• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾನು ಮೈಮರೆತರೆ ತಾನೇ ನೀನು ಕಳ್ಳನಾಗೋದು!

By Staff
|

Gullible! ಹಾಗಂತ ಇಂಗ್ಲಿಷಿನಲ್ಲೊಂದು ಶಬ್ದವಿದೆ. ಅದು ಅಮಾಯಕತೆಯಾ? ಮೋಸ ಹೋಗಬಹುದಾದ ತನವಾ? ಪೆದ್ದುತನವಾ? ದಡ್ಡತನವಾ? ಇದೆಲ್ಲದರ ಮಧ್ಯದ ಒಂದು ಭೋಳೆ ಸ್ವಭಾವವಾ? ಡಿಕ್ಷನರಿಯ ಅರ್ಥ ಹಿಡಿದು ಹೇಳುವುದಾದರೆ ‘ಸುಲಭಕ್ಕೆ ಮೋಸ ಹೋಗುವಂಥ’ದ್ದು.

  • ರವಿ ಬೆಳಗೆರೆ
ಬದುಕಿಗೆ ಅನ್ವಯಿಸಿ ನೋಡುವುದಾದರೆ, ನಮ್ಮೆಲ್ಲರಿಗೂ ಒಂದಳತೆಯ ಗಲ್ಲಿ ಬಿಲಿಟಿ ಇರುತ್ತದೆ. ಎಲ್ಲ ದೇಶ, ಎಲ್ಲ ಕಾಲ, ಎಲ್ಲ ಪರಿಸ್ಥಿತಿಗಳ್ಲೂ ಒಂದಷ್ಟು gullible public ಅಂತ ಇದ್ದೇ ಇರುತ್ತಾರೆ. ಹೀಗಾಗಿಯೇ ಇಂಗ್ಲೆಂಡಿನಂಥ ಶಾಣ್ಯಾ ದೇಶದಲ್ಲೂ scamಗಳಾಗುತ್ತವೆ. ಬೆಂಗಳೂರಿನಂಥ ಕಡೆ ವಿನಿವಿಂಕ್‌ ವಂಚನೆಗಳಾಗುತ್ತವೆ. ಅತ್ಯಂತ ಚಾಣಾಕ್ಷ ಗಂಡಸನ್ನೂ ಅವನ ಹೆಂಡತಿ ಮೋಸ ಮಾಡಿರುತ್ತಾಳೆ. ಪೊಲೀಸರ ಕಿಸೆಯಿಂದಲೇ ಪಾಕೀಟು ಹಾರಿಸಲ್ಪಟ್ಟಿರುತ್ತದೆ.

ಮೊನ್ನೆ ನನ್ನ ಗೆಳೆಯನೊಬ್ಬ ಮಾತಿನ ಮಧ್ಯ ‘ಬೆಳಗಾವಿಗೊಬ್ಬ ವರದಿಗಾರ ಬೇಕು ಅಂತ ಯಾರ ಮುಂದೆಯೋ ಅಂದೆಯಂತೆ? ಇಂಥವರೊಬ್ಬರಿದ್ದಾರೆ(ಅವರ ಹೆಸರು ಹೇಳಿ), ಅವರನ್ನು ತಗೋತೀಯಾ?’ ಅಂತ ಕೇಳಿದ.

‘ಮಾರಾಯಾ, ನೀನು ಹೇಳುತ್ತಿರುವ ಮನುಷ್ಯನನ್ನು ನಾನು ಸರಿ ಸುಮಾರು ಇಪ್ಪತ್ತೆೈದು ವರ್ಷಗಳಿಂದ ಬಲ್ಲೆ. ಅಕಸ್ಮಾತ್‌ ಆತನನ್ನು ನಂಬಿ ಒಂದು ಜಿಲ್ಲೆಯ ಉಸ್ತುವಾರಿ ಕೊಟ್ಟರೆ ನನ್ನನ್ನು ಒಂದೇ ತಿಂಗಳಲ್ಲಿ ತೀರಿಸಿಬಿಡುತ್ತಾನೆ. ಆತನ ಚರಿತ್ರೆ ಹೇಳುತ್ತೇನೆ ಕೇಳು’ ಅಂತ ವಿವರಿಸತೊಡಗಿದೆ.

