ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಮಗಳು ಏನಾಗಬೇಕೂಂತ ನೀವು ನಿರ್ಧರಿಸಿದ್ದೀರಾ?

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ನಿಮ್ಮ ಮಗಳು ಏನಾಗಬೇಕು ಅಂತ ನೀವು ನಿರ್ಧರಿಸಿದ್ದೀರಾ? ಅವಳಿಗೆ ಈಗಾಗಲೇ ಐದು ವರ್ಷಗಳಾಗಿದ್ದು, ಅವಳೇನಾಗಬೇಕು ಅಂತ ನೀವಿನ್ನೂ ನಿರ್ಧರಿಸಿಲ್ಲವಾದರೆ- ನೀವು ಬೇಜವಾಬ್ದಾರಿ ತಂದೆ.

‘ನನ್ನ ಮಗಳನ್ನು ಒಳ್ಳೆಯ ಕನ್ನಡ, ಒಳ್ಳೆಯ ಇಂಗ್ಲಿಷು ಕಲಿಸುವ ಶಾಲೆಗೆ ಸೇರಿಸಿದ್ದೇನೆ’ ಅಂತ ನೀವು ಉತ್ತರಿಸಿದರೆ, ನೀವು ಅರ್ಧ ಜವಾಬ್ದಾರಿಯುಳ್ಳ ತಂದೆ.

‘ ಈಗ ಚಂದನೆಯ ಕನ್ನಡ, ಇಂಗ್ಲಿಷು ಕಲಿಯುತ್ತಿದ್ದಾಳೆ. ಪಿಯುಸಿಗೆ ಬರುವ ಹೊತ್ತಿಗೆ ಫ್ರೆಂಚ್‌ ಕ್ಲಾಸಿಗೆ ಸೇರಿಸಲು ವ್ಯವಸ್ಥೆ ಮಾಡಿದೀನಿ. ಅವಳು ಗ್ರಾಜುಯೇಟ್‌ ಆಗೋದರೊಳಗಾಗಿ ಜರ್ಮನ್‌ ಮತ್ತು ರಷ್ಯನ್‌ ಕೂಡ ಕಲಿತಿರುತ್ತಾಳೆ. ಮದುವೆ-ವರದಕ್ಷಿಣೆ- ಆಸ್ತಿ ಅಂತೆಲ್ಲ ನಾನು ತಲೆ ಕೆಡಿಸಿಕೊಳ್ಳೋದಕ್ಕೆ ಹೋಗಿಲ್ಲ’ ಅಂತ ನೀವು ಉತ್ತರಿಸಿದರೆ, ನೀವು ಅತ್ಯಂತ ಬುದ್ಧಿವಂತ, ಜವಾಬ್ದಾರಿಯುತ ಮನುಷ್ಯ. ಬದಲಾಗುವ ಕಾಲದೊಂದಿಗೆ ಹೆಜ್ಜೆ ಹಾಕಬೇಕು ಎಂಬುದು ಹಳೇ ಮಾತು. ನಾಳೆ ಈ ಕಾಲವೆಂಬುದು ಹೇಗೆ ಬದಲಾಗಿ ಎಲ್ಲಿಗೆ ಒಯ್ದು ನಿಲ್ಲಿಸಬಹುದು ಅಂತ ಮೊದಲೇ ಯೋಚಿಸಿ, ಆ ಜಾಗಕ್ಕೆ ಹೋಗಿ ನಿಲ್ಲಲು ಇವತ್ತೇ ಸಿದ್ಧತೆ ಮಾಡಿಕೊಂಡು ಬಿಡುವುದು ಇವತ್ತಿನ ಅವಶ್ಯಕತೆ.

