರೆಕ್ಟರನಿಗೂ ಪ್ರೆಸ್‌ ಸೆಕ್ರೆಟರಿಗಳಿದ್ದಾರೆ. ಮಂತ್ರಾಲಯದಲ್ಲಿ ಭೋಜನಗೃಹ ಕಟ್ಟಿಸಿದ್ದರಿಂದ ಹಿಡಿದು, ಬೆಂಗಳೂರಿನಲ್ಲಿ ವಿಸರ್ಜನಾ ಗೃಹ ಕಟ್ಟಿಸಿದುದರ ತನಕ ಎಲ್ಲದಕ್ಕೂ ಪಬ್ಲಿಸಿಟಿ ಸಿಗಬೇಕು. ಸಿಗುತ್ತಲೇ ಇರಬೇಕು : ಸುಧಾಮೂರ್ತಿ ಕತೆಗೆ, ನಾಣಿಯ ಭಾಷಣಕ್ಕೆ, ನಂದನ್‌ನ ಶ್ಯಾಣ್ಯಾತನಕ್ಕೆ, ಆತನ ಹೆಂಡತಿಯ ಇತರೆ ಶ್ಯಾಣ್ಯಾತನಗಳಿಗೆ! ಒಟ್ಟಿನಲ್ಲಿ ಅವರು ಸುದ್ದಿಯಲ್ಲಿ ನಿರಂತರವಾಗಿ ಇರಬೇಕು.

ನಿಮಗೆ ಆಶ್ಚರ್ಯವಾಗಬಹುದು. ಮೈಸೂರಿನಲ್ಲಿ ಇನ್ಫೋಸಿಸ್‌ 12 ಸಾವಿರ ಕೋಟಿ ಖರ್ಚು ಮಾಡಿ ಸಾಫ್ಟವೇರ್‌ ಇಂಜಿನಿರ್‌ಗಳಿಗೊಂದು ಟ್ರೆೃನಿಂಗ್‌ ಸೆಂಟರು ಮಾಡಿದೆ. ಇಲ್ಲಿ ಮಲ್ಟಿಪ್ಲಕ್ಸ್‌ನಿಂದ ಹಿಡಿದು, ಜಾಕೂಡಿ ಸ್ನಾನಗೃಹದ ತನಕ ಎಲ್ಲವೂ ಇವೆ. ಅಮೆರಿಕದಲ್ಲಿ ಒಬ್ಬ ವಿದ್ಯಾರ್ಥಿ ಇಂಜಿನೀರಿಂಗ್‌ ಪದವಿ ಪಡೆಯುವುದೂ ಒಂದೇ, ಮೈಸೂರಿನ ಈ ಸಂಸ್ಥೆಯಲ್ಲಿ ಮೂರೂವರೆ ತಿಂಗಳು ತರಬೇತಿ ಪಡೆಯುವುದೂ ಒಂದೇ. ಹಾಗಂತ ಅಮೆರಿಕರ ಯೂನಿವರ್ಸಿಟಿಗಳೇ ಹೇಳಿವೆ. ಇಂಥದೊಂದು ಸಂಸ್ಥೆ ರೂಪಿಸಿದ ಜೀನಿಯಸ್‌ನ ಹೆಸರು ಯಜ್ಞೇಶ್ವರ್‌ ಅಂತ. ಮೊದಲು ಇನ್ಫೋಸಿಸ್‌ನಲ್ಲಿದ್ದು, ಬಿಟ್ಟುಹೋಗಿ, ಸಾವಂಟೆಕ್‌ ಎಂಬ ಸಂಸ್ಥೆ ಮಾಡಿ, ವಿಫಲನಾಗಿ, ವಾಪಸು ನಾಣಿ ಕಂಪೆನಿಗೆ ಬಂದು ಇಂಥದೊಂದು ತರಬೇತಿ ಸಂಸ್ಥೆಯ ರೂಪುರೇಷೆ ಬರೆದುಕೊಟ್ಟ. ಈಗ ಎಲ್ಲಿದ್ದಾನೋ? ಭಗವಂತ ಬಲ್ಲ. ಸದ್ಯಕ್ಕೆ ತರಬೇತಿ ಸಂಸ್ಥೆಯ ಮೇಲುಸ್ತುವಾರಿಗೆ ನಾಣಿಯ ಪಾಲುದಾರ ಮೋಹನ್‌ದಾಸ್‌ ಪೈ ಎಂಬ ಶುದ್ಧ ತಲೆತಿರುಕ ಕುಳಿತಿದ್ದಾನೆ. ಧರಂಸಿಂಗ್‌ ಕನ್ನಡಿಗರಲ್ಲ ಅಂತ ಹೇಳಿಕೆ ಕೊಟ್ಟು ಮಕಮಕ ಬೈಸಿಕೊಂಡದ್ದು ಇದೇ ಪೈ. ಈತ ಇನ್ಫೋಸಿಸ್‌ನ ಹಣಕಾಸು ಮುಖ್ಯಸ್ಥ : ಪೈ ಟು ಪೈ!

