ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಆತ್ಮೀಯರೇ ಯಾಕೆ ನಿಮಗೆ ಹಾಗೆ ಮಾಡಿದರೆಂದರೆ...

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಇದೊಂದು ವಿಷಯದಲ್ಲಿ ನಾನು ಇವತ್ತಿಗೂ ಗೊಂದಲಕ್ಕೆ ಬೀಳುತ್ತೇನೆ: ಅವರು ಹಾಗೇಕೆ ಮಾಡುತ್ತಾರೆ? ನನಗರ್ಥವಾಗದ ಸಂಗತಿಗಳಲ್ಲಿ ಇದೂ ಒಂದು.

ನಿಗಿ ನಿಗಿ ತಾರುಣ್ಯದಲ್ಲಿ ತುಂಬ ಪ್ರೀತಿಸಿದ ಹುಡುಗಿ ಇದ್ದಕ್ಕಿದ್ದಂತೆ ಕೈಬಿಟ್ಟು ಹೋದಳು. Dont do this to me ಅಂತ ಮನಸು ಕನಲಿ ಕೂಗಿತ್ತು. ಅಂಥದ್ದೊಂದು ವಿನಾಕಾರಣದ ಸೋಲನ್ನು ಮರೆಯಲೆಂದೇ ನಾನು ಬದುಕಿನಲ್ಲಿ ಗೆಲುವುಗಳನ್ನು ಹುಡುಕುತ್ತಾ ಹೋದೆ. ಅವತ್ತು, ಮೂವತ್ತು ವರ್ಷದ ಹಿಂದೆ ಆಕೆ ಹಾಗೇಕೆ ಮಾಡಿದಳು ಎಂಬ ಪ್ರಶ್ನೆಗೆ ನನಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ. ಆದರೆ ಈ ಮೂವತ್ತು ವರ್ಷಗಳಲ್ಲಿ ಅಂಥವೇ ನೂರಾರು ಪ್ರಶ್ನೆಗಳು ಉತ್ತರ ಸಿಕ್ಕದವುಗಳ ಪಟ್ಟಿಗೆ ಸೇರ್ಪಡೆಯಾಗಿವೆ.

ಅಂತಹ ಪ್ರಶ್ನೆಗಳು ನಿಮ್ಮಲ್ಲೂ ಇದ್ದಾವು. ಅಷ್ಟೊಂದು ಪ್ರೀತಿಸುತ್ತಿದ್ದ ಅಮ್ಮ ಚಿಕ್ಕಂದಿನಲ್ಲಿ ಯಾಕೆ ಒಯ್ದು ಬೋರ್ಡಿಂಗ್‌ ಸ್ಕೂಲಿಗೆ ಸೇರಿಸಿದಳು ಎಂಬ ಪ್ರಶ್ನೆಯಿಂದ ಹಿಡಿದು; ಬೆಳೆದ ಮಗಳು ಒಂದು ಮಾತು ಕೂಡ ಹೇಳದೆ ರಾತ್ರೋರಾತ್ರಿ ಹೋಗಿ ಅವನನ್ನೇಕೆ ಮದುವೆಯಾದಳು ಎಂಬಲ್ಲಿಯತನಕ. ಆದ ವಂಚನೆ ಚಿಕ್ಕದೇ ಇರಬಹುದು. ಆದರೆ ಅದು ಯಾಕೆ ಆಗಬೇಕಿತ್ತು? ನನಗೇ ಯಾಕೆ ಆಗಬೇಕಿತ್ತು? ಅಂಥದ್ದು ನಾನೇನು ಮಾಡಿದ್ದೆ ಅವರಿಗೆ? ಎಷ್ಟೊಂದು ಪ್ರೀತಿಸಿದವರು ಇದ್ದಕ್ಕಿದ್ದಂತೆ ಇದೆಂಥ ಕೆಲಸ ಮಾಡಿಬಿಟ್ಟರು? ಇಂಥ ಪ್ರಶ್ನೆಗಳು ಅವೆಷ್ಟು ಜನರನ್ನು ಬಾಧಿಸಿರುತ್ತವೋ?