ಹಾಗೆ, ಇಪ್ಪತ್ತೆೈದು ವರ್ಷಗಳ ಹಿಂದೆ ಭೇಟಿಯಾಗಿದ್ದ ವಂಚಕನೊಬ್ಬನನ್ನು ನೆನಪಿಟ್ಟುಕೊಳ್ಳದೆ ಹೋದರೆ, ನಾನು gullible ಮಂದಿಯ ಸಾಲಿಗೆ ಸೇರಿಬಿಡುತ್ತೇನೆ. ಇಂಥದ್ದೊಂದು ಜಾಗೃತಿ ಪತ್ರಿಕೋದ್ಯಮದಲ್ಲಿ ತೀರ ಅನಿವಾರ್ಯ. ಪತ್ರಕರ್ತನೊಬ್ಬ gullible ಆಗಿಬಿಟ್ಟರೆ ಪರಮ ಯಡವಟ್ಟು ಸುದ್ದಿಗಳು ಪ್ರಕಟವಾಗಿಬಿಡುತ್ತವೆ. ಒಮ್ಮೆ ಪ್ರಕಟವಾದದ್ದು, ತಕ್ಷಣಕ್ಕೆ ವಾಪಸು ತೆಗೆದುಕೊಳ್ಳಬಹುದಾದ್ದಲ್ಲ. ಭೋಳೆ ಮಂದಿಗೆ ಇಲ್ಲಿ ಕೆಲಸವಿಲ್ಲ.

ನೌಕರಿಗೆ ಸೇರಿದ ಆರಂಭದಲ್ಲಿ ಅಷ್ಟಿಷ್ಟು ಭೋಳೇತನವಿದ್ದರೂ ಕೆಲವೆ ತಿಂಗಳಲ್ಲಿ ಅದು ಕರಗಿ ಹೋಗಿ ಅದರ ಜಾಗಕ್ಕೆ ಪ್ರತಿಯಾಂದನ್ನು ಅನುಮಾನಿಸುವ, ಅಳೆದು-ತೂಗಿ ನೋಡುವ ಮನಸ್ಥಿತಿ ರೂಪುಗೊಂಡುಬಿಡುತ್ತದೆ. ಬ್ಯಾಂಕಿನಲ್ಲಿ ನೋಟು ಎಣಿಸುವವರಿಗೆ, ಪೊಲೀಸರಿಗೆ, ಜೈಲುಗಳಲ್ಲಿ ಕೆಲಸ ಮಾಡುವವರಿಗೆ, ರೈಲಿನಲ್ಲಿ ಟಿಕೀಟು ಚೆಕ್‌ ಮಾಡುವವರಿಗೆ, ಬಾರುಗಳಲ್ಲಿ ಕೆಲಸ ಮಾಡುವವರಿಗೆ, ಬಸ್ಸಿನ ಕಂಡಕ್ಟರುಗಳಿಗೆ, ಮಠ-ಛತ್ರಗಳಲ್ಲಿ ಊಟ ಬಡಿಸುವವರಿಗೆ -ಈ ತೆರನಾದ ಕಸುಬಿನವರಿಗೆ ಇಂಥದ್ದೊಂದು ಅನುಮಾನದ ಪ್ರವೃತ್ತಿ ಬೆಳೆದು ಬಿಡುತ್ತದೆ.

ಮೂರು ದಿನ ಸತತವಾಗಿ ಊಟಕ್ಕೆ ಹೋಗಿ, ನಾಲ್ಕನೆಯ ದಿನ ಮತ್ತೆ ಮಂತ್ರಾಲಯದಲ್ಲೋ ಧರ್ಮಸ್ಥಳದಲ್ಲೋ ಊಟಕ್ಕೆ ಹೋಗಿ ನೋಡಿ? ಭೋಜನ ಶಾಲೆಯ ಬಾಗಿಲಲ್ಲೇ ಒಬ್ಬ ತಡೆದು ನಿಲ್ಲಿಸುತ್ತಾನೆ : ‘ಇನ್ನೂ ಎಷ್ಟು ದಿನ ಪುಗಸಟ್ಟೆ ಊಟ ಮಾಡುತ್ತೀರಿ?’ ಎಂಬಂತೆ. ಹಾಗೆಯೇ ಬ್ಯಾಂಕಿನಲ್ಲಿ ನೋಟು ಎಣಿಸುವವರ ಕೈಗೆ ಖೋಟಾನೋಟು ತಾಕುತ್ತಿದ್ದಂತೆಯೇ ಚಷ್ಮಾದೊಳಗಿನ ಕಣ್ಣು ಕೌಂಟರಿನಲ್ಲಿ ನಿಂತವನ ಕಡೆಗೆ ಏಳುತ್ತದೆ. ಬಾರುಗಳಲ್ಲಿ ಕೆಲಸ ಮಾಡುವವರಿಗೆ ‘ಇವನ ಬಿಲ್‌ ಕೊಡುವ ಗಿರಾಕಿಯಲ್ಲ’ ಅಂತ ಮೊದಲ ಪೆಗ್‌ serve ಮಾಡುವಾಗಲೇ ಗೊತ್ತಾಗಿಬಿಡುತ್ತದೆ. ಹೊಟೇಲುಗಳಲ್ಲಿ ಕೆಲಸ ಮಾಡುವ ರೂಂ ಬಾಯ್‌ಗಳಿಗೆ, ರೂಮು ಹಿಡಿದವರೊಂದಿಗೆ ಬಂದವಳು ಗರತಿ ಹೌದಾ ಅಲ್ಲವಾ ಎಂಬುದು ಹೆಜ್ಜೆ ಸಪ್ಪಳದಲ್ಲೇ ಅರ್ಥವಾಗಿ ಹೋಗುತ್ತದೆ.

