• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕದ ನ್ಯೂಕ್ಲಿಯರ್‌ ಹ್ಯಾಂಡ್‌ಶೇಕ್‌ನ ಹಿಂದೆ ಗುಟ್ಟುಗಳಿವೆ!

By Staff
|
Ravi Belagere on Thatskannada.com ರವಿ ಬೆಳಗೆರೆ
ಹ್ಹ...ಬ್ಬ! ಅಂತ ನಿಡುಸುಯ್ಯುವ ಹಾಗೆ ಸಮಾಧಾನ-ಖುಷಿ ಆಗಿರುವುದೇನೋ ನಿಜ; ಆದರೆ ಅದಕ್ಕಿಂತಲೂ ಹೆಚ್ಚಾಗಿ ಕಾಡುತ್ತಿರುವುದು, ಅನುಮಾನ!

ಈ ಅಮೆರಿಕಕ್ಯಾಕೆ ಇದ್ದಕ್ಕಿದ್ದಂತೆ ಇಂಡಿಯಾದ ಫ್ರೆಂಡಾಗುವ ಉಮೇದು ಬಂದು ಬಿಟ್ಟಿದೆ? ಮನ್‌ಮೋಹನ್‌ಸಿಂಗ್‌ ಬಾಯಿ ಬಿಟ್ಟು ಕೇಳುವುದಕ್ಕೂ ಮುಂಚೆಯೇ ಯಾಕೆ ಬುಷ್‌ ಅಣುಶಕ್ತಿ ಸಹಕಾರದ ಒಪ್ಪಂದಕ್ಕೆ ಸಹಿ ಮಾಡಿ ಕೊಟ್ಟುಬಿಟ್ಟ ? ತನ್ನದೇ ಪಾರ್ಟಿಯ ಜನ, ವಿರೋಧ ಪಕ್ಷದ ಹದ್ದುಗಳು, ತನ್ನ ಮಿತ್ರಕೂಟದ ರಾಷ್ಟ್ರಗಳು, ಎಲ್ಲರನ್ನೂ ಒಂದೇ ಏಟಿನಲ್ಲಿ ಕೆಣಕಬಲ್ಲ ಸಾಮರ್ಥ್ಯದ ಇಂಥದ್ದೊಂದು ಕೆಲಸಕ್ಕೆ ಅವನು ಯಾಕೆ ಕೈ ಹಾಕಿದ? ಅನಾದಿ ಕಾಲದಲ್ಲಿ ಶುರುವಾದ ತಾರಾಪುರ ಅಣುಸ್ಥಾವರದ ಮಾತು ಬಿಡಿ; ಇನ್ನು ಮುಂದೆ ಪ್ರಾರಂಭಿಸುವ ಅಣುಶಕ್ತಿ ಕೇಂದ್ರಗಳಿಗೂ ಇಂಧನ ಪೂರೈಸುವಂಥ ಧಾರಾಳ ಭರವಸೆ ಯಾಕೆ ಕೊಟ್ಟ ? ತಾನಷ್ಟೇ ಅಲ್ಲದೆ, ತನ್ನ ಮಿತ್ರ ರಾಷ್ಟ್ರಗಳಿಂದಲೂ ಈ ಕೆಲಸ ಮಾಡಿಸುತ್ತೇನೆ ಅನ್ನುವ ಅತ್ಯುತ್ಸಾಹ ಯಾಕೆ ತೋರಿಸಿದ ? ಭಾರತವೊಂದು ಅತ್ಯಾಧುನಿಕ ಅಣುಶಕ್ತಿ ತಂತ್ರಜ್ಞಾನ ಹೊಂದಿರುವ ಜವಾಬ್ದಾರಿಯುತ ರಾಷ್ಟ್ರ ಅಂತ ಹೇಳುವ ಮೂಲಕ ಅವನು ಏನನ್ನು ಸೂಚಿಸಲು ಹೊರಟಿದ್ದಾನೆ?

