• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೀರಿಕೊಂಡಳು ಮೊನ್ನೆ : ತೆಲುಗಿನ ಮರೆಯಲಾಗದ ಮಲ್ಲೇಶ್ವರಿ!

By Staff
|
Ravi Belagere on Thatskannada.com ರವಿ ಬೆಳಗೆರೆ
ಕದ ಬಡಿದಂತಾಯಿತು.

‘ಅಪ್ಪಾ, ನಂಗೂ ದೇವರಿಗೂ ಜಾತಕಕ್ಕೂ ಇಷ್ಟವಾದ ಹುಡುಗ, ನಿನಗಿಷ್ಟವಾಗಲಿಲ್ಲ. Iam sorry. ನಿನ್ನ ಮಗಳು ನಾನು. ನಿನಗಿರೋ ಛಲ, ಹಟ, ಆತ್ಮವಿಶ್ವಾಸ ನನಗೂ ಇವೆ. ಹೀಗಾಗಿ, ನಿನ್ನ ಮಾತು ಮೀರಿ ಈ ಹುಡುಗನನ್ನು ಮದುವೆಯಾಗಿದ್ದೇನೆ, ನಮ್ಮಿಬ್ಬರನ್ನೂ ಆಶೀರ್ವದಿಸು’ ಅಂತ ಮೆಟ್ಟಿಲ ಮೇಲೆ ನಿಂತು ಹೇಳಿದ ಹುಡುಗಿಗೆ, ಆಗಷ್ಟೆ ಹದಿನಾರು ವರ್ಷ. ಆಕೆಯ ಹೆಸರು ಬೊಮ್ಮರಾಜು ಭಾನುಮತಿ. ಮದುವೆಯಾದ ಮೇಲೆ ಪಾಲವಾಯಿ ಭಾನುಮತಿ ರಾಮಕೃಷ್ಣ ಆದಳು. ಪೂರ್ತಿ ಎಂಭತ್ತು ವರ್ಷ ಬದುಕಿದಳು. ಅದ್ಭುತವಾಗಿ ನಟಿಸಿದಳು, ಹಾಡಿದಳು, ನಿರ್ದೇಶಿಸಿದಳು, ನಿರ್ಮಾಪಕಳಾದಳು, ಸಂಭಾಷಣೆಕಾರಳಾದಳು, ಲೇಖಕಿಯಾದಳು, ಆತ್ಮಚರಿತ್ರೆ ಬರೆದಳು: ಮೊನ್ನೆ ಇದೆಲ್ಲ ಸಾಕೆನ್ನಿಸಿತೇನೋ? ತೆಲುಗು ಚಿತ್ರರಂಗ ‘ಮರೆಯಲಾಗದ ಮಲ್ಲೇಶ್ವರಿ’ ಕೈಲಿದ್ದ ವೀಣೆ ಎತ್ತಿಟ್ಟು ನಡೆದು ಹೋದಳು.

ನಾನು ಬಾಲ್ಯದಲ್ಲಿ ಅಮ್ಮನೊಂದಿಗೆ ನೋಡಿದ ಅನೇಕ ಸಿನೆಮಾಗಳಲ್ಲಿ ಭಾನುಮತಿ ಇರುತ್ತಿದ್ದಳು. ನನ್ನ ಸೋದರ ಸಂಬಂಧಿಯಾಬ್ಬಾತ ಭಾನುಮತಿಯನ್ನು ಹತ್ತಿರದಿಂದ ನೋಡಿ ನೋಡಿ ಭಯಂಕರವಾಗಿ ಆಕೆಯನ್ನು ಪ್ರೀತಿಸಿ, ಮತಿ ವಿಕಲ್ಪಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದ. ಭಾನುಮತಿ ಹಾಡಿದ ‘ಶರಣಂ... ನೀ ದಿವ್ಯ ಶರಣಂ!’ ಹಾಡು ಇವತ್ತಿಗೂ ನನಗೆ ಇಷ್ಟ. ಅದಕ್ಕಿಂತ ಇಷ್ಟವಾಗುತ್ತಿದ್ದುದು ಆಕೆಯ ಸಹಜ ಸಾತ್ವಿಕ ಅಹಂಕಾರ.

