ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಂಡದಂಗಡಿಯ ವಿಜಯ ಮಲ್ಯನು ಡಾಕ್ಟರೇಟು ಪಡೆದ ಪ್ರಸಂಗವು

By Staff
|
Google Oneindia Kannada News

ರವಿ ಬೆಳಗೆರೆ

ರಾತ್ರಿಯಿಡೀ ಸುರಿದ ಮಳೆಗೆ ಬೆಂಗಳೂರೆಂಬ ಬೆಂಗಳೂರು ನಿಚ್ಚಳ ಝಳಝಳ. ಹೊರಗೆ ಈಗ ಮಸ್ತ್‌ ಮನಗಂಡ ಚಳಿ. ನಾನು ರಾತ್ರಿ ನೋಡಿದ blogspot ಒಂದನ್ನು ಬೆಳ್ಳ ಬೆಳಗ್ಗೆ ಎದ್ದು ನೆನಪಿಸಿಕೊಳ್ಳುತ್ತಿದ್ದೇನೆ. ಇಷ್ಟು ಹೊತ್ತಿಗೆ ದಿನಪತ್ರಿಕೆಗಳು ತಂತಮ್ಮ ಸುದ್ದಿ ಮನೆಗಳಿಂದ ಹೊರಟು ಬೆಂಗಳೂರಿನ, ಕರ್ನಾಟಕದ ಲಕ್ಷಾಂತರ ಮನೆಗಳಿಗೆ ತಲುಪಿ ಟೀ-ಕಾಫಿ ಕುಡಿಯುವವರ ಕೈಗೆ ಸಿಕ್ಕು ಹಣ್ಣಾಗುತ್ತಿರಬಹುದು.

ತನಗೆ ಗೊತ್ತಿಲ್ಲದಂತೆ
ಮೇಲಕ್ಕೇರಿದ ಸ್ಕರ್ಟನ್ನು
ಹುಡುಗಿ ಕೆಳಗ್ಗೆ ಜಗ್ಗಿಕೊಂಡು
ಕನಸಿನಲ್ಲೇ ಇನಿಯನ ಮುತ್ತಿಗೆ
ಸಮ್ಮತಿಸುತ್ತಾಳೆ...

ಅಂತ ತೆಲುಗು ಕವಿ ದೇವರಕೊಂಡ ಬಾಲಗಂಗಾಧರ ತಿಲಕ್‌ 1948ರಲ್ಲಿ ಬರೆದ ಪದ್ಯದಲ್ಲಿ ವರ್ಣಿಸುತ್ತಾನೆ. ಇಂಥದ್ದೇ ಒಂದು ಚಳಿಯ ಬೆಳಗಿನ ಜಾವವನ್ನು ಆತ ತನ್ನ ಅಕ್ಷರಗಳಲ್ಲಿ ಸೆರೆಹಿಡಿದದ್ದು ಹೀಗೆ. ಅಪರೂಪದ ಕವಿ ಆತ. ತುಂಬ ಬೇಗನೇ, ಗೆಳೆಯರಿಗೊಂದು ಮಾತೂ ಹೇಳದೆ ತೀರಿಹೋದ -ಅಂತ ಬರೆಯಬೇಕೆಂದು ನೋಟ್ಸ್‌ ಮಾಡಿಕೊಳ್ಳುತ್ತೇನೆ. 'ಅಲ್ಲ! ಆತ ತೀರಿಕೊಂಡದ್ದು 1947ರಲ್ಲಿ. ನೀನು ಸುಳ್ಳು ಬರೆದಿದ್ದೀಯ." ಅಂತ ಒಂದು ಬ್ಲಾಗ್‌ ಅಬ್ಬರಿಸುತ್ತದೆ. ಆ ಬ್ಲಾಗ್‌ನ ಹೆಸರೇ 'ನೂರೆಂಟುಸುಳ್ಳು ಡಾಟ್‌ ಬ್ಲಾಗ್‌ ಸ್ಪಾಟ್‌ ಡಾಟ್‌ ಕಾಂ".

