• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವರ ಕೈಗೆ ಸಿಕ್ಕ ಧರ್ಮೇಂದ್ರ ಕೂಡ ಮಹಾನ್‌ ನಟನೆನಿಸಿದ್ದ!

By Staff
|
Ravi Belagere on Thatskannada.com ರವಿ ಬೆಳಗೆರೆ
ಕಹೀಂ ದೂರ್‌ ಜಬ್‌

ದಿನ್‌ ಢಲ್‌ ಜಾಯೇ

ಸಾಂಝ್‌ ಕೀ ದುಲ್ಹನ್‌

ಬದನ್‌ ಚುರಾಯೇ..

ಅಂತ ‘ಆನಂದ್‌’ ಸಿನಿಮಾದಲ್ಲಿ ಒಂದು ಹಾಡಿದೆ. ಅದನ್ನು ಹಾಡಿದ ಮುಖೇಶ್‌ ತೀರಿಕೊಂಡು, ಪೂರ್ತಿ ಮೂವತ್ತು ವರ್ಷಗಳಾದವು. ಸರಿಯಾಗಿ ಅದೇ ದಿವಸ, ‘ಆನಂದ್‌’ಚಿತ್ರವನ್ನು ನಿರ್ದೇಶಿಸಿದ ಹೃಷೀಕೇಶ್‌ ಮುಖರ್ಜಿ ಮೊನ್ನೆ ತೀರಿಕೊಂಡರು; ದೂರದಲ್ಲೆಲ್ಲೋ ಹೊತ್ತು ಮುಳುಗಿತು.

ಅವರು ಹಿಂದಿ ಚಿತ್ರರಂಗಕ್ಕೆ 1970ರ ದಶಕವೆಂಬ ವಸಂತ ಋತುವನ್ನು ತಂದು ಕೊಟ್ಟವರು. ‘ಗುಡ್ಡಿ’, ‘ಬಾವರ್ಚಿ’, ‘ಚುಪ್ಕೆ ಚುಪ್ಕೆ’ , ‘ಮಿಲಿ’, ‘ಗೋಲ್‌ ಮಾಲ್‌’, ‘ಖೂಬ್‌ ಸೂರತ್‌’ -ಎಲ್ಲವೂ ಎಪ್ಪತ್ತರ ದಶಕದಲ್ಲಿ ಹೃಷೀದಾ ಎತ್ತಿದ ಸಿಕ್ಸರ್‌ಗಳೇ. ಅಮಿತಾಬ್‌, ರಾಜೇಶ್‌ ಖನ್ನಾ, ಧರ್ಮೇಂದ್ರ, ಜಯಾ ಬಾಧುರಿ, ರೇಖಾ, ಎ.ಕೆ.ಹಂಗಲ್‌, ಅಮೋಲ್‌ ಪಾಲೇಕರ್‌, ದೀಪ್ತಿ ನವಲ್‌ -ಎಲ್ಲರೂ ಹೃಷೀದಾ ಮೂಸೆಯಲ್ಲಿ ಮಿಂದು ರೂಪು ಪಡೆದವರೇ.

‘ಆನಂದ್‌’ನಲ್ಲಿ ಅದ್ಭುತ ನಟ ರಾಜೇಶ್‌ ಖನ್ನಾನೊಂದಿಗೆ ‘ಸೈಲೆಂಟ್‌ ಸ್ಟಾರ್‌’ಅಮಿತಾಬ್‌ನನ್ನು ನಿಲ್ಲಿಸಿದರು. ಅವರದೇ ಚಿತ್ರ ‘ನಮಕ್‌ ಹರಾಮ್‌’ಬರುವ ಹೊತ್ತಿಗೆ ಅಮಿತಾಬ್‌ನೆದುರು ಬಾಯಿಬಿಡಲಿಕ್ಕೆ ರಾಜೇಶ್‌ ಖನ್ನಾ ಹಿಂಜರಿದು ಉಗುಳು ನುಂಗುತ್ತಿದ್ದ. ಮುಂಬಯಿಯ ಸ್ಲಮ್‌ನ ಗುಡಿಸಲೊಳಗಿನಿಂದ ಮುದ್ದಾದ ಮಗುವನ್ನೆತ್ತಿಕೊಂಡು ಬಂದಂತೆ ಹೃಷೀ ದಾ, ಅವತ್ತು ‘ನಮಕ್‌ ಹರಾಮ್‌’ ಚಿತ್ರದ ಮೂಲಕ ರಾಜಾ ಮುರಾದ್‌ ಎಂಬ ಅಪರೂಪದ ನಟನನ್ನು ತೆರೆಗೆ ಕರೆತಂದಿದ್ದರು.

