• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎದುರಿಲ್ಲದ ಹಾದಿಯಲ್ಲಿ ಸಂಭ್ರಮಿಸಿ ನಡೆಯುವ ಮುಖ್ಯಮಂತ್ರಿಗೆ...

By Staff
|


‘ರಾಷ್ಟ್ರಕವಿ’ ಗೌರವಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಸರ್ಕಾರಗಳು ಇಂಥದ್ದೊಂದು ಕಟ್ಟಳೆ ಮಾಡಲಿಲ್ಲವೆಂದ ಮಾತ್ರಕ್ಕೆ, ಕುಮಾರಸ್ವಾಮಿ ಸರ್ಕಾರವೂ ಮಾಡಬಾರದೆಂಬ ನಿಯಮವೆಲ್ಲಿದೆ? ಈ ಮನ್ನಣೆಯನ್ನು ಕವಿಗಳಿಗೇ ಕೊಡಬೇಕಾ? ಈ ಚರ್ಚೆಯೂ ಆಗಬೇಕಿದೆ.

  • ರವಿ ಬೆಳಗೆರೆ
ಆದರೂ ಹಣತೆ ಹಚ್ಚುತ್ತೇನೆ ನಾನು
ಕತ್ತಲೆಯನ್ನು ದಾಟುತ್ತೇನೆಂಬ
ಭ್ರಮೆಯಿಂದಲ್ಲ : ಇರುವಷ್ಟು ಹೊತ್ತು
ನಿನ್ನ ಮುಖ ನಾನು ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು
ಆಸೆಯಿಂದ
ಹಣತೆ ಆರಿದ ಮೇಲೆ
ನೀನು ಯಾರೋ,
ಮತ್ತೆ ನಾನು ಯಾರೋ..

G.S.Shivarudrappaಅಂತ ಬರೆದ ಬೆಳಕಿನ ಕವಿ, ಸಮನ್ವಯ ಕವಿ, ಪ್ರೀತಿಯ ಕವಿ ಜಿ.ಎಸ್‌.ಶಿವರುದ್ರಪ್ಪನವರಿಗೆ ರಾಷ್ಟ್ರಕವಿಯೆಂಬ ಗೌರವ ಸಿಕ್ಕಿದೆ : ದೊಡ್ಡ ಸಂತೋಷ. ಬಹುಶಃ ಗುರು-ಶಿಷ್ಯ ಪರಂಪರೆಯ ಕೊನೆಯ ಕೊಂಡಿಗಳಲ್ಲೊಬ್ಬರು ಅಕ್ಕರೆಯಿಂದ ಕಂಡವರು. ಓದಲಿಕ್ಕೆ ತೊಂದರೆಯಾದಾಗ ಹತ್ತಿರಕ್ಕೆ ಕರೆದು ‘ದುಡ್ಡು ಬೇಕಾ?’ ಅಂತ ಕೇಳಿದವರು. ತಮ್ಮ ಗುರುಗಳ ಕಾವ್ಯವನ್ನು ಓದಿದಷ್ಟೇ ಶ್ರದ್ಧೆಯಿಂದ ತಮ್ಮ ಶಿಷ್ಯರು ಬರೆದದ್ದನ್ನು ಓದಿದವರು. ರಾಷ್ಟ್ರಕವಿ ಎಂಬ ಮನ್ನಣೆ ಸಿಕ್ಕಿದಾಗ ಸಂದರ್ಶನ ಮಾಡಲು ಮನೆಗೆ ಹೋದ ಪತ್ರಕರ್ತರಿಗೆ ‘ಮೊದಲೇ ಒಪ್ಪಿಕೊಂಡಿದ್ದನ್ನ ಬರೆದು ಮುಗಿಸಬೇಕಿದೆ. ಆಮೇಲೆ ಮಾತಾಡ್ತೀನಿ’ ಅಂತ ಹೇಳಿ ಕಳಿಸಿದವರು ಜಿ ಎಸ್‌ ಎಸ್‌.

ಕೇವಲ ಅಕ್ಷರಗಳನ್ನು ನಂಬಿ, ಅವುಗಳೊಂದಿಗೆ ಬದುಕುವ ಕವಿ ಲೇಖಕರಿಗೆ ಮಾತ್ರ ಹೀಗೆ ಮಾತು-ಪ್ರಚಾರ ಬೇಡವೆನ್ನಿಸುತ್ತದೆ. ಕನ್ನಡದಲ್ಲಿ ಹಾಗೆ ಕೆಲಸಮಾಡುವವರೇ ಅಪರೂಪವಾಗಿಬಿಟ್ಟಿದ್ದಾರೆ. ತುಂಬ ಮಾತಾಡುತ್ತಿರುವ, ತುಂಬ ಕಾಣಿಸಿಕೊಳ್ಳುತ್ತಿರುವ ಅನೇಕ ಹಿರಿಯ ಲೇಖಕರು ಕಳೆದ ಹತ್ತು ಹದಿನೈದು ವರ್ಷಗಳಿಂದ ಏನೂ ಬರೆದಿಲ್ಲ. ಇವತ್ನಾಳೆ ಅವರು ಬರೆಯುವಂತೆ ಕಾಣಿಸುತ್ತಿಲ್ಲ.

