ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್ಲಿಯ ತನಕ ಮತ್ತೆ ಮತ್ತೆ ಬಿಹಾರಗಳು ಸೃಷ್ಟಿಯಾಗುತ್ತಿರುತ್ತವೆ!

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಬಿಹಾರದಲ್ಲಿ, ಲಾಲೂ ಪ್ರಸಾದ್‌ ಯಾದವ್‌ ಸೋತಿದ್ದಾರೆ. ಪತ್ನಿ ರಾಬಡಿದೇವಿ ಗೆಲ್ಲುವ ಹೊತ್ತಿಗೆ ತೇಕು ಹತ್ತಿ ಬಿಟ್ಟಿತ್ತು. ಹದಿನೈದು ವರ್ಷ ಧಗಧಗಿಸಿದ ಲಾಲೂ ಲಾಟೀನು ಈ ಸಲ ಕಣ್ಣು ಮುಚ್ಚಿತು. ಗೆದ್ದಿರುವ, ರಾಜ್ಯವಾಳಲಿರುವ ನಿತೀಶ್‌ ಕುಮಾರ್‌ ಬಿಹಾರವನ್ನು ಮತ್ತೆ ಸ್ವಸ್ಥ, ಸ್ವಾಸ್ಥ್ಯಪೂರ್ಣ ರಾಜ್ಯವನ್ನಾಗಿ ಮಾಡುತ್ತೇನೆ ಅಂದಿದ್ದಾರೆ. ಮೊದಲ ಬಾರಿಗೆ ಹೈರಾಣಾದಂತೆ ಕಂಡ ಲಾಲೂ‘ನಿತೀಶ್‌ ನನ್ನ ತಮ್ಮ ನಿದ್ದ ಹಾಗೆ. ಅವರು ಕೆಲಸ ಮಾಡಲಿ. ಭ್ರಷ್ಟಾಚಾರ ತೊಡೆದು ಹಾಕಲಿ. ನನ್ನ ಸಹಕಾರ ನಾನು ಕೊಡುತ್ತೇನೆ’ ಅಂದಿದ್ದಾರೆ. ಬಿಹಾರದ ಜನಕ್ಕಿಂತ, ರಾಷ್ಟ್ರದ ಅಷ್ಟೂ ಮಾಧ್ಯಮಗಳು ಸಂಭ್ರಮಿಸಿದವು. ನಿತೀಶ್‌ ಗೆದ್ದುದಕ್ಕಲ್ಲ ; ಲಾಲೂ ಸೋತದ್ದಕ್ಕೆ!

ಇತಿಹಾಸವನ್ನು ನೀವು- ನಾವು ಮರೆತಿಲ್ಲವಾದರೆ, ಕೆಲವು ಘಟನೆಗಳು ಯಾಕೆ ಹೀಗಾಗುತ್ತವೆ ಅಂತ ನಮಗೇ ಅರ್ಥವಾಗುತ್ತ ಹೋಗುತ್ತವೆ. ನೀವು ಸ್ವಾತಂತ್ರ್ಯಪೂರ್ವ ಇತಿಹಾಸವನ್ನೇ ನೋಡಿ. ಬಿಳಿಯರ ವಿರುದ್ಧ ಪ್ರಚಂಡ ಚಳವಳಿಗಳು ಹುಟ್ಟಿದ್ದೇ ಬಿಹಾರದಲ್ಲಿ. ನಂತರ ಭಾರತವನ್ನು ಗಮನಿಸಿ ನೋಡಿ. ಬಿಹಾರದಿಂದ ಎದ್ದು ಬಂದಷ್ಟು ಪ್ರಖರ ರಾಜಕಾರಣಿಗಳು ಭಾರತದ ಹೃದಯಭಾಗವಾದ ಹಿಂದಿ landನ ಇತರೆ ರಾಜ್ಯಗಳಿಂದ ಬಂದಿಲ್ಲ. ಇವತ್ತಿಗೂ ಎಣಿಸಿ ನೋಡಿ: ಐಪಿಎಸ್‌ ಮತ್ತು ಐಎಎಸ್‌ ಅಧಿಕಾರಿಗಳಲ್ಲಿ ಬಿಹಾರಿಗಳ ಸಂಖ್ಯೆ ಬಲು ದೊಡ್ಡದು. ಹಾಗೇನೇ, ಪತ್ರಿಕೆಗಳನ್ನು ಗಮನಿಸಿ ನೋಡಿ. ಕಂಬಾಲಪಲ್ಲಿ ನರಮೇಧದಂತಹ ಘಟನೆ ನಡೆದಾಗ ‘ಇದೇನು ನಾಗರಿಕ ರಾಜ್ಯವೋ? ಬಿಹಾರವೋ...’ ಅಂತ ಬರೆಯುವ ರೂಢಿ ನಮ್ಮಲ್ಲಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರತಿ ಜೋಕೂ ಲಾಲೂ ಹೆಸರಿಗೆ ತಗುಲಿಕೊಂಡಿರುತ್ತದೆ.