Remembering a master film maker called Hrishikesh Mukherji‘ಆನಂದ್‌’ ಎಂಬ ಕ್ಯಾನ್ಸರ್‌ ಕಥೆಯ ಚಿತ್ರದಲ್ಲಿ ಕ್ಯಾನ್ಸರ್‌ ಪೀಡಿತ ನಾಯಕನಾಗಿ ರಾಜೇಶ್‌ ಖನ್ನಾ ಆಕಾಶಕ್ಕೇರಿದರೆ, ಅದೇ ಕ್ಯಾನ್ಸರ್‌ ಕಥೆಯನ್ನಿಟ್ಟುಕೊಂಡು ‘ಮಿಲಿ’ಚಿತ್ರವನ್ನು ಮಾಡಿ ಬಾಧುರಿಯನ್ನು ಶಾಶ್ವತ ತಾರೆಯನ್ನಾಗಿಸಿದವರು ಹೃಷೀ ದಾ. ಅವರ ಕೈಗೆ ಸಿಕ್ಕ ಧರ್ಮೇಂದ್ರ ಕೂಡ ಮಹಾನ್‌ ನಟನಾಗಿ ಕಂಗೊಳಿಸಿದ್ದ. ಅಮಿತಾಬ್‌ನನ್ನು ಹಿಂದಿ ಕಮರ್ಷಿಯಲ್‌ ಸಿನೆಮಾಗಳ 1980ರ ದಶಕದ ಭರಾಟೆ ನುಂಗಿ ಹಾಕದೆ ಹೋಗಿದ್ದಿದ್ದರೆ, ಹೃಷಿಕೇಶ್‌ ಮುಖರ್ಜಿಯವರು ಆತನನ್ನು ಜಗತ್ತಿನ ನಂಬರ್‌ ಒನ್‌ ನಟನನ್ನಾಗಿ ಮಾಡಿರುತ್ತಿದ್ದರೇನೋ?

ನೋಡಿ, 34ವರ್ಷಗಳ ಹಿಂದೆ ಬಂಗಾಲಿ ಚಿತ್ರವೊಂದನ್ನು(ಗೋಲ್ವೋ, ಹೋಲಿಯೋ ಸತ್ತಿ) ಹೃಷೀದಾ ಹಿಂದಿಗೆ ತಂದು ‘ಬಾವರ್ಚಿ’ ಅಂತ ಮಾಡಿದ ಸಿನಿಮಾನ ಈ ಹುಡುಗ ಸುದೀಪ್‌ 2006ರಲ್ಲಿ ಕನ್ನಡದಲ್ಲಿ ಮಾಡುತ್ತೇನೆಂದು ಹೊರಡುತ್ತಾನೆಂದರೆ, ಹೃಷಿ ದಾ ಮಾಡಬಲ್ಲ impact ಎಂಥದ್ದಿರಬಹುದೋ ಯೋಚಿಸಿ.

ಹೀಗೆ ಒಬ್ಬ ನಿರ್ದೇಶಕ ಶಕ್ತನಾಗಿ ಬೆಳೆಯುವುದಕ್ಕೆ ಕಾರಣಗಳಿರುತ್ತವೆ. ಆ ಕಾರಣಗಳಿಲ್ಲದರಿಂದಲೇ ಈಗ ಮರಕ್ಕೊಬ್ಬ ಕಳಪೆ ನಿರ್ದೇಶಕ ನೇತಾಡುತ್ತಾನೆ.

