• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿಯಲ್ಲಿ ಮುದುಕರ ಮುಚ್ಚಟೆ ಮುಗಿಯಿತೆ?

By Staff
|
Ravi Belagere on Thatskannada.com ರವಿ ಬೆಳಗೆರೆ
ಕೆ.ಎಸ್‌. ಸುದರ್ಶನ್‌ ಎಂಬ ವೃದ್ಧ ಕನ್ನಡ ಬ್ರಾಹ್ಮಣ ಬಾಯಿಬಿಟ್ಟಾಗಲೆಲ್ಲಾ ಹೀಗೊಂದು ಅಲ್ಲೋಲಕಲ್ಲೋಲವಾಗುತ್ತದೆ!

ಯಾಕೆಂದರೆ, ಸುದರ್ಶನ್‌ರ ಬಾಯಿಯಲ್ಲಿ ಬೆಂಕಿಯಿದೆ; ಅವರ ಹಿಂದೆ, ಈ ಬೆಂಕಿಗೆ ತುಪ್ಪ ಸುರಿದು ಮೈ ಕಾಯಿಸಿಕೊಳ್ಳುವ ಒಂದು ಬೃಹತ್‌ ಹಿಂದುತ್ವದ ಪಡೆಯಿದೆ.

ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ಆರೆಸ್ಸೆಸ್‌ನಂಥ ಒಂದು ಸಂಘಟನೆಯ ಮೇಲೆ ಡಿಪೆಂಡ್‌ ಆಗಿರುವುದರಿಂದ, ಸುದರ್ಶನ್‌ ಹೊತ್ತಿಸುವ ಬೆಂಕಿಯಲ್ಲಿ ಬಿಜೆಪಿ ಆಗೀಗ ಒಂದಿಷ್ಟು ಮೈಕೈ ಸುಟ್ಟುಕೊಳ್ಳಲೇಬೇಕು. ಮೊನ್ನೆ ಆಗಿದ್ದೂ ಇದೇ. ಎನ್‌ಡಿ ಟೀವಿಗೆ ಸಂದರ್ಶನ ಕೊಟ್ಟ ಸುದರ್ಶನ್‌, ಏಕಾಏಕಿ-ಯಾವ ಮುನ್ಸೂಚನೆಯೂ ಇಲ್ಲದೆ- ಅಡ್ವಾಣಿ ಹಾಗೂ ವಾಜಪೇಯಿಯವರ ಜನ್ಮ ಜಾಲಾಡಿಬಿಟ್ಟರು. ಇಂಡಿಯಾ ಕಂಡ ಅತ್ಯಂತ ಕೆಟ್ಟ ಪ್ರಧಾನ ಮಂತ್ರಿ, ಈ ವಾಜಪೇಯಿ ಅನ್ನುವ ರೀತಿಯಲ್ಲಿ ಬಡಬಡಿಸಿದರು. ವೃದ್ಧರ ಹಿಡಿತದಿಂದ ಬಿಜೆಪಿ ಹೊರಬರಬೇಕು ಎಂದು ಅಪ್ಪಣೆ ಕೊಟ್ಟರು. ಆಡ್ವಾಣಿ- ವಾಜಪೇಯಿ ನಂತರ ಸ್ಥಾನದಲ್ಲಿರುವ ಯುವಶಕ್ತಿಗಳು ನಾಯಕತ್ವ ವಹಿಸಿಕೊಳ್ಳಬೇಕು ಅಂತ ಆದೇಶ ನೀಡಿದರು.

ಯಾಕೆಂದರೆ, ಆರೆಸ್ಸೆಸ್‌ನ ಪಾಲಿಗೆ ಅಡ್ವಾಣಿ ಹಾಗೂ ವಾಜಪೇಯಿ ಇಬ್ಬರೂ ಈಗಾಗಲೇ ಆರಿಹೋಗಿರುವ ಕೆಂಡಗಳು. There is no fire in them. ಹಿಂದುತ್ವ ಸಿದ್ಧಾಂತಕ್ಕೆ ತುತ್ತೂರಿಯಾಗಬಲ್ಲಂಥ, ಆರೆಸ್ಸೆಸ್‌ನ ಅಜೆಂಡಾಗಳೆಲ್ಲವನ್ನೂ ಚಾಚೂ ತಪ್ಪದೆ ಜಾರಿಗೆ ತರಬಲ್ಲಂಥ, ಸೆಕ್ಯುಲರ್‌ ರಾಷ್ಟ್ರದ ಸ್ವರೂಪವನ್ನೇ ವಿರೋಧಿಸುವಂಥ ಬಿಜೆಪಿ; ಆರೆಸ್ಸಿಸ್‌ಗೆ ಬೇಕು; ಸಮ್ಮಿಶ್ರ ಸರ್ಕಾರದ ಅನಿವಾರ್ಯತೆ ಯಲ್ಲಿ ಸಿಲುಕಿಕೊಂಡು ಮುಲುಕುವಂತಹ ನರಸತ್ತ ಬಿಜೆಪಿ ಅಲ್ಲ.

