• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇವರನ್ನು ನಂಬದವರಿಗೂ ಒಂದು ಐಡೆಂಟಿಟಿ ಇರುತ್ತಲ್ಲವೇ...?

By Staff
|
Ravi Belagere on Thatskannada.com ರವಿ ಬೆಳಗೆರೆ
ಧರ್ಮದ ಮಾತು ಬಿಡಿ; ಇದೊಂದು ನಿಜಕ್ಕೂ ಒಳ್ಳೆಯ ಅಥವಾ marketable ಡಿಸೈನಾ ಅಂತ ನೋಡಿದರೆ, ಅದೂ ಅಲ್ಲ. ನಮ್ಮ ದೇಶದಲ್ಲಿ ಮಕ್ಕಳ ಶೂಗಳಿಗೂ ನಾವಿಂಥಾ ಅಸಡ್ಡಾಳ ಬಣ್ಣಗಳ ಚಿತ್ರ ಹಾಕಲಾರೆವು. ಆದರೆ, ಫ್ರಾನ್ಸ್‌ನ ಮಿನೆಲಿ ಕಂಪನಿ, ಹೆಂಗಸರ ಶೂ ಮೇಲೆ ಶ್ರೀರಾಮನ ಬಣ್ಣಬಣ್ಣದ ಚಿತ್ರ ಹಾಕಿ, ಇದೊಂದು ಅದ್ಭುತ ಡಿಸೈನು ಅಂತ ಬೀಗುತ್ತಾ ನಿಂತುಬಿಟ್ಟಿದೆ. Rubbish!

ತಾನು ತಯಾರು ಮಾಡಿದ ಇಂಥ ಶೂಗಳ ಒಂದು ಪರ್ಸೆಂಟನ್ನೂ ಆ ಕಂಪನಿಗೆ ಇದುವರೆಗೆ ಮಾರಾಟ ಮಾಡಲಾಗಿಲ್ಲ- ಅದೂ, ಆ ಕಂಪನಿಯ ಗ್ರಾಹಕರ ಪೈಕಿ ಬಹುತೇಕ ಎಲ್ಲರೂ ಹಿಂದೂಗಳ ಗುಂಪಿಗೆ ಸೇರದವರೇ ಆಗಿದ್ದರೂ ಕೂಡ -ಅಂದಮೇಲೆ, ಅದೊಂದು ಕೆಟ್ಟ ಡಿಸೈನು ಅಂತಲೇ ಅರ್ಥ ತಾನೇ?

ನೋಡಿದ ತಕ್ಷಣವೇ ಫೇಲ್ಯೂರ್‌ ಅಂತ ಗೊತ್ತಾಗಿಬಿಡುವ ಇಂಥದ್ದೊಂದು ವಿನ್ಯಾಸವನ್ನ ಆ ಕಂಪನಿ ಮಾಡಿದ್ದಾದರೂ ಯಾಕೆ ಅನ್ನುವುದು ಈಗ ಎದ್ದಿರುವ ಪ್ರಶ್ನೆ. ಇದಕ್ಕಿರುವ ಒಂದೇ ಉತ್ತರ, ಕಳೆದ ಎರಡು ವರ್ಷಗಳಲ್ಲಿ ಫ್ರಾನ್ಸಿನಾದ್ಯಂತ ಹರಡಿರುವ religious intolerance!

Maryada purushothama Sri Ramಇದಕ್ಕಿಂತ ದೊಡ್ಡ ವಿಪರ್ಯಾಸ ಇನ್ನೇನಿದ್ದೀತು ಹೇಳಿ? ಈ ಫ್ರಾನ್ಸ್‌ ಅನ್ನುವ ದೇಶ, ಒಂದು ಕಾಲದಲ್ಲಿ ಪರಿಪೂರ್ಣ ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇತಿಹಾಸ ಇರುವಂಥದ್ದು. ಅಲ್ಲಿ ಯಾರು ಬೇಕಿದ್ದರೂ ನಿರ್ಭಯವಾಗಿ ಹೇಗೆ ಬೇಕಿದ್ದರೂ ಇರಬಹುದಿತ್ತು. ಅಪ್ನೀ ಮರ್ಜಿ ಅನ್ನಬಹುದಿತ್ತು. ಅಂಥದ್ದೊಂದು ವಾತಾವರಣವಿದ್ದಿದ್ದರಿಂದಲೇ ಅಲ್ಲಿ ಕಲೆ- ಸಾಹಿತ್ಯಗಳು ಎಗ್ಗಿಲ್ಲದೆ ಅರಳಿದ್ದವು. ಇಡೀ ಜಗತ್ತಿಗೆ ಫ್ರಾನ್ಸ್‌ ಅನ್ನುವುದು ಸ್ವಾತಂತ್ರ್ಯ ಮತ್ತು ಸಂಸ್ಕೃತಿಯ ಪ್ರತೀಕವಾಗಿತ್ತು.