‘ನೀನು ಇಷ್ಟವಾಗುತ್ತೀಯಾ. ಅನೇಕರಿಗೆ ಇಷ್ಟವಾಗುತ್ತೀಯಾ. ಆದರೆ ಅಷ್ಟೇ ಸಂಖ್ಯೆಯ ಜನಕ್ಕೆ ಶತ್ರುವಿನಂತೆ ಕಾಣುತ್ತೀಯಾ. ಸಮ ಸಂಖ್ಯೆಯಲ್ಲಿ ಶತ್ರುಗಳನ್ನೂ-ಸ್ನೇಹಿತರನ್ನೂ ಏಕಕಾಲದಲ್ಲಿ ಮಾಡಿಕೊಳ್ತೀಯಾ’ ಅಂತ ನನ್ನ ಗೆಳೆಯನೊಬ್ಬ ಹೇಳುತ್ತಿದ್ದ. ಸಂಖ್ಯೆಯ ಸಂಗತಿ ನನಗೆ ಗೊತ್ತಿಲ್ಲ. ಆದರೆ ಕೆಲವರಿಗೆ ನಾನು ಇಷ್ಟವಾಗುವುದಿಲ್ಲ ಅಂತ ಗೊತ್ತು. ಯಾವ ಕಾರಣಕ್ಕೆ ಇಷ್ಟವಾಗುವುದಿಲ್ಲ ಅಂತ ಗೊತ್ತಿಲ್ಲ. ಬಹುಶಃ ಅವರಿಗೇ ಅದು ಗೊತ್ತಿರಲಿಕ್ಕಿಲ್ಲ. ನನ್ನ ಮಾತು, ದನಿ, ಮುಖ, ಬರವಣಿಗೆ, ಸಿದ್ಧಾಂತ, ನಿಲುವು-ಯಾವುದು ಯಾರಿಗಿಷ್ಟವಾಗುವುದಿಲ್ಲವೋ? ಹೇಗೆ ಹೇಳಲಿ? ಆದರೆ ಖಚಿತವಾಗಿ ಒಂದು ಸಂಗತಿಯನ್ನು ಹೇಳಬಲ್ಲೆ: ನನಗೆ ಚಿಕ್ಕಂದಿನಿಂದಲೂ ‘ಇಷ್ಟವಿಲ್ಲದವರ’ ಕಣ್ಣುಗಳನ್ನು ಎದುರಿಸಿ ಗೊತ್ತಿದೆ. ವಿನಾಕಾರಣದ ತಿರಸ್ಕಾರ, ಸಿಟ್ಟು, ಅಸಹನೆಗಳನ್ನು ಎದುರಿಸಿ ಗೊತ್ತಿದೆ. ಈಗಲೂ ಅಷ್ಟೆ ಕೆಲವರ ಕೆಲವರ ಕಣ್ಣುಗಳಲ್ಲಿ ನನ್ನ ವಿರುದ್ಧ ಸರಿದಾಡುವ ವಿನಾಕಾರಣದ contemptನ್ನ ನಾನು ಗುರುತಿಸುತ್ತೇನೆ.

ಹಾಗೆಯೇ ನಿಷ್ಕಾರಣವಾದ, ಅಗಾಧ ಪ್ರೀತಿಯನ್ನು ನನ್ನ ವಯಸ್ಸಿನ ಮತ್ಯಾರೂ ಅನುಭವಿಸದಷ್ಟು ಅನುಭವಿಸುತ್ತೇನಾದ್ದರಿಂದ ಈ ನಿಷ್ಕಾರಣ ತಿರಸ್ಕಾರವನ್ನು ನಕ್ಕು ಸಹಿಸಿಕೊಂಡು ಬಿಡುತ್ತೇನೆ, ಆ ಮಾತು ಬೇರೆ.

