ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಗೆ ಸಾಗುತ್ತದೆ ಬದುಕು : ಗುಟ್ಟುಗಳಲ್ಲಿ ಮತ್ತು ರಟ್ಟುಗಳಲ್ಲಿ !

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

‘ನಿನ್ನ ದಮ್ಮಯ್ಯ ಅಂತೀನಿ, ಪ್ಲೀಸ್‌...ಯಾರಿಗೂ ಹೇಳಬೇಡ’ ಅನ್ನುತ್ತಾಳೆ ಹುಡುಗಿ. ಹುಡುಗ ಧೀರನಂತೆ, ತಮ್ಮ ಪ್ರೇಮದ ರಹಸ್ಯವನ್ನು ಕಾಯ್ದುಕೊಂಡು ಬರುವುದಾಗಿ ಭರವಸೆ ಕೊಟ್ಟಿರುತ್ತಾನೆ. ಅದು ಪ್ರೇಮದ ಮೊದಲ ಹಂತ. ತಮ್ಮಿಬ್ಬರ ನಡುವೆ ದೈವಿಕ ಕಾರಣಗಳಿಗಾಗಿ ಮೊಳೆತು ನಿಂತ ದಿವ್ಯ ಪ್ರೇಮದ ಸಂಗತಿ ಯಾರಿಗೂ ಗೊತ್ತಾಗದಿರಲಿ ಅಂತ ಬಯಸುವ ಹಂತವದು. ಆ ಹಂತದಲ್ಲಿ ಎಲ್ಲವೂ ಗುಪ್ತ್‌ ಗುಪ್ತ್‌ : ಭೇಟಿ, ಮಾತು, ಪತ್ರ, ಎಸ್ಸೆಮ್ಮೆಸ್ಸು, ಟೆಲಿಫೋನ್‌ನಲ್ಲಿ sweet nothing!

ಆದರೆ ಕೆಲವೇ ದಿನದೊಳಗಾಗಿ ಹುಡುಗಿಯೇ ತಾನು ದಮ್ಮಯ್ಯ ಗುಡ್ಡೆ ಹಾಕಿದ್ದು ಮರೆತು ಹೋಗಿ ತನ್ನ ಆತ್ಮೀಯ ಗೆಳತಿಯಾಬ್ಬಳಿಗೆ ಮಾತ್ರ ‘ಯಾರಿಗೂ ಹೇಳಲ್ಲ’ ಅಂತ ಆಣೆ ಹಾಕಿಸಿಕೊಂಡು ತನ್ನ ಪ್ರೇಮದ ಬಗ್ಗೆ ಗುಟ್ಟು ಒಡೆದಿರುತ್ತಾಳೆ. ಅದಕ್ಕೆ ಕಾರಣವೂ ಇರುತ್ತದೆ. ತೀರ ಹದಿನಾರು-ಹದಿನೆಂಟರ ವಯಸ್ಸಿನಲ್ಲಿ ಪ್ರೇಮಕ್ಕೆ ಬೀಳುವ ಹುಡುಗಿಗೆ ಅದನ್ನು ಒಬ್ಬಂಟಿಯಾಗಿ, ಏಕಾಂಗಿಯಾಗಿ ಸಂಭಾಳಿಸುವ ಧೈರ್ಯವಿರುವುದಿಲ್ಲ. ಹೇಳಿಕೊಳ್ಳಲಿಕ್ಕೆ, ಹಂಚಿಕೊಳ್ಳಲಿಕ್ಕೆ, ಹೇಳಿಕೊಂಡ ಮೇಲೆ ತನ್ನನ್ನು ಬೆಂಬಲಿಸಲಿಕ್ಕೆ ಅವಳಿಗೊಬ್ಬ ಗೆಳತಿ ಬೇಕು. ಹಾಗೆ ಹೇಳಿಕೊಳ್ಳುವ ಮೂಲಕ ಅವಳು ಪ್ರೇಮದ ಎರಡನೆಯ ಹಂತಕ್ಕೆ ಅದನ್ನು ಕೊಂಡೊಯ್ಯುತ್ತಾಳೆ.

ತಮ್ಮ ನಡುವೆ ಪ್ರೇಮವಿದೆಯೆಂಬುದು ಒಬ್ಬಿಬ್ಬರಿಗೆ ತಿಳಿದಿರಲಿ ಅಂತ ಇಬ್ಬರೂ ಬಯಸುವ ಎರಡನೆಯ ಹಂತದಲ್ಲಿ, ನಿಧಾನವಾಗಿ ಗೆಳೆಯ ಗೆಳತಿಯರ ಸಲಹೆಗಳು, ಅವರ ಶುಭಹಾರೈಕೆಗಳು, ಆಕ್ಷೇಪಣೆಗಳು, ವಾರ್ನಿಂಗುಗಳು, ಕಿರಿ ಕಿರಿಗಳು, ಇಂಟರ್‌ಫಿಯರೆನ್ಸುಗಳು -ಎಲ್ಲ ಕಾಣಿಸಿಕೊಳ್ಳುತ್ತವೆ.

