ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳ : ಜನ ತಿರುಗಿಬಿದ್ದರೆ ಅರಸೋತ್ತಿಗೆಯದ್ಯಾವ ಲೆಕ್ಕ?

By Staff
|
Google Oneindia Kannada News

ನೇಪಾಳ : ಜನ ತಿರುಗಿಬಿದ್ದರೆ ಅರಸೋತ್ತಿಗೆಯದ್ಯಾವ ಲೆಕ್ಕ?
ಇದು ಪ್ರಜಾಪ್ರಭುತ್ವದ ಗೆಲುವು! ಸೇನೆಯ ಬಲವನ್ನೇ ನಂಬಿಕೊಂಡು ನಿರಂಕುಶ ಪ್ರಭುತ್ವಕ್ಕಿಳಿದ ದೊರೆಯ ವಿರುದ್ಧ ಜನ ದಂಗೆಯೆದ್ದರೆ ಹೇಗೆ ಅರಸೊತ್ತಿಗೆ ಅಲ್ಲಾಡಿ ಹೋಗುತ್ತದೆ ಎಂಬುದನ್ನು ನೇಪಾಳಿಗಳು ತೋರಿಸಿದ್ದಾರೆ.

Ravi Belagere on Thatskannada.com ರವಿ ಬೆಳಗೆರೆ

ಕರ್ಫ್ಯೂ ಜಾರಿಯಾಗಿದ್ದರೂ ಕಳೆದ ಹದಿನೆಂಟನೇ ತಾರೀಕು ಮಂಗಳವಾರದಂದು ಅನಾಮತ್ತು ಹತ್ತು ಲಕ್ಷ ಜನ ರ್ಯಾಲಿಯಲ್ಲಿ ಹೊರಟರೆ, ದೊರೆ ಜ್ಞಾನೇಂದ್ರ ಮತ್ತು ಆತನ ಹಿಡಿತದಲ್ಲಿದ್ದ ಎಂಬತ್ತು ಸಾವಿರ ಜನರ ರಾಯಲ್‌ ನೇಪಾಳ್‌ ಆರ್ಮಿ ಏನೆಂದರೂ ಏನೂ ಮಾಡಲಾಗಲಿಲ್ಲ. ಹಾಗೆ ಬೀದಿಗಿಳಿದ ಜನರ ನಾಯಕತ್ವಕ್ಕೆ ಏಳು ಪಕ್ಷಗಳ ಒಕ್ಕೂಟ ಮತ್ತು ಮಾವೋವಾದಿಗಳಿದ್ದರಾದರೂ ಅವರ್ಯಾರೂ ಒತ್ತಾಯಪೂರ್ವಕವಾಗಿ ಜನರನ್ನು ಬೀದಿಗಳಿಸಲಿಲ್ಲ, ಅಂಗಡಿಗಳನ್ನು ಮುಚ್ಚಿಸಲಿಲ್ಲ. ರಾಜನ ಆಳ್ವಿಕೆಯಿಂದ ಬೇಸತ್ತು ಹೋಗಿದ್ದ ಜನರ ಪ್ರತಿಭಟನೆ ಹುಸಿಯಾಗಲಿಲ್ಲ. ಕಳೆದ ಇಪ್ಪತ್ನಾಲ್ಕರ ಮಂಗಳವಾರದಂದು ಮರಳಿ ಸಂಸತ್ತನ್ನು ಸ್ಥಾಪಿಸುವ ಘೋಷಣೆ ಹೊರಡಿಸಿದ್ದಾನೆ ದೊರೆ. ಅದಕ್ಕೇ ಹೇಳಿದ್ದು, ಇದು ಪ್ರಜಾಪ್ರಭುತ್ವದ ಗೆಲುವು ಅಂತ.

