ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾಗಾಂಧಿ ಮನೆಯ ಮಾರ್ಬಲ್‌ ನೆಕ್ಕಿದವರು...

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಸುನಾಮಿ ಏಟಿಗಿಂತ ಈ ವಂಚಕ ಪಾದ್ರಿ ಬೆನ್ನಿಹಿನ್‌ನ ಆಗಮನದ ಏಟಿಗೆ ಜಾಸ್ತಿ ತತ್ತರಿಸತೊಡಗಿದೆ ಸರ್ಕಾರ. ತೀರ ನಿನ್ನೆ ಮೊನ್ನೆಯ ತನಕ ನಮ್ಮ ರಕ್ಷಣೆ ನೋಡಿಕೊಳ್ಳುತ್ತಿದ್ದ, ಸಮಾಜದ ಸ್ವಾಸ್ಥ್ಯಕಾಪಾಡುತ್ತಿದ್ದ ನಿವೃತ್ತ ನ್ಯಾಯಮೂರ್ತಿ ಸಾಲ್ಡಾನಾ, ನಿವೃತ್ತ ಪೊಲೀಸ್‌ ಮಹಾ ವರಿಷ್ಠರುಗಳಾದ ಟಿ.ಶ್ರೀನಿವಾಸುಲು, ಕೊಲ್ಯಾಸೋ, ರೇವಣ ಸಿದ್ದಯ್ಯ, ಸಾಂಗ್ಲಿಯಾನ- ಎಲ್ಲರೂ ಹೇಗೆ ವಂಚಕನೊಬ್ಬನ ಬೆನ್ನಿಗೆ ಲೈನು ಹಚ್ಚಿ ನಿಂತುಬಿಟ್ಟರೋ ನೋಡಿ? ಕಾಂಗ್ರೆಸ್‌ ಪಕ್ಷದ ಹಿರಿಯ ಜನಾರ್ದನ ಪೂಜಾರಿ, ಸೋನಿಯಾ ಗಾಂಧಿಯ ಕೈಯಲ್ಲಿ ಬೆನ್ನ ಕೆಳಭಾಗಕ್ಕೆ ಒದೆಸಿಕೊಂಡು ಬಂದ ಜೋಕರನಂತೆ ಮಾತನಾಡುತ್ತಿದ್ದಾರೆ. ಅತ್ತೆ ಮನೆ ಸೊಸೆಯ ಕಳೆ ಧರಂಸಿಂಗ್‌ ಮುಖದಲ್ಲಿದೆ. ಒಬ್ಬ ದಲಿತ ಮಂತ್ರಿ ಮಂಜುನಾಥ್‌ ಮಾತ್ರ ‘ಇದು ವಂಚನೆ’ ಅಂತ ದನಿಯೆತ್ತಿದ್ದಾರೆ. ಉಳಿದಂತೆ ನಮ್ಮ ಜ್ಞಾನಪೀಠಿ ವಂಚಕನ ಕಾರ್ಯಕ್ರಮಕ್ಕೆ ಧರಂಸಿಂಗ್‌ ಹೋಗೋದು ‘ಅಕ್ಷ ಮ್ಯಕಣ್ರೀ’ ಅಂತ ಲಗ್ನದ ಮನೆಯ ಮಾಜಿ ಮುತ್ತೆೈದೆಯಂತೆ ಗೊಣಗಿದ್ದಾರೆಯೇ ಹೊರತು, ಈ ಕಾರ್ಯಕ್ರಮ ನಡೆಯಕೂಡದು ಅಂತ ಸ್ಪಷ್ಟವಾಗಿ ಹೇಳಿಲ್ಲ. ಸಮಾಧಾನದ ಸಂಗತಿಯೆಂದರೆ, ಕೋಮು ಸೌಹಾರ್ದದ ಬಗ್ಗೆ ಸದಾ ಮಾತನಾಡುವ ವೇದಿಕೆಯ ಜನ ಬೆನ್ನಿಹಿನ್‌ನನ್ನು ವಿರೋಧಿಸಿದ್ದಾರೆ. ಹಾಗೇನೇ, ಅವನ ನೆಪದಲ್ಲಿ ಹಿಂದೂ ಅತಿರೇಕ ಚಳವಳಿ ಕಟ್ಟಲು ಯತ್ನಿಸುತ್ತಿರುವ ಸಂಘ ಪರಿವಾರದವರನ್ನೂ ವಿರೋಧಿಸುತ್ತೇವೆ ಎಂಬುದು ಕೋಮು ಸೌಹಾರ್ದ ವೇದಿಕೆಯವರ ನಿಲುವು. ಅದು ಸ್ವಾಗತಾರ್ಹ ಕೂಡ.

