ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರ್ಯಾಂಕು ತಂದುಕೊಂಡವರೆಲ್ಲ ನಾಳೆ ಎಲ್ಲಿ ಮರೆಯಾಗಿ ಬಿಡುತ್ತಾರೋ...

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಕಳೆದ ವಾರವೇ ಇದನ್ನು ಬರೆಯೋಣವೆಂದುಕೊಂಡಿದ್ದೆ. ಆಗಿರಲಿಲ್ಲ. ಮಂಡ್ಯದಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಷಣ ಮಾಡುವಾಗ ವಿಷಯ ನನ್ನೊಳಗೇ ಅರಳಿ ವಿಸ್ತಾರಗೊಂಡು ಒಂದು ಸ್ಪಷ್ಟ ರೂಪು ಪಡೆದಂತಾಯಿತು. ಈಗ ಬರೆಯುತ್ತಿದ್ದೇನೆ. ಮಂಡ್ಯದಲ್ಲಿ ದಿವಂಗತ ಡಾ. ಬೆಸಗರಹಳ್ಳಿ ರಾಮಣ್ಣನವರ ‘ಒರೆಗಲ್ಲು’ ಎಂಬ ಅಂಕಣ ಸಂಗ್ರಹವೊಂದರ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ. ರಾಮಣ್ಣ ನನಗೆ ತುಂಬ ಆತ್ಮೀಯರಾಗಿದ್ದವರು. ಅವರ ಕತೆಗಳನ್ನು ನಾನು ನಿಬ್ಬೆರಗಾಗಿ ಓದಿದ್ದೆ. ರಾಮಣ್ಣನೊಂದಿಗೆ ಹಲವಾರು ರಾತ್ರಿ, ಹಲವಾರು ಗಂಟೆ ಹರಟಿದ್ದೆ, ತಿರುಗಾಡಿದ್ದೆ. ಪಟ್ಟಾಪಟ್ಟಿ ಚೆಡ್ಡಿ ಹಾಕಿಕೊಂಡು ನಮ್ಮ ಮನಸ್ಸಿನವರಿಗೆ ಸರಿಸಮನಾಗಿ ಬಾಡು ತಿನ್ನುತ್ತಾ, ತಿನ್ನುವುದಕ್ಕಿಂತ ಹೆಚ್ಚಾಗಿ ತಿನ್ನಿಸುತ್ತ, ನಿರರ್ಗಳವಾಗಿ ಮಾತನಾಡುತ್ತ, ನಗುತ್ತ- ಅಳುತ್ತ-ರೇಗುತ್ತ ಇರುತ್ತಿದ್ದ ರಾಮಣ್ಣ ಬರೆಯಲು ಕುಳಿತಾಗ ಪರಮ ಅಂತರ್ಮುಖಿ. ಅದೆಷ್ಟು ವರ್ಷಗಳಿಂದ ಆತ ಒಬ್ಬಂಟಿಗನಾಗಿ ನಿಂತು ಮನುಷ್ಯ ಸಂಕುಲನದ ಸಮಸ್ಯೆಗಳ ಬಗ್ಗೆ ಧೇನಿಸಿ ಕಣ್ಣೀರಿಡುತ್ತಿದ್ದನೋ ಎಂಬಂತೆ ಬರೆಯುತ್ತಿದ್ದ ಅದ್ಭುತ ಕತೆಗಾರ.

ಅಂಥ ರಾಮಣ್ಣ ಜೀವನದುದ್ದಕ್ಕೂ ಹಳ್ಳಿಗಾಡಿನ ಡಾಕ್ಟರ್‌ ಆಗಿದ್ದವರು. ಬಿಹಾರಕ್ಕೆ ಹೋಗಿ ಅಲ್ಲೂ ಡಾಕ್ಟರಿಕೆ ಮಾಡಿಬಂದಿದ್ದವರು. ಅವರ ಹೃದಯ ಶ್ರೀಮಂತಿಕೆ ದೊಡ್ಡದಿತ್ತೇ ಹೊರತು, ಮನೆಯ ಬಡತನ ಕಳೆಯುವುದಕ್ಕಾಗಿ ರಾಮಣ್ಣ ದುಡ್ಡು ‘ಮಾಡಲಿಲ್ಲ’. ದುಡಿದದ್ದೆಲ್ಲ ಪುಸ್ತಕಗಳಿಗೇ ಆಯಿತು. ಮಕ್ಕಳನ್ನು ತುಂಬ ಚೆನ್ನಾಗಿ ಓದಿಸಿದರು. ಆ ಬೆಳೆ ಕೈಗೆ ಬಂದು ರಾಮಣ್ಣ ನೆಮ್ಮದಿಯ ದಿನಗಳನ್ನು ಕಣ್ಣು ಕಾಣುವ ಹೊತ್ತಿಗೆ ಬದುಕೇ ಮುಗಿದು ಹೋಯಿತು. ರಾಮಣ್ಣ ತೀರಿ ಹೋದರು.