ಅಲ್ಲೀಗ ಧರ್ಮರಹಿತ ಸಮಾಜ ನಿರ್ಮಾಣದ ಹೆಸರಿನಲ್ಲಿ ಬೇರೆಲ್ಲೂ ಕಾಣದಂಥ ಸಿಡುಕು ತಲೆಯೆತ್ತಿದೆ. ಯಾವ ಧರ್ಮ ಮತದವರ ಯಾವುದೇ ಆಕ್ಷೇಪಗಳಿಗೂ ಬೆಲೆ ಕೊಡದೆ ಯಾರು ಬೇಕಿದ್ದರೂ ಏನು ಬೇಕಿದ್ದರೂ ಮಾರುಕಟ್ಟೆಯಲ್ಲಿ ಮಾರಬಹುದು ಅನ್ನುವ ಸ್ವೇಚ್ಛೆಯ ಕಾನೂನು ಬಂದಿದೆ. ಜೊತೆ ಜೊತೆಗೇ,‘ಧರ್ಮದ ಸಂಕೇತ’ ಅಂತನ್ನಿಸುವಂಥ ಏನನ್ನೂ ಯಾರೂ ಪ್ರದರ್ಶಿಸಿ ಕೊಳ್ಳಕೂಡದು ಅನ್ನುವ ಕಾನೂನನ್ನೂ ಅಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ.

ಮೇಲ್ನೋಟಕ್ಕಿದು ಸರಿಯಾದ ಕ್ರಮವೇ ಅನ್ನಿಸಿಬಿಡಬಹುದು. ಆದರೆ, ಹೀಗೆ ಅರ್ಥ ಮಾಡಿಕೊಳ್ಳಲು ಹೋಗುವವರು ಧಾರ್ಮಿಕ ಮನೋಭಾವಕ್ಕೂ-ಧರ್ಮದ ಸಂಕೇತಗಳಿಗೂ ಇರುವ ವ್ಯತ್ಯಾಸವನ್ನು ಬೇಕೆಂದೇ ಮರೆತುಬಿಡುತ್ತಾರೆ.

