• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಪ್ರೋಚ್‌!

By Staff
|

ಅಪ್ರೋಚ್‌!

ನಮ್ಮ ಅಪ್ರೋಚ್‌, ನಮ್ಮ ಸೋಲು-ಗೆಲುವುಗಳನ್ನು ನಿರ್ಧರಿಸಿಬಿಡಬಲ್ಲುದು. ಹಾವ-ಭಾವ, ಧ್ವನಿ-ನೋಟ, ಪ್ರಜ್ಞಾಪೂರ್ವಕ ನಡೆವಳಿಕೆ ಇವೆಲ್ಲವೂ ನಮ್ಮಲ್ಲಿ ಸಕಾರಾತ್ಮಕ ಅಪ್ರೋಚ್‌ ಬೆಳೆಸುತ್ತವೆ. ಆದರೆ ನಮ್ಮ ಅಪ್ರೋಚ್‌ನಲ್ಲೇ ತಪ್ಪಿರಬಾರದಷ್ಟೆ...

Ravi Belagere on Thatskannada.com ರವಿ ಬೆಳಗೆರೆ
ನೀವು ಎಂಥ ಕೆಲಸ ಬೇಕಾದರೂ ಕೊಡಿ, ಅವನು ಮಾಡ್ಕೊಂಡು ಬರ್ತಾನೆ ಅಂತ ಯಾರದಾದರೂ ಬಗ್ಗೆ ಮಾತನಾಡೋದನ್ನ ನೀವು ಕೇಳಿಸಿಕೊಂಡ್ರೆ, ಅವರು ಮಾತನಾಡುತ್ತಿರುವುದು ಆ ವ್ಯಕ್ತಿಯ ಸಾಮರ್ಥ್ಯ, ಜಾಣತನ, ಕೇಪಬಿಲಿಟಿಗಳ ಬಗ್ಗೆ ಅಲ್ಲ.

ಅದು ಆ ಮನುಷ್ಯನ ಅಪ್ರೋಚ್‌ ಬಗ್ಗೆ!

ಯಾರು ಬೇಕಾದರೂ ಕಲಿಯಬಹುದಾದ, ಅಳವಡಿಸಿಕೊಳ್ಳಬಹುದಾದ, ರೂಢಿಮಾಡಿಕೊಳ್ಳಬಹುದಾದ ವಿದ್ಯೆ ಅದು. ಆದರೆ ಹೆಚ್ಚಿನವರು ಅದರ ಬಗ್ಗೆ ಯೋಚನೆ ಮಾಡೇ ಇರುವುದಿಲ್ಲ.

ನೂರ್ರುಪಾಯಿಗೆ ಚಿಲ್ರೆ ಇದೆಯಾ? ಅಂತ ಕೇಳುವುದರಿಂದ ಹಿಡಿದು ನನ್ನನ್ನು ಪ್ರೀತಿಸ್ತೀಯಾ ಅಂತ ಕೇಳುವ ತನಕ - ಎಲ್ಲದಕ್ಕೂ ತುಂಬ ಮುಖ್ಯವಾಗಿ ಬೇಕಾದದ್ದು ಅಪ್ರೋಚು. ಕೇಳುವ ದನಿ, ಭಂಗಿ, ಕೇಳುವಾಗಿನ ಕಣ್ಣು, ಸ್ಥಿತಿ, ದಿರಿಸು, ನಿಲುವು, ಭಾವ, ಇಂಟೆನ್ಸಿಟಿ, ನಯ, ನಾಜೂಕು, ಅಧಿಕಾರ, ಸಲುಗೆ, ಪ್ರೀತಿ ಎಲ್ಲ ಎಷ್ಟು ಮುಖ್ಯ ಅಲ್ಲವಾ? ಇದು ಕೇವಲ ಸೇಲ್ಸ್‌ ಮನ್‌ಗಳಿಗೆ, ಯಾಚಕರಿಗೆ ಇರಬೇಕು ಅಂದುಕೊಂಡು ಬಿಟ್ಟಿರುತ್ತೇವೆ.

