• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಊರಿಗೆ ಬಂದ ಕಮಲ್‌ನನ್ನು ನೀರಿಗೆ ಕರೆಯುವುದ್ಯಾರು?

By Staff
|
Ravi Belagere on Thatskannada.com ರವಿ ಬೆಳಗೆರೆ
ಕಮಲಹಾಸನ್‌ ಕನ್ನಡ ಸಿನಿಮಾದಲ್ಲಿ ಆ್ಯಕ್ಟ್‌ ಮಾಡುತ್ತಿದ್ದಾನೆ ಅನ್ನುವುದು ಮೇಲ್ನೋಟಕ್ಕೆ ತುಂಬಾ ದೊಡ್ಡ ಸುದ್ದಿಯೇನಲ್ಲ. ನಮ್ಮ ವಿಷ್ಣುವರ್ಧನ್‌ ಅವರು ತಮಿಳು-ಹಿಂದಿಗಳಲ್ಲೆಲ್ಲಾ ಆ್ಯಕ್ಟ್‌ ಮಾಡಲಿಲ್ಲವೆ, ಇದೂ ಹಾಗೇ, ಅಂದುಕೊಂಡುಬಿಡುತ್ತೇವೆ. ಆದರೆ ಸಿನಿಮಾದ ಜನಕ್ಕೆ, ವಿಷ್ಣು ತಮಿಳಿಗೆ ಹೋಗುವುದಕ್ಕೂ ಕಮಲ್‌ ಕನ್ನಡಕ್ಕೆ ಬರುವುದಕ್ಕೂ ಇರುವ ವ್ಯತ್ಯಾಸ ಗೊತ್ತಿದೆ.

ಕಮಲ್‌ ಕನ್ನಡ ಸಿನಿಮಾ ಮಾಡುತ್ತಿರುವುದು ಇಪ್ಪತ್ತು ವರ್ಷಗಳ ನಂತರ. ಅಂದರೆ ಈ ಹಿಂದೆ ಅವನಿಲ್ಲಿಗೆ ಬಂದಿದ್ದಾಗ ಅವನು ಈಗಿನಷ್ಟು ದೊಡ್ಡಮಟ್ಟದ ಸ್ಟಾರ್‌ ಆಗಿರಲಿಲ್ಲ, ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಿನಷ್ಟು ದೊಡ್ಡ ಹೆಸರಿರಲಿಲ್ಲ. ನಮ್ಮ ವಿಷ್ಣು ತಮಿಳು- ಹಿಂದಿಗಳಲ್ಲಿ ಮಾಡಿದಾಗಲೂ ಅಷ್ಟೆ ; ಈಗಿರುವ ವರ್ಚಸ್ಸು ಅವರಿಗೆ ಆಗ ಇರಲಿಲ್ಲ.

ಸುದ್ದಿಯ ಮಹತ್ವ ಇರುವುದೇ ಈ ವ್ಯತ್ಯಾಸದಲ್ಲಿ.

Hello Kamal Hasanಕಮಲ್‌ ಇವತ್ತು ಬರೀ ಒಬ್ಬ ನಟನಲ್ಲ, ಒಬ್ಬ ಸ್ಟಾರ್‌ ಅಲ್ಲ, ಒಬ್ಬ ನಿರ್ದೇಶಕನಲ್ಲ, ಅವನೊಂದು ಸಂಸ್ಥೆಯಾಗಿ ಬೆಳೆದುಬಿಟ್ಟಿದ್ದಾನೆ. ಕಮಲ್‌ನ ಹೆಸರಿವತ್ತು ಭಾರತದ ಎಲ್ಲ ರಾಜ್ಯಗಳ ಎಲ್ಲ ಮೂಲೆಗಳ ಸಿನೆಮಾಸಕ್ತರಿಗೂ ಗೊತ್ತು. ಅವನ ಪ್ರತಿಭೆ ಗೊತ್ತು. ಅವನ ಹೆಸರಿಗಿರುವ ಸ್ಟಾರ್‌ಗಿರಿಯ ಹೊಳಪು ಗೊತ್ತು. ಆ ಹೊಳಪು ಅವನಿಗೆ ಸಿದ್ಧ ಮಾಡಿ ಕೊಟ್ಟಿರುವ ಮಾರುಕಟ್ಟೆಯ ಗಾತ್ರ ಗೊತ್ತು. ಆಸ್ಕರ್‌ನಂಥ ತಲೆ ಪ್ರತಿಷ್ಠೆಯ ಆವಾರ್ಡು ಕಮಿಟಿಗೂ ಕೂಡ ಅವನನ್ನು ಅದೆಷ್ಟು ಗೌರವದಿಂದ ಕಾಣುತ್ತವೆ ಅನ್ನುವುದೂ ಗೊತ್ತು.

