ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆದ್ದ ಸೊಗಸುಗಾರ್ತಿಯ ಹಿಂದೆ ಒಂದು ಹೊಟ್ಟೆಬಾಕ ಸಿಸ್ಟಮ್‌!

By Super
|
Google Oneindia Kannada News

ನೀವು ಯಾರಿಗೆ ಏನು ಬೇಕಿದ್ದರೂ ಕಲಿಸಿಕೊಡಬಹುದು. ಟೆನ್ನಿಸ್‌ ಆಡುವುದನ್ನ, ಟೆನ್ನಿಸನ್ನೇ ಪ್ರೀತಿಸುವುದನ್ನ, ಫೋರ್‌ ಹ್ಯಾಂಡ್‌ ಹೊಡೆತಗಳನ್ನ, ಬುಲೆಟ್‌ನಂಥ ಸರ್ವ್‌ಗಳನ್ನ, ಆಕರ್ಷಕವಾಗಿ ಡ್ರೆಸ್‌ ಮಾಡಿಕೊಳ್ಳುವುದನ್ನ, ಹಣಕಾಸಿನ ಜಾಣ್ಮೆಯನ್ನ ... ಎಲ್ಲವನ್ನೂ ಕಲಿಸಬಹುದು. ಆದರೆ ನಾವು ಯಾರಿಗಾದರೂ ಸದಾ ಆತ್ಮ ವಿಶ್ವಾಸ ತುಳುಕಿಸುವುದನ್ನ, ಕಾನ್ಫಿಡೆಂಟ್‌ ಮಾತುಗಳನ್ನ, ಕಾನ್ಫಿಡೆಂಟ್‌ ಬಾಡಿಲಾಂಗ್ವೇಜನ್ನ ಕಲಿಸಿಕೊಡುವುದು ಸಾಧ್ಯವೇ? ಯಾರ ಮುಖದಲ್ಲಾದರೂ ನಾವು ಒಂದು ಜೊತೆ ಕಾನ್ಫಿಡೆಂಟ್‌ ಕಣ್ಣುಗಳನ್ನೊಯ್ದು ಪ್ರತಿಷ್ಠಾಪಿಸಲು ಸಾಧ್ಯವೆ? ಸ್ಟಾರ್‌ ಆಗುವ ಮುಂಚೆಯೇ ಸ್ಟಾರ್‌ನ ಪ್ರಭೆಯನ್ನು ವ್ಯಕ್ತಿತ್ವವನ್ನು ತುಂಬಲು ಸಾಧ್ಯವೇ?

ಖಂಡಿತ ಸಾಧ್ಯವಿಲ್ಲ.

ಆತ್ಮವಿಶ್ವಾಸ ಅನ್ನುವುದು ಯಾರು ಬೇಕಿದ್ದರೂ ರೂಢಿಸಿಕೊಳ್ಳಬಹುದಾದಂಥ ಗುಣವೇ ಆದರೂ, ಪ್ರತಿ ಹೆಜ್ಜೆಯಲ್ಲೂ-ಪ್ರತಿ ತಿರುವಿನಲ್ಲೂ - ಪ್ರತಿಯಾಂದು ನಡವಳಿಕೆಯಲ್ಲೂ ಅದನ್ನು ಪ್ರದರ್ಶಿಸುವುದು ಮಾತ್ರ ಹುಟ್ಟುಗುಣ.

ಸಾನಿಯಾಗೆ ಆ ಹುಟ್ಟುಗುಣ ಇದೆ!

ಟೆನಿಸ್‌ ಎಂಬ ಪ್ರಚಂಡ ಕಾಂಪಿಟೇಷನ್ನಿನ ಆಟದಲ್ಲಿ ಅವಳು ಇನ್ನು ಮುಂದೆ ಏನು ಸಾಧಿಸುತ್ತಾಳೋ-ಬಿಡುತ್ತಾಳೋ ಅನ್ನುವುದು ಬೇರೆ ವಿಷಯ; ಆದರೆ ಈಕೆಯಲ್ಲಿ ಸಾಮಾನ್ಯ ಭಾರತೀಯ ಹುಡುಗಿಯಲ್ಲಿ ಕಾಣಲು ಸಾಧ್ಯವಿಲ್ಲದಂಥದೊಂದು ಅಗ್ರೆಷನ್‌ ಮತ್ತು ಆತ್ಮವಿಶ್ವಾಸ ಇರುವುದಂತೂ ನಿಜ. ಇದೊಂದೇ ಕಾರಣಕ್ಕಾಗೇ, she deserves to be a star!