(ಇತ್ತೀಚೆಗೆ ಎಲ್ಲರ ಮೊಬೈಲುಗಳಿಗೂ ‘ನೆಲ್ಸನ್‌ ಮಂಡೇಲಾ ಅಂದರೆ ದೇವೇಗೌಡ. ಏಕೆಂದರೆ, ಆತ ನೆಲ್‌ಸನ್‌-ಮಣ್ಣಿನ ಮಗ ! ಮಂಡೆ ಇಲ್ಲಾ... ಅಂದರೆ ಬುದ್ದಿ ಇಲ್ಲ’ ಎಂಬಂತಹ third rated ಜೋಕು ಅದು. ಇಂಥವು ಮೇಲು ನೋಟಕ್ಕೆ ತಮಾಷೆಗಳಂತೆ ಕಂಡರೂ ಇವುಗಳ ಹಿಂದೆ ನಾರಾಯಣ ಮೂರ್ತಿ ಅವರ ಛೇಲಾ ಮನಸುಗಳು ಕೆಲಸ ಮಾಡಿರುತ್ತವೆ. ಇನ್ಫೋಸಿಸ್‌ಗೆ ಗೌಡರು ಹಾಕಿದ ಛೀಮಾರಿಯನ್ನು ಸಹಿಸಲಾಗದ ಮನಸುಗಳು ಕೆಲಸ ಮಾಡಿರುತ್ತವೆ. ಈ ಮಾತನ್ನು ಎಲ್ಲರೂ ಒಪ್ಪದಿರಬಹುದು. ದೇವೇಗೌಡರನ್ನು ನೀವು ದುಷ್ಟ- ಭ್ರಷ್ಟ- ಕರಟಕ- ಪುತ್ರ ವ್ಯಾಮೋಹಿ- ಬೇಕಾದ್ದು ಅನ್ನಿ. ಆದರೆ ಆತ ಬುದ್ಧಿಹೀನ ಅಂತ ಅನ್ನಿಸಿಕೊಳ್ಳುವ ಮನುಷ್ಯ ಖಂಡಿತ ಅಲ್ಲ. )

Lalu Prasad Yadavಲಾಲೂ ಆಡಳಿತ, ನಂತರದ ರಾಬಡಿ ಆಡಳಿತ, ಅಗಾಧ ಭ್ರಷ್ಟಾಚಾರ, ಜೈಲು ಸೇರಿದರೂ ತೀರದ ಭಂಡತನ- ಇವೆಲ್ಲ ಇವೆಯಲ್ಲ ? ಹದಿನೈದು ವರ್ಷಗಳಲ್ಲಿ ಒಬ್ಬ ಪ್ರಖರ ರಾಜಕಾರಣಿ ತನ್ನ ಮೈಗೆ ತಾನೇ ಬಳಿದುಕೊಂಡ ಮಸಿಯ ಪಟ್ಟಿಗಳು. ಅದಕ್ಕಾಗಿ ಲಾಲೂ ಕರಾರುವಾಕ್ಕಾದ ರೀತಿಯಲ್ಲಿ ದಂಡಿಸಲ್ಪಟ್ಟಿದ್ದಾರೆ.

