• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಸ್ತ್ರದವನ ಗಿಳಿ ಕಿತ್ತುಕೊಂಡು ಬಂದ ಅನಿಮಲ್‌ ಪೀಪಲ್ಸ್‌ ಕುರಿತು...

By Staff
|
Ravi Belagere on Thatskannada.com ರವಿ ಬೆಳಗೆರೆ
‘ಪ್ರಾಣಿಗಳ ವಿರುದ್ಧ, ಅದರಲ್ಲೂ ಕಾಡು ಪ್ರಾಣಿಗಳ ವಿರುದ್ಧ ಮನುಷ್ಯನ ಕ್ರೌರ್ಯ ಜಾಸ್ತಿಯಾಗಿದೆ...’ ಅಂತ ಭುಸುಗುಡುತ್ತಲೇ ಎದುರಿಗೆ ಬಂದು ಕುಳಿತ ಆತ. ಹೆಸರು ಶರತ್‌ಬಾಬು ಅಂತ. ‘ಪೀಪಲ್‌ ಫರ್‌ ಅನಿಮಲ್ಸ್‌’ ಎಂಬ ಎನ್‌ಜಿಓನ ಸೀನಿಯರ್‌ ಮೇನೇಜರು. ಆತ ತಂದ ಪ್ಲಾಸ್ಟಿಕ್‌ ಬುಟ್ಟಿಯಲ್ಲಿ ಗಾಯಗೊಂಡ ಮೈನಾ ಮರಿಯಾಂದಿತ್ತು.

ಹೀಗೆ ನನ್ನ ಛೇಂಬರಿಗೆ ಪ್ರಾಣಿ ದಯಾ ಸಂಘ, ಈಶ್ವರೀಯ ಬ್ರಹ್ಮಕುಮಾರಿ ಸಂಘ, ಕಬ್ಬನ್‌ ಪಾರ್ಕ್‌ನಲ್ಲಿ ಇರುವೆಗೆ ಸಕ್ಕರೆ ಹಾಕುವವರ ಸಂಘ, ವಿಜಯನಗರದಲ್ಲಿ ಬೀದಿ ನಾಯಿಗೆ ಬ್ರೆಡ್ಡು ಹಾಕುವವರ ಸಂಘ, ಗೋಮೂತ್ರ ಶೇಖರಣಾ ಮೂಲ ಸಂಶೋಧಕರ ಸಂಘ -ಹೀಗೆ ನಾನಾ ಟೇಸ್ಟು, ಕಮಿಟ್‌ಮೆಂಟು, ಸ್ಟ್ರಗಲ್ಲು ಮುಂತಾದವುಗಳನ್ನಿಟ್ಟುಕೊಂಡವರು ಬರುತ್ತಿರುತ್ತಾರೆ.