ಆದರೆ ಅವಳೀಗ ಈ ಪರಿಯ ಜಗದ್ವಿಖ್ಯಾತ ಸ್ಟಾರ್‌ ಆಗಿರುವುದಕ್ಕೆ ಕಾರಣ, ಅವಳ ಅಗ್ರೆಷನ್‌ ಅಥವಾ ಆತ್ಮವಿಶ್ವಾಸ ಮಾತ್ರ ಅಲ್ಲ. ಅವಳು ಭಾರತೀಯ ಹುಡುಗಿಯರ್ಯಾರೂ ಹಿಂದೆಂದೂ ಮಾಡಿರದಂಥ ಸಾಧನೆ ಮಾಡಿದ್ದಾಳೆ. ಗ್ರ್ಯಾಂಡ್‌ಸ್ಲಾಮ್‌ ಟೆನಿಸ್‌ನ ಅಂಕಣಗಳಲ್ಲಿ ಮೂಗುತಿ ಮಿಂಚಿಸಿದ್ದಾಳೆ. ಇಂಡಿಯಾ ಅನ್ನುವ ದೇಶದಲ್ಲಿನ ಹೆಣ್ಣು ಮಕ್ಕಳು ಸ್ಪರ್ಧಾತ್ಮಕ ಆಟವನ್ನೂ ಆಡುತ್ತಾರೆ ಅಂತನ್ನುವ ಅಚ್ಚರಿಯ ಸತ್ಯವನ್ನು ಟೆನಿಸ್‌ ಜಗತ್ತಿಗೆ ತೋರಿಸಿದ್ದಾಳೆ. ಟೆನಿಸ್‌ನಂಥ ಆಟದ ಬೆಂಬಲಕ್ಕೆ ಅಗತ್ಯವಾಗಿ ಬೇಕಾದಷ್ಟು ದುಡ್ಡಿರಬೇಕಾದರೆ, ಇಂಡಿಯಾ ನಿಜಕ್ಕೂ ನಿರ್ಗತಿಕ ರಾಷ್ಟ್ರವೇನಿರಲಿಕ್ಕಿಲ್ಲ ಅಂತ ಭಾರತದ ಬಗ್ಗೆ ಗೊತ್ತೇ ಇಲ್ಲದಿದ್ದಂಥ ಅಮಾಯಕರೂ ಆಶ್ಚರ್ಯಪಡುವ ಹಾಗೆ ಮಾಡಿದ್ದಾಳೆ. ಅರೆ, ಬಿರಿಯಾನಿ ತಿಂದು ಬೆಳೆದ ಹುಡುಗಿಯರೂ ಹೀಗಾಗಬಹುದಾ ಅಂತ ನಮ್ಮ ದೇಶದ ಜಡೆ-ಮಿಡಿ-ಚೂಡಿಗಳು ಖುಷಿಯಿಂದ ರೋಮಾಂಚನಗೊಳ್ಳುವ ಹಾಗೆ ಮಾಡಿದ್ದಾಳೆ. ಇಂಡಿಯಾದ ಹುಡುಗಿಯರಿಗೂ ಟೆನಿಸ್‌ ಜಗತ್ತಿನಲ್ಲಿ ಸ್ಥಾನವಿದೆ ಅನ್ನುವುದನ್ನು ತೋರಿಸಿಕೊಟ್ಟಿದ್ದಾಳೆ.

ಮುಂದೆ ಅವಳು ಟೆನಿಸ್‌ ಅಂಕಣಗಳನ್ನು ಆಳುತ್ತಾಳೋ-ಬಿಡುತ್ತಾಳೋ ಅನ್ನುವುದೀಗ ಸದ್ಯಕ್ಕೆ ಮುಖ್ಯವಲ್ಲ; ಈಗಾಗಲೇ, ಕೋಲ್ಕತ್ತಾದ ಟೂರ್ನಮೆಂಟಿನ ಎರಡನೇ ಸುತ್ತಿನಲ್ಲೇ ಸೋಲುವ ಮೂಲಕ ಅವಳು ತನ್ನ ತಾಕತ್ತಿನ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕಿ ಬಿಟ್ಟಿದ್ದಾಳೆ. ಆದರೆ, ಅವಳ ಸೋಲು-ಗೆಲುವುಗಳಿಗಿಂತ ಇಂಪಾರ್ಟಂಟ್‌ ಅನ್ನಿಸುವುದು, ಅವಳು ಬೆಳೆದು ಬಂದಿರುವ ರೀತಿ ಮತ್ತು ಅದರಿಂದ ನಮ್ಮ ದೇಶದ ಕ್ರೀಡಾ ವ್ಯವಸ್ಥೆಗಾಗಬಹುದಾದ ಲಾಭ.

