ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಖದ್ದೂ ಅಲ್ಲದ ದುಃಖವೂ ಇಲ್ಲದ ಮಹಾಬೋರಿನ ಮಧ್ಯಕಾಲ !

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

‘ಆಮೇಲಿಂದ ಅವರು ಸುಖವಾ..ಗಿದ್ರು’ ಅಂತ ಅನೇಕ ಕತೆಗಳು ಮುಗಿಯುತ್ತವೆ. ಏಕೆಂದರೆ, ಒಂದು ಕಷ್ಟ ಕಳೆದ ಮೇಲೆ ನಾವೆಲ್ಲ ಶಾಶ್ವತ ವಾಗಿ ಸುಖವಾಗಿರ್ತೀವಿ ಅನ್ನೋ ನಂಬಿಕೆ ನಮ್ಮದಾಗಿರುತ್ತದೆ. ನಮ್ಮ ಪರಿಚಯದ ಯಾರೋ ಹುಡುಗಿ. ಅವಳ ಮದುವೆಗೆ ಹೋಗಿರುತ್ತೇವೆ. ಹುಡುಗ ಚೆನ್ನಾಗಿದ್ದಾನೆ. ಒಳ್ಳೇ ನೌಕರಿಯಲ್ಲಿದ್ದಾನೆ. ಸಾಕಷ್ಟು ಸ್ಥಿತಿವಂತ ನೂ ಹೌದು ಅಂತೆಲ್ಲ ಕೇಳಿರುತ್ತೇವೆ. ನೋಡಿರುತ್ತೇವೆ. ಆಯ್ತು ಬಿಡು, ಹುಡುಗಿ ಸುಖವಾಗಿರ್ತಾಳೆ ಇನ್ಮೇಲೆ ಅಂದು ಕೊಳ್ಳುತ್ತೇವೆ. ಅವಳು ಕಣ್ಣೆದುರಿಗಿರುವುದಿಲ್ಲ ವಾದ್ದರಿಂದ ‘ ಸುಖವಾಗಿದ್ದಿರಬೇಕು ಬಿಡು’ ಅಂತಲೂ ಅಂದು ಕೊಳ್ಳುತ್ತೇವೆ. ಸುಖವೆಂಬುದು ಜೀವನ ಪರ್ಯಂತ ಇರುವ ಸ್ಥಾಯೀ ಸ್ಥಿತಿ ಅಂದುಕೊಳ್ಳುತ್ತೇವೆಯಾದ್ದರಿಂದ ನಮಗೆ ಹೀಗನ್ನಿಸುತ್ತಿರುತ್ತದೆ.

ಆದರೆ, ಪರೀಕ್ಷಿಸಿ ನೋಡಿ. ನಮ್ಮ ಬದುಕಿನ ನಿಜವಾದ ಉನ್ಮತ್ತ ಸುಖದ ಕ್ಷಣಗಳು ಕೆಲವೇ ಇರುತ್ತವೆ. On the top of the world ಅಂತ ಚೀತ್ಕರಿಸಿ ಆನಂದಿಸುವ ದಿನಗಳು ತುಂಬ ಇರುವುದಿಲ್ಲ. ಉಲ್ಲಾಸವೆಂಬುದು ಕೂಡ ಬದುಕಿನ ಒಂದು small patch ಅಷ್ಟೆ . ಮನೆ ಕಟ್ಟಿದ ದಿನ, ಮದುವೆಯಾದ ದಿನ, ಕಾರು ಕೊಂಡದಿನ, ಮಗಳು ಪಾಸಾದ ದಿನ, ಪ್ರಶಸ್ತಿ ಬಂದ ದಿನ, ಪ್ರಮೋಷನ್‌ ಸಿಕ್ಕಿದ ದಿನ- ಇಂಥ ಬೆರಳೆಣಿಕೆಯ ದಿನಗಳಷ್ಟೆ ನಮ್ಮನ್ನು ಸುಖದ, ಸಂತೋಷದ ತುದಿಗೆ ಒಯ್ದಿರುತ್ತವೆ. ಉಳಿದಂತೆ ಬದುಕು ಒಂದು ದೊಡ್ಡ odd sizeನ ಬೂಟಿನೊಳಕ್ಕೆ ಕಾಲು ಸಿಗೆಹಾಕಿಕೊಂಡಿದೆಯೆಂಬಂತೆ ಕಾಲೆಳೆಯುತ್ತ ಸಾಗುತ್ತಿರುತ್ತದೆ. ಅದೇ ರೊಟೀನು. ಅವೇ ಜನ. ಅವವೇ ಕೆಲಸಗಳು- huge bore!