ನಿಮಗೆ ನೆನಪಿರಬಹುದು, 2001ರ ಜೂನ್‌ ಒಂದರಂದು ರಾಜಕುಮಾರ ದೀಪೇಂದ್ರ, ಮಹಾರಾಜ ಬೀರೇಂದ್ರ ಮತ್ತು ಮಹಾರಾಣಿ ಐಶ್ವರ್ಯ ಹಾಗೂ ಇತರ ಏಳು ಜನರನ್ನು ಕುಡಿದ ಅಮಲಿನಲ್ಲಿ ಗುಂಡಕ್ಕಿ ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ. ಆಗ ಪಟ್ಟಕ್ಕೇರಿದಾತನೇ ಬೀರೇಂದ್ರನ ತಮ್ಮ ಜ್ಞಾನೇಂದ್ರ.

ಅರಮನೆಯಲ್ಲಿ ನಡೆದ ಮಾರಣ ಹೋಮದ ಹಿಂದೆ ದೊರೆ ಜ್ಞಾನೇಂದ್ರ ಮತ್ತು ರಾಜಕುಮಾರ ಪಾರಸ್‌ನ ಕೈವಾಡವಿದೆ ಅಂತ ನೇಪಾಳಿಗರು ಇವತ್ತಿಗೂ ನಂಬುತ್ತಾರೆ, ಅದು ಬೇರೆ ವಿಷಯ. ಆದರೆ ಸಿಂಹಾಸನವೇರಿದ ಜ್ಞಾನೇಂದ್ರ ನಿರಂಕುಶನಾಗುತ್ತ ಹೋದ. ಮುಂದೆ ಮಾಮೋವಾದಿ ಉಗ್ರರ ಬೆದರಿಕೆಗೆ ಮಣಿದು ಆಗಿನ ಪ್ರಧಾನಿ ಜಿ.ಪಿ.ಕೊಯಿರಾಲಾ ರಾಜೀನಾಮೆ ಕೊಟ್ಟು ಹೋದರಲ್ಲ? ಆಗ ದೇವುಬಾ ಪ್ರಧಾನಿಯಾದರು. ತುರ್ತು ಪರಿಸ್ಥಿತಿ ಘೋಷಣೆಯಾಯಿತು.

ಮರುವರ್ಷವೇ ತನ್ನ ವಿಶೇಷ ಅಧಿಕಾರ ಬಳಸಿ ಸಂಸತ್ತನ್ನು ವಿಸರ್ಜಿಸಿಬಿಟ್ಟ ದೊರೆ. ಚುನಾವಣೆಗಳನ್ನೂ ನಡೆಸಲಿಲ್ಲ. ಲೋಕೇಂದ್ರ ಬಹಾದ್ದೂರ್‌ ಚಾಂದ್‌ರನ್ನು ಸರಕಾರದ ಮುಖ್ಯಸ್ಥನನ್ನಾಗಿಸಲಾಯಿತು. ಪ್ರಜಾಪ್ರಭುತ್ವವಾದಿ ರಾಜಕೀಯ ಪಕ್ಷಗಳ ವಿರೋಧ ಮತ್ತು ಮಾವೋವಾದಿ ಉಗ್ರರ ಪ್ರತಿಭಟನೆಗೆ ಬೆದರಿ ಚಾಂದ್‌ ಸಹ ರಾಜೀನಾಮೆ ಕೊಟ್ಟರು. ದೊರೆ ಖುದ್ದಾಗಿ ಆಸಕ್ತಿ ವಹಿಸಿ ಸೂರ್ಯಬಹಾದ್ದೂರ್‌ ಥಾಪಾರಿಗೆ ಅಧಿಕಾರ ವಹಿಸಿದ.

ವರ್ಷ ಕಳೆಯುವುದರೊಳಗಾಗಿ ಥಾಪಾ ಸಹ ರಾಜೀನಾಮೆ ಕೊಟ್ಟರು. ಮತ್ತೆ ಅಧಿಕಾರಕ್ಕೆ ಬಂದಿದ್ದು ಶೇರ್‌ ಬಹಾದ್ದೂರ್‌ ದೇವುಬಾ. ಕಳೆದ ವರ್ಷದ ಫೆಬ್ರುವರಿ ಒಂದರಂದು ಸರಕಾರವನ್ನು ವಿಸರ್ಜಿಸಿ ಸಂಪೂರ್ಣ ಅಧಿಕಾರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಮಾವೋವಾದಿ ಉಗ್ರರನ್ನು ಬಗ್ಗು ಬಡಿಯುತ್ತೇನೆ ಅಂತ ನಿಂತ ದೊರೆ ಜ್ಞಾನೇಂದ್ರ. ಮೊದಲೇ ಸೀಮಿತ ಆದಾಯದ ಪುಟ್ಟ ರಾಷ್ಟ್ರವದು ನೇಪಾಳ. ಅಲ್ಲಿ ಐದು ವರ್ಷಗಳ ಅಂತರದಲ್ಲಿ ಇಷ್ಟೆಲ್ಲಾ ರಾಜಕೀಯ ಏರುಪೇರುಗಳಾದರೆ ಅರ್ಥ ವ್ಯವಸ್ಥೆಯ ಗತಿ ಏನು? ಜನರ ಬದುಕುಗಳು ಏನಾಗಬೇಡ?