ಅಮೆರಿಕಾದಲ್ಲಿ ಹದಿನಾರೋ ಹದಿನೇಳೋ ವರ್ಷವಿದ್ದು ಇತ್ತೀಚೆಗೆ ಭಾರತಕ್ಕೆ ಮರಳಿ ಬರುತ್ತಿರುವ ಕನ್ನಡಿಗ ಶೇಷಾದ್ರಿ ಅವರು ಆರಂಭಿಸಿರುವ ಬ್ಲಾಗ್‌ಸ್ಪಾಟ್‌ ಅದು. ತಮಾಷೆಯೆಂದರೆ 'ವಿಜಯಕರ್ನಾಟಕ"ದಲ್ಲಿ ವಿಶ್ವೇಶ್ವರ ಭಟ್‌ ಬರೆಯುವ 'ನೂರೆಂಟು ಮಾತು"ಹಾಗೂ ಇತರೆ ಅಂಕಣಗಳಲ್ಲಿ ಮೇಲೆ ವಿವರಿಸಿದಂತಹ ಇನ್‌ಫಾರ್ಮೆಶನ್‌ ಎರರ್‌ಗಳನ್ನು, ಮಾಹಿತಿ ದೋಷಗಳನ್ನು ಅಣಕಿಸುವುದಕ್ಕೆಂದೇ ರೂಪುಗೊಂಡಂತಿರುವ ಬ್ಲಾಗ್‌ಸ್ಪಾಟ್‌ ಅದು.

'ಲೇಖಕರಾದ ಸೋ ಅಂಡ್‌ ಸೋ ಇವರು, ಶಿವಮೊಗ್ಗದ ಬಿಗ್‌ ಬ್ರಾಹ್ಮಿನ್‌ ಸ್ಟ್ರೀಟ್‌ನಲ್ಲಿ ಜನಿಸಿ, ಅದರ ಬಲಕ್ಕಿರುವ ಸ್ಮಾಲ್‌ ಬ್ರಾಹ್ಮಿನ್‌ ಬೀದಿಯ ಆರನೇ ಕಟ್ಟಡದಲ್ಲಿ 1907ರಲ್ಲಿ ನಡೆಯುತ್ತಿದ್ದ ಕನ್ನಡ ಶಾಲೆಯಲ್ಲಿ ಓದಿದವರು"ಅಂತ ವಿಶ್ವೇಶ್ವರ ಭಟ್ಟರು ಬರೆದರೆ ತಕ್ಷಣ ಶೇಷಾದ್ರಿ ರೆಕ್ಕೆ ಫಡಫಡಿಸುತ್ತಾರೆ. 'ನೀವು ಬರೆದದ್ದು ಸುಳ್ಳು. ಅವರು ಓದಿದ್ದು ಸ್ಮಾಲ್‌ ಬ್ರಾಹ್ಮಿನ್‌ ಸ್ಟ್ರೀಟ್‌ನಲ್ಲಿ ಅಲ್ಲ. ಅದೂ ಮಾರಿಗುಡಿ ಬೀದಿಯ ಎಡಗಡೆ ಸಾಲಿನ ಒಂಬತ್ತನೇ ಕಟ್ಟಡದಲ್ಲಿದ್ದ ಶಾಲೆ. ಶ್ರೀಯುತರು ಓದಿದ್ದು 1907ರಲ್ಲಿ ಅಲ್ಲ, 1903ರಲ್ಲಿ! " ಅಂತ ಬ್ಲಾಗ್‌ತ್ತಾರೆ.