ಆದರೆ ಚಿಕ್ಕವನಾಗಿದ್ದಾಗ ಆಟಕ್ಕೆ ಹೋದರೆ ‘ಅವನನ್ನ ಸೇರಿಸ್ಕೋಬೇಡಿ’ ಅನ್ನೋದಕ್ಕೆ ಒಬ್ಬನಿರುತ್ತಿದ್ದ! ಯಾಕಿರುತ್ತಿದ್ದನೋ? ಕೇಳಿದ ಪ್ರಶ್ನೆಗೆ ಫಟ್ಟನೆ ಉತ್ತರ ಹೇಳಲಿಕ್ಕೆ ಅಂತ ಎದ್ದು ನಿಂತಾಗ ‘ನಿಂಗೆ ಬರಲ್ಲ. ಸುಮ್ಕೂತ್ಕೋ’ ಅನ್ನುವುದಕ್ಕೆ ಮತ್ತೊಬ್ಬನಿರುತ್ತಿದ್ದ. ಯಾಕಿರುತ್ತಿದ್ದನೋ? ನನ್ನ ಪ್ರಪಂಚಕ್ಕೆ ಸಂಬಂಧವೇ ಇಲ್ಲದವನೊಬ್ಬ ನನ್ನೆಡೆಗೆ ಈರ್ಷ್ಯೆ ಬೆಳೆಸಿಕೊಳ್ಳುತ್ತಿದ್ದ. ಯಾಕೋ? ಜನಪ್ರಿಯತೆಯ ಬೆನ್ನ ಹಿಂದೆಯೇ ಅಪವಾದಗಳು ಅಟ್ಟಿಸಿಕೊಂಡು ಬರುತ್ತಿದ್ದವು. ಅನೇಕ ಹಿರಿಯರು, ನನ್ನನ್ನು ಬೆನ್ತಟ್ಟಿ ಆಶೀರ್ವದಿಸಬೇಕಾದವರು ವಿನಾಕಾರಣ ನನ್ನನ್ನು ಹಂಗಿಸಿ, ಹಣಿದು ಹಾಕಲು ಪ್ರಯತ್ನಿಸಿದ್ದರು. ಯಾಕೇಂತ ಅವತ್ತು ಅರ್ಥವಾಗುತ್ತಿರಲಿಲ್ಲ. ಇವತ್ತಿಗೂ ಆಗಿಲ್ಲ. Of course, ಈ ಮಧ್ಯೆ ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಆದರೂ ನನಗೆ ಅರ್ಥವಾಗದೆ ಉಳಿಯುವ ಸಂಗತಿಯೆಂದರೆ, ತೀರ ನನ್ನವರು ಅಂದುಕೊಂಡವರು ಪರಮ ಶತ್ರುಗಳಿಗಿಂತ ಅಪಾಯಕಾರಿಯಾದ್ದೊಂದು ಕೆಲಸ ಮಾಡಿ ಬಿಟ್ಟಿರುತ್ತಾರೆ. ‘ಹೀಗ್ಯಾಕೆ ಮಾಡಿದಿರಿ’ ಅಂತ ಕೇಳಿದರೆ ಅದಕ್ಕೆ ಎಂಥದೋ ಒಂದು ಉತ್ತರ ಕೊಡುತ್ತಾರೆ. Sorry ಅಂತಾರೆ. ನಾನು ಕೂಡ ‘ಆಯ್ತು ಬಿಡು’ ಅಂತ ಒಪ್ಪಿಕೊಂಡಂತೆ ಮಾತನಾಡಿ ಸುಮ್ಮನಾಗುತ್ತೇನೆ. ಆದರೆ ಅವರೆಡೆಗೆ ಮನಸು ಎಷ್ಟು ಕಹಿಯಾಗಿ ಹೋಗುತ್ತದೆಂದರೆ, ಇನ್ನೊಂದೇ ಒಂದು ಸಲಕ್ಕೂ ಅವರೊಂದಿಗೆ ಮನಸು ಬಿಚ್ಚಿ ಮಾತನಾಡಲು ಸಾಧ್ಯವಾಗುವುದಿಲ್ಲ. ಮನಸು ತನ್ನಿಂತಾನೇ ಒಳ ಮುಚ್ಚುಗ. ಇಂಥ ಅನುಭವಗಳು ಮೇಲಿಂದ ಮೇಲೆ, ಮೇಲಿಂದ ಮೇಲೆ ಆಗತೊಡಗಿದ ನಂತರ ಅನಿವಾರ್ಯವಾಗಿ ಕೆಲವು ನಿರ್ಧಾರಗಳಿಗೆ ಬಂದಿದ್ದೇನೆ.