ಶಿವರುದ್ರಪ್ಪನವರಿಗೆ ಸಂದ ಗೌರವದ ಬಗ್ಗೆ ಎಲ್ಲರಿಗೂ ಸಂತಸವಿದೆ. ಆದರೆ ‘ರಾಷ್ಟ್ರಕವಿ’ ಅಂತ ಕೊಡುವ ಬಿರುದು ಅಥವಾ ಸ್ಥಾನಮಾನವನ್ನು, ನಿಗಮ-ಮಂಡಳಿಗಳ ಅಧ್ಯಕ್ಷ ಪಟ್ಟವನ್ನು ರಾಜಕೀಯ ಕಾರಣಗಳಿಗಾಗಿ ಖಾಲಿಯಿಡುವಂತೆ ಖಾಲಿಯಿಡುವುದು ಯಾವ ನ್ಯಾಯ? ಗೋವಿಂದ ಪೈಗಳಿಗೆ ರಾಷ್ಟ್ರಕವಿ ಪೀಠ ಕಟ್ಟಿದ್ದು ಅಂದಿನ ಮದರಾಸು ಸರ್ಕಾರ. ಅವರು ಗತಿಸಿದ ಎಷ್ಟೋ ವರ್ಷಗಳ ನಂತರ ಆ ಬಿರುದನ್ನು ನಿಜಲಿಂಗಪ್ಪನವರ ಮಂತ್ರಿಮಂಡಲವು ಕುವೆಂಪು ಅವರಿಗೆ ನೀಡಿತು. ಬದುಕಿರುವತನಕ ಆ ಕವಿಗೆ ಅದೊಂದು ಬಿರುದು, ಸ್ಥಾನಮಾನ. ಜೊತೆಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ಕವಿ ಗೌರವ. ಹಾಗಂತ ನಿರ್ಧರಿಸಿಯೇ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಸ್ಥಾನದಿಂದ ಪುಟ್ಟಪ್ಪನವರು ನಿವೃತ್ತರಾದಾಗ ಅವರಿಗೆ ನಿಜಲಿಂಗಪ್ಪ ಸರ್ಕಾರ ಈ ಗೌರವವನ್ನು ಗೌರವ ಧನದೊಂದಿಗೆ ಅಟ್ಯಾಚುಮಾಡಿ ಕೊಡಮಾಡಿತು.

ಮುಂದೆ ಕುವೆಂಪು ತೀರಿಕೊಂಡರು. ರಾಷ್ಟ್ರಕವಿ ಸ್ಥಾನ ಖಾಲಿ ಬಿತ್ತು. ನಿಜಕ್ಕೂ ಅಂಥದ್ದೊಂದು ಸ್ಥಾನಕ್ಕೆ ಗೌರವಕ್ಕೆ ಅರ್ಹರಾದ ಬೇಂದ್ರೆ ಮತ್ತು ಅಡಿಗರು ಹಾಗೇ ತೀರಿಕೊಂಡರು. ನರಸಿಂಹಸ್ವಾಮಿಗಳು ಗತಿಸಿ ಹೋದರು. ಈಗ ಸರ್ಕಾರ ಸುವರ್ಣ ಸಂಭ್ರಮದ ನೆಪದಲ್ಲಿ ದಡಬಡಸಿ ಎದ್ದು ಶಿವರುದ್ರಪ್ಪನವರಿಗೆ ಹತ್ತು ಲಕ್ಷ ರೂಪಾಯಿಗಳ ‘ಕವಿ ಗೌರವ’ ಸಲ್ಲಿಸಿ ರಾಷ್ಟ್ರಕವಿ ಎಂಬ ಮನ್ನಣೆ ನೀಡಿದೆ.

ಇಂಥ ನಿರ್ಣಯಕ್ಕೆ ಸಂತೋಷಪಡುತ್ತಲೇ, ಸರ್ಕಾರಕ್ಕೊಂದು ಸಲಹೆ. ರಾಷ್ಟ್ರಕವಿಯೆಂಬ ಬಿರುದನ್ನು ರಾಜ್ಯ ಸರ್ಕಾರ ಕೊಡುತ್ತಿದೆ. ಅದನ್ನು ಸಮರ್ಥಿಸೋಣ. ಇದು ಭಾರತದ ಇತರೆ ಯಾವ ಭಾಷೆ-ಯಾವ ರಾಜ್ಯದಲ್ಲೂ ಇಲ್ಲದ ಸಂಪ್ರದಾಯ : ಅದನ್ನು ಸಮರ್ಥಿಸೋಣ. ಆದರೆ ಬಿರುದು, ಪ್ರಶಸ್ತಿ, ಮನ್ನಣೆಗಳು ನಮ್ಮ ರಾಜಕೀಯ ನಾಯಕರ ಪೊಲಿಟಿಕಲ್‌ ಫ್ಯಾನ್ಸಿ ಆಗಿ ಬಿಡಿಬಾರದು. ನಿಮಗೆ ಬೇಕಾದಾಗ ಕೊಟ್ಟು, ಆ ಸ್ಥಾನವನ್ನು ವರ್ಷಗಟ್ಟಲೆ ಖಾಲಿಯಿಟ್ಟು, ನಿಮಗೆ ತೋಚಿದಷ್ಟು ಕವಿಗೌರವ ಕೊಟ್ಟು -ಇಲ್ಲ ಹಾಗಾಗಬಾರದು.