ಸುದರ್ಶನರ ಈ ಧೋರಣೆಯ ಹಿಂದಿನ ಅಪಾಯಗಳು ಥಟ್ಟನೆ ಗೋಚರವಾಗಲಿಕ್ಕಿಲ್ಲ. ಅರೆ, ಯುವಶಕ್ತಿಗೆ ನಾಯಕತ್ವ ಸಿಕ್ಕರೆ ಒಳ್ಳೆಯದೇ ಅಲ್ಲವೆ, ಅಂತನ್ನಿಸಿಬಿಡುತ್ತದೆ. ನಾಯಕತ್ವ ಯುವ ತಲೆಗಳ ಕೈಯಲ್ಲಿದ್ದಾಗ ಮಾತ್ರವೇ ಒಂದು ಪಕ್ಷಕ್ಕೆ ಅಥವಾ ಒಂದು ಸರ್ಕಾರಕ್ಕೆ ಇವತ್ತಿನ ಪ್ರಪಂಚದ ಸ್ಥಿತ್ಯಂತರಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದು ಸಾಧ್ಯ ಅನ್ನಿಸುತ್ತದೆ. ಯಾರ ಸಹಾಯವೂ ಇಲ್ಲದೆ ನಡೆದಾಡಬಲ್ಲ, ಅಗತ್ಯ ಬಿದ್ದಾಗ ಗಂಟೆಗಟ್ಟಲೆ ನಿಂತು ಮಾತಾಡಬಲ್ಲ, ಸಂದರ್ಭ ಸಿಕ್ಕಾಗಲೆಲ್ಲಾ ದೇಶಾದ್ಯಂತ ಓಡಾಡಿ ಸಂಘಟನೆಗಿಳಿಯಬಲ್ಲ, ವಿದೇಶೀ ಮುಖಂಡರುಗಳ ಜೊತೆ ಎದೆ ಸೆಟೆಸಿ ನಿಂತು ಮಾತಾಡಬಲ್ಲ, ನಿಂತ ನಿಲುವಿನಲ್ಲೇ ಥಟ್ಟನೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬಲ್ಲಂಥ ಅಲರ್ಟ್‌ ಮತ್ತು ಆರೋಗ್ಯವಂತ ನಾಯಕರು ನಮ್ಮ ಸಮಾಜವನ್ನು ಚೆನ್ನಾಗಿ ಕಟ್ಟಬಲ್ಲರು ಅಂತಲೂ ಅನ್ನಿಸುತ್ತದೆ. ಒಂದು ಹಂತದ ಮಟ್ಟಿಗೆ ಅದು ನಿಜವೂ ಹೌದು, ಆದರೆ ಅದು ಪೂರ್ತಿ ಕಾರ್ಯಸಾಧುವಲ್ಲ ; ಎಷ್ಟಾದರೂ ಬೇರು ಕಳೆದುಕೊಂಡ ಚಿಗುರುಗಳು ಹೆಚ್ಚು ಹೊತ್ತು ಹಸಿರಾಗಿರಲಾರವು, ಗೊತ್ತು ತಾನೆ?