ನಿಮಗೆ ಗೊತ್ತಿರಬಹುದು; ‘ಶಂಕರಾಭರಣ' ಅನ್ನುವುದೊಂದು ತೆಲುಗು ಸಿನೆಮಾ ಬಂದಾಗ, ಇಡೀ ದಕ್ಷಿಣ ಭಾರತದ ಉದ್ದಗಲಕ್ಕೂ ರಾತ್ರೋರಾತ್ರಿ ಸಂಗೀತ ಶಾಲೆಗಳಲ್ಲಿ ಭರ್ತಿಭರ್ತಿ ಅಡ್ಮಿಷನ್‌ಗಳಾಗಿ ಹೋಗಿದ್ದವು! ವೆಸ್ಟರ್ನ್‌ ಮ್ಯೂಸಿಕ್ಕಿನ ಹುಚ್ಚು ಹತ್ತಿಸಿಕೊಂಡಿದ್ದ ಕಾಲೇಜು ಹೀರೋ-ಹೀರೋಯಿನ್‌ಗಳೂ ಸಾ-ಪಾ-ಸಾ ಕಲಿಯಲಾರಂಭಿಸಿಬಿಟ್ಟಿದ್ದರು. ಅದಾದ ಮೇಲೆ, ಕಮಲಹಾಸನ್‌ನ ಸಾಗರ ಸಂಗಮಂ ಬಂದಿತ್ತು. ಲಕ್ಷಾಂತರ ಹುಡುಗರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ತಮ್ಮ ಬದುಕಿನಲ್ಲಿಯೂ ಬರಬಹುದಾದ ಜಯಪ್ರದಾಳಿಗಾಗಿ ಹಾತೊರೆದಿದ್ದರು! ದಿನ ಕಳೆದಂತೆ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭರತ ನಾಟ್ಯ-ಎರಡರ ಕ್ರೇಜೂ ತಣ್ಣಗಾಯಿತು. ಗೆಜ್ಜೆಗಳು-ತಂಬೂರಿಗಳು ಧೂಳು ಹೊದ್ದುಕೊಂಡು ಕುಳಿತವು.

ಈಗ ಇಂಡಿಯನ್‌ ಟೆನಿಸ್ಸಿಗಾಗಿರುವುದೂ ಥೇಟ್‌ ಇಂಥದ್ದೇ ಒಂದು instant ಉನ್ಮಾದ! ಬಿರಿಯಾನಿ ಹುಡುಗಿಗೆ ಇಂಥಾ ಸ್ಟಾರ್‌ಗಿರಿ ಒಲಿಯುತ್ತದೆಂದರೆ ನಮಗೂ ಅದು ಸಾಧ್ಯವಾಗಬಹುದಲ್ಲಾ ಅನ್ನುವ ನಂಬಿಕೆಯೀಗ ದೇಶದ ಸಮಸ್ತ ಟೆನಿಸ್‌ ಅಕಾಡೆಮಿಗಳಲ್ಲೂ ಹುಡುಗಿಯರ ಕ್ಯೂ ಸೃಷ್ಟಿ ಮಾಡಿದೆ. ಮಹೇಶ್‌ ಭೂಪತಿಯ ಅಪ್ಪ ಕೃಷ್ಣ ಭೂಪತಿ ನಡೆಸುತ್ತಿರುವ ಟ್ರೆೃನಿಂಗ್‌ ಸೆಂಟರಿನಿಂದ ಹಿಡಿದು ಸಣ್ಣ-ಪುಟ್ಟ-ದೊಡ್ಡ ಅಕಾಡೆಮಿಗಳೆಲ್ಲವೂ ‘ಅಡ್ಮಿಷನ್‌ ಫುಲ್‌'ಬೋರ್ಡು ಹಾಕಿಕೊಂಡಿವೆ. ನಮ್ಮ ಟೆನಿಸ್‌ ಫೆಡರೇಷನ್‌, ತನ್ನ ಆಡಳಿತದ ಅಷ್ಟೂ ಟೆನಿಸ್‌ ಕೋರ್ಟ್‌ಗಳಲ್ಲೂ ಒಂದೊಂದು ಸಾನಿಯಾ ಚಿತ್ರ ನೇತು ಹಾಕಿದೆ. ಟೆನ್‌ಸ್ಪೋರ್ಟ್ಸ್‌ ಅನ್ನುವ ಒಂದು ಕ್ರೀಡಾ ಚಾನಲ್‌, ಟೆನಿಸ್‌ ಪ್ರಸಾರದ ಹಕ್ಕುಗಳಿಗಾಗಿ ಲಕ್ಷಾಂತರ ಡಾಲರ್‌ ಸುರಿದಿದೆ. ಸಾನಿಯಾಳನ್ನು ಬೆನ್ನಿಗಿಟ್ಟುಕೊಂಡು ಇಡೀ ಇಂಡಿಯಾದ ಟೆನಿಸ್‌ ಹಿಸ್ಟರಿಯನ್ನೇ ಬದಲಿಸಿ ಬಿಡುವ excitementನಲ್ಲಿ ನಮ್ಮ ಟೆನಿಸ್‌ ವ್ಯವಸ್ಥೆ ಪುಟಿಯುತ್ತಿದೆ.