ತುಂಬ ಸಂತೋಷದ ಸಂಗತಿಯೆಂದರೆ, ಇನ್ಫೋಸಿಸ್‌ನಲ್ಲಿ ಆನುವಂಶಿಕ ಆಡಳಿತವಿಲ್ಲ. ಇಲ್ಲಿ ನಾಣಿಯ ಮಗ ಏನೂ ಆಗದೇ ಇರಬಹುದು. ಹಾಗೇನೇ, ಜಾತಿಯ ಪ್ರಶ್ನೆ ಇಲ್ಲಿಲ್ಲ. ದಡ್ಡರು, ಸೋಮಾರಿಗಳು ಇಲ್ಲಿ ಬೆಳೆಯಲಾರರು. ಟೀಮು ಬೆಳೆದಷ್ಟೂ ಟೀಮ್‌ ಲೀಡರು ಬೆಳೆಯುತ್ತಾನೆ. 1982ರ ಆಸುಪಾಸಿನಲ್ಲಿ ಲ್ಯಾಂಬ್ರೆಟ್ಟು ಗಾಡಿಯ ಮೇಲೆ ಆಫೀಸಿಗೆ ಹೋಗುತ್ತಿದ್ದ ಶ್ರೀನಾಥ್‌ ಬತ್ನಿ ಎಂಬ ಶುದ್ಧ ಕನ್ನಡಿಗ, ಇವತ್ತು ಇನ್ಫೋಸಿಸ್‌ನ ಡೈರೆಕ್ಟರುಗಳಲ್ಲಿ ಒಬ್ಬರು ಅಂದರೆ-ಇಲ್ಲಿ ಕೆಲಸ ಮಾಡುವವರಿಗೆ ಮಾನ್ಯತೆಯಿದೆ ಎಂದಾಯಿತಲ್ಲ? ಇಷ್ಟಾಗಿಯೂ ಇನ್ಫೋಸಿಸ್‌ ನೌಕರಿಯನ್ನು ನೊಣ ಕೂತು ಗಲೀಜು ಮಾಡಿದ ಬೋಂಡವನ್ನು ಬಿಟ್ಟು ಹೋಗುವಂತೆ ಬಿಟ್ಟು ಹೋಗುವವರೂ ಇದ್ದಾರೆ. ಅನೇಕರ ಪಾಲಿಗಿದು ಲಾಂಛ್‌ಪ್ಯಾಡ್‌. ಆದರೆ ನಿಮಗೆ ಗೊತ್ತಿರಲಿ : ಇನ್ಫೋಸಿಸ್‌ಗೆ ಪ್ರತೀ ವರ್ಷ ಒಂದೂವರೆ ಲಕ್ಷದಿಂದ ಎರಡು ಲಕ್ಷ ಅಪ್ಲಿಕೇಶನ್‌ಗಳು ಬರುತ್ತವೆ. ಆ ಪೈಕಿ ಶೇಕಡಾ 75ರಷ್ಟನ್ನು ಸುಮ್ಮನೆ ಓದಿ ಡಿಲೀಟ್‌ ಮಾಡಲಾಗುತ್ತದೆ. ಉಳಿದ ಶೇಕಡಾ 25 ಅಭ್ಯರ್ಥಿಗಳ ಪೈಕಿ ಕೇವಲ ಶೇ.1ರಷ್ಟು ಜನಕ್ಕೆ ನೌಕರಿ ಕೊಡಲಾಗುತ್ತದೆ. ಅದರಲ್ಲಿ ಅರ್ಧ ಪರ್ಸೆಂಟ್‌ ಜನ ಮಾತ್ರ ಇನ್ಫೋಸಿಸ್‌ಗೆ ಸೇರಿಕೊಳ್ಳುತ್ತಾರೆ.