ನಿಮಗೆ ಖುಷ್ಟಂತ್‌ ಸಿಂಗ್‌ ಅನ್ನುವ ಅಜ್ಜ ಅದೆಷ್ಟು ಪರಮ ನಾಸ್ತಿಕ ಅನ್ನುವುದು ಗೊತ್ತಿರಬೇಕಲ್ಲ ? ದೇವರಾಗಲೀ-ಧರ್ಮದಲ್ಲಾಗಲೀ ಒಂದಿಷ್ಟೂ ನಂಬಿಕೆ- ಶ್ರದ್ಧೆಗಳಿಲ್ಲದ ಮನುಷ್ಯ ಆತ. ಸಿಖ್ಖರಿಗೆ ನಿಷಿದ್ಧ ಅಂತ ಹೇಳಬಹುದಾದ ಎಲ್ಲ ಧರ್ಮಬಾಹಿರ ಕೆಲಸಗಳನ್ನೂ ಅತ್ಯಂತ ನಿರುದ್ವೇಗದಿಂದ ಮಾಡಬಲ್ಲ -ಮತ್ತು ಮಾಡಿದ್ದನ್ನು ದಕ್ಕಿಸಿಕೊಳ್ಳಬಲ್ಲ -ಮನೋಭಾವ ಹಾಗೂ ಛಾತಿ ಇರುವ ಹಟಮಾರಿ. ಹಾಗಿದ್ದರೂ ಕೂಡ, ಆತನಿಗೆ ತನ್ನ ಗಡ್ಡ, ಉದ್ದ ತಲೆಕೂದಲು ಹಾಗೂ ಪೇಟದ ಬಗ್ಗೆ ವಿಪರೀತ ವ್ಯಾಮೋಹ. ಆತ ಹಾಕುವ ಡ್ರೆಸ್ಸೂ ಕೂಡ ನೋಡಿದ ತಕ್ಷಣ ಅವರೊಬ್ಬ ಸರ್ದಾರ್ಜಿ ಅನ್ನುವುದನ್ನು ಸಾರುವಂಥದ್ದೇ. ಇಂದಿರಾಗಾಂಧಿ ಹತ್ಯೆಯ ನಂತರ ದೆಹಲಿಯಲ್ಲಿ ಸಿಖ್ಖರ ವಿರುದ್ಧ ದಂಗೆಗಳಾಗಿದ್ದವಲ್ಲ ?ಆಗ ಯಾರೋ ಒಬ್ಬರು ಕುಚೋದ್ಯಕ್ಕಾಗಿ ಅವರಿಗೆ ತಲೆ-ಗಡ್ಡ ಬೋಳಿಸಿಕೊಂಡು, ಪೇಟ ತೆಗೆದಿಟ್ಟು ಪ್ರಾಣ ಉಳಿಸಿಕೊಳ್ಳುವಂತೆ ಸಲಹೆ ಕೊಟ್ಟಿದ್ದರಂತೆ. ‘ಹ್ಯಾಗೂ ನೀವು ಧರ್ಮವನ್ನು ನಂಬುವವರಲ್ಲ; ನಿಮಗ್ಯಾಕೆ ಬೇಕು ಈ ಸಿಖ್‌ವೇಷ ಎಲ್ಲಾ?’ ಅಂತ ಛೇಡಿಸಿದ್ದರಂತೆ. ಆದರೆ, ಖುಷ್ಟಂತ್‌ ಅಂಥ ಮಾತುಗಳಿಗೆ ಜಗ್ಗಲಿಲ್ಲ. ಯಾರಾದರೂ ನನ್ನನ್ನು ಕತ್ತರಿಸಿ ಹಾಕಿದರೂ ಸರಿಯೇ, ನಾನು ಮಾತ್ರ ನನ್ನ ಸಿಖ್‌ ಸ್ವರೂಪವನ್ನು ಬದಲಿಸಿಕೊಳ್ಳಲಾರೆ ಅಂದಿದ್ದರಂತೆ.

ಯಾಕೆಂದರೆ, ಗಡ್ಡ- ತಲೆಗೂದಲು-ಪೇಟ-ಡ್ರೆಸ್ಸು- ಇವು ಯಾವುವೂ ಅವರ ಪಾಲಿಗೆ ಕೇವಲ ಧಾರ್ಮಿಕ ಮನೋಭಾವದ ಅಭಿವ್ಯಕ್ತಿಗಳಲ್ಲ; ಅವು ಅವರ ಐಡೆಂಟಿಟಿಯ ಸಂಕೇತಗಳು. ಈ ಐಡೆಂಟಿಟಿಯನ್ನು ಕಳೆದುಕೊಂಡು ಬದುಕಲು ಅವರು ಸಿದ್ಧರಿರಲಿಲ್ಲ.

