ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗೂ ಮೈಸೂರಿಗೂ ಮಧ್ಯ ಹೇಮಾಮಾಲಿನಿಯ ಕೆನ್ನೆಯಂಥ ರಸ್ತೆ !

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಎಸ್ಸೆಂ ಕೃಷ್ಣರ ಕನಸು ನನಸಾಗುವ ದಿನಗಳು ಬಂದೇಬಿಟ್ಟಿದೆ. ಜನವರಿ ತಿಂಗಳಲ್ಲಿ ಸುಪ್ರೀಂ ಕೋರ್ಟಿನ ಇನ್ನೊಂದೇ ಒಂದು ತೀರ್ಪು ಹೊರಬಿದ್ದರೆ ಸಾಕು: ಬೆಂಗಳೂರು ಶುದ್ಧಾನು ಶುದ್ಧ ಸಿಂಗಪೂರ್‌!

‘ನೀವು ಮೈಸೂರು ರೋಡ್‌ನ ರಾಜ ರಾಜೇಶ್ವರಿ ನಗರದಲ್ಲಿದ್ದೀರಾ? ಇನ್ನು ಕೊಂಚ ಅತ್ತತ್ತ ಬನ್ನಿ. ನಾವು ನಿರ್ಮಿಸುತ್ತಿರುವ ಟೌನ್‌ಪಿಷ್‌ಗೆ ಮನೆ ಬದಲಾಯಿಸಿ. ಅಲ್ಲೇ ನಿಮಗೆ ಕ್ಲಬ್ಬು, ಶಾಲೆ, ಆಸ್ಪತ್ರೆ, ಸ್ವಿಮ್ಮಿಂಗ್‌ ಪೂಲು, ಪಬ್ಬು- ಎಲ್ಲ ಇದೆ. ಟೌನ್‌ಷಿಪ್‌ ಪಕ್ಕದಲ್ಲೇ ಬೆಂಗಳೂರು- ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಹೆಸರಿನ ಭವ್ಯ ರಸ್ತೆ ಹಾದುಹೋಗುತ್ತದೆ. ಅದರಲ್ಲಿ ನೀವು ಮೈಸೂರು ಕಡೆಯಿಂದ ಬಂದು ಛಕ್ಕನೆ ಬಲಕ್ಕೆ ತಿರುಗಿಕೊಂಡರೆ, ಕೇವಲ ಹದಿನೈದು ನಿಮಿಷದಲ್ಲಿ ಎಲೆಕ್ಟ್ರಾನಿಕ್‌ ಸಿಟಿ ತಲುಪಿಕೊಳ್ಳುತ್ತೀರಿ! ನಿಮ್ಮ ಕಾರು ಬೇಕಾದರೆ 120ಕಿಲೋಮೀಟರು ಸ್ಪೀಡಿನಲ್ಲಿ ಓಡಿಸಿ. ಮಿನಿಮಮ್‌ ಸ್ಪೀಡು ಮಾತ್ರ 55 ಕಿಲೋಮೀಟರು ಇರಲೇಬೇಕು. ಎಂಥ ರಸ್ತೆ ಅಂತೀರಿ? ಪೆಟ್ರೋಲು ಉಳಿಯುತ್ತೆ, ಟೈಮು ಉಳಿಯುತ್ತೆ, ಬೆಂಗಳೂರಿನ ಪರಮ ದಾರಿದ್ರ್ಯಟ್ರಾಫಿಕ್ಕಿನಲ್ಲಿ ತೆವಳುವುದು ಉಳಿಯುತ್ತೆ. ಬೆಂಗಳೂರು-ಮೈಸೂರು ಮಧ್ಯೆ ನಾವು ನಿರ್ಮಿಸುತ್ತಿರುವ ರಸ್ತೆ, ಅದು ರಸ್ತೇನಾ! ಹೇಮಾಮಾಲಿನಿಯ ಕೆನ್ನೆ. ಮಲ್ಲಿಕಾ ಶೆರಾವತ್‌ಳ ಬೆನ್ನು. ಅಂಥ ರಸ್ತೆಯಲ್ಲಿ ನಿಮ್ಮ ಗಾಡಿ ಹಾಯಬೇಕೆಂದರೆ ಒಂದು entryಗೆ ಮೂವತ್ತೆೈದೋ, ಐವತ್ತೋ ರುಪಾಯಿ ಕೊಡಬೇಕು. ಏನು ಮಹಾಕಷ್ಟ ?ಪೆಟ್ರೋಲು ಉಳಿಯಲ್ಲವಾ ? ಅದಕ್ಕಾಗಿ ಹೆಚ್ಚಾಗಿ ಟೈಮು ಉಳಿಯಲ್ಲವಾ? Of course, ಈ 35-50-100ರುಪಾಯಿಗಳನ್ನು ನೀವು ಪ್ರತೀಸಲ ರಸ್ತೆ ಹಾಯುವಾಗ ಕೊಡಬೇಕು ಮತ್ತು ಕೇವಲ 30 ವರ್ಷಗಳ ತನಕ ಕೊಡಬೇಕು! ಇದನ್ನೆಲ್ಲ ನಾನು ಬೆಂಗಳೂರಿನ, ದೇಶದ, ಜಗತ್ತಿನ ಮತ್ತು ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಸಮಸ್ತ ಐ.ಟಿ ಇಂಡಸ್ಟ್ರಿಯ ಮನುಕುಲದ ಉದ್ಧಾರಕ್ಕಾಗಿ ಮಾಡುತ್ತಿದ್ದೇನೆ. Be with me... ಅಂತ ಈಗಾಗಲೇ ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೆೃಸಸ್‌ (NICE)ನ ಧಣಿ ಅಶೋಕ್‌ ಖೇನಿ ಎಲ್ಲ ಸಾಫ್ಟ್‌ವೇರ್‌ ಕಂಪನಿಗಳಿಗೆ ಹೋಗಿ ಭಾಷಣ ಆರಂಭಿಸಿದ್ದಾನೆ.