ಹಾಗೆ ಶರತ್‌ ಕೂಡ ಬಂದರು. ‘ಪ್ರಾಣಿ-ಪಕ್ಷಿ ಸಾಕುವವರು ತುಂಬ ಆಗಿ ಹೋಗಿದ್ದಾರೆ. ಅದು ಕ್ರೂಯಲ್ಟಿ ಟು ದಿ ಅನಿಮಲ್ಸ್‌... ಗಿಳಿ ಸಾಕ್ತಾರೆ, ಮಂಗ ಸಾಕ್ತಾರೆ, ನರಿ ಸಾಕ್ತಾರೆ...’ ಅಂತೆಲ್ಲ ಪಾಪ, ಅವುಗಳ ಪರವಾಗಿ ಅಬ್ಬರಿಸಿದರು ಶರತ್‌ಬಾಬು. ನನ್ನ ಕಚೇರಿಯಿಂದ ಮುಂದಕ್ಕೆ ಹೋಗಿ ಉತ್ತರಹಳ್ಳಿ ದಾಟಿ, ಓಂಕಾರ್‌ ಹಿಲ್ಸ್‌ ಕಡೆಗೆ ನಡೆದರೆ ಅಲ್ಲಿ ಇವರದೊಂದು ಚಿಕ್ಕ ಬಯಲಿದೆ. ಅಲ್ಲಿ ಗಾಯಗೊಂಡ ಪ್ರಾಣಿಗಳು, ಎಲ್ಲಿಂದಲೋ ರಕ್ಷಿಸಿ ತಂದ ಗಿಳಿ-ಹಾವು-ಕೋತಿ ಇತ್ಯಾದಿಗಳು ಇವೆ. ‘ಎಲ್ಲ ಸೇರಿ ಅರವತ್ತೊಂಬತ್ತು ತರಹದ ಪ್ರಾಣಿ ನಮೂನೆಗಳಿವೆ. ಈಗಷ್ಟೆ phone ಬಂತು, ನೋಡಿ ನೋಡಿ... ಮಲ್ಲೇಶ್ವರಂ ಪೊಲೀಸ್‌ ಸ್ಟೇಷನ್‌ನಲ್ಲಿ ಹಾವು ಬಂದಿದೆಯಂತೆ’ ಅಂದು ನನ್ನೆಡೆಗೆ ನೋಡಿದರು ಆತ.

‘ಈಗ ಬರೋದೇನು ಬಂತು? ಮಲ್ಲೇಶ್ವರಂ ಠಾಣೆಯಲ್ಲಿ ಹಾವುಗಳು ತುಂಬ ಇವೆ. ಅನೇಕ ಸ್ಟೇಷನ್ನುಗಳಲ್ಲಿವೆ. ಖಾಕಿ ತೊಟ್ಟಿವೆ... ಅದಿರಲಿ, ನೀವು ಬಂದದ್ದು ಯಾಕೆ ಹೇಳಿ?’ ಅಂದೆ.

‘ಈ ಪ್ರಾಣಿಗಳ ವಿರುದ್ಧದ ಕ್ರೌರ್ಯ ತಡೆಯಬೇಕು. ನಿಮ್ಮ ಸಹಕಾರ ಬೇಕು. ಪ್ರಚಾರ ನೀಡಬೇಕು...’ ಅಂದರು ಶರತ್‌ಬಾಬು.

‘ರಸ್ತೆ ಮೇಲೆ ಗಿಳಿ ಇಟ್ಟುಕೊಂಡು ಶಾಸ್ತ್ರ ಹೇಳ್ತಿರ್ತಾನಲ್ಲ? ಅವನ ಗಿಳೀನ ಏನು ಮಾಡುತ್ತೀರಿ?’ ಅಂದೆ.

‘ಕಿತ್ಕೊಂಡು ಬಂದಿದೀನಿ... ಬಿಡ್ತೀನಾ? ನನ್ನ ಬಗ್ಗೆ ಪತ್ರಿಕೆಗಳಲ್ಲಿ ಓದಿರಬೇಕು ನೀವು. Even ವಿಜಯ್‌ ಟೈಮ್ಸ್‌ ಬರೆದಿದೆ...’ ಅಂದರು.