‘ಅತಿ ವಿನಯಂ ಚೋರ ಲಕ್ಷಣಮ್‌’ ತರಹದ(ಎಲ್ಲ ಸಂದರ್ಭಗಳಿಗೂ fit ಆಗದ) ಗಾದೆಗಳನ್ನು ನಂಬಿಬಿಟ್ಟಿರುತ್ತೇವೆ. ಏನನ್ನಾದರೂ ಹೇಗೆ ಕೇಳಬೇಕು ಅಂತ ಯೋಚಿಸಿ ಕೂಡ ಇರುವುದಿಲ್ಲ. ನಮ್ಮ ಧ್ವನಿ ನಿಜಕ್ಕೂ ನಮ್ಮ ವ್ಯಕ್ತಿತ್ವವನ್ನು ಧ್ವನಿಸುತ್ತದಾ ಅಂತ ಕೇಳಿಕೊಂಡಿರುವುದಿಲ್ಲ. ಈ ವಿಷಯದಲ್ಲಿ ನನಗಾಗುವ ಫಜೀತಿ, ತಾಪತ್ರಯಗಳ ಪೈಕಿ ಒಂದೆರಡನ್ನು ಇಲ್ಲಿ ವಿವರಿಸುತ್ತೇನೆ ಕೇಳಿ.

ಹತ್ತಾರು ಜನರ ಮಧ್ಯೆ ಮಾತನಾಡುತ್ತ ನಿಂತಿರುವಾಗ ಒಬ್ಬ ಎಲ್ಲಿಂದಲೋ ಬಂದು,‘ನಿಮ್ಮ ಮೊಬೈಲ್‌ ನಂಬರ್‌ ಕೊಡಿ ಸ್ವಲ್ಪ ?’ ಅನ್ನುತ್ತಾನೆ. ಕೊಡಲಿಕ್ಕೆ ಸಾಧ್ಯವಾ? ಹತ್ತು ಜನಕ್ಕೂ ಗೊತ್ತಾಗುವಂತೆ ಕೊಟ್ಟು ಬಿಟ್ಟರೆ ಆಮೇಲೆ ಅವರೆಲ್ಲರ ಟೆಲಿಫೋನ್‌ ಕರೆಗಳನ್ನು ಪರ್ಸನಲ್‌ ಆದದ್ದಲ್ಲವಾ ಮೊಬೈಲ್‌ ನಂಬರು? ಕೇಳುವ ಮನುಷ್ಯ ಇದ್ಯಾವುದನ್ನೂ ಯೋಚಿಸುವುದಿಲ್ಲ. Bad approach.

ಇನ್ನೊಬ್ಬ ನನ್ನ ಮೊಬೈಲಿಗೆ ಫೋನ್‌ ಮಾಡುತ್ತಾನೆ. ‘ರವಿಯವರಾ?’

‘ಹೌದು. ನಾನು ಬರೀತಿದೀನಿ ಅಂತೇನೆ’.

ಹೌದಾ? ಸದ್ಯ ಸಿಕ್ರಲ್ಲ? ಬರೀತಿದೀನಿ ಅಂತೀರಿ. Disturb ಮಾಡಿದ್ನೇನೋ? ಇರ್ಲಿ, ನಿಮ್ಮನ್ನ ಸ್ವಲ್ಪ ಕಾಣಬೇಕಾಗಿತ್ತು... ಯಾವಾಗ ಸಾಧ್ಯ? ಅಂಥ ಅರ್ಜೆಂಟೇನೂ ಇಲ್ಲ. ಸುಮ್ನೆ ಹೀಗೇ ಹರಟೋಣಾ ಅಂತ... ಆತ ಮಾತಾಡುತ್ತಲೇ ಇರುತ್ತಾನೆ. ಆತನಿಗೆ ನಾನು ಬರೀತಿದೀನಿ, ಅದು ನನ್ನ ವೃತ್ತಿ, ಹರಟೆಗೆ ನನಗೆ ಸಮಯವಿರಲ್ಲ, ವೃಥಾ ಮಾತಿಗೆ ಕೂತರೆ ನನ್ನ ಯೋಚನಾ ಸರಣಿ ತುಂಡಾಗುತ್ತದೆ, ಈಗ ಫೋನ್‌ ಮಾಡುವ ಸಮಯವಲ್ಲ- ಉಹುಂ! ಇದ್ಯಾವುದರ ಪರಿವೆಯೂ ಆತನಿಗಿರುವುದಿಲ್ಲ. ಅಂಥವರನ್ನು ಯಾಕೆ ಭೇಟಿಯಾಗಬೇಕು?ಯಾಕೆ ಸಹಿಸಿಕೊಳ್ಳಬೇಕು?