ಆದರೆ ಹದಿನೈದು ವರ್ಷಗಳ ಹಿಂದಿನ ಪರಿಸ್ಥಿತಿ ನೆನಪು ಮಾಡಿಕೊಳ್ಳಿ. ಇವತ್ತು ಬಿಹಾರದಲ್ಲಿ ಅರಾಜಕತೆ ಇದೆ, ಪಾತಕಿಗಳ ಅಬ್ಬರವಿದೆ ಅಂತ ಮಾತನಾಡುವವರು, ಇದೇ ಬಿಹಾರದಲ್ಲಿ ಒಬ್ಬೇ ಒಬ್ಬ ದಲಿತ ನೀಟಾಗಿ ನಿಂತು ತನ್ನ ಮನೆಯಿಂದ ಮತಗಟ್ಟೆಗೆ ನಡೆದು ಬಂದು ಓಟು ಹಾಕುವುದು ಸಾಧ್ಯಾವಿತ್ತಾ ? ನಾವು-ನೀವಿನ್ನೂ ಬೆಲ್ಚಿ ಹತ್ಯಾಕಾಂಡವನ್ನು ಮರೆತಿಲ್ಲವಾದರೆ, ಬಿಹಾರದ ದಲಿತ ಅದೆಂಥ ಪಶು ಸಮಾನ, ಕ್ರಿಮಿ ಸಮಾನ ಬದುಕು ಬದುಕುತ್ತಿದ್ದ ಎಂಬುದನ್ನು ನೆನಪಿಸಿಕೊಳ್ಳಲು ಸಾಧ್ಯ. ಅಂಥ ಬಿಹಾರದಲ್ಲಿ, ಗದಗುಟ್ಟಿಕೊಂಡು ಮನೆಯಲ್ಲಿ ಕುಳಿತ ದಲಿತನನ್ನು ಮತಗಟ್ಟೆಯ ತನಕ ಕರೆತಂದವನು ಲಾಲೂ ಪ್ರಸಾದ್‌ ಯಾದವ್‌. ದುಷ್ಟ ಭೂಮಿಹಾರ್‌ ಜಮೀಂದಾರರ ಕೈಲಿದ್ದ ಬ್ಯಾಲೆಟ್‌ ಬುಕ್‌ ಕಿತ್ತು ಮೇಜಿನ ಮೇಲಿಡಿಸಿ, ದಲಿತರ ಕೈಲಿ ಮತದಾನ ಮಾಡಿಸಿದವನು ಲಾಲೂ. ಬಿಹಾರದ ಇತಿಹಾಸ ಇದೊಂದು ಕಾರಣಕ್ಕಾಗಿ ಲಾಲೂ ಪ್ರಸಾದ್‌ ಯಾದವ್‌ನನ್ನು ಯಾವತ್ತಿಗೂ ಮರೆಯಲಾರದು.

ಮನೆತುಂಬ ಮಕ್ಕಳು, ಅನ್‌ಫಡ್‌ ಹೆಂಡತಿ, ನಮ್ಮಂತೆಯೇ ಶೂದ್ರ, ಕೆಳ ಮಧ್ಯಮ ವರ್ಗದ ಒರಟ- ಅಂಥವನು ಮುಖ್ಯಮಂತ್ರಿಯಾಗುತ್ತಾನೆ ಅಂದರೆ ಇಡೀ ಬಿಹಾರದ ಶೂದ್ರ ಸಮೂಹ ಕುಣಿದು ಕುಪ್ಪಳಿಸಿ ಮತ ಹಾಕಿತು.‘ಲಾಲೂ ರಾಜ್‌’ ಆರಂಭವಾಯಿತು. ಹದಿನೈದು ವರ್ಷಗಳ ಹಿಂದೆ ಇದೇ ಮಾಧ್ಯಮ ಪ್ರಪಂಚ ಲಾಲೂವಿನ ಸುತ್ತ ದೊಂದಿ ಹಿಡಿದುಕೊಂಡು ಕುಣಿಯಿತು. ಆತನ ಒರಟುತನ, ಭಿನ್ನ ಶೈಲಿ, ಕಹಿಕಹಿ ಮಾತು, ಕೆಲವು ಹುಚ್ಚಾಟಗಳು-ಎಲ್ಲವೂ ಭಯಂಕರ ಸುದ್ದಿಯಾದವು.