ಆದರೆ ಬೆನ್ನಿಹಿನ್‌ನ ಆಗಮನವನ್ನು ನಿಜವಾದ ಕಾರಣಗಳಿಗಾಗಿ ವಿರೋಧಿಸುತ್ತಿರುವವರ ಗುಂಪು ತುಂಬ ಚಿಕ್ಕದು, ಕೆಲವೇ ಕೆಲವು ಡಾಕ್ಟರುಗಳು, ಕೆಲವು ವಕೀಲರು, ಮೂಢನಂಬಿಕೆಯ ನಿಜವಾದ ವಿರೋಧಿಗಳು ಮತ್ತು ವ್ಯಕ್ತಿಗತವಾಗಿ ಸಂಘ ಪರಿವಾರ ಕಾಂಗ್ರೆಸ್ಸು-ಹುಸಿ ಜಾತ್ಯತೀತತೆಗಳಿಂದ ದೂರವಿರುವ ಅಸಲಿ ಚಿಂತಕರು ಇರುವ ಅಸ್ಪಷ್ಟ ಗುಂಪು ಅದು. ನಾನು ಮೊನ್ನೆ ನಮ್ಮ ಹುಡುಗರನ್ನು ಕಳಿಸಿ ಶಂಕರಮಠದಲ್ಲಿ ನಡೆದ ಮಠಾಧೀಶರ ಪ್ರತಿಭಟನಾ ಸಭೆಯನ್ನು ವಿಡಿಯೋ ರೆಕಾರ್ಡ್‌ ಮಾಡಿಸಿ ತರಿಸಿ ನೋಡಿದೆ. ಅದರಲ್ಲಿ ಯಥಾಪ್ರಕಾರದ ಹಿಂದೂ ಅತಿರೇಕದ ಉಗ್ರ ಭಾಷಣಗಳು. ಒಬ್ಬನಂತೂ,‘ನಾನು ಬೆನ್ನಿಹಿನ್‌ಗೆ ಸವಾಲು ಎಸೀತಾ ಇದೀನಿ. ರೋಗಗಳಿರುವ ಹತ್ತು ಸಾವಿರ ಜನರನ್ನು ನಾನು ಅವನ ಸಭೆಗೆ ಕರ್ಕೊಂಡು ಹೋಗ್ತೀನಿ. ಅವನು ತಾಕತ್ತಿದ್ದರೆ ಎಲ್ಲ ರೋಗ ವಾಸಿ ಮಾಡಲಿ. ಅವನಿಗೆ ನಾನು ಅಲ್ಲೇ ಶರಣಾಗತನಾಗಿ ಬಿಡ್ತೀನಿ!’ಅನ್ನುತ್ತಿದ್ದ . ಇವನನ್ನು ಎಲ್ಲೋ ನೋಡಿದ್ದೀನಲ್ಲಾ ಅನ್ನಿಸಿತು. ಆಫೀಸಿನಲ್ಲಿರುವ ಹಳೆ ಫೋಟೋಗಳನ್ನು ತೆಗೆಸಿ ನೋಡಿದರೆ ಇವನು ಬೇರ್ಯಾರೂ ಅಲ್ಲ : ನೀರು ಸ್ವಾಮಿ ಗುರೂಜಿ!