ಹೃಷಿಕೇಶ್‌ ಮುಖರ್ಜಿ ಎಂಬ ಯುವಕ 1940ರ ದಶಕದಲ್ಲಿ ಕಲ್ಕತ್ತಾದ ಹಜಾರಾ ರೋಡ್‌ನ ಚಹದಂಗಡಿಯಲ್ಲಿ ಪೋರ್ಸಿಲೀನ್‌ ಕಪ್‌ನಲ್ಲಿ ಚಹ ಕುಡಿಯುತ್ತಾ ಸಿನೆಮಾಗಳ ಬಗ್ಗೆ ಪ್ಯಾಷನೇಟ್‌ ಆಗಿ ಚರ್ಚಿಸುತ್ತಿದ್ದುದು, ಮೃಣಾಲ್‌ ಸೇನ್‌ ಮತ್ತು ಸಲೀಲ್‌ ಚೌಧುರಿಯಂಥವರೊಂದಿಗೆ. ಅವತ್ತಿಗೆ ಹೃಷೀ ದಾ ಕೆಮಿಸ್ಟ್ರಿಯಲ್ಲಿ ಬಿಎಸ್ಸಿ ಮುಗಿಸಿ ಸೈನ್ಸು-ಮ್ಯಾಥಮೆಟಿಕ್ಸ್‌ ಪಾಠ ಮಾಡುತ್ತಿದ್ದರು. ಸಿನೆಮಾ ಕೈ ಹಿಡಿದು ಜಗ್ಗಿದ್ದರಿಂದ ಕಲ್ಕಾತ್ತಾದ ಬಿ.ಎನ್‌.ಸರ್ಕಾರ್‌ ಅವರ ‘ನ್ಯೂ ಥಿಯೇಟರ್ಸ್‌’ ಸೇರಿಕೊಂಡು ಅಲ್ಲಿ ಫಿಲ್ಮ್‌ ಎಡಿಟಿಂಗ್‌ ಕಲಿತರು.

ಆ ದಿನಗಳಲ್ಲೇ ಬಿಮಲ್‌ ರಾಯ್‌ ತಮ್ಮ ಮೊಟ್ಟಮೊದಲ ಹಿಂದಿ ಚಿತ್ರ ‘ಹಮ್‌ರಾಹೀ’ ಮಾಡಿದರು. ಅವರನ್ನು ತಕ್ಷಣ ಬಾಂಬೆ ಕೈಬೀಸಿ ಕರೆಯಿತು. ಜೊತೆಯಲ್ಲಿ ಹೃಷೀಕೇಶ್‌ ಮುಖರ್ಜಿ, ಸುಧೇಂದು ರಾಯ್‌, ಕಮಲ್‌ ಬೋಸ್‌, ಮಹಾನ್‌ ನಿರ್ದೇಶಕ ಸಲೀಲ್‌ ಚೌಧುರಿ(ದೇಹಕೇ ಉಸಿರೇ ಸದಾ ಭಾರಾ.. ನೆನಪಿಸಿಕೊಳ್ಳಿ) ಮುಂತಾದವರನ್ನೆಲ್ಲ ಕರೆದುಕೊಂಡೇ ಮುಂಬಯಿಗೆ ಬಂದರು ಬಿಮಲ್‌ರಾಯ್‌.

ಮುಂಬಯಿಗೆ ಬಂದ ಬಂಗಾಲಿಗಳ ಗುಂಪು ‘ದೋ ಭೀಗಾ ಜಮೀನ್‌’ ಎಂಬ ನಿಗಿನಿಗಿ ಉರಿವ ಕೆಂಡದಂಥ ಚಿತ್ರ ಮಾಡಿತು. ಅದು ಸಲೀಲ್‌ ಚೌಧುರಿ ಬರೆದ ಸಣ್ಣ ಕಥೆ. ಅದಕ್ಕೆ ಸ್ಕಿೃಪ್ಟ್‌ ಮಾಡಿದ್ದು ಹೃಷೀಕೇಶ್‌ ಮುಖರ್ಜಿ. ಸಿನೆಮಾಕ್ಕೆ ಎಡಿಟರೂ ಮುಖರ್ಜಿಯೇ. ಈ ಚಿತ್ರ ಎಂಥ ಅನುಭವ ನೀಡಿತೆಂದರೆ, ಬಿಮಲ್‌ ರಾಯ್‌ ಜೊತೆಗೆ ಆರು ವರ್ಷ ಕೆಲಸ ಮಾಡಿದ ಮೇಲೆ ಹೃಷೀ ದಾ ‘ಮುಸಾಫಿರ್‌’ ಎಂಬ ಸಿನೆಮಾ ಸ್ವತಂತ್ರವಾಗಿ ನಿರ್ದೇಶಿಸಿದರು. ಈ ಚಿತ್ರ ಯಾಕೆ ಸೋತಿತು ಅಂದರೆ, ಇದು 20ವರ್ಷಗಳ ನಂತರ ಬಂದಿದ್ದಿದ್ದರೆ ಗೆಲ್ಲುತ್ತಿತ್ತು ಅಂತ ವಿಮರ್ಶೆ ಬರೆದಿದ್ದರಂತೆ. ಸುಚಿತ್ರಾ ಸೇನ್‌, ಕಿಶೋರ್‌ ಕುಮಾರ್‌, ನಿರೂಪ ರಾಯ್‌, ದಿಲೀಪ್‌ ಕುಮಾರ್‌, ಡೈಸಿ ಇರಾನಿಯಂಥವರೆಲ್ಲ ನಟಿಸಿದ್ದ ಈ ಚಿತ್ರದಲ್ಲಿ ದಿಲೀಪ್‌ ಒಂದಿಡೀ ಹಾಡು ಹೇಳಿದ್ದ.