ಬರೀ ಪ್ರಶ್ನೆಗಳು, ಅನುಮಾನಗಳು. ಎಂದೂ ಇಲ್ಲದಂತೆ ಊರ ಪಟೇಲನೊಬ್ಬಇದ್ದಕ್ಕಿದ್ದ ಹಾಗೆ ದಲಿತರ ಕೇರಿಗೆ ಹೋಗಿ ಅಲ್ಲಿನ ಮಕ್ಕಳನ್ನು ಮುದ್ದಾಡತೊಡಗಿದರೆ ಆಗುವಂಥದ್ದೇ ಶಾಕ್‌ ಇದು! ಭಾರತದ ಅಣ್ವಸ್ತ್ರ ನೀತಿಯನ್ನೂ-ಅಣುಶಕ್ತಿ ತಂತ್ರಜ್ಞಾನವನ್ನೂ ಉದ್ದಕ್ಕೂ ವಿರೋಧಿಸುತ್ತಲೇ ಬಂದಿರುವ ದೊಡ್ಡಣ್ಣ, ಈ ಅಮೆರಿಕ. 1974ರಲ್ಲಿ ಇಂದಿರಾಗಾಂಧಿ ಪ್ರೋಖ್ರಾನ್‌ನಲ್ಲಿ ನಮ್ಮ ದೇಶದ ಪ್ರಪ್ರಥಮ ಅಣ್ವಸ್ತ್ರ ಪರೀಕ್ಷೆ ನಡೆಸುವ ಧಾರ್ಷ್ಟ್ಯ ತೋರಿದ ದಿನವೇ ಬೆಚ್ಚಿ ಬಿದ್ದು ಹಾರಾಡಿದ್ದ ಆ ದೇಶ, ಅವತ್ತಿನಿಂದ ಇವತ್ತಿನವರೆಗೂ ಭಾರತದ ವಿರುದ್ಧ ಅಣ್ವಸ್ತ್ರ ಮತ್ತು ಅಣುಶಕ್ತಿ ಸಹಕಾರದ ಪ್ರತಿಬಂಧ ಹೇರಿಕೊಂಡು ಬಂದಿತ್ತು. ಈಗಾಗಲೇ ಅಣ್ವಸ್ತ್ರ ಸಾಮರ್ಥ್ಯದ ರಾಷ್ಟ್ರಗಳು ಅಂತ ಗುರುತಿಸಲ್ಪಟ್ಟಿರುವ ಜಗತ್ತಿನ ಐದು ದೇಶಗಳನ್ನು ಹೊರತುಪಡಿಸಿದಂತೆ, ಬೇರಾವ ದೇಶವೂ ಅಣ್ವಸ್ತ್ರದ ಸೊಲ್ಲೆತ್ತಬಾರದು ಅಂತ ಸಾಧಿಸಿಕೊಂಡು ಬಂದಿತ್ತು. ಅಣ್ವಸ್ತ್ರ ತಂತ್ರಜ್ಞಾನ ಸೋರಿಕೆ ನಿರ್ಬಂಧ ನೀತಿ ಅಂತೊಂದು ಪರಮ ಪಕ್ಷಪಾತಿ ನೀತಿಯನ್ನ ತಾನೇ ಸೃಷ್ಟಿಸಿ, ಅದಕ್ಕೆ ಸಹಿ ಮಾಡುವಂತೆ ಭಾರತವನ್ನು ಬೆದರಿಸುತ್ತಾ ಬಂದಿತ್ತು. ಸೈನ್‌ ಮಾಡದಿದ್ದ ಗತಿ ನೆಟ್ಟಗಾಗುವುದಿಲ್ಲ. ಅನ್ನುವ ಅರ್ಥದ ಪರೋಕ್ಷ ಎಚ್ಚರಿಕೆಗಳನ್ನೂ ಕೊಟ್ಟಿತ್ತು.

ಇಂಥ ದೊಡ್ಡಣ್ಣನೀಗ ರಾತ್ರೋರಾತ್ರಿ ಬದಲಾಗಿಬಿಟ್ಟಿದ್ದಾನೆ. ಭಾರತದ ಸಮಸ್ತ ನಾಗರಿಕ ಬಳಕೆ ಅಣುಸ್ಥಾವರಗಳಿಗೂ ಇಂಧನ ಪೂರೈಸುವ ಭರವಸೆ ಕೊಟ್ಟಿದ್ದಾನೆ. ಮಿಲಿಟರಿ ಬಳಕೆಯ ಉದ್ದೇಶದ ಅಣ್ವಸ್ತ್ರ ಕಾರ್ಯಕ್ರಮಗಳಿಗೆ ಮಾತ್ರ ತನ್ನ ಬೆಂಬಲವಿರುವುದಿಲ್ಲ ಅಂತ ಹೇಳಿದ್ದಾನೆ. ಪ್ರತಿಷ್ಠಿತ-ಅಥವಾ, ಕುಖ್ಯಾತ- ನ್ಯೂಕ್ಲಿಯರ್‌ ಕ್ಲಬ್‌ನಲ್ಲಿರುವ ಐದು ರಾಷ್ಟ್ರಗಳಿಗೆ ಸಿಗುತ್ತವೆಯೋ ಅವೆಲ್ಲವೂ ಇಂಡಿಯಾಕ್ಕೂ ಸಿಗಬೇಕು ಮತ್ತು ಸಿಗುತ್ತವೆ ಅಂತ ಹೇಳಿದ್ದಾನೆ.