ಇವನು ಮಾಡುತ್ತಿರೋದ್ದೇ ಶುದ್ಧ ವಂಚನೆ. ಇಲ್ಲೇ ಬಸವನಗುಡಿಯಲ್ಲಿ ಟೆಂಪಲ್‌ ಆಫ್‌ ಸಕ್ಸಸ್‌ ಅಂತ ಬೋರ್ಡು ಹಾಕಿಕೊಂಡು ತನ್ನದೇ ಹೆಸರಿನ ಮಂತ್ರ ಸೃಷ್ಟಿಸಿ ‘ರಘುನಾಥ ಗುರೂಜಿ ಅಂತ ಹೇಳಿಕೊಳ್ಳುತ್ತಾ, ನಿಮ್ಮ ಹೊಕ್ಕಳು ಮುಟ್ಟಿಕೊಂಡು ಪ್ರತಿನಿತ್ಯ ನೀರು ಸೇವಿಸಿರಿ. ನಿಮ್ಮ ಎಲ್ಲ ಖಾಯಿಲೆಗಳೂ ವಾಸಿಯಾಗುತ್ತವೆ’ ಅಂತ ಬೊಗಳೆ ಬಿಡುವ ಹಳೇ ವಂಚಕ, ಅಪ್ಪಟ ಕಚ್ಚೆಹರುಕ, ತೀರ್ಥ ಹಳ್ಳಿಯ ಸುತ್ತಮುತ್ತ ಲಕ್ಷಗಟ್ಟಲೆ ದುಡ್ಡು ಮುಳುಗಿಸಿ ಬಂದ ಮೋಸಗಾರ- ರಘುನಾಥ ಶೆಣೈ. ಇಂಥ ಮೋಸಗಾರ ಶಂಕರಮಠದಲ್ಲಿ ಇತರೆ ಕಾವಿಧಾರಿಗಳ ಮಧ್ಯೆ ಕುಳಿತು, ರೋಗವನ ನಾನೂ ಮಂತ್ರದ ಮೂಲಕ ವಾಸಿಮಾಡ್ತೀನಿ. ಆದರೆ ಅದಕ್ಕೆಲ್ಲ ತುಂಬ ಟೈಮು ಹಿಡಿಯುತ್ತೆ. ಅಂಥದರಲ್ಲಿ ಬೆನ್ನಿಹಿನ್‌ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಜನರ ಖಾಯಿಲೆ ವಾಸಿ ಮಾಡ್ತೀನಿ ಅಂತಾನಲ್ಲ ? ಅದು ಸುಳ್ಳು’ ಅನ್ನುತ್ತಾನೆ ರಘುನಾಥ ಗುರೂಜಿ.

ಈ ನೀಚನ ಮಾತು ಕೇಳಿಕೊಂಡು ಹೊಕ್ಕಳು ಮುಟ್ಟಿ ನೀರು ಕುಡಿದು, ಇವನ ನಾಮಸ್ಮರಣೆಯಿಂದ ನನ್ನ ರೋಗ ವಾಸಿಯಾಯಿತು ಅಂತ ಭ್ರಮಿಸಿ ತೀರ ಕಡೆಗಾಲದಲ್ಲಿ ತಮ್ಮ ಶ್ರೇಷ್ಠ ಬದುಕಿನ ಸಿದ್ಧಾಂತ, ಮೌಲ್ಯಗಳನ್ನೆಲ್ಲ ಕಳೆದುಕೊಂಡು ಪ್ರಾಣಬಿಟ್ಟವರು ರೈತ ಸಂಘದ ನಾಯಕ, ಸಮಾಜವಾದಿ ಚಿಂತಕ ಮತ್ತು ವಿಚಾರವಾದಿ ಪ್ರೊ. ನಂಜುಂಡ ಸ್ವಾಮಿ! ರಘುನಾಥ ಗುರೂಜಿ ಎಂಥ ಅಸಹ್ಯದ ಮನುಷ್ಯನೆಂದರೆ, ತೀರ ಸಾಯುತ್ತ ಮಲಗಿದ್ದ ಪ್ರೊಫೆಸರರ ಕೈಲಿ ‘ನೀರು ಮಂತ್ರದಿಂದ ನನ್ನ ರೋಗ ಗುಣವಾಗುತ್ತಿದೆ’ ಅಂತ ಪತ್ರಿಕಾ ಹೇಳಿಕೆ ಕೊಡಿಸಿದ್ದ. ಈಗಿವನು ಬೆನ್ನಿಹಿನ್‌ ವಿರೋಧಿ! ಇಂಥವನನ್ನು ಪಕ್ಕದಲ್ಲಿ ಕೂಡಿಸಿಕೊಂಡು ಪೇಜಾವರ ಸ್ವಾಮಿ ಹಿಂದೂ ರಕ್ಷಣೆಯ ಮಾತಾಡುತ್ತಾರೆ. ಇವರನ್ನು ಬೆಂಬಲಿಸುವುದು ಹೇಗೆ ?