ಆದರೆ ಬಿಹಾರದ ಆ ಮಹಾಶೂದ್ರ ದುಷ್ಟನಾದ. ಭ್ರಷ್ಟನಾದ. ಭೂಮಿಹಾರರ ವಿರುದ್ಧ ಏನೇ ಅನ್ಯಾಯ ನಡೆದರೂ ಅದು ಶೂದ್ರ ನ್ಯಾಯವೆಂದ. ಅಷ್ಟೇ ಅಂದಿದ್ದಿದ್ದರೆ, ಕಡೇ ಪಕ್ಷ ಬಿಹಾರದ ಶೂದ್ರರಾದರೂ ಲಾಲೂರನ್ನು ಪ್ರೀತಿಸುತ್ತಿದ್ದರು. ಆದರೆ ಲಾಲೂ, ಯಾರ ವಿರುದ್ಧ ಯಾವುದೇ ಅನ್ಯಾಯ ನಡೆದರೂ, ಅದು ಕೂಡ ಶೂದ್ರ ನ್ಯಾಯವೇ ಅಂದ. ಅರಾಜಕತೆಯೆಂಬುದು ಆಕಳಿಸಿ ಎದ್ದು ನಿಂತದ್ದೇ ಆವಾಗ. ಒಂದು ಜಾತಿಯ, ಕೋಮಿನ, ಗುಂಪಿನ ಅರಾಜಕತೆಯನ್ನು ನೀವು ‘ಶೂದ್ರನ್ಯಾಯ’ವೆಂಬ ಕಾರಣಕ್ಕಾಗಿ ಸಹಿಸಿಕೊಂಡರೆ, ಅದು ಅಲ್ಲಿಗೇ ನಿಲ್ಲುವುದಿಲ್ಲ.

ಲಾಲೂವಿನ ಅರಾಜಕತೆ ಉಳಿದವರ ಜೊತೆಯಲ್ಲಿ ಅವನನ್ನೇ ನಂಬಿದ ಶೂದ್ರರನ್ನು ತಿಂದಿತ್ತು. ದಹಿಸಿ ಹಾಕಿತ್ತು.

ನೂರು ಬೆಲ್ಚಿಗಳಾದವು. ಬಿಹಾರ್‌ ಸರ್ವನಾಶವಾಯಿತು. ಅಷ್ಟು ಹೊತ್ತಿಗಾಗಲೇ ತನ್ನ ಎಲ್ಲ ಕುಕೃತ್ಯಗಳನ್ನೂ ‘ ಹುಚ್ಚಾಟ’ಗಳ ಮರೆಯಲ್ಲಿ ಸಮರ್ಥಿಸಿಕೊಳ್ಳುವುದು ಲಾಲೂವಿಗೆ ಅಭ್ಯಾಸವಾಗಿ ಹೋಗಿತ್ತು.

ಬಿಹಾರಕ್ಕೂ-ಕಾಶ್ಮೀರಕ್ಕೂ ಇರುವ ಒಂದೇ ಒಂದು ವ್ಯತ್ಯಾಸವನ್ನು ಗಮನಿಸಿ. ಇಲ್ಲಿ ಶೂದ್ರ ಶಕ್ತಿಯ ಸಂಕೇತವಾದ ಲಾಲೂ ಪ್ರಸಾದ್‌ ಯಾದವ್‌ಗೆ ರಾಜ್ಯಾಧಿಕಾರ ಸಿಕ್ಕಿತು. ಇಲ್ಲಿ ಕಾಶ್ಮೀರದಲ್ಲಿ ಮತಾಂಧ, ದೇಶದ್ರೋಹಿ ಮುಜಾಹಿದೀನ್‌ರ ಕೈಗೆ ಕಾಶ್ಮೀರಿ ಪಂಡಿತರು ಸಿಕ್ಕರು. ಇಲ್ಲಿ ‘ತುಳಿಯಲ್ಪಟ್ಟವರು’ಎಂಬ ಕಾರಣಕ್ಕೆ ಶೂದ್ರ ದಬ್ಬಾಳಿಕೆಯನ್ನು ಬೆನ್ತಟ್ಟಲಾಯಿತು. ಅಲ್ಲಿ ಅವರು ‘ಅಲ್ಪ ಸಂಖ್ಯಾತರು’ ಮತ್ತು ಯಾವ ಕ್ಷಣದಲ್ಲಾದರೂ ಪಾಕಿಸ್ತಾನಕ್ಕೆ ಒಲಿದುಬಿಡಬಲ್ಲ ‘ಬೇಲಿ ಮೇಲಿನ ಜನ’ ಎಂಬ ಕಾರಣಕ್ಕೆ ಅವರ ಸ್ವೇಚ್ಛಾಚಾರವನ್ನು ಸಹಿಸಿಕೊಳ್ಳಲಾಯಿತು. ಪರಿಣಾಮ ಆಗಿದ್ದು ಒಂದೇ ತೆರನಾಗಿ. ಬಿಹಾರದ ಶೂದ್ರ ಬಲಿಷ್ಠರು ತಮ್ಮದೇ ಜಾತಿಯವರನ್ನು ಸೇರಿಸಿ ಎಲ್ಲರನ್ನೂ ಹುರಿದು ತಿಂದರು. ಕಾಶ್ಮೀರದಲ್ಲಿ ಪಂಡಿತರನ್ನೆಲ್ಲ ಕೊಂದು ಊರು ಬಿಟ್ಟು ಓಡಿಸಿದ ಮೇಲೆ ಅಲ್ಲೇ ಇರುವ ನಿರ್ಗತಿಕ ಮುಸಲ್ಮಾನರನ್ನು ಹೊಡೆದು ಕೊಲ್ಲುತ್ತಿದ್ದಾರೆ. ಈಗ ಹೇಳಿ, ವ್ಯತ್ಯಾಸವೆಲ್ಲಿದೆ ?