ಎರಡು ಸಾವಿರದ ನಾಲ್ಕು ನೂರು ಕೋಟಿ ರುಪಾಯಿಗಳ ಬೆಂಗಳೂರು- ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ (BMIC) ಹೆಸರಿನ ಅನಾಹುತಕಾರಿ ಪ್ರಾಜೆಕ್ಟೊಂದು ಬಡ ಕನ್ನಡಿಗನ ಮೇಲೆ ಹೇರಲ್ಪಡುತ್ತಿದೆ. ಇದರಿಂದಾಗಿ ನೂರಾರು ರೈತರ ಸುಮಾರು ಎರಡೂವರೆ ಸಾವಿರ ಎಕರೆ ಭೂಮಿ ಖದೀಮರ ಪಾಲಾಯಿತು’ ಅಂತ ಕಣ್ಣೀರಿಡುತ್ತಿರುವ ದೇಶ ಬಂಧು ದೇವೆಗೌಡರಿಂದ, ಸಿಂಗಪೂರ್‌ ಸಿಕ್‌ನೆಸ್‌ ಖ್ಯಾತಿಯ ಎಸ್ಸೆಂ ಕೃಷ್ಣರ ತನಕ ಎಲ್ಲರೂ ಈ ‘BMIC’ಹೆಸರಿನ ತಿಥಿಯೂಟದಲ್ಲಿ ಬಾಡು ತಿಂದವರೇ! ಹೆಚ್ಚು ತಿಂದವರು ತೆಪ್ಪಗಿದ್ದಾರೆ. ಕಡಿಮೆ ತಿಂದವರು ರೇಗಾಡುತ್ತಿದ್ದಾರೆ. ಅವರಿಗೆಲ್ಲ ತಿನ್ನಿಸಿ ಹೈರಾಣಾಗಿ, ಈಗ ಸುಪ್ರೀಂ ಕೋರ್ಟಿನ ತೀರ್ಪಿನಿಂದ ಜೀವಬಂದಂತಾಗಿರುವ NICE ದೊರೆ ಅಶೋಕ್‌ಖೇನಿ, ಎಣಿಸಲಿರುವ ಹಣ ತುಂಬಿಸಲು ಗೋಣಿ ಚೀಲ ಹುಡುಕುತ್ತಿದ್ದಾನೆ. ಒಂದು ದಗಾಕೋರ ಪ್ರಾಜೆಕ್ಟು ಹೀಗೆ ನನಸಾಗುತ್ತಿದೆ.