ನೀವು ನಂಬಲಿಕ್ಕಿಲ್ಲ : ಜಾಗತೀಕರಣದ ಗಾಳಿ ಬೀಸುತ್ತಿದ್ದಂತೆಯೇ ಭಾರತದ ಇಂಜಿನಿಯರುಗಳ ಪೈಕಿ ಕೆಲವೇ ಕೆಲವರು ಚೀನೀ ಭಾಷೆ ಕಲಿತರು. ಪೌರ್ವಾತ್ಯ ದೇಶಗಳ ಪೈಕಿ ಜಾಗತೀಕರಣದ ಕಡೆಗೆ ಕೈ ಚಾಚುವ ಮೊಟ್ಟ ಮೊದಲ ದೇಶವೇ ಚೈನಾ ಅಂತ ಅವರಿಗೆ ಹೇಳಿದವರ್ಯಾರು? ಅವರು ಇವತ್ತು ಚೀನದಿಂದ ಮೂಟೆಗಳಲ್ಲಿ ದುಡ್ಡು ತರುತ್ತಿದ್ದಾರೆ.

ಒಬ್ಬ ಮನುಷ್ಯ ಇಂಗ್ಲಿಷು, ಜರ್ಮನ್‌, ರಷಿಯನ್‌ ಮತ್ತು ಚೀನೀ ಭಾಷೆಗಳನ್ನು ಕಲಿತು ಬಿಟ್ಟರೆ ಜಗತ್ತಿನ ಯಾವ ಮೂಲೆಯಿಂದ ಬೇಕಾದರೂ ಪತ್ರಿಕೆಗಳಿಗೆ ವರದಿ ಮಾಡಬಲ್ಲ ಅಂತ ಅರ್ಥ ಮಾಡಿಕೊಂಡವರು ಕೆಲವೇ ಕೆಲವು ಪತ್ರಕರ್ತರು. ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ event ನಡೆಯಲಿ: ಅಲ್ಲಿಗೆ ಹಾಜರಾಗುವವರು ಅವರೇ ಬೆರಳೆಣಿಕೆಯ ಮಂದಿ. ಇಂಗ್ಲಿಷೊಂದೇ ಕಲಿತರೆ ನೀವು ಜಾಗತಿಕ ಮಟ್ಟದ ಪತ್ರಿಕೋದ್ಯಮದಲ್ಲಿ ಏನೂ ಸಾಧಿಸಲಾರಿರಿ ಅಂತ ಉಳಿದವರಿಗಿಂತ ತುಂಬ ಮುಂಚೆ ಅರ್ಥ ಮಾಡಿಕೊಂಡ ಜಾಣರವರು.

ತಳ್ಳುಗಾಡಿಯ ಮೇಲೆ ಗ್ಲಾಸಿನ ಫ್ರೇಮು ಕಟ್ಟಿದ ಅದರಲ್ಲಿ ಕರಿದ ಆಲೂಗಟ್ಟೆಯ ಉಪ್ಪೇರಿ ಮಾರುತ್ತಿದ್ದ ಬಡಪಾಯಿ ಶೆಟ್ಟರಿಗೆ ಇನ್ನು ಕೆಲವೇ ದಿನಗಳಲ್ಲಿ ಅಂಕಲ್‌ ಚಿಪ್ಸ್‌ ಬಂದು ತನ್ನ ತಳ್ಳುಗಾಡಿ ಮಗುಚಿ ಬೀಳಲಿದೆಯೆಂಬುದು ಗೊತ್ತಾಗಿರಲಿಲ್ಲ. ನಂಜನಗೂಡು ಹಲ್ಲು ಪುಡಿ ಮಾರುವವರಿಗೆ ಕೋಲ್ಗೇಟ್‌ ಪೇಸ್ಟಿನ ನೊರೆ ತಮ್ಮನ್ನು ನುಂಗಿ ಹಾಕೀತೆಂಬ ಅಂದಾಜು ಇರಲಿಲ್ಲ. ಇವತ್ತು ಖಾಸಗಿ ಶಾಲೆಗಳನ್ನು ನಡೆಸುತ್ತಿರುವವರಿಗೆ, ಅಮೆರಿಕನ್‌ ಶೈಲಿಯ ಶಾಲೆಗಳು ಇನ್ನು ಕೆಲವೇ ವರ್ಷಗಳಲ್ಲಿ ನಮ್ಮನ್ನು ನುಂಗಿ ಹಾಕಲಿವೆಯೆಂಬುದು ಗೊತ್ತಾಗುತ್ತಿಲ್ಲ. ಇಂಗ್ಲಿಷು ಬಾರದ ಕನ್ನಡ ಪತ್ರಿಕೋದ್ಯಮಿ ಇನ್ನು ಹತ್ತು ವರ್ಷಗಳ ನಂತರ ಕೆಲಸಕ್ಕೆ ಬಾರದವನಾಗುತ್ತಾನೆಂಬುದರ ಅರಿವಿಲ್ಲ.