ಈ ತೆರನಾದ ಕರೆಕ್ಷನ್‌ ಪತ್ರಿಕೋದ್ಯಮಕ್ಕೆ, ಪತ್ರಿಕೋದ್ಯಮಿಗಳಿಗೆ ತುಂಬ ಮುಖ್ಯ. ಒಂದು ವಿಷಯದ ಬಗ್ಗೆ ಬರೆಯುವಾಗ ಈ ಸಂಪಾದಕ ಅಥವಾ ವರದಿಗಾರ ಆ ವಿಷಯದ ಬಗ್ಗೆ ಕೂಲಂಕಷ ಅಧ್ಯಯನ ಮಾಡಿದ್ದಾರಾ ಇಲ್ಲವಾ ಅಂತ, ಜಾಣ ಓದುಗ ಸಹಜವಾಗಿಯೇ ಪರಿಶೀಲಿಸುತ್ತಾನೆ. ತಾನು ನಂಬಿಕೆಯಿಂದ ಓದುವ ಈ ಪತ್ರಕರ್ತನ ಬರಹಗಳಲ್ಲಿ ತಪ್ಪಿರಕೂಡದು ಎಂದು ನಿರೀಕ್ಷಿಸುತ್ತಾನೆ. ಆದರೆ ತಪ್ಪು, ಉದ್ದೇಶಪೂರ್ವಕವಾಗಿ ಆಗಿದೆಯಾ? ವಿಷಯವನ್ನು ತಿರುಚಲಾಗಿದೆಯಾ? ಇದು ಮಾಹಿತಿ ಸಂಗ್ರಹಣೆಯಲ್ಲಿ ಆದ ಎರರ್‌ ಇರಬಹುದಾಯ ಮಾಹಿತಿ ಸಂಗ್ರಹಣೆಯ ವಿಧಾನದಲ್ಲೇ ದೋಷವಿದೆಯಾ? ಮೂಲತಃ ಈ ಪತ್ರಕರ್ತ ಬೇಜಾವಾಬ್ದಾರಿಯ ಮನುಷ್ಯನಾ? ಈ ಪ್ರಶ್ನೆಗಳನ್ನು ಶೇಷಾದ್ರಿಯವರಂಥವರು ಕೇಳಿಕೊಳ್ಳಬೇಕಾಗುತ್ತದೆ.

ಮೊನ್ನೆ 'ವಿಜಯ ಕರ್ನಾಟಕ" ಸಂಸ್ಥೆ ಪರಭಾರೆಯಾಯಿತು ಅಂತ ಖಚಿತಗೊಂಡ ತಕ್ಷಣ 'ವಿಜಯಕರ್ನಾಟಕ" ಕಚೇರಿಯಲ್ಲೊಂದು ಜೋಕ್‌ ಹುಟ್ಟಿಕೊಂಡಿತ್ತು. 'ಇನ್ನೇನು ಟೈಮ್ಸಾಫ್‌ ಇಂಡಿಯಾದವರು ಬರ್ತಾರಂತೆ. ಬಂದ ಬಂದವರೇ ಎಲ್ಲಾ ಉಪಸಂಪಾದಕರು, ವರದಿಗಾರರು, ಅಂಕಣಕಾರರು, ಸುದ್ದಿಸಂಪಾದಕರು -ಎಲ್ಲರನ್ನೂ ಕೂಡಿಸಿ ಒಂದು ಪರೀಕ್ಷೆ ಬರೆಸುತ್ತಾರಂತೆ. ಅದರಲ್ಲಿ ಫೇಲಾದವರನ್ನೆಲ್ಲ ಅವತ್ತೇ ಡಿಸ್ಮಿಸ್‌ ಮಾಡಿ ಮನೆತನಕ ಬಿಟ್ಟು ಬರ್ತಾರಂತೆ..." ಎಂಬ ಧಾಟಿಯ ಜೋಕು ಅದು. ತುಂಟ ಪತ್ರಕರ್ತನಲ್ಲದೇ ಮತ್ಯಾರು ಇಂಥ ಜೋಕು ಹುಟ್ಟಿಸಲಿಕ್ಕೆ ಸಾಧ್ಯವಿಲ್ಲ. ಆ ಕಸುಬೇ ಅಂತಹುದು. ಅಲ್ಲಿ 'ನಂಗೆ ಎಲ್ಲವೂ ಗೊತ್ತೆಂಬ ಹಮ್ಮು ", 'ಬರೆದದ್ದು ಸರಿಯಿದೆಯೋ ಇಲ್ಲವೋ" ಎಂಬ ಡೌಟು ಒಟ್ಟೊಟ್ಟಿಗೆ ಜೀವಿಸುತ್ತವೆ.