ರಸ್ತೆ ಪಕ್ಕದಲ್ಲಿ ಚಿಕ್ಕ ಪಂಜರದಲ್ಲಿ ಗಿಳಿ ಇಟ್ಟುಕೊಂಡು, ಕಾರ್ಡ್‌ ಇಟ್ಟುಕೊಂಡು ಹೋಗಿ ಬರೋ ದಾರಿಹೋಕನಿಗೆ ‘ನಿಂಗೆ ಮುಂದಿನ ವರ್ಷ ಮದ್ವೆ ಆಗುತ್ತೆ, ಕೆಲ್ಸ ಸಿಗುತ್ತೆ, ಕಳೆದು ಹೋಗಿರೋ ಮಗು ಸಿಗುತ್ತೆ, ತಾಯಿ ಕಾಯಿಲೆ ವಾಸಿಯಾಗುತ್ತೆ’ ಅಂತ ಅಗ್ಗದ ರೂಪಾಯಿ-ಎರಡು ರೂಪಾಯಿಗಳಲ್ಲಿ ಕನಸು ಮಾರೋ ಹತಭಾಗ್ಯನ ಹೊಟ್ಟೆಪಾಡಿನ ಗಿಳಿ ಕಿತ್ತುಕೊಂಡು ಬರುತ್ತಾರಲ್ಲಾ? ‘ಈ ಮನೆಯ ವಾಸ್ತು ಬದಲಿಸಿ’ ಅಂತ ಮುಖ್ಯಮಂತ್ರಿಗೆ ಹೇಳಿ ಅದರ ಬಾಗಿಲು ಬದಲಿಸಲು ಅರ್ಧ ಕಾಡೇ ಕಡಿಸಿ ಹಾಕುವ ದ್ವಾರಕಾನಾಥ್‌ನಂಥ ಜ್ಯೋತಿಷಿಯ ಹೆಗಲನ್ನಾದರೂ ಇವರಿಂದ ಮುಟ್ಟಲು ಸಾಧ್ಯವಾದೀತೇ? ‘ಮೈಸೂರಿಗೆ ಹೋಗಿ ದಸರೆ ಮೆರವಣಿಗೆಗೆ ಬಳಸುವ ಆನೆ ಕಿತ್ತುಕೊಂಡು ಬರೋಣ ಬರ್ತೀರಾ? ಇನ್ನೊಂದು ಮಠದಲ್ಲಿ ಮತ್ತೊಂದು ಆನೆಯಿದೆ ಕಿತ್ಕೊಂಡು ಬರೋಣ ಬರ್ತೀರಾ?’ ಅಂದೆ.

‘ಅದಕ್ಕೆಲ್ಲ ಸರ್ಕಾರದ ಪರ್ಮಿಷನ್‌ ಇರುತ್ತೆ... ನಾನು ಚುಂಚನಗಿರಿ ಸ್ವಾಮೀನೂ ಬಿಟ್ಟಿಲ್ಲ’ ಅಂತ ಭುಸುಗುಟ್ಟಿತ್ತು ಪೀಪಲ್‌ ಫರ್‌ ಅನಿಮಲ್‌!

‘ಚುಂಚನಗಿರಿಯನ್ನೂ, ಅದರ ಸ್ವಾಮಿಯನ್ನೂ ನಾನೆಷ್ಟು ಮುಟ್ಟಿದ್ದೇನೆ, ನಾನೆಷ್ಟು ಬಿಟ್ಟಿದ್ದೇನೆ ಅಂತ ಓದುಗರಿಗೆ ಗೊತ್ತು. ಒಂದೇ ಒಂದು ಷಾಂಪೂ ಫ್ಯಾಕ್ಟರಿಗೆ ಹೋಗಿ ಕಣ್ಣಿಗೆ ಕ್ಲಿಪ್‌ ಹಾಕಿ ಮಲಗಿಸಿದ ಮೊಲದಮರಿಯನ್ನು ಬಿಡಿಸಿಕೊಂಡು ಬಂದಿದ್ದೀರಾ? ಮೊಲದ ಮರಿಯ ಕಣ್ಣ ಪಾಪೆಯ ಮೇಲೆ ಒಂದೊಂದೇ ತೊಟ್ಟು ಷಾಂಪೂ ಬಿಟ್ಟು ಎಷ್ಟನೇ ತೊಟ್ಟಿಗೆ ಅದರ ಕಣ್ಣು ಕುರುಡಾಗುತ್ತೆ ಅಂತ ತೀರ್ಮಾನಿಸುವ ಪ್ರಯೋಗ ಪ್ರತಿನಿತ್ಯ ನಡೆಯುತ್ತದೆ: ತಡೆದಿದ್ದೀರಾ? ನೀವು ಮೈನಾ ಮರಿ ತರಲು ಪ್ಲಾಸ್ಟಿಕ್‌ ಬಳಸುತ್ತೀರಲ್ಲಾ? ಇದನ್ನು ತಿಂದು ಪ್ರತಿನಿತ್ಯ ಬೆಂಗಳೂರಿನ ಸುತ್ತ ಹತ್ತಾರು ಸೀಮೆ ಹಸು ಸಾಯುತ್ತವೆ, ತಡೆದಿದ್ದೀರಾ?’ ಕೇಳಿದೆ.