ಹಾಗಾಗೇ, ಎಲ್ಲಿ ಹೋದರೂ ಥಟ್ಟನೆ ತನಗಾಗಿ ಒಂದು ಮಾರುಕಟ್ಟೆ ಸೃಷ್ಟಿ ಮಾಡಿಕೊಳ್ಳುವ ತಾಕತ್ತು ಕಮಲ್‌ಗಿದೆ. ಕಮಲ್‌, ರಜನಿ, ರೆಹಮಾನ್‌, ಬಾಲಚಂದರ್‌ರಂಥ ಪ್ರತಿಭೆಗಳಿಂದಾಗಿಯೇ ಇವತ್ತು ಹೂವಿನ ಜೊತೆಯ ನೂಲಿನ ಹಾಗೆ ತಮಿಳು ಚಿತ್ರರಂಗ ಒಂದು ನ್ಯಾಷನಲ್‌ ಐಡೆಂಟಿಟಿ ಪಡೆದುಕೊಂಡು, ತನಗಾಗಿ ಒಂದು ವಿಸ್ತಾರವಾದ ಸಂತೆ ಸೃಷ್ಟಿಸಿಕೊಂಡಿವೆ.

ಆದರೆ, ಕನ್ನಡ ಸಿನೆಮಾದಲ್ಲಿ ವಿಷಯದಲ್ಲಿ ಹೀಗಾಗಿಲ್ಲ. ನಮ್ಮಲ್ಲಿ ರಾಜಕುಮಾರ್‌ರಂಥ ಜನ್ಮಜಾತ ಪ್ರತಿಭೆಯ ಕಲಾವಿದರು ಸ್ಟಾರಾಗಿ ಬೆಳೆದಿದ್ದಾರೆ. ಕಮಲ್‌ನನ್ನೂ ಮೀರಿಸುವಂಥ ಸಹಜ ನಟನೆಯ ಅನಂತನಾಗ್‌ ಇದ್ದಾರೆ. ಈ ದೇಶದ ಕೆಲವೇ ಕೆಲವು ಪ್ರಚಂಡ ಟೆಕ್ನೇಷಿಯನ್ನುಗಳ ಸಾಲಿನಲ್ಲಿ ಸರಾಗವಾಗಿ ಸ್ಥಾನಗಿಟ್ಟಿಸಿಕೊಳ್ಳಬಲ್ಲ ರವಿಚಂದ್ರನ್‌ ಇದ್ದಾರೆ. ಹಿಂದಿ ಹೀರೋಗಳಿಗಿಂತಲೂ ಸ್ಫುರದ್ರೂಪಿಯಾದ ವಿಷ್ಣು ಇದ್ದಾರೆ. ರೆಹಮಾನ್‌ರ ಸಮಸ್ತ ಸಂಗೀತ ಪ್ರತಿಭೆಯನ್ನೂ ಚಿಟಿಕೆಯಲ್ಲಿ ಹಿಡಿದು ಆಪೋಷಕನ ತೆಗೆದುಕೊಳ್ಳಬಲ್ಲಂಥ ದೈವೀಕ ಪ್ರತಿಭೆಯ ವಿಜಯಭಾಸ್ಕರ್‌, ಜಿ.ಕೆ. ವೆಂಕಟೇಶ್‌, ಎಂ. ರಂಗರಾವ್‌ ಅವರುಗಳು ಆಳಿ ಹೋಗಿದ್ದಾರೆ.