ಇದಾದ ಮೇಲೆ ಹೃಷೀ ದಾ ‘ಅನಾಡಿ’ನಿರ್ದೇಶಿಸಿದರು. ಅದರ ನಾಯಕ ರಾಜ್‌ ಕಪೂರ್‌. ನಾಯಕಿ ನೂತನ್‌. ಅವರಿಬ್ಬರಿಗಿಂತ ಅದ್ಭುತವಾಗಿ ನಟಿಸಿದ್ದು ಲಲಿತಾ ಪವಾರ್‌ ಎಂಬ ಮರಾಠರ ಹೆಣ್ಣುಮಗಳು! ಕೈಗೆ ಸಿಕ್ಕ ಅವಾರ್ಡುಗಳನ್ನೆಲ್ಲ ದೋಚಿ ಬಿಸಾಡಿದ ಸಿನೆಮಾ ಅದು.

‘ಸಬ್‌ ಕುಛ್‌ ಸೀಖಾ ಹಮ್ನೇ

ನಾ ಸೀಖೀ ಹೋಷಿಯಾರೀ..’

ಅಂತ ಮುಖೇಶ್‌ ಹಾಡಿದ್ದ. ಅವತ್ತೇ, ಆ ಚಿತ್ರ ಗೆದ್ದ ದಿನವೇ ಹೃಷೀಕೇಶ್‌ ಮುಖರ್ಜಿ(1959ರಲ್ಲಿ) ಮತ್ತೊಂದು ಚಿತ್ರದ ಸ್ಕಿೃಪ್ಟ್‌ ಮಾಡತೊಡಗಿದರಂತೆ. ಅದಕ್ಕೆ ರಾಜ್‌ ಕಪೂರ್‌ನೇ ಮತ್ತೆ ನಾಯಕನಾಗಬೇಕು. ಆ ಪಾತ್ರಕ್ಕೆ ಅವನೇ ಸರಿ ಅಂತ ನಿರ್ಧರಿಸಿದ್ದರಂತೆ. ಆದರೆ ಆ ಚಿತ್ರ ತೆರೆ ಕಂಡದ್ದು 1970ರ ದಶಕದಲ್ಲಿ. ಅಷ್ಟು ಹೊತ್ತಿಗೆ ರಾಜ್‌ ಕಪೂರ್‌ಗೆ ವಯಸ್ಸಾಗಿ ಹೋಗಿತ್ತು. ಹೀಗಾಗಿ ಚಿತ್ರವನ್ನು ಆತನಿಗೆ ಅರ್ಪಿಸಿ, ನಾಯಕನ ಪಾತ್ರವನ್ನು ರಾಜೇಶ್‌ ಖನ್ನಾಗೆ ಕೊಟ್ಟರು ಹೃಷೀ ದಾ. ಆ ಚಿತ್ರದ ಹೆಸರು, once again ‘ಆನಂದ್‌’.

‘ಜಾನೆ ಕೈಸೆ ಸಪನೋಮೋ

ಖೋ ಗಯಿ ಅಖಿಯಾಂ..’

ಅಂತ ಲತಾ ಮಂಗೇಶ್ಕರ್‌ ಹಾಡಿದ ಅತಿ ಮಧುರ ಗೀತೆಯಾಂದಿದೆ. ಅದು ಶೈಲೇಂದ್ರ ಬರೆದದ್ದು. ಅದಕ್ಕೆ ಆಗ ನಾಯಕ ನಟಿಯಾಗಿ ನರ್ತಿಸಿದವಳು, ಮುಂದೆ ಕ್ಯಾಬರೆ ನರ್ತಕಿಯೂ, ವ್ಯಾಂಪೂ ಆಗಿ ಮೆರೆದ ನಟಿ ಬಿಂದೂ. ಸಿನೆಮಾದ ಹೆಸರು ‘ಅನುಪಮಾ’. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದವರು ಹೃಷೀ ದಾ. ಮುಂದೆ ಅವರು ಅಮಿತಾಬ್‌-ಜಯಾ-ಅಸ್ರಾನಿ ಮುಂತಾದ ಅಭಿಜಾತ ಕಲಾವಿದರನ್ನು ಹಾಕಿ ಕೊಂಡು ‘ಅಭಿಮಾನ್‌’ ಎಂಬ ಸಂಗೀತ ತುಂಬಿದ ದೋಣಿಯಂಥ ಚಿತ್ರ ಮಾಡಿದರಲ್ಲ? ಅದರಲ್ಲಿ ಬಿಂದೂಗೆ ಅದ್ಭುತ ಪಾತ್ರವಿಟ್ಟಿದ್ದರು; ಅವತ್ತಿನ ಅವಳ ಇಮೇಜಿಗೆ ತಕ್ಕಂತಹುದು.

