ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರ್ವೇಜ್‌ ಮುಷರ್ರಫ್‌ ಎಂಬ ಮಹಾಸುಳ್ಳನ ಅತ್ಮ ಚರಿತ್ರೆಯು

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ನಿತ್ಯ ಪತ್ರಿಕೆಗಳಿಂದ ಹಿಡಿದು ಟೀವಿ ಇಂಟರ್‌ನೆಟ್‌ ತನಕ ಸಮಸ್ತ ಜಗತ್ತಿನಲ್ಲೂ ಸುದ್ದಿಯಾಗಿರುವ ಪಾಕಿಸ್ತಾನದ ಅಧ್ಯಕ್ಷ ಪರವೇಜ್‌ ಮುಷರ್ರಫ್‌ನ ಆತ್ಮಚರಿತ್ರೆಯಂತಹ ಪುಸ್ತಕ In the line of Fire ತರಿಸಿ ಒಂದು ಗುಕ್ಕಿನಲ್ಲಿ ಓದಿ ಮುಗಿಸಿದೆ. ಒಂಬೈನೂರ ಐವತ್ತು ರೂಪಾಯಿಗಳಿಗೆ ಭಾರತದಲ್ಲಿ ಮಾರಾಟವಾಗುತ್ತಿರುವ ಮುನ್ನೂರ ಐವತ್ತು ಪುಟಗಳ ಪುಸ್ತಕ. ಸುಮ್ಮನೆ ಎದುರಿಗಿಟ್ಟುಕೊಂಡು ನೋಡಿದರೂ, ಕೈಯಲ್ಲಿ ಮುಟ್ಟಿ ನೋಡಿದರೂ-ಪುಸ್ತಕ ಪಾಕಿಸ್ತಾನವೇ ಪಾಕಿಸ್ತಾನ! ಅದು ಸಹಜವೇ.

ಒಬ್ಬ ಸೈನಿಕ ನೆನಪುಗಳನ್ನು ಬರೆದಾಗ ಆ ಪುಸ್ತಕ ಹೇಗಿರಬಹುದೆಂಬುದನ್ನು ನಾನು ಊಹಿಸಬಲ್ಲೆ. ಒಂದು ದೇಶಕ್ಕೆ ಮರಾಮೋಸದಿಂದ ಅಧ್ಯಕ್ಷನಾದವನು, ತನಗಿರುವ ಸೈನಿಕ ಬಲದಿಂದ-ಚುನಾಯಿತ ಪ್ರಧಾನಿಯನ್ನು ದೇಶಬಿಟ್ಟು ಓಡಿಸಿ ಅಧ್ಯಕ್ಷನಾದವನು ಬರೆದ ಪುಸ್ತಕ ಹೇಗಿರಬಹುದೆಂದೂ ನಾನು ಊಹಿಸಬಲ್ಲೆ. ಆದರೆ ಪಾಕ್‌ನ ನೇತಾರ ಜನರಲ್‌ ಪರ್ವೇಜ್‌ ಮುಷರ್ರಫ್‌ ನನ್ನ ನಿಮ್ಮಂತಹ ಎಲ್ಲ ಓದುಗರ ನಿರೀಕ್ಷೆಯನ್ನೂ ಮೀರಿ ಪಡಸುಳ್ಳನಂತೆ ಒಂದು ಪುಸ್ತಕ ಬರೆದುಬಿಡಬಲ್ಲ ಎಂದು ಖಂಡಿತ ನಿರೀಕ್ಷಿಸಿರಲಿಕ್ಕಿಲ್ಲ.

Pakistan President Parvez Musharrafಪಾಕಿಸ್ತಾನದ ಮಿಲಿಟರಿ ಆಡಳಿತಗಾರರೆಲ್ಲರಿಗಿಂತ ದೊಡ್ಡ ಮಟ್ಟದ ಸುಳ್ಳ ಮುಷರ್ರಫ್‌. ಈ ಪುಸ್ತಕವನ್ನು ಆತ ಸುಳ್ಳು ಹೇಳಲೆಂದೇ ಬರೆದಿದ್ದಾನೆ. ತನ್ನ ವ್ಯಕ್ತಿಗತ ಬದುಕಿನ ವಿವರಗಳು ಮತ್ತು ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಬಿದ್ದು ಹೋಗಿ, ತನ್ನ ಹಯಾಮಿನಲ್ಲಿ ಮಿಲಿಟರಿ ಆಡಳಿತ ಉದ್ಭವವಾದ ಹಂತದಲ್ಲಿ ನಡೆದ ಕೆಲವು ಘಟನೆಗಳ ಹೊರತಾಗಿ, ಪುಸ್ತಕದುದ್ದಕ್ಕೂ ಮುಷರ್ರಫ್‌ ಬರೆದಿರುವುದು ಪಕ್ಕಾ ಸುಳ್ಳುಗಳನ್ನೇ.