ಇಷ್ಟೊಂದು ಔದಾರ್ಯ ಅನುಮಾನ ತರಿಸದೆ ಇರುತ್ತದೆಯೆ?

ಇಂಥದ್ದೊಂದು ರಿಸ್ಕ್‌ ತೆಗೆದು ಕೊಳ್ಳುವುದಕ್ಕೆ ಬುಷ್‌ಗೆ ಅನೇಕ compulsionಗಳಿದ್ದವು. ಮೊದಲನೆಯದಾಗಿ, ಇಂಡಿಯಾ ಅನ್ನುವ ಅಗಾಧ ನಾಲೆಜ್‌ ಮಾರ್ಕೆಟ್ಟನ್ನು ತುಂಬಾ ದಿನಗಳ ಕಾಲ ಅಣ್ವಸ್ತ್ರ ನೀತಿ ಹೆಸರಿನಲ್ಲಿ ದೂರವಿಟ್ಟರೆ ನಷ್ಟವಾಗುವುದು ತನಗೇ ಅನ್ನುವುದು ಬುಷ್‌ಗೆ ಅರ್ಥವಾಗಿತ್ತು. ಎಷ್ಟೇ ಒತ್ತಡ ತಂದರೂ ಭಾರತ ಅಣ್ವಸ್ತ್ರ ನೀತಿಯನ್ನು ಕೈ ಬಿಡುವುದಿಲ್ಲ ಅನ್ನುವುದು ಮನವರಿಕೆಯಾಗಿತ್ತು. ಜೊತೆಗೆ, ತನ್ನ ನೆರವಿಲ್ಲದೆಯೂ-ತನ್ನೆಲ್ಲ ನಿರ್ಬಂಧಗಳ ನಡುವೆಯೂ ಭಾರತದ ಅಣುಶಕ್ತಿ ಕಾರ್ಯಕ್ರಮಗಳು ದಿನೇ ದಿನೇ ಶಕ್ತವಾಗುತ್ತಾ ನಡೆಯುತ್ತಿರುವುದನ್ನು ಅವನು ನೋಡಿದ್ದ! ಅಮೆರಿಕ ನಿರ್ಬಂಧ ಹೇರಿದ ಹೊಸತರಲ್ಲಿ ಭಾರತ ತಬ್ಬಿಬ್ಬಾಗಿದ್ದಿದ್ದು ನಿಜವೇ ಆದರೂ, ನಂತರದ ದಿನಗಳಲ್ಲಿ ನಾವು ಅಮೆರಿಕದ ಮೇಲಿನ ಅವಲಂಬನೆಯಿಂದ ಹೊರಬಂದುಬಿಟ್ಟಿದ್ದೆವು. ಅಮೆರಿಕ ಝುಳಪಿಸುತ್ತಿದ್ದ ನಿರ್ಬಂಧದ ಅಸ್ತ್ರವನ್ನು ಲೇವಡಿ ಮಾಡುವ ರೀತಿಯಲ್ಲಿ ಬೆಳೆದುಬಿಟ್ಟೆವು! ಬುಷ್‌ ಇನ್ನೇನು ತಾನೇ ಮಾಡಿಯಾನು?

ಅವನ ಈ ದಿಢೀರ್‌ ಗೆಳೆತನ ಮತ್ತು ಔದಾರ್ಯದಿಂದ ಭಾರತಕ್ಕೆ ತಕ್ಷಣವೇ ಏನೂ ಲಾಭ ದೊರೆಯಲಿಕ್ಕಿಲ್ಲ. ಯಾಕೆಂದರೆ, ಇವತ್ತು ನಮ್ಮ ದೇಶದಲ್ಲಿರುವ ಆರು ಅತ್ಯಂತ ಶಕ್ತಿಶಾಲಿ ಅಣುಶಕ್ತಿ ಸ್ಥಾವರಗಳೆಲ್ಲವೂ almost ಸೆಟ್ಲ್‌ ಆಗಿಬಿಟ್ಟಿವೆ; ಅಮೆರಿಕವನ್ನು ಕೈಬಿಟ್ಟು, ಬೇರೆ ದೇಶಗಳಿಂದ ಇಂಧನ ತರಿಸಿಕೊಂಡು ವಿದ್ಯುತ್‌ ಉತ್ಪಾದನೆ ಮಾಡುತ್ತಿವೆ. ಆದರೆ, ಇನ್ನು ಮುಂದೆ ಅವುಗಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದಾದ ಸಾಧ್ಯತೆಯಿದೆ. ಜೊತೆಗೆ, ಇನ್ನಷ್ಟು ಹೊಸ ಸ್ಥಾವರಗಳು ತಲೆಯೆತ್ತುವ ಅವಕಾಶವೂ ಇದೆ. ಭಯಂಕರ ವಿದ್ಯುತ್‌ ಕೊರತೆಯಿಂದ ಬಳಲುತ್ತಿರುವ ಈ ದೇಶಕ್ಕೆ ಇಂಥ ಸಾಧ್ಯತೆಗಳು-ಅವಕಾಶಗಳು ಆಗತ್ಯ. ಪರಿಸರವಾದಿಗಳು ಅಣುಶಕ್ತಿ ವಿದ್ಯುತ್‌ ಸ್ಥಾವರಗಳ ಬಗ್ಗೆ ಏನೇ ಕೊಂಕು ತೆಗೆದರೂ, ಇವತ್ತಿನ ಪರಿಸ್ಥಿತಿಯಲ್ಲಿ ಮತ್ತು ಇವತ್ತಿನ ವೈಜ್ಞಾನಿಕ ಪ್ರಗತಿಯ ಹಿನ್ನೆಲೆಯಲ್ಲಿ, ಅಣುಶಕ್ತಿಯೇ ಅತ್ಯಂತ suitable option ಅನ್ನಿಸುತ್ತದೆ. ಥರ್ಮಲ್‌ ಮತ್ತು ಹೈಡೆಲ್‌ ಪ್ರಾಜೆಕ್ಟ್‌ಗಳಿಗಿಂತ ಹೆಚ್ಚು ಪರಿಸರ ಪ್ರೇಮಿ ಅಂತಲೂ ಅನ್ನಿಸುತ್ತದೆ. ಅದು ಇನ್ನೊಂದು ಚರ್ಚೆಯ ವಿಷಯ, ಬಿಡಿ.