ನನ್ನದೊಂದು ಶಾಲೆಯಿದೆ. ತುಂಬ ಪುಟ್ಟ ಮಕ್ಕಳು ಬರ್ತಾರೆ. ಅವರಿಗೆ ಮೊಲ ಮತ್ತು ಆಮೆಯ ರೇಸ್‌ನ ಕಥೆ ಹೇಳಿಕೊಡುತ್ತೇವೆ. ತೋರಿಸಲಿಕ್ಕೆ ಅಂತ ಒಂದು ಆಮೆ ಇಟ್ಟುಕೊಂಡರೆ ‘ಅನಿಮಲ್ಸ್‌ ಪೀಪಲ್‌’ ಮೈಮೇಲೆ ಬೀಳುತ್ತೀರಿ. ‘ಬಾ ಬಾ ಬ್ಲಾಕ್‌ ಷೀಪ್‌’ ಹೇಳಿಕೊಟ್ಟ ಟೀಚರಿಗೆ ತೋರಿಸಲಿಕ್ಕೊಂದು ಕುರಿಮರಿ ಸಿಕ್ಕಲ್ಲ ಬೆಂಗಳೂರಿನಲ್ಲಿ. ಬೆಂಗಳೂರಿನ ಮಕ್ಕಳು ಕುರಿಮರಿಯನ್ನೇ ನೋಡಿರುವುದಿಲ್ಲ. ನಮ್ಮ ಕೆಮೆರಾ ಟೀಮಿನ ಹುಡುಗರಿಗೆ ಬನ್ನೂರಿನ ಕಡೆಗೆ ಹೋದಾಗ ಮುದ್ದಾದ ಕುರಿಮರಿಯಾಂದನ್ನು ಖರೀದಿ ಮಾಡಿಕೊಂಡು ಬನ್ನಿ ಅಂತ ಹೇಳಿದ್ದೇನೆ. ಶಾಲೆಯ ಹಿತ್ತಿಲಲ್ಲಿ ಒಂದಷ್ಟು ಬಾತುಕೋಳಿ, ಪಾರಿವಾಳ ಸಾಕಿದ್ದೇನೆ. ಹತ್ತು ಅಡಿ ಉದ್ದದ ಅಕ್ವೇರಿಯಂನಲ್ಲಿ ಮೀನು ಬಿಟ್ಟಿದ್ದೇನೆ. ಮಕ್ಕಳು ಇವನ್ನೆಲ್ಲ ನೋಡಬೇಕು, ಪ್ರೀತಿಸಬೇಕು. ನೋಡುತ್ತ, ಆಡುತ್ತ, ಪ್ರೀತಿಸುತ್ತ ಬೆಳೆಯಬೇಕು. ಪ್ರಾಣಿದಯೆ, ಪ್ರಾಣಿಪ್ರೀತಿ ಕಲಿಸುವುದು ಹೀಗಲ್ಲವೇ? ಅಂದೆ.

‘ನಿಮ್ಮ ಶಾಲೆಯಲ್ಲಿ ನಾಲ್ಕು ಆಮೆಗಳನ್ನು ಜೀವಂತ ಹೂತುಬಿಟ್ಟಿರಂತೆ? ನಾನೇ ಬಂದು ಆವತ್ತು ವಿಚಾರಿಸಿದ್ದೆ. What a cruelty, what a cruelty...! ಅಂದಿತು ಅನಿಮಲ್‌ ಪೀಪಲ್‌.