‘ನೀವು ಎನ್‌.ಟಿ.ರಾಮಾರಾವ್‌ ಮತ್ತು ಅಕ್ಕಿನೇನಿ ನಾಗೇಶ್ವರರಾವ್‌ರಂಥವರೊಂದಿಗೆ ನಟಿಸಿದ್ಧೀರಿ. ನಿಮಗೇನನ್ನಿಸುತ್ತದೆ?’ ಅಂತ ಕೇಳಿದುದಕ್ಕೆ, ‘ಅವರನ್ನ ಕೇಳಬೇಕು ನೀವು. ಅವರ ಜೊತೆಗೆ ನಾನು ನಟಿಸಲಿಲ್ಲ. ನನ್ನೊಂದಿಗೆ ಅವರು ನಟಿಸಿದರು. ಅದಕ್ಕೋಸ್ಕರ ಕಾಯುತ್ತಿದ್ದರು!’ ಅಂತ ಉತ್ತರಿಸಿದ್ದಳು ಭಾನುಮತಿ.

‘ನನಗೆ ಅಹಂಕಾರ ಅಂತ ಅಂದುಕೊಳ್ಳುತ್ತಾರೆ. ಪರವಾಗಿಲ್ಲ. ಅದು ಆತ್ಮಾಭಿಮಾನ ಅಂತ ನನಗೆ ಗೊತ್ತು. ವಿಕಾರವಾದ ಅನವಶ್ಯಕ ವಿನಯ ನನಗೆ ರೂಢಿಯಾಗಲಿಲ್ಲ. ನನ್ನ ಮೇಲೆ ನನಗಿದ್ದ ನಂಬಿಕೆ, ಗೌರವಗಳನ್ನು ಅಹಂಕಾರ ಅಂದುಕೊಳ್ಳುವವರಿಗೆ ನಾನು ಉತ್ತರಕೊಡಬೇಕಾಗಿಲ್ಲ. ಯಾವತ್ತಿಗೂ ನಾನು ಚಿತ್ರನಟಿಯಾಗಬೇಕು ಅಂತ ಕನಸು ಕಂಡವಳಲ್ಲ. ಅದಕ್ಕೋಸ್ಕರ ದೇವರಿಗೆ ಕೈ ಮುಗಿದವಳೂ ಅಲ್ಲ. ಹೀಗಾಗಿ ಯಶಸ್ವೀ ನಟಿ ಅನ್ನಿಸಿಕೊಂಡಾಗ ತುಂಬ ಸಂತೋಷವನ್ನು ಅನುಭವಿಸಲಿಲ್ಲ. ಒಂದೇ ಒಂದು ಸಲ, ನನ್ನ ಆರಾಧ್ಯ ದೈವನಾಗಿದ್ದ ಎಂ.ಎಸ್‌. ಸುಬ್ಬಲಕ್ಷ್ಮಿ ಅವರನ್ನು ಭೇಟಿಮಾಡಿದೆ. ಅವರೊಂದಿಗೆ ತ್ಯಾಗರಾಜ ಕೀರ್ತನೆಯಾದ ಎಂದರೋ ಮಹಾನುಭಾವುಲು...ಹಾಡಿದೆ. ಅವತ್ತು ಮಾತ್ರ ನನ್ನ ಜನ್ಮ ಸಾರ್ಥಕ ಅನಿಸಿತ್ತು’ ಅಂದಿದ್ದಳು ಭಾನುಮತಿ.