ಆತ ಕಾರ್ಗಿಲ್‌ ಯುದ್ಧದ ಬಗ್ಗೆ ಜಗತ್ತಿಗೆ ಸುಳ್ಳು ಹೇಳಲೆಂದೇ ಕೂಡುತ್ತಾನೆ. ವೈಯಕ್ತಿಕವಾಗಿ ಕಾರ್ಗಿಲ್‌ ಯುದ್ಧವನ್ನು ಕಣ್ಣಾರೆ ಕಂಡು, ವರದಿ ಮಾಡಿದವನು ನಾನು. ‘ ಭಾರತೀಯರನ್ನು ನಾವು ಹೇಗೆ ಹೊಡೆದು ಕೆಡವಿದೆವೆಂದರೆ, ಕಡೆಗೆ ಅವರಲ್ಲಿ ಸತ್ತ ಸೈನಿಕರನ್ನು ಮುಚ್ಚಿಡಲು ಶವದ ಪೆಟ್ಟಿಗೆಗಳಿರಲಿಲ್ಲ. ರಾಶಿರಾಶಿ ಹೆಣಗಳನ್ನು ವಿಲೇವಾರಿ ಮಾಡಲೆಂದು ರಾತ್ರೋರಾತ್ರಿ ಕಾಫಿನ್‌ ಬಾಕ್ಸ್‌ಗಳನ್ನು ತರಿಸಿದರು. ಆ ನಂತರ ಶವದ ಪೆಟ್ಟಿಗೆಗಳ ಖರೀದಿಯದೇ ಒಂದು ಹಗರಣ ನಡೆಯಿತು. ಅಧಿಕೃತವಾಗಿ ತಮ್ಮ ಕಡೆಯ ಆರು ನೂರು ಮಂದಿ ಸತ್ತಿದ್ದಾರೆಂದು ಭಾರತ ಹೇಳಿಕೊಂಡಿತು. ಕನಿಷ್ಠ ಪಕ್ಷ ಅದರ ಎರಡರಷ್ಟು ಜನ ಸತ್ತಿರಬೇಕು! ’ ಅಂತ ಬರೆಯುವ ಮುಷರ್ರಫ್‌ನನ್ನು ಏನೆನ್ನಬೇಕೋ ಅರ್ಥವಾಗುವುದಿಲ್ಲ.

ಕಾರ್ಗಿಲ್‌ ಯುದ್ಧದ ನಂತರ ಜಾರ್ಜ್‌ ಫರ್ನಾಂಡಿಸ್‌ ಸುತ್ತ ಶವ ಪೆಟ್ಟಿಗೆ ಖರೀದಿಯ ಹಗರಣ ಎದ್ದು ನಿಂತದ್ದು ನಿಜ. ಆದರೆ ತೀರ ರಾಶಿರಾಶಿ ಶವಗಳನ್ನು ಪಾಕಿಸ್ತಾನ ಕೆಡವಿದ್ದು ಯಾವತ್ತು? ಧೀರೋದಾತ್ತ ಯುದ್ಧ ಮಾಡಿದ್ದು ಯಾವ ಸೆಕ್ಟರ್‌ನಲ್ಲಿ? ಭಾರತದ ಸೇನೆಯನ್ನು ಯಾವ ಪಾಕಿ ಸೈನಿಕ ಮುಖಾಮುಖಿ ಎದುರಿಸಿ ನಿಂತಿದ್ದ? ಯಾವ ಸೆಕ್ಟರ್‌ನಲ್ಲಿ ಪಾಕಿ ಸೈನ್ಯ ಕಡೆ ತನಕ ಅಚಲವಾಗಿ ನಿಂತು ಕಾದಾಡಿತು? ಸುಳ್ಳು ಬರೆಯಲಿಕ್ಕೊಂದು ಮಿತಿ ಬೇಡವೆ?

