ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವರು ನಮ್ಮ ಮಕ್ಕಳಾದ್ದರಿಂದಲೇ ಹಾಗೇ ಮಾಡಿರುತ್ತಾರೆ!

By Staff
|
Google Oneindia Kannada News


ಮಗಳಿಗೆ ಅಥವಾ ಮಗನಿಗೆ ಅಫೇರ್‌ ಇದೆ ಅಂತ ಗೊತ್ತಾದ ಕೂಡಲೆ ಬಯ್ದು, ಕಣ್ಣೀರಿಟ್ಟು, ರೂಮಿನಲ್ಲಿ ಕೂಡಿಸಿಕೊಂಡು ದೇವರ ಮೇಲೆ ಆಣೆ ಹಾಕಿಸಿ, ಪ್ರಾಣ ಕಳೆದುಕೊಂಡು ಬಿಡುತ್ತೇವೆಂದು ಹೆದರಿಸಿ ಅವರನ್ನು ‘ಸರಿ ಪಡಿಸಲು ’ ಯತ್ನಿಸುತ್ತೇವೆ. ಆದರೆ ಅದರಿಂದ ಪ್ರಯೋಜನವಿಲ್ಲ!

  • ರವಿ ಬೆಳಗೆರೆ
After all, they are our children!ಬೇರೆ ಯಾರಿಗೂ ಅಂಥದ್ದೊಂದು ವಿಶ್ವಾಸ ಇರುವುದಿಲ್ಲ : ನಮ್ಮ ಮಕ್ಕಳಿಗಿರುತ್ತದೆ. ‘ನಾನು ಕನ್ವಿನ್ಸ್‌ ಮಾಡ್ತಿನಿ ಬಿಡು. ನಾನು ಒಪ್ಪುಸ್ತೀನಿ ಬಿಡು’ ಎಂಬಂಥ ವಿಶ್ವಾಸ ಅದು.

ಒಬ್ಬ ಗೃಹಿಣಿ ಬಲಹೀನ ಕ್ಷಣಗಳಲ್ಲಿ ಮದುವೆಯಾಚೆಗೊಂದು ಸಂಬಂಧ ಇಟ್ಟುಕೊಂಡು ಬಿಟ್ಟರೆ ‘ನನ್ನ ಗಂಡನನ್ನು ನಾನು ಒಪ್ಪುಸ್ತೀನಿ ಬಿಡು’ ಅಂತ ಎಂದಿಗೂ ಅಂದುಕೊಳ್ಳಲಾರಳು. ವಿಷಯ ಗೊತ್ತಾದರೆ ಗಂಡ ನನ್ನನ್ನು ಬಿಟ್ಟು ಬಿಡುತ್ತಾನೆ. ಸಿಟ್ಟಿನವನಾದರೆ ನನ್ನನ್ನು ಕೊಲ್ಲುತ್ತಾನೆ ಬಲಹೀನನಾದರೆ ನನ್ನನ್ನು ಕೊಂದು ಆತನೂ ಸಾಯುತ್ತಾನೆ. ಅಥವಾ ಊರೇ ಬಿಟ್ಟು ಹೋಗಿಬಿಡುತ್ತಾನೆ. ಇಂಥದ್ದೇನಾದರೂ ಆಗಬಹುದೇ ಹೊರತು, ಗಂಡನನ್ನು ತಾನು ಇಂಥದ್ದೊಂದು ಸಂಬಂಧವಿಟ್ಟುಕೊಳ್ಳಲಿಕ್ಕೆ ಅನುಮತಿ ಕೊಡು ಅಂತ ಕೇಳಲಾರೆ. ಆದು ಆಗುವ ಮಾತಲ್ಲ ಅಂತ ಆಕೆಗೆ ಗೊತ್ತಿರುತ್ತದೆ.

ಗಂಡನಾದರೂ ಅಷ್ಟೆ. ಹೆಂಡತಿಯನ್ನು ದಬಾಯಿಸಬಲ್ಲ. ‘ಹೌದು ಏನೀಗ? ’ ಅಂತ ಭಂಡತನಕ್ಕೆ ಬೀಳಬಲ್ಲ. ‘ಬೇಕಾದ್ರೆ ಇರು, ಸಾಕಾದ್ರೆ ಹೋಗು’ ಅಂದುಬಿಡಬಲ್ಲ. ಇದನ್ನೆಲ್ಲ ಮಾಡಬಲ್ಲನೇ ಹೊರತು ಒಂದು ವಿವಾಹೇತರ ಸಂಬಂಧವನ್ನು ಆತ ಒಪ್ಪಿಕೊಳ್ಳುವಂತೆ ಮಾಡಲಾರ. ಒರಟನಾದವನು ದೌರ್ಜನ್ಯ ಮಾಡುತ್ತಾನೆ. ಬುದ್ಧಿವಂತ(?)ನಾದವನು ಅಳೆದೂ ಸುರಿದು ಮೋಸ ಮಾಡುತ್ತಾನೆ.