ಅದರ ಬಗ್ಗೆ ಆಮೇಲೆ ನೋಡೋಣ. ಮೊದಲು, ಸುದರ್ಶನ್‌ರ ಮಾತಿನ ಹಿಂದಿನ ರಾಜಕೀಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಿಜಕ್ಕೂ, ಬಿಜೆಪಿಯ ವೃದ್ಧರೆಲ್ಲರೂ ನಾಯಕತ್ವಕ್ಕೆ ಅನರ್ಹರು, ಅವರು ಮುಂದಾಳತ್ವವನ್ನು ಯುವಕರಿಗೆ ಬಿಟ್ಟುಕೊಟ್ಟು ಬಿಡಬೇಕು ಅನ್ನುವ conviction ಏನೂ ಸುದರ್ಶನ್‌ಗೆ ಖಂಡಿತ ಇಲ್ಲ. ಯಾಕೆಂದರೆ, ವೃದ್ಧರಿಗೆ ನಿವೃತ್ತಿ ಕೊಡಬೇಕು ಅಂತೇನಾದರೂ ಆರೆಸ್ಸೆಸ್‌ನಲ್ಲಾಗಲೀ, ಬಿಜೆಪಿಯಲ್ಲಾಗಲೀ ನಿಯಮ ಬಂದರೆ, ಪಿಂಚಣಿ ಪಡೆಯುವವರ ಸಾಲಿನಲ್ಲಿ ವಾಜಪೇಯಿ ಹಾಗೂ ಅಡ್ವಾಣಿಯವರ ಹಿಂದೆ ಮೂರನೆಯವರಾಗಿ ಸುದರ್ಶನ್‌ ಅವರೇ ನಿಲ್ಲಬೇಕಾಗುತ್ತದೆ! ಅವರು 81 ವರ್ಷದ ವಾಜಪೇಯಿಗಿಂತ 5 ಮತ್ತು 78 ವರ್ಷದ ಅಡ್ವಾಣಿಗಿಂತ ಎರಡು ವರ್ಷಕ್ಕಷ್ಟೇ ಚಿಕ್ಕವರು. ಈ ಮೂವರನ್ನು ಬಿಟ್ಟರೆ ರಿಟೈರ್‌ಮೆಂಟ್‌ ಸಾಲಿಗೆ ಬರಬಲ್ಲವರು ಒಬ್ಬ ಮುರಳಿ ಮನೋಹರ ಜೋಷಿ ಮಾತ್ರ. ಸಂಘ ಪರಿವಾರದ ಪಡಸಾಲೆಯಲ್ಲಿ ಇನ್ಯಾರಿದ್ದಾರೆ ವೃದ್ಧರು? At least, ನಾಯಕತ್ವದ ವೇದಿಕೆಯ ಹತ್ತಿರ ಇರುವವರಂತೂ ಇಷ್ಟೇ ಹಿರಿತಲೆಗಳು. ಉಳಿದದ್ದೆಲ್ಲಾ ಪ್ರಮೋದ್‌ ಮಹಾಜನ್‌, ಸುಷ್ಮಾ ಸ್ವರಾಜ್‌, ಅರುಣ್‌ ಜೈಟ್ಲಿ, ವೆಂಕಯ್ಯನಾಯ್ಡು ಥರದವರು. ಜಸ್ವಂತ್‌ ಸಿಂಗ್‌-ಯಶವಂತ್‌ ಸಿನ್ಹಾ ಎಲ್ಲಾ ಬಿಜೆಪಿಯಲ್ಲಿ ಇದ್ದೂ ಇಲ್ಲದಂತಿರುವವರು.

ಅಂದರೆ, ವೃದ್ಧರು ನಾಯಕತ್ವ ಬಿಟ್ಟು ಕೊಡಬೇಕು ಎಂಬ ಸುದರ್ಶನ್‌ ಹೇಳಿಕೆ, ಅವರು ಅಡ್ವಾಣಿ ಹಾಗೂ ವಾಜಪೇಯಿಯವರ ಮೇಲೆ ಮಾಡಿರುವ ನೇರ ದಾಳಿ. ವಾಜಪೇಯಿ ಜೊತೆಗಂತೂ ಸುದರ್ಶನ್‌ಗೆ ಎಂದೂ ಕೂಡ ಸೌಹಾರ್ದಯುತ ಅಂತ ಹೇಳಬಹುದಾದಂಥ ಸಂಬಂಧ ಇಲ್ಲವೇ ಇಲ್ಲ. ಸಮ್ಮಿಶ್ರ ಸರ್ಕಾರ ನಡೆಸುವುದಕ್ಕಾಗಿ ಬಿಜೆಪಿಯ ಸಿದ್ಧಾಂತಗಳನ್ನು ವಾಜಪೇಯಿ ಅಡವಿಟ್ಟು ಬಿಟ್ಟರು ಅನ್ನುವ ಕೋಪ ಅವರಿಗೆ. ಸರಳ ಜೀವನ-ಉನ್ನತ ಯೋಚನೆ ಅನ್ನುವ ಆರೆಸ್ಸೆಸ್‌ನ ತತ್ವ ವಾಜಪೇಯಿ ಕಾಲದಲ್ಲಿ ಫೈವ್‌ಸ್ಟಾರ್‌ ಕಲ್ಚರ್‌ಗೆ ಬದಲಾಗಿ ಹೋಯಿತು ಅನ್ನುವ ಕುದಿ ಬೇರೆ. ಇವೆರಡಕ್ಕೂ ಸೈದ್ಧಾಂತಿಕ ಮಟ್ಟದ ಆಕ್ರೋಶಗಳು. ಆದರೆ ಸುದರ್ಶನ್‌ ಪಾಲಿಗೆ ಸಿದ್ಧಾಂತವಷ್ಟೇ ಮುಖ್ಯವಲ್ಲ. ಹಾಗಾಗಿ ಅವರು ಮಾಜಿ ಪ್ರಧಾನಿಯ ಮಾಜಿ ಭದ್ರತಾ ಸಲಹೆಗಾರ ಬ್ರಜೇಶ್‌ ಮಿಶ್ರಾ ಮತ್ತು ಮಾಜಿ ಪ್ರಧಾನಿಯ ದತ್ತು ಅಳಿಯ ರಂಜನ್‌ ಭಟ್ಟಾಚಾರ್ಯ ಅವರುಗಳ ‘ಅತಿರೇಕಿ ವರ್ತನೆ’ಗಳನ್ನೇ ಮುಂದುಮಾಡಿಕೊಂಡು, ವಾಜಪೇಯಿ ವಿರುದ್ಧ ಉದ್ದಕ್ಕೂ ದ್ವೇಷ ಸಾಧಿಸಿಕೊಂಡೇ ಬಂದರು. ಆದರೆ ಎನ್‌ಡಿಎ ಅಧಿಕಾರದಲ್ಲಿದ್ದಾಗ, ತಮ್ಮ ಅಸಮಾಧನಗಳು ಸರ್ಕಾರವನ್ನು ಉರುಳಿಸುವಂತಾಗಬಾರದು ಎಂಬ ಕಾರಣಕ್ಕಾಗಿ ಮದನ್‌ ದಾಸ್‌ ದೇವಿ- ಮುರಳಿ ಮನೋಹರ್‌ ಜೋಷಿ ಹಾಗೂ ಖುಷಬಾವು ಠಾಕ್ರೆಯಂಥವರ ಒತ್ತಾಯಕ್ಕೆ ಕಟ್ಟುಬಿದ್ದು, ತಕ್ಕಮಟ್ಟಿಗೆ ಬಾಯಿ ಹೊಲಿದುಕೊಂಡಿದ್ದರು.