‘ಭಾರತೀಯ ಸೈನ್ಯದೊಂದಿಗೆ ನಮ್ಮ ದೇಶದ ಕಾಶ್ಮೀರಿ ಸ್ವಾತಂತ್ರ್ಯಹೋರಾಟಗಾರರು ಪದೇಪದೆ ಚಕಮಕಿಯಲ್ಲಿ ತೊಡಗಿರುತ್ತಿದ್ದರು. ಈ ಪೈಕಿ ಕೆಲವರು ಭಾರತೀಯರು ಹಿಡಿದಿಟ್ಟುಕೊಂಡಿರುವ ಕಾಶ್ಮೀರದಿಂದ ನಮ್ಮಲ್ಲಿಗೆ ಬಂದವರು. ಮತ್ತೆ ಕೆಲವರು ನಮ್ಮ ಆಜಾದ್‌ ಕಾಶ್ಮೀರದವರು. ಉಳಿದಂತೆ ಕೆಲವು ವಿದೇಶೀಯರೂ ಈ ಸ್ವಾತಂತ್ರ್ಯ ಹೋರಾಟಗಾರರ ಗುಂಪಿನಲ್ಲಿದ್ದವರು.’ ಅಂತ ಬರೆಯುತ್ತಾನೆ ಮುಷರ್ರಫ್‌.

ಗಮನಿಸಬೇಕಾದ ಸಂಗಿತಿಯೇನೆಂದರೆ, ಇವರೆಲ್ಲರೂ ರಷಿಯದ ವಿರುದ್ಧ ಅಫಘನಿಸ್ತಾನದಲ್ಲಿ ‘ಜೆಹಾದ್‌’ ಮಾಡಿದ ಧರ್ಮಯೋಧರು ಅಂತ ತಾನೇ ಅನೇಕ ಕಡೆ ಒಪ್ಪಿ ಕೊಳ್ಳುತ್ತಾನೆ. ಇದೆಲ್ಲ ಭಾಷೆ(ಅವರನ್ನು ಸ್ವಾತಂತ್ರ್ಯ ಯೋಧರೆಂದು ಕರೆದಂತಹುದು) 1999ರ ಕಾರ್ಗಿಲ್‌ ಯುದ್ಧದ ಕಾಲದ ಮಾತು. ಆದರೆ ಯಾವಾಗ ಮುಷರ್ರಫ್‌ ಸೆಪ್ಟೆಂಬರ್‌ 11ರ(ಅಮೆರಿಕ ಟವರ್‌ಗಳ ಮೇಲೆ ಒಸಾಮಾ ದಾಳಿ)ನಂತರದ ವಿದ್ಯಮಾನಗಳನ್ನು ಬರೆಯಲು ಕೂಡುತ್ತಾನೋ, ಈ ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ಆತನ ಭಾಷೆಯಲ್ಲಿ ‘ಟೆರರಿಸ್ಟ್‌’ಗಳಾಗಿ ಬಿಡುತ್ತಾರೆ. ಆಮೇಲಿನದೆಲ್ಲ ಅಮೆರಿಕಾ ಪರಾಯಣವೇ! ನೋಡಿ, ನಾವು ಹ್ಯಾಗೆ ನಮ್ಮ ಕರಾಚಿಯಲ್ಲಿದ್ದ, ನೌಷೇರಾದಲ್ಲಿದ್ದ, ಇಸ್ಲಾಮಾಬಾದ್‌ನಲ್ಲಿದ್ದ ದೇಶ-ವಿದೇಶದ ಮುಸ್ಲಿಂ ಉಗ್ರಗಾಮಿಗಳನ್ನು ಹಿಡಿದು ಹಿಡಿದು ಅಮೆರಿಕಾದ ಧಣಿಗಳಿಗೆ ಒಪ್ಪಿಸಿದೆವೋ -ಅಂತ ಅಧ್ಯಾಯದ ಮೇಲೆ ಅಧ್ಯಾಯ ಬರೆಯುತ್ತ ಹೋಗುತ್ತಾನೆ.