ಮೊನ್ನೆ ಸಿಕ್ಕ ಹಳೆಯ ಗೆಳತಿ ಇದನ್ನೇ ಹೇಳುತ್ತಿದ್ದಳು. ಏನೂ charm ಇಲ್ಲ ಕಣೋ. Life ತುಂಬ dry ಆಗ್ತಿದೆ ಆನ್ಸುತ್ತೆ. ಏನೂ ಘಟಿಸ್ತಾನೇ ಇಲ್ಲ. ನಿನ್ನೆ ಬೆಳಗ್ಗೆಗೂ, ಹತ್ತು ವರ್ಷಗಳ ಹಿಂದಿನ ಬೆಳಗ್ಗೆಗೂ ವ್ಯತ್ಯಾಸವೇ ಇಲ್ಲ. ಹಾಗೆ ನೋಡಿದರೆ ನಿನ್ನ ಜೀವನ ತುಂಬ eventful ಅಲ್ವಾ? ಹೊಸ ಸುದ್ದಿ, ಹೊಸ ಬರವಣಿಗೆ, ಹೊಸ ಜನರನ್ನ meet ಮಾಡ್ತೀಯ, ಹೊಸ ಊರುಗಳು, ಕಾರ್ಯಕ್ರಮಗಳು, ಸಾಹಸಗಳು, ಹೊಸ ಜಗಳ-ಪ್ರತೀದಿನ ನಿನ್ನ ಪಾಲಿಗೆ ನಿತ್ಯ ನೂತನವಾಗಿರುತ್ತೆ ಅನ್ನೋ ಥರಾ ಮಾತನಾಡಿದಳು. ಒಂದೇ ಒಂದು ಸಲ ಭಾನುವಾರ ಬೆಳಗ್ಗೆ ನನ್ನ ಆಫೀಸಿಗೆ ಬಂದು ನೋಡು. ನನ್ನ ಪುಟ್ಟ ಕ್ಯುಬಿಕಲ್‌ನೊಳಕ್ಕೆ ಕೈಲಿ ಪೆನ್ನು ಹಿಡಿದುಕೊಂಡು ಹೋಗಿ ಕುರ್ಚಿಯ ಮೇಲೆ ಸ್ಥಾಪಿತನಾಗುವು ದನ್ನು ಗಮನಿಸು. ಆಮೇಲೆ ಪ್ರತೀದಿನ, ಅಂದರೆ ಮುಂದಿನ ಶುಕ್ರವಾರ ಸಾಯಂಕಾಲ, ತನಕ ಯಾವ ಹೊತ್ತಿಗಾದರೂ ಬಂದು ನೋಡು. ಅದೇ ಸ್ಥಿತಿಯಲ್ಲಿರುತ್ತೇವೆ. ಅದೇ ಭಂಗಿಯಲ್ಲಿ. ಬರೀ...ತಾನೇ ಇರ್ತೀನಿ!

ಕೂತು ಬರೆಯುವ ಜಾಗದಿಂದ ಕೇವಲ ಐದು ಅಡಿ ದೂರದಲ್ಲಿ ಮಂಚವಿದೆ. ಏಳು ಅಡಿ ದೂರದಲ್ಲಿ bath room ಇದೆ. Recording studio ಇದೆ. ಇಷ್ಟು ಬಿಟ್ಟರೆ ನೆತ್ತಿಯ ಮೇಲಿನ ಟೆರೇಸಿಗೂ ಹತ್ತಿ ಹೋಗಲು ಬಿಡುವಾಗದೆ ಅನೇಕ ದಿನ ಈ ಕೋಣೆಯಿಂದ ಹೊರಕ್ಕೇ ಬರಲಾಗದೆ ಒಬ್ಬನೇ ಉಳಿದುಬಿಟ್ಟಿರುತ್ತೇನೆ. ಇದನ್ನ ನೀನು eventful ಬದುಕು ಅನ್ನುತ್ತೀಯಾ? ಇದ್ದಕ್ಕಿಂತ huge bore ಇನ್ನೊಂದಿದ್ದೀ ತೇ? ಮೈ ಫ್ರೆಂಡ್‌, ಚೆನ್ನಾಗಿ ಅರ್ಥಮಾಡಿಕೋ, ಯಾರ ಬದುಕೂ ರೊಟೀನ್‌ ಗಾಣಕ್ಕೆ ಸಿಕ್ಕದೆ ಇರಲು ಸಾಧ್ಯವೇ ಇಲ್ಲ ಅಂದೆ. She was convinced.