ಗೆಳೆತನ, ನಿಯತ್ತು, ದಾಂಪತ್ಯ, ಅದರಲ್ಲಿ ಕೊರತೆ -ಇಂಥ ಮನೆಮನೆಯ ಕತೆಗಳೇ ಹೃಷೀ ಕೇಶ್‌ ಮುಖರ್ಜಿಯವರನ್ನು ಕಾಡಿದ್ದು. ಇವುಗಳನ್ನು ಬಿಟ್ಟು ಆಚೀಚೆಗೆ ಹೋದಾಗಲೆಲ್ಲ ಹೃಷೀ ದಾ ಸೋತರು. ಬಹುಶಃ ‘ಗುಡ್ಡಿ’ಯ ಗೆಲುವಿನ ನಂತರ ಈ ರಹಸ್ಯ ಅವರಿಗೆ ಅರ್ಥವಾಗಿತ್ತು. ಆಮೇಲೆ ಅವರು ಯಾವ ಸಿನೆಮಾ ಮಾಡಿದರೂ ಅದಕ್ಕೆ ಎಷ್ಟು ಸರಿಹೋಗುವಂಥ ನಟರನ್ನು ಹುಡುಕಿ ಹಾಕುತ್ತಿದ್ದರೆಂದರೆ, ‘ಈ ಸಿನೆಮಾ ಅವರದೇ ಕಥೆಯಂತೆ’ ಅಂತ ಜನ ಮಾತಾಡಿಕೊಳ್ಳುತ್ತಿದ್ದರು.

‘ಗುಡ್ಡಿ’ ಬಂದಾಗ ಜಯಾ ಬಗ್ಗೆ, ‘ಅಭಿಮಾನ್‌ ’ ಬಂದಾಗ ಅಮಿತಾಬ್‌-ಜಯಾ ಬಗ್ಗೆ. ಹೀಗೆ ಮಧ್ಯಮವರ್ಗದ ಮನೆಯ ಕತೆಗಳನ್ನು ನಮ್ಮವೇ ಕಥೆಗಳೆಂಬಂತೆ ಹೇಳಿದವರು ಹೃಷಿಕೇಶ್‌ ಮುಖರ್ಜಿ. ಅವರು ಕೈಹಿಡಿದ ನಟ-ನಟಿಯರು ಖ್ಯಾತರಾದರು. ‘ಬೋಲೇ ರೇ ಪಪೀ ಹರಾ.. ’ಹಾಡಿಯೂ ಖ್ಯಾತಿಗೆ ಬಾರದ ನಮ್ಮ ವಾಣಿ ಜಯರಾಂ ಒಬ್ಬಳೇ ನಟದೃಷ್ಟೆ.

ಇದೆಲ್ಲದರ ಮಧ್ಯೆ ಅಪರೂಪಕ್ಕೊಂದು ಸಿನೆಮಾ ತಾವೇ ಕುಳಿತು ಎಡಿಟ್‌ ಮಾಡುತ್ತಿದ್ದರು. ಹಾಗೆ ಅವರು ಎಡಿಟ್‌ ಮಾಡಿದ ಅತ್ಯುದ್ಭುತ ಬ್ಲ್ಯಾಕ್‌ ಅಂಡ್‌ ವೈಟ್‌ ಚಿತ್ರ‘ದಸ್ತಕ್‌’. ಬಹುಶಃ ಅದಕ್ಕಿಂತ ಮನಮುಟ್ಟುವ, ಎಮೋಷನಲ್‌ ಆದ ಇನ್ನೊಂದು ಚಿತ್ರವನ್ನು ನಾನು ನೋಡಿಲ್ಲ. ಸಂಜೀವ್‌ಕುಮಾರ್‌ ಅದರ ನಾಯಕ. ರೆಹನಾ ಸುಲ್ತಾನಾಗೆ ‘ಊರ್ವಶಿ’ ಅವಾರ್ಡ್‌ ಬಂದ ಚಿತ್ರವದು.