ನೀವು ಗಮನಿಸಿ ನೋಡಿ: ಕತೆಗಳನ್ನಷ್ಟೆ ಪ್ರಕಟಿಸುತ್ತಿದ್ದ ಕನ್ನಡ ಮಾಸಪತ್ರಿಕೆಗಳು ಇವತ್ತಿಗಾಗಲೇ ಇಲ್ಲ. ಏಕೆಂದರೆ, ಕನ್ನಡದ ಸಣ್ಣಕತೆಗಳನ್ನು ಆಸಕ್ತಿಯಿಂದ ಓದುವ ಗುಂಪುಗಳು ತೀರಿಕೊಂಡಿವೆ. ಅಲ್ಲಿಗೆ ಹ್ಯಾರಿಪಾಟರ್‌ ಆಗಮಿಸಿದ್ದಾನೆ. ಕನ್ನಡ ಶಾಸ್ತ್ರೀಯ ಭಾಷೆಯಾಗಲಿಲ್ಲ ಅಂತ ಕೊರಗುತ್ತ ಕೂತ ಮಂದಿಯಿದ್ದಾರೆ. ನಮ್ಮ ಮೊಮ್ಮಕ್ಕಳ ಕಾಲಕ್ಕೆ ಕನ್ನಡ ಓದುವ- ಬರೆಯುವ ತಲೆಮಾರೇ ಇರುವುದಿಲ್ಲ ಅಂತ ಯಾರಿಗೂ ಭಯವಾಗುತ್ತಿಲ್ಲ. ಅವೆನ್ಯೂ ರೋಡಿನಲ್ಲಿ ಇವತ್ತಿಗೂ ಇಂಕ್‌ ಪೆನ್‌ ರಿಪೇರಿ ಮಾಡುವಾತ ಒಬ್ಬ ಇದ್ದಾನೆ. ಪೆನ್ನುಗಳಿಗೆ ಸಂಬಂಧಿಸಿದಂತೆ(ಮನುಷ್ಯರಿಗೂ ಸಂಬಂಧಿಸಿದಂತೆ) ಇದು use and throw ಕಾಲವೆಂಬುದು ಆತನ ಅರಿವಿಗೆ ಬಂದಿಲ್ಲ.