ಇದು-ಎಲ್ಲ ಧರ್ಮದವರಿಗೂ, ಆಸ್ತಿಕರಿಗೂ, ನಾಸ್ತಿಕರಿಗೂ ನಿರುಪದ್ರವಿ ತ್ರಿಶಂಕುಗಳಿಗೂ, ಎಲ್ಲರಿಗೂ ಅನ್ವಯವಾಗುತ್ತದೆ. ಐಡೆಂಟಿಟಿಯನ್ನೇ ಕಳೆದುಕೊಂಡು ಯಾರಾದರೂ ಬದುಕುವುದು ಹ್ಯಾಗೆ ಸಾಧ್ಯ?ಆಸ್ತಿಕರ ಪಾಲಿಗೆ ಕೃಷ್ಣ, ರಾಮ, ಸೀತೆ, ಸರಸ್ವತಿ ಅವರುಗಳೆಲ್ಲಾ ದೇವರುಗಳಿರಬಹುದು ; ಯಾರಾದರೂ ಅವುಗಳಿಗೆ ಅವಮಾನ ಮಾಡಿದಾಗ ಆ ಕಾರಣಕ್ಕಾಗೇ ಅವರಿಗೆ ಸಿಟ್ಟು ಬರಬಹುದು. ಜಗತ್ತು ಅವರನ್ನು ಧರ್ಮಾಂಧರು ಅಂತ ಜರೆಯಬಹುದು. ಆದರೆ, ಸಿಟ್ಟು ಅವರಿಗೆ ಮಾತ್ರ ಬರಬೇಕಿಲ್ಲವಲ್ಲ? ನೋವು ಅವರಿಗೆ ಮಾತ್ರ ಆಗಬೇಕಿಲ್ಲವಲ್ಲ?

ಖುಷ್ಟಂತ್‌ರಿಗೆ ಗಡ್ಡ-ಪಗಡಿಗಳಿದ್ದ ಹಾಗೆ ಜಗತ್ತಿನ ಎಲ್ಲ ನಾಸ್ತಿಕರಿಗೂ ಅವರವರ ಐಡೆಂಟಿಟಿಯ ಮತ್ತು faithನ ಕೆಲವು ಸಂಕೇತಗಳಿರುತ್ತವೆ. ರಾಮ, ಕೃಷ್ಣ, ಶಿವ, ಸರಸ್ವತಿ, ಗಣಪತಿ, ಇವೆಲ್ಲವೂ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಸಂಕೇತಗಳು. ನಾವು ಅವುಗಳ ಜೊತೆಗೇ ಬೆಳೆದುಬಂದಿದ್ದೇವೆ. ಈ ಇಮೇಜ್‌ಗಳ ಜೊತೆ ನಮ್ಮನ್ನು ನಾವು ಗುರುತಿಸಿಕೊಂಡಿದ್ದೇವೆ. ಅವುಗಳ ಬಗ್ಗೆ ಪ್ರೀತಿ ಬೆಳೆಸಿಕೊಂಡಿದ್ದೇವೆ.

ಅವಮಾನವಾದರೆ ನಾಸ್ತಿಕರ ಮನಸ್ಸೂ ಕುದಿಯುವುದಿಲ್ಲವೇ?

ಹಿಂದೂಗಳಿಗೆ ಈ ಇಮೇಜುಗಳಿರುವ ಹಾಗೆ ಕ್ರಿಶ್ಚಿಯನ್ನರಿಗೆ ಮೇರಿ-ಏಸು ಅವರ ಚಿತ್ರ ಮತ್ತು ಶಿಲುಬೆ ಇವೆ. ಮುಸ್ಲಿಮರಿಗೆ ಲೇಸಿನ ಬಿಳಿ ಟೋಪಿಯಿದೆ, ಹುಡುಗಿಯ ತಲೆ ಮತ್ತು ಕುತ್ತಿಗೆ ಮುಚ್ಚುವಂತೆ ಕಟ್ಟಿಕೊಳ್ಳುವ ‘ಹಿಜಾಬ್‌’(ಸ್ಕಾರ್ಫ್‌)ಇದೆ. ಪೈಗಂಬರ್‌ ಹಾಗೂ ಕುರಾನ್‌ಗಳು ಕೂಡ ಮುಸ್ಲಿಮರ ಐಡೆಂಟಿಟಿಯ ಸಂಕೇತಗಳು. ಅವುಗಳ ದುರ್ಬಳಕೆಯಾದಾಗ ಅವರು ಸಿಡಿಯುವುದಿಲ್ಲವೆ?