ಆದರೆ ಮಕ್ಕಳಿಗೆ ‘ಕನ್ವಿನ್ಸ್‌ ಮಾಡ್ತೀನಿ ಬಿಡು’ ಅನ್ನುವಂಥದ್ದೊಂದು ಕಾನ್ಫಿಡೆನ್ಸ್‌ ಇರುತ್ತದೆ. ಆ ಕಾನ್ಪಿಡೆನ್ನನ್ನು ನಾವೇ ಕೊಟ್ಟಿರುತ್ತೇವೆ. ನಮ್ಮ ಪ್ರೀತಿ ಕೊಡ ಮಾಡಿರುತ್ತೆ. ಇಷ್ಟು ಒಳ್ಳೆಯವರಾದ, ನನ್ನನ್ನು ಇಷ್ಟು ಪ್ರೀತಿಸುವ, ನನ್ನನ್ನು ಇಷ್ಟು ನಂಬುವ ಅಪ್ಪ -ಅಮ್ಮ ನನ್ನ ವಿನಂತಿಗೆ ಇಲ್ಲವೆನ್ನುತ್ತಾರಾ ಎಂಬಂಥ ಕಾನ್ಪಿಡೆನ್ಸ್‌ ಅದು.

ಅಂಥ ಕಾನ್ಪಿಡೆನ್ಸಿಟ್ಟುಕೊಂಡೇ ಅವರು ಯಾರನ್ನೋ ಪ್ರೀತಿಸಿ ಬಿಡುತ್ತಾರೆ. ತಾವು ಹಟ ಮಾಡಿದರೆ, ಊಟ ಬಿಟ್ಟರೆ, ಪ್ರಾಣ ಕಳಕೊಳ್ಳುತ್ತೇನೆಂದು ಹೆದರಿಸಿದರೆ, ಅವರಿವರ ಕೈಲಿ ಹೇಳಿಸಿದರೆ, ತೀರ ಮನೆಬಿಟ್ಟೇ ಹೊರಟು ಹೋದರೆ -ಈಗಲ್ಲ, ಇನ್ನು ಸ್ವಲ್ಪ ದಿನಕ್ಕಾದರೂ ಅಪ್ಪ ಅಮ್ಮ ಒಪ್ಪುತ್ತಾರೆ. ಮತ್ತೆ ಸಂಬಂಧ ಸರಿ ಹೋಗುತ್ತದೆ. ತಮ್ಮ ಪ್ರೀತಿಗೆ, ಜಾತ್ಯಂತರ ವಿವಾಹಕ್ಕೆ ಒಂದು ಅಟ್ಸೆಪ್ಟೆನ್ಸ್‌ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಅವರದಾಗಿರುತ್ತದೆ.

ಇನ್ನೂ ಒಂದು ಕಾರಣವೆಂದರೆ, ಸರಿಯಾಗಿ ಡಿಗ್ರಿಯನ್ನೂ ಮುಗಿಸಿರದ ಹುಡುಗ ಕೂಡ ಇಂದಲ್ಲ ನಾಲೆ ಏನನ್ನೋ ಸಾಧಿಸಬಲ್ಲ ಅನ್ನುವಂಥ ವಿಲಕ್ಷಣ ಕಾನ್ಫಿಡೆನ್ಸೊಂದು ಹುಡುಗಿಯರಲ್ಲಿ ಬೆಳೆದುಬಿಡುತ್ತದೆ. ಅವರು ಆರಿಸಿಕೊಳ್ಳುವುದೇ, ಕೇರಿಯ ನಾಲ್ಕು ಮಂದಿ ಅಡ್ನಾಡಿ ಹುಡುಗರ ಮಧ್ಯೆ ಇದ್ದುದರಲ್ಲೇ ಹೀರೋನಂತೆ ಕಾಣುವವನನ್ನ. ಕ್ಲಾಸಿಗೆ ಅವನೇ ಬುದ್ಧಿವಂತನಂತೆ ಕಾಣುತ್ತಿರುತ್ತಾನೆ. ಗೆಳೆಯರ ಅಪಾರ ಬೆಂಬಲ ಆತನಿಗಿದೆ ಅಂದುಕೊಂಡು ಬಿಟ್ಟಿರುತ್ತಾಳೆ. ಇಂಥ ಹುಡುಗ ಅಪ್ಪನ ಕಣ್ಣಿಗೆ ನಿಷ್ಪ್ರಯೋಜಕನಂತೆ ಕಾಣಲಾರ. ಅಪ್ಪ ಒಪ್ಪೆ ಒಪ್ಪುತ್ತಾನೆ ಅಂತ ಅವಳಿಗೆ ನಂಬಿಕೆ ಹುಟ್ಟಿರುತ್ತದೆ.