ಆದರೆ ಈ ಎಲ್ಲಾ ಉತ್ಸಾಹದ, ಹುಮ್ಮನ್ಸಿನ, ಉನ್ಮಾದದ ಹಿನ್ನೆಲೆಯಲ್ಲಿ ನಾವು, ನಮ್ಮ ವ್ಯವಸ್ಥೆ ಅದೆಷ್ಟು ಅಸಡ್ಡಾಳವಾಗಿದೆ. ಅನ್ನುವುದನ್ನೂ, ಅದನ್ನು ಸೋಲಿಸುವುದು ಅದೆಷ್ಟು ದುಸ್ಸಾಧ್ಯ ಅನ್ನುವುದನ್ನೂ ಮರೆತು ಬಿಡುತ್ತೇವೆ! ‘ಶಂಕರಾಭರಣಂ'ಮತ್ತು ‘ಸಾಗರ ಸಂಗಮಂ'ನ ಪರಿಣಾಮ ಯಾಕೆ ನಿರಂತರವಾಗಿ ಉಳಿದು ಬೆಳೆಯಲಿಲ್ಲ ಅನ್ನುವ ಪ್ರಶ್ನೆಯ ಹಿಂದಿನ ಕಹಿ ಸತ್ಯವನ್ನು ಕಡೆಗಣಿಸಿ ಬಿಡುತ್ತೇವೆ!

ಸಾನಿಯಾಳ ಬೆಳವಣಿಗೆಗೆ ಇಲ್ಲಿನ ಕ್ರೀಡಾ ವ್ಯವಸ್ಥೆ ಖಂಡಿತ ಕಾರಣವಲ್ಲ; ಈ ವಿಷವರ್ತುಲದ ಹೊರತಾಗಿಯೂ ಅವಳು ಬೆಳೆದಿದ್ದಾಳೆ, ಅಷ್ಟೆ. ಸಾನಿಯಾಗೆ ಮುಂಚೆ ನಮ್ಮಲ್ಲೊಬ್ಬ ಪಿ.ಟಿ. ಉಷಾ ಇದ್ದಳು, ಒಬ್ಬ ಮಿಲ್ಖಾ ಸಿಂಗ್‌, ಒಬ್ಬ ಕರಣಂ ಮಲ್ಲೇಶ್ವರಿ, ಒಬ್ಬ ಪ್ರಕಾಶ್‌ ಪಡುಕೋಣೆ ಒಬ್ಬ ಗೋಪಿಚಂದ್‌, ಎಲ್ಲರೂ ಬಂದು ಹೋದರು. ಅವರ್ಯಾರೂ ಇಲ್ಲಿನ ವ್ಯವಸ್ಥೆಯೆಂಬ ಕೆಸರಿನಲ್ಲಿ ಅರಳಿದ ಕಮಲಗಳಲ್ಲ ; ವ್ಯವಸ್ಥೆಯಿಂದ ಹೊರತಾಗಿಯೇ ಉಳಿದು ಆಕಾಶಕ್ಕೆ ಚಿಮ್ಮಿದರು. ಅವರ ಗೆಲುವಿನ ಬೆನ್ನಲ್ಲೂ ಈಗ ಸಾನಿಯಾಳ ಸ್ಟಾರ್‌ಗಿರಿ ಹುಟ್ಟು ಹಾಕಿರುವಂಥ ಉನ್ಮಾದವೇ ಇತ್ತು. ಪಿ.ಟಿ. ಉಷಾಳ ಸ್ಫೂರ್ತಿಯಿಂದಾಗಿ ಈ ದೇಶ ಇನ್ನು ಮುಂದೆ ರಾಶಿ ಅಥ್ಲೆಟಿಕ್‌ ಪದಕಗಳನ್ನು ಕೊಳ್ಳೆಹೊಡೆದು ತಂದು ಗುಡ್ಡೆ ಹಾಕುತ್ತದೆ ಅನ್ನುವ ನಿರೀಕ್ಷೆಯಿತ್ತು. ಪ್ರಕಾಶ್‌ ಪಡುಕೋಣೆಯ ಹಿಂದೆಯೇ ಸಾಲು ಸಾಲು ಬ್ಯಾಡ್ಮಿಂಟನ್‌ ಛಾಂಪಿಯನ್‌ಗಳು ಹುಟ್ಟಿ ಬರುವ ಕನಸಿತ್ತು.