ಸಿಡಿಯಲೇಬೇಕು. ಯಾಕೆಂದರೆ, ಅದು ನಮ್ಮೆಲ್ಲರ instinct. ಇಲ್ಲಿ ಧರ್ಮಾಂಧತೆಯ ಅಥವಾ ಕ್ರಿಯೇಟಿವ್‌ ಫ್ರೀಡಮ್ಮನ್ನು ಕಿತ್ತುಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ಯಾಕೆ, ಯಾವುದೋ ಸಮುದಾಯದ ನಂಬಿಕೆಗಳಿಗೆ ನೋವುಂಟಾಗದಂತೆ ಕ್ರಿಯೇಟಿವ್‌ ಆಗಿ ಏನನ್ನಾದರೂ ಸೃಷ್ಟಿಸುವುದು ಸಾಧ್ಯವೇ ಇಲ್ಲವೇ?

Religious sentiment ಅನ್ನುವ ನೆಪದಲ್ಲಿ ಅನೇಕ ಅಪ್ರಯೋಜಕ ಪ್ರತಿಭಟನೆಗಳೂ, ಅನ್ಯಾಯಗಳೂ ಆಗಿರುವುದೂ ಸುಳ್ಳಲ್ಲ. ದೀಪಾ ಮೆಹ್ತಾಳ ‘ವಾಟರ್‌’ಚಿತ್ರಕ್ಕೆ ವಿಎಚ್‌ಪಿಗಳು ಅಡ್ಡಿ ಮಾಡಿದ್ದು,‘ಜೋ ಬೋಲೆ ಸೋ ನಿಹಾಲ್‌’ಸಿನೆಮಾ ವಿರುದ್ಧ ಈಚೆಗೆ ಬಾಂಬ್‌ ಸ್ಫೋಟಗಳು ನಡೆದಿದ್ದು,‘ಸಿನ್ಸ್‌’ ಅನ್ನುವ ಸಿನೆಮಾ ವಿರುದ್ಧ ಪಾದ್ರಿಗಳು ತಿರುಗಿ ಬಿದ್ದಿದ್ದು, ರಷ್ದಿಯ‘ಸಟಾನಿಕ್‌ ವರ್ಸಸ್‌ ಬ್ಯಾನ್‌ ಆಗಿದ್ದು...ಬೇಕಾದಷ್ಟು ಉದಾಹರಣೆಗಳಿವೆ. ಆದರೆ, ಯಾರೋ ಕೆಲ ಧರ್ಮಾಂಧರು ಕಂಡ ಕಂಡದ್ದನ್ನೆಲ್ಲಾ ಪ್ರತಿಭಟಿಸುವುದನ್ನೇ ತಮ್ಮ ದಂಧೆಯಾಗಿಸಿಕೊಂಡಿದ್ದಾರೆ ಅನ್ನುವ ಕಾರಣಕ್ಕೆ ಬುದ್ಧಿಜೀವಿಗಳು ಅನ್ನಿಸಿಕೊಂಡವರೆಲ್ಲಾ ಈಗ ಫ್ರಾನ್ಸ್‌ನ ಸರ್ಕಾರ ಮತ್ತು ಅಲ್ಲಿನ ಕಂಪನಿ ಮಾಡಿರುವ ಅಸಹನೆಯ ಕೃತ್ಯವನ್ನು ಮೌನವಾಗಿ ಸಹಿಸಿಕೊಂಡಿರಬೇಕಿಲ್ಲವಲ್ಲ? ಬುದ್ಧಿಜೀವಿಗಳ ಮೌನ, ಇಂಥ ಅವಹೇಳನಗಳಿಗೆ- ಉದ್ಧಟತನಗಳಿಗೆ ಸಮ್ಮತಿ ಕೊಟ್ಟಂತೆ, ಕುಮ್ಮಕ್ಕು ಕೊಟ್ಟಂತೆ.