ನೊಬೆಲ್‌ ಬಹುಮಾನವನ್ನೇ ವರ್ಷಾಂತರಗಳಿಂದ, ತಲೆ ತಲೆಮಾರಿನಿಂದ ಅತ್ಯಂತ ಜವಾಬ್ದಾರಿಯುತ ರೀತಿಯಲ್ಲಿ ವಿತರಿಸುತ್ತಿರುವ ಸಂಸ್ಥೆಯಾಂದು ನಮಗೆ ಮಾದರಿಯಾಗಬೇಕು. ಇಂಥ ಮನ್ನಣೆಗಳನ್ನು ಕೊಡುವಾಗ ಒಂದು ನಿಯಮ, ಒಂದು ವಿಧಾನ, ಒಂದು ಕಟ್ಟಳೆ ಪಾಲಿಸಬೇಕೆಂದು ಶಾಸನವಾಗಬೇಕು. ಈ ಹಿಂದೆ ಮದರಾಸು ಸರ್ಕಾರ ಅಥವಾ ನಿಜಲಿಂಗಪ್ಪ ಸರ್ಕಾರ ಇಂಥದ್ದೊಂದು ಕಟ್ಟಳೆ ಮಾಡಲಿಲ್ಲವೆಂದ ಮಾತ್ರಕ್ಕೆ ಕುಮಾರಸ್ವಾಮಿ ಸರ್ಕಾರವೂ ಮಾಡಬಾರದೆಂಬ ನಿಯಮವೆಲ್ಲಿದೆ? ಈ ಮನ್ನಣೆಯನ್ನು ಕವಿಗಳಿಗೇ ಕೊಡಬೇಕಾ? ಈ ಚರ್ಚೆಯೂ ಆಗಬೇಕಿದೆ.

ಕುಮಾರಸ್ವಾಮಿ ಬಗ್ಗೆ ಮತ್ತೊಂದು ಕಾರಣಕ್ಕೆ ಮೆಚ್ಚುಗೆಯ ಮಾತು ಆಡಬೇಕಿದೆ. ಅದೇನೇ ಶರಂಪರ ಜಗಳವಾದಾಗ್ಯೂ ಈ ಸಲದ ರಾಜ್ಯೋತ್ಸವ ಪ್ರಶಸ್ತಿಯನ್ನು ಐವತ್ತೇ ಜನಕ್ಕೆ ಕೊಡುವುದು ಅಂತ ತೀರ್ಮಾನಿಸಿ, ಅದರಂತೆ ನಡೆದುಕೊಂಡಿದ್ದಾರೆ. ಕೋಡಂಗಿ ಎಸ್‌.ನಾರಾಯಣನಿಗೆ ಕೊಟ್ಟರು ಎಂಬುದನ್ನು ಬಿಟ್ಟರೆ, ಏಕೀಕರಣ ಪ್ರಶಸ್ತಿಗಳಲ್ಲಿ ಕೆಲವು ಪಿಂಜರಾ ಪೋಲು ವೆರೈಟಿಯ ಪಿಂಚಣಿದಾರರ ಪಾಲಾದವು ಎಂಬುದನ್ನು ಬಿಟ್ಟರೆ -ರಾಜ್ಯೋತ್ಸವ ಪ್ರಶಸ್ತಿಯನ್ನು ತೀರ ಅವಮಾನದಿಂದ ಸ್ವೀಕರಿಸುವಂಥ ಪರಿಸ್ಥಿತಿ ನಿರ್ಮಿಸಲಿಲ್ಲ. ಆದರೆ ಸುವರ್ಣ ಕರ್ನಾಟಕದ ಸಂಭ್ರಮದ ಈ ಸಂದರ್ಭದಲ್ಲಿ ತುಂಬ ಮಹತ್ತರವಾದ ಘೋಷಣೆಗಳನ್ನೂ ಕುಮಾರಸ್ವಾಮಿ ಮಾಡಲಿಲ್ಲ. ನಾಡಿನಲ್ಲಿ ಹಬ್ಬವಾಯಿತೇ ಹೊರತು, ಹೊಸತೊಂದಕ್ಕೆ ಅಡಿಗಲ್ಲು ಹಾಕುವಂಥ ಕೆಲಸವಾಗಲಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more