• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿ ಸಂತೋಷವೂ ಮುಗಿಯುತ್ತದೆ ; ದುಃಖದಂತೆ!

By Staff
|
Ravi Belagere on Thatskannada.com ರವಿ ಬೆಳಗೆರೆ
ನನ್ನ ಹಿರಿಯ ಮಿತ್ರರೊಬ್ಬರಿದ್ದಾರೆ. ಅವರನ್ನು ನೀವು ಸಾಕ್ಷಾತ್ತು ಪ್ರಧಾನಮಂತ್ರಿಯ ಎದುರಿಗೆ ಕರೆದೊಯ್ದು ನಿಲ್ಲಿಸಿ ತಮಗೆ ಆಗಬೇಕಾದ ಕೆಲಸವೇನಿದೆ, ಅದನ್ನು ನೇರವಾಗಿ, ಸ್ಪಷ್ಟವಾಗಿ ಮೊದಲನೆಯ ವಾಕ್ಯದಲ್ಲೇ ಹೇಳಿ ಮುಗಿಸುತ್ತಾರೆ. ಇದು ಆಗಬೇಕು ನೋಡ್ರಿ ಅಂತ ಕಾಲೂರಿಕೊಂಡು ನಿಂತು ಬಿಡುತ್ತಾರೆ. ಯಾಕೆ ಹೀಗೆ ಮಾಡ್ತೀರಿ?ಒಂದು ಮುಗುಳ್ನಗೆ, ಕೈಕುಲುಕು, ಉಭಯ ಕುಶಲ ಸಾಂಪ್ರತ-ಯಾವುದೂ ಇಲ್ಲವಲ್ಲ ?ನಿಮ್ಮ ಅಭ್ಯಾಸವೇ ಹೀಗಾ ಅಂತ ಕೇಳಿದ್ದೆ.

‘ನೋಡ್ರಿ ರವೀ, ತುಂಬಾ ಜನ ರಾಜಕಾರಣಿಗಳು ಯಾರೇ ಬಂದ್ರೂ ಅವರ ಜೊತೆಗೆ ಭಯಂಕರ ಆತ್ಮೀಯರೇನೋ ಅನ್ನೋಹಾಗೆ ಗಂಟೆಗಟ್ಟಲೆ ಹರಟೆ ಹೊಡೆಯುತ್ತಾರೆ. ನಾವು ಹೋದ ಕೆಲಸವೊಂದು ಬಿಟ್ಟು ಎಲ್ಲ ಮಾತಾಡುತ್ತಾರೆ. ಅಸಲಿ ಕೆಲಸ ಆಗುವುದೇ ಇಲ್ಲ. ಹರಟೆ ಹೊಡೆದು ಏನಾಗಬೇಕಿದೆ? ನಿಮ್ಮೂರಿನಲ್ಲಿ ಮಳೆ ಆಯ್ತಾ ಬೆಳೆ ಆಯ್ತಾ? ಅದನ್ನು ಪತ್ರಿಕೆಗಳಲ್ಲಿ ಓದಿಕೊಂಡರಾಯ್ತು. ನಿಮ್ಮ ಆರೋಗ್ಯ ಹೇಗಿದೆ? ಕೇಳಲು ನಾನು ಡಾಕ್ಟರಲ್ಲ. ಹೇಗಿದ್ದರೂ ಪರಿಚಯವಿದೆ. ಕೇಳಲು ಹೋಗಿರುವುದು ಒಂದು ನಿರ್ದಿಷ್ಟ ವಿಷಯದ ಬಗ್ಗೆ. ಅಷ್ಟು ಕೇಳಿ, ಹೇಳಿ, ಕೆಲಸ ಮುಗಿಸಿಕೊಂಡು ಹೊರಬಿದ್ದರೆ ಮುಗೀತು. ಯಾಕೆ ಒಣಾ ಹರಟೆ?’ ಅಂದರು.

ಮಾತು ಕೊಂಚ ಅಗತ್ಯಕ್ಕಿಂತ ನೇರ ಅನ್ನಿಸಿದರೂ, ಅವರಂದಿದ್ದು ಸತ್ಯ ಅನ್ನಿಸಿತು. ನೇರವಾಗಿ ನಾವು ಅನೇಕ ಸಲ ವಿಷಯಕ್ಕೆ ಬರುವುದೇ ಇಲ್ಲ. ಕೆಲವೊಮ್ಮೆ ವಿಷಯ ಪ್ರಸ್ತಾಪಿಸುವುದಕ್ಕೇ ಸಂಕೋಚವಾಗಿ ‘ ಹ್ಹೆ ಹೆ’ಅಂತ ನಕ್ಕು, ಕತ್ತಲಲ್ಲಿ ಕಾಲು ತುಳಿಸಿಕೊಂಡವರಂತೆ ಎದ್ದು ಬಂದಿರುತ್ತೇವೆ. ನಮ್ಮ ಒಂದು ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಹತ್ತು ತಾಸನ್ನು ಮಾತಿಗೆ ಅಂತ ಎತ್ತಿಟ್ಟರೆ, ಅದರಲ್ಲಿ ನಾವುನೇರವಾಗಿ to the point ಎಂಬಂತೆ ಮಾತನಾಡಿರುವುದು ಕೇವಲ ಅರ್ಧಗಂಟೆಯಷ್ಟಿರುತ್ತದೆ. ಉಳಿದದ್ದೆಲ್ಲ ಹರಟೆ, ಜಾಪಾಳ, ಯಾಕೆ ಹೀಗಾಗುತ್ತದೆ ಅಂದರೆ, ನಾವು ಹೋಗಿರುವ ಕೆಲಸದ ಬಗ್ಗೆ ನಮಗೇ ಕಾನ್ಫಿಡೆನ್ಸ್‌ ಇರುವುದಿಲ್ಲ. ಕೇಳಬೇಕಾದ favour ಕೇಳಿದರೆ ಏನಂದುಕೊಳ್ಳುತ್ತಾರೋ ಎಂಬ ಆತಂಕ. ವಿಷಯ ಸರಿಯಾಗಿ ಮಂಡಿಸುತ್ತಿದ್ದೇನಾ ಎಂಬುದರ ಬಗ್ಗೆಯೇ ಅನುಮಾನ. ಎದುರಿನವನು ನಮ್ಮ ಜಾತಿಯವನಾದರೆ ಕೆಲಸ ಆದೀತೇನೋ? ಅವನ ಜಾತಿ ಯಾವುದಿರಬಹುದು?‘ನಿಮ್ಮ ತಂದಿ ಹೆಸರೇನ್ರೀ?’ಎಂಬ ಅಸಡ್ಡಾಳ ಪ್ರಶ್ನೆ. ವಿಷಯಕ್ಕೆ ಬರುವ ಹೊತ್ತಿಗೆ ಸುಸ್ತಾಗಿ ಬಿಟ್ಟಿರುತ್ತೇವೆ. ಆದರೆ ತನ್ನ ಕೆಲಸ ಮಾಡಿಕೊಂಡೇ ಹೋಗಬೇಕೆಂದುಕೊಂಡವನು ಒಂದು ಬ್ರೀಫ್‌ ಇಂಟ್ರೊಡಕ್ಷನ್‌ ಕೊಟ್ಟು ಕೊಂಡು ನೇರವಾಗಿ ವಿಷಯಕ್ಕೆ ಬಂದು ಬಿಡುತ್ತಾನೆ.

ಬಂದವರನ್ನು ಮಾತನಾಡಿಸಿ ಕಳಿಸುವುದೂ ಅಷ್ಟೆ. ಬಂದವರಿಗೆ ಕುರ್ಚಿಕೊಡಿ. ಹೆಸರು ಕೇಳಿ. ಆತನಿಗೆ relax ಆಗಲು ಬಿಡಿ. ಮತ್ತು ಕೂಡಲೆ ವಿಷಯಕ್ಕೆ ಬಂದು ಬಿಡಿ. ನಿಮ್ಮ ಸಮಯವಷ್ಟೇ ಅಲ್ಲ, ನಿಮ್ಮ ಎನರ್ಜಿ ಕೂಡ ಉಳಿತಾಯವಾಗುತ್ತದೆ. ಆಗುವ ಕೆಲಸವನ್ನು ಆಗುತ್ತದೆ ಅಂತ ಹೇಳಿ, ಆಗುವುದಾದರೆ ತಕ್ಷಣ ಮಾಡಿಕೊಡಿ. ‘ನಾಳೆ ಬಾ ನೋಡೋಣ’ ಅಂದರೆ ಆ ಕ್ಷಣದ ಮಟ್ಟಿಗೆ ನಿಮ್ಮ ತಲೆ ನೋವು ಕಳೆಯಬಹುದು. ಆದರೆ ಅವನಲ್ಲಿ ಫಾಲ್ತೂ ಆಸೆ ಹುಟ್ಟಿಸುತ್ತೀರಿ. ಸರಿಯಾದ ರೀತಿ ಅಲ್ಲ ಅದು.‘ಈ ಕೆಲಸ ನಂದಲ್ಲ, ಮಾಡಿ ಕೊಡಲಾಗುವುದಿಲ್ಲ’ ಎಂಬುದನ್ನು ಸಾಧ್ಯವಾದಷ್ಟೂ ಕನ್ವಿನ್ಸಿಂಗ್‌ ಆಗಿ ಹೇಳಿ ಕಳಿಸಿ. Hurt ಮಾಡಬೇಡಿ. ನನ್ನಲ್ಲೊಬ್ಬ ವರದಿಗಾರನಿದ್ದ. ಉಳಿದವರು ಹದಿನೈದು ನಿಮಿಷಗಳಲ್ಲಿ ಮಾಡಿಕೊಂಡು ಬರುವ ಕೆಲಸವನ್ನು ಅವನು ಹದಿನೈದು ದಿನಗಳಾದರೂ ಮುಗಿಸುತ್ತಿರಲಿಲ್ಲ. ಸುದ್ದಿ ಕೊಡಲು ಬಂದವನ ಹತ್ತಿರ ಒಂದಷ್ಟು ಮಾಹಿತಿ ಇರುತ್ತದೆ. ಅದನ್ನು ತೆಗೆದುಕೊಂಡಾದ ಮೇಲೆ ಛಕ್ಕನೆ ಎದ್ದು ಬಿಡುಬೇಕು. ಉಹುಂ, ಇವನು ದಿನಗಟ್ಟಲೆ ಅವನನ್ನು ಗಿಲ್ಲುತ್ತಾ ಕೂಡುತ್ತಿದ್ದ. ಮಾತು ಹೇಗೋ ಪ್ರಾರಂಭವಾಗಿಬಿಡುತ್ತಿತ್ತು. ಆದರೆ ಅದನ್ನು ಎಲ್ಲಿಗೆ ಮುಗಿಸಬೇಕು ಅಂತ ಇವನಿಗೆ ಗೊತ್ತೇ ಆಗುತ್ತಿರಲಿಲ್ಲ. ಅಂಥವನನ್ನಿಟ್ಟುಕೊಂಡು ಏನು ಮಾಡಲಿ? ಮಾತು ಮುಗಿಸಿ ಎಬ್ಬಿಸಿ ಕಳಿಸಿದೆ.

ಇದು ಬರವಣಿಗೆಗೂ, ಭಾಷಣಕ್ಕೂ ಕೂಡ apply ಆಗುತ್ತದೆ. ಒಂದು ವಿಷಯ ಬರೆಯಲು ಕುಳಿತಾಗ ಅದರ ಉದ್ದ ಎಷ್ಟಿರಬೇಕು ಅಂತ ಮೊದಲೇ ನಿರ್ಧರಿಸಿ ಕೊಳ್ಳಬೇಕು, plan ಮಾಡಬೇಕು. ಇನ್ನಷ್ಟು ಚಿಕ್ಕದಾಗಿ ಹೇಳಲಾಗುವುದಿಲ್ಲವಾ ಅಂತ ಯೋಚಿಸಬೇಕು. ವಿಷಯಾಂತರ ಮಾಡುತ್ತಿದ್ದೇವಾ ಅಂತ ಕೇಳಿಕೊಳ್ಳಬೇಕು. ಬರೆದದ್ದು ಸಾಕಲ್ಲವಾ ಅಂತ ಕೇಳಿಕೊಳ್ಳುತ್ತಿರಬೇಕು. ವರದಿಗಾರನಿಗೆ, ಅಂಕಣಕಾರರಿಗೆ ಈ ಎಚ್ಚರಿಕೆ ತುಂಬ ಅಗತ್ಯ. ಭಾಷಣಕಾರರಿಗೂ! ಎಷ್ಟೋ ಜನ ಮಾಡಬೇಕಾದ ಭಾಷಣ ಮುಗಿದ ನಂತರವೂ ಮಾತನಾಡುತ್ತಲೇ ಇರುತ್ತಾರೆ. ಇಲ್ಲಿಗೆ ನಿಲ್ಲಿಸಿದ್ದರೆ ಸಾಕಿತ್ತು ಅಂತ ಅವರಿಗೆ ಅನ್ನಿಸುವುದೇ ಇಲ್ಲ.

ಜೋಕು ಹೇಳುವವರ ಫಜೀತಿ ಕೂಡ ಇದೇ ಜಾಡಿನದು. ನಾವು ಹೇಳ ಹೊರಟಿರುವ ಜೋಕು ಈಗಾಗಲೇ ಎದುರಿನವರಿಗೆ ಗೊತ್ತಿದೆ ಅಂತ ಗೊತ್ತಾದ ಕೂಡಲೆ ಮಾತು ನಿಲ್ಲಿಸಬೇಕು. ಅವರು ಸೌಜನ್ಯಕ್ಕೆ ಬಿದ್ದು ಕೇಳುತ್ತಿರುತ್ತಾರೆ. ನಾವು ಹತೋಡಾ ಹೊಡೆಯುತ್ತಲೇ ಇರುತ್ತೇವೆ. ಅತ್ಯುತ್ತಮ ಜೋಕು, ಭಾಷಣ, ಅಡ್ವೈಸು-ಎಲ್ಲವೂ ಶುದ್ಧ ಬೋರುಗಳಾಗುವುದೇ ಆವಾಗ.

ಸಂಬಂಧಗಳಂತೆಯೇ!

ಸತ್ತು ಹೋದ ನಂತರವೂ ಅವುಗಳನ್ನು ತೊಡೆಗೆ ಹಾಕಿಕೊಂಡು ಚುಕ್ಕು ತಟ್ಟಿ ತಲೆ ನೇವರಿಸುವ ವ್ಯರ್ಥ ಕಸರತ್ತು ಮಾಡುತ್ತಿರುತ್ತೇವೆ: ಸಾವಿನ ಘೋಷಣೆ ಮಾಡುವುದು ಹೇಗೆ ಅಂತ ಚಿಂತೆಗೆ ಬಿದ್ದ ಎಮರ್ಜೆನ್ಸಿ ವಾರ್ಡ್‌ನ ನರ್ಸ್‌ನ ಹಾಗೆ. ಸಂಬಂಧ ಸತ್ತಿದೆಯೆಂಬುದು ಇಬ್ಬರಿಗೂ ಗೊತ್ತಾಗುತ್ತಿರುತ್ತದೆ. ಬೆಚ್ಚಗೊಂದು ಬಾರಿ ಹ್ಯಾಂಡ್‌ ಷೇಕ್‌ ಮಾಡಿ ಅಲ್ಲಿಂದ ಎದ್ದು ಬಿಡಲು ಏನೋ ಸಂಕೋಚ, ಯಾವುದೋ ಭಿಡೆ. ನಮ್ಮ ನಿಜವಾದ ಸಮಸ್ಯೆಯೇನೆಂದರೆ, ಒಳ್ಳೆಯದೆನ್ನಿಸಿಕೊಂಡದ್ದು ಕೂಡ ಯಾವುದೋ ಹಂತದಲ್ಲಿ, ಯಾವತ್ತಾದರೊಂದು ದಿನ ಮುಗಿದು ಹೋಗುತ್ತದೆ ಎಂಬುದನ್ನು ನಮ್ಮ ಮನಸು ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ.

ಒಳ್ಳೆಯ ಹಾಡು, ಒಳ್ಳೆಯ ಭಾಷಣ, ಒಳ್ಳೆಯ ಸಂಬಂಧ, ಒಳ್ಳೆಯ ಸಿನಿಮಾ- ಎಲ್ಲವೂ ಮುಗಿಯಲೇಬೇಕು. ಎರಡನೆಯ ಸಲ ಕೇಳಲು, ನೋಡಲು, ಅನುಭವಿಸಲು ನಮಗೆ ಆಸೆಯಾಗಬಹುದು, ನಿಜ. ಆದರೆ ಮೊದಲಿನ ಸಲದ ಸವಿ ಉಳಿಯುವುದಿಲ್ಲ. ದುಃಖಕ್ಕಿರುವಂತೆಯೇ, ಸುಖಕ್ಕೂ ಒಂದು ಅಂತ್ಯವಿರುತ್ತದೆ.

ಇನ್ನೂ ಒಂದಷ್ಟು ಮಾತು ಬಾಕಿ ಇದೆ ಅನ್ನಿಸುತ್ತಿದ್ದಂತೆಯೇ ಮೌನ ವಹಿಸುವವನು ಹೆಚ್ಚು ಪರಿಣಾಮ ಬೀರುತ್ತಾನೆ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more