ಮುಖ್ಯವಾಗಿ ಆ ನಂಬಿಕೆಯನ್ನು ನಾವೇ ನಮ್ಮ ಮಕ್ಕಳಲ್ಲಿ ಹದಿನೆಂಟಿಪ್ಪತ್ತು ವರ್ಷಗಳುದ್ದಕ್ಕೂ ಹುಟ್ಟು ಹಾಕಿ, ಬೆಳೆಸುತ್ತ ಬಂದಿರುತ್ತೇವೆ. ಕೇಳಿದ್ದನ್ನು ಕೊಡಿಸಿರುತ್ತೇವೆ, ಚಿಕ್ಕ ತಪ್ಪು ಮಾಡಿದಾಗ ಸಮರ್ಥಿಸಿರುತ್ತೇವೆ, ಬಂದವರೆದುರು ಹೊಗಳಿರುತ್ತೇವೆ. Ultimately, ಒಳ್ಳೆಯ ಅಪ್ಪ-ಅಮ್ಮ ಅನ್ನಿಸಿಕೊಂಡು ಬಿಟ್ಟಿರುತ್ತೇವೆ. ಇದು ತಪ್ಪಲ್ಲ. ಆದರೆ ಮಕ್ಕಳಿಗೆ ನಾವು ನಮ್ಮ ತೀವ್ರತರದ ಇಷ್ಟಾನಿಷ್ಟಗಳನ್ನ ಕಮ್ಯುನಿಕೇಟ್‌ ಮಾಡಿರುವುದಿಲ್ಲ. ಯಾವ ವಿಷಯ ನಮ್ಮನ್ನು ತುಂಬ ಗಾಢವಾಗಿ hurt ಮಾಡುತ್ತದೆ ಎಂಬುದನ್ನು ತಿಳಿಸಿರುವುದಿಲ್ಲ. ನಮ್ಮ ರಾಗ-ದ್ವೇಷಗಳನ್ನು ಹೇಳಿಕೊಂಡಿರುವುದಿಲ್ಲ. ಅವರಿಗೆ ನಮ್ಮ ಬಗ್ಗೆ ಬೇರೆಲ್ಲ ಗೊತ್ತಿರಬಹುದು. ಆದರೆ ಒಂದು ನಿರ್ದಿಷ್ಟ ವಿಚಾರಕ್ಕೆ, ಅದರಲ್ಲೂ ಮದುವೆ-ಬೀಗತನದಂತಹ ವಿಚಾರಕ್ಕೆ ನಾವು ಹೇಗೆ react ಮಾಡುತ್ತೇವೆ ಎಂಬುದನ್ನು ತಿಳಿಸಿರುವುದಿಲ್ಲ.

ಮಗಳಿಗೆ ಅಥವಾ ಮಗನಿಗೆ ಅಫೇರ್‌ ಇದೆ ಅಂತ ಗೊತ್ತಾದ ಕೂಡಲೆ ಬಯ್ದು, ಕಣ್ಣೀರಿಟ್ಟು, ರೂಮಿನಲ್ಲಿ ಕೂಡಿಸಿಕೊಂಡು ದೇವರ ಮೇಲೆ ಆಣೆ ಹಾಕಿಸಿ, ಪ್ರಾಣ ಕಳೆದುಕೊಂಡು ಬಿಡುತ್ತೇವೆಂದು ಹೆದರಿಸಿ ಅವರನ್ನು ‘ಸರಿ ಪಡಿಸಲು ’ ಯತ್ನಿಸುತ್ತೇವೆ. ಆದರೆ ‘ತಾವು ತಪ್ಪೇ ಮಾಡಿಲ್ಲ ’ ಅಂತ ಮಕ್ಕಳು ತೀರ್ಮಾನಿಸಿರುವಾಗ ಅವರನ್ನು ‘ಸರಿಪಡಿಸುವುದು’ ಎಲ್ಲಿಂದ ಸಾಧ್ಯ? ಹಾಗಾದರೆ ನಾವು ಇಷ್ಟು ದಿನ ಸಾಕಿದ್ದು, ಜೋಪಾನ ಮಾಡಿದ್ದು, ಪ್ರೀತಿಸಿದ್ದು, ನಮ್ಮ ಸಂಸ್ಕಾರ ಧಾರೆ ಎರೆದಿದ್ದು ಎಲ್ಲ ಸುಳ್ಳೇನಾ -ಅಂತ ಕೇಳಿಕೊಳ್ಳುತ್ತೇವೆ. ಮಕ್ಕಳು ದ್ರೋಹ ಮಾಡಿಬಿಟ್ಟರು ಅಂದುಕೊಳ್ಳುತ್ತೇವೆ. ಯಾರಿಗೂ ಕೆಡಕು ಮಾಡದ ನಾವು, ಯಾರನ್ನೂ ವಂಚಿಸದ ನಾವು, ನಮ್ಮಂಥವರಿಗೆ ನಮ್ಮ ಮಕ್ಕಳೇ ಇಂಥ ಗತಿ ತಂದುಬಿಟ್ಟರಲ್ಲಾ? ಸರೀಕರಲ್ಲಿ ತಲೆಯೆತ್ತಿಕೊಂಡು ಓಡಾಡದಂತೆ ಮಾಡಿಬಿಟ್ಟರಲ್ಲಾ ಅಂತ ನರಳುತ್ತೇವೆ.