ಇನ್ನೂ ಒಂದು ನಿರುಪದ್ರವಿಯಾದ bad approach ಇದೆ: ಕೇಳಿ. ನಿಮಗೂ ಅಂಥ ಎಸ್ಸೆಮ್ಮೆಸ್ಸುಗಳು ಬಂದಿರಬಹುದು. ಕಿಟಕಿ ತೆರೆದು ನೋಡು. ಹೊರಗೆ ನಕ್ಷತ್ರಗಳು ನಿನಗೋಸ್ಕರ ನಗುತ್ತಿವೆ. ಈ ಜೀವನ ಬಹಳ ಸುಂದರವಾದದ್ದು. ಗೆಳೆತನಕ್ಕಿಂತ ಮಧುರವಾದದ್ದು ಏನಿದೆ? ಹೀಗೆ specificಆಗಿ ಏನನ್ನೂ ಹೇಳದ ದೇಶಾವರಿ ಮೆಸೇಜುಗಳು. ಇವನ್ನು ಯಾಕಾದರೂ ಕಳಿಸುತ್ತಾರೆ? ನಾನು ಅವುಗಳನ್ನು ಪೂರ್ತಿಯಾಗಿ ಓದುವುದೂ ಇಲ್ಲ. ಡಿಲೀಟ್‌ ಮಾಡಿ ಸುಮ್ಮನಾಗುತ್ತೇನೆ. ಆದರೂ ಪ್ರಾಣಿ ಬಿಡುವುದಿಲ್ಲ. : WHY NO REPLY? ಅಂತ ಇನ್ನೊಂದು ಮೆಸೇಜು ಕಳಿಸುತ್ತದೆ. ಇದು ಕೂಡ wrong ಅಪ್ರೋಚೇ.

ಮೊನ್ನೆ ಒಂದು ಪ್ರಕಟಣೆ ಕೊಟ್ಟಿದ್ದೆ. ವರದಿಗಾರರು ಬೇಕು. ನಿಮ್ಮ ಶೈಲಿಯಲ್ಲಿ ನಿಮ್ಮ ಭಾಗದ್ದೊಂದು ವರದಿಯನ್ನೂ ಅರ್ಜಿಯ ಜೊತೆಗೆ ಕಳಿಸಿಕೊಡಿ ಅಂತ ವಿವರಿಸಿದ್ದೆ. ನರಗುಂದದಿಂದ ಒಬ್ಬ ಭೂಪ ಹೀಗೆ ಬರೆದಿದ್ದ,