ಎಷ್ಟೇ ಆತ್ಮೀಯರು ಅಂದುಕೊಂಡರೂ, ಅವರು ನೀವಲ್ಲ. ನಿಮ್ಮನ್ನು ನೀವು protect ಮಾಡಿಕೊಂಡಷ್ಟು, ಅವರು ನಿಮ್ಮನ್ನು protect ಮಾಡುವುದಿಲ್ಲ. ಮನಸುಗಳು ಕೊಂಚ ದೂರದೂರವಾದರೂ ನೀವು ಅವರ ಪಾಲಿಗೆ ಒಂದು ‘ಆಡಿಕೊಳ್ಳುವ’ ವಸ್ತುವಾಗುತ್ತೀರಿ. ಮತ್ತೊಬ್ಬರನ್ನು ಆಡಿಕೊಳ್ಳುವುದು ಅನೇಕರು ರೂಢಿಸಿಕೊಳ್ಳುವ ಪರಮ ರುಚಿಕರ pass time. ಕೈ ಹಿಡಿದ ಹೆಂಡತಿ ಕೂಡ ಗಂಡನ ಬಗ್ಗೆ ದೂರು ಹೇಳಿಕೊಳ್ಳುವಾಗ, ಎದುರಿನ ವ್ಯಕ್ತಿಯಿಂದ ಸಾಂತ್ವನ, ಸಿಂಪಥಿ, ಸಪೋರ್ಟುಗಳನ್ನು ನಿರೀಕ್ಷಿಸುತ್ತಾಳೆಯೇ ಹೊರತು: ಗಂಡನ ಹೆಸರು, ಇಮೇಜು, ಗೌರವಗಳು ಏನಾದಾವು ಎಂಬುದನ್ನು ಯೋಚಿಸುವುದಿಲ್ಲ. ತಾನು ತಪ್ಪಿತಸ್ಥಳಲ್ಲ ಅಂತ ನಿರೂಪಿಸುವುದಕ್ಕಾಗಿ ಆಕೆ ಏನು ಬೇಕಾದರೂ ಮಾತನಾಡುತ್ತಾಳೆ. ಮನುಷ್ಯರ defence mechanism ಕೆಲಸ ಮಾಡುವುದೇ ಹಾಗೆ! ‘ನಿಮ್ಮ ಬಗ್ಗೆ ಹಾಗೆ ಮಾತಾಡಬಾರದಿತ್ತು, sorry ಅಂತ ಆಮೇಲೆ ಕ್ಷಮೆ ಕೇಳಬಹುದು. ಆದರೆ ‘ಯಾಕೆ ಹಾಗೆ ಮಾತಾಡಿದೆ?’ ಅಂತ ಕೈ ಹಿಡಿದುಕೊಂಡು ಸಾವಿರ ಸಲ ಕೇಳಿ ನೋಡಿ: ಅವರಲ್ಲಿ ಉತ್ತರವಿರುವುದಿಲ್ಲ.

ಇಂಥವು ಆಗಬಾರದೆಂದರೆ ಅನಿವಾರ್ಯವಾಗಿ ಕೆಲವು ಎಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ಮೊದಲನೆಯದಾಗಿ, ‘ನಾನು ಅವನಿಗೆ ಯಾವತ್ತೂ ಕೆಟ್ಟದ್ದು ಮಾಡಿಲ್ಲವಾದ್ದರಿಂದ ಅವನು ನನಗೆ ಕೆಟ್ಟದ್ದನ್ನು ಮಾಡಲಾರ’ ಎಂಬಂಥ ‘ಮುಗ್ಧ ದಡ್ಡತನ’ದಿಂದ ದೂರವಾಗಬೇಕು. ನಿಮ್ಮಿಂದ ತುಂಬ ಉಪಕೃತರಾದವರು ಕೂಡ ನಿಮಗೆ ಕೆಟ್ಟದ್ದನ್ನು ಮಾಡಬಲ್ಲರು. ‘ತೀರ ಆತ್ಮೀಯರು’ ಅಂತ ಕೆಲವರಿರಬಹುದು. ಆದರೆ ಇಂದಿನ ಪರಮ ಶತ್ರುಗಳೇ ನಿನ್ನೆ ‘ತೀರ-ಆತ್ಮೀಯ’ರಾಗಿದ್ದರು ಎಂಬ ಪಾಠವನ್ನು ಮರೆಯಬಾರದು. ನಮ್ಮನ್ನು ವಂಚಿಸುವುದಕ್ಕೆ ಜಾರ್ಜ್‌ ಬುಷ್ಷು, ಟೋನಿ ಬ್ಲೇರು ಬರುವುದಿಲ್ಲ. ಪಕ್ಕದ ಕುರ್ಚಿಯಲ್ಲೇ ಒಬ್ಬ ಹುಟ್ಟಿಕೊಂಡಿರುತ್ತಾನೆ. ಈ ರ್ಷ್ಯೆ ಎಂಬುದು ಸರಿಸಮರಲ್ಲೇ ಬರಬೇಕು ಅಂದುಕೊಳ್ಳಬೇಡಿ. ಅದು ಬೆನ್ನಲ್ಲಿ ಹುಟ್ಟಿದ ತಮ್ಮನಿಂದ ಹಿಡಿದು, ಬಾಗಿಲು ಕಾಯುವ ಆಳಿನ ತನಕ ಯಾರಲ್ಲಿ ಬೇಕಾದರೂ ಊಟೆಯಾಡೆಯಬಹುದಾದ ವಿಷ. ಗೇಟಿನಾಚೆಗೆ ನಿಂತ ಗೂರ್ಖಾ ನಿಮ್ಮ ಪ್ರಾಣ-ದುಡ್ಡು ಕಾಯಲೆಂದೇ ನಿಂತಿದ್ದಾನೆ, ನಿಜ. ಆದರೂ ಮನೆಯ ಹೆಬ್ಬಾಗಿಲಿಗೆ ಚಿಲುಕ-ಬೀಗ ಹಾಕಿಕೊಳ್ಳದೆ ಇರಬಾರದು. ಆತ್ಮೀಯರೆನ್ನಿಸಿಕೊಂಡವರ ವಿಷಯದಲ್ಲೂ ಇದು ಸತ್ಯ.