ಈಗ ಕಳೆದುಕೊಳ್ಳುವುದೇನೂ ಇಲ್ಲವಲ್ಲ ? ಹಾಗಾಗೇ ಸಮಯ ಸಿಕ್ಕಾಗಲೆಲ್ಲಾ ವಾಜಪೇಯಿಯ ಇಮೇಜನ್ನು ಹರಿದು ಛಿದ್ರ ಮಾಡಿದ್ದಾರೆ. ಪಕ್ಷಕ್ಕಿಂತ ದೊಡ್ಡವರು ಎಂಬಂತೆ ಬೆಳೆದ ವಾಜಪೇಯಿ ಇಮೇಜನ್ನು ಸುದರ್ಶನ್‌ ಎಂದೂ ಸಹಿಸಿಕೊಂಡವರಲ್ಲ. ಇಷ್ಟರಮಟ್ಟಿಗೆ, ವಾಜಪೇಯಿ ಬಗ್ಗೆ ಎನ್‌ಡಿಟೀವಿಯಲ್ಲಿ ಸುದರ್ಶನ್‌ ಹೇಳಿದ್ದ ಕ್ಕೆ ಒಂದು ತಾರ್ಕಿಕ ಹಿನ್ನೆಲೆಯಿದೆ.

BJP president L.K. Advaniಆದರೆ ಅಡ್ವಾಣಿಯನ್ನು ಅವರು ತಡವಿಕೊಂಡಿದ್ದು ಮಾತ್ರ ಆರೆಸ್ಸೆಸ್‌- ಬಿಜೆಪಿ ಎರಡಕ್ಕೂ ನಂಬಲ ಸಾಧ್ಯವೆನ್ನಿಸುವಂಥ ಆಘಾತ. ಅಡ್ವಾಣಿ ಅನಾದಿ ಕಾಲದಿಂದಲೂ ಆರೆಸ್ಸೆಸ್‌ ಜೊತೆಯೇ ಗುರುತಿಸಿ ಕೊಂಡವರು. ಆರೆಸ್ಸೆಸ್‌ನ ಸಿದ್ಧಾಂತಗಳ ಮೂಸೆಯಲ್ಲೇ ಬೆಳೆದುಬಂದವರು. ಬಿಜೆಪಿಯಲ್ಲಿರುವ ಆರೆಸ್ಸೆಸ್‌ನ ಬೆಸ್ಟ್‌ ರೆಪ್ರೆಸೆಂಟಿಟಿವ್‌. ವೆಂಕಯ್ಯ ನಾಯ್ಡು ಅವರಿಂದ ಅಡ್ವಾಣಿ ಪಕ್ಷದ ಅಧ್ಯಕ್ಷಗಿರಿಯನ್ನು ಪಡೆದಾಗ ಇದೇ ಸುದರ್ಶನ್‌, ಇದೇ ಅಡ್ವಾಣಿ ಬಗ್ಗೆ ಮೆಚ್ಚುಗೆಯ ಮಾತಾಡಿದ್ದರು.‘ದಿಕ್ಕು ತಪ್ಪಿದ ಬಿಜೆಪಿ ಈಗ ಅಡ್ವಾಣಿಯವರನ್ನು ನಾಯಕರನ್ನಾಗಿ ಮಾಡಿಕೊಂಡು, ತನ್ನ ತಪ್ಪು ತಿದ್ದಿಕೊಂಡಿದೆ; ಬಿಜೆಪಿಯ ಮೂಲಭೂತ ತತ್ವಗಳಿಗೆ ಮತ್ತೆ ಬಂದಿದೆ’ ಅಂತ ಹೇಳಿದ್ದರು.