ಆದರೆ ಕಾರ್ಗಿಲ್‌ನ ವಿಷಯಕ್ಕೆ ಬಂದಾಗ, ‘‘ನಮ್ಮ ಕಾಶ್ಮೀರಿ ಸ್ವಾತಂತ್ರ್ಯ ಯೋಧರು ಆಗಾಗ ಭಾರತದ ಸೇನೆಯಾಂದಿಗೆ ಗಡಿ ಪ್ರದೇಶಗಳಲ್ಲಿ, ಹಿಮಕಂದರಗಳಲ್ಲಿ ಗುಂಡಿನ ಚಕಮಕಿಗೆ ತೊಡಗುತ್ತಿದ್ದರು. ಆ ಕಡೆ ನೋಡಿದರೆ ಭಾರತೀಯ ಸೈನ್ಯಾಧಿಕಾರಿಗಳು ‘ಇವತ್ತು ಪಾಕಿಸ್ತಾನಿ ಸೈನ್ಯದ ಒಂದು ತುಕಡಿಯಾಂದಿಗೆ ಗುಂಡಿನ ಚಕಮಕಿ ನಡೆಯಿತು. ಇಷ್ಟು ಜನ ಗಾಯಗೊಂಡರು, ಸತ್ತರು’ ಅಂತ ವರದಿ ಮಾಡುತ್ತಿದ್ದರು. ನಾನು ಸೇನಾ ಮುಖ್ಯಸ್ಥನಾಗಿ ನಮ್ಮ ಸೈನಿಕ ತುಕಡಿಗಳಲ್ಲಿ ವಿಚಾರಿಸಿದಾಗ ಅಂಥ ಯಾವ ಚಕಮಕಿಯೂ ನಡೆದಿಲ್ಲ ಅಂತ ವರದಿ ಬರುತ್ತಿತ್ತು. ಇದೇನಿದು ಇಂಥ ಸೋಜಿಗ ಎಂದು ವಿಚಾರಿಸಲು ಹೋದಾಗ, ‘ಇದು ನಮ್ಮ ಕಾಶ್ಮೀರಿ ಸ್ವಾತಂತ್ರ್ಯಯೋಧರ ಕೆಲಸ’ ಅಂತ ಗೊತ್ತಾಯಿತು’’ಎಂಬ ಐತಿಹಾಸಿಕ ಸುಳ್ಳು ಬರೆಯುತ್ತಾನೆ ಮುಷರ್ರಫ್‌.

ಆತ ಅಲ್ಲಿಗೇ ನಿಲ್ಲುವುದಿಲ್ಲ. ಸ್ವಾತಂತ್ರ್ಯ ಹೋರಾಟಗಾರರ ಚಟುವಟಿಕೆಗಳನ್ನು ಗಮನಿಸಲೆಂದು ನಾವು ಹಿಮಕಂದರಗಳಲ್ಲಿ ನೋಡಿದಾಗ, ಆಚೆ ಭಾರತದ ಸೈನ್ಯ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿರುವುದು ನಮಗೆ ಗೊತ್ತಾಯಿತು. ಈ ಚಳಿಗಾಲ ಮುಗಿಯುತ್ತಿದ್ದಂತೆಯೇ ಭಾರತದ ಸೈನ್ಯ ಪಾಕಿಸ್ತಾನದ ಮೇಲೆ ದಂಡೆತ್ತಿ ಬಂದು ನಮ್ಮನ್ನು ಸರ್ವನಾಶ ಮಾಡಿ ಬಿಡಲಿದೆ ಎಂದು ಖಾತರಿಯಾಯಿತು. ಆದ್ದರಿಂದಲೇ ನಾವು ಬೇರೆ ದಾರಿ ಕಾಣದೆ ಕಾರ್ಗಿಲ್‌ ಸೆಕ್ಟರ್‌ನಲ್ಲಿ ನಮ್ಮ ಲೈಟ್‌ ಇನ್‌ಫೆಂಟ್ರಿ ಸೈನಿಕರನ್ನು ಹಿಮದ ಬೆಟ್ಟ ಹತ್ತಲು ಬಿಟ್ಟು ಏಕಾಏಕಿ ನಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸತೊಡಗಿದೆವು ಎಂಬುದಾಗಿ ಬರೆಯುತ್ತಾನೆ!