ಆದರೂ, ಎಂದೂ ಯಾವತ್ತೂ ಇವರ್ಯಾರೂ ಕೋಲ್ಕತ್ತಾ -ದೆಹಲಿಗಳಲ್ಲಿ ಕೂತ ಸಾಮಾನ್ಯ ಪ್ರೇಕ್ಷಕನೊಬ್ಬ ಬೆರಗಿನಿಂದ ಬಾಯ್ಬಿಟ್ಟುಕೊಂಡು ನೋಡುವಷ್ಟರ ಮಟ್ಟಿನ ಎತ್ತರಕ್ಕೆ ಬೆಳೆಯಲಿಲ್ಲ. ಯಾರೂ ರಾಷ್ಟ್ರ ಮಟ್ಟದ ಸ್ಟಾರುಗಳಾಗಲಿಲ್ಲ. ಹಾಗಾಗೇ, ಬೇರೆ ಭಾಷೆಯವರು ಹೊಟ್ಟೆ ಕಿಚ್ಚು ಪಟ್ಟುಕೊಳ್ಳುವಂಥ ಸ್ಥಾನಮಾನವನ್ನು ನಮ್ಮ ಚಿತ್ರರಂಗ ಪಡೆಯಲೇ ಇಲ್ಲ. ಗಿರೀಶ್‌ ಕಾರ್ನಾಡ್‌, ಜಿ.ವಿ.ಅಯ್ಯರ್‌ರಂಥವರು ತಮ್ಮ ಹೊಸ ಅಲೆಯ ಚಿತ್ರಗಳ ಮೂಲಕ ಒಂದಿಷ್ಟು ಪ್ರಶಸ್ತಿ- ಪದಕ- ಫಲಕಗಳನ್ನೂ ಪಡೆದಿದ್ದು ಬಿಟ್ಟರೆ, ಯಾರ ಯಶಸ್ಸೂ, ಯಾವ ಯಶಸ್ಸೂ ಒಂದು ಕಮರ್ಷಿಯಲ್‌ ಮಾರುಕಟ್ಟೆಯ ರೂಪ ಪಡೆಯಲಿಲ್ಲ. ನಮಗಿದ್ದ ತಂತ್ರಜ್ಞಾನದ ಮಿತಿಗಳಲ್ಲೇ ಪುಟ್ಟಣ್ಣ ಅವರು ನಾಗರಹಾವು ಚಿತ್ರದಲ್ಲಿ ಒಂದಿಡೀ ಹಾಡನ್ನು ಸ್ಲೋಮೋಷನ್ನಿನಲ್ಲಿ ಚಿತ್ರಿಸಿದ ಹೆಚ್ಚುಗಾರಿಕೆ ಎಲ್ಲೂ ಸುದ್ದಿಯಾಗಲೇ ಇಲ್ಲ. (ಜೋ ಜೀತಾ ವಹೀ ಸಿಕಂದರ್‌’ಅನ್ನುವ ಚಿತ್ರದಲ್ಲಿ ‘ಪೆಹಲಾ ನಶಾ..’ಅನ್ನುವ ಹಾಡನ್ನು ಸ್ಲೋ ಮೋಷನ್ನಿನಲ್ಲಿ ಶೂಟ್‌ ಮಾಡಿದ್ದು ನ್ಯಾಷನಲ್‌ ನ್ಯೂಸಾಗಿತ್ತು ಅನ್ನುವುದನ್ನೂ, ಮತ್ತು ಆ ಚಿತ್ರ ಬಂದಿದ್ದು ‘ನಾಗರಹಾವು’ಬಂದ ಎರಡು ದಶಕಗಳ ನಂತರ ಅನ್ನುವುದನ್ನೂ ನಾವಿಲ್ಲಿ ನೆನಪಿಟ್ಟುಕೊಳ್ಳಬೇಕು.)