ಇದಾದರೂ ಒಂದು ದಿನಕ್ಕೆ ರೂಢಿಯಾಗುವಂತಹ ಚಾಣಾಕ್ಷತೆಯಲ್ಲ. ವರ್ಷಗಟ್ಟಲೆ ಇದಕ್ಕಾಗಿ ಪಳಗಬೇಕು. ಆದರೆ, ಎಲ್ಲರಿಗೂ ಹೀಗೆ ಪಳಗುವುದು ಸಾಧ್ಯವಾದೀತೇ?

‘ಸಾಧ್ಯವಾಗ ಬೇಕು’ ಎಂಬುದು ಇವತ್ತಿನ ದಿನಮಾನದ ಅವಶ್ಯಕತೆ. ಚೂರೇ ಚೂರು gullible ಆದರೂ ದೊಡ್ಡ ಮಟ್ಟದ ಕಂದಾಯ ಕಟ್ಟಬೇಕಾಗುತ್ತದೆ. ಪ್ರತಿನಿತ್ಯ ಹಣ ಒಯ್ಯುವ, ಬೇಕೆಂದಾಗ ಹಣ ಬಿಡಿಸಿ ತಂದುಕೊಡುವ ಪಿಗ್ಮಿ ಕಲೆಕ್ಟರ್‌ ಯಾವತ್ತೊ ಒಂದು ದಿನ ದೊಡ್ಡ ಮೊತ್ತ ಬಳಿದುಕೊಂಡು ಹೋಗಿಬಿಟ್ಟಿರುತ್ತಾನೆ. ಮನೆಯಲ್ಲಿ ನಿರುಪದ್ರವಿ ಹುಡುಗನಂತೆ ಓಡಾಡಿಕೊಂಡಿದ್ದ ಹುಡುಗ ಆ ಮನೆಯ ಗೃಹಿಣಿಯಾಂದಿಗೆ ಸಂಬಂಧವಿಟ್ಟುಕೊಂಡು ಮರ್ಯಾದೆ ಬೀದಿಪಾಲು ಮಾಡಿ ಬಿಟ್ಟಿರುತ್ತಾನೆ.

ಸುಮ್ಮನೆ ಒಂದು ಜಾಮೀನಿಗೆ ಸಹಿ ಹಾಕುವಂತೆ ಬಾ ಅಂತ ಕರೆದೊಯ್ಯುವ ಮೈದುನ ಅಣ್ಣನ ಅಷ್ಟೂ ಆಸ್ತಿಯನ್ನು ಅತ್ತಿಗೆಯ ಕೈಲಿ ತನ್ನ ಹೆಸರಿಗೆ ರಿಜಿಸ್ಟರ್‌ ಮಾಡಿಸಿಕೊಂಡು ಬಿಟ್ಟಿರುತ್ತಾನೆ. ತನ್ನ ಮೈಯ ಮಚ್ಚೆಗಿಂತ ಹೆಚ್ಚಾಗಿ ನಂಬಿದ ಮಗಳೇ ತಂದೆಗೆ ಮೋಸ ಮಾಡಿರುತ್ತಾಳೆ. ಇದೆಲ್ಲದರ ಹಿಂದೆ ಕೇವಲ ಒಬ್ಬರ ವಂಚನೆ ಕೆಲಸ ಮಾಡಿರುವುದಿಲ್ಲ. ಮೋಸ ಹೋದವರ ಗಲ್ಲಿಬಿಲಿಟಿ, ಆ ಭೋಳೆತನ, ವಿಪರೀತವಾದ ನಂಬಿಕೆ, ಅಂತಿಮವಾಗಿ ‘ನಮ್ಮಂಥವರಿಗೆ ಮೋಸವಾಗಲಿಕ್ಕಿಲ್ಲ ಬಿಡು’ ಎಂಬಂತಹ ಅಸಡ್ಡೆ, ಓವರ್‌ ಕಾನ್ಫಿಡೆನ್ಸ್‌ ಕೂಡ ಕೆಲಸ ಮಾಡಿರುತ್ತದೆ. ಇದೆಲ್ಲಕ್ಕೂ ಇರುವುದು ಒಂದೇ ಉತ್ತರ :

‘ನಾನು ಮೈಮರೆತರೆ ತಾನೇ ನೀನು ಕಳ್ಳನಾಗೋದು?’ ಎಂಬ ಎಚ್ಚರಿಕೆ. ಇಂಥದ್ದೊಂದು ಎಚ್ಚರಿಕೆಯನ್ನು ನನಗೆ ನಾನು ಕೊಟ್ಟುಕೊಂಡೇ ಆನಂತರ ಬರೆಯಲು ಕುಳಿತಿದ್ದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more