ಆದರೆ, ನಮ್ಮ ಕ್ರೀಡಾ ವ್ಯವಸ್ಥೆ ಅದನ್ನು ಆಗಗೊಡಲಿಲ್ಲ. ಉಷಾ ಅದನ್ನು ಆಗಗೊಡಲಿಲ್ಲ. ಉಷಾಳಂತೆಯೇ ಕನಸು ಹೊತ್ತು ಟ್ರ್ಯಾಕ್‌ಗೆ ಕಾಲಿಟ್ಟ ಹುಡುಗ-ಹುಡುಗಿಯರು ಅರ್ಧದಾರಿ ಓಡುವಷ್ಟರಲ್ಲೇ ಹೈರಾಣಾಗಿ ಹಿಂತಿರುಗಿಬಿಟ್ಟರು. ಸ್ವತಃ ಪ್ರಕಾಶ್‌ ಪಡುಕೋಣೆಯೇ ಜಿದ್ದಿಗೆ ಬಿದ್ದವನಂತೆ ಬ್ಯಾಡ್ಮಿಂಟನ್‌ ಫೆಡರೇಷನ್ನಿನ ಗೆದ್ದಲು ಹುಳಗಳ ವಿರುದ್ಧ ಸಮರಕ್ಕಿಳಿದರೂ, ಹುಳಗಳ ಹುತ್ತ ಬೆಳೆದೇ ಬೆಳೆಯಿತು.

ಸಿಸ್ಟಮ್ಮು ವಿಪರೀತ ಗಟ್ಟಿ! ಕೇರಳದ ಅನೇಕ ಅಥ್ಲೀಟ್‌ಗಳಿವತ್ತು ಒಂದು ಪರ್ಮನೆಂಟ್‌ ಕೆಲಸಕ್ಕಾಗಿ ಮರ್ಯಾದಸ್ಥ ಬದುಕಿಗಾಗಿ ಸರ್ಕಾರವನ್ನು ಅಂಗಲಾಚುತ್ತಾ ಕೂತಿದ್ದಾರೆ. ಹಾಕಿಯೆಂಬ ಆಟ ಮಾನವಂತರಿಗಾಗಿ ಅಲ್ಲ ಅನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ಕ್ರಿಕೆಟ್‌ ಮತ್ತು ಸ್ವಲ್ಪ ಮಟ್ಟಿಗೆ ಟೆನಿಸ್‌ ಫೆಡರೇಷನ್‌ ಹೊರತುಪಡಿಸಿದರೆ, ದೇಶದ ಎಲ್ಲ ಕ್ರೀಡಾ ಸಂಸ್ಥೆಗಳೂ ತಳವಿಲ್ಲದ ಉದರಗಳಾಗಿವೆ.

ಮೊನ್ನೆ ಬ್ಯಾಂಕಾಕಿನಲ್ಲಿ ನಡೆದ ಏಷ್ಯನ್‌ ಏಜ್‌ ಗ್ರೂಪ್‌ ಸ್ವಿಮಿಂಗ್‌ ಛಾಂಪಿಯನ್‌ಷಿಪ್‌ನಲ್ಲಿ ಆಡುವುದಕ್ಕೆ ನಮ್ಮದೊಂದು ಟೀಮು ಹೋಗಿತ್ತು. ಆರು ಜನರ ತಂಡದ ಪ್ರತಿಯಾಬ್ಬರೂ ತಾವೇ ಕೈಯಿಂದ ದುಡ್ಡು ಹಾಕಿಕೊಂಡು ವಿಮಾನ ಹತ್ತಿದ್ದರು! ವಾಪಸು ಬಂದ ಮೇಲೆ ಅವರ ಖರ್ಚನ್ನು ಹಿಂತಿರುಗಿಸಲಾಗುವುದು ಅಂತ ಸ್ವಿಮಿಂಗ್‌ ಫೆಡರೇಷನ್ನು ಹೇಳಿದ್ದೇನೋ ಹೌದಾದರೂ, ಬ್ಯಾಂಕಾಕಿಗೆ ಹೋಗುವುದಕ್ಕೇನು ಕಡಿಮೆ ಖರ್ಚಾಗುತ್ತದೆಯೇ? ಒಬ್ಬೊಬ್ಬರೂ ಹತ್ತಿರ ಬತ್ತಿರ ಒಂದೊಂದು ಲಕ್ಷ ಸುರಿಯಬೇಕು. ಅಂದರೆ, ದುಡ್ಡಿಲ್ಲದವರು ಟೀಮಿನೊಳಕ್ಕೆ ಬರುವಂತೆಯೇ ಇಲ್ಲ!