ಆಕೆಯದು ಹುಸಿ ಅಹಂಕಾರವಾಗಿರಲಿಲ್ಲ. ಮೊನ್ನೆ ತನ್ನ ಎಂಬತ್ತನೆಯ ವಯಸ್ಸಿನಲ್ಲಿ ಭಾನುಮತಿ ತೀರಿಕೊಂಡಾಗ ತೆಲುಗಿನ ಹಿರಿಯ ನಟ ಅಕ್ಕಿನೇನಿ ನಾಗೇಶ್ವರರಾವು ಆಡಿದ ಮಾತುಗಳೇ ಅದಕ್ಕೆ ಸಾಕ್ಷಿ.‘ನನ್ನ ಸಿನೆಮಾ ಬದುಕಿನ ಮೈಲಿಗಲ್ಲು ಅಂದರೆ ‘ಬಾಟಸಾರಿ’ ಚಿತ್ರ. ಅದರಲ್ಲಿ ಭಾನುಮತಿಯಾಂದಿಗೆ ನಟಿಸಿದೆ. ಉಳಿದಂತೆ ‘ಲೈಲಾ ಮಜ್ನು’, ‘ಬಲಿಪೀಠಂ’,‘ವಿಪ್ರನಾರಾಯಣ’,‘ಚಕ್ರಪಾಣಿ’ ಮುಂತಾದ ಸಿನೆಮಾಗಳು ಆಕೆಯ ಸ್ವಂತ ಬ್ಯಾನರ್‌ನ ಅಡಿಯಲ್ಲಿ ಸೃಷ್ಟಿಯಾದವು. ಆಕೆಯಾಂದಿಗೆ ನಟಿಸುವ ಭಾಗ್ಯ ಸಿಕ್ಕರೆ ಅದೇ ದೊಡ್ಡದು ಅಂದುಕೊಳ್ಳುತ್ತಿದ್ದೆ. ಆಕೆ ನನಗೆ ನಟನೆ ಕಲಿಸಿದರು. ಆಕೆಯ ಸಂಸ್ಥೆಯಿಂದಾಗಿಯೇ ನಾನು ಪ್ರವರ್ಧಮಾಕ್ಕೆ ಬಂದೆ. ತುಂಬ ವಿಷಯಗಳು ಆಕೆಗೆ ಗೊತ್ತಿದ್ದವು. ಆದರೂ ಆಕೆ ನಿಗರ್ವಿ!’ ಅಂದಿದ್ದಾನೆ ನಾಗೇಶ್ವರರಾವು.

ಭಾನುಮತಿಯ ಕೀರ್ತಿ ಮತ್ತು ಛರಿಷ್ಮಾ ಯಾವ ಮಟ್ಟದ್ದಾಗಿತ್ತೆಂದರೆ, ಡಾ. ಸರ್ವೇಪಲ್ಲಿ ರಾಧಾಕೃಷ್ಣನ್‌ ಆಕೆಯನ್ನು ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಸ್ವಾಗತಿಸಿದ್ದರು. ಚುನಾವಣೆಗೆ ನಿಂತಿದ್ದಿದ್ದರೆ ಭಾನುಮತಿ ಗೆದ್ದೂ ಬಿಟ್ಟಿರುತ್ತಿದ್ದಳು. ಆದರೆ ‘ಒಂದು ದಿನ ಹೂವಿನ ಹಾರ, ಮತ್ತೊಂದು ದಿನ ಧಿಕ್ಕಾರ ಧಿಕ್ಕಾರ ಅನ್ನೋ ನಿಮ್ಮ ರಾಜಕೀಯ ಪ್ರಪಂಚ ನನ್ನಂಥ ಆತ್ಮಾಭಿಮಾನದ ಹೆಂಗಸಿಗೆ ಆಗಿಬರದು. ನಾನು ಒಲ್ಲೆ’ ಅಂದು ಬಿಟ್ಟಿದ್ದಳು ಭಾನುಮತಿ. ಇವತ್ತಿಗೆ ಹಿರಿಯ ತಾರೆಯರು ಅನ್ನಿಸಿಕೊಂಡಿರುವ ಜಮುನಾ, ಜಯಂತಿ, ಬಿ.ಸರೋಜಾದೇವಿ- ಇವರೆಲ್ಲ ಭಾಮಮತಿಯ ದೃಷ್ಟಿಯಲ್ಲಿ ಆ ಕಾಲಕ್ಕೆ ಚಿಕ್ಕ ಹುಡುಗಿಯರು! ವಯಸ್ಸಿನ ಮಾತಲ್ಲ ; ಭಾನುಮತಿ ಒಬ್ಬ ನಟಿಯಾಗಿ ಏರಿದ ಎತ್ತರ ಅಂತಹುದು.