ಜಗತ್ತಿನ ಯಾವ ಪತ್ರಿಕೋದ್ಯಮಿಯೂ ಸಂಶೋಧಕನಲ್ಲ. ಅವನು ತನಿಖೆ ಮಾಡಲಾರ. ಒಂದು ಸೋರ್ಸ್‌ ಇಟ್ಟುಕೊಂಡು ಕೆಲಸ ಮಾಡುತ್ತಾನೆ. ಅದು ಸರಿಯಿದೆಯೋ ಇಲ್ಲವೋ ಅಂತ ಚೆಕ್‌ ಮಾಡಲಿಕ್ಕೆ ಮತ್ತೆರಡು ಸುದ್ದಿ ಮೂಲಗಳಿಗೆ ಎಡತಾಕುತ್ತಾನೆ. ಅಂತಿಮವಾಗಿ ತನಗೆ 'ಹೌದು" ಅನ್ನಿಸಿದ್ದನ್ನು ಬರೆಯುತ್ತಾನೆ. ಅದರಾಚೆಗೆ ಅವನು ಮಾಡಬಹುದಾದ್ದೂ ಅಂದರೆ, ಇನ್ನೊಂದು ಸುದ್ದಿ-ಇನ್ನೊಂದು ತನಿಖೆ ಅಂತ ಹೊರಡುವುದು. ಹಾಗೆ ಹೊರಡದಿದ್ದರೆ ಎರಡನೇ ಸಂಚಿಕೆ ಬರುವುದೇ ಇಲ್ಲ. ತನ್ನ ಬರಹದಲ್ಲಿನ ತಪ್ಪುಗಳನ್ನು ಶೇಷಾದ್ರಿಯಂತಹ ಓದುಗರು ಎತ್ತಿ ತೋರಿಸಿದಾಗ ಅದನ್ನು ತಿದ್ದಿ ಕೊಳ್ಳುತ್ತಾನೆ.

ಆದರೆ ಶೇಷಾದ್ರಿಯಂತಹ ಜಾಣ, ಖರ್ಚು ಮಾಡಲಿಕ್ಕೆ ಅಗಾಧ ಸಮಯವುಳ್ಳ ಜೀವನ ಶೈಲಿಯಿರುವ ಓದುಗರು ಪ್ರಕಟವಾದ ಸುದ್ದಿಯ ಕುರಿತು ರಿಸರ್ಚು ಆರಂಭಿಸಿ ಬಿಡುತ್ತಾರೆ. ಅದು ತುಂಬ ಪ್ರಯೋಜನಕಾರಿ. ಮೊನ್ನೆ ಶೇಷಾದ್ರಿಗಳ ಬ್ಲಾಗ್‌ನಲ್ಲಿ ಪ್ರಕಟವಾದ ವಿವರವೊಂದನ್ನೇ ನೋಡಿ ; ಅದ್ಭುತವಾಗಿದೆ. Is Mallya Also From Mars ಎಂಬ ಸ್ಕೂಪ್‌ ಅದು.