ಇಬ್ಬರನ್ನೂ ಎರಡು ಚಿಕ್ಕ ಗ್ರೂಪುಗಳು ಪ್ರೊಟೆಕ್ಟ್‌ ಮಾಡುತ್ತಿರುವಂತೆ ಭಾಸವಾಗುತ್ತದೆ. ಆದರೆ ಅಷ್ಟರಲ್ಲೇ ಆ ಗುಪ್ತ ಪ್ರೇಮ ಹಠಾತ್ತಾಗಿ ಮೂರನೆಯ ಹಂತಕ್ಕೆ ತಲುಪಿಬಿಟ್ಟಿರುತ್ತದೆ. ತಮ್ಮ ಮಧ್ಯದ ಪ್ರೇಮ ಯಾರೆಂದರೆ ಯಾರಿಗೂ ಗೊತ್ತಾಗದಿರಲಿ ಅಂತ ದಮ್ಮಯ್ಯ ಹಾಕಿದ ಹುಡುಗಿಯೇ, ಸಾಧ್ಯವಾದಷ್ಟೂ ಜನಕ್ಕೆ ತಮ್ಮ ಪ್ರೀತಿ ತಮ್ಮ ಸಂಬಂಧ ಗೊತ್ತಾಗಲಿ ಅಂತ ಬಯಸುತ್ತಾಳೆ. ಮೊದಲ ಹಂತದ ಅಭದ್ರತೆಯೇ ಈಗ ಅವರ ತದ್ವಿರುದ್ಧದ ರೂಪ ಪಡೆದಿರುತ್ತದೆ. ಈ ಸಂಬಂಧ ಇಬ್ಬರ ಮಧ್ಯೆಯೇ ಇದ್ದು ಹೀಗೇ ಕತ್ತಲಲ್ಲಿ ಕರಗಿ ಹೋಗಬಾರದಲ್ಲ ? Let the world know. ನಾಳೆ ಹುಡುಗ ಜಾರಿಕೊಳ್ಳಲು ಯತ್ನಿಸಿಬಿಟ್ಟರೆ ಗತಿ? ಹೆಚ್ಚು ಜನಕ್ಕೆ ಗೊತ್ತಾದಷ್ಟೂ ಅವನು ಒತ್ತಡಕ್ಕೊಳಗಾಗುತ್ತಾನೆ. ಆ ಕಾರಣಕ್ಕಾದರೂ ಮದುವೆಗೆ ಬೇಗ ಅಣಿಯಾಗುತ್ತಾನೆ ಅಂದುಕೊಳ್ಳುತ್ತಾಳೆ ಹುಡುಗಿ.

ಹುಡುಗನಿಗೂ ಕೂಡ ತಾನೊಬ್ಬ ಹುಡುಗಿಯನ್ನು ಒಲಿಸಿಕೊಂಡಿದ್ದೇನೆ ಅಂತ ಜಗತ್ತಿಗೆ ತೋರಿಸುವ ತನಕ. ‘ಕೂತ್ಕೋ ಬೈಕಿನ ಮೇಲೆ’ ಅಂತ ಕೂಡಿಸಿಕೊಂಡು ಊರು ಸುತ್ತಲು ಹೊರಡುವ ಕಾತುರ. ಹೀಗಾಗಿ ಪ್ರೇಮದ ಈ ಹಂತದಲ್ಲಿ ಆ ಗುಟ್ಟಾದ ಬಂಧ ಪೂರ್ತಿ ಬಯಲಾಗಿ ಬಿಡುತ್ತದೆ. ಆ ಮೇಲಿನ ಮಾತು ಬಿಡಿ: ಮದುವೆ ಅಂತ ನಿಶ್ಚಯವಾಗಿ ಕಾರ್ಡು ಹಂಚಿ ಬರುವ ಸಂಭ್ರಮ ಶುರುವಾಗುತ್ತದೆ. ಮೊದಲು ಗೆಳೆಯ ಗೆಳತಿಯರಿಗೆ, ತಮ್ಮ affairಗೆ ಸಪೋರ್ಟು ಮಾಡಿದವರಿಗೆ, ಹಿತೈಷಿಗಳಿಗೆ ಪತ್ರಿಕೆ ಕೊಟ್ಟು ಬಂದ ಮೇಲೆ, ಒಂದು ಸುತ್ತು ತಮಗಾಗದವರಿಗೆಲ್ಲ ಕೊಟ್ಟು ಬರುತ್ತಾರೆ. ತಮ್ಮನ್ನು ಡಿಸ್ಕರೇಜ್‌ ಮಾಡಿದವರು, ತಮ್ಮ ಬಗ್ಗೆ ಚಾಡಿ ಹೇಳಿದವರು, ಇಬ್ಬರ ಮಧ್ಯೆ ತಂದು ಹಾಕಲು ಯತ್ನಿಸಿದವರು, ಹೊಟ್ಟೆ ಕಿಚ್ಚು ಪಟ್ಟವರು -ಇಂಥವರನ್ನೇ ಹುಡುಕಾಡಿ ಹುಡುಕಾಡಿ ಕೊಟ್ಟು ಬರುತ್ತಾರೆ.