ಸಾಲ ಮಾಡಿ, ಆಸ್ತಿ ಮಾರಿ ತನ್ನ ಮಗನನ್ನು ಬಿ.ಎ.ಓದಿಸಿದ ಜಮೀನುದಾರ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ಮಗ ವಾಪಸು ಹಳ್ಳಿಗೆ ಬಂದು ಬೇಸಾಯ ಮಾಡಲೊಲ್ಲ. ಉಳಿದಿರುವ ಅಲ್ಪ ಸ್ವಲ್ಪ ಆಸ್ತಿ ಮಾರಿ ಪಟ್ಟಣ ಸೇರಿಕೊಂಡರೆ ಜಮೀನುದಾರ, ನಿರ್ಗತಿಕ. ಅವನದೇ ಊರಿನ ಎಲಿಮೆಂಟರಿ ಶಾಲೆಯ ಮೇಷ್ಟ್ರು ತನ್ನ ಮಗಳಿಗೆ ಕನ್ನಡ- ಇಂಗ್ಲಿಷು ಎರಡೂ ಕಲಿಸಿದ. ಪಿಯುಸಿ ಮುಗಿದ ಮೇಲೆ ಟೀಚರ್ಸ್‌ ಟ್ರೇನಿಂಗ್‌ ಶಾಲೆಗೆ ಕಳಿಸಿದ. ಹುಡುಗಿ ಪಟಪಟನೆ ಇಂಗ್ಲಿಷು ಮಾತನಾಡುತ್ತಾಳೆ. ಶಾಲೆಗೆ ಶಿಕ್ಷಕಿಯಾದರೂ ಸರಿಯೇ, ಕಾಲ್‌ಸೆಂಟರಿನಲ್ಲಿ ಕೆಲಸಕ್ಕೇ ಸೇರಿಕೊಂಡರೂ ಸರಿಯೇ. ಅವಳ ಮದುವೆ ಖರ್ಚಿಗೆ ಅವಳೇ ದುಡಿಯುತ್ತಾಳೆ. ತನಗಿಷ್ಟ ಬಂದವನೊಂದಿಗೆ ಮದುವೆಯನ್ನು ತಾನೇ ಮಾಡಿಕೊಳ್ಳುತ್ತಾಳೆ. ಹಳ್ಳಿಯಲ್ಲೇ ಉಳಿದರೂ ಮೇಷ್ಟ್ರ ಬದುಕಿಗೆ ಭಂಗವಿಲ್ಲ.

ಇವರಲ್ಲಿ ಬುದ್ಧಿವಂತರು ಯಾರು?

ನಾನು ಕೊನೆಯ ನೌಕರಿಗೆ ನಮಸ್ಕಾರ ಹೇಳಿ ಹೊರಬಂದಾಗ ನನ್ನ ಸಂಬಳ 3800ರುಪಾಯಿ. ಇನ್ನೆರಡು ವರ್ಷಗಳಿಗೆ ನನ್ನ ಮಗಳು ಒಂದು ತಿಂಗಳಿಗೆ ಅದರ ಹತ್ತು ಪಟ್ಟು ತಿಂಗಳ ಸಂಬಳ ಪಡೆಯುತ್ತಾಳೆ. ಹುಡುಕಾಡಿಕೊಂಡು ಹೋಗಿ ಅವಳನ್ನೊಂದು ಶ್ರೇಷ್ಠ ಕಾಲೇಜಿಗೆ ಸೂಕ್ತ ಕೋರ್ಸಿಗೆ ಸೇರಿಸಿ ಬಂದದ್ದಷ್ಟೆ ನಾನು ಮಾಡಿದ್ದು. ಯಾವ ತಂದೆಯಾದರೂ ಮಾಡಬಹುದಾದ್ದು ಅಷ್ಟೇ. ಕೈಗೆ ದುಡ್ಡು ಬಂದಾಗ ಮಗಳ ಮದುವೆಗಿರಲಿ ಅಂತ ಒಡವೆ ಮಾಡಿಸುತ್ತಾನೆ ತಂದೆ. ಅದು bad investment.

ಮಗಳ ಮದುವೆ ಮಾಡಲಿಕ್ಕೆ ಅಂತ ಸಾಲ ಮಾಡುತ್ತಾನೆ. ಅದು ಇನ್ವೆಸ್ಟ್‌ಮೆಂಟೇ ಅಲ್ಲ. ವರದಕ್ಷಿಣೆ, ವರೋಪಚಾರ, ಅಳಿಯನಿಗೆ ಬೈಕು-ಸೈಟು-ಎಲ್ಲ ವೇಸ್ಟು. ತಿಂಗಳಿಗೆ ಇಪ್ಪತ್ತು ಸಾವಿರ ರೂಪಾಯಿ ದುಡಿಯುವ ಮಗಳಿದ್ದಾಳೆ. ಫ್ರೆಂಚ್‌, ರಷಿಯನ್‌ ಹಾಗೂ ಇಂಗ್ಲಿಷು ಬರುತ್ತದೆ. ಜಗತ್ತು ಸುತ್ತಲು ಪಾಸ್‌ಪೋರ್ಟಿದೆ. ಪ್ರೀತಿಯಿಂದ ಕನ್ನಡ ಸಾಹಿತ್ಯ ಓದಿಕೊಂಡಿದ್ದಾಳೆ. ಸಂಭಾವಿತೆ ಸುಶೀಲೆ. ಅವಳ ಮದುವೆ ಸುಸೂತ್ರವಾಗಿ ಆಗದಿದ್ದರೆ ಕೇಳಿ?