ಇಂಥ ಸುಳ್ಳುಗಳು ಭಾರತಕ್ಕೆ ಸಂಬಂಧಿಸಿದಂತೆ ಮುಷರ್ರಫ್‌ನ ಪುಸ್ತಕದುದ್ದಕ್ಕೂ ಇವೆ. ನಮ್ಮ ಪತ್ರಿಕೆಗಳಲ್ಲಿ ಅದರಲ್ಲೂ ಇಂಗ್ಲಿಷ್‌ ಪತ್ರಿಕೆಗಳಲ್ಲಿ ಪ್ರಸ್ತಾಪವಾಗುತ್ತಿರುವುದು, ಅಮೆರಿಕಕ್ಕೆ ಸಂಬಂಧಿಸಿದಂತೆ ಮುಷರ್ರಫ್‌ ಹೇಳಿರುವ ಸುಳ್ಳುಗಳು ಮಾತ್ರ! ಆಗುತ್ತಿರುವ ಚರ್ಚೆ ಕೂಡ 9/11 ನಂತರ ಪಾಕಿಸ್ತಾನದ ಪಾತ್ರ ಏನಿತ್ತು ಎಂಬುದರ ಬಗ್ಗೆಯೇ. ಪಾಕಿಸ್ತಾನ ಒಂದು rogue country ಹಾಗೂ ಪಾಕಿ ಸೈನ್ಯ ಒಂದು rogue army ಅಂತ ಅಮೆರಿಕನ್ನರೇ ನೂರು ಬಾರಿ ಅಂದಿದ್ದಾರೆ. ‘ನಾವು ಹೀಗೆಲ್ಲ ಅನ್ನಿಸಿಕೊಂಡಿದ್ದೇವೆ’ ಅಂತ ಸ್ವತಃ ಮುಷರ್ರಫ್‌ ತನ್ನ ಚರಿತ್ರೆಯಲ್ಲಿ ಬರೆದುಕೊಂಡಿದ್ದಾನೆ. ಆದರೆ, ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಭಾರತೀಯರ ನೆತ್ತರು ಹರಿಸಿದ ಪಾಕಿಸ್ತಾನವನ್ನು ಯಾವತ್ತಿಗೂ ಅಮೆರಿಕ-ಇಂಗ್ಲೆಂಡ್‌ ದೇಶದ ಪ್ರಭುಗಳು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿರಲಿಲ್ಲ. ಯಾವಾಗ 9/11 ಅನಾಹುತ ನಡೆಯಿತೋ, ಸ್ವಾತಂತ್ರ್ಯ ಹೋರಾಟಗಾರರು -ಜಿಹಾದಿಗಳು ಇದ್ದಕ್ಕಿದ್ದಂತೆ ಟೆರರಿಸ್ಟ್‌ಗಳಾಗಿ ಬಿಟ್ಟರು.

ಪಾಕಿಸ್ತಾನವೆಂಬ ರಾಷ್ಟ್ರ, ಇದೇ ಮುಷರ್ರಫ್‌ ನೇತೃತ್ವದಲ್ಲಿ ತಾನು ಕೂಡ ‘ಟೆರರಿಸ್ಟ್‌ಗಳ ವಿರುದ್ಧ ಆರಂಭವಾದ ಯುದ್ಧದಲ್ಲಿ ಪಾತ್ರಧಾರಿ’ ಎಂದು ಘೋಷಿಸಿ ಹೊಸ ಬಣ್ಣ ಬಳಿದುಕೊಂಡಿತು. ಅಮೆರಿಕದ ವಿರುದ್ಧ ಸೆಟೆದ ಒಂದು ವರ್ಗದ ಟೆರರಿಸ್ಟ್‌ಗಳನ್ನು ಹಿಡುದು ಅಮೆರಿಕಾಕ್ಕೆ ಕೊಡುವ ನಾಟಕವನ್ನೂ ಆಡಿತು. ಇಷ್ಟಕ್ಕೂ ಮುಷರ್ರಫ್‌ ಅಮೆರಿಕಕ್ಕೆ ಹಿಡಿದುಕೊಟ್ಟ ಟೆರರಿಸ್ಟ್‌ಗಳು ಯಾರು ಅಂತ ನೋಡಲು ಹೋದರೆ, ಅವರಲ್ಲಿ ಹೆಚ್ಚಿನವರು ಸೂಡಾನಿಗಳು, ಚೆಚನ್ಯಾದವರು, ಒಂದಷ್ಟು ಅರಬರು ಹಾಗೂ ಆಫಘಾನರು. ತಮ್ಮದೇ ನೆಲದ ಮುಲ್ಲಾ ಮೌಲ್ವಿಗಳು ಭಾರತದಲ್ಲಿ ಮಾಡಬಾರದ ಪಾತಕ ಎಸಗಿ ವಾಪಾಸು ಪಾಕಿಸ್ತಾನ ತಲುಪಿಕೊಂಡಿದ್ದಾರೆ. ಬಾಂಬೆಯಂತಹ ಊರುಗಳಲ್ಲಿ ಬಹುದೊಡ್ಡ ನರಮೇಧ ಎಸಗಿಹೋದ ಪಾಕಿಸ್ತಾನ್‌ ಸೇರಿಕೊಂಡವರಿದ್ದಾರೆ. ಅಂಥ ಯಾರ ಬಗ್ಗೆಯೂ ಪರವೇಜ್‌ ಮುಷರ್ರಫ್‌ ತನ್ನ ಪುಸ್ತಕದಲ್ಲಿ ಪ್ರಸ್ತಾಪ ಕೂಡ ಮಾಡುವುದಿಲ್ಲ.