ಮಾವೋವಾದಿ ಉಗ್ರರು ನೇಪಾಳದ ಕೆಲವು ಪ್ರದೇಶಗಳ ಮೇಲೆ ತಮ್ಮ ಹಿಡಿತ ಸಾಧಿಸಿಕೊಂಡರು. ರಾಜಧಾನಿ ಕಠ್ಮಂಡುವಿನೊಳಗೆ ಒಂದೇ ಒಂದು ಕಟ್ಟಿಗೆಯ ತುಂಡು ಸಹ ಪ್ರವೇಶಿಸದಂತೆ ತಡೆದರು. ಕಾಳು-ಕಡಿ ಸಾಗಿಸುವ ಲಾರಿಗಳಿಗೇ ರಾಯಲ್‌ ನೇಪಾಳ್‌ ಆರ್ಮಿಯವರು ರಕ್ಷಣೆ ಕೊಡಬೇಕಾದಂಥ ಸ್ಥಿತಿ ನಿರ್ಮಾಣವಾಯಿತು. ಅದರಲ್ಲೂ ಮೊದಲಿನಿಂದಲೇ ಅರಸೊತ್ತಿಗೆಯನ್ನು ವಿರೋಧಿಸುತ್ತಲೇ ಬಂದ ಕೀರ್ತಿಪುರ ಅದ್ಯಾವತ್ತೂ ಸರಕಾರದ ಹಿಡಿತಕ್ಕೆ ಸಿಗಲೇ ಇಲ್ಲ. ಅದರಲ್ಲೂ ಅಲ್ಲಿನ ತ್ರಿಭುವನ ವಿಶ್ವವಿದ್ಯಾಲಯ ರಾಜನ ಆಳ್ವಿಕೆಯ ವಿರುದ್ಧ ಹೊಸ ಚಿಂತನೆಗಳನ್ನೇ ಹುಟ್ಟು ಹಾಕಿತು.

ಪ್ರಜಾಪ್ರಭುತ್ವ ಪರ ರ್ಯಾಲಿಗಳಿಗೆ ಮತ್ತು ಮಾವೋವಾದಿ ಹೋರಾಟಗಳಿಗೆ ದೊಡ್ಡ ಮಟ್ಟದಲ್ಲಿ ಸಹಾಯವಾದವರು ಇಲ್ಲಿನ ವಿದ್ಯಾರ್ಥಿಗಳು. ಈ ಹೋರಾಟದಲ್ಲಿ ನಡೆದ ಒಂದು ಬೆಳವಣಿಗೆಯೆಂದರೆ, ಉಗ್ರರಿಗೆ ತಾವು ಸಂಪೂರ್ಣ ನೇಪಾಳವನ್ನು ಹಿಡಿತಕ್ಕೆ ತೆಗೆದುಕೊಳ್ಳುವುದು ಅಸಾಧ್ಯ ಎಂಬುದು ಖಚಿತವಾಗಿದ್ದು. ಅವರು ತಮ್ಮ ನಾಯಕ ಬಾಬುರಾಮ್‌ ಭಟ್ಟಾರಾಯ್‌ ನೇತೃತ್ವದಲ್ಲಿ ಏಳು ಪಕ್ಷಗಳ ಒಕ್ಕೂಟದೊಂದಿಗೆ ಹನ್ನೆರಡು ಅಂಶಗಳ ಒಪ್ಪಂದದೊಂದಿಗೆ ಮಾಡಿಕೊಂಡು ಶಾಂತಿಯುತ ಹೋರಾಟಕ್ಕಿಳಿದರು.