ಯಾವ ನೆಲದಲ್ಲಿ ಕಾನೂನಿನ ಭಯ ಹೊರಟುಹೋಗುತ್ತದೆಯೋ ಆ ನೆಲ ಬಿಹಾರವಾಗುತ್ತದೆ, ಕಾಶ್ಮೀರವಾಗುತ್ತದೆ. ಕಳೆದ ಒಂದೂವರೆ ದಶಕಗಳಿಂದಲೂ ಭಾರತ ಸರ್ಕಾರ, ಪೊಲೀಸು, ಸೈನ್ಯ ಈ ಎರಡು ರಾಜ್ಯಗಳಲ್ಲಿ ತಿಪ್ಪರಲಾಗ ಹಾಕಿದರೂ ಕಾನೂನು ಸುವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿಲ್ಲ. ಅದೇ ಪಂಜಾಬದಲ್ಲಿ ಉಗ್ರವಾದಿ ಚಳವಳಿ ಈ ಎರಡೂ ರಾಜ್ಯಗಳಿಗಿಂತ ಬಿರುಸಾಗಿತ್ತು. ಅಲ್ಲಿ ಇವರಪ್ಪನಂತಹ ಒರಟರಿದ್ದರು.

ಆದರೆ ಸೈನ್ಯ, ಸೈನ್ಯಕ್ಕಿಂತ ಹೆಚ್ಚಾಗಿ ಪಂಜಾಬದ ಪೊಲೀಸರೇ ಖಲಿಸ್ತಾನಿ ಚಳವಳಿಯನ್ನು ಸಣ್ಣಗೆ ಕಟೆದು, ಕತ್ತರಿಸಿ, ಹುಗಿದು ಹಾಕಿ ಬಿಟ್ಟರು. ಯಾಕೆ ಹೇಳಿ? ಯಾಕೆಂದರೆ, ಅಲ್ಲಿ ಚಳವಳಿಗಿಳಿದ ಸಿಖ್‌ ಅಲ್ಪ ಸಂಖ್ಯಾತನಾಗಿರಲಿಲ್ಲ. ಶೂದ್ರನಾಗಿರಲಿಲ್ಲ. ಅವನನ್ನು ಕೇವಲ ಪಾತಕಿಯನ್ನಾಗಿ, ಟೆರರಿಸ್ಟನನ್ನಾಗಿ ನೋಡಲು ಸಾಧ್ಯವಾಯಿತು. ಪಾಕಿಸ್ತಾನದಿಂದ ಬಂದೂಕು ತಂದರೆ, ಗಡಿ ದಾಟುವುದರೊಳಗಾಗಿ ಕೊಂದು ಮಲಗಿಸುತ್ತಿದ್ದರು ಪೊಲೀಸರು. ಸಿಖ್ಖರ ಗುರು ದ್ವಾರಗಳಿಗೇ ಹೊಕ್ಕು, ಟೆರರಿಸ್ಟುಗಳನ್ನು ಹೊರಕ್ಕೆಳೆದು ಕೊಲ್ಲಲಾಯಿತು. ಪುಂಡಾಟಿಕೆಯ ದಮನಕ್ಕೆ ಅಂತ ನಿಂತದ್ದು ಕೇವಲ ಪೊಲೀಸರು! ಆ ಪೊಲೀಸು ಬ್ರಾಹ್ಮಣ ಪೋಲೀಸಲ್ಲ, ಶೂದ್ರ ಪೊಲೀಸಲ್ಲ, ಯಾದವ ಪೊಲೀಸಲ್ಲ, ಮುಸಲ್ಮಾನ ಪೊಲೀಸಲ್ಲ. ಕೆ.ಪಿ.ಎಸ್‌.ಗಿಲ್‌ ಎಂಬ ಮನುಷ್ಯ ಇಡೀ ಪಂಜಾಬದ ಮೇಲೆ ಕಬ್ಬಿಣದ ಕೈಯಿಟ್ಟು ಉಗ್ರವಾದವನ್ನು ಹೊಸಕಿ ಹಾಕಿದ. ಪಂಜಾಬ್‌ ತೆಪ್ಪಗಾಗಿ ಹೋಯಿತು.