ಮುಖ್ಯ ಸಮಸ್ಯೆ ಎಲ್ಲಿದೆಯೆಂಬುದನ್ನು ನಾವು ಗುರುತಿಸಿಯೇ ಇರುವುದಿಲ್ಲ. ಮುಖ್ಯ ಸಮಸ್ಯೆ, ನಮ್ಮ ಮನಸು-ಅನಿಸಿಕೆ-ಆದರ್ಶ ಇತ್ಯಾದಿಗಳನ್ನು ನಾವು ನಮ್ಮ ಮಕ್ಕಳಿಗೆ ಕಮ್ಯುನಿಕೇಟ್‌ ಮಾಡಿಯೇ ಇರುವುದಿಲ್ಲ. ಜೊತೆಜೊತೆಗೆ ಮಕ್ಕಳು ಬೆಳೆಯುತ್ತಿರುತ್ತಾರಾದ್ದರಿಂದ ಅವರಿಗೆ ನಾವೆಂಥವರೆಂಬುದು ಅರ್ಥವಾಗಿರುತ್ತದೆ ಅಂದುಕೊಂಡಿರುತ್ತೇವೆ. ಅವರು ನಮ್ಮ ಜೊತೆ ಮಾತ್ರ ಬೆಳೆಯುತ್ತಿಲ್ಲವಲ್ಲ? ಅವರಿಗೆ ನೂರೆಂಟು ಜೊತೆಗಳು, ನೂರೆಂಟು ಸೆಳೆತಗಳು. ಅವರು ನಮ್ಮ ಮಕ್ಕಳಾಗಿದ್ದೂ ನಮಗಿಂತ ತುಂಬ ವಿಭಿನ್ನವಾಗಿ ಬಿಟ್ಟಿರಬಲ್ಲರು.

ಎಂದೂ ಹನಿ ವಿಸ್ಕಿ ಕುಡಿಯದ ರಾಜಕಾರಣಿ ದೇವೇಗೌಡ. ಅವರ ಮಕ್ಕಳ್ಯಾರೂ ಅಂಥ ಕುಡುಕರಲ್ಲ. ಆದರೆ ಮೊಮ್ಮಗ ಕುಡಿದು ಎಂಥ ಅನಾಹುತ ಮಾಡಿಕೊಂಡ ನೋಡಿ? ಇದು ಕಮ್ಯುನಿಕೇಷನ್‌ನ ಕೊರತೆಯಿಂದ ಆಗುವ ಪರಿಣಾಮ.

‘ನನ್ನ ಮಗಳಾಗಿದ್ದು ಇಂಥ ಕೆಲಸ ಮಾಡಿದೆಯಾ ’ ಅಂತ ಹಲುಬುವ ತಂದೆಗೆ ಹೇಳಬೇಕು ‘ನಿನ್ನ ಮಗಳಾಗಿರುವುದರಿಂದಲೇ, ನಿನ್ನ ಒಳ್ಳೆಯತನವನ್ನು ನಂಬಿಕೊಂಡೇ, ನಿನ್ನನ್ನು ಒಪ್ಪಿಸುತ್ತೇನೆಂಬ ವಿಶ್ವಾಸದಲ್ಲೇ’ ಹುಡುಗಿ ಆ ಕೆಲಸ ಮಾಡಿದೆ.

ಈಗ ನೀನೇ ತಿದ್ದಬೇಕು.

ತಪ್ಪಿದರೆ, ನೀನೇ ಒಪ್ಪಬೇಕು. ಏಕೆಂದರೆ ಅದು ನಿನ್ನ ಮಗು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X