ಈ ಹೋರಾಟಗಾರರನ್ನು ಮೊದಲಿನಿಂದಲೂ ಕಿರಿಕಿರಿಗೀಡುಮಾಡಿದ್ದು ಭಾರತದ ಮೌನ. ನೇಪಾಳದ ಆಂತರಿಕ ವಿಷಯದಲ್ಲಿ ಭಾರತ ಇವತ್ತಿಗೂ ಮುಖ್ಯಪಾತ್ರ ವಹಿಸುತ್ತದೆ. ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ಅನ್ನಿಸಿಕೊಂಡಿರುವ ನೇಪಾಳ ಆಡಳಿತದ ಪ್ರಮುಖ ನಿರ್ಧಾರಗಳ ಹಿಂದೆ ಆರೆಸ್ಸೆಸ್‌ ಮತ್ತು ವಿಶ್ವ ಹಿಂದೂ ಪರಿಷತ್‌ಗಳಿರುತ್ತದೆ. ಆದರೆ ಸಂಘ ಪರಿವಾರದ ಬೆಂಬಲವೇನಿದ್ದರೂ ರಾಜ ಸತ್ತೆಗೇ.

ಕೇವಲ ರಾಜಸತ್ತೆಯಾಂದೇ ನೇಪಾಳವನ್ನು ಮಾವೋವಾದಿ ಉಗ್ರರಿಂದ ರಕ್ಷಿಸಬಲ್ಲದು. ಹಾಗೊಂದು ವೇಳೆ ಉಗ್ರರು ಆ ದೇಶವನ್ನಾಳಲು ನಿಂತರೆ ನೇಪಾಳವೊಂದೇ ಅಲ್ಲ, ಅದು ಭಾರತದ ಮೇಲೂ ದುಷ್ಪರಿಣಾಮ ಬೀರುತ್ತದೆ. ಕಡಿಮೆ ಅಂದರೂ ಭಾರತದ ನೂರೈವತ್ತು ಜಿಲ್ಲೆಗಳು ಅವರ ನೇರ ಪ್ರಭಾವಕ್ಕೊಳಪಡುತ್ತವೆ ಎಂಬುದು ಪ್ರವೀಣ್‌ ತೊಗಾಡಿಯಾ ವಾದ. ಮೊದಲೇ ಚೈನಾದೊಂದಿಗೆ ನಮ್ಮ ಗಡಿ ವಿವಾದಗಳಿವೆ, ಅಂಥದ್ದರಲ್ಲಿ ಇನ್ನೊಂದು ಕಮ್ಯುನಿಸ್ಟ್‌ ಪರ ರಾಷ್ಟ್ರ ಹುಟ್ಟಿಕೊಳ್ಳುವುದರಿಂದ ದೇಶದ ರಕ್ಷಣೆಗೆ ತೊಂದರೆಯಾದೀತು ಎಂಬುದು ಸಂಘ ಪರಿವಾರಿಗಳ ದೂರದೃಷ್ಟಿಯಾಗಿರಲಿಕ್ಕೂ ಸಾಕು.