ಹಾಗೆ ಬಿಹಾರ್‌ ತೆಪ್ಪಗಾಗುವುದಿಲ್ಲ. ಇಷ್ಟು ದಿನ ಅಲ್ಲಿ ಯಾದವ ಕ್ರೌರ್ಯ ಸಾಗಿತ್ತು. ಈಗ ನೋಡುತ್ತಿರಿ. ಭೂಮಿ ಹಾರ್‌ ಕ್ರೌರ್ಯ ಹೆಡೆಯೆತ್ತುತ್ತದೆ. ಮುಖ್ಯಮಂತ್ರಿ ನಿತೀಶ್‌ ಸಜ್ಜನ ಮನುಷ್ಯ. ಆದರೆ ಜಾತಿಗಳಿಗೆ ಸಜ್ಜನಿಕೆ ಇರುವುದಿಲ್ಲ. ಆತ ಭೂಮಿಹಾರರ ಅಡಿಯಾಳಾಗಿ ಕೆಲಸ ಮಾಡಲೇಬೇಕು. ಹದಿನೈದು ವರ್ಷಗಳ ಶೂದ್ರ ನ್ಯಾಯ, ಶೂದ್ರ ಕೋಪಕ್ಕೆ ಈಗ ಭೂಮಿಹಾರ್‌ ಕ್ರೌರ್ಯ ಉತ್ತರ ಹೇಳುವುದನ್ನು ಸಹಿಸಿ ಸುಮ್ಮನಿರಬೇಕು.

ಅರಾಜಕತೆ ಎಂಬುದು ಕೂಡ ಬಲು ವಿಚಿತ್ರವಾದ ಸಂಗತಿಯೇ. ಚಳವಳಿಗೆ ನಿಂತ ಕಾರ್ಮಿಕರೋ, ರೈತರೋ, ನಿರುದ್ಯೋಗಿಗಳೋ ಹಿಂಸಾಚಾರಕ್ಕಿಳಿದರೆ ‘ಇರಲಿ ಬಿಡಿ, ನೊಂದ ಜನ. ಉಗ್ರವಾಗಿ ಪ್ರತಿಭಟಿಸುತ್ತಿದ್ದಾರೆ ಅಷ್ಟೇ!’