ತಾನು ಕೊಲಂಬೋದಿಂದ ವಾಪಸು ಕರಾಚಿಗೆ ಪ್ರಯಾಣಿಸುತ್ತಿದ್ದ ವಿಮಾನವನ್ನು ಅಂದಿನ ಪ್ರಧಾನಿ ನವಾಜ್‌ ಷರೀಫ್‌ ಹೇಗೆ ಕರಾಚಿಯಲ್ಲಿ ಇಳಿಯಲು ಬಿಡದೆ, ಭಾರತಕ್ಕೆ ಹೋಗಿ ಇಳಿಯುವಂತೆ ಪಿತೂರಿ ಮಾಡಿದ್ದ ಎಂಬುದನ್ನು ಮಾತ್ರ ಬಲೇ ರಸವತ್ತಾಗಿ, ರೋಮಾಂಚನಕಾರಿ ವಿವರಿಸಲು ಕೂಡುತ್ತಾನೆ ಮುಷರ್ರಫ್‌. ‘ನಾನಿದ್ದ ವಿಮಾನ ಕರಾಚಿಯಲ್ಲಿ ಇಳಿಯಕೂಡದು ಅಂತ ಆಜ್ಞೆಯಾಗಿತ್ತು. ಆಗ ನಮ್ಮ ಪೈಲಟ್‌ಗಿದ್ದ ಒಂದೇ ಮಾರ್ಗವೆಂದರೆ, ಇಂಧನ ಮುಗಿಯುವುದರೊಳಗಾಗಿ ಪಕ್ಕದ, ಅತಿ ಹತ್ತಿರದ ವಿಮಾನ ನಿಲ್ದಾಣದಲ್ಲಿ ಇಳಿಯುವುದು. ಅತಿ ಹತ್ತಿರದಲ್ಲಿದ್ದ ವಿಮಾನ ನಿಲ್ದಾಣವೆಂದರೆ, ಭಾರತದ ಆಹ್ಮದಾಬಾದ್‌ ನಿಲ್ದಾಣವೊಂದೇ! ನನ್ನ ಹೆಣ ಬಿದ್ದ ನಂತರವೇ ಈ ವಿಮಾನ ಭಾರತದೊಳಕ್ಕೆ ಹೋಗಲು ಸಾಧ್ಯ’ ಅಂತ ಘೋಷಿಸಿದೆ. ಎಲ್ಲದಾರೂ ಉಂಟೆ? ಶತ್ರುದೇಶದೊಳಕ್ಕೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಹೋಗಿ ಇಳಿ(ಇಳಿದರೆ ಸುಮ್ಮನೆ ಬಿಡ್ತಾರಾ?)ಯುವುದುಂಟೆ ಅಂತ ಬಾಲಿಶವಾಗಿ ಬರೆದುಕೊಳ್ಳುತ್ತಾನೆ ಮುಷರ್ರಫ್‌.