ಇವತ್ತು ಇಡೀ ಜಗತ್ತಿನಲ್ಲೇ ಅದೇಕೋ ಹಿಂದೂ ಸಂಕೇತಗಳ ಬಗ್ಗೆ ವಿಪರೀತ ತಿರಸ್ಕಾರವೋ ಅಸಡ್ಡೆಯೋ ಲೇವಡಿಯೋ ಬೆಳೆಯುತ್ತಿರುವಂತಿದೆ. ಮುಸ್ಲಿಮರ ಬಗ್ಗೆಯೂ ಇಂಥದ್ದೇ ಒಂದು ಅಸಹನೆಯ ಭಾವ ಬೆಳೆಯುತ್ತಿದೆ. ಟಾಯ್ಲೆಟ್‌ ಸೀಟ್‌ ಮೇಲೆ, ಚಪ್ಪಲಿ ಮೇಲೆ, ಬೀರ್‌ ಬಾಟಲಿನ ಮೇಲೆ, ಮೂಗು ಸೀಟುವ ಟಿಪ್ಯೂ ಪೇಪರಿನ ಮೇಲೆ, ಬಿಕಿನಿ ಮೇಲೆ, ಹೆಂಗಸರ ಒಳಉಡುಪುಗಳ ಮೇಲೆಲ್ಲಾ ಈಗಾಗಲೇ ಅನೇಕ ಹಿಂದೂ ದೇವ-ದೇವತೆಗಳ ಚಿತ್ರಗಳು ಬಂದು, ರಾದ್ಧಾಂತಗಳಾಗಿ, ಅವುಗಳಿಗೆ ಸಂಬಂಧಪಟ್ಟ ಆಯಾ ಕಂಪನಿಯವರು ಕ್ಷಮೆ ಕೇಳಿದ್ದಾಗಿದೆ. ಅಮೆರಿಕದಲ್ಲಿ ಮುಸ್ಲಿಂ ಯಾತ್ರಿಕರನ್ನು ಅಲ್ಲಿನ ಪೊಲೀಸರು, ಏರ್‌ಪೋರ್ಟ್‌ ಸೆಕ್ಯುರಿಟಿಯವರು ಹೇಗೆಲ್ಲಾ ನಡೆಸಿಕೊಳ್ಳುತ್ತಾರೆ ಅನ್ನುವುದು ಜಗಜ್ಜಾಹೀರಾಗಿದೆ. ಫ್ರಾನ್ಸಿನಲ್ಲಿ ಮುಸ್ಲಿಂ ಹುಡುಗಿಯರು ತಲೆಗೆ ಹಿಜಾಬ್‌ ಕಟ್ಟಿ ಕೊಂಡು ಶಾಲೆ-ಕಾಲೇಜುಗಳಿಗೆ ಹೋಗುವಂತಿಲ್ಲ ಅನ್ನುವ ಕಾನೂನೇ ಇದೆ. (ಸಿಖ್ಖರು ತಲೆಗೆ ಟರ್ಬನ್‌ ಕಟ್ಟಿಕೊಳ್ಳುವಂತಿಲ್ಲ ಅನ್ನುವ ಕಾನೂನು ಅಲ್ಲಿದೆ.)ಕೆನಡಾದಲ್ಲಂತೂ ಮುಸ್ಲಿಮರಿಗೆ ವೀಸಾ ನೀಡುವುದೇ ಕಡಿಮೆಯಾಗಿಹೋಗಿದೆ.

ಇದಕ್ಕೆ ಕಾರಣ, ಬಹುಶಃ ಹಿಂದೂಗಳ ಪರವಾಗಿ ವಿಎಚ್‌ಪಿಗಳೂ ಮುಸ್ಲಿಮರ ಪರವಾಗಿ ತಾಲಿಬಾನ್‌ ಮತ್ತಿತ್ಯಾದಿಗಳೂ ಹುಟ್ಟಿಹಾಕಿರುವ ಇಮೇಜೇ ಇರಬೇಕು. ಯಾವುದೇ ಒಂದು ಧರ್ಮಕ್ಕೆ ಅನ್ಯಧರ್ಮ ಸಹಿಷ್ಣುತೆ ಇಲ್ಲ ಅನ್ನುವ ಮುಖ ಬಂದಾಗ, ಆ ಧರ್ಮದ ಬಗ್ಗೆ ಅನ್ಯಧರ್ಮೀಯರಲ್ಲಿ ಅಸಹನೆ ಬೆಳೆಯುತ್ತದೆ. ಲೇವಡಿ ಶುರುವಾಗುತ್ತದೆ. ಒಂದು ಸಲ ಇದು ಶುರುವಾಗಿ ಬಿಟ್ಟರೆ, ಆ ಧರ್ಮ ಒಂದು ವಿಷವರ್ತುಲದಲ್ಲಿ ಸಿಕ್ಕಿಕೊಂಡ ಹಾಗೆ. ಎಲ್ಲ ಅವಮಾನಗಳನ್ನೂ- ಲೇವಡಿಗಳನ್ನೂ ಸಹಿಸಿಕೊಳ್ಳುವುದು ಯಾರಿಗೇ ಆದರೂ ಅಸಾಧ್ಯವಾದುದರಿಂದ, ಪ್ರತಿಭಟಿಸಲೇಬೇಕಾಗುತ್ತದೆ. ಆದರೆ ಹಾಗೆ ಪ್ರತಿಭಟಿಸಿದ ತಕ್ಷಣ,‘ಧರ್ಮಾಂಧತೆ’ಯ ಹಣೆಪಟ್ಟಿ ಆ ಧರ್ಮದವರಿಗೆ ಗಟ್ಟಿಯಾಗುತ್ತಾ ಹೋಗುತ್ತದೆ.