'ಕೆಲವು ವರ್ಷಗಳ ಹಿಂದೆ ಸದರ್ನ್‌ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ವಿಜಯ ಮಲ್ಯರಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಿದಾಗ ನಾವೆಲ್ಲ ಜೋಕು ಮಾಡಿ ಅವರನ್ನು ಆಡಿಕೊಂಡಿದ್ದೆವು." ಅಂತ ವಿಶ್ವೇಶ್ವರ ಭಟ್ಟರು ಬರೆಯುತ್ತಾರೆ. ಅಲ್ಲಿಂದ ಶುರುವಾಗುತ್ತದೆ ಶೇಷಾದ್ರಿಯವರ ಕೊಂಕು ಮತ್ತು ತನಿಖೆ.

'ನಾವು ನೂರೆಂಟು ಸುಳ್ಳು ಜಾಗತಿಕ ಹೆಡ್‌ ಕ್ವಾರ್ಟರ್‌ನಲ್ಲಿರುವವರು ಪತ್ರಕರ್ತರಲ್ಲ. ನಾವು ಹಾಗೆಲ್ಲ ಒಳಸಂಚಿನ ಅನುಮಾನ ಕಾಡಿದಾಗ ಜೋಕು ಮಾಡುವವರಲ್ಲ. ನಮಗೆ ಕಾಸು ಕೊಡುವ ಓದುಗರಾಗಲೀ, ಅಸಂಖ್ಯಾತ ನೌಕರರಾಗಲಿ ಇಲ್ಲ. ಇರುವುದು ಒಬ್ಬರೇ. ನಮ್ಮದು ಸಿಂಗಲ್‌ ಮ್ಯಾನ್‌ ಆಫರೇಷನ್‌"ಅಂತ ಕೊಂಕು ಮಾತಿನಿಂದಲೇ ಆರಂಭಿಸುವ ಶೇಷಾದ್ರಿಗಳು ಆನಂತರ ಮಾತ್ರ ಅದ್ಭುತ ಕೆಲಸ ಆರಂಭಿಸುತ್ತಾರೆ.

ಕರ್ನಾಟಕದ ಹೆಂಡ ಮತ್ತು ವಿಮಾನ ಯಾನ ಪ್ರಪಂಚದ ದೊರೆ ವಿಜಯಮಲ್ಯನಿಗೆ ಡಾಕ್ಟರೇಟ್‌ ಪದವಿ ನೀಡಿದ 'ಸದರ್ನ್‌ ಕ್ಯಾಲಿಫೋರ್ನಿಯಾ ಯುನಿವರ್ಸಿಟಿ"ಎಲ್ಲಿದೆ ಮತ್ತು ಅದು ಡಾಕ್ಟರೇಟ್‌ ನೀಡಿದ್ದು ಹೌದಾ ಅಂತ ರಿಸರ್ಚ್‌ ಆರಂಭಿಸುತ್ತಾರೆ. ಅಮೆರಿಕದಲ್ಲಿ 16ವರ್ಷ ಇದ್ದು, ಅಲ್ಲೇ ಓದಿದ್ದರಿಂದ ನಮಗೆ ಅಲ್ಲಿನ ವಿಶ್ವವಿದ್ಯಾಲಯಗಳ ಬಗ್ಗೆ ಸ್ವಲ್ಪ ಗೊತ್ತು. ನಾವು ಯಾವತ್ತೂ ಸದರ್ನ್‌ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯೆಂಬ ಹೆಸರೇ ಕೇಳಿರಲಿಲ್ಲವಾದ್ದರಿಂದ ಭಟ್ಟರು ತಪ್ಪು ಬರೆದಿರಬಹುದೆಂದು ಅನ್ನಿಸಿತು. ಈ ತರಹದ ತಪ್ಪುಗಳನ್ನು ಭಟ್ಟರು ಮಾಡಿರುವುದು ನಿಮಗೂ ಗೊತ್ತು.

