• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾವೇಕೆ ಮನಸಿನ ಮಾತು ಕೇಳಿಸದಂತೆ ಮಾಡಿಕೊಳ್ಳುತ್ತೇವೆಂದರೆ...

By Staff
|
Ravi Belagere on Thatskannada.com ರವಿ ಬೆಳಗೆರೆ
ಒಬ್ಬರೇ ಇರುವುದು ಎಷ್ಟು ಮುಖ್ಯ ಎಂಬುದು ತುಂಬ ಹೊತ್ತು crowdನಲ್ಲಿ ಇದ್ದು ಬಂದ ಮೇಲೆ ಅರ್ಥವಾಗುತ್ತದೆ. ಗುಂಪಿನಲ್ಲಿರುವ ನಾಯಕ, ಮಕ್ಕಳೊಂದಿಗಿರುವ ಮೇಷ್ಟ್ರು, ಶಿಷ್ಯರ ಮಧ್ಯದ ಸ್ವಾಮಿ, ಗೆಳೆಯರ ಮಧ್ಯದ ಹುಡುಗ, ಮನೆಯವರ ಮಧ್ಯದಲ್ಲಿನ ಹುಡುಗಿ - ಎಲ್ಲರೂ ಒಂದು ಸಲ ಛಟ್‌ ಅಂತ ಸುತ್ತಲಿನವರನ್ನೂ ಕೆಡವಿಕೊಂಡು ಪುಟ್ಟ ಏಕಾಂತದೊಳಕ್ಕೆ ಹೋಗಿ ಬಿಡಬೇಕು. ಕೆಲವು ವರ್ಷಗಳ ಹಿಂದೆ ಹಂಪೆಯಲ್ಲಿ ಸಂತನೊಬ್ಬ ನನಗೆ ಹೇಳಿದ್ದ : ‘ನಿನ್ನ ಹಿಂದೆ crowd ಇದೆ. crowdನಲ್ಲಿದ್ದವನಿಗೆ ತನ್ನದೇ ಮನಸ್ಸಿನ ಮಾತು ಕೇಳಿಸುವುದಿಲ್ಲ. ಅದು ತುಂಬ ಅಪಾಯಕಾರಿ’.

ಆತನ ಮಾತು ಪ್ರತೀಸಲ crowdನಿಂದ ಹೊರ ಬಂದಾಗಲೂ ಹೌದನ್ನಿಸುತ್ತದೆ. ಕೆಲಮೊಮ್ಮೆ ನನ್ನೊಂದಿಗೆ ಇನ್ನೊಬ್ಬೇಒಬ್ಬರಿದ್ದರೂ ಅದು ಕ್ರೌಡು ಅನ್ನಿಸುತ್ತದೆ. ಗಟ್ಟಿಯಾಗಿ ಕದವಿಕ್ಕಿಕೊಂಡು ಏಕಾಂತವನ್ನು ಸೃಷ್ಟಿಸಿಕೊಳ್ಳುತ್ತೇನೆ. ಕುಡಿತ, ಕಾಮ, ಭಯ -ಇಂಥವಿರದೆ ಹೋದರೆ ಏಕಾಂತ ಧ್ಯಾನ ಗೀನ ಮಾಡುತ್ತೇನೆ ಅಥವಾ ಮಾಡಬೇಕು ಅಂತಲ್ಲ. ಏಕಾಂತ ನಮ್ಮನ್ನು ತುಂಬ ಸುಲಭವಾಗಿ ಪುನಶ್ಚೇತನಗೊಳಿಸುವಂತಹುದು ಎಂಬ ಕಾರಣಕ್ಕಾಗಿ ನಾವು ಒಬ್ಬರೇ ಆಗಬೇಕು. ಎಷ್ಟೋ ದಿನ, ಎಷ್ಟೋ ತಿಂಗಳುಗಳಾದರೂ ಟಾಯ್ಲೆಟ್‌ನ ಹೊರತಾಗಿ ನಮಗೆ ನಿಚ್ಚಳ ಏಕಾಂತದಕ್ಕಿರುವುದೇ ಇಲ್ಲ. ಜೊತೆಗಿದ್ದವರು ತುಂಬ ಮಾತನಾಡುವವರಲ್ಲವಾದರೂ, ಅವರು ಜೊತೆಗಿದ್ದಾರೆ ಎಂಬ ಭಾವವೇ ನಮ್ಮ ಮಾತು ನಮಗೆ ಕೇಳಿಸದಂತೆ ಮಾಡಿಬಿಡುತ್ತದೆ. ನಾನಂತೂ ಒಮ್ಮೊಮ್ಮೆ ಏಕಾಂತಕ್ಕಾಗಿ ಹುಚ್ಚು ಚಡಪಡಿಕೆಗೆ ಬಿದ್ದು ಬಿಡುತ್ತೇನೆ. ಆದರೆ ಎಲ್ಲಿಗೆ ಹೋಗಲಿ?