ಒಂದು ವಿಮಾನ, ಅದು ಯಾವುದೇ ದೇಶದ್ದಾಗಿರಲಿ : ಪ್ರಯಾಣಿಕರನ್ನು ಹೊತ್ತ ಕಮರ್ಷಿಯಲ್‌ ಫ್ಲೈಟ್‌ ಅಕಸ್ಮಾತ್‌ ಅನಿವಾರ್ಯ ಕಾರಣಗಳಿಂದಾಗಿ ಹಾದಿ ಬಿಟ್ಟು ನಮ್ಮ ನೆಲದಲ್ಲಿಳಿದರೆ, ಅದರಲ್ಲಿ ಪಕ್ಕದ ದೇಶದ ಸೇನಾ ಮುಖ್ಯಸ್ಥನಿದ್ದರೂ ಗೌರವದಿಂದ ನಡೆಸಿಕೊಳ್ಳುವುದು ಭಾರತ ಸಂಸ್ಕೃತಿಗೆ ಗೊತ್ತು. ನೂರಾರು ಪ್ರಯಾಣಿಕರಿದ್ದ ಭಾರತದ ವಿಮಾನವನ್ನು ಒಯ್ದು ಅಫಘನಿಸ್ತಾನದ ಕಂದಹಾರ್‌ನಲ್ಲಿ ಇಳಿಸಿಕೊಂಡು, ಅನೈತಿಕ ವ್ಯಾಪಾರ ಮಾಡಿದವರು ತನ್ನದೇ ದೇಶದ ‘ಸ್ವಾತಂತ್ರ್ಯ ಹೋರಾಟಗಾರರು’ ಎಂಬುದೂ ಆತನಿಗೆ ಗೊತ್ತು. ಆದರೂ ಸುಳ್ಳು ಬರೆಯುತ್ತಾನೆ. ಪೌರುಷ ಹೇಳಿಕೊಳ್ಳುತ್ತಾನೆ.

ಎಲ್ಲಕ್ಕಿಂತ ತಮಾಷೆ ಅನ್ನಿಸಿತ್ತು, ಮುಷರ್ರಫ್‌ನ ಮೇಲೆ ಎರಡನೆಯ ಸಲ ಹತ್ಯಾ ಪ್ರಯತ್ನ ನಡೆದಾಗ ಸಿಕ್ಕ ಸಿಮ್‌ ಕಾರ್ಡನ್ನು, ಮುಷರ್ರಫ್‌ನ ಬಲಗೈ ಬಂಟನೊಬ್ಬ ಡಿ-ಕೋಡ್‌ ಮಾಡಿದುದರ ಬಗ್ಗೆ ಆತ ಬರೆದಿದ್ದನ್ನು ಓದಿದಾಗ. ಎರಡೂ ಹತ್ಯಾ ಪ್ರಯತ್ನಗಳ ಬಗ್ಗೆ ತನಿಖೆ ನಡೆಸಲು ರಾವಳಪಿಂಡಿಯ ಕೋರ್‌ ಕಮ್ಯಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಅಷಫಾಕ್‌ ಪರವೇಜ್‌ ಕಯಾನಿ ಎಂಬುವವನ್ನು ಮುಷರ್ರಫ್‌ ನೇಮಿಸುತ್ತಾನೆ.