1939ರಲ್ಲಿ ಕೇವಲ ಹದಿಮೂರು ವರ್ಷ ವಯಸ್ಸಿನ ಹುಡುಗಿ ಭಾನುಮತಿ ‘ವರ ವಿಕ್ರಯಂ’ ಎಂಬ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾದಾಗ, ಆಕೆಯ ತಂದೆ ಬೊಮ್ಮರಾಜು ವೆಂಕಟಸುಬ್ಬಯ್ಯ‘ನನ್ನ ಮಗಳನ್ನು ಯಾರೂ ಕೈಯಿಂದ ಮುಟ್ಟಕೂಡ ಮುಟ್ಟಬಾರದು’ ಅಂತ ಷರತ್ತು ವಿಧಿಸಿದ್ದರಂತೆ. ಕೆಮರಾ ಮುಂದೆ ಕುರಿ ಥರಾ ತಲೆ ಬಾಗಿಸಿಕೊಂಡು ನಿಲ್ತೀಯ ಅಂತ ಎಲ್ಲರೂ ಗೇಲಿ ಮಾಡಿದ್ದರಂತೆ. ಅಂಥ ಭಾನುಮತಿ ನಿರ್ಮಾಪಕಿಯಷ್ಟೇ ಆಗಲಿಲ್ಲ ; ಸ್ವಂತ ಸ್ಟುಡಿಯೋ ಕಟ್ಟಿದಳು. ತೆಲುಗು, ತಮಿಳು, ಚಿತ್ರರಂಗಗಳೆರಡರಲ್ಲೂ ದೊಡ್ಡ ಹೆಸರು ಮಾಡಿದಳು.

ಆಕೆಯ ಸಿನೆಮಾ ‘ಚಂಡೀರಾಣಿ’ ಹಿಂದಿಯಲ್ಲೂ ತೆರೆ ಕಂಡಿತ್ತು.‘ರಂಗೂನ್‌ ರಾಧಾ’ ಎಂಬ ತಮಿಳು ಸಿನೆಮಾ ನೋಡಿದ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಅಣ್ಣಾದುರೈ ಆಕೆಯ ಅಭಿಮಾನಿಯಾಗಿ ಮಾರ್ಪಟ್ಟು ‘ನಟನ ವ್ಯಾಕರಣ’ಅಂತ ಬಿರುದುಕೊಟ್ಟಿದ್ದರು. ಭಾನುಮತಿಗೆ ‘ಪದ್ಮಶ್ರೀ’ ಬಂತು. ‘ಪದ್ಮಭೂಷಣ’ ಬಂತು. ಆಕೆಯ ಆತ್ಮಕಥೆಗೆ ಅಕಾಡೆಮಿ ಬಹುಮಾನ ದೊರಕಿತು. ಆಂಧ್ರದ ಎರಡು ವಿಶ್ವವಿದ್ಯಾಲಯಗಳು ಭಾನುಮತಿಗೆ ಡಾಕ್ಟರೇಟ್‌ ನೀಡಿ ಗೌರವಿಸಿದವು. ಮೂರು ಸಲ ಭಾನುಮತಿ ರಾಷ್ಟ್ರಪ್ರಶಸ್ತಿ ವಿಜೇತೆಯಾದರು. ಇವತ್ತು ಸಂಜಯ್‌ಲೀಲಾ ಬನ್ಸಾಲಿ ಆಕಸ್ಮಾತ್‌ ಮೆಚ್ಚಿಕೊಂಡರೆ ಹಾಡುವ -ನಟಿಸುವ ಹುಡುಗ- ಹುಡುಗಿಯರು ಬದುಕು ಧನ್ಯವಾಯಿತು ಎಂಬಂತೆ ರೋಮಾಂಚಿತರಾಗಿ ನಿಲ್ಲುತ್ತಾರಲ್ಲ ? ಹಾಗೆ ಭಾನುಮತಿಯ ಮೆಚ್ಚಿಗೆ ಪಡೆದು ಎನ್‌.ಟಿ.ರಾಮಾರಾವ್‌, ನಾಗೇಶ್ವರರಾವ್‌, ಜಮುನ, ಗೀತಾಂಜಲಿ, ಪದ್ಮನಾಭಂ ತರಹದ ನಟರು ರೋಮಾಂಚಿತರಾಗಿ ನಿಲ್ಲುತ್ತಿದ್ದರು.