ನಿಜ ಹೇಳಬೇಕೆಂದರೆ, ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಬ ವಿಷ ಬೀಜ ಬಿದ್ದದ್ದೇ ದೇವೇಗೌಡ - ಜೆ.ಎಚ್‌.ಪಟೇಲ್‌ ಆಡಳಿತ ನಡೆದಿದ್ದ ಕಾಲದಲ್ಲಿ. ಆಗ ಮೂರು ಕಂಪನಿಗಳ ಕನ್‌ಸೋರ್ಟಿಯಂ ಒಂದು ರಚಿತವಾಗಿ, ವಿದೇಶಿ ಕಂಪನಿಗಳ ಆಸಕ್ತಿ ಕುದುರಿ, ಕಲ್ಯಾಣಿ ಗ್ರೂಪ್‌ ಹೆಸರಿನ ಸಂಸ್ಥೆಯಾಂದು ಹುಟ್ಟಿ ಕೊಂಡು ಈ ದೇವೇಗೌಡರ ಅಂಕಿತ ಪಡೆದೇ ಜೆ.ಎಚ್‌.ಪಟೇಲರ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತು. ಒಂದು ಇರುವೆ ಕೂಡ ಅಡ್ಡ ಬಾರದಂತಹ, ಬೆಂಗಳೂರು- ಮೈಸೂರಿನ ಮಧ್ಯೆ ಅದ್ಭುತವಾದ ರಸ್ತೆ ಹಾಕಿ, ಅದು ಆರಂಭಗೊಳ್ಳುವ ಬೆಂಗಳೂರಿನ ಬಳಿ ಏಳು ಟೌನ್‌ಷಿಪ್‌ ಕಟ್ಟಿ, ಅದರ ಆಜುಬಾಜಿನಲ್ಲಿ ಪೆರಿಫೆರೆಲ್‌ ರಸ್ತೆ (ಉದಾ: ಮೈಸೂರು ರಸ್ತೆಯಿಂದ ಎಲೆಕ್ಟ್ರಾನಿಕ್‌ ಸಿಟಿಗೆ ಸೀದಾ ಒಂದು ರಸ್ತೆ!)ಗಳನ್ನು ನಿರ್ಮಿಸಿ, ಲಿಂಕ್‌ ರೋಡ್‌ಗಳನ್ನು ರೂಪಿಸಿ, ಜೊತೆಗೆ ಇಂಟರ್‌ಛೇಂಜ್‌ ರಸ್ತೆಗಳನ್ನು ಮಾಡಿ- ಅಬ್ಬ! ಬೆಂಗಳೂರೇ... ಅಂತ ಉದ್ಗರಿಸೋ ಹಾಗೆ ಮಾಡಿಕೊಡುತ್ತೇವೆ. ನಾವು ಮಾಡಿದ ರಸ್ತೆಗಳಲ್ಲಿ ಓಡಾಡುವ ಪ್ರತಿ ವಾಹನದಿಂದಲೂ ಇಂತಿಷ್ಟು ಅಂತ 30 ವರ್ಷದ ತನಕ ಶುಲ್ಕ ಪಡೆಯುತ್ತೇವೆ.

ಮೂವತ್ತು ವರ್ಷದ ನಂತರ ರಸ್ತೆ- ಪಸ್ತೆ ಎಲ್ಲ ನಿಮಗೇ ಬಿಟ್ಟು ನಾವು ಹೊರಟು ಹೋಗುತ್ತೇವೆ ಎಂಬುದು ಕಲ್ಯಾಣಿ ಗ್ರೂಪು ಮಾಡಿಕೊಂಡ ಒಪ್ಪಂದದ ಒಟ್ಟು ಸಾರಾಂಶ.