ಆದರೆ ಈ ವಿಷಯದಲ್ಲಿ ಬಿಜೆಪಿಗಳ ಧೋರಣೆಗೆ ರಾಜಕೀಯ ಲೇಪವಿದೆ. ಸಂವಿಧಾನಾತ್ಮಕ ಅಧಿಕಾರಗಳನ್ನು ರಾಜನಿಗೆ ಕೊಟ್ಟು, ಜನರಿಂದ ಆಯ್ಕೆಯಾದ ಸರಕಾರದ ಕೈಗೆ ಆಡಳಿತ ವಹಿಸಿಕೊಡಬೇಕು ಎಂಬುದು ಅವರ ವಾದ. ಸಂವಿಧಾನಾತ್ಮಕ ಅಧಿಕಾರಗಳನ್ನು ರಾಜನಿಗೇ ಕೊಡುವುದು ಅಂದರೆ, ಆತ ತನ್ನಿಚ್ಛೆಯಂತೆ ಜನರಿಂದ ಆಯ್ಕೆಯಾದ ಸರಕಾರವನ್ನು ಬರಖಾಸ್ತು ಮಾಡಬಹುದು ಅಂತ ಅರ್ಥ. (ಜ್ಞಾನೇಂದ್ರ ಮಾಡಿದ್ದು ಸಹ ಇದ್ದನ್ನೇ) ಇದನ್ನು ನೇಪಾಳಿಗರು, ಸರ್ವಥಾ ಒಪ್ಪಿಕೊಳ್ಳುವುದಿಲ್ಲ. ಅದೂ ಅಲ್ಲದೇ ನೇಪಾಳಿ ಸಂವಿಧಾನದ ಪ್ರಕಾರ ಎಂಬತ್ತು ಸಾವಿರ ಸೈನಿಕರಿರುವ ‘ರಾಯಲ್‌ ನೇಪಾಳ್‌ ಆರ್ಮಿ’ ಸಂಪೂರ್ಣವಾಗಿ ರಾಜನ ಹಿಡಿತಕ್ಕೆ ಒಳಪಟ್ಟಿರುತ್ತದೆ. ಇದೊಂದು ಧೈರ್ಯದ ಮೇಲೆಯೇ ದೊರೆ ಮನಸಿಗೆ ಬಂದಂತೆ ಆಡುತ್ತಾನೆ. ಈ ಎಲ್ಲ ಅಂಶಗಳನ್ನೂ ಬದಲಿಸಿ ರಾಜನನ್ನು ಹೆಸರಿಗೆ ಮಾತ್ರ ಅಧಿಕಾರದಲ್ಲಿರಿಸಿ, ಸಂಪೂರ್ಣ ಆಡಳಿತವನ್ನು ಸರಕಾರವೇ ನಡೆಸಬೇಕು, ಒಂದು ವೇಳೆ ರಾಜ ಇದಕ್ಕೊಪ್ಪದಿದ್ದರೆ ರಕ್ತ ಕ್ರಾಂತಿಯಾದರೂ ಸರಿ ಅರಸೊತ್ತಿಗೆಯನ್ನು ಪೂರ್ತಿಯಾಗಿ ಕಿತ್ತೆಸೆಯಬೇಕೆಂಬುದು ಅಷ್ಟೂ ಹೋರಾಟದ ಪ್ರಮುಖ ಉದ್ದೇಶ.

ಆದರೆ ಸೈನ್ಯದ ಬಲವನ್ನೇ ನಂಬಿಕೊಂಡ ಜ್ಞಾನೇಂದ್ರ ಹೋರಾಟಕ್ಕೆ ಸೊಪ್ಪು ಹಾಕಲಿಲ್ಲ. ಟೈಮು ಸರಿಯಿಲ್ಲ ಎಂದು ಜ್ಯೋತಿಷಿಗಳು ಹೇಳಿದ ಮಾತನ್ನೇ ನೆಪವಾಗಿಟ್ಟುಕೊಂಡು ಕಠ್ಮಂಡುವಿನಿಂದ ದೂರವೇ ಉಳಿದುಬಿಟ್ಟ. ಚಳವಳಿಗಾರರ ಮೇಲೆ ಸೈನ್ಯ ಯರ್ರಾಬಿರ್ರಿ ಗುಂಡು ಹಾರಿಸಿತು. ಅಸಲಿಗೆ ಸತ್ತವರೆಷ್ಟು ಜನ ಎಂಬುದನ್ನು ಸರಿಯಾಗಿ ಹೇಳಬಲ್ಲವರಾರೂ ಇಲ್ಲ. ಗಾಯಗೊಂಡವರಿಗೆ ಚಿಕಿತ್ಸೆ ಕೊಡಲು ಬಂದ ಮಾನವ ಹಕ್ಕುಗಳ ಆಯೋಗದ ಜನರನ್ನು ಸೈನ್ಯ ಹತ್ತಿರಕ್ಕೂ ಬರಗೊಡಲಿಲ್ಲ. ಆದರೆ ಎಷ್ಟೇ ಆದರೂ ಸೈನಿಕರೂ ಮನುಷ್ಯರಲ್ಲವಾ? ಅವರಾದರೂ ಎಷ್ಟು ಅಂತ ನ್ಯಾಯಯುತ ಹೋರಾಟಕ್ಕಿಳಿದಿರುವ ತಮ್ಮದೇ ದೇಶದ ಜನರನ್ನು ಬಡಿದಾರು? ನಿಧಾನವಾಗಿ