ಈ ಸುಖದ್ದೂ ಅಲ್ಲದ, ದುಃಖದ್ದೂ ಅಲ್ಲದ ಭಯಂಕರ ಏಕತಾನತೆಯ ರೊಟೀನ್‌ ಇದೆಯಲ್ಲ ? ಇದನ್ನು ಸೃಷ್ಟಿಸಿ ಕೊಂಡವರು ನಾವೇ. ಸಾಕಷ್ಟು ಇಷ್ಟಪಟ್ಟೇ ಸೃಷ್ಟಿಸಿಕೊಂಡಿರುತ್ತೇವೆ. ಆದರೂ ಇದು ಬೋರಾಗುತ್ತಿರುತ್ತದೆ. ತುಂಬ ಪ್ರೀತಿಸಿ ಇಷ್ಟ ಪಟ್ಟು ಮದುವೆ ಮಾಡಿಕೊಂಡ ಗಂಡ ಕೂಡ ಬೋರಾದಂತೆ. ಆತನ ಹೆಂಡತಿ ಜಯಾಗೆ ಅಮಿತಾಬ್‌ ಕೂಡ ಬೋರಾಗಿರುತ್ತಾನೆ. ಧರ್ಮೇಂದ್ರನಿಗೆ ಹೇಮಾಮಾಲಿನಿ ವಾಕರಿಕೆ ಬಂದಿರುತ್ತಾಳೆ. ಕನ್ನಡಿಯ ಮುಂದೆ ತಾಸುಗಟ್ಟಲೆ ಕುಳಿತರೆ, ನಮಗೆ ನಾವೇ ಬೋರಾಗುತ್ತೇವೆ. ಹಾಗಂತ ಈ ರೊಟೀನು ತಪ್ಪಿಸಿ ಕೊಂಡು ನೋಡಿ? ನಾನು ದೇಶವಿದೇಶ ತಿರುಗಿ ಬಂದಿರುತ್ತೇನಲ್ಲ ? ಬೆಂಗಳೂರು ಸಾಕಾಗಿರುತ್ತದೆ. ಎಲ್ಲೋ ದೂರಕ್ಕೆ ಹೋಗಿ ಒಂದು ನಿಶ್ಯಬ್ದದಲ್ಲಿ , ಕತ್ತಲಲ್ಲಿ , ಬೆಟ್ಟದ ತುದಿಯಲ್ಲಿ ,ಅದರ ಮೌನದಲ್ಲಿ ಲೀನವಾಗಿ ನಿಂತು ಬಂದಿರುತ್ತೇನೆ. Excite ಆಗಿಸುವಂಥ ಜಾಗೆಗಳಿಗೆ ಹೋಗಿ ಬಂದಿರುತ್ತೇನೆ. ಆದರೆ ವಿಮಾನ ಇಳಿದು ಬೆಂಗಳೂರಿನ ರಕ್ಕಸ ಬೀದಿಗಳ ಗುಂಟ ಬಂದು ನನ್ನ ಕಾರು ಇನ್ನೇನು ದೇವೆಗೌಡರ ಪೆಟ್ರೋಲ್‌ ಬಂಕ್‌ ದಾಟಿ ಪದ್ಮನಾಭನಗರಕ್ಕೆ ತಿರುಗಿಕೊಂಡಿತು ಅಂದಾಗ, ಯಾಕೋ ಗೊತ್ತಿಲ್ಲ ಮನಸ್ಸು ಉಲ್ಲಸಿತ ಗೊಂಡುಬಿಡುತ್ತದೆ. ‘ಸದ್ಯ ಬಂದೆ’ ಅನ್ನಿಸತೊಡಗುತ್ತದೆ. ಇದೇ ಕ್ಯೂಬಿಕಲ್‌, ಇದೇ ಮೇಜು, ಇದೇ ಕೂತು ಬರೆಯುವ ಭಂಗಿ ಇಷ್ಟವಾಗಿ ಬಿಡುತ್ತದೆ.‘ಊರೂರು ತಿರುಗಿದರೂ ನಮ್ಮೂರೇ ವಾಸಿ’ ಎಂಬ ಮಾತು ಸತ್ಯವೆನ್ನಿಸುತ್ತದೆ.