ಮುಂದೆ ಅದು ಬರಕತ್ತಾಗದೆ, ಸರ್ಕಾರದೊಂದಿಗೆ ಇದೇ ಪ್ರಾಜೆಕ್ಟು ಇಟ್ಟುಕೊಂಡು ಮಾತಿಗೆ ಕೂತದ್ದು ಈಗಿನ NICE ಕಂಪನಿ. ಇದು ಸರ್ಕಾರದೊಂದಿಗೆ ಒಪ್ಪಂದವೇನೂ ಮಾಡಿಕೊಳ್ಳಲಿಲ್ಲ. ಆದರೆ, ಪೀಠದ ಮೇಲೆ ಕೂತಿದ್ದುದು ಎಸ್ಸೆಂ ಕೃಷ್ಣ ಬೆನ್ನಲ್ಲಿದ್ದುದು ದೇಶಪಾಂಡೆ ಗ್ಯಾಂಗು. ಅವರ ಸಂಪುಟ ಸಭೆ NICEಗೆ ಅಂಥದೊಂದು ಅದ್ಭುತ ರಸ್ತೆ ಹಾಕಲು ಅನುಮತಿಸಿ ಅನಾಮತ್ತು 20,193 ಎಕರೆ ಪ್ರದೇಶವನ್ನು ಬೆಂಗಳೂರಿನಿಂದ ಮೈಸೂರಿನ ತನಕ ರೈತರಿಂದ ಕ್ತಿತುಕೊಂಡು NICE ಕಂಪನಿಗೆ ನೀಡಿತು. ಆ ಪೈಕಿ ಬೆಂಗಳೂರಿಗೆ ಅಂಟಿಕೊಂಡೇ (ಬಿಡದಿಯ ತನಕ) ಇರುವ 12ರಿಂದ 20 ಎಕರೆ ಜಮೀನಿದೆಯಲ್ಲ ? ಅದು ಬಂಗಾರ. ಈ ಹನ್ನೆರಡು ಎಕರೆ ಜಮೀನಿನಲ್ಲಿ ಒಂದು ಭಾಗ ಮಾರಿಕೊಂಡರೆ ಸಾಕು; NICE ಕಂಪನಿ ಉದ್ಧಾರವಾಗಿ ಹೋಗುತ್ತದೆ.

ಸದರಿ NICE ಕಂಪನಿ ಎಸ್ಸೆಂ ಕೃಷ್ಣರಿಗೆ ಜೀವನ ಪರ್ಯಂತ ಬಾಯಿ ತೊಳೆದುಕೊಂಡರೂ ವಾಸನೆ ಹೋಗದಷ್ಟು ಅಸಹ್ಯವನ್ನು ತಿನ್ನಿಸಿ, ಬೃಹತ್‌ ಮಟ್ಟದ ಜಮೀನು ಅಕ್ಟೈರ್‌ ಮಾಡಿಸಿ, ತನ್ನ ಸುಪರ್ದಿಗೆ ತೆಗೆದುಕೊಂಡಿತು. ಎಸ್ಸೆಂ ಕೃಷ್ಣ ಮರಳಿ ಬರುವ hope ಇಟ್ಟುಕೊಂಡೇ ಚುನಾವಣೆಗೆ ಫಂಡು ಕೊಟ್ಟಿತು.

ದೇವೇಗೌಡರು ಕಳಮಳ ಕಳಮಳ ಕುದ್ದು ಹೋದದ್ದೇ ಆವಾಗ. ಆಗಲೇ ಅವರು ಬೆಂಗಳೂರು ಸುತ್ತಲಿನ ರೈತರಿಂದ ಅಲ್ಲಲ್ಲಿ ಪ್ರತಿಭಟನೆಗಳನ್ನು ಮಾಡಿಸಿದರು. ಯಾವಾಗ ಅವರದೇ ಕಲಬೆರಕೆ ಸರ್ಕಾರ ಬಂತೋ, ರೇವಣ್ಣನನ್ನು ಮುಂದೆ ಬಿಟ್ಟು BMIC ರಸ್ತೆಗಾಗಿ ರೈತರು ಜಮೀನು ಕಳೆದುಕೊಂಡಿರುವುದರಿಂದ ಅದರ ಬಗ್ಗೆ ವಿಚಾರಣೆಯಾಗಲಿ ಅಂತ ಕೆ.ಸಿ.ರೆಡ್ಡಿ ನೇತೃತ್ವದಲ್ಲಿ ಒಂದು ಸಮಿತಿ ಮಾಡಿಸಿದರು. ಅವರ ಇಚ್ಛೆಯಂತೆಯೇ ‘ಬೆಂಗಳೂರಿಗೆ ಅತಿ ಹತ್ತಿರವಾಗಿ ಸುಮಾರು 2451 ಎಕರೆ ಭೂಮಿಯನ್ನು ಅನವಶ್ಯಕವಾಗಿ, ಅವರ ಪ್ರಾಜೆಕ್ಟಿನ ಅವಶ್ಯಕತೆ ಮೀರಿ NICE ಕಂಪನಿಗೆ ಕೊಡಮಾಡಲಾಗಿದೆ. ಇದನ್ನು ರೈತರಿಗೆ ಹಿಂತಿರುಗಿಸಬೇಕು’ ಅಂತ ವರದಿ ನೀಡಿತು ರೆಡ್ಡಿ ಸಮಿತಿ.