ಸೈನಿಕರ ಮನಸುಗಳೂ ಕರಗತೊಡಗಿದ್ದವು. ನಾಲ್ವರು ಹಿರಿಯ ಅಧಿಕಾರಿಗಳೂ ಸೇರಿದಂತೆ ಗೃಹ ಇಲಾಖೆಯು ಇಪ್ಪತ್ತೆೈದು ಜನ ನೌಕರರು ಪ್ರಜಾಪ್ರಭುತ್ವ ಪರ ಹೋರಾಟಗಾರರನ್ನು ಸೇರಿಕೊಂಡರು. ಇರುವ ಎಪ್ಪತ್ತೆೈದು ಜಿಲ್ಲೆಗಳ ಪೈಕಿ ಅರವತ್ತಕ್ಕೂ ಹೆಚ್ಚು ಜಿಲ್ಲೆಗಳ ವಾಣಿಜ್ಯ ಸಂಘಗಳು ಚಳವಳಿಯನ್ನು ಬೆಂಬಲಿಸಿ, ರಾಜನಿಗೆ ಟ್ಯಾಕ್ಸು ಕೊಡುವುದಿಲ್ಲವೆಂದು ನಿರ್ಧರಿಸಿ ನಿರ್ಣಯ ಪಾಸು ಮಾಡಿದವು. ಇಷ್ಟೆಲ್ಲಾ ಆದರೂ ದೊರೆ ಜ್ಞಾನೇಂದ್ರನಿಗೆ ಅಧಿಕಾರ ಬಿಟ್ಟುಕೊಡುವ ಮನಸ್ಸೇ ಇರಲಿಲ್ಲ.

ಕೊನೆಯ ಕ್ಷಣದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿ ಘೋಷಿಸುವ ನಿರ್ಧಾರಕ್ಕೆ ಬಂದಿದ್ದ ಮಹಾರಾಜ. ಅದನ್ನು ತಡೆದದ್ದು ಭಾರತ. ಕರಣ್‌ಸಿಂಗ್‌ ನೇತೃತ್ವದ ನಿಯೋಗ ತಿಳಿ ಹೇಳಿದ ನಂತರ, ನೀವೇ ಪ್ರಧಾನಿಯಾಬ್ಬರ ಹೆಸರು ಸೂಚಿಸಿ, ಅವರೇ ನಡೆಸಿಕೊಂಡು ಹೋಗಲಿ ಎಂದು ಏಳು ಪಕ್ಷಗಳ ಒಕ್ಕೂಟಕ್ಕೆ ಒಲ್ಲದ ಮನಸ್ಸಿನಿಂದಲೇ ಹೇಳಿದ ರಾಜ. ಆದರೆ, ‘ನಾವು ಹೋರಾಟ ನಡೆಸುತ್ತಿರುವುದು ಪ್ರಧಾನಿಯಾಗುವುದಕ್ಕಲ್ಲ’ ಎಂದು ಒಕ್ಕೊರಲಿನಿಂದ ಈ ಪ್ರಸ್ತಾವನೆಯನ್ನು ಒಕ್ಕೂಟ ಮತ್ತು ಉಗ್ರರು ತಿರಸ್ಕರಿಸಿಬಿಟ್ಟರು. ಅವರ್ಯಾರಿಗೂ ರಾಜನ ಹಿಡಿತದಲ್ಲಿರುವ ಸರಕಾರ ಬೇಡವಾಗಿತ್ತು. ಅದೂ ಅಲ್ಲದೇ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ವಿಷಯವನ್ನೇ ಎತ್ತಿರಲಿಲ್ಲ ದೊರೆ. ಕೊನೆಗೆ ಕಳೆದ ಇಪ್ಪತ್ನಾಲ್ಕರಂದು ಪಾರ್ಲಿಮೆಂಟನ್ನು ಮತ್ತೆ ಅಸ್ತಿತ್ವಕ್ಕೆ ತರುವ ಘೋಷಣೆ ಹೊರಡಿಸಿದ, ಜ್ಞಾನೇಂದ್ರ. ಇದಕ್ಕೆ ಒಪ್ಪಿಕೊಂಡ ಏಳು ಪಕ್ಷಗಳ ಒಕ್ಕೂಟ ಎಂಬತ್ನಾಲ್ಕು ವರ್ಷವಯಸ್ಸಿನ ಜಿ.ಪಿ.ಕೊಯಿರಾಲಾರನ್ನು ಪ್ರಧಾನಿಯಾಗಿ ಆರಿಸಿದೆ. ಮೊದಲನೆಯ ಸಂಪುಟ ಸಭೆಯಲ್ಲೇ ನಿರ್ಣಯ ಕೈಗೊಂಡು ಹೊಸದಾಗಿ ಚುನಾವಣೆ ನಡೆಸುತ್ತೇವೆಂದು ಕೊಯಿರಾಲಾ ಘೋಷಣೆ ಸಹ ಹೊರಡಿಸಿದ್ದಾರೆ.