ಇಂಥ ಅಡ್ವಾಣಿಯೀಗ ಆರೆಸ್ಸಿಸ್‌ ದೃಷ್ಟಿಯಲ್ಲಿ ಯಾಕೆ ದಿಢೀರ್‌ ವಿಲನ್‌ ಆಗಿಬಿಟ್ಟದ್ದಾರೆಂದರೆ, ಅವರ ಪಕ್ಕದಲ್ಲಿ ಉಪಾಧ್ಯಕ್ಷರಾಗಿ ವೆಂಕಯ್ಯನಾಯ್ಡು ಕೂತಿದ್ದಾರೆ! ಬಿಜೆಪಿ ಎಂಬ ಸಂಘಟನೆಯನ್ನು ತಾನು ಅಧ್ಯಕ್ಷನಾಗಿದ್ದಾಗ ಆದ್ಯಂತವಾಗಿ ಮೂರಾ ಬಟ್ಟೆ ಮಾಡಿದ ಮನುಷ್ಯ ಈ ನಾಯ್ಡು. ಆತನ ಮುಖ ಕಂಡರೇ ಆರೆಸ್ಸೆಸ್‌ನ ಲಾಠಿಗಳು ಕೋಪದಿಂದ ಕುದಿಯುತ್ತವೆ. ಹಾಗಿರುವಾಗ, ಅಧ್ಯಕ್ಷಗಿರಿಯಿಂದ ತಾವೇ ಕಿತ್ತು ಹಾಕಿದಂಥ ನಾಯ್ಡುವನ್ನ ಅಡ್ವಾಣಿ ಈಗ ಮತ್ತೆ ತಮ್ಮ ಪಕ್ಕದಲ್ಲಿ ಕೂಡಿಸಿಕೊಂಡುಬಿಟ್ಟಿದ್ದಾರಲ್ಲಾ, ಇದನ್ನು ಸುದರ್ಶನ್‌ ಹೇಗಾದರೂ ಸಹಿಸಿಯಾರು? ಸಾಲದ್ದಕ್ಕೆ ಅಡ್ವಾಣಿಯವರೂ ಈಚೀಚೆಗೆ ವಾಜಪೇಯಿ ಥರವೇ ಆಡತೊಡಗಿದ್ದರು. ಬಿಜೆಪಿಯಾಂದೇ ಏಕಾಂಗಿಯಾಗಿ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ಮಾತ್ರ ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ ಸಾಧ್ಯ ಎಂಬರ್ಥ ಬರುವಂಥ ಸಂದೇಶಗಳನ್ನು ನೀಡತೊಡಗಿದ್ದರು. 1992ರ ರಥಯಾತ್ರೆ ಸಂದರ್ಭದಲ್ಲಿದ್ದ ಬಿಸಿ, ಕ್ರಮೇಣ ಅಡ್ವಾಣಿ ವ್ಯಕ್ತಿತ್ವದಿಂದ ಆರಿಹೋಗುತ್ತಿರುವುದು ಸ್ಪಷ್ಟವಾಗಿ ಕಾಣತೊಡಗಿತ್ತು. ಸುದರ್ಶನ್‌ ಸಿಡಿದರು.

ಅಂದರೆ, ಯುವಕರಿಗೆ ಅಧಿಕಾರ ಕೊಡಬೇಕೆಂಬ ಸುದರ್ಶನ್‌ ಆದೇಶ ತೀರಾ ಸದುದ್ದೇಶದ್ದೇನಲ್ಲ. ಅಲ್ಲಿ ಒಂದು ರಾಜಕೀಯ ಪ್ರಚೋದನೆಯಿದೆ. ಆರೆಸ್ಸೆಸ್‌ಗೆ ಹೊಂದುವಂಥ ಬಿಸಿರಕ್ತದವರನ್ನು ಬಿಜೆಪಿ ಗದ್ದುಗೆಯಲ್ಲಿ ಕೂರಿಸಬೇಕೆಂಬ ಹುನ್ನಾರವಿದೆ.

ಯಾರು ಆ ಬಿಸಿರಕ್ತದವರು? ಉಮಾಭಾರತಿ? ಅಥವಾ ಪ್ರಮೋದ್‌ ಮಹಾಜನ್‌-ಜೈಟ್ಲಿ - ಸ್ವರಾಜ್‌ ಇತ್ಯಾದಿ? ಹುಡುಕಿ ನೋಡಿ; ಒಂದು ರಾಷ್ಟ್ರೀಯ ಪಕ್ಷವನ್ನು ಮುನ್ನಡೆಸಬಲ್ಲಂಥ ರಾಷ್ಟ್ರೀಯ ವರ್ಚಸ್ಸಿನ ಒಬ್ಬೇ ಒಬ್ಬ ನಾಯಕನೂ ಕಾಣಲಿಕ್ಕಿಲ್ಲ ! ಇವತ್ತಿನ ಅನಿವಾರ್ಯ ಸಮ್ಮಿಶ್ರ ಸರ್ಕಾರದ ಯುಗದಲ್ಲಂತೂ, ಅಡ್ವಾಣಿ- ವಾಜಪೇಯಿಯನ್ನು ಹೊರತುಪಡಿಸಿಬೇರಾವ ಬಿಜೆಪಿ ನಾಯಕರನ್ನೂ ಎನ್‌ಡಿಎ ಮಿತ್ರಪಕ್ಷಗಳು ಒಪ್ಪಿಕೊಳ್ಳಲಾರವು.