ಅನ್ನುತ್ತೇವೆ. ಅವರನ್ನು ಪೊಲೀಸರು ಬಡಿದರೆ ‘ಛೇ, ದಲಿತರ ಮೇಲೆ, ದೀನರ ಮೇಲೆ ಲಾಠಿ ಬೀಸೋಕೆ ಮನಸಾದರೂ ಹೇಗೆ ಬಂತು?’ ಅನ್ನುತ್ತೇವೆ. Human rights ಅಂತ ಮಾತಾಡುತ್ತೇವೆ. ಬಡಿದ ಪೊಲೀಸನ ಜಾತಿ ಯಾವುದು ಅಂತ ತನಿಖೆ ಮಾಡುತ್ತೇವೆ. ಬಡಿದ ಪೊಲೀಸನ ಜಾತಿ ಯಾವುದು ಅಂತ ತನಿಖೆ ಮಾಡುತ್ತೇವೆ. ಅದೇ ಹಿಂಸಾಚಾರ ಹದಿನೈದು ದಿನ ಮುಂದುವರೆಯಲಿ ? ರೈಲು-ಬಸ್ಸು ನಿಂತು ಹೋಗಲಿ? ಹಾಲು-ಔಷಧಿ ಸಿಗದಂತಾಗಲೀ?‘ ಸೈನ್ಯ ಕರೆಸ್ರಿ...ನಮ್ಮ ದೇಶಕ್ಕೆ ಮಿಲಿಟ್ರಿ ರೂಲೇ ಸರಿ’.. ಅನ್ನುತ್ತೇವೆ! ನಾವೇ.

ಹೀಗೆ ಯಾಕಾಗುತ್ತದೆಯೆಂದರೆ, ಕಾನೂನಿನ ಮುರಿಯುವಿಕೆ ಎಂಬುದು ನಮ್ಮ ದೃಷ್ಟಿಯಿಂದ ಎಲ್ಲ ಸಲವೂ ಮಹಾಪಾಪವಲ್ಲ.‘ಬಡವ ಬ್ರೆಡ್ಡು ಕದ್ದರೆ ತಪ್ಪೇನಿದೆ’ ಅನ್ನುತ್ತೇವೆ.‘ಎಜುಕೇಶನ್‌ ಇಲ್ಲ ನೋಡೀ, ಅದಕ್ಕೋಸ್ಕರ ಮುಸ್ಲಿ ಮ್ಸು ತುಂಬ ಜನ ಕ್ರಿಮಿನಲ್ಸ್‌ ಆಗ್ತಾರೆ’ಅನ್ನುತ್ತೇವೆ.‘ಅಲ್ಪ ಸಂಖ್ಯಾತರಿಗೆ ಒಂದು ಅಭದ್ರತೆ ಇರುತ್ತೆ. ಅವರಿಗೊಂದು ಮಾರ್ಜಿನ್‌ ಕೊಡಬೇಕಪ್ಪ ’ಅನ್ನುತ್ತೇವೆ. ಎಲ್ಲವೂ ಅನುಕೂಲ ಸಿಂಧು ಸಿದ್ಧಾಂತಗಳೇ!

ಮುರಿದು ನಾಶವಾಗುತ್ತಿರುವುದು ಈ ನೆಲದ ಕಾನೂನು ಎಂಬುದು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಬಿಹಾರದಲ್ಲಿ, ಕಾಶ್ಮೀರದಲ್ಲಿ ಶಾಶ್ವತವಾಗಿ ಅರಾಜಕತೆ ಸ್ಥಾಪಿತವಾದದ್ದೇ ಹಾಗೆ... ಬಲಹೀನ ಸರ್ಕಾರಗಳು, ಒಂದು ಜಾತಿಯವರ ಸರ್ಕಾರಗಳ, ಕೃಪಾಪೋಷಿತ ಸರ್ಕಾರಗಳು, ವ್ಯಕ್ತಿ ಕೇಂದ್ರಿತ ಸರ್ಕಾರಗಳು ಎಲ್ಲೆಲ್ಲಿ ಅಸ್ತಿತ್ವಕ್ಕೆ ಬರುತ್ತವೋ ಅಲ್ಲೆಲ್ಲ ಬಿಹಾರಗಳು, ಕಾಶ್ಮೀರಗಳು ಸೃಷ್ಟಿಯಾಗುತ್ತ ಹೋಗುತ್ತವೆ. ಒಂದು ಜಾತಿಯ ಕೈಗೆ ಅಧಿಕಾರ ಕೊಡುವುದಿಲ್ಲ, ಒಂದು ಜಾತಿಯವರನ್ನು ಓಲೈಸುವುದಿಲ್ಲ. ಅಂತ ಯಾವತ್ತು ಮತದಾರ ನಿರ್ಧರಿಸುತ್ತಾನೋ: ಅವತ್ತು ಭಾರತದಲ್ಲಿ ಬಿಹಾರಗಳ ಸೃಷ್ಟಿ ಇಲ್ಲವಾದೀತು.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X