ಅವರ ಮಗ ರವಿಕಾಂತೇಗೌಡರು ಈಗ ಹುಬ್ಬಳ್ಳಿಯಲ್ಲಿ ಡೆಪ್ಯುಟಿ ಕಮೀಶನರ್‌ ಆಫ್‌ಪೊಲೀಸ್‌ ಆಗಿದ್ದಾರೆ. ತಂದೆಯ ಪತ್ರಿಕಾ ಬರಹಗಳನ್ನು ಒಂದೆಡೆ ಸೇರಿಸಿ ‘ಒರೆಗಲ್ಲು’ ಅಂತ ಪುಸ್ತಕ ಹೊರತಂದು ಅದರ ಬಿಡುಗಡೆಗೆ ಜಯಂತ್‌ ಕಾಯ್ಕಿಣಿ, ದೇವನೂರು ಮಹಾದೇವ, ಜಿ.ಎಸ್‌.ಎಸ್‌, ದೇಜಗೌ ಮುಂತಾದವರನ್ನೆಲ್ಲ ಕರೆಸಿದ್ದರು. ಆ ಸಭೆಯಲ್ಲಿ ನಾನು ಮಾತಿಗೆ ನಿಂತಾಗ ಬಂದದ್ದೇ ಪ್ರತಿಭೆಯ ಸಂಗತಿ.

ನೀವೀಗ ಕೆಲ ದಿನಗಳಿಂದ ಪ್ರತಿನಿತ್ಯ ಪತ್ರಿಕೆಗಳಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ತೊಂಬತ್ತೆಂಟು, ತೊಂಬತ್ತೊಂಬತ್ತು ಪಾಯಿಂಟ್‌ ಒಂಬತ್ತು ಹೀಗೆಲ್ಲ ಮಾರ್ಕು ತಂದುಕೊಂಡ ಹುಡುಗರ ಬಗ್ಗೆ, ಹುಡುಗಿಯರ ಬಗ್ಗೆ ಓದುತ್ತಿದ್ದೀರಿ. ಅದರಲ್ಲಿ ಕೂಲಿಕಾರರ ಮಕ್ಕಳು, ಅನಾಥ ಮಕ್ಕಳು, ಬೀದಿಬಿದಿಯ ಮಕ್ಕಳು -ಇಂಥವರೆಲ್ಲ ಕೈ ತುಂಬ ಮಾರ್ಕು ತಂದುಕೊಂಡ ಸುದ್ದಿ ಓದಿರುತ್ತೀರಿ. ಆದರೆ, ಇವರೆಲ್ಲ ನಾಲ್ಕಾರು ವರ್ಷಗಳ ನಂತರ ಎಲ್ಲಿಗೆ ಹೋಗುತ್ತಾರೆ? ಏನಾಗುತ್ತಾರೆ?