ಈಗ, ಅಮೆರಿಕದ ದಿಢೀರ್‌ ಗೆಳೆತನ ಮತ್ತು ಔದಾರ್ಯಕ್ಕೆ ಇರಬಹುದಾದ ಇನ್ನೊಂದು ಅತ್ಯಂತ ಮುಖ್ಯ ಹಿನ್ನೆಲೆಯೆಂದರೆ, ಚೀನಾದ ಪ್ರಗತಿ! ಜಗತ್ತಿನ ಯಾವ ದೊಡ್ಡಣ್ಣ-ಚಿಕ್ಕಣ್ಣ-ಮರಿಯಣ್ಣಗಳಿಗೂ ಕೇರ್‌ ಮಾಡದೆ ಆಗಾಧ ವೇಗದಲ್ಲಿ ಬೆಳೆಯುತ್ತಿದೆ ಚೀನಾ. ಇದು ಅಮೆರಿಕಕ್ಕೆ ಕಸಿವಿಸಿಯ ವಿಷಯ. ಚೀನಾವನ್ನು ಬೆದರಿಸುವುದು, ಮನವೊಲಿಸುವುದು, ಎರಡೂ ಅಮೆರಿಕಕ್ಕೆ ಅಸಾಧ್ಯ.

ಅದಕ್ಕೇ ಇಂಡಿಯಾದ ಹೆಗಲ ಮೇಲೆ ಕೈಹಾಕಿದೆ. ಆಫೀಸಿನಲ್ಲಿ ಯಾರಾದರೊಬ್ಬರು ವಿಪರೀತ ಎತ್ತರಕ್ಕೆ ಬೆಳೆಯುತ್ತಿದ್ದಾರೆ ಅಂತನ್ನಿಸಿದಾಗ ನಾವು ಅವರಿಗೆ ಪರ್ಯಾಯವಾಗಿ ಇನ್ನೊಬ್ಬರನ್ನು ಎತ್ತಿಕಟ್ಟುತ್ತೇವಲ್ಲಾ, ಅಂಥದ್ದೇ ಕೆಲಸವನ್ನು ಅಮೆರಿಕ ಮಾಡಲು ಹೊರಟಿದೆ! ಭಾರತವನ್ನು ಋಣಕ್ಕೆ ದೂಡಿ ಅದನ್ನು ಭದ್ರಗೊಳಿಸಿಬಿಟ್ಟರೆ, ಏಷ್ಯಾದಲ್ಲಿ ಚೀನಾದ ಸೊಕ್ಕಿಗೆ ಕಡಿವಾಣ ಹಾಕಿದಂತೆಯೇ ತಾನೆ?