ಇಷ್ಟೆಲ್ಲ ಆಗಿ, ಭಾನುಮತಿ ತುಂಬ ಕಡಿಮೆ ಓದಿಕೊಂಡಿದ್ದ, ಸಂಪ್ರದಾಯಸ್ಥ ಕುಟುಂಬದ ಆರ್ಡಿನರಿ ಹೆಣ್ಣು ಮಗಳು. ನೋಡಲಿಕ್ಕೆ ಚೆನ್ನಾಗಿದ್ದಳು, ಚೆನ್ನಾಗಿ ಹಾಡುತ್ತಿದ್ದಳು: ಹೀಗಾಗಿ ಆ ಕಾಲದಲ್ಲಿ ಹೆಚ್ಚಿನ ಸ್ಪರ್ಧೆ ಇರಲಿಲ್ಲವಾದ್ಧರಿಂದ ಪ್ರವರ್ಧಮಾನಕ್ಕೆ ಬಂದಳು ಅಂದು ಕೊಳ್ಳೋಣವೆಂದರೆ, ಆ ಕಾಲದಲ್ಲೇ ಸಾವಿತ್ರಿಇದ್ದಳು. ಅಲ್ಲಿ ನರ್ಗೀಸ್‌, ಮಧುಬಾಲಾ ಇದ್ದರು. ಇಲ್ಲಿ ಲೀಲಾವತಿ, ಬಿ.ಸರೋಜಾದೇವಿ, ಪಂಢರಿ ಬಾಯಿ ಇದ್ದರು. ಎಲ್ಲರೂ ಒಂದು ಹಂತದಲ್ಲಿ, ಒಂದು ಕಾಲ ಘಟ್ಟದಲ್ಲಿ ಪ್ರವರ್ಧಮಾನಕ್ಕೆ ಬಂದವರೇ. ಮಾಧುರಿ ದೀಕ್ಷಿತ್‌ಗಿಂತ ಮೆರೆದವರುಂಟೆ? ರೇಖಾಗಿಂತ ಖ್ಯಾತರಾದವರುಂಟೆ?ನಟಿಯರಾಗಿ ಅವರೆಲ್ಲ ಇವತ್ತಿಗೂ ಖ್ಯಾತರಾಮರೇ.