ಇವತ್ತು ಎಲ್ಲ ಆಟಗಳಲ್ಲೂ ಇಂಥದ್ದೇ ವ್ಯವಸ್ಥೆಯಿದೆ. ಕಬಡ್ಡಿ ಆಟಗಾರರನ್ನು ಫಾರಿನ್‌ ಟೂರ್ನಮೆಂಟುಗಳಿಗೆ ಕರೆದುಕೊಂಡು ಹೋಗಲು ದುಡ್ಡಿಲ್ಲ. ಚೆಸ್‌ ಆಟಗಾರರನ್ನು ಫಿಡೆ ಟೂರ್ನಮೆಂಟುಗಳಿಗೆ ಕಳಿಸಲು ದುಡ್ಡಿಲ್ಲ. ದೇಶವನ್ನು ಪ್ರತಿನಿಧಿಸುವ ಅಥ್ಲೀಟುಗಳ ತಂಡಕ್ಕೊಂದು ಕನಿಷ್ಠ ಬೂಟು ಮತ್ತು ಟ್ರ್ಯಾಕ್‌ ಸೂಟುಗಳ ಕಿಟ್‌ ಖರೀದಿಸಿಕೊಡಲು ದುಡ್ಡಿಲ್ಲ. ಹಾಕಿ ಆಟಗಾರರಿಗೆ ಆಟದ ಫೀಸು ಕೊಡಲು ದುಡ್ಡಿಲ್ಲ. ಬ್ಯಾಡ್ಮಿಂಟನ್‌ ಪಟುಗಳನ್ನು ಫಾರಿನ್‌ ಟ್ರೆೃನಿಂಗಿಗೆ ಕಳಿಸಲು ದುಡ್ಡಿಲ್ಲ. ಯಾವುದಕ್ಕೂ ದುಡ್ಡಿಲ್ಲ. ಆದರೆ, ಅಧಿಕಾರಿಗಳಿಗೆ ಮಾತ್ರ ಅಷ್ಟೈಶ್ವರ್ಯಾಭಿವೃದ್ಧಿ ರಸ್ತು !

ಕ್ರೀಡೆಯಾಗಲೀ ಸಂಗೀತ-ನೃತ್ಯದಂಥ ಸಾಂಸ್ಕೃತಿಕ ಚಟುವಟಿಕೆಗಳಾಗಲೀ ನಮ್ಮಲ್ಲಿ ಯಾವತ್ತೂ ಆದ್ಯತೆಯ ವಿಷಯವಲ್ಲ. ಎರಡರ ಮೇಲೂ ಕೋಟ್ಯಂತರ ರುಪಾಯಿ ಸುರಿಯಲಾಗುತ್ತಿದೆಯಾದರೂ, ಈ ಖರ್ಚಿನ ಹಿಂದಿರುವುದು ಅಧಿಕಾರಿಗಳನ್ನು ಮತ್ತು ಅವರ ಮೂಲಕ ಅವರವರ ಓಟ್‌ ಬ್ಯಾಂಕುಗಳನ್ನೂ ಬೆಳೆಸುವ ಉದ್ದೇಶವೇ ಹೊರತು, ಆಯಾ ಕ್ಷೇತ್ರಗಳ ಅಭಿವೃದ್ಧಿ ಖಂಡಿತ ಅಲ್ಲ. ನಮ್ಮ ಕೇಂದ್ರ ಸರ್ಕಾರ 1982ರಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಿಂದ ಇದುವರೆಗೂ ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಮೇಲೆ ಸುಮಾರು ಎಂಟುನೂರು ಕೋಟಿ ರೂಪಾಯಿ ಸುರಿದಿದೆ. ಒಂದು ಸಲ ಬೆಂಗಳೂರಿನಲ್ಲಿರುವ SAIಗೆ ಹೋಗಿ ನೋಡಿ; ಕೊಳಕು ನೀರಿನ ಸ್ವಿಮಿಂಗ್‌ ಫೂಲು, ಕೆಲಸ ಮಾಡದ ಜಿಮ್‌ ಯಂತ್ರಗಳು, ಪ್ಯಾಂಟಿನ ಬೆಲ್ಟನ್ನೂ ತುಂಡು ಮಾಡಿಕೊಂಡು ಹೊರಗೆ ಚಿಮ್ಮುವಂತೆ ಕಾಣುವ ಅಧಿಕಾರಿಗಳ ಬೊಜ್ಜು-ಎಲ್ಲವೂ ಈ ದುಡ್ಡು ಎಲ್ಲಿ ಹೋಗಿ ಸೇರಿದೆಯೆಂಬುದರ ಕಥೆ ಹೇಳುತ್ತದೆ.