‘ನೀವು ತೆಲುಗು ಸಿನೆಮಾ ನೋಡಿ ಬಂದಿರಬೇಕು ಅಥವಾ ನಿಮಗೆ ತಲೆ ಕೆಟ್ಟಿರಬೇಕು. ಆಮೆಗಳನ್ನ, ಅದರಲ್ಲೂ ನಾಲ್ಕು ಆಮೆಗಳನ್ನ ನಾನ್ಯಾಕೆ ಜೀವಂತ ಹೂಳಲಿ?’ ಕೇಳಿದೆ.

Of course, ನಿಮಗೆ ಗೊತ್ತಿಲ್ಲದೆ ಅಚಾತುರ್ಯ ಆಗಿರಬಹುದು. ಆಮೆಗಳು ಸಾಮಾನ್ಯವಾಗಿ ಕೊರಕಲಿನಲ್ಲಿ ಅಡಗಿಕೊಳ್ತವೆ. ನಿಮ್ಮ ಶಾಲೇಲೂ ಅಡಗಿಕೊಂಡಿದ್ದವಂತೆ. ಗಿಲಾವು ಮಾಡುವವರು ಗೊತ್ತಿಲ್ಲದೆ ಸಿಮೆಂಟು ಹಾಕಿ ಮುಚ್ಚಿಬಿಟ್ಟರಂತೆ. ಮಾರನೇ ದಿನ ನೋಡಿಕೊಂಡ್ರೆ ನಾಲ್ಕು ಆಮೆಗಳು ಇರಲಿಲ್ವಂತೆ! ನಾನೇ ಬಂದು ವಿಚಾರಿಸಿದೆ. ಆಮೆ ನೋಡಿಕೊಳ್ಳುವವನು ಒಪ್ಪಿಕೊಂಡ...’ ಅಂದರು ಶರತ್‌ಬಾಬು.

‘ತಮಾಷೆಯೆಂದರೆ ನಾಲ್ಕು ಆಮೆ ನಮ್ಮ ಶಾಲೆ ಹಿಂದಿನ ಷೆಡ್‌ನಲ್ಲಿ ಯಾವತ್ತೂ ಇರಲಿಲ್ಲ. ಇದ್ದದ್ದು ಒಂದೇ ordinary ಜಾತಿಯ ಆಮೆ. ಅದು ಕೂಡ ಶಾಲೆಯ ಪಕ್ಕದ ಚರಂಡಿಯಲ್ಲಿ ಮಳೆಗೆ ಕೊಚ್ಚಿಕೊಂಡು ಬಂದಾಗ, ಶಾಲೆಯ ಜವಾನರು ಹಿಡಿದಿಟ್ಟಿದ್ದರು. ಹಕ್ಕಿಗಳಿರುವ shedನಲ್ಲೇ ಅದನ್ನೂ ಇಟ್ಟಿದ್ದರು. ಕೆಲ ದಿನಗಳ ನಂತರ ಹಾವು ಕಚ್ಚಿ ಆಮೆ ಸತ್ತು ಹೋಯಿತು. ಇರುವ ಕಥೆ ಇಷ್ಟೇ. ನಾಲ್ಕು ಆಮೆ ತಂದಿಟ್ಟಿದ್ದೇ ಆದರೆ, ಅದು ಕಾನೂನು ಬದ್ಧವಲ್ಲ-ಹಾಳುಮೂಳು ಆಮೇಲಿನ ಮಾತು: ಅವುಗಳನ್ನು ತಂದಿಟ್ಟಿದ್ದೇ ಆದರೆ, ಯಾರಾದರೂ ನನಗೆ ಕಾಣದೆ ಅವನ್ನು ಜೀವಂತ ಹೂತುಬಿಟ್ಟರೆ ಸುಮ್ಮನೆ ಬಿಡುತ್ತೇನಾ? ಅವರನ್ನೇ ಹೂತು ಪ್ಲಾಸ್ಟರು ಮಾಡಿಬಿಡ್ತಿರಲಿಲ್ವಾ ಶರತ್‌? ಏನು ಮಾತಾಡ್ತೀರಿ... ’ ಅಂದೆ.