ಅಮೆರಿಕಾದ ಪತ್ರಿಕೆಗಳು ಬುಷ್‌ನ ಕ್ರಮವನ್ನು ವಿಶ್ಲೇಷಿಸಿರುವುದೇ ಹೀಗೆ. ಇದು ಪೂರ್ತಿ ಸತ್ಯವೂ ಅಲ್ಲ, ಸತ್ಯ ದೂರವೂ ಅಲ್ಲ. ಅಮೆರಿಕದ ಪಾಲಿಗೆ ಚೀನಾ ಒಂದು ದೊಡ್ಡ threat ಅನ್ನುವುದು ಹೌದಾದರೂ, ಅದಕ್ಕಾಗಿ ಭಾರತವನ್ನು ಓಲೈಸುವ ಅನಿವಾರ್ಯತೆ ಬುಷ್‌ಗೆ ಖಂಡಿತ ಇಲ್ಲ. ಯಾಕೆಂದರೆ, ಅನಾದಿ ಕಾಲದಿಂದಲೂ ಭಾರತಕ್ಕೆ ತನ್ನದೇ ಆದ ಒಂದು ಸ್ವತಂತ್ರ ಬುದ್ಧಿಯಿದೆ-ಮನಸ್ಸಿದೆ ಅನ್ನುವುದು ಬುಷ್‌ಗೆ ಗೊತ್ತು! ತಾನು ಸಹಾಯ ಮಾಡಿದ ಮಾತ್ರಕ್ಕೇ ಭಾರತ ತನ್ನ ಎಲ್ಲಾ ದರ್ಬಾರುಗಳಿಗೂ ಬೆಂಬಲ ಕೊಡಲಾರದು ಅನ್ನುವುದನ್ನು ಅವನಿಗೆ ಯಾರೂ ಬಿಡಿಸಿ ಹೇಳಬೇಕಿಲ್ಲ. ಇರಾಕ್‌ ಯುದ್ಧದ ಸಮಯದಲ್ಲೇ ಅದು ಅವನ ಅನುಭವಕ್ಕೆ ಬಂದಿದೆ. ಸ್ವತಂತ್ರವಾಗಿ ತನ್ನ ನಿರ್ಧಾರವನ್ನು ತಾನೇ ತೆಗೆದುಕೊಳ್ಳಬಲ್ಲ ಇಂಥದ್ದೊಂದು ದೇಶವನ್ನು ಓಲೈಸಿದರೆ ಅವನಿಗಾಗುವ ಪ್ರಯೋಜನವಾದರೂ ಏನು? ಯಾವತ್ತಿದ್ದರೂ ಅಮೆರಿಕವೆಂಬ ದುರ್ಯೋಧನನ ಪಾಲಿಗೆ ಕರ್ಣನಂತಿರುವುದು ಪಾಕಿಸ್ತಾನವೇ. ಇದು ಬುಷ್‌ಗೆ ಚೆನ್ನಾಗಿ ಗೊತ್ತು. ಮತ್ತು, ಈ ಕಾರಣಕ್ಕಾಗಿಯೇ ಅವನೀಗ ಭಾರತದ ಜೊತೆ ಅಣುಶಕ್ತಿ ಸಹಕಾರದ ಹ್ಯಾಂಡ್‌ ಶೇಕ್‌ ಮಾಡಿದ್ದಾನೆ!

ಭಾರತದ ಜೊತೆಗಿನ ಈ ಒಪ್ಪಂದಕ್ಕೆ ಹೇಗಾದರೂ ಮಾಡಿ ಅಮೆರಿಕದ ಸಂಸತ್ತಿನ ಅನುಮೋದನೆ ದಕ್ಕಿಸಿಕೊಂಡುಬಿಟ್ಟರೆ, ಮುಂದೆ ಪಾಕಿಸ್ತಾನಕ್ಕೂ ಇಂಥದ್ದೇ ಒಂದು ಸಹಕಾರ ಕೊಡಬಹುದಲ್ಲಾ! ಭಾರತಕ್ಕೆ ಓಕೆ ಹೇಳಿದ ಮೇಲೆ ಪಾಕಿಸ್ತಾನಕ್ಕೆ ನೋ ಅಂತ ಹೇಳುವುದು ಅಮೆರಿಕನ್‌ ಕಾಂಗ್ರೆಸ್ಸಿಗೆ ಕಷ್ಟವಾಗುತ್ತದೆ.‘ಭಯೋತ್ಪಾದನೆ ವಿರುದ್ಧದ ಸಮರ’ದಲ್ಲಿ ತನಗೆ ಪಾಕಿಸ್ತಾನದಿಂದ ಆಗಿರುವ ಪ್ರಯೋಜನಗಳನ್ನು ಮುಂದೊಡ್ಡಿ, ಆದೇಶದ ಕೈ ಬಲಪಡಿಸುವುದಕ್ಕೆ ಇಂಥ ಕ್ರಮಗಳು ಅಗತ್ಯ ಅಂತ ವಾದಿಸುವುದು ಬುಷ್‌ಗೆ ಆಗ ಸುಲಭವಾಗುತ್ತದೆ. ಭಾರತ ಒಂದು ಡೆಮಾಕ್ರಟಿಕ್‌ ರಾಷ್ಟ್ರ; ಪಾಕಿಸ್ತಾನದಲ್ಲಿರುವುದು ಸರ್ವಾಧಿಕಾರ ಅನ್ನುವ ವಾದವನ್ನು ತಾಂತ್ರಿಕವಾಗಿ ಅಲ್ಲಗಳೆಯುವುದಕ್ಕೆ ಬೇಕಾದಷ್ಟು ಆಧಾರಗಳನ್ನು ಬುಷ್‌ನ ಜೊತೆ ಊಟ ಮಾಡುವುದು ಮಾತ್ರ! ಸಹಿ ಹಾಕಲಿಕ್ಕೆ ಬೇಕಾದ ಪೆನ್ನೂ-ಪೇಪರೂ ಸೇರಿದಂತೆ ಉಳಿದೆಲ್ಲವೂ ಸಿದ್ಧವಾಗಿದೆ.