‘ಬೇರೆ ದಾರಿಯಿಲ್ಲ ; ಇದ್ದೂರಿನಲ್ಲೇ ಕಾಲೇಜಿದೆ. ಹಿಸ್ಟ್ರಿ, ಎಕನಾಮಿಕ್ಸು, ಪೊಲ್ಟಿಕಲ್‌ ಸೈನ್ಸು ತಗೊಂಡಿದ್ದಾಳೆ. ಬಿಎ ಮುಗಿಸೋ ಹೊತ್ತಿಗೆ ಮದುವೆ ಮಾಡಿ ಕಳಿಸ್ತೀವಿ’ ಅಂತ ಆಲೋಚನೆ ಮಾಡಬೇಡಿ. ಪಕ್ಕದೂರಿಗೂ ಹೋಗಿ ಬನ್ನಿ. ಅಲ್ಲಿ ಬೇರೊಂದು ಕೋರ್ಸ್‌ ಇದೆಯಾ ಅಂತ ಕೇಳಿ ನೋಡಿ.‘ಓದ್ಸೋಕೆ ಚೈತನ್ಯ ಇಲ್ಲವಲ್ಲಾ?’ಅನ್ನಬೇಡಿ. ಕಂತಿನಲ್ಲಿ ಸ್ಕೂಟರು, ಸೀರೆ, ಮನೆ ಸಾಲವನ್ನೇ ಅವಳ ಓದಿಗಾಗಿ ಮಾಡಿ. ಅಳಿಯ ಒದ್ದು ಹೊರಕ್ಕೆ ಹಾಕಬಹುದು. ಆದರೆ ಓದಿಕೊಂಡ ಮಗಳ ಮನಸ್ಸಿನಿಂದ ವಿವೇಕ ಮತ್ತು ಜ್ಞಾನವನ್ನು ಯಾರೂ ಕಿತ್ತುಕೊಳ್ಳಲಾರರು.

ಅಡಿಕೆ ಬೆಲೆ ಭರ್ಜರಿಯಾಗಿದ್ದ ಕಾಲದಲ್ಲಿ ನನ್ನ ಅನೇಕ ಹವ್ಯಕ ಮಿತ್ರರು ಜೀಪು-ಕಾರು ಖರೀದಿಸಿದರು. ಒಬ್ಬ ಮಾತ್ರ ಜಾಣ; ಪಾನ್‌ ಪರಾಗ್‌ ಏಜೆನ್ಸಿ ತೆಗೆದುಕೊಂಡ. ಇವತ್ತು ಉಳಿದವರೆಲ್ಲ, ಜೀಪು ಮಾರಿ, ಅಡಿಕೆ ಮರದ ಬುಡ ಸೇರಿದ್ದಾರೆ. ಅವನು ಹತ್ತು ಟೆಂಪೋಗಳಲ್ಲಿ ಪಾನ್‌ಪರಾಗ್‌ ಸರಬರಾಜು ಮಾಡುತ್ತಾನೆ.

ಕಾಲವನ್ನು ದಾಟಿ ಮುಂದಕ್ಕೆ ಹೋಗಿ ಆಲೋಚಿಸುವುದೆಂದರೆ ಅದು.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X