‘ತನಗೆ ಘಟನೆ ನಡೆದ ಸ್ಥಳದಲ್ಲಿ ಸಿಕ್ಕ ಸಿಮ್‌ ಕಾರ್ಡೋಂದನ್ನು ಹಿಡಿದುಕೊಂಡು ತನಿಖೆ ನಡೆಸುತ್ತ ಹೋದಾಗ ನಮ್ಮ ಕಯಾನಿಗೆ ವಿಪರೀತ ಗೊಂದಲವುಂಟಾಯಿತು. ಟೆರರಿಸ್ಟ್‌ಗಳು ಒಂದಾದ ಮೇಲೊಂದರಂತೆ ಸಿಮ್‌ ಕಾರ್ಡ್‌ಳನ್ನು ಬದಲಾಯಿಸುತ್ತಿದ್ದರು. ಪರಸ್ಪರ ಎಕ್ಸ್‌ಛೇಂಜ್‌ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ತನಿಖೆ ಮಾಡುವವರಿಗೆ ತುಂಬ ಗೊಂದಲವಾಗುತ್ತಿತ್ತು. ಆಗ ಬೇಸತ್ತ ಲೆಫ್ಟಿನೆಂಟ್‌ ಜನರಲ್‌ ಕಯಾನಿ ಬಂದು ತನ್ನ ಸಮಸ್ಯೆಗಳನ್ನು ಹೇಳಿಕೊಂಡ. ಅದೃಷ್ಟ ವಶಾತ್‌, ನದೀಮ್‌ ತಾಜ್‌ನ ಮಗ ನೋಮಿ ಒಂದು ಮೊಬೈಲ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆತ ಹೇಳಿದ್ದೇನೆಂದರೆ, ಮೇಲಿಂದ ಮೇಲೆ ಸಿಮ್‌ ಕಾರ್ಡ್‌ ಬದಲಾಯಿಸಿದರೂ ಪರವಾಗಿಲ್ಲ. ಟೆರರಿಸ್ಟ್‌ ಒಬ್ಬ ಅದೇ ಹ್ಯಾಂಡ್‌ ಸೆಟ್‌ ಬಳಸುತ್ತಿದ್ದರೆ ಅವರು ಮಾಡುವ ಫೋನ್‌ ಕರೆಗಳನ್ನು ಟ್ರೇಸ್‌ ಮಾಡಬಹುದು ಅಂತ ಹೇಳಿದ! ಸಂಗತಿಯೇನೆಂದರೆ, ಪ್ರತಿ ಹ್ಯಾಂಡ್‌ಸೆಟ್‌ಗೂ ಒಂದು ನಿರ್ದಿಷ್ಟ ಕೋಡ್‌ ನಂಬರ್‌ ಇರುತ್ತದೆ. ಪ್ರತಿ ಸಿಮ್‌ ಕಾರ್ಡ್‌ಗೂ ಒಂದು ನಿರ್ದಿಷ್ಟ ನಂಬರ್‌ ಇರುತ್ತದೆ. ಫೋನು ಬಳಸಿದಾಗ, ಎರಡೂ ದಾಖಲಾಗುತ್ತದೆ. ಸಿಮ್‌ ಕಾರ್ಡ್‌ ಬದಲಿಸಿದಾಗ್ಯೂ ಹ್ಯಾಂಡ್‌ ಸೆಟ್‌ನ ಕೋಡ್‌ ಹಾಗೇ ಉಳಿದಿರುತ್ತದಾದ್ದರಿಂದ ಕರೆ ಮಾಡಿದ ಟೆರರಿಸ್ಟ್‌ನ್ನು ಪತ್ತೆ ಮಾಡಬಹುದಾಯಿತು!’ ಅಂತ ಬರೆಯುತ್ತಾನೆ ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ಹಾಗೂ ಅಧ್ಯಕ್ಷ ಮುಷರ್ರಫ್‌!

ತಮಾಷೆಯೆಂದರೆ, ಮೊಬೈಲ್‌ ತಂತ್ರಜ್ಞಾನಕ್ಕೆ ಸಂಬಂಧಿಸಿದ ಇಂಥ ಮಾಹಿತಿ ನಮ್ಮ ದೇಶದಲ್ಲಿ ಒಬ್ಬ ಎಸಿಪಿ ಮಟ್ಟದ, ಇನ್ಸ್‌ಪೆಕ್ಟರ್‌ ಮಟ್ಟದ ಅಧಿಕಾರಿಗಳಿಗೆ ಇರುತ್ತದೆ. ಅದನ್ನು ಒಂದು ದೇಶದ ಅಧ್ಯಕ್ಷ ದೊಡ್ಡ ಸುದ್ದಿಯೆಂಬಂತೆ ಬರೆದುಕೊಳ್ಳುತ್ತಾನೆಂದರೆ, ಆತನ ದೇಶದ ತನಿಖಾ ಪ್ರವೀಣರ ಬುದ್ಧಿವಂತಿಕೆ ಇನ್ನೆಷ್ಟಿರಬಹುದು?

ಇವೆಲ್ಲ ಹೀಗಿದ್ದಾಗ್ಯೂ ಮುಷರ್ರಫ್‌ನ memoir ಒಂದು ಸಿಟ್ಟಿಂಗ್‌ನಲ್ಲಿ ಓದಿ ಮುಗಿಸುವಂತಿದೆ.

ಅಷ್ಟು ಮಾಡಿದ್ದೇನೆ.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X