ಭಾರತಕ್ಕೆ ಅಣುಶಕ್ತಿ ಸಹಕಾರ ನೀಡುವುದಕ್ಕೆ ಬುಷ್‌ಗೆ ಇನ್ನೊಂದು ಕಾರಣವೂ ಇದೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಒಂದು ಖಾಯಂ ಸ್ಥಾನಕ್ಕಾಗಿ ನಮ್ಮ ದೇಶ ಬಡಿದಾಡುತ್ತಿದೆಯಲ್ಲಾ, ಆ ಪ್ರಯತ್ನದಿಂದ ಹಿಂದೆ ಸರಿಯುವಂತೆ ನಮ್ಮ ಮೇಲೆ ಒತ್ತಡ ತರುವುದು! ಈಗ ಭದ್ರತಾ ಮಂಡಳಿಯಲ್ಲಿರುವುದು ಐದೇ ರಾಷ್ಟ್ರಗಳು; ಅಮೆರಿಕ, ರಷ್ಯ, ಇಂಗ್ಲಂಡ್‌, ಫ್ರಾನ್ಸ್‌ ಮತ್ತು ಚೀನಾ. ಜಿ-ಫೋರ್‌ ಅಂತ ಒಂದು ವೇದಿಕೆ ನಿರ್ಮಿಸಿಕೊಂಡಿರುವ ಜಪಾನ್‌, ಜರ್ಮನಿ, ಇಂಡಿಯಾ ಮತ್ತು ಬ್ರೆಜಿಲ್‌ಗಳು ಹೊರಟಿವೆ. ಆ ದೇಶಗಳಿಗಿರುವ ವಿಟೋ ಅಧಿಕಾರವನ್ನು ನಮಗೂ ಕೊಡಿ, ನಮ್ಮನ್ನೂ ಭದ್ರತಾ ಮಂಡಳಿಯಲ್ಲಿ ಅಮೆರಿಕವನ್ನೂ,ವಿಶ್ವಸಂಸ್ಥೆ ಅಧ್ಯಕ್ಷ ಕೋಫಿ ಅನ್ನಾನ್‌ನನ್ನೂ ಕಸಿವಿಸಿಗೊಳಿಸಿದೆ. ಅನ್ನಾನ್‌ ಅಂತೂ ಮೊನ್ನೆ ಭಾರತಕ್ಕೆ ಬಂದಿದ್ದಾಗ, ಪಕ್ಕಾ ಅಮೆರಿಕನ್‌ ಏಜೆಂಟನ ಥರ ಮಾತಾಡಿ, ‘...ವೀಟೋ ಸಹಿತ ಖಾಯಂ ಸದಸ್ಯತ್ವದ ಆಸೆಯನ್ನು ಭಾರತ ಕೈಬಿಡಬೇಕು. ಅದು ಸಾಧ್ಯವಾಗುವ ಮಾತಲ್ಲ. ಬೇಕಿದ್ದರೆ,ವೀಟೋ ಇಲ್ಲದೆಯೇ ಸದಸ್ಯರಾಗುವ ಅವಕಾಶ ಕೊಡಬಹುದು..’ ಅಂದಿದ್ದ.