NICE ಕಂಪನಿಯ ಅಶೋಕ್‌ ಖೇನಿಗೆ ಮಲರೋಗ ಶುರುವಾಗಿದ್ದೇ ಆವಾಗ. ರಸ್ತೆ ಹಾಕುವ ಜಾಗ ಈ ದೇಶದ್ದು. ರಸ್ತೆ ಹಾಕಿ ಕೊಟ್ಟರೆ ಅದರ ಮೇಲೆ ಓಡಾಡುವವನು ಈ ದೇಶದವನು. ಅವನಿಂದಲೇ ಪ್ರತೀ ಸಲ ಅಡ್ಡಾಡಿದಾಗಲೂ 35 ರುಪಾಯಿಗಳನ್ನು 30ವರ್ಷಗಳ ತನಕ ಗುಂಜಿಕೊಂಡರೂ ತನಗೆ ಫಾಯ್ದೆಯಾಗುವುದಿಲ್ಲ. ಫಾಯಿದೆ ಇರುವುದು ತಾನು ಕೃಷ್ಣರ ಸರ್ಕಾರದಿಂದ ಬೆಂಗಳೂರಿಗೆ ಅತೀ ಹತ್ತಿರದ ಪ್ರದೇಶದಲ್ಲಿ ಅಕ್ರಮವಾಗಿ ಪಡೆದ 2451 ಎಕರೆ ಭೂಮಿಯಲ್ಲಿ. ಅದನ್ನು ಮಾರಿಕೊಂಡರೇನೇ ಗಿಟ್ಟು ಪಾಟು. ಇಲ್ಲಿ ದೆವ್ವನಂಥ ಹೈವೇ ಬರುತ್ತಿದೆ ಅಂದರೆ, ಸಹಜವಾಗಿಯೇ ಆಸುಪಾಸಿನ (ತನ್ನ ಕೈಲಿರುವ )ಭೂಮಿಗೆ ಬಂಗಾರದ ರೇಟು ಬರುತ್ತದೆ. ಅದನ್ನು ಮಾರಿದರೇನೇ ಗಂಟು. ರಸ್ತೆ ಮೇಲೆ ಕಿತ್ತುಕೊಳ್ಳೋ 35ರೂಪಾಯಿ ಈರುಳ್ಳಿ - ಬೆಳ್ಳುಳ್ಳಿಗಾಗದು.

ಹಾಗಂದುಕೊಂಡು NICEನವನು ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕಿಳಿದಾಗಲೇ, ಅಸಲಿ ರಿಯಲ್‌ ಎಸ್ಟೇಟ್‌ ಏಜೆಂಟ್‌ ದೇವೆಗೌಡ ಕುದ್ದು ಹೋದದ್ದು. ಧರಂ ಸಿಂಗ್‌ ಸರ್ಕಾರವನ್ನು ಕೋರ್ಟಿಗೆ ಕಳಿಸಿದರು. ಎಣಿಸಿದರೂ ಮುಗಿಯದಷ್ಟು ಖಟ್ಲೆ ಹಾಕಿಸಿದರು. ಆದರೆ ಈಗ ಸುಪ್ರೀಂಕೋರ್ಟ್‌ ಒದ್ತಾ ಬಿದ್ದಿದೆ. NICEನವನು ಪಡೆದುಕೊಂಡ extra ಜಮೀನನ್ನು ಒತ್ತೆಯಿಡಬಹುದು, ಪರಭಾರೆ ಮಾಡಬಹುದು, ರಿಜಿಸ್ಟರ್‌ ಕೂಡ ಮಾಡಿಕೊಡಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ನಾಳೆ 2006ರ ಜನವರಿ 10ರಂದು ಅಂತಿಮ ತೀರ್ಪು ಕೊಡುತ್ತೇನೆ-ಅಂದಿದೆ ಸುಪ್ರೀಮ್‌ ಕೋರ್ಟ್‌.