ಯಾರಿಗೆ ಕೊಡಬೇಕು ಅಧಿಕಾರ? ಇವತ್ತಿನ ಈ ಸ್ಥಿತಿಗೆ ಬಿಜೆಪಿಯ ಸ್ವಯಂಕೃತಾಪರಾಧಗಳೇ ಕಾರಣ. ತಾನೊಂದು cadre-based ಪಾರ್ಟಿ ಅನ್ನುವ ಹಮ್ಮಿನಲ್ಲೇ ಬಿಜೆಪಿ ಬೆಳೆದು ಬಂದಿತಾದರೂ, ಬಿಜೆಪಿಗೆ ತನ್ನದು ಮತ್ತು ತನ್ನದು ಮಾತ್ರವೇ ಅನ್ನುವಂಥ ಒಂದು cadre ಬೆಳೆಯಲೇ ಇಲ್ಲ. ಆರೆಸ್ಸೆಸ್‌ನ ಸಂಘಟನೆಯೇ ಆರೆಸ್ಸೆಸ್‌ನ ಸದಸ್ಯರೇ ಬಿಜೆಪಿಗೂ ಬೆಂಬಲಿಗರಾಗಿ ಪಕ್ಷವನ್ನು ಬೆಳೆಸಿದರು. ಕಾಂಗ್ರೆಸ್‌ ಮಾಡಿದಂತೆ ತನ್ನದೇ ಒಂದು ಪ್ರತ್ಯೇಕ ಫೌಂಡೇಶನ್ನನ್ನು ಬಿಜೆಪಿ ಕಟ್ಟಿಕೊಳ್ಳಲಿಲ್ಲ. ಉದ್ದಕ್ಕೂ ಪರಾವಲಂಬಿಯಾಗೇ ಬೆಳೆಯಿತು. ಆರೆಸ್ಸೆಸ್‌ಗೆ ಜೋತು ಬೀಳುವುದು ಅನಿವಾರ್ಯವಾಯಿತು. ಮತ್ತು ಇದೇ ಕಾರಣಕ್ಕೇ ವಾಜಪೇಯಿ- ಅಡ್ವಾಣಿ ಜನರೇಷನ್ನಿನ ನಂತರದ ಸಾಲಿನಲ್ಲಿ ಪ್ರಭಾವೀ ನಾಯಕರುಗಳು ಹುಟ್ಟಲಿಲ್ಲ. ವಾಜಪೇಯಿ ತಮ್ಮ ಪಕ್ಷಕ್ಕಿಂತ ದೊಡ್ಡದಾಗಿ ಬೆಳೆದು ಬಿಟ್ಟರು. ಬಿಜೆಪಿ, ತಲೆಯಷ್ಟೇ ದೊಡ್ಡದಾಗಿ ಬೆಳೆಯಿತು. ಅದು ಕ್ಷಾಮ ಪೀಡಿತ ಇಥಿಯೋಷಿಯಾ ಮಗುವಿನಂತಾಗಿ ಹೋಯಿತು.

ಈಗಲ್ಲಿ ನೋಡಿದರೆ ಎರಡನೇ ಹಂತದ ನಾಯಕರು ಅಂತ ಸಿಗುವವರೆಲ್ಲರೂ ಒಂದೋ ಅರುಣ್‌ ಜೈಟ್ಲಿ- ಜಸ್ವಂತ್‌ ಸಿಂಗ್‌ರ ಥರದ ಹುಟ್ಟಾ ಅರಿಸ್ಟೋಕ್ರಾಟ್‌ಗಳು ಅಥವಾ ಸ್ವರಾಜ್‌ರಂತಹ ಅರೆಬೆಂದವರು. ಅವರನ್ನು ಬಿಟ್ಟರೆ ಇರುವವನು ಉಮಾಭಾರತಿಯಂತಹ ಅನಾಹುತಕಾರಿಗಳು!