ನೆತ್ತಿಯ ಮೇಲಿನ ಟೆರೇಸಿನಲ್ಲಿ ಇಪ್ಪತ್ತು ನಾಯಿ ಇವೆ. ನಾನಾ ಜಾತಿಯವಿವೆ. ಪ್ರತಿಯಾಂದಕ್ಕೂ ಹೆಸರುಗಳಿವೆ. ಹೆಸರಿಟ್ಟೇ identify ಮಾಡುತ್ತೇನೆ. ಆಡುತ್ತೇನೆ. ಒಂದು ನಾಯಿಮರಿ ಕಾಯಿಲೆ ಬಿದ್ದರೆ ಊರಲ್ಲಿನ ಡಾಕ್ಟರುಗಳನ್ನೆಲ್ಲ ಕರೆಸುತ್ತೇನೆ. love for animals ನನಗೆ ಕಲಿಸಬೇಕಿಲ್ಲ. ನೀವು ಪದೇಪದೆ ನನ್ನ ಶಾಲೆಗೆ ಬಂದು ಹೋದದ್ದು ನನಗೆ ಗೊತ್ತಿದೆ. ಶಾಲೆಯ ಮೇಲೆ ರೇಡ್‌(!) ಮಾಡಿ ‘ಸಾಕಬಾರದ ಪ್ರಾಣಿ ಸಾಕಿದ್ದಾನೇ ರವಿ ಬೆಳಗೆರೇ...’ ಅಂತ ಜಗತ್ತಿಗೆ ಹೇಳಲು ಉದಯ ಟೀವಿಯ ಕೆಮೆರಾದವರನ್ನು ಕರೆತಂದದ್ದೂ ಗೊತ್ತಿದೆ.

ನೀವು ಹೀಗೆ ಮಾಡುವುದಕ್ಕೆ ಕಾರಣವೇನು ಅಂತಲೂ ಗೊತ್ತಿದೆ ಅಂದೆ. ಪೀಪಲ್‌ ಸುಮ್ಮನಿತ್ತು.

ಕೆಲ ತಿಂಗಳ ಹಿಂದೆ ದನಗಳ ಸಾಕಾಣಿಕೆ ಮತ್ತು ಸಾಗಾಣಿಕೆಯಲ್ಲಿ ಮನುಷ್ಯ ಎಷ್ಟು ಕ್ರೂರಿಯಾಗಿ ನಡೆದುಕೊಳ್ಳುತ್ತಾನೆ ಎಂಬುದರ ಬಗ್ಗೆ ಒಂದೆರಡು episodeಗಳನ್ನ ಟೀವಿಗೆ ಮಾಡಿದ್ದೆ. ಅದರಲ್ಲಿ PETA ಎಂಬ ಇನ್ನೊಂದು ಪ್ರಾಣಿ ಪ್ರೇಮಿ ಸಂಘಟನೆಯ ಹುಡುಗರ ಕುರಿತು ನಾಲ್ಕು ಒಳ್ಳೆಯ ಮಾತಾಡಿದ್ದೆ.

ಅಷ್ಟೇ ತಪ್ಪು! ಆ ಸಂಘಟನೆ ಖೊಟ್ಟಿ, ಅದಕ್ಕೆ ಅಷ್ಟು ಪ್ರಚಾರ ಕೊಟ್ಟಿರಿ. ಅದರಲ್ಲಿನ ವ್ಯಕ್ತಿ ಡಾಂಭಿಕ. ಅವನನ್ನು ನೀವು ಹೊಗಳಿದಿರಿ! ನಿಮ್ಮ ಮೇಲೇ ಮುರಕೊಂಡು ಬೀಳ್ತೀವಿ. ಇದು ಪ್ರಾಣಿರಕ್ಷಕರ ನಿಲುವು.