ವಿಶ್ವಸಂಸ್ಥೆಯ ಬಗ್ಗೆ ಒಂದಿಷ್ಟು ಅಂಕಿ ಅಂಶಗಳನ್ನು ನೋಡಿ: ಶಾಂತಿ ನಿರ್ವಹಣೆಗೆ ಅಂತ ವಿಶ್ವಸಂಸ್ಥೆ ನಿಯೋಜಿಸಿಕೊಳ್ಳುವ ಶಾಂತಿಪಾಲನಾ ಪಡೆಗಳಿಗೆ ಅತ್ಯಧಿಕ ಸೈನಿಕರ ಸರಬರಾಜಾಗುವುದು ಭಾರತ, ಬ್ರೆಜಿಲ್‌, ಜರ್ಮನಿ ಮತ್ತು ಜಪಾನ್‌ಗಳಿಂದ. ವಿಶ್ವಸಂಸ್ಥೆಯ ಬಜೆಟ್‌ನಲ್ಲಿ ಅತ್ಯಧಿಕ ಹೊರೆ ಹೊತ್ತು ಕೊಂಡಿರುವುದು ಜಪಾನ್‌. ಅದರ ಹೊರೆ ಇಪ್ಪತ್ತು ಪರ್ಸೆಂಟ್‌. ಜರ್ಮನಿಯದು ಹತ್ತು ಪರ್ಸೆಂಟ್‌. ಆದರೆ, ವಿಶ್ವಸಂಸ್ಥೆಯನ್ನು ಮನಬಂದಂತೆಲ್ಲಾ ದುರ್ಬಳಕೆ ಮಾಡಿಕೊಳ್ಳುವ ಅಮೆರಿಕದ್ದು ಜರ್ಮನಿಗಿಂತಲೂ ಕಡಿಮೆ! ಚೀನಾದ ಪಾಲಂತೂ ಬರೀ ಒಂದು ಪರ್ಸೆಂಟ್‌!

ವಿಶ್ವಸಂಸ್ಥೆಯಲ್ಲಿ ಯಾರದೋ ಲಾಭಕ್ಕಾಗಿ ನಮ್ಮ ಸೈನಿಕರು ದಶಕಗಟ್ಟಲೆಯಿಂದ ಹೋರಾಡುತ್ತಾ-ಪ್ರಾಣ ಬಿಡುತ್ತಾ ಬಂದಿದ್ದಾರೆ. ಇದುವರೆಗೂ ಸುಮಾರು ಹದಿನೈದು ಲಕ್ಷ ಸೈನಿಕರು ವಿಶ್ವಸಂಸ್ಥೆ ಶಾಂತಿ ಪಾಲನಾ ಪಡೆಗಳಿಗಾಗಿ ದುಡಿದಿದ್ದಾರೆ; ಮೂರು ಲಕ್ಷಕ್ಕೂ ಹೆಚ್ಚು ಜನ ಅದೇ ಕೆಲಸದಲ್ಲಿದ್ದಾಗಲೇ ಜೀವ ತೆತ್ತಿದ್ದಾರೆ.ಆದರೆ, ನಮ್ಮ ಈ ಸೈನಿಕರು ವಿಶ್ವಸಂಸ್ಥೆಯ ದೃಷ್ಟಿಯಲ್ಲಿ ಯಾವತ್ತಿದ್ದರೂ ಮಲತಾಯಿಯ ಮಕ್ಕಳು. ಬಿಳಿಯ ಸೈನಿಕರಿಗೆ ಸಿಕ್ಕಷ್ಟು ಸಂಬಳ-ಸವಲತ್ತುಗಳಾಗಲೀ, ಅಧಿಕಾರವಾಗಲೀ ಅವರಿಗೆ ಸಿಕ್ಕುವುದಿಲ್ಲ. ಅಷ್ಟ್ಯಾಕೆ,ನಮ್ಮ ಸೇನಾ ಅಧಿಕಾರಿಗಳ ಕೈಕೆಳಗೆ ದುಡಿಯಲು ಬಿಳಿಯ ಸೈನಿಕರು ನಿರಾಕರಿಸಿದರೆ, ಅವರ ವಿರುದ್ಧ ಒಂದು ಕನಿಷ್ಠ ವಾಗ್ದಾಳಿಯನ್ನೂ ಈ ನರಸತ್ತ ಸಂಸ್ಥೆ ಮಾಡುವುದಿಲ್ಲ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ, ಯುಗೋಸ್ಲಾವಿಯಾದಲ್ಲಿ ಶಾಂತಿ ಪಾಲನೆ ಕೆಲಸ ಮಾಡುತ್ತಿದ್ದ ಬ್ರಿಟಿಷ್‌ ಸೈನಿಕರು ನಮ್ಮ ಜನರಲ್‌ ಸತೀಶ್‌ ನಂಬಿಯಾರ್‌ರ ಅಧಿಕಾರವನ್ನು ಪ್ರಶ್ನಿಸಿದ್ದು, ಮತ್ತು ವಿಶ್ವಸಂಸ್ಥೆ ಬಾಯಿಗೆ ಬೀಗ ಹಾಕಿ ಕೊಂಡು ನೋಡುತ್ತಾ ಕೂತಿದ್ದು.