ಯಾರಾದರೂ ಯೋಚಿಸಿದ್ದೇವಾ? ಈಗ್ಗೆ ಹತ್ತು ವರ್ಷಗಳ ಹಿಂದೆ ರ್ಯಾಂಕು ಬಂದ ಹುಡುಗ-ಹುಡುಗಿಯರೆಲ್ಲ ಏನಾದರು? ಪ್ರತಿ ವರ್ಷ ಬಾಲಕಿಯರದೇ ಮೇಲುಗೈ ಅಂತ ಪತ್ರಿಕೆಗಳಲ್ಲಿ ಇಪ್ಪತ್ತೆೈದು ವರ್ಷಗಳಿಂದ ಓದುತ್ತಲೇ ಇದ್ದೇವೆ. ಅವತ್ತು ಮೇಲುಗೈ ಸಾಧಿಸಿದ ಬಾಲಕಿಯರು ಇವತ್ತೆಲ್ಲಿದ್ದಾರೆ? ಯಾವ ರಂಗದಲ್ಲಿ? ಅವರ ಬುದ್ಧಿ ಶಕ್ತಿ ಕೇವಲ ಮಾರ್ಕು ತೆಗೆಯುವುದಕ್ಕೆ ಸೀಮಿತವಾಗಿತ್ತಾ? ಮಗ್ಗಿ ಬಾಯಿಪಾಠ ಮಾಡಿದ, ಮುದ್ದಾದ ಕೈ ಬರಹದ, ಅಗಾಧ ನೆನಪಿನ ಶಕ್ತಿಯುಳ್ಳ ಮಕ್ಕಳು ಸಹಜವಾಗೇ ರ್ಯಾಂಕು, ಡಿಸ್ಟಿಂಕ್ಷನ್ನು ತಂದುಕೊಳ್ಳುತ್ತಾರೆ. ಆದರೆ ಅದು ಬುದ್ಧಿವಂತಿಕೆಯಾ ? ಬುದ್ಧಿ ಶಕ್ತಿಯಾ? ನನಗೆ ಬಗೆಹರಿಯದ ಪ್ರಶ್ನೆಯಿದು. ಬುದ್ಧಿವಂತ ಹುಡುಗರಿಗೆ ಸುಲಭವಾಗಿ ಇಂಜಿನೀರಿಂಗು, ಮೆಡಿಕಲ್ಲು ಸೀಟು ಸಿಗುತ್ತದೆ. ಆದರೆ ಅವರು ಯಶಸ್ವೀ ಡಾಕ್ಟರುಗಳು ಇಂಜಿನೀಯರುಗಳೂ ಆಗಬೇಕೆಂದರೆ, ಅವರಿಗೆ ‘ಬುದ್ಧಿವಂತಿಕೆ’ ಇದ್ದರೆ ಸಾಲದು. ಬುದ್ಧಿಶಕ್ತಿ ಅಗತ್ಯವಾಗಿ ಬೇಕು.

ನನ್ನ ವಿಷಯವನ್ನೇ ತೆಗೆದುಕೊಳ್ಳಿ. ನಾನು ತುಂಬ ಬುದ್ಧಿವಂತ ವಿದ್ಯಾರ್ಥಿಯಾಗಿರಲಿಲ್ಲ. ಪತ್ರಿಕೋದ್ಯಮಕ್ಕೆ ಬಂದ ಮೇಲೆ ಕೈ ಹಿಡಿದದ್ದು ಬುದ್ದಿಶಕ್ತಿ. ಮ್ಯಾಥಮೆಟಿಕ್ಸ್‌ನಲ್ಲಿ ಎರಡೆರಡು ಸಲ ಪಾಸಾದವನು ನಾನು. ಆದರೆ ನನ್ನ ಎಕನಾಮಿಕ್ಸು ಪಕ್ಕಾ. ನನ್ನಲ್ಲಿ ಕ್ರಿಯೇಟಿವ್‌ ಲಾಜಿಕ್‌ ಕೆಲಸ ಮಾಡುತ್ತದೆ. ಮ್ಯಾಥಮೆಟಿಕಲ್‌ ಲಾಜಿಕ್‌ ಕೈ ಕೊಡುತ್ತದೆ. ಒಬ್ಬ ಒಳ್ಳೆಯ ಟೈಪಿಸ್ಟು, ಒಳ್ಳೆಯ ಹಾರ್ಮೋನಿಯಂ ವಾದಕನಾಗುವುದು ಸಾಧ್ಯವಿಲ್ಲ. ಎರಡೂ ಬೆರಳ ತುದಿಯ ಅಪ್ಪಣೆಗಳನ್ನೇ ಬೇಡೋದು.