ನಾವು ಮಲ್ಯರ ವೆಬ್‌ಸೈಟ್‌ಗಳನ್ನು ಹುಡುಕಿದಾಗ, ಅಲ್ಲೂ ಸದರ್ನ್‌ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಡಾಕ್ಟರೇಟ್‌ ಪದವಿಯ ಪ್ರಸ್ತಾಪವಿತ್ತು. ಆದರೆ ಅಂಥ ಹೆಸರಿನ ಯೂನಿವರ್ಸಿಟಿಯೇ ಅಮೆರಿಕಾದಲ್ಲಿ ಇಲ್ಲ. ಸದರ್ನ್‌ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿ ಆಫ್‌ ಪ್ರೊಪೆಷನಲ್‌ ಸ್ಟಡೀಸ್‌ ಮತ್ತು ಸದರ್ನ್‌ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿ ಆಫ್‌ ಹೆಲ್ತ್‌ ಸೈನ್ಸ್‌ ಎಂಬೆರಡು ಸಂಸ್ಥೆಗಳಿರುವುದು ನಿಜ. ಈ ಪೈಕಿ ಎರಡನೆಯದು 'ಆನ್‌ಲೈನ್‌ ಶಾಲೆ". ಅಲ್ಲಿಗೆ ಅಟೆಂಡೆನ್ನೇ ಬೇಕಾಗಿಲ್ಲ.

ಆನಂತರ ನೋಡುತ್ತ ನೋಡುತ್ತ ಸದರಿ ವಿಶ್ವವಿದ್ಯಾಲಯವು ಅಮೆರಿಕದಲ್ಲಿ ಅಸ್ತಿತ್ವದಲ್ಲಿರುವ ಅನೇಕ ಖೊಟ್ಟಿ ವಿಶ್ವವಿದ್ಯಾಲಯಗಳ ಪೈಕಿ ಒಂದು ಎಂಬುದನ್ನು ಮಿಷಿಗನ್‌ ರಾಜ್ಯ ಸರ್ಕಾರ ಪತ್ತೆ ಹಚ್ಚಿ ಬ್ಲಾಕ್‌ ಲಿಸ್ಟ್‌ ಮಾಡಿರುವುದು ಶೇಷಾದ್ರಿಗಳಿಗೆ ಗೊತ್ತಾಗುತ್ತದೆ. ಹಾಗೇನೇ 'ಇರ್ವೀನ್‌ನ ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ" ಕೂಡ ವಿಜಯಮಲ್ಯನಿಗೆ ಡಾಕ್ಟರೇಟ್‌ ಪದವಿ ಕೊಟ್ಟಿಲ್ಲ ಎಂಬುದನ್ನು ಶೇಷಾದ್ರಿ ತಿಳಿಯಪಡಿಸುತ್ತಾರೆ. ವಿಜಯಮಲ್ಯನ ಒಡೆತನದ ಯುಆರ್‌ ಗ್ರೂಪ್‌ನ ವೆಬ್‌ಸೈಟ್‌ಗಳಲ್ಲಿರುವ ಈ ಅಪದ್ಧಗಳನ್ನು ಶೇಷಾದ್ರಿ ಬಯಲಿಗೆಳೆಯುತ್ತಾರೆ. ಇದು ಸರ್ಕಾರಿ ಸೌಲತ್ತುಗಳಿಗಾಗಿ ಮಲ್ಯ ಮಾಡಿದ ವಂಚನೆಯಿರಬೇಕು ಅಂತಾರೆ.