ಅಲ್ಲಿಗೆ ಅವರ ಮಧ್ಯದ ಗುಟ್ಟು ಪೂರ್ತಿಯಾಗಿ ಬಯಲಾಗಿರುತ್ತದೆ. ಮದುವೆಯ ನಂತರ ಗರ್ಭ ಹೊತ್ತ ಸಂಗತಿ ಸ್ವಲ್ಪ ದಿನದ ಮಟ್ಟಿಗೆ ಗುಟ್ಟು. ಮೂರು ತಿಂಗಳು ತುಂಬಲಿ ಇರಿ, ಆಮೇಲೆ ಹೇಳೋಣಂತೆ ಅಂತ ಪಿಸುಗುಡುತ್ತಾಳೆ ಅವಳು. ಕೋಣೆಯಾಚೆಗೆ ನಿಂತ ಅತ್ತೆಗೆ ದೂರದಲ್ಲೆಲ್ಲೋ ಅಳುವ ಮಗುವಿಗೆ ದನಿ ಕೇಳಿಸಿದಂತಾಗಿ, ಶುಭ ಸಂಭ್ರಮ. ಪಕ್ಕದ ಮನೆಯಾಕೆಗಾಗಲೇ ಆಕೆ ಸುದ್ದಿ ತಲುಪಿಸಿರುತ್ತಾಳೆ.

ಇದೆಲ್ಲದರ ನಂತರ ಮತ್ತೆ ಆರಂಭವಾಗುತ್ತದೆ, ಗುಟ್ಟು-ರಟ್ಟುಗಳ ಕಣ್ಣಾಮುಚ್ಚಾಲೆ. ಹನಿಮೂನ್‌ ಮುಗಿಸಿ ಬಂದ ಕೆಲವೇ ತಿಂಗಳಿಗೆ ಸಣ್ಣ ಸಣ್ಣ ಜಗಳ. ಇವನೊಂಚೂರು ದುಡುಕು. ಬಿಯರ್‌ ಕುಡಿದಿದ್ದು ಯಾಕೆ ಅಂತ ಕೇಳಿದ್ದಕ್ಕೆ ಅವಳ ಕೆನ್ನೆಗೆ ಹೊಡೆದು ರಂಪಾಟ ಮಾಡಿಬಿಟ್ಟನಲ್ಲ? ಆದರೆ ಅವಳು ಅದನ್ನ ಯಾರ ಮುಂದೂ ಹೇಳಿಕೊಳ್ಳುವುದಿಲ್ಲ. ಇವನಿಗೆ ಸರಿಯಾದ ನೌಕರಿಯಿಲ್ಲ. ತುಂಬ ಸಾಲ, ಮನೆ ಕಡೆ ವಿಪರೀತ ಜವಾಬ್ದಾರಿ. ದುಡಿದದ್ದೆಲ್ಲ ತಂಗಿಯವರಿಗೇ ಸರಿ ಹೋಗುತ್ತೆ, ಮೊದಲಿನಂತೆ ಪ್ರೀತಿಸುವುದೂ ಇಲ್ಲ -ಉಹುಂ! ಅದ್ಯಾವುದನ್ನೂ ಆಕೆ ಹೇಳಿಕೊಳ್ಳುವುದಿಲ್ಲ. ಹೇಳಿಕೊಂಡರೆ ತನ್ನದೇ ಸಂಸಾರದ ಗುಟ್ಟು ರಟ್ಟಾಗುತ್ತದೆ ಅಂದುಕೊಳ್ಳುತ್ತಾಳೆ. ತೀರ ತಡೆಯದಾದಾಗ ಆತ್ಮೀಯ ಗೆಳತಿಯಾಬ್ಬಳ ಮುಂದೆ ಒಬ್ಬಳೇ ಕುಳಿತು ಹೇಳಿಕೊಂಡು ಕಣ್ಣೀರಾಗಿರುತ್ತಾಳೆ.