ಹೀಗಿರುವಾಗ, ನಾವು ವರ್ಷಕ್ಕೊಮ್ಮೆ ರಿಜಲ್ಟು ಬಂದಾಗಲೆಲ್ಲ ಈ ಬುದ್ಧಿವಂತ ಹುಡುಗ ಹುಡುಗಿಯರನ್ನು ವಿಪರೀತ ಮೆರೆಸುತ್ತೇವೇನೋ ಎಂಬುದು ನನ್ನ ತಕರಾರು. ಹೋಗಲಿ, ಮೆರೆಸಿದ ಹುಡುಗರು ಮುಂದೇನಾಗುತ್ತಾರೆ ಅಂತ ಒಂದು track ಇಡುತ್ತೇವಾ? ಅದೂ ಇಲ್ಲ. ತುಂಬ ಮಾರ್ಕು ತಂದ ಒಬ್ಬ ಬಡ ಹುಡುಗಿಯ ಬಗ್ಗೆ ಬರೀತೇವೆ. ಟೆಲಿವಿಷನ್ನುಗಳಲ್ಲಿ ತೋರಿಸುತ್ತೇವೆ. ಅಂಥವರಿಗೆ ನೆರವಾಗಿ ಅಂತಲೂ ಅಪೀಲ್‌ ಮಾಡುತ್ತೇವೆ. ಆ ನೆರವು ಕೆಲವು ಸಲ ಪ್ರವಾಹದಂತೆ ಹರಿದು ಬರುತ್ತದೆ. ಅದನ್ನು ಮಾನಿಟರ್‌ ಮಾಡುತ್ತೇವಾ? ಇಲ್ಲ. ಐದು ವರ್ಷಗಳ ನಂತರ ಆ ಹುಡುಗಿ ಏನಾದಳು ಅಂತ ಯಾರಿಗೂ ಗೊತ್ತಿರುವುದಿಲ್ಲ. ಯಾವ ಸಮಾಜ ಬುದ್ಧಿವಂತ ಮಕ್ಕಳ ಬಗ್ಗೆ ನಿರ್ಲಕ್ಷ್ಯದಿಂದಿರುತ್ತದೋ, ಆ ಸಮಾಜದ ಕೈಗೆ ಸಮೃದ್ಧ ಬೆಳೆ ಬರುವುದಿಲ್ಲ.