ಇದ್ದುದರಲ್ಲಿ, ಟೆನಿಸ್‌ ಸಂಸ್ಥೆ ಸ್ವಲ್ಪ ಪರವಾಗಿಲ್ಲ. ಹಣವಿದ್ದವರೇ ಕೈ ಹಾಕಿ ಹಣವಿದ್ದವರಿಗಾಗಿಯೇ ಕಟ್ಟಿರುವ ಸಂಸ್ಥೆ ಅದಾದ್ದರಿಂದ, ಅಷ್ಟರ ಮಟ್ಟಿಗೆ ಅದು ಸಿಸ್ಟಮ್ಯಾಟಿಕ್‌. ಟೆನಿಸ್‌ ಅನ್ನುವುದು ಹಣವಿದ್ದವರು ಮಾತ್ರವೇ ಆಡಲು ಸಾಧ್ಯವಿರುವಂಥ ಆಟವಾಗಿರುವುದರಿಂದ, ಈ ಸಂಸ್ಥೆಗಳ ವೈಖರಿ ಬಗ್ಗೆ ನಮ್ಮ- ನಿಮ್ಮಂಥವರು ತಲೆ ಕೆಡಿಸಿಕೊಳ್ಳುವುದೂ ಇಲ್ಲ. ಅಲ್ಲದೆ, ನಿಯಮಿತವಾಗಿ ಅಲ್ಲೊಬ್ಬ ಅಮೃತರಾಜ್‌, ಇಲ್ಲೊಬ್ಬ ರಮೇಶ್‌ ಕೃಷ್ಣನ್‌, ಆ ಮೇಲೊಬ್ಬ ಲಿಯಾಂಡರ್‌ ಪೇಸ್‌-ಹೀಗೆ ಒಬ್ಬರಾದ ಮೇಲೊಬ್ಬ ಸ್ಟಾರು ಹುಟ್ಟುತ್ತಲೇ ಇರುವುದರಿಂದ, ನಮಗೆ ಟೆನಿಸ್‌ ಫೆಡರೇಷನ್ನುಗಳಲ್ಲಿ ಕೊಳಕು ಹುಡುಕುವ ಪ್ರಮೇಯವೂ ಬಂದಿಲ್ಲ.

ಆದರೂ, ಭಾರತದಂಥ ಆಗಾಧ ದೇಶಕ್ಕೆ ಒಬ್ಬ ಲಿಯಾಂಡರ್‌, ಒಬ್ಬ ಭೂಪತಿ, ಒಬ್ಬ ಸಾನಿಯಾ ಸಾಕೆ? ಅದು ಸಾಲದಾದ್ದರಿಂದಲೇ ನಾವು ಸಾನಿಯಾಳ ಚಿಕ್ಕ ಚಿಕ್ಕ ಗೆಲುವುಗಳನ್ನು ಸೆಲೆಬ್ರೆಟ್‌ ಮಾಡುತ್ತಿದ್ದೇವೆ. ಹೀರೋಗಳ ಕೊರತೆಯಿಂದ ಹದಿನೆಂಟರ ಹುಡುಗಿಯಲ್ಲಿ ಒಬ್ಬ ಸೂಪರ್‌ಸ್ಟಾರ್‌ನ್ನೂ ಹುಡುಕುತ್ತಿದ್ದೇವೆ. ಅವಳ ಗೆಲುವಿನ ಸ್ಫೂರ್ತಿಯನ್ನು ಬರೀ ಹೀರೋವರ್‌ಷಿಪ್ಪಿಗಷ್ಟೇ ಸೀಮಿತಗೊಳಿಸಿ, ಅವಳಿಂದ ಈ ದೇಶದ ಕ್ರೀಡಾ ವ್ಯವಸ್ಥೆ ಲಾಭ ಪಡೆಯಬಹುದಾದ ಸಾಧ್ಯತೆಗಳನ್ನು ಮಂಕು ಮಾಡುತ್ತಿದ್ದೇವೆ.