‘ಏನೋ ಗೊತ್ತಾಗದೆ ಕೋಪದಲ್ಲಿ ಬಾಯಿ ಜಾರಿ ಹಾಗಂದು ಬಿಟ್ಟೆ’ ಅಂತ ಯಾರಾದರೂ ನಿಮಗೊಂದು ಎಕ್ಸ್‌ಪ್ಲನೇಷನ್‌ ಕೊಟ್ಟರೆ ‘ಆಯ್ತು, ಇನ್ಮೇಲಿಂದ ಸರಿಯಾಗಿರು’ ಅಂತ ಕ್ಷಮಿಸಿ ನಿಮ್ಮ ಪಾಡಿಗೆ ನೀವಿದ್ದು ಬಿಡಬೇಡಿ. ಕೋಪವಿಳಿದ ಮೇಲೂ ಅವರು ಅಂಥದ್ದೇ ಇನ್ನೊಂದು ಮಾತು ಆಡಬಲ್ಲರು. ಏಕೆಂದರೆ, ಅವರಿಗೆ ಇನ್ನೊಂದು ಸಲವೂ ಕೋಪ ಬರುತ್ತದೆ.

ಶತ್ರುಗಳ ಬಗ್ಗೆ ಎಚ್ಚರಿಕೆ ವಹಿಸುವುದನ್ನು ಯಾರಿಗೆ ಯಾರೂ ಹೇಳಿ ಕೊಡುವುದಿಲ್ಲ. ಆದರೆ ನಿಜವಾದ ಅಪಾಯಗಳು ಆತ್ಮೀಯರಿಂದ, ಹತ್ತಿರದವರಿಂದಲೇ ಆಗುತ್ತಿರುತ್ತವೆ. ಅದಕ್ಕೆ ಈರ್ಷ್ಯೆ, ಸಣ್ಣತನ, ನಿರುದ್ಯೋಗ, ಸ್ವಭಾವಜನ್ಯ ಮತ್ಸರ-ಹೀಗೆ ಯಾವುದು ಬೇಕಾದರೂ ಕಾರಣವಾಗಿರಬಹುದು. ಕಾರಣ ನಮಗೆ ಅರ್ಥವಾಗದಿರಬಹುದು. Dont do this to me ಅನ್ನುತ್ತೇವೆ. ‘ನನಗೇ ಯಾಕೆ ಹೀಗಾಯಿತು?’ ಅಂದುಕೊಳ್ಳುತ್ತೇವೆ.

ಭಾವುಕತೆ ಮರೆತು, cool ಆಗಿ ತರ್ಕಕ್ಕೆ ಬುದ್ಧಿಕೊಟ್ಟು ಯೋಚಿಸಿ ನೋಡಿ? ಆಗಬಾರದ ಅನಾಹುತಗಳು, ಯಾತನೆಗಳು-ಶತ್ರುಗಳಿಂದ ಆಗಿರುವುದಕ್ಕಿಂತ ಆತ್ಮೀಯರಿಂದಲೇ ಹೆಚ್ಚಾಗಿ ಆಗಿರುತ್ತವೆ. ಎಚ್ಚರಿಕೆ ವಹಿಸುವುದು ಒಳ್ಳೆಯದಲ್ಲವೇ? ಇಂಥ ಎಚ್ಚರಿಕೆಗಳನ್ನು ನಮ್ಮ ಬಗ್ಗೆ ನಮ್ಮ ಆತ್ಮೀಯರೂ ವಹಿಸುವುದು ಕ್ಷೇಮ.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X