ಆದರೆ, ಈ ಬೆಳವಣಿಗೆಗೆ ತಿರುಗಿ ಬಿದ್ದವರು ಮಾವೋವಾದಿ ಉಗ್ರರು. ಒಂದು ಹಂತದಲ್ಲಂತೂ ಏಳು ಪಕ್ಷಗಳ ಒಕ್ಕೂಟ ಪ್ರಜಾಪ್ರಭುತ್ವ ಸ್ಥಾಪನೆಯ ಹೋರಾಟದಲ್ಲಿ ಉಗ್ರರ ಪಾತ್ರವನ್ನೇ ಅಲ್ಲಗಳೆಯುವ ರೀತಿಯಲ್ಲಿ ಮಾತನಾಡಿದ್ದಾರೆ. ಅದು ಉಗ್ರರನ್ನು ಕೆರಳಿಸಿದ್ದರೆ ಆಶ್ಚರ್ಯವಿಲ್ಲ. ಅದೂ ಅಲ್ಲದೇ ಒಕ್ಕೂಟದೊಂದಿಗೆ ಮಾಡಿಕೊಂಡಿದ್ದ ಹನ್ನೆರಡು ಅಂಶಗಳ ಒಪ್ಪಂದಕ್ಕೆ ಒಕ್ಕೂಟ ಬದ್ಧವಾಗಿರಲಿಲ್ಲ ಮತ್ತು ಅದು ರಾಜನ ಪ್ರಸ್ತಾವನೆಗೆ ಒಪ್ಪಿಕೊಳ್ಳುವ ಮೂಲಕ ಅಷ್ಟೂ ಹೋರಾಟದ ಮೂಲ ಸಿದ್ಧಾಂತಕ್ಕೇ ಹೊಡೆತ ಕೊಟ್ಟಿದೆ ಎಂಬುದು ಉಗ್ರರ ವಾದ. ಈಗ ಚಳವಳಿಯನ್ನು ಮುಂದುವರೆಸುವಂತೆ ಜನರಿಗೆ ಕರೆ ನೀಡಿದ್ದಾರೆ.

ಉಳಿದದ್ದೇನೇ ಇರಲಿ; ಅಧಿಕಾರವನ್ನು ಬಿಟ್ಟುಕೊಡುವಾಗಲೂ ಸಹ ದೊರೆ ಜ್ಞಾನೇಂದ್ರ, ತಾನು ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದ್ದ ಮಾವೋವಾದಿಗಳನ್ನು ಒಕ್ಕೂಟದಿಂದ ದೂರವಾಗುವಂತೆ ಮಾಡಿದ್ದಾನೆ. ಅಷ್ಟೇ ಆತನಿಗೆ ಸಮಾಧಾನ.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X