ಈ ದೇಶಕ್ಕೆ ಮತ್ತು ಇಲ್ಲಿನ ರಾಜಕೀಯ ಪಕ್ಷಗಳಿಗೆ ಯುವ ಮುಖಂಡರುಗಳು ಬೇಕು, ನಿಜ. ಆದರೆ ಅಂಥ ಮುಖಂಡರುಗಳು ಹೋರಾಟದ ಮೂಸೆಯಲ್ಲಿ ತಾವಾಗೇ ಮೂಡಿಬರಬೇಕು. ವಾಜಪೇಯಿ-ಅಡ್ವಾಣಿ ಅವರುಗಳು ಪಾರ್ಲಿಮೆಂಟಿನಲ್ಲೇ ತಮ್ಮ ಅರ್ಧ ಬದುಕನ್ನು ಕಳೆದುಬಿಟ್ಟಿದ್ದಾರೆ. ಅವರು ಬದುಕನ್ನು ಕಂಡಿದ್ದಾರೆ. ರಾಜಕೀಯದ ಅನಿವಾರ್ಯತೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಸಿದ್ಧಾಂತಗಳು ಮತ್ತು ಪ್ರಾಕ್ಟಿಕಲ್‌ ಬದುಕಿನ ನಡುವೆ ಇರುವ ಅಂತರವನ್ನು ಗುರುತಿಸಿದ್ದಾರೆ. ಅಧಿಕಾರಕ್ಕಾಗಿ ಹಿಂದುತ್ವ ಸಿದ್ಧಾಂತದ ಕಿಡಿ ಬೇಕೆಂಬುದು ಅವರಿಗೆ ಗೊತ್ತಿದೆಯಾದರೂ ಸರ್ಕಾರ ನಡೆಸುವಾಗ ಹಿಂದುತ್ವದ ಸಿದ್ಧಾಂತ ಕೆಲಸಕ್ಕೆ ಬರುವುದಿಲ್ಲ ವೆಂಬುದನ್ನು ಕಂಡುಕೊಂಡಿದ್ದಾರೆ. ತೀರಾ ಕಾಂಗ್ರೆಸ್ಸಿನವರ ಹಾಗೆ ಮುಸ್ಲಿಮರನ್ನೂ- ಕ್ರಿಶ್ಚಿಯನ್ನರನ್ನೂ ಮುದ್ದು ಮಾಡದಿದ್ದರೂ, ಹಿಂದೂಗಳ ಪರವಾಗಿ ಅವರ ಮೇಲೆ ಸವಾರಿ ಮಾಡಹೊರಟರೆ ಈ ದೇಶದ fabric ಹರಿದು ಚಿಂದಿಯಾಗುತ್ತದೆ ಅನ್ನುವುದು ಅವರಿಗೆ ಗೊತ್ತಾಗಿದೆ. ಪಾರ್ಲಿಮೆಂಟಿನ ಮೇಲೆ ಪಾಕಿ ಉಗ್ರರು ದಾಳಿ ನಡೆಸಿದಾಕ್ಷಣ ಆವೇಶಗೊಂಡು, ಪಾಕಿಸ್ತಾನದ ಮೇಲೆ ಯುದ್ಧ ಸಾರಿ ಬಿಟ್ಟರೆ ಆಗಬಹುದಾದ ಅನಾಹುತಗಳನ್ನು ಮುಂಗಾಣಬಲ್ಲ ಪ್ರಬುದ್ಧತೆಯನ್ನವರು ರೂಢಿಸಿಕೊಂಡಿದ್ದಾರೆ.

ಹಿರಿತನದ ದೊಡ್ಡಸ್ತಿಕೆಯೇ ಈ ಅನುಭವ. ಯಾವ ದೇಶದ ಯಾವ ಪಕ್ಷದ ಯಾವ ನಾಯಕನೂ ತೀರಾ ತೀರಾ ತಾನು ಮತ್ತು ತನ್ನ ಪಕ್ಷ ನಂಬಿಕೊಂಡ ಸಿದ್ಧಾಂತದ ಆಧಾರದ ಮೇಲೇ ಸರ್ಕಾರ ನಡೆಸಲಾರ. At least, ಡೆಮಾಕ್ರಿಸಿಯಲ್ಲದು ಸಾಧ್ಯವಿಲ್ಲ. ಯಾಕೆಂದರೆ, ಡೆಮಾಕ್ರಸಿ ಅನ್ನುವುದು ಅನೇಕ ಭಿನ್ನ-ವಿಭಿನ್ನ ಸಿದ್ಧಾಂತ ಮತ್ತು ನಂಬಿಕೆಗಳ ಹಿನ್ನೆಲೆಯ ಜನರಿಂದ ರೂಪಿತವಾದ ಒಂದು ವ್ಯವಸ್ಥೆ. ಅಲ್ಲಿ ಎಲ್ಲರ ಮೌಲ್ಯಗಳಿಗೂ ಬೆಲೆ ಇರಲೇಬೇಕಾಗುತ್ತದೆ.