‘ನನಗೆ ನಿನ್ನ ಪತ್ರಿಕೆ ಕಂಡರೆ ಇಷ್ಟವಿಲ್ಲ. ವರದಿಗಳು ರೋಗಗ್ರಸ್ಥವಾಗಿರುತ್ತವೆ. ನೀನು ಮಾಡುವುದಕ್ಕಿಂತ ಒಳ್ಳೆಯ ಪತ್ರಿಕೆಯನ್ನು ನಾನು ಮಾಡಬಲ್ಲೆ. ಈಗಾಗಲೇ ನಾನು ಒಂದು ಶಾಲೆಯನ್ನು ನಡೆಸುತ್ತಿದ್ದೇನೆ. ಅದು ‘ಪ್ರಾರ್ಥನಾ’ದಂತೆ ಸೇಬು ತಿಂದು ಬೆಳೆದ ಶಾಲೆಯಲ್ಲ. ಇರಲಿ, ನನಗೆ ನೌಕರಿ ಕೊಡು. ಕೆಲವು ದಿನ ನಿನ್ನ ಜೊತೆ ಇದ್ದು ಪತ್ರಿಕೆ ಮಾಡುವುದು ಹೇಗೆಂದು ಕಲಿತು, ವಾಪಸು ಬಂದು ನಮ್ಮ ಊರಿನಲ್ಲಿ ನೀನು ಮಾಡುತ್ತಿರುವುದಕ್ಕಿಂತ ಉತ್ತಮ ಪತ್ರಿಕೆ ಮಾಡುತ್ತೇನೆ. ಅರ್ಜಿಯ ಜೊತೆಗೆ ವರದಿ ಕಳಿಸಲೇಬೇಕು ಅಂತೇನಿಲ್ಲವಲ್ಲ? ಬದಲಿಗೆ, ನನ್ನ ಗೆಳತಿಗೆ ನಾನು ಬರೆದ ಒಂದು ಪತ್ರ ಕಳಿಸುತ್ತಿದ್ದೇನೆ, ಓದು. ನಿನ್ನ ಅಭಿಪ್ರಾಯ ತಿಳಿಸು. ಆನಂತರ ಅವಳಿಗೆ ಆ ಪತ್ರ ಕಳಿಸುತ್ತೇನೆ’ ಅಂತ ಬರೆದಿದ್ದ ! ಅಯ್ಯಾ ಪುಣ್ಯಾತ್ಮಾ, ನನಗೆ ವರದಿಗಾರರು ಬೇಕು. ತಲಹರಟೆಗಳು ನರಗುಂದದಿಂದಲೇ ಬರಬೇಕೆಂದಿಲ್ಲವಲ್ಲ?

ಇಷ್ಟಕ್ಕೂ ನಿನ್ನ ಗೆಳತಿಗೆ ಬರೆದದ್ದನ್ನು ನಾನ್ಯಾಕೆ ಓದಲಿ ?ಇದು ತಗ ವಾಪಸು- ಅಂತ ಎರಡು ಸಾಲು ಬರೆದು ಅಂಚೆಗೆ ಹಾಕಿದೆ. ನಮ್ಮ ಕಡೆ ಇಂಥ ವ್ಯಕ್ತಿಯನ್ನು ‘ತಿರಶಿಷ್ಟ’ ಅಂತ ಕರೆಯುತ್ತಾರೆ.

ಇನ್ನೊಬ್ಬಾಕೆ ಬರೆಯುತ್ತಾಳೆ. ನನಗೆ ನಿಮ್ಮ ಪತ್ರಿಕೆ, ಕ್ರೆೃಂ ಡೈರಿ ಇಷ್ಟವಾಗುವುದಿಲ್ಲ. ಆದರೆ ‘ವಿಜಯ ಕರ್ನಾಟಕ’ದಲ್ಲಿ ನೀವು ಬರೆಯುವ ಅಂಕಣ ಮತ್ತು ‘ಮುಕ್ತ’ದಲ್ಲಿ ನಿಮ್ಮ ಪಾತ್ರ ಇಷ್ಟ. ನನ್ನ ಗಂಡ ಈಚೆಗೆ ತುಂಬ ಪಾನ್‌ಪರಾಗ್‌ ತಿಂತಾರೆ. ಏಕೆಂದರೆ, ಅವರಿಗೆ ಟೆನ್ಷನ್‌. ಮನೆಗೆ ತುಂಬ ಜನ ಬಂಧುಗಳು ಬಂದೂ ಬಂದೂ ನಮಗೆ ಸಾಲವಾಗಿದೆ. ಆದ್ದರಿಂದ ನೀನು ನಮಗೆ ಹಣ ಕೊಡು. ಅನುಕೂಲವಾದಾಗ ತೀರಿಸುತ್ತೇವೆ. ನಾವು ಚೆನ್ನಾಗಿ ಬಾಳಿ ಬದುಕಿದವರು. ಈಗ ಹೀಗಾಗಿದೆ. ಸಹಾಯ ಮಾಡು. ಆದರೆ ನಾನು ಯಾರೆಂದು ನಿನಗೆ ಈಗಲೇ ತಿಳಿಸುವುದಿಲ್ಲ. ವಿಳಾಸ ಕೊಡುವುದಿಲ್ಲ. ಹಣದ ಸಹಾಯ ಮಾಡುತ್ತೇನೆ ಅಂತ ವಿಜಯ ಕರ್ನಾಟಕದ ಪುಟದ ಒಂದು ಮೂಲೆಯಲ್ಲಿ ಬರೆದು ಕಳಿಸು. ಆಗ ವಿಳಾಸ ಕೊಡುತ್ತೇನೆ. ಹೀಗೆ ಸಾಗುತ್ತದೆ ಪತ್ರ.