ಬಹುಶಃ ಹೀಗಾಗುವುದಕ್ಕೆ ನಮ್ಮ ಚಿತ್ರರಂಗದವರೇ ಕಾರಣ. ಎಲ್ಲರೂ ತಮ್ಮನ್ನು ತಾವು ವೈಯಕ್ತಿಕವಾಗಿ ಪ್ರೊಜೆಕ್ಟ್‌ ಮಾಡಿಕೊಳ್ಳಲು ಹೆಣಗಿ ವಿಫಲರಾದರೇ ಹೊರತು, ಇಲ್ಲಿರುವ ತಮ್ಮ ಜೊತೆಗಾರರ, ಹಿರಿಯರ, ಕಿರಿಯರ ಹೆಚ್ಚುಗಾರಿಕೆಯ ಬಗ್ಗೆ ತಮಗೆ ಅವಕಾಶ ಸಿಕ್ಕಾಗ ಯಾರೂ ಎಲ್ಲೂ ಕನಿಷ್ಠ ಮಾತಾಡುವ ತೊಂದರೆಯನ್ನೂ ತೆಗೆದುಕೊಳ್ಳಲಿಲ್ಲ. ಇದು ನಮ್ಮ ಇಂಡಸ್ಟ್ರಿ ಅಂತ ಹೆಮ್ಮೆಯಿಂದ ಎಲ್ಲೂ ಹೇಳಿಕೊಳ್ಳಲಿಲ್ಲ. ಫಿಲಂಫೇರ್‌ನಂಥ ಅವಾರ್ಡುಗಳ ಕಾರ್ಯಕ್ರಮಗಳಲ್ಲಿ ಯಾರೂ ಕನ್ನಡ ಚಿತ್ರಗಳ ಬಗ್ಗೆ ಬೇರೆಯವರಲ್ಲಿ ಕುತೂಹಲ ಮೂಡಿಸಲಿಲ್ಲ. ಬದಲಿಗೆ ಅಂಥ ಸಮಾರಂಭಗಳಲ್ಲಿ ನಮ್ಮ ಕೆಲವರು ತಮಿಳು-ಮಲಯಾಳಂನ ನಟರು- ತಂತ್ರಜ್ಞರು- ನಿರ್ದೇಶಕರುಗಳನ್ನೇ ಹೊಗಳಿ ಪುನೀತರಾಗಿದ್ದೂ ಉಂಟು. ಒಂದು ಸಲ ನಮ್ಮ ನಟಿಯಾಬ್ಬರು,‘ಕಮಲ್‌ ನಂಥ ನಟ ಈ ದೇಶದಲ್ಲಿ ಇನ್ನೊಬ್ಬರಿಲ್ಲ’ ಅಂತ ಹೇಳಿದಾಗ ಖುದ್ದು ಕಮಲಹಾಸನ್ನೇ,‘ಯಾಕೆ ಮೇಡಂ, ನಿಮ್ಮ ರಾಜ್ಯದಲ್ಲೇ ಡಾಕ್ಟರ್‌ ರಾಜ್‌ ಹಾಗೂ ಅನಂತನಾಗ್‌ ಥರದವರಿದ್ದಾರಲ್ಲಾ.. ’ ಅಂದಿದ್ದ.