ಸಂಘ ಪರಿವಾರದಲ್ಲಿರುವ ನನ್ನ ಪರಿಚಿತರಿಗೆ ನಾನು ಹೇಳಿ ನೋಡಿದೆ. ನಿಮ್ಮೆಲ್ಲ ಭಾಷಣಗಳು, ಪ್ರತಿಭಟನೆಗಳು, ಪತ್ರಿಕಾಗೋಷ್ಠಿ ಗಳು ಕೇವಲ - rhetoric ಕೇಳಿಸುತ್ತಿವೆ: ಚಿರತೆ ನುಗ್ಗಿದ ಪೊದೆಯಲ್ಲಿ ನಾಯಿಗಳು ಕಿರುಚಿಕೊಂಡ ಹಾಗೆ. ಮಾತಿನ ಧಾಟಿ ಬದಲಿಸಿಕೊಳ್ಳಿ. ಬರೀ ಮತಾಂತರ, ವಿಗ್ರಹಾರಾಧನೆ, ಶಿಲುಬೆ ತೊಡಿಸುವಿಕೆ ಅಂತ ಮಾತನಾಡಬೇಡಿ. ನೀವು ಹಿಂದೂ ಧರ್ಮಕ್ಕೆ ಬೆಂಕಿ ಬಿದ್ದವರಂತೆ ಮಾತನಾಡಿದರೆ ತಕ್ಷಣವೇ ನಿಮ್ಮ ಪಕ್ಕದಲ್ಲಿ ನಿಮ್ಮನ್ನು ವಿರೋಧಿಸುವ ಕಾರ್ನಾಡುಗಳು, ಅನಂತಮೂರ್ತಿಗಳು ಹುಟ್ಟಿಕೊಳ್ಳುತ್ತಾರೆ. ನೀವು ಕಾನೂನು ಮಾತನಾಡಿ. ಬೆನ್ನಿಹಿನ್‌ನನ್ನು ಏಕೆ ಮತ್ತು ಹೇಗೆ ವಿರೋಧಿಬೇಕು ಅಂತ ಜನಕ್ಕೆ ಹೇಳಿ. ಅವನ ವಂಚನೆಗಳನ್ನು study ಮಾಡಿ. ಅವನೇ ಬರೆದಿರುವ ಹತ್ತಾರು ಅವಿವೇಕ ಭರಿತ ಪುಸ್ತಕಗಳಿವೆ. ತಂದುಕೊಂಡು ಓದಿ. ಅವನೇ ಪ್ರೊಡ್ಯೂಸ್‌ ಮಾಡಿದ ಡಿ.ವಿ.ಡಿ. ಗಳಿವೆ. ತರಿಸಿ ನೋಡಿ. ಅವನನ್ನು ವ್ಯಾಪಕವಾಗಿ expose ಮಾಡಿ. ಹಾಗೆ ಮಾಡುವುದಕ್ಕೆ ಶ್ರದ್ಧೆ ಬೇಕು, ಅಧ್ಯಯನ ಬೇಕು. ಮುತಾಲಿಕ್‌ ದೇಸಾಯಿ, ಜಗದೀಶ ಕಾರಂತರಂಥವರಲ್ಲಿ ಆ ತೆರವಾದ study ಕಾಣುವುದೇ ಇಲ್ಲ. ಇದ್ದುದರಲ್ಲಿ ಪರಿವಾರದ ವಕೀಲರಾದ ದೊರೆರಾಜ್‌ರಂಥವರು ಕೇಸು ಕಚ್ಚಿಕೊಳ್ಳುವಂತೆ ಮಾತನಾಡುತ್ತಾರೆ. ನೆಟ್ಟಗೆ ಒಂದು ಪಾಯಿಂಟಿಗೆ ತಲುಪಿ ನಮ್ಮ ಸರ್ಕಾರ, ಪೊಲೀಸ್‌ ವ್ಯವಸ್ಥೆ ಮುಂತಾದವುಗಳ ಉಸಿರು ಸಿಕ್ಕಿಕೊಳ್ಳುವಂತೆ ಮಾಡುತ್ತಾರೆ.