ಇದನ್ನು ಬಿಜೆಪಿ-ಆರೆಸ್ಸೆಸ್‌ನ ಯುವ ತಲೆಗಳು ಅರ್ಥ ಮಾಡಿಕೊಳ್ಳಲಾರವು. ಆ ತಲೆಗಳಿನ್ನೂ ಮಾಗಬೇಕಿವೆ. ತಮ್ಮ ಸಿದ್ಥಾಂತದ ಮಿತಿಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಹಿಂದೂಗಳನ್ನು ರಕ್ಷಿಸುವುದೆಂದರೆ ಅನ್ಯ ಧರ್ಮೀಯರನ್ನು ತುಳಿಯುವುದಲ್ಲ ಅನ್ನುವ ವ್ಯತ್ಯಾಸ ಅವರಿಗೆ ತಿಳಿಯಬೇಕಿದೆ. ಅದು ಸಾಧ್ಯವಾಗುವವರೆಗೂ, ಸುದರ್ಶನ್‌ಗೆ ಇಷ್ಟವಿರಲಿ ಬಿಡಲಿ, ವಾಜಪೇಯಿ-ಅಡ್ವಾಣಿಗಳು ಅನಿವಾರ್ಯ.

ಬಹುಶಃ ಎಲ್ಲಾ ಪಕ್ಷಗಳಿಗೂ ಇದು ಅನ್ವಯಿಸುತ್ತದೇನೋ. ಮನ್‌ಮೋಹನ್‌ಸಿಂಗ್‌,ಪ್ರಣಬ್‌ ಮುಖರ್ಜಿ, ಅರ್ಜುನ್‌ ಸಿಂಗ್‌ರಂಥವರಿಲ್ಲದ, ಬರೀ ಗುಲಾಂ ನಬಿಗಳು- ರಾಹುಲ್‌ ಗಾಂಧಿಗಳಿಂದಲೇ ತುಂಬಿರುವ ಕಾಂಗ್ರೆಸ್ಸನ್ನು ಕಲ್ಪಿಸಿಕೊಂಡು ನೋಡಿ; ಬೆಚ್ಚಿ ಬೀಳುವಂತಾಗುತ್ತದೆ!

ಒಂದು ಹುಟ್ಟಾ cadre-based ಪಕ್ಷ ಮಾತ್ರವೇ ಅನುಭವಿ ಯುವನಾಯಕರನ್ನು ಸೃಷ್ಟಿಸಬಲ್ಲರು. ಇದಕ್ಕೆ ಉದಾಹರಣೆ, ಸಿಪಿಐ(ಎಂ).ವೃದ್ಧ ಹರ್‌ಕಿಷನ್‌ಸಿಂಗ್‌ ಸುರ್ಜೀತ್‌ರಿಂದ ಪ್ರಕಾಶ್‌ಕಾರಟ್‌ ಎಂಬ ಮಧ್ಯವಯಸ್ಕ ‘ಯುವ ನಾಯಕ’ ಅಲ್ಲಿ ಅತ್ಯಂತ ಸುಸೂತ್ರವಾಗಿ ಪಕ್ಷದ ಅಧಿಕಾರ ಪಡೆದುಕೊಂಡಿದ್ದಾರೆ; ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಇದುವರೆಗೂ, ಕಾರಟ್‌ಗಿಂತ ಕಿರಿಯರ್ಯಾರೂ ರಾಷ್ಟ್ರೀಯ ಪಕ್ಷವೊಂದರ ನಾಯಕರಾಗಿರಲಿಲ್ಲ. ಕಾರಟ್‌ಗದು ಯಾಕೆ ಸಾಧ್ಯವಾಗಿದೆಯೆಂದರೆ, ಅವರು ನಂಬೂದರಿಪಾಡ್‌, ಜ್ಯೋತಿಬಸು, ಮತ್ತು ಹರ್‌ಕಿಷನ್‌ರಂಥ ಹಿರಿಯರ ಕೈಕೆಳಗೆ ಒಬ್ಬ ardent student ಆಗಿ ಅಭ್ಯಾಸ ಮಾಡುತ್ತಾ ಬೆಳೆದು ಬಂದಿದ್ದಾರೆ. ಅನುಭವದ ಜೊತೆ ಪಕ್ಷದ ವಿಶ್ವಾಸವನ್ನೂ ಗಳಿಸಿಕೊಂಡಿದ್ದಾರೆ.

ಬಿಜೆಪಿಯಲ್ಲಿ ಇಂಥ ಒಂದು ಹೆಸರೂ ನೆನಪಾಗುತ್ತಿಲ್ಲ. ನೆಹರು ಕುಟುಂಬಕ್ಕೇ ಅಂಟಿಕೊಂಡಿರುವ ಕಾಂಗ್ರೆಸ್ಸಿನಲ್ಲೂ ಅಂಥ ಹೆಸರುಗಳಿಲ್ಲ. ಆದರೆ ಅಲ್ಲಿನ ಮಾತು ಬೇರೆ ಬಿಡಿ; ನೆಹರು ರಕ್ತದ ಬಲವೊಂದೇ ಸಾಕು, ರಾಹುಲ್‌ ಗಾಂಧಿಯನ್ನು ಕಾಂಗ್ರೆಸ್ಸಿನ ಏಕಮೇವಾದ್ವಿತೀಯ ಲೀಡರನ್ನಾಗಿ ಮಾಡಿಬಿಡಲು.

ಅದೇ ಆತಂಕದ ವಿಷಯ!

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more