ರೊಟೀನ್‌ನಲ್ಲಿರುವ ಸೌಖ್ಯವೇ ಅಂತಹುದು. ಬೇಕು ಬೇಕು ಬೇಕು ಅಂದುಕೊಂಡ ಬದಲಾವಣೆ ಕೂಡ ‘ ಸಾಕು ಸಾಕು’ ಅನ್ನಿಸಿ ನಮ್ಮನ್ನು ರೊಟೀನ್‌ನಲ್ಲಿ ಸುಖವಿದೆ ಅಂತ ತಾನೇ ಅರ್ಥ? ಎಂಥ ಜಗತ್ಪ್ರಸಿದ್ಧ ನಟ ಕೂಡ ಈ ರೊಟೀನಿಗೆ ಬೀಳಲೇ ಬೇಕು. ಅವನ ಬದುಕು ಪ್ರತಿ ನಿತ್ಯ ಆಸ್ಕರ್‌ ಪ್ರಶಸ್ತಿ ಸ್ವೀಕರಿಸುವಷ್ಟು eventful ಆಗಿರುವುದಿಲ್ಲ. ಪ್ರಧಾನಮಂತ್ರಿಗೂ ಬದುಕಿನ ಏಕತಾನತೆ ಕಾಡುತ್ತದೆ. ಜಗತ್ತು ಸುತ್ತುವ ನಿರಂತರ ಯಾತ್ರಿ ಕೂಡ ರೂಮು, ಹೊಟೇಲು, ಏರ್‌ಪೋರ್ಟು, ರೈಲು ನಿಲ್ದಾಣಗಳನ್ನು ಸ್ಥಾವರಗಳಂತೆ feel ಮಾಡತೊಡಗುತ್ತಾನೆ. ಜೋಗಿ ಜಂಗಮ, ಇವತ್ತು ಇಲ್ಲಾದರೆ ನಾಳೆ ಎಲ್ಲೋ ಅಂತ ಬದುಕುವ ಮನುಷ್ಯ ಕೂಡ ಈ ಅಲೆಮಾರಿತನದ ಏಕತಾನತೆಗೆ ಬೀಳುತ್ತಾನೆ. ತುಂಬ ಆಸೆಪಟ್ಟು ಏರ್‌ ಹೋಸ್ಟೆಸ್‌ ಆದವಳಿಗೂ ವಿಮಾನ ಇಳಿದರೆ ಸಾಕು ಅನ್ನಿಸತೊಡಗುತ್ತದೆ.