ಆದರೆ ಆ ಹಂತವೂ ಮುಗಿಯಲೇಬೇಕು. ಗಂಡ ಸರಿ ಹೋಗುವುದೇ ಇಲ್ಲ. ಈ ಮಧ್ಯೆ ಹಗಲೇ ಕುಡಿಯುತ್ತಾನೆ. ಮಕ್ಕಳೆಂದರೆ ಅಸಡ್ಡೆ. ಸಾಲದವರು ಮನೆ ಬಾಗಿಲಿಗೇ ಬರುತ್ತಾರೆ. ಯಮ ಹಿಂಸೆ ತಡೆಯಲಾಗದು. ಲವ್‌ ಮ್ಯಾರೇಜು ನೋಡಿ? ಅವರ ಮನೆಯವರಂತೂ ಹೆಗಲು ಮುಟ್ಟಿಸಿಕೊಳ್ಳುವುದೂ ಇಲ್ಲ. ಅವಳಿಗೆ ಬೇರೆ ದಾರಿಯಿಲ್ಲ. ಅವಳು ನಾಲ್ಕು ಮಂದಿ ಹಿತೈಷಿಗಳನ್ನೋ, ಗೆಳೆಯರನ್ನೋ ಕರೆಸಿ ಪಂಚಾಯಿತಿ ಮಾಡಿಸಲೇಬೇಕು. ಗಂಡನಿಗೆ ಬುದ್ಧಿ ಹೇಳಿಸಲೇಬೇಕು. ಅಲ್ಲಿನ್ನು ಗುಟ್ಟು ಒಳ್ಳೆಯದಲ್ಲ.

ಹೀಗೇ ಸಾಗುತ್ತದೆ ಬದುಕು: ಗುಟ್ಟುಗಳಲ್ಲಿ ಮತ್ತು ರಟ್ಟುಗಳಲ್ಲಿ. ಗಂಡನ ಯಾವುದೋ ಮನೆಯಾಚೆಗಿನ ಸಂಬಂಧದ ಗುಟ್ಟು ಬಯಲಾಗುತ್ತದೆ. ‘ನಿನಗೂ ಹಿಂದೆ ಇದ್ದನಂತಲ್ಲ ಒಬ್ಬ ಫ್ರೆಂಡು?’ಅಂತ ಅವನು ರೊಳ್ಳೆ ತೆಗೆಯುತ್ತಾನೆ. ಅಷ್ಟು ಹೊತ್ತಿಗೆ ಮಕ್ಕಳು ದೊಡ್ಡವಾಗಿರುತ್ತವೆ. ಹಿರಿ ಮಗಳಿಗೆಲ್ಲೋ ಒಂದು affair ಇದೆಯಾ ಅಂತ ಅನುಮಾನ.

ಅವಳು ಮನೆಯಲ್ಲಿಲ್ಲದಾಗ ಅವಳ ಅಲಮಾರು ಹುಡುಕಿದರೆ ಎರಡು ಪತ್ರ, ಹತ್ತು ಗ್ರೀಟಿಂಗು, ಯಾರೋ ಹುಡುಗನ ಫೋಟೋ ಮತ್ತು ಅವನು ಕೊಟ್ಟ ಗಿಫ್ಟುಗಳು! ‘ನನ್ನ ಮರ್ಯಾದೆ ಕಳೀಲಿಕ್ಕೆ ಹುಟ್ಟಿದೆಯಲ್ಲೇ....’ ಅಂತ ತಂದೆ ಆರ್ಭಟಿಸುತ್ತಾನೆ ಮಗಳ ಮುಂದೆ.

‘ ಮೆಲ್ಲಕ್ಕೆ ಮಾತಾಡಿ... ಅಕ್ಕಪಕ್ಕದವರು ಕೇಳಿಸಿಕೊಂಡರೆ ಏನು ಗತಿ? ಮದುವೆ ಆಗಬೇಕಿರೋ ಹುಡುಗಿ ಅವಳು..’

ಅಲ್ಲಿಗೆ ಮತ್ತೊಂದು ಗುಟ್ಟು ಹುಟ್ಟಿಕೊಳ್ಳುತ್ತದೆ. ಗುಟ್ಟುಗಳಿಲ್ಲದೇ, ಅವುಗಳನ್ನು ರಟ್ಟು ಮಾಡದೆ ಯಾವ ಸಂಬಂಧಗಳು ಬೆಳೆದಿವೆ, ಬದುಕುಳಿದಿವೆ? ಅಲ್ವೆ.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಪ್ರೇಮ ವಿವಾಹಗಳ ಬಗ್ಗೆ ನಿಮಗೆ ನಂಬಿಕೆ ಇದೆಯೇ?

ಮುಖಪುಟ

/ ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X