ರಾಜೇಂದ್ರ ಸಿಂಗ್‌ ಬೇಡಿ ಎಂಬ ಆತ್ಮೀಯ ಲೇಖಕರು ನಿರ್ಮಿಸಿದ ಆ ಚಿತ್ರವನ್ನು ಹೃಷಿ ದಾ ಎಡಿಟ್‌ ಮಾಡಿದ್ದರು. ಅವರಿಗೆ ಅತ್ಯುತ್ತಮ ಸಂಕಲನಕಾರನೆಂದು ಪ್ರಶಸ್ತಿ ನೀಡಲಾಗಿತ್ತು. ಹೃಷೀ ದಾಗೆ ಒಬ್ಬರೇ ಬೆಳೆಯುವುದು ಗೊತ್ತಿರಲಿಲ್ಲ. ಜೊತೆಗೆ ರಾಜೇಂದ್ರ ಸಿಂಗ್‌ ಬೇಡಿ, ದ್ವಾರಕಾ ನಾಥ್‌ ಮುಖರ್ಜಿ, ಗುಲ್ಜಾರ್‌, ರಾಹಿ ಮಾಸೂಮ್‌ ರೇಜಾ, ಸಚಿನ್‌ ಭೌಮಿಕ್‌ ಮುಂತಾದವರದೊಂದು ಬ್ರೆೃನ್‌ ಟ್ರಸ್ಟ್‌ ಕಟ್ಟಿಕೊಂಡೇ ಬೆಳೆದರು. ಏನೇ ಬೆಳೆದರೂ, ಸಿನೆಮಾ ಅಂತ ಬೇಕಾಗಿರುವುದು ಭಾರತದ ಮಧ್ಯಮ ವರ್ಗಕ್ಕೆ ಎಂಬ ತಮ್ಮ ನಂಬಿಕೆಯನ್ನು ಹೃಷೀ ದಾ ಬಿಟ್ಟುಕೊಡಲಿಲ್ಲ.

ಮುಂದೆ ಕಾಲ ಬದಲಾಯಿತು. ಹಾಸ್ಯ ಚೀಪ್‌ ಆಯಿತು. ಮಧ್ಯಮ ವರ್ಗದ ಸಂಬಂಧಗಳೇ ಸ್ವರೂಪ ಬದಲಿಸಿಕೊಂಡವು. ಹಿಂದಿ ಸಿನೆಮಾನ ಕ್ರೆೃಮು-ಸೆಕ್ಸ್‌ ತಿಂದು ಹಾಕಿದವು. ಅಮಿತಾಬ್‌ನಂಥ ನಟರು ಗಾಬರಿಯಾಗುವಷ್ಟು ಎತ್ತರಕ್ಕೆ ಬೆಳೆದುಬಿಟ್ಟರು. ಅನಿಲ್‌ ಕಪೂರ್‌ನನ್ನು ಹಾಕಿಕೊಂಡು ‘ಝೂಟ್‌ ಬೋಲೆ ಕವ್ವಾ ಕಾಟೆ’ ಸಿನಿಮಾ ಮಾಡಿ, ಅದು ಸೋಲುತ್ತಿದ್ದಂತೆಯೇ ಹೃಷೀ ದಾ ನಿವೃತ್ತರಾಗಿ ಬಿಟ್ಟರು. ಆಮೇಲೆ ಫಾಲ್ಕೆ ಬಂತು, ಪದ್ಮ ವಿಭೂಷಣ ಪ್ರಶಸ್ತಿ ಬಂತು. ಮೊಮ್ಮಕ್ಕಳಾದ ಟಿಪುರ್‌ ಮತ್ತು ಟುಪುರ್‌ ಮಾಡೆಲುಗಳಾದರು. ಮಗ ತೀರಿ ಹೋದ. ನೋಡನೋಡುತ್ತ ಹೃಷೀಕೇಶ್‌ ಮುಖರ್ಜಿಗೆ ಎಂಬತ್ಮೂರು ವರ್ಷ ತುಂಬಿದವು.

ಕಹೀಂ ದೂರ್‌ ಜಬ್‌ ದಿನ್‌ ಢಲ್‌ ಜಾಯೇ

ಸಾಂಝ್‌ ಕೀ ದುಲ್ಹನ್‌ ಬದನ್‌ ಚುರಾಯೇ..

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more