ಶೇಷಾದ್ರಿಯವರ ಈ ರಿಸರ್ಚ್‌ ನಿಜಕ್ಕೂ ಅನನ್ಯವಾದದ್ದು. ವಿಜಯಮಲ್ಯನನ್ನು ಬೆತ್ತಲೆಗೊಳಿಸುವುದು ಲೋಕೋಪಯೋಗದ ಕೆಲಸ. ಬೆಂಗಳೂರಿನ ಅವಿವೇಕಿ ಮೇಯರ್‌, ಚೀನಾದಲ್ಲಿ ಅಸ್ತಿತ್ತವದಲ್ಲೇ ಇಲ್ಲದ ಯೂನಿವರ್ಸಿಟಿಯಾಂದರಿಂದ ಡಾಕ್ಟರೇಟು ಖರೀದಿಸಿ ತಂದಿದ್ದಳು. ಅಂಥದ್ದನ್ನೇ ಡಾ.ಮಲ್ಯ(?) ಅಮೆರಿಕಾದಿಂದ ಖರೀದಿಸಿ ತಂದಿದ್ದಾನೆ. ಸತ್ಯ ಸಂಗತಿಯೇನೆಂದರೆ, ತನಗೆ ಡಾಕ್ಟರೇಟು ಬಂದಿದೆಯೆಂದು ಮಲ್ಯ ಹೇಳಿಕೊಂಡ ತಕ್ಷಣ ಕರ್ನಾಟಕದಲ್ಲಿ ಎಲ್ಲರೂ ಮಾಡಿದ್ದು, ಅದರ ಅಪಹಾಸ್ಯವನ್ನೇ! ಜಗ್ಗೇಶ್‌ರ ಸಿನಿಮಾವೊಂದರಲ್ಲಿ ಇದು ಜೋಕಾಗಿಯೇ ಬಯಲಿಗೆ ಬಂತು. ವಿಶ್ವೇಶ್ವರ ಭಟ್‌ ತಮ್ಮ ಬರಹದಲ್ಲಿ ರೆಫರ್‌ ಮಾಡಿದ್ದು ಅದೇ ಜೋಕನ್ನ. ನಂತರವಾದರೂ, ಅವರು ತಮ್ಮ ಲೇಖನದಲ್ಲಿ ಮಲ್ಯರ ಹೆಂಡ ಪ್ರಪಂಚ ಮತ್ತು ವಿಮಾನ ಉಡ್ಡಯನ ರಂಗದಲ್ಲಿ ಮಾಡಿದ ಸಾಧನೆಗಳ ವಿವರ ನೀಡುತ್ತಾರೆಯೇ ಹೊರತು ಅವರಿಗೆ ಡಾಕ್ಟರೇಟ್‌ ಬಂದದ್ದೇ ಖರೆ ಅಂತ ಆಟೆ ಮಾಡಿ ಬರೆಯುವುದಿಲ್ಲ. ಬರಹದಲ್ಲಿ ಮಲ್ಯರೆಡೆಗೊಂದು ಬೆರಗಿದೆ ಎಂಬುದನ್ನು ಬಿಟ್ಟರೇ ಅಂಥ ಆಕ್ಷೇಪಣೆಗೆ ಅರ್ಹವಾದದ್ದೇನೂ ಇಲ್ಲ.

ಆದರೆ ತಪ್ಪು ಹುಡುಕುವುದನ್ನು, ಅದರಲ್ಲೂ ವಿಶ್ವೇಶ್ವರ ಭಟ್ಟರ ಬರಹದಲ್ಲಿನ ತಪ್ಪು ಹುಡುಕುವುದನ್ನು ರೂಢಿಮಾಡಿಕೊಂಡಿರುವ ಶೇಷಾದ್ರಿಗಳು, ಅದಕ್ಕೆಂದೇ 'ನೂರೆಂಟು ಸುಳ್ಳು"ಅಂತ ಹೆಸರಿಟ್ಟು ಬ್ಲಾಗ್‌ ಆರಂಭಿಸಿರುವ ಶೇಷಾದ್ರಿಗಳು-ಭಟ್ಟರ ಬರಹ ಸುಳ್ಳಾಗಿಸಲೆಂದೇ ಮಲ್ಯನ ಬೆನ್ನತ್ತಿರುವವರಂತೆ ಬರೆಯುತ್ತಾರೆ. ಇಲ್ಲಿ ಶೇಷಾದ್ರಿಗಳು ಅರಿತುಕೊಳ್ಳಬೇಕಾದ ಕೆಲವು ಸಂಗತಿಗಳಿವೆ.