ಹಿಂದೂಗಳು ಮತ್ತು ಮುಸ್ಲಿಮರು- ಪರಸ್ಪರ ಅತ್ಯಂತ ವೈರುಧ್ಯಗಳ ಧರ್ಮದವರೇ ಆದರೂ ಕೂಡ- ತಮಗೇ ಗೊತ್ತಿಲ್ಲದಂತೆ ಇಂಥ ಒಂದು ಜೌಗು ಮಣ್ಣಿನೊಳಗೆ ಕಾಲಿಟ್ಟುಬಿಟ್ಟಿದ್ದಾರೆ. ಬಿಡಿಸಿಕೊಂಡು ಹೊರಬರುವುದಕ್ಕೆ ಕೌಶಲ್ಯ ಮತ್ತು ತಾಳ್ಮೆ-ಎರಡೂ ಬೇಕು. ಶೂ ಮೇಲೆ ರಾಮನ ಚಿತ್ರ ಹಾಕಿದ ವಿಷಯವನ್ನು ವಿಎಚ್‌ಪಿಗಳು ಅತ್ಯುಗ್ರ international issue ಮಾಡದಿರುವುದು, ಬಹುಶಃ, ಈ ಸೂಕ್ಷ್ಮವನ್ನು ಅವರು ಅರ್ಥಮಾಡಿಕೊಂಡಿರುವುದರ ಸಂಕೇತ! ಮತ್ತು ವಿಎಚ್‌ಪಿಯ ಧ್ವನಿಯಿಲ್ಲದೆಯೇ ಆ ಕಂಪನಿ ತನ್ನ ಶೂಗಳನ್ನು ವಾಪಸ್‌ ಪಡೆದುಕೊಳ್ಳುವ ಹಾಗೆ ಜಗತ್ತಿನ ಭಾರತೀಯರೆಲ್ಲರೂ internet ಮೂಲಕ ತಣ್ಣಗೆ ಕ್ರಾಂತಿ ಮಾಡಿದ್ದು, ಮುಂದೆ ನಾವು ಇಂಥ ವಿಷಯಗಳನ್ನು ಹ್ಯಾಗೆ tackle ಮಾಡಬಹುದು ಅನ್ನುವುದಕ್ಕೆ ಒಂದು ಮುನ್ಸೂಚನೆ.

ಇವತ್ತು ಉಗ್ರ ಪ್ರತಿಭಟನೆಗಳು ಬೇಕಿಲ್ಲ ; ಮಾಹಿತಿ ಕ್ರಾಂತಿಯೇ ನಮ್ಮ ಕೈಯಲ್ಲಿರುವ ಅತಿದೊಡ್ಡ ಅಸ್ತ್ರ. ಅದನ್ನು ಸರಿಯಾಗಿ ಉಪಯೋಗಿಸುವುದನ್ನು ಕಲಿತರೆ, ಈಗ ಮಿನೆಲಿ ಕಂಪನಿಗೆ ಮಾಡಿದಂತೆ, ಯಾರನ್ನು ಬೇಕಿದ್ದರೂ ನಾವು ಮಣಿಸಬಹುದು!

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more