ಈಗ ನಿಜಕ್ಕೂ ಸಮಸ್ಯೆಯಾಗಿರುವ ಸಂಗತಿಯೆಂದರೆ, ಬೆನ್ನಿಹಿನ್‌ ಅಂದರೆ ಯಾರು ಮತ್ತು ಏನು ಎಂಬ ಅವಗಾಹನೆ ನಮ್ಮಲ್ಲಿ ಹೆಚ್ಚಿನವರಿಗೆ ಇಲ್ಲದಂತಾಗಿರುವುದು. ಅವನನ್ನೊಬ್ಬ ಮಾಮೂಲಿ ವಂಚಕ ಪಾದ್ರಿ ಅಂತೇನಾದರೂ ನಾವು ಅಂದುಕೊಂಡರೆ ಅದಕ್ಕಿಂತ ದಡ್ಡತನ ಮತ್ತೊಂದಿಲ್ಲ. ಅದೊಂದು international storm! ಅಂತಾರಾಷ್ಟ್ರೀಯ ಬಿರುಗಾಳಿ ಅದು. ಅವನನ್ನು ಅಮೆರಿಕ ಸುಮ್ಮನೆ ಸಾಕಿಕೊಂಡಿಲ್ಲ. ಅಮೆರಿಕದಂಥ ಜಾಣ ದೇಶಕ್ಕೆ ಅವನೊಬ್ಬ ವಂಚಕ ಅಂತ ಗೊತ್ತಿಲ್ಲ ಅಂದುಕೊಂಡಿರಾ ? ಗೊತ್ತಿದ್ದೂ ಸಹಿಸಿಕೊಳ್ಳುವಂಥ fancyಯಾ ಅವನು? ಖಂಡಿತ ಅಲ್ಲ. ಅಮೆರಿಕದ ಅವನನ್ನು ತುಂಬ ಸೂಕ್ಷ್ಮ ಮತ್ತು ಸೂಕ್ತವಾದ ಕಾರಣಗಳಿಗಾಗಿ ಸಾಕಿಕೊಂಡಿದೆ. ಅಲ್ಲಿ ಅವನು ಸರ್ಕಾರಕ್ಕೆ ಟ್ಯಾಕ್ಸ್‌ ಕಟ್ಟುವುದಿಲ್ಲ. ಅವನ ಅರಮನೆಗೆ ವಿದ್ಯುತ್ತು ಉಚಿತ. ಅವನೊಬ್ಬ ಧರ್ಮಗುರುವೆಂಬ ಒಂದೇ ಕಾರಣಕ್ಕೆ ಅಷ್ಟೆಲ್ಲ ಅನುಕೂಲಗಳನ್ನು ಅಮೆರಿಕನ್‌ ಸರ್ಕಾರ ಮಾಡಿಕೊಟ್ಟಿದೆ ಅಂದುಕೊಂಡಿರಾ ? ಖಂಡಿತಾ ಇಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕಕ್ಕೆ ಅವನೊಬ್ಬ ಏಜೆಂಟನಂತೆ ಕೆಲಸ ಮಾಡುತ್ತಾನೆ. ಎಲ್ಲೆಲ್ಲಿಗೆ ಹೋದರೆ ಅಲ್ಲಲ್ಲೇ ತನ್ನ ಏಜೆಂಟರನ್ನು ಸೃಷ್ಟಿಸಿ ಬರುತ್ತಾನೆ. ಒಂದು ಸಭೆ, ಒಂದು ಸಮ್ಮೋಹನ, ಒಂದು ಪ್ರಾರ್ಥನೆಯಾಂದಿಗೆ ಮುಗಿಯುವುದಿಲ್ಲ ಬೆನ್ನಿ ಪೀಡೆ. ಈಗ ಭಾರತದಲ್ಲಾಗಿರವುದನ್ನೇ ನೋಡಿ. ದಿಲ್ಲಿಯಾಯಿತು, ಮುಂಬೈ ಆಯಿತು. ಗುಲ್‌ ಕೃಪಲಾನಿ ಎಂಬ ಶ್ರೀಮಂತ, well connected ಮನುಷ್ಯ ಬೆನ್ನಿಗೆ ಏಜೆಂಟನಾಗಿ ಕಚ್ಚಿಕೊಂಡು