ಆದರೆ ಯೌವನ ಮುಗಿಯುವುದರೊಂದಿಗೆ, ಅವರದೆಲ್ಲವೂ ಮುಗಿದು ಹೋಯಿತು. ಭಾನುಮತಿ, ಯೌವನ ಮುಗಿದ ನಂತರ ಬೆಳೆಯುತ್ತ, ಮಾಗುತ್ತ, ಖ್ಯಾತಳಾಗುತ್ತ ಹೋದಳು. ಇದನ್ನು ನಮ್ಮ ಅನೇಕ ನಟಿಯರು ಗಮನಿಸಿರುವುದಿಲ್ಲ. ಕಲ್ಪನಾ, ಲೀಲಾವತಿ, ಭಾರತಿ, ಜಯಂತಿ ಒಬ್ಬರಿಗಿಂತ ಒಬ್ಬರು ಅನುಪಮ ನಟಿಯರೇ. ಆ ಬಗ್ಗೆ ಎರಡು ಮಾತಿಲ್ಲ. ಆದರೆ, ಅದನ್ನು ಮೀರಿ ಏನನ್ನಾದರೂ ಅವರ ಬಗ್ಗೆ ಮಾತಾಡೋಣವೆಂದರೆ -ಅಲ್ಲೂ ಬೇರೆ ಮಾತಿಲ್ಲ ! ಅವರು ತಮ್ಮ ಯೌವನದ ಮುಕ್ತಾಯದೊಂದಿಗೆ ತಾವು ಮುಗಿದು ಹೋಗುತ್ತಾರೆ. ಪರದೆಯ ಆಚೆಗೆ ಅವರು ಏನೂ ಅಲ್ಲ. ಬೇರೆ ಏನನ್ನೂ ಅವರು ಬೆಳೆಸಿಕೊಂಡಿರುವುದಿಲ್ಲ. ಹಳೆಯ ತುರುಬು, ಹಳೆಯ ಡಾಬು-ಜೀವನ ಪರ್ಯಂತ ಸಿಕ್ಕಿಸಿಕೊಂಡು ಓಡಾಡುತ್ತಾರೆ.

ನಟಿಯರಷ್ಟೇ ಅಲ್ಲ : ಎಲ್ಲ ಹೆಣ್ಣು ಮಕ್ಕಳೂ ಇದನ್ನು ಗಮನಿಸಬೇಕು. ಒಬ್ಬಹುಡುಗಿಗೆ ಸಿಕ್ಕುವ ಮನ್ನಣೆ, ಮೆಚ್ಚುಗೆ ಅವಳ ರೂಪಕ್ಕೆ, ದೇಹಕ್ಕೆ, ಅವಳ ಯೌವನಕ್ಕೆ ಸಿಕ್ಕ ಮನ್ನಣೆಯಾಗಿರುತ್ತದೆ. ಅದು ಯೌವನ ಮತ್ತು ರೂಪ ಮುಗಿದ ನಂತರವೂ ಮುಂದುವರೆಯಬೇಕೆಂದರೆ, ಅವರ ವ್ಯಕ್ತಿತ್ವ ಬೆಳೆಯಬೇಕು. ಅದಕ್ಕಾಗಿ ಕಷ್ಟಪಡಬೇಕು. ಓದಬೇಕು. ಸಾಧಿಸಬೇಕು. ಇಲ್ಲದಿದ್ದರೆ ಜಗತ್ತು ಕಲ್ಪನಾ, ಬಿ.ವಿ.ರಾಧ, ಸುಧಾರಾಣಿ, ಪದ್ಮಾ ವಾಸಂತಿ ಇತ್ಯಾದಿ ನಟಿಯರನ್ನು ಮರೆತಂತೆಯೇ ಎಲ್ಲ ಸೌಂದರ್ಯವತಿಯರನ್ನೂ ಮರೆತುಬಿಡುತ್ತದೆ. ಈ ಎಚ್ಚರಿಕೆ ಭಾನುಮತಿಗೆ ಇತ್ತು. ಅತ್ಯಂತ ಸುಶ್ರಾವ್ಯವಾಗಿ ಸಿನೆಮಾ ಗೀತೆ ಹಾಡುತ್ತಿದ್ದ ಆಕೆ ತ್ಯಾಗರಾಜರ ಕೀರ್ತನೆಗಳನ್ನು ಬದ್ಧ ವಿದ್ಯಾರ್ಥಿನಿಯಂತೆ ಕುಳಿತು ಕಲಿತರು. ಆಕೆ ಹಿಂದಿ ಕಲಿತರು Screen play ಬರೆಯುವುದನ್ನು ಕಲಿತರು. ಎಲ್ಲ ಮುಗಿದು, ಇನ್ನೇನು ಭಾನುಮತಿಗೆ ತೀರ ವಯಸ್ಸಾಯಿತು ಅಂತ ಅವರಿವರು ಅನ್ನುವಷ್ಟರಲ್ಲಿ ಆಕೆ ಚಿತ್ರ ಬರೆಯಲು ನಿಂತರು. ಭಾನುಮತಿಯ ಪೆಯಿಂಟಿಂಗುಗಳಿಗೆ ಆಂಧ್ರದಲ್ಲಿ ತನ್ನದೇ ಆದ ಖ್ಯಾತಿಯಿದೆ.