1950ರಲ್ಲಿ ಚೀನಾದ ಬದಲು ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವದ ಸ್ಥಾನ ಭಾರತಕ್ಕೇ ಸಿಕ್ಕುವ ಅವಕಾಶವಿತ್ತು. ಅಂಥದ್ದೊಂದು ಪ್ರಸ್ತಾಪವನ್ನು ವಿಶ್ವಸಂಸ್ಥೆ ತಾನೇ ಖುದ್ದಾಗಿ ಭಾರತದ ಬಾಗಿಲಿಗೆ ಹೊತ್ತು ತಂದಿತ್ತು. ಆದರೆ ಆಗ ‘ಹಿಂದೀ-ಚೀನೀ ಭಾಯಿ-ಭಾಯಿ’ಯ ಗುಂಗಿನಲ್ಲಿದ್ದ ನೆಹರೂ ಎಂಬ ಮಹಾಪುರಷ,‘ಅಯ್ಯಯ್ಯೋ, ಚೀನಾದ ಜಾಗವನ್ನ ನಾವು ಕಸಿದುಕೊಳ್ಳುವುದಾ?ಶಾಂತಂ ಪಾಪಂ! ನಮ್ಮ ಸ್ನೇಹದ ಗತಿ ಏನಾದೀತು?’ಅಂತ ಹೌಹಾರಿ, ಆ ಖಾಯಂ ಸದಸ್ಯತ್ವವನ್ನ ತಾವೇ ಖುದ್ದಾಗಿ ಮುಂದೆ ನಿಂತು ಚೀನಾಕ್ಕೆ ಕೊಡಿಸಿದ್ದರು. ಇದಕ್ಕೆ ಪ್ರತಿಫಲವಾಗಿ ಆಮೇಲೆ ಯುದ್ಧದಾಹಿ ಚೀನಾದ ಕೈಯಿಂದಲೇ ಮೂತಿಗೆ ಬಡಿಸಿಕೊಂಡಿದ್ದರು.

ನೆಹರೂ ಅವತ್ತು ಮಾಡಿದ ಪ್ರಮಾದಕ್ಕೆ ಭಾರತ ಈವತ್ತಿಗೂ ಬೆಲೆ ತೆರುತ್ತಲೇ ಇದೆ. ವಿಶ್ವಸಂಸ್ಥೆಯ ಅಧಿಕಾರದಿಂದ ದೂರವೇ ಉಳಿದುಬಿಟ್ಟಿದೆ. ಈಗ ತನ್ನ ಪ್ರಯತ್ನದಲ್ಲಿ ಯಶಸ್ಸು ಕಾಣುವುದಕ್ಕೆ ಭಾರತಕ್ಕೆ ಅಮೆರಿಕದ ಸಹಾಯ ಬೇಕೇ ಬೇಕು. ಅಮೆರಿಕದ ಹೂಂ ಅನ್ನದೆ ವಿಶ್ವ ಸಂಸ್ಥೆಯ ಕದ ತೆರೆಯುವುದಿಲ್ಲ. ಆದರೆ, ಮೊನ್ನೆ ಮನ್‌ಮೋಹನ್‌ಸಿಂಗ್‌ ಅವರಿಗೆ ಅಮೆರಿಕದಿಂದ ನ್ಯೂಕ್ಲಿಯರ್‌ ಹ್ಯಾಂಡ್‌ಶೇಕ್‌ ಸಿಕ್ಕಿತೇ ಹೊರತು, ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯತ್ವದ ಬಗ್ಗೆ ಭರವಸೆ ಸಿಗಲಿಲ್ಲ. ಯಾಕೆಂದರೆ,ಅದನ್ನು ಭಾರತಕ್ಕೆ ದಕ್ಕಿಸಿಕೊಟ್ಟು ಏಷ್ಯದ ಎರಡು ಬಲಿಷ್ಠ ನೆರೆ-ಹೊರೆ ರಾಷ್ಟ್ರಗಳ ಕೈಗೆ ಅಧಿಕಾರದ ಚುಕ್ಕಾಣಿ ಕೊಟ್ಟು ಬಿಡುವಷ್ಟು ಮೂರ್ಖ ದೇಶವಲ್ಲ ಅಮೆರಿಕ!

ನ್ಯೂಕ್ಲಿಯರ್‌ ಹ್ಯಾಂಡ್‌ಶೇಕ್‌ನ ಅಬ್ಬರದಲ್ಲಿ ಈ ವಿಷಯ ಮುಚ್ಚಿಹೋಗಿದೆ. ಸದ್ಯದ ಮಟ್ಟಿಗೆ, ಭದ್ರತಾ ಮಂಡಳಿಯ ಕುರ್ಚಿ ಭಾರತಕ್ಕೆ ಬರೀ ಕನ್ನಡಿಯಾಳಗಿನ ಗಂಟಿನಂತೆಯೇ ಸರಿ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more