ಬಿಟ್ಟ. ಅಲ್ಲಿ ಅವನ ಆರ್ಥಿಕ ಆಸಕ್ತಿಗಳು ಜಾಗೃತವಾಗಿಬಿಟ್ಟವು. ಬೆನ್ನಿಯ ಸಭೆ ಏರ್ಪಡಿಸುವುದೇ ಒಂದು ಫಾಯಿದೆಯ ಕಸುಬಾಯಿತು. ಅದಕ್ಕೋಸ್ಕರ ಆ ಮನುಷ್ಯ ಅದೆಷ್ಟು ಸುಳ್ಳು ತಟವಟ ಹೇಳುತ್ತಾನೋ ನೋಡಿ. ಮೂರು ಓಪನ್‌ ಹಾರ್ಟ್‌ ಸರ್ಜರಿಗಳಾಗಿವೆ ನನಗೆ ಅಂತಾನೆ. ಎಣಿಸಿ ಹದಿನಾಲ್ಕು ಸಾವಿರ ಇಂಜೆಕ್ಷನ್ನು ತಗೊಂಡಿದೀನಿ ಅಂತಾನೆ. ಕೇಳುತ್ತ ಕುಳಿತರೆ ದನದ ಸಂತೆಯಲ್ಲಿ ಎಮ್ಮೆ ಮಾರಿಸುವ ದಲ್ಲಾಳಿಗಳು ಹೇಳುವ ಧಾರಾಕಾರದ ಸುಳ್ಳುಗಳು ನೆನಪಾಗುತ್ತವೆ.

ಹೀಗೆ ಸುಳ್ಳು ಹೇಳುವ ಗುಲ್‌ ಕೃಪಲಾನಿಯಂಥ ದಲ್ಲಾಳಿಗಳನ್ನ, ಬೆನ್ನಿ ಹಿನ್‌ನಂಥ ಸಾವಿರಾರು ವಂಚಕರನ್ನ ತಮ್ಮ ಮೂವತ್ತೆೈದು ವರ್ಷಗಳ ಸರ್ವೀಸಿನಲ್ಲಿ ಬಂಧಿಸಿದವರು ಕೊಲ್ಯಾಸೋ, ಸಾಂಗ್ಲಿಯಾನ , ಶ್ರೀನಿವಾಸುಲು, ರೇವಣ್ಣ ಸಿದ್ಧಯ್ಯ! ಇವರು ಬಂಧಿಸಿದ ಸಾವಿರಾರು ವಂಚಕರನ್ನು ಜೈಲಿಗೆ ಕಳಿಸಿದವರು ನಿವೃತ್ತ ನ್ಯಾಯಮೂರ್ತಿ ಎಂ.ಎಫ್‌.ಸಾಲ್ಡಾನಾ. ಆದರೆ ಇವತ್ತು ಈ ಐದೂ ಜನ ಮಹಾಪುರುಷರು ಹೋಗಿ ಯಾವ ವಂಚಕನ ಚಮಚಾಗಿರಿಗೆ ಟೊಂಕ ಕಟ್ಟಿ ನಿಂತಿದ್ದಾರೋ ನೋಡಿ? ಇವರನ್ನೇ ಅಲ್ಲವಾ ನಾವು ಸಂದರ್ಶನ ಮಾಡಿ, ಪ್ರಾಮಾಣಿಕರೆಂದು ಹೊಗಳಿ, ಹೆಗಲ ಮೇಲೆ ಹೊತ್ತುಕೊಂಡು ವರ್ಷಗಟ್ಟಲೆ ತಿರುಗಿದ್ದು ? ಕಡೆಗೆ ಎಲ್ಲಿಗೆ ಬಂದು ನಿಂತರು ಈ ಹಿರಿಯರು ? ಇವರಿಗೆ ಸಾಮಾಜಿಕ ಜವಾಬ್ದಾರಿ ಇದೆಯಾ? ಇವರಿಗೆ ಬೆನ್ನಿ ಹಿನ್‌ ಒಬ್ಬ ವಂಚಕ ಎಂಬುದು ಗೊತ್ತಿಲ್ಲ ಅಂತೀರಾ? ಗೊತ್ತಿದ್ದೂ ಅವನ ಬ್ರೋಕರಿಕೆ ಹಿಡಿದಿದ್ದಾರೆ ಅಂದರೆ, ಬೆನ್ನಿಹಿನ್‌ ಎಂಥ ಶಕ್ತಿಶಾಲಿ ಮನುಷ್ಯನಿರಬಹುದು? ಲೆಕ್ಕ ಹಾಕಿ.