ಪತ್ರಕರ್ತ, ಅದರಲ್ಲೂ ದೈನಿಕ ಪತ್ರಿಕೋದ್ಯಮದಲ್ಲಿರುವಾತ ತೀರ ಒಂದು ವಿಷಯಕೆ ್ಕಬೆನ್ನತ್ತಿ ಹೋಗಲಾರ. 'ಅಮೆರಿಕಾದಿಂದ ಭಾರತಕ್ಕೆ ಶಿಫ್ಟ್‌ ಆಗುತ್ತಿದ್ದೇವಾದ್ದರಿಂದ ಈ ಬ್ಲಾಗ್‌ನ್ನ ಅಪ್‌ಡೇಟ್‌ ಮಾಡಲಾಗುತ್ತಿಲ್ಲ" ಎಂಬ ಒಂದೇ ಸಾಲು ಬರೆದು, ತಮ್ಮ ರೀಸರ್ಚಿಗೆ ಶೇಷಾದ್ರಿಗಳು ರಜೆ ಹಾಕಿಬಿಡುತ್ತಾರೆ. ಆದರೆ ವಿಶ್ವೇಶ್ವರ ಭಟ್‌ ಹಾಗೆ ತಮ್ಮ ಯಾವ ಅಂಕಣಕ್ಕೂ ರಜೆ ಹಾಕಲಾಗದು. ಇವತ್ತು ಮಲ್ಯ, ನಾಳೆ ಸುಳ್ಯ! ಬರೆಯುತ್ತಲೇ ಇರಬೇಕು ಅನವರತ. ಹಾಗೆ ಬರೆಯುವಾಗ ಕಣ್ತಪ್ಪು, ಕೈತಪ್ಪು ಆಗುತ್ತಲೇ ಇರುತ್ತದೆ. ಆ ತಪ್ಪುಗಳು ಉದ್ದೇಶಪೂರ್ವಕ ಅಪರಾಧಗಳಲ್ಲದಿರುವಾಗ ಶೇಷಾದ್ರಿಗಳಂಥ ಪ್ರಾಜ್ಞರು ಅಷ್ಟರ ಮಟ್ಟಿಗಿನ ಮಾರ್ಜಿನ್‌ ಕೊಡಬೇಕು.

ಅದಿರಲಿ, ಆದರೆ ಓದುಗನ ತೃಷೆ, ಸತ್ಯವನ್ನರಿಯುವ ತಹತಹ ಎಂಥ ತನಿಖಾ ಪತ್ರಿಕೋದ್ಯಮಿಯನ್ನೂ ಬೆಚ್ಚಿಬೀಳಿಸುತ್ತದೆಂಬುದಕ್ಕೆ ಶೇಷಾದ್ರಿಗಳ ಬ್ಲಾಗ್‌ ಉತ್ತಮ ಉದಾಹರಣೆ. ಇಷ್ಟಾಗಿ ನಾನೇಕೆ 'ಶೇಷಾದ್ರಿಗಳು, ಶೇಷಾದ್ರಿಗಳು" ಅಂತ ಬರೆದೆ ಗೊತ್ತೆ?

ಅವರೇ ತಮ್ಮನ್ನು ತಾವು we ಅಂತ ಕರೆದುಕೊಳ್ಳುತ್ತಾರೆ. ಆಮೇಲೆ, to be specific ours is a single man operation ಅಂತ ವಿವರಿಸುತ್ತಾರೆ. ಹಾಗಿರುವಾಗ ಪಾಪ, ಹೆಂಡ ಮಾರುವ ಶೋಕಿಲಾಲ ಮಲ್ಯ ತನ್ನನ್ನು ತಾನು ಡಾ.ಮಲ್ಯ ಅಂತ ಕರೆದುಕೊಂಡರೆ ಆಶ್ಚರ್ಯವೇನಿದೆ? ಹ್ಹ...

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X