ಈಗಾಗಲೇ ಆ ಕೊನೆಯ ತೀರ್ಪೂ ತನ್ನ ಪರವಾಗಿಯೇ ಆಗಿದೆ ಎಂಬಂತೆ ನಲಿಯುತ್ತಿದ್ದಾನೆ ಖೇನಿ ಮಹಾರಾಜ್‌. ಆದರೆ ಆಶ್ಚರ್ಯವೂ ಇಲ್ಲ ಬಿಡಿ. ಯೋಚಿಸಬೇಕಾದ ಸಂಗತಿಯೆಂದರೆ ಬೆಂಗಳೂರು- ಮೈಸೂರು ನಡುವೆ ನಿಜಕ್ಕೂ ಅಂಥದೊಂದು ನರಪಿಳ್ಳೆ ಸುಳಿಯದ, ಕೇವಲ ಐಟಿ ಮಕ್ಕಳ-ಬಿಟಿ ಮಕ್ಕಳ ಬೆಂಝ್‌ ಕಾರುಗಳು ಓಡಾಡಬಹುದಾದಂಥ ರಸ್ತೆಯ ಅವಶ್ಯಕತೆ ಇದೆಯೇ? ಯಾವ ರೈತನಿಂದ ಕಿತ್ತುಕೊಂಡ ಜಮೀನಿನಲ್ಲಿ ಈ ರಸ್ತೆ ಹಾದು ಹೋಗಲಿದೆಯೋ, ಆ ರಸ್ತೆಯಾಳಕ್ಕೆ ರೈತ ಕಾಲಿಡುವಂತಿಲ್ಲ. ಹಾಯ್ದುಹೋಗುವಂತಿಲ್ಲ. ಆ ರಸ್ತೆ ಅವನಿಗೆ ಕಾಣಿಸುವುದೇ ಇಲ್ಲ. ಏಕೆಂದರೆ, ರಸ್ತೆಯ ಇಕ್ಕೆಲಗಳಲ್ಲೂ ಗೋಡೆ ಇರುತ್ತದೆ. ಆ ರೈತನಿಗೆ ಎರಡು ಮೂರು ಲಕ್ಷ ಕೊಟ್ಟು ಅವನಿಂದ ಪಡೆದ ಜಮೀನನ್ನು(extra ಪಡೆದದ್ದನ್ನು) NICEನವನು ಐವತ್ತೋ ಅರವತ್ತೋ ಲಕ್ಷಕ್ಕೆ ಮಾರಿಕೊಳ್ಳುತ್ತಾನೆ. ಇಷ್ಟಾಗಿ, ಇವನು ಹಾಕಿಕೊಂಡಿರುವ ರಸ್ತೆಯಿಂದ ಉಪಯೋಗವೇನು? ಬೆಂಗಳೂರಿನಿಂದ ಮೈಸೂರಿಗೆ ಕೇವಲ ಒಂದೂವರೆ ತಾಸಿನಲ್ಲಿ ತಲುಪಬಹುದು!