ನಮ್ಮಲ್ಲಿ ಇಂಥ ಹೆಣ್ಣು ಮಕ್ಕಳ ಸಂಖ್ಯೆ ತೀರ ಕಡಿಮೆ. ಇಂಥ ಗಂಡಸರ ಸಂಖ್ಯೆಯೂ ಕಡಿಮೆಯೇ, ಗಂಗಾಧರ್‌, ಕಲ್ಯಾಣ್‌ ಕುಮಾರ್‌, ಉದಯ ಕುಮಾರ್‌ ಮುಂತಾದವರೆಲ್ಲ ಕೇವಲ ನಟರಾಗಿ ಉಳಿದರು. ಅಳಿದೂ ಹೋದರು. ಅವರು ಭೌತಿಕವಾಗಿ ಸಾಯುವುದಕ್ಕೆ ಎಷ್ಟೋ ವರ್ಷಗಳಿಗೆ ಮುಂಚೆಯೇ ತಂತಮ್ಮ ರಂಗದಲ್ಲಿ ಚಲಾವಣೆ ಕಳೆದುಕೊಂಡು ತೀರಿ ಹೋಗಿದ್ದರು. ಏಕೆಂದರೆ, ತಮ್ಮ ಹಳಿಯಿಂದಾಚೆಗೆ ಅವರು ಕೈ ಚಾಚಲೇ ಇಲ್ಲ.

‘ಇದು, ಇಂದಲ್ಲ ನಾಳೆಗೆ ಮುಗಿದು ಹೋಗುವ ಸರಕು. ಮುಗಿದು ಹೋಗುವ ಸಂತೆ ! ಇದರ ನಂತರ ನಾನು ಮತ್ಯಾವುದೋ ದಿಕ್ಕಿಗೆ ಟಿಸಿಲೊಡೆದು ಬೆಳೆಯಬೇಕು’ ಅಂತ ಅವರಿಗೆ ಅನ್ನಿಸಲೇ ಇಲ್ಲ.

ಹುಡುಗನೊಬ್ಬನ ಪ್ರೀತಿಗೆ, ಪ್ರಪೋಸಲ್‌ಗೆ ಮುದಗೊಂಡು ಬದುಕು ಸಾರ್ಥಕವಾಯಿತು ಅಂದುಕೊಳ್ಳುವ ಹುಡುಗಿ ಕೂಡ ಅಷ್ಟೆ : ಯೌವನ ಮುಗಿದ ಮೇಲೆ ತನ್ನ ಹುಡುಗನಿಗೆ ಬೋರಾಗುತ್ತೇನೆ ಅಂತ ಅಂದುಕೊಳ್ಳುವುದೇ ಇಲ್ಲ. ಅವಳು ದಶದಿಕ್ಕಿಗೆ ಕೈ ಬಾಚಿ ಬೆಳೆಯುವುದೇ ಇಲ್ಲ.

ನಮಗೆಲ್ಲ ಭಾನುಮತಿಯ ಬದುಕು ಪಾಠವಾಗಬೇಕು. ಮರೆಯಲಾಗದ ‘ಮಲ್ಲೇಶ್ವರಿ’ ನಮಗೆ ಸ್ಫೂರ್ತಿಯಾಗಬೇಕು.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more