ಇದರರ್ಥ ಇಷ್ಟೆ . ನಾವು ನಮ್ಮಲ್ಲಿರುವ ಪ್ರತಿಭೆಯನ್ನು ಸರಿಯಾಗಿ ಮಾರ್ಕೆಟ್‌ ಮಾಡಿಕೊಳ್ಳಲಿಲ್ಲ. ತಮಿಳರು-ಮಲೆಯಾಳಿಗಳು ಆ ಕೆಲಸ ಮಾಡಿದರು. ಕಮಲ್‌ರನ್ನೂ, ರಜನಿಯನ್ನೂ, ಮೋಹನ್‌ಲಾಲ್‌- ಮಮ್ಮುಟಿಗಳನ್ನೂ ನ್ಯಾಷನಲ್‌ ಸ್ಟಾರುಗಳನ್ನಾಗಿ ಮಾಡಿದರು. ಅವರ ಚಿತ್ರರಂಗ ಹೊಸ ಹೊಸ ಪ್ರಯೋಗಗಳಿಗೆ ತನ್ನನ್ನು ತಾನು ಒಡ್ಡಿಕೊಂಡು ಬೆಳೆಯಿತು; ಯಾಕೆಂದರೆ, ತನ್ನ ಎಲ್ಲ ಪ್ರಯೋಗಗಳನ್ನೂ ಸಾಕಬಲ್ಲಷ್ಟು ದೊಡ್ಡದಾದ ಮಾರುಕಟ್ಟೆ ತನಗಿದೆ ಅನ್ನುವುದು ಅದಕ್ಕೆ ಗೊತ್ತಿತ್ತು. ನಮ್ಮ ಸಿನೆಮಾ ಮಾತ್ರ, ನಮಗೆ ಗುಜರಾತಿ-ಪಂಜಾಬಿ ಸಿನಿಮಾಗಳು ಹೇಗೋ ಹಾಗೆ ಅಜ್ಞಾತವಾಗಿ ಉಳಿದುಬಿಟ್ಟಿತು. ಕಮಲ್‌, ಕನ್ನಡ ಸಿನೆಮಾ ಮಾಡುತ್ತಿರುವುದನ್ನು ನಾವು ಈ ಹಿನ್ನೆಲೆಯಲ್ಲಿ ನೋಡಿದಾಗ ಅದರ ಇಂಪಾರ್ಟೆನ್ಸ್‌ ನಮಗರ್ಥವಾಗುತ್ತದೆ.‘ಇಂಡಿಯನ್‌’ನಂಥ,‘ಹೇರಾಮ್‌’ ನಂಥ, ‘ನಾಯಗನ್‌’ನಂಥ,‘ಮುಂಬೈ ಎಕ್ಸ್‌ಪ್ರೆಸ್‌’ನಂಥ ಸಿನೆಮಾಗಳನ್ನು ಮಾಡಿಕೊಟ್ಟ ಕಮಲ್‌ ಕನ್ನಡ ಚಿತ್ರರಂಗಕ್ಕೇಕೆ ಬಂದ ಅನ್ನುವುದು ದೇಶದ ಸಿನೆಮಾ ವಲಯಗಳಲ್ಲಿ ಒಂದು ಕನಿಷ್ಠ ಮಟ್ಟದ ಕುತೂಹಲವನ್ನಾದರೂ ಹುಟ್ಟಿಸುತ್ತದೆ. ನಮ್ಮ ಸಿನೆಮಾಗೆ ಜನರ ಅಟೆನ್ಷನ್‌ ಸಿಗುತ್ತದೆ. ಕಮಲ್‌ ಕಾರಣದಿಂದಾಗಿ ‘ರಾಮ ಶಾಮ ಭಾಮ’ಚಿತ್ರಕ್ಕೆ ಕರ್ನಾಟಕದಾಚೆಯೂ ಒಂದಿಷ್ಟು ಮಾರ್ಕೆಟ್‌ ಸಿಗುತ್ತದೆ.

ನಮಗೆ ಬುದ್ಧಿವಂತಿಕೆ ಮತ್ತು ಚಾಣಾಕ್ಷತನ ಇದ್ದರೆ, ನಮ್ಮ ಇಂಡಸ್ಟ್ರಿಗೊಂದು ರಾಷ್ಟ್ರೀಯ ವೇದಿಕೆ ದಕ್ಕಿಸಿಕೊಳ್ಳುವುದಕ್ಕೆ ಇಷ್ಟು ಅವಕಾಶ ಸಾಕು. ನಮ್ಮಲ್ಲಿರುವ ನಾಗತಿಹಳ್ಳಿ, ರವಿಚಂದ್ರನ್‌, ಉಪೇಂದ್ರ, ಸುದೀಪ್‌, ರಮೇಶ್‌,ಪ್ರಕಾಶ್‌ ರೈ, ಇವರುಗಳೆಲ್ಲರೂ ‘ರಾಮ ಶಾಮ..’ದ ಬೆನ್ನೇರಿ ಹೊರ ರಾಜ್ಯಗಳಿಗೆ ನುಗ್ಗಬಹುದು. ಹ್ಯಾಗೆ ಅನ್ನುವುದಕ್ಕೆ ತಕ್ಷಣಕ್ಕೆ ಸ್ಪಷ್ಟವಾದ ಉತ್ತರ ಸಿಗುವುದಿಲ್ಲವಾದರೂ, ನಮ್ಮೆದುರು ಇಂಥದ್ದೊಂದು ಮಾರ್ಕೆಟಿಂಗ್‌ ಯಶಸ್ಸಿನ ಉದಾಹರಣೆಯಿದೆ. ‘ಸ್ಟಾರ್‌ ಪ್ಲಸ್‌’ಅನ್ನುವ ಟೀವಿ ಚಾನಲ್‌ ಈಗ್ಗೆ ಆರು ವರ್ಷಗಳ ಹಿಂದೆ ಹೀನಾಯ ಸ್ಥಿತಿಯಲ್ಲಿತ್ತು. ಅದನ್ನು ಕಣ್ಣೆತ್ತಿ ನೋಡುವವರೇ ದಿಕ್ಕಿರಲಿಲ್ಲ. ಆಗ ಚಾನಲ್‌ನವರು ಅಮಿತಾಭ್‌ನನ್ನು ಕರೆತಂದು ಕೂರಿಸಿಕೊಂಡರು. ಕೌನ್‌ ಬನೇಗಾ ಕರೋಡ್‌ಪತಿ ಸಿದ್ಧವಾಯಿತು. ಆ ಕಾರ್ಯಕ್ರಮ ಸೂಪರ್‌ ಹಿಟ್‌ ಆಗುವುದರಲ್ಲಿ ಛಾನಲ್‌ನವರಿಗೆ ಯಾವುದೇ ಅನುಮಾನವಿರಲಿಲ್ಲ. ಆದರೆ, ಅದೊಂದರಿಂದಲೇ ಚಾನಲ್‌ನ ಉದ್ಧಾರ ಸಾಧ್ಯವಿಲ್ಲ ಅನ್ನುವುದೂ ಅವರಿಗೆ ಗೊತ್ತಿತ್ತು.