ನಿಮಗೆ ಗೊತ್ತಿರಲಿ: ಪ್ರತಿ ವರ್ಷ ವಲಸೆ ಬರುವ ಆನೆಗಳು ಬಂಡೀಪುರ, ನಾಗರಹೊಳೆ ಉದ್ಯಾನಗಳಲ್ಲಿ ಆಗರ್ಭ ಶ್ರೀಮಂತರು ನಿರ್ಮಿಸುತ್ತಿರುವ ರೆಸಾರ್ಟ್‌ಗಳಿಂದ ತಮ್ಮ ಪಥ ಕಳೆದುಕೊಂಡಿವೆ. ರಸ್ತೆ ಕಳೆದುಕೊಂಡಿವೆ. ಹೀಗಾಗಿ ತಮಗೆ ತೋಚಿದತ್ತ ನುಗ್ಗುತ್ತಿವೆ. ಬೆಳೆ ನಾಶ ಮಾಡುತ್ತಿವೆ. ತಾವೂ ನಾಶವಾಗುತ್ತಿವೆ. ನಿಮಗೆ ತಿಳಿದಿರಲಿ: ಪ್ರಾಣಿದಯಾ ಪೀಪಲ್ಸ್‌ ಮತ್ತು ದಯಾಹೀನ ಅನಿಮಲ್ಸ್‌-ಇಬ್ಬರೂ ಸೇರಿ ಬಳಸುವ ಸೆಲ್‌ಫೋನುಗಳಿಂದಾಗಿ ಅಸಲು ಗುಬ್ಬಿಗಳ ಸಂತತಿಯೇ ನಾಶವಾಗಿದೆ. ಕೋಟ್ಯಂತರ ರೂಪಾಯಿ ಸುರಿದ ನಂತರವೂ ಮೈಸೂರಿನ zoo ಪ್ರಾಣಿಗಳೇ ಇಲ್ಲದ ಸ್ಮಶಾನವಾಗಿದೆ. ತೀರ ಅಪರೂಪದ ಪ್ರಾಣಿಗಳು ಸತ್ತಿವೆ. ಕೊಪ್ಪಳ-ಗಂಗಾವತಿಯಲ್ಲಿ ಗನ್ನು ಹಿಡಿದು ನುಗ್ಗಿ ಪೊಲೀಸ್‌ ಅಧಿಕಾರಿಗಳೇ ಜಿಂಕೆಗಳನ್ನು ಯಥೇಚ್ಛ ಬೇಟೆಯಾಡುತ್ತಾರೆ. ನರಿಬೇಟೆಗೊಂದು ಹಬ್ಬ, ನಾಗ ಪಂಚಮಿಯಲ್ಲಿ ಸರ್ಪ ಹಿಂಸೆ, ಮಾರಿಹಬ್ಬಗಳಲ್ಲಿ ಕೋಣ ಬಲಿ-ಎಲ್ಲ ಪಾಂಗಿತ ಪಾಂಗಿತ ನಡೆದಿವೆ.