It pays to be alone!!ಈ ಮಧ್ಯೆ ಅದಕ್ಕೊಂದು ಉಪಾಯ ಕಂಡುಕೊಂಡಿದ್ದೇನೆ. Do not disturb ಅಂತ ಒಂದು ಬೋರ್ಡುನೇತು ಹಾಕಿ ಛೇಂಬರಿನ ಕದವಿಕ್ಕಿಕೊಳ್ಳುತ್ತೇನೆ. ಇದ್ದಕ್ಕಿದ್ದಂತೆ ಸೃಷ್ಟಿಯಾಗುವ ಏಕಾಂತದಲ್ಲಿ ಸ್ವಲ್ಪ ಹೊತ್ತು ಬಿಕೋ ಅನ್ನಿಸುತ್ತಿರುತ್ತದೆ. ನಂತರ ನಿಧನಿಧಾನವಾಗಿ ನಮ್ಮ ಮಾತು ನಮಗೇ ಕೇಳಿಸತೊಡಗುತ್ತವೆ. ನೀವು ಗಮನಿಸಿ ನೋಡಿ: ನಿಮ್ಮ ಮನಸ್ಸಿಗೆ ಕೊಂಚ ಅವಕಾಶ ಸಿಕ್ಕರೂ ಅದು ಮಾತನಾಡಲಾರಂಭಿಸುತ್ತದೆ. ನಾವು ತುಂಬ ಪ್ರೀತಿಸುವವರ ಬಗ್ಗೆ ಮಾತಾಡಿಕೊಳ್ಳತೊಡಗುತ್ತೇವೆ. ಹೆಚ್ಚಿನ ಸಲ ನಮ್ಮ ಬದುಕಿನ ಗತ ದಿನಗಳ ಬಗ್ಗೆ ಮನಸ್ಸು ಮಾತನಾಡುತ್ತಿರುತ್ತದೆ. ಅವತ್ತು ಹೀಗಾಯ್ತು, ಹಾಗಾಯ್ತು, ಅವಳು ಹಾಗನ್ನ ಬಾರದಿತ್ತು, ಅವನು ಮೊದಲೇ ಸಿಗಬೇಕಿತ್ತು, ಛೆ...ಎಂಥ ತಪ್ಪು ಮಾಡಿಬಿಟ್ಟೆ. ನಂಗೆ ಬೇಕಿತ್ತಾ ಅದೂ?

ತಕ್ಷಣ ಮನಸ್ಸನ್ನು warn ಮಾಡಿ. ಗತಿಸಿ ಹೋದುದರ ಬಗ್ಗೆ ಮಾತಾಡಿದ್ದು ಸಾಕು ಅನ್ನಿ. ಅಷ್ಟಂದ ತಕ್ಷಣ ಮನಸು ಭವಿಷ್ಯದ ಬಗ್ಗೆ ವಟವಟ ಅನ್ನುತ್ತದೆ. ಹಂಗೆ ಮಾಡಬೇಕು, ಹಿಂಗೆ ಮಾಡಬೇಕು, ಮಾಡಿ ತೋರಿಸ್ತೀನ್ನೋಡು! ಏನಂದುಕೊಂಡಿದ್ದಾರೆ ನನ್ನನ್