ಅಮಿತಾಭ್‌ನ ಬೆನ್ನಿಗೆ ‘ಕರೋಡ್‌ ಪತಿ’ಅನ್ನುವ ಒಂದು sure-shot ಪ್ರಾಡಕ್ಟನ್ನು ಗಂಟು ಹಾಕಿ, ಅವನನ್ನು ಒಬ್ಬ ಸೇಲ್ಸ್‌ ಮ್ಯಾನನ್ನಾಗಿ ಮಾಡಿ ಕಣಕ್ಕಿಳಿದರು. ಅವನಿಗೇ ಗೊತ್ತಿಲ್ಲದಂತೆ, ಕರೋಡ್‌ಪತಿಯ ಸುತ್ತಲೂ ಅಷ್ಟೇ ಹೊಸತನದ ಮತ್ತು ಆಕರ್ಷಕವಾದ ಇನ್ನೊಂದಿಷ್ಟು ಪ್ರೋಗ್ರಾಂಗಳದೊಂದು ಗುಚ್ಛವನ್ನು ಅವರು ಕಟ್ಟಿದ್ದರು. ಒಂದುಕೊಂಡರೆ ಇನ್ನೊಂದು ಉಚಿತ ಅನ್ನುವ ರೀತಿಯಲ್ಲಿ ಈ ಕಾರ್ಯಕ್ರಮಗಳು ಬಂದವು. ನಿಧಾನವಾಗಿ, ತನಗೇ ಗೊತ್ತಿಲ್ಲದಂತೆ, ಅಮಿತಾಭ್‌ ಈ ಕಾರ್ಯಕ್ರಮಗಳಿಗೂ ಸೇಲ್ಸ್‌ ಮ್ಯಾನ್‌ ಆದ. ಅವುಗಳೆಲ್ಲದಕ್ಕೂ ಒಂದು ಗಟ್ಟಿಯಾದ ಮಾರ್ಕೆಟ್‌ ದೊರೆತಾದ ಮೇಲೆ ಚಾನಲ್ಲಿನವರು ಸದ್ದೇ ಇಲ್ಲದಂತೆ ಕರೋಡ್‌ಪತಿಯನ್ನು ಮನೆಗೆ ಕಳಿಸಿದರು. ಅಮಿತಾಭ್‌ನ ವರ್ಚಸ್ಸನ್ನು ಸಂಪೂರ್ಣವಾಗಿ ಬಳಸಿಕೊಂಡ ಚಾನಲ್‌ಬದುಕುಳಿದಿದ್ದಷ್ಟೇ ಅಲ್ಲ, ಎದುರಾಳಿಗಳೆಲ್ಲರನ್ನೂ ಒಂದೇ ಏಟಿಗೆ ಮಟ್ಟಹಾಕಿ ಮಲಗಿಸಿಯೂ ಬಿಟ್ಟಿತು.

ಈ ಯಶಸ್ಸಿನಲ್ಲೊಂದು ಮಾರ್ಕೆಟಿಂಗ್‌ ಪಾಠ ಇದೆ ಅನ್ನಿಸುವುದಿಲ್ಲವೆ?

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more