ಅಷ್ಟಕ್ಕಾಗಿ ಇಷ್ಟು ಕಷ್ಟವಾ? ಇರುವ ರಸ್ತೆಯನ್ನೇ ಸರಿಯಾದ ರೀತಿಯಲ್ಲಿ ಚತುಷ್ಪಥ ರಸ್ತೆ ಮಾಡಿ ಕೈ ಬಿಟ್ಟರೆ ಈಗಲೂ ಒಂದೂವರೆ ಗಂಟೆಯಲ್ಲಿ ಮೈಸೂರು ತಲುಪಬಹುದು. ಎರಡು ನಗರಗಳ ಮಧ್ಯೆ ಇನ್ನೊಂದು ರೈಲು ಮಾರ್ಗವಾದರೆ ಸಾಕೇ ಸಾಕು. ನೂರು ಬಸ್ಸುಗಳಲ್ಲಿ ಹೋಗಬಹುದಾದಷ್ಟು ಮಂದಿ ಒಂದೇ ರೈಲಿನಲ್ಲಿ ಹೋಗುತ್ತಾರೆ. ಸಾವಿರ ಲಾರಿಗಳ ಸರಕು ಐದು ಗೂಡ್ಸ್‌ ಗಾಡಿಗಳಲ್ಲಿ ಮೈಸೂರು ತಲುಪುತ್ತದೆ. ನಮ್ಮ ಅಷ್ಟೂ ಸಂಸದರು ಹೊಟ್ಟೆಗೆ ಅನ್ನ ತಿನ್ನುವವರಂತೆ ವರ್ತಿಸಲು ನಿರ್ಧರಿಸಿ, ಒಟ್ಟಿಗೆ ಹೋಗಿ ಲಾಲೂ ಪ್ರಸಾದ್‌ ಯಾದವ್‌ರಿಗೆ ಗುಂಟು ಬಿದ್ದರೆ ಆ ಮಂಜೂರಾತಿ ಕಷ್ಟವಲ್ಲವೇ ಅಲ್ಲ. ರೈಲುಗಳು ಚಲಿಸಲಾರಂಭಿಸಿದರೆ ಸಹಜವಾಗಿಯೇ ರಸ್ತೆಗಳ ಮೇಲೆ ಒತ್ತಡ ಕಡಿಮೆಯಾಗಿ ಟ್ರಾಫಿಕ್‌ ತಗ್ಗುತ್ತದೆ. ಇಷ್ಟರಮೇಲೆ ಐಟಿ ಮಂದಿಗೆ ಉಳಿದೆಲ್ಲರಿಗಿಂತ ವೇಗವಾಗಿ ಮೈಸೂರು ತಲುಪಬೇಕೆಂದಿದ್ದರೆ ಲಕ್ಷಣವಾಗಿ ದಿನಕ್ಕೆ ಮೂರು ವಿಮಾನ ಹಾಕಿಕೊಡಿ?

ಈ ಮಾತ್ರದ ಸಂಗತಿ ನಮ್ಮ ರಾಜಕಾರಣಿಗಳಿಗೆ ಗೊತ್ತಿಲ್ಲ ಅಂದುಕೊಂಡಿರಾ? ಅವರು ಅಸಹ್ಯದ ಗುಂಡಿಯಲ್ಲಿ ಆನಂದದಿಂದ ಮುಳುಗಿ ಹೋಗಿದ್ದಾರೆ. ಪ್ರತಿಭಟಿಸಬೇಕಾದ ಜನಕ್ಕೆ ಪೂರ್ತಿಯಾಗಿ ವಿಷಯ ಗೊತ್ತಿಲ್ಲ. ಆರಂಭದಿಂದಲೂ ಇದನ್ನು (BMIC ಯನ್ನು) ವಿರೋಧಿಸಿಕೊಂಡು ಬಂದವರು ಕರ್ನಾಟಕ ವಿಮೋಚನಾ ರಂಗದವರು. ಅವರನ್ನು ನಕ್ಸಲರು ಅಂತ ಛೀದರಿಸಿ ದೂರವಿಡಲಾಯಿತು. ಅವರಾದರೂ ಎಲ್ಲರನ್ನೂ ಒಗ್ಗೂಡಿಸಿ ಚಳವಳಿಗೆ ಇಳಿಯಲಿಲ್ಲ.

ಹೀಗಾಗಿ NICE ದೊರೆ ಎಲ್ಲ ಐಟಿ ಕಂಪನಿಗಳಿಗೂ ಹೋಗಿ ಭಾಷಣ ಹೊಡೆಯತೊಡಗಿದ್ದಾನೆ. ಕೋರ್ಟಿನ ಕೈಲಿ ಒದೆ ತಿಂದ ಗೌಡರ ಪರಿಸ್ಥಿತಿ: ತಿಂದ ಇಲಿ ಅರಗದೆ ಒದ್ದಾಡುತ್ತಿರುವ ಬೆಕ್ಕಿನಂತಾಗಿದೆ. ಇನ್ನು ರಿಯಲ್‌ ಎಸ್ಟೇಟು ಹಿಡಿತಕ್ಕೆ ಸಿಕ್ಕುವುದುಂಟೆ?

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X