ನಮ್ಮ ದೇಶದ ಅತಿದೊಡ್ಡ ದುರಂತ ಅಂದರೆ, ನೆಹರೂ ಕುಟುಂಬದ ಯುವಕನೊಬ್ಬನೊಂದಿಗೆ ಒಂದಷ್ಟು ವರ್ಷ ಎದ್ದು- ಕೂತು ಸಂಸಾರ ಮಾಡಿದಳು ಎಂಬ ಒಂದು ಕಾರಣಕ್ಕಾಗಿ, ಇಟಾಲಿಯನ್‌ ಹೆಂಗಸೊಬ್ಬಳಿಗೆ ದೇಶದ ಹಿರೀತನ ಕೊಟ್ಟು ಬಿಡಲಾಯಿತು. ಇದೇ ಹೆಂಗಸಿನ ಅತ್ತೆ ಇಂದಿರಾಗಾಂಧಿ ಸುಳ್ಳಿಯೋ, ದುಷ್ಟಳೋ, ಅರಾಜಕಳೋ- ಮತ್ತೇನೇ ಆಗಿರಲಿ: ದೇಶದ ರಕ್ಷಣೆ ವಿಷಯಕ್ಕೆ ಬಂದಾಗ ಆಕೆ ಶುದ್ಧ ತಾಯಿಯಾಗುತ್ತಿದ್ದಳು. ಸ್ವತಃ ಯುದ್ಧ ನಡೆಯುತ್ತಿದ್ದ ಗಡಿಗಳಿಗೆ ಹೋಗಿ ಸೈನಿಕರ ಬೆನ್ನಿಗೆ ನಿಂತು ಅವರನ್ನು ಹುರಿದುಂಬಿಸಿ ‘ಜೈ ಹಿಂದ್‌’! ಅಂದು ಬರುತ್ತಿದ್ದಳು. ಆಕೆ ಅಮೆರಿಕದಂತ ರಾಷ್ಟ್ರದ ವಿರುದ್ಧ ಸಿಡಿದು ನಿಂತ ಮಹಾನ್‌ ಧೈರ್ಯವಂತೆ. ಆಕೆಯ ರಕ್ತದಲ್ಲೇ ಆ ಗುಣವಿತ್ತು. ಜವಾಹರಲಾಲ್‌ ನೆಹರೂ ಉಳಿದೆಲ್ಲವೂ ಆಗಿದ್ದರೂ, ದೇಶದ್ರೋಹಿಯಾಗಿರಲಿಲ್ಲ. ರಾಜೀವ್‌ಗಾಂಧಿಯಲ್ಲೂ ದೇಶ ಪ್ರೇಮವಿತ್ತು. ಆದರೆ ಆತನ ಹೆಂಡತಿಯಲ್ಲಿ ಅಂಥ ದೇಶಪ್ರೇಮ ಯಾಕಿರಬೇಕು? ಮತ್ತು ಹೇಗಿರಲು ಸಾಧ್ಯ? ಅಂಥವಳನ್ನು ಅಧಿನಾಯಕಿಯಾಗಿ ಒಪ್ಪಿಕೊಂಡ ಮೇಲೆ ಜನಾರ್ದನ ಪೂಜಾರಿಯಂಥವರು ಬಾಗಿ, ಡೊಗ್ಗಿ, ಆಕೆ ಮನೆಯ ಇಟಾಲಿಯನ್‌ ಮಾರ್ಬಲ್‌ ನೆಕ್ಕಲೇಬೇಕು. ನೆಕ್ಕುತ್ತಿದ್ದಾರೆ.

ಒಂದು ಮಾತನ್ನು ಮಾತ್ರ ತುಂಬ ನೋವಿನಿಂದ ಬರೆಯುತ್ತಿದ್ದೇನೆ.