ನಿಮಗೆ ಗೊತ್ತಿರಬೇಕು; ಬೋರ್ನ್‌ಬೋರ್ಗ್‌ ಅನ್ನುವ ಒಬ್ಬ ಮಹಾನುಭಾವ ಮುಗಿಲೆತ್ತರಕ್ಕೆ ಬೆಳೆದು ನಿಲ್ಲುವವರೆಗೂ, ಸ್ವೀಡನ್‌ ಎಂಬ ದೇಶದಲ್ಲಿ ತೊಂಬತ್ತು ಪರ್ಸೆಂಟ್‌ ಜನರಿಗೆ ಟೆನಿಸ್‌ ಅಂದರೇನೆಂದೇ ಗೊತ್ತಿರಲಿಲ್ಲ! ಆದರೆ, ಅವನ ನಂತರ ಅಲ್ಲಿ ಸ್ಟೀಫನ್‌ಎಡ್‌ಬರ್ಗ್‌-ಮ್ಯಾಟ್ಸ್‌ ವಿಲಾಂಡರ್‌ರಂಥ ಛಾಂಪಿಯನ್‌ಗಳು ಹುಟ್ಟಿ ಬಂದರು. ವಿಶ್ವನಾಥನ್‌ ಆನಂದ್‌ ಅನ್ನುವ ಒಬ್ಬ ಜೀನಿಯಸ್‌, ರಷ್ಯಾದ ಚೆಸ್‌ ಶಕ್ತಿಯೆದುರು ಏಕಾಂಗಿಯಾದ ತೋಳು ಮಡಿಸಿ ಕೂರುವವರೆಗೂ, ಆ ಆಟವನ್ನು ಹುಟ್ಟು ಹಾಕಿದ ಭಾರತ ದೇಶದಲ್ಲಿ ಒಬ್ಬೇ ಒಬ್ಬ ಗ್ರಾಂಡ್‌ ಮಾಸ್ಟರ್‌ ಕೂಡ ಇರಲಿಲ್ಲ; ಅವನ ನಂತರ ಈಗ ಇಲ್ಲಿ ವಿಜಯಲಕ್ಷ್ಮಿ, ಕೊನೆರು ಹಂಪಿ, ಶಶಿಕಿರಣ, ಹರಿಕೃಷ್ಣ, ಅವರುಗಳೆಲ್ಲಾ ಅರಳಿದ್ದಾರೆ.

ಇವರೂ ಕೂಡ ವ್ಯವಸ್ಥೆಯಿಂದ ಹೊರತಾಗಿ, ಮತ್ತು ಆನಂದ್‌ನ ವೈಯಕ್ತಿಕ ಪ್ರಯತ್ನಗಳಿಂದಾಗಿ ಬೆಳೆದಿರುವವರು.

ಒಂದೇ ವರ್ಷದಲ್ಲಿ 326ನೇ ರ್ಯಾಂಕ್‌ನಿಂದ 34ನೇ ರ್ಯಾಂಕ್‌ಗೆ ಜಿಗಿದಿರುವ, ವಿಶ್ವದ ಎಲ್ಲ ಟೆನಿಸ್‌ ಛಾಂಪಿಯನ್‌ಗಳ ಕಣ್ಣೂ ದೊಡ್ಡದಾಗಿ ಹಿಗ್ಗುವಂತೆ ಮಾಡಿರುವ, ಸಾನಿಯಾಳ ಸಾಧನೆಯೂ ಇಂಥದ್ದೇ ಒಂದು ಸ್ಫೂರ್ತಿಯಾಗಬೇಕೆಂದಿದ್ದರೆ, ಮೊದಲು ಟೆನಿಸ್‌ ಅನ್ನುವುದು ಸಾಮಾನ್ಯರಿಗೂ ಎಟುಕುವಂಥ ಆಟವಾಗಿ ಬದಲಾಗಬೇಕು! ಅಥವಾ ಸಾಮಾನ್ಯರನ್ನೂ ಆ ಆಟದ ಎತ್ತರಕ್ಕೇರಿಸಬಲ್ಲಂಥ ಒಂದು ಸ್ಪಾನ್ಸರ್‌ಷಿಪ್‌ ವ್ಯವಸ್ಥೆ ಸೃಷ್ಟಿಯಾಗಬೇಕು.

ಅದು ತಕ್ಷಣಕ್ಕೆ ಆಗುವಂಥದ್ದಲ್ಲವಾದ್ದರಿಂದ, ಸದ್ಯಕ್ಕೆ ನಾವು ಸಾನಿಯಾ-ಒಬ್ಬ ಭೂಪತಿ ಅವರುಗಳಿಗೇ ತೃಪ್ತರಾಗಬೇಕು!
(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

English summary
Sania Mirza is young, spirited and the rising star of Indian Tennis. Ravi Belagere writes on the craze Sania has created and ugly face of Indian administration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X