ಇಂಥದೊಂದು ಸಾಮ್ರಾಜ್ಯ ಕಳೆದ ಇಪ್ಪತ್ತೆೈದು ವರ್ಷಗಳಲ್ಲಿ ಹೇಗೆ ಕಟ್ಟಲ್ಪಟ್ಟಿದೆಯೆಂದರೆ, ಅಕಸ್ಮಾತ್‌ ಇದರ ಏಳೂ ಮುಖ್ಯಸ್ಥರು ಒಂದೇ ರಾತ್ರಿಯಲ್ಲಿ ದೇವರಿಗೆ ಪ್ರಿಯರಾದರೆಂದಿಟ್ಟುಕೊಳ್ಳಿ: ಮಾರನೆ ಬೆಳಿಗ್ಗೆ ಇನ್ಫೋಸಿಸ್‌ ಎಂದಿನಂತೆ ನಡೆಯುತ್ತಿರುತ್ತದೆ. ಇಲ್ಲಿ ನಾರಾಯಣಮೂರ್ತಿ ಹಳಬರು, ದುಡಿದವರು, ಹಿರಿಯರು. ಅವರ ನಂತರ ಕ್ರಿಸ್‌ ಇದ್ದಾರೆ, ಬುದ್ಧಿವಂತರು. ಆದರೆ ನಂದನ್‌ ನಿಲೇಕಣಿ ಅಪ್ರತಿಮ ಬುದ್ಧಿವಂತ. ಅಹಂಕಾರಿ ಎನ್ನಿಸುವಷ್ಟು ಸಮರ್ಥ. ಚಿಕ್ಕದೊಂದು ಸ್ಪರ್ಧೆ ಒಡ್ಡಿದರೂ ಸಾಕು, ಎಂಥ ಚಿಕ್ಕಪುಟ್ಟ ಕಂಪೆನಿಯನ್ನಾದರೂ ನೋಡನೋಡುತ್ತ ತೀರಿಸಿಬಿಡುತ್ತಾರೆ.

ಸಂಪಾದಕೀಯ ಮುಗಿಸುವ ಮುನ್ನ ಒಂದು ಮಾತು: ಈ ಬರಹದಲ್ಲಿ ನಾಣಿ-ಪಾಣಿ ಅಂತೆಲ್ಲ ಬರೆದಿರುವುದು ಯಾರನ್ನೂ ಅವಮಾನಿಸುವ ಉದ್ದೇಶದಿಂದ ಅಲ್ಲ. No offence meant. ಹಾಗೇನೇ, ಇನ್ಫೋಸಿಸ್‌ನ ಆರ್ಥಿಕ ಸಾಧನೆಗಳ ಬಗ್ಗೆ ನನ್ನಲ್ಲಿ ಅಂಥ ಬೆರಗಿಲ್ಲ. ಒಂದು ಕೋಳಿಫಾರಂ ಸಮೃದ್ಧವಾಗಿ ಲಾಭ ಮಾಡಿ ಬೆಳೆಸಿದರೂ ಹೀಗೆ ಬರೆಯಬಹುದು. ಆದರೆ ನನಗೆ ಮೆಚ್ಚುಗೆಯಾಗುವುದು ನಾಣಿ ಕಂಪೆನಿ ಬೆಳೆದ ರೀತಿ, ನೌಕರರನ್ನು ಆಯ್ಕೆ ಮಾಡುವ ವಿಧಾನ, ನಡೆಸಿಕೊಳ್ಳುವ ರೀತಿ ಮತ್ತು ಅತಿ ಕಡಿಮೆ ಲಾಭ ತೆಗೆದುಕೊಂಡು ನಾರಾಯಣಮೂರ್ತಿಯಂಥವರು ತಣ್ಣಗೆ ರಿಟೈರಾಗುವ ನಿರ್ಮೋಹತ್ವ.

ಒಂದು ಸರ್ಕಾರ ಕೂಡ ಇನ್ಫೋಸಿಸ್‌ನಂತೆಯೋ ನಡೆದುಬಿಟ್ಟರೆ-ಹೇಗಿರಬಹುದೆಂದು ಊಹಿಸಿಕೊಳ್ಳಿ? ಕೆಲವು ಸಾವಿರ ಕೋಟಿ ರುಪಾಯಿಗಳ ವಹಿವಾಟನ್ನು ಸದ್ದಿಲ್ಲದೆ ಮುಗಿಸಿ ಮುಗುಳ್ನಗುವ ಅವರೆಲ್ಲಿ, ನೂರೈವತ್ತು ಕೋಟಿ ಗಣಿಯೆಂಜಲು ತಿಂದು ಹೊಟ್ಟೆ ಬ್ಯಾನಿ ತಾಳಲಾರದೆ ಒದ್ದಾಡುತ್ತಿರುವ ಇವರೆಲ್ಲಿ? ಅನುವಂಶಿಕ ಆಡಳಿತ, ಜಾತಿ, ಲಂಚಕೋರತನ, ಕೆಲಸಗಳ್ಳತನ, ನೌಕರರ ಧರಣಿ, ವರ್ಗಾವರ್ಗಿ ವ್ಯಾಪಾರ-ಈ ಖಾಯಿಲೆಗಳೆಲ್ಲ ಸರ್ಕಾರಕ್ಕೇನಾ?

ಇವುಗಳನ್ನೆಲ್ಲ ತಂದುಕೊಂಡವರ್ಯಾರು?

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X