ಬೇರೆಲ್ಲರಿಗಿಂತ ದೊಡ್ಡ ಮಟ್ಟದಲ್ಲಿ ಕರ್ನಾಟಕದ ಜನತೆಗೆ ಅನ್ಯಾಯ ಮಾಡುತ್ತಿರುವವರು ನಮ್ಮ ಹಿರಿಯರು. ನಮ್ಮ ರಾಜ್ಯದ ಬೊಕ್ಕಸದಿಂದ ಮೂವತ್ತೆೈದು ವರ್ಷ ಸಂಬಳ ಸವಲತ್ತು ಪಡೆದವರು. ನಿವೃತ್ತರಾದ ನಂತರವೂ ಸರ್ಕಾರದ ಕೃಪೆ, ಜನರ ಪ್ರೀತಿ, ಪತ್ರಿಕೆಗಳ ಮಚ್ಚುಗೆ ಗೌರವ ಗಳಿಸಿದ್ದವರು. ಇವರೇ ಇವತ್ತು ಅನ್ಯಾಯದ ಪರವಾಗಿ ನಿಂತು ಬಿಟ್ಟಿದ್ದಾರೆ. ಯಾವ ಎಂ.ಎಫ್‌.ಸಾಲ್ಡಾನಾ ಬೆಂಗಳೂರಿಗೆ ಕಬ್ಬನ್‌ಪಾರ್ಕು ಉಳಿಸಿಕೊಟ್ಟು ಮಹದುಪಕಾರ ಮಾಡಿದರೋ, ಅವರೇ ಬೆಂಗಳೂರಿನ ಜಕ್ಕೂರು ವಿಮಾನ ಮೈದಾನವನ್ನು ವಂಚಕನ ಪಾದಕ್ಕೆ ಸಲ್ಲಿಸಿದವರ ಗುಂಪಿಗೆ ಸೇರಿಬಿಟ್ಟರು. ಸಾಂಗ್ಲಿಯಾನಾನಂಥ ಅರಿವುಗೇಡಿಯ ಬಗ್ಗೆ ಮಾತಾಡುವುದೇ ಅಸಹ್ಯಕರ. ಶ್ರೀನಿವಾಸುಲು ತರಹದವರು, ದುಡ್ಡಿಗಿಂತ ಹೆಚ್ಚಾಗಿ ತಮ್ಮ ಕೋಷಿ ಗ್ಯಾಂಗಿನ ಜೊತೆಗೆ ಬಿದ್ದು ಜನವಿರೋಧಿ ಕೃತ್ಯಕ್ಕೆ ನಿಂತುಬಿಟ್ಟರು. ಎಲ್ಲ ಬಿಟ್ಟು , ಈ ಸಿದ್ಧಗಂಗಾ ಮಠದ ಅನುನಾಯಿ ರೇವಣ ಸಿದ್ಧಯ್ಯನವರಿಗೆ ಈ ಉಸಾಬರಿ ಯಾಕೆ ಬೇಕಿತ್ತು? ಈ ಪ್ರಶ್ನೆಗೂ ಉತ್ತರ ಹುಡುಕುವುದು ಸುಲಭ. ಇಟಲಿಯ ಹೆಂಗಸಿನ ಮೂಲಕ ಮಹಾರಾಷ್ಟ್ರದ ಫೋನು ಬಂದಿದೆ. ಮಹಾರಾಷ್ಟ್ರದ ಫೋನು ರೇವಣಸಿದ್ಧಯ್ಯನವರ ಪಾಲಿಗೆ ಪಂಚಾಮೃತ. ಎಷ್ಟಾದರೂ ಸಾಹೇಬರು ಕೃಷ್ಣರ ರಾಜ್ಯದಲ್ಲಿ ಬಾಣಸಿಗರಾಗಿದ್ದರು !

ಇಷ್ಟೆಲ್ಲ ಪ್ರತಿರೋಧದ ನಡುವೆಯೂ ತನ್ನ ದಾರಿಯನ್ನು ಈ ಎಲ್ಲ ಘಟಾನುಘಟಿಗಳ ಮೂಲಕ ಕ್ಲಿಯರು ಮಾಡಿಕೊಂಡು ಬೆನ್ನಿ ಹಿನ್‌ ಒಂದರ್ಥದಲ್ಲಿ ನಿಜವಾದ ದೇವಮಾನದ ಕಣ್ರೀ.

(ಸ್ನೇಹಸೇತು: ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X