ಆಕೆಯ ಗಂಡನ ಪಾನ್‌ಪರಾಗ್‌ ಬಿಡಿಸಬೇಕು ಅಂದರೆ ಟೆನ್ಷನ್‌ ಕಡಿಮೆಯಾಗಬೇಕು. ಅದಕ್ಕಾಗಿ ಆಕೆಯ ಗಂಡನ ಸಾಲ ನಾನು ತೀರಿಸಬೇಕು. ಅದಕ್ಕೆ ಮುಂಚೆ ವಿಜಯ ಕರ್ನಾಟಕದ ಮೂಲೆಯಲ್ಲಿ ಆಯ್ತು, ಹಣ ಕೊಡ್ತೇನೆ ಅಂತ ಬರೆಯಬೇಕು! ಎಲ್ಲಾದರೂ ಇದು ಸಾಧ್ಯವೇ? ಆಮೇಲೆ ನನ್ನ ಗತಿ ಏನಾದೀತು? ಇಷ್ಟಕ್ಕೂ, ಯಾರಿಗೆ ಸಹಾಯ ಮಾಡುತ್ತೇನೆಂಬುದೇ ಗೊತ್ತಿಲ್ಲದೆ ನಾನು ಯಾಕೆ ವಿಜಯ ಕರ್ನಾಟಕದ ಮೂಲೆಯಲ್ಲಿ ಹಾಗೆ ಪ್ರಕಟಿಸಲಿ? ಇಂಥ ಪತ್ರಗಳು ದಡ್ಡತನ, ಅವಿವೇಕ, ಉದ್ಧಟತನ ಅಥವಾ ಮೂರ್ಖತನಗಳ ಮಧ್ಯದಿಂದ ಉದ್ಭವವಾಗಿರುತ್ತವೆ.

ತಮ್ಮ ಅಪ್ರೋಚ್‌ ಮಾಡುವವರು ಈ ತೆರನಾದ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಇಂಥವುಗಳನ್ನು ನಾವೂ ಮಾಡುತ್ತಿರುತ್ತೇವೆ. ತಪ್ಪು ಚಿಕ್ಕದಾ-ದೊಡ್ಡದಾ ಎಂಬುದು ಮುಖ್ಯವಲ್ಲ. ಅದು ನಮ್ಮ ಅಪ್ರೋಚ್‌ನಿಂದ ಆದ ತಪ್ಪಾ? ತಪ್ಪು ಮಾಡುವುದೇ ಹೌದು ಅಂತ ತೀರ್ಮಾನಿಸಿದ್ದಾದರೆ, ಅದಕ್ಕೂ ಒಂದು ಅಪ್ರೋಚ್‌ ಇದೆ.

ಆದರೆ ಅಪ್ರೋಚ್‌ನಲ್ಲೇ ತಪ್ಪಾಗಿ ಬಿಡಬಾರದಲ್ಲವಾ?

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more