ಅವ್ಯಾವನ್ನೂ ಈ ಪೀಪಲ್ಸ್‌ ತಡೆಯುವುದಿಲ್ಲ. ಮನೆಯಲ್ಲೊಂದು ಗಿಳಿಯನ್ನು ಪ್ರೀತಿಯಿಂದ ಸಾಕಿಕೊಂಡರೆ, ಹೊಟ್ಟೆಪಾಡಿಗೊಬ್ಬ ಕೋತಿ ಆಡಿಸಿದರೆ ಅವನನ್ನು ಕೊಂದೇ ಬಿಡುವ ಸಮರೋತ್ಸಾಹ ಇವರಿಗೇಕೆ? ಸಾಕಿದ ಪ್ರಾಣಿಗೆ ಹಿಂಸೆಯಾಗುತ್ತಿದೆಯಾ? ಅದನ್ನು ಕೊಳ್ಳುವ-ಮಾರುವ ವ್ಯಾಪಾರಿ ಪ್ರಯತ್ನಗಳಾಗುತ್ತಿವೆಯಾ? ಅದನ್ನು ತಡೆಯಿರಿ. ಅವನನ್ನು ಶಿಕ್ಷಿಸಿರಿ. ಇಷ್ಟಾಗಿ ಗಿಳಿ, ಕೋತಿಯಂಥ ಪ್ರಾಣಿಗಳನ್ನು ಯಾರಾದರೂ ಮುಚ್ಚಟೆಗೆಂದು ಸಾಕುತ್ತಿದ್ದರೆ, ಅದು ಕಾನೂನು ಬಾಹಿರ ಅಂತ ಆ ಜನಕ್ಕೆ ತಿಳಿಯಪಡಿಸಿ. ಮನೆಯವರನ್ನು ಓಲೈಸಿ ಹಕ್ಕಿ-ಪ್ರಾಣಿಗಳ ಬಿಡುಗಡೆಗೆ ಪ್ರಯತ್ನಿಸಿ, Crusade ಎಂಬುದರ ಅರ್ಥ ಹಣಾಹಣಿ ಯುದ್ಧ ಎಂದಲ್ಲ. ಒಂದು ನಿರಂತರ ಪ್ರಯತ್ನ. ಹಾಗಂತ ಪೀಪಲ್‌ ಫರ್‌ ಅನಿಮಲ್ಸ್‌ನ ಸೀನಿಯರ್‌ ಮೇನೇಜರ್‌ ಶರತ್‌ಗೆ ವಿವರಿಸಿದೆ. ಮೈನಾ ಮರಿಯನ್ನು ಪ್ಲಾಸ್ಟಿಕ್‌ ಬುಟ್ಟಿಯಲ್ಲಿ ಅವರು ಎತ್ತಿಕೊಂಡು ಹೋದರು.

ಅಷ್ಟರಲ್ಲಿ , ‘ನಮ್ಮ ಜೀಪಿಗೆ ತಾಕಿ ನರಿಮರಿಯಾಂದು ಸ್ವಲ್ಪ ಗಾಯಗೊಂಡಿದೆ. ಇನ್ನೂ ಚಿಕ್ಕದಿರುವುದರಿಂದ ನಿಮ್ಮ ನಾಯಿಗಳ ಪಕ್ಕದ ಗೂಡಿನಲ್ಲಿ ಸ್ವಲ್ಪ ದಿನ ಇಟ್ಟುಕೊಳ್ಳಿ. ತೀರ ಸಾಯೋಕೆ ಕಷ್ಟವಾದರೆ, ಯಾರಿಗಾದರೂ ಕೊಟ್ಟರಾಯಿತು. ಶಾಲೆಯಲ್ಲಿ ಮಕ್ಕಳು ನೋಡಿ ಸಂತೋಷ ಪಡ್ತಾವೆ. ನೀವು ಚೆನ್ನಾಗಿ ನೋಡಿಕೊಳ್ತೀರಿ ಅನ್ನೋ ನಂಬಿಕೆ ಇದೆ. ತರ್ತಿದೀವಿ’ ಅಂತ ಹೆಗ್ಗಡದೇವನಕೋಟೆಯವರೊಬ್ಬರು ಫೋನು ಮಾಡಿದರು. ಟೆರೇಸಿನ ಮೇಲಿರುವ ಒಂದು cage ಖಾಲಿ ಮಾಡಲು ಹೇಳಿ, ನರಿಮರಿ ಹೆಗ್ಗಡದೇವನಕೋಟೆ ಕಾಡಿನದಾದ್ದರಿಂದ ಹೆಗಡೆ ಅಂತ ಹೆಸರಿಡಬಹುದಾ ಅಂತ ಯೋಚಿಸುತ್ತ ನಿಂತೆ.

ಅಷ್ಟರಲ್ಲಿ ಜೀಪು ಬಂದೇ ಬಿಟ್ಟಿತು.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more