ಮೊದಲನೆಯದಾಗಿ, ನಾವು ಈ ಮಾರ್ಕು ತರಬಲ್ಲ ಬುದ್ಧಿವಂತ ಮಕ್ಕಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಅವರ ಮುಂದಿನ ವ್ಯಾಸಂಗ, ಅದಕ್ಕೆ ಬೇಕಾದ ಸವಲತ್ತು, ಕೌನ್ಸಿಲಿಂಗ್‌, ಪುಸ್ತಕ, ಬಟ್ಟೆ ಇವುಗಳನ್ನು ಒದಗಿಸಲಿಕ್ಕೊಂದು ವ್ಯವಸ್ಥೆ ಮಾಡಬೇಕು. ಅವರ ಪ್ರತಿವರ್ಷದ ಕಾರ್ಯಕ್ಷಮತೆ, ಬೆಳವಣಿಗೆಯ ಸಮಗ್ರತೆ, ಗುರಿ ತಲುಪುವಲ್ಲಿ ಅವರು ಮಾಡುತ್ತಿರುವ ಪ್ರಯತ್ನ -ಇವುಗಳನ್ನು track ಮಾಡಿ ಇಡುವಂತಹ ವ್ಯವಸ್ಥೆಯಾಂದು ಆಗಬೇಕು. ಒಬ್ಬ ತುಂಬ ಬುದ್ಥಿವಂತ ಹುಡುಗ, ಹೆಚ್ಚೆಂದರೆ ಒಬ್ಬ ಬುದ್ಧಿವಂತ ಇಂಜಿನಿಯರ್‌ ಆಗಬಲ್ಲ. ಅವರ ಮಟ್ಟಿಗಷ್ಟೆ ಅದು ಉಪಯುಕ್ತ. ಆದರೆ ಸಮಾಜಕ್ಕೆ, ದೇಶಕ್ಕೆ ಉಪಯೋಗವಾಗಬಲ್ಲವನಿಗೆ ಕ್ರಿಯಾಶೀಲ ಬುದ್ಧಿಶಕ್ತಿ ಬೇಕು. ಅದು ಮಾರ್ಕುತರಬಲ್ಲ ಬುದ್ಧಿವಂತಿಕೆಗಿಂತ ವಿಭಿನ್ನ ಮತ್ತು ಉತ್ಕೃಷ್ಟ. ಅಂಥ ಹುಡುಗ-ಹುಡುಗಿಯರು ಸವಲತ್ತಿಲ್ಲದೆ, ಸರಿಯಾದ ಸಲಹೆ ಸಿಗದೆ, ದಿಕ್ಕು choose ಮಾಡಿಕೊಳ್ಳಲಾಗದೆ ದಾರಿ ತಪ್ಪುತ್ತಿದ್ದಾರಾ? ಪ್ರತಿ ವರ್ಷ ನೂರಾರು ಮಕ್ಕಳು ತೊಂಬತ್ತೆೈದಕ್ಕೂ ಹೆಚ್ಚು ಮಾರ್ಕು ತರುತ್ತಾರೆ. ಅವರೆಲ್ಲ ಯಾಕೆ ಸಫಲ ಬುದ್ಧಿ ಶಕ್ತಿಯ ಕ್ರಿಯಾ ಶೀಲ ವ್ಯಕ್ತಿಗಳಾಗುತ್ತಿಲ್ಲ? ಈ ಬಗ್ಗೆ ಅಧ್ಯಯನ ಮಾಡುವಂತಹ ಯಾವ ವ್ಯವಸ್ಥೆಯೂ ಭಾರತದಲ್ಲಿ, at least ಕರ್ನಾಟಕದಲ್ಲಿ ಇಲ್ಲವೇ?ಯಾಕಿಲ್ಲ? ನಮ್ಮ ಹೈಸ್ಕೂಲು ಮೇಷ್ಟುಗಳು, ಪಿಯು ಕಾಲೇಜುಗಳವರು ಈ ಕೆಲಸ ಆರಂಭಿಸಿದರೆ -ವಿದ್ಯಾರ್ಥಿಗಳೇ ಮುಂದೆ ತಮ್ಮ data ಒದಗಿಸುವ ಜವಾಬ್ದಾರಿ ಹೊರುತ್ತಾರೆ. ಒಂದು ಸಲ ಈ ಕೆಲಸ streamline ಆಯಿತೆಂದರೆ, ಹಿರಿಯ ವಿದ್ಯಾರ್ಥಿಗಳಿಗೇನೇ ತಮಗಿಂತ ಚಿಕ್ಕವರ ಕುರಿತಾದ ವಿವರಗಳನ್ನು ಸಿದ್ಥಪಡಿಸುವ, ಅವರನ್ನು ಸಂಪರ್ಕಿಸುವ, guide ಮಾಡುವ ಜವಾಬ್ದಾರಿವಹಿಸಬಹುದು.

ನಮ್ಮಲ್ಲಿ ವಿದ್ಯಾರ್ಥಿವೇತನ ಪಡೆಯುವವರೆಲ್ಲರನ್ನೂ ನಿವೇದಿತಾ ಕರೆದು ಮಾತನಾಡಿಸಿ, guide ಮಾಡಿ, ಅವರ ಮಾರ್ಕ್ಸ್‌ ಕಾರ್ಡುಗಳನ್ನು ಪರಿಶೀಲಿಸಿ, ಮುಂದೇನು ಮಾಡ್ತೀರಿ ಅಂತ ಚರ್ಚಿಸುತ್ತಿರುತ್ತಾಳೆ. ಆ ಪೈಕಿ ಒಬ್ಬ ಹುಡುಗನನ್ನು ನನ್ನ ಕರ್ಣನ ಜವಾಬ್ದಾರಿಗೆ ಕೊಟ್ಟಿದ್ದೇವೆ. ಬೇರೇನಲ್ಲದಿದ್ದರೂ ಆ ವಿದ್ಯಾರ್ಥಿಗಳ ಬೇಕು-ಬೇಡಗಳನ್ನು ನನಗೆ ತಿಳಿಸುವಂತಹ ಚಿಕ್ಕ ವ್ಯವಸ್ಥೆಯಿದು. ಮೇಷ್ಟ್ರುಗಳು ಮನಸು ಮಾಡಿದರೆ ಈ ಕೆಲಸವನ್ನು ಜಿಲ್ಲಾ ಮಟ್ಟದಲ್ಲಿ ಮಾಡಬಹುದು. ಯಾವ ಸರ್ಕಾರದ ಹಂಗೂ ಬೇಕಿಲ್ಲ.

ಮೊನ್ನೆ ಮಂಡ್ಯದಲ್ಲಿ ಮಾತನಾಡುವಾಗ ಇದನ್ನೇ ಹೇಳಿದೆ. ಈಗ ರ್ಯಾಂಕು ಬಂದ ಹುಡುಗರಲ್ಲಿ ಒಬ್ಬ ಬಡವ, ಡಾಕ್ಟರಾಗುತ್ತೇನೆ ಅಂದರೆ ಅವನನ್ನು ವೈದ್ಯನನ್ನಾಗಿ ಮಾಡುವುದು ದಿವಂಗತ ಡಾ.ಬೆಸಗರಹಳ್ಳಿ ರಾಮಣ್ಣನವರ ಮಗ ರವಿಕಾಂತೇಗೌಡರಿಗೆ ಕಷ್ಟವಿಲ್ಲ. ಅಂಥ ಹುಡುಗರನ್ನು ಹುಡುಕಿಕೊಡುವುದೂ ನನಗೆ ಕಷ್ಟವಲ್ಲ. ವ್ಯಕ್ತಿಗತ ಮಟ್ಟದಲ್ಲಿ ಪ್ರಜ್ಞಾವಂತರಾದ ಪ್ರತಿಯಾಬ್ಬರೂ ಒಂದು ಅರ್ಹಮಗವನ್ನು educate ಮಾಡುತ್ತಲೇ ಇರುತ್ತಾರೆ. ಇದು ಹೆಗ್ಗಳಿಕೆಯ ಸಂಗತಿಯೇನಲ್ಲ. ಆದರೆ, ಇಡೀ ಸಮಾಜ (ಕಡೇ ಪಕ್ಷ ಹಣ ಮತ್ತು ಆಸಕ್ತಿ ಇರುವ ಜನ)ಇದನ್ನೊಂದು ಜವಾಬ್ದಾರಿ ಅಂತ ಅರಿತುಕೊಂಡು ಮಾಡಲು ನಿಂತರೆ ಒಳ್ಳೆಯದಲ್ಲವೆ? ಜಾತಿ ಸಂಬಂಧಿ ವಿದ್ಯಾರ್ಥಿ ವೇತನಗಳು, ಜಾತಿ ಸೀಮಿತ ಹಾಸ್ಟೆಲುಗಳು, ಮಠಗಳು ಮಾಡುವುದಕ್ಕಿಂತ ಹೆಚ್ಚು ಸಮರ್ಪಕವಾಗಿ, ವೈಜ್ಞಾನಿಕವಾಗಿ, ನ್ಯಾಯ ಬದ್ಧವಾಗಿ ಇಷ್ಟನ್ನು ನಾವು ಮಾಡಬಹುದೇನೋ?

ಈ ಮಧ್ಯೆ ಇಂಥದೊಂದು ಹುಳು ತಲೆ ಕೊರೆಯುತ್ತಿದೆ. ನಿಮ್ಮ ತಲೆಗೂ ಹಾಕಿದ್ದೇನೆ. ನಿಮ್ಮಲ್ಲಿ ಸಲಹೆಗಳಿದ್ದರೆ ಬರೆಯಿರಿ. ಹಣವಿದ್ದರೆ ಕಳಿಸಿಕೊಡಿ. ಅಥವಾ ಈ ವಿಚಾರಕ್ಕೆ ಸಂಬಂಧಿಸಿದಂತೆ ನೀವೇನು ಮಾಡಬಲ್ಲಿರಿ ಹೇಳಿ? ಏಕೆಂದರೆ, ಬಡವರ ಮಕ್ಕಳು ಯಾವ ಜಾತಿಗೂ ಸೇರಿದವರಲ್ಲ. ಬಡತನದ್ದೇ ಬೇರೆ ಜಾತಿಯಿರುತ್ತದೆ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X