ಹೀಗಾಗಿ, ಯಾರೂ‘ಸುಖವಾ.. ಗಿರ್ತಾರೆ’ ಅಂದು ಕೊಳ್ಳಬೇಡಿ. ಸುಖದ ಬೋರಿಗಿಂತ ದೊಡ್ಡ ಬೋರಿಲ್ಲ. ಬದಲಾವಣೆಗಳು ತಾವಾಗೇ ಬರುತ್ತವೆ ಅಂತ ಕಾಯುತ್ತ ಕೂಡಬೇಡಿ. ಬದಲಾವಣೆಗಳನ್ನು ಸಾಕಷ್ಟು plan ಮಾಡಿ, ತಂದಿಟ್ಟುಕೊಳ್ಳಿ. ಇನ್ನು ಒಂದು ವರ್ಷದ ನಂತರ ಈ ಬದುಕು ಹೀಗಿರಬಾರದು ಅಂತ ಇವತ್ತೇ ನಿರ್ಧರಿಸಿ, ಅದಕ್ಕಾಗಿ ಕೆಲಸ ಮಾಡಲಾರಂಭಿಸಿ. ಬೇಕೆನ್ನಿಸಿದಾಗ ಉಲ್ಲಾಸಕ್ಕೆ ನಿಮ್ಮನ್ನು ನೀವು ತೆರೆದಿಟ್ಟು ಕೊಳ್ಳಲು ಸಾಧ್ಯವಾಗುವಂತೆ ಬದುಕಿ. ಖುಷಿ ಕೊಡುವ ಸಂಗೀತ, ಅಪರೂಪದ ಗೆಳೆಯರು, ಚಪ್ಪರಿಸಿಕೊಂಡು ಓದಬಹುದಾ ದಂಥ ಪುಸ್ತಕ, ಸೆಕ್ಸ್‌ನಲ್ಲಿ ಬದಲಾವಣೆ, ಒಂದು long drive, ಅಪರೂಪಕ್ಕೊಂದು ಹೊಟೇಲ್‌ ಊಟ, ಯಾರೊಂದಿಗೋ ಫೋನಿನಲ್ಲಿ ಹತ್ತು ನಿಮಿಷದ ಮಾತು, ಗೆಳೆಯನೊಬ್ಬನಿಗೆ ದೀರ್ಘಪತ್ರ ಬರೆಯುವ ಸಂತೋಷ- ಇವು ಸಾಕು ಬದುಕಿನ monotony ಮುರಿಯಲು. ಮೇಲಿಂದ ಮೇಲೆ ಸುಖ ಬರುತ್ತಿರಲಿ ಅಂತ ಆಸೆ ಪಡುವವರು ಜೂಜಿಗೆ, ಕುಡಿತಕ್ಕೆ, ಹೆಂಗಸರ ಬೇಟೆಗೆ ಬೀಳುತ್ತಾರೆ. ಅದು ಕೂಡ ನಿತ್ಯ ಸುಖವಲ್ಲ. ಕುಡಿತದಂತಹವು ಬಿಡಲಾಗದ ಚಟಗಳಾಗುತ್ತ ವಾದ್ದರಿಂದ ನಿತ್ಯ ಕುಯಬೇಕೇ ಹೊರತು, ಅದರಲ್ಲಿ ‘ ಸುಖ’ಕೂಡ ಸತ್ತುಹೋಗಿ, ಅದೂ ರೊಟೀನ್‌ ಆಗಿಬಿಟ್ಟಿರುತ್ತದೆ.

ಆರಂಭದಲ್ಲಿ ಹೇಳಿದೆನಲ್ಲ : ಮನೆ ಕಟ್ಟುವುದು, ಮದುವೆ, ಕಾರು ತೆಗೆದುಕೊಳ್ಳುವುದು, ಪ್ರಮೋಷನ್ನು ಸಿಗುವುದು ಇದೆಲ್ಲ ಬದುಕಿನಲ್ಲಿ ಅಪರೂಪಕ್ಕೆ ಘಟಿಸುವ ವಿಶೇಷ ಸಂತಸದ ಘಟನೆಗಳು. ಇವು ದುಃಖದಷ್ಟೇ ಅಪರೂಪದ್ದವು. ದುಃಖ ಕೂಡ ನಮ್ಮ ಬದುಕಿನಲ್ಲಿ ಸದಾ ಇರುವಂಥದ್ದಲ್ಲ. ಸಾವುಗಳು, ಅನಾರೋಗ್ಯ, ನೌಕರಿ ಕಳೆದು ಕೊಳ್ಳುವಿಕೆ, ಮೋಸ ಹೋಗುವುದು -ಇವು ಕೂಡ ಯಾವಾಗಲೋ ಒಮ್ಮೆ ಸಂಭವಿಸುತ್ತವೆ. ಇಂಥ ಸುಖ ಮತ್ತು ದುಃಖಗಳ ನಡುವಿನ ‘ಏನೂ ಘಟಿಸದ’ ಕಾಲವಿದೆಯಲ್ಲ ? ಅದು ತುಂಬ ಸುದೀರ್ಘ, ತುಂಬ ಬೋರಿಂಗ್‌ ಮತ್ತು ತುಂಬ ಅನಿವಾರ್ಯ ಸ್ಥಿತಿ.

ಆ ಸ್ಥಿತಿಯಲ್ಲಿರುವ ನಾವು ಸಣ್ಣ ಸಣ್ಣ ಸಂತೋಷಗಳನ್ನ, ರೊಟೀನ್‌ನಲ್ಲಿರುವ ಮಜವನ್ನ, ರುಚಿಯನ್ನ ಸವಿಯದಿದ್ದರೆ-ಬದುಕು ನಿಜಕ್ಕೂ ದುರ್ಭರವಾಗಿಬಿಡುತ್ತದೆ.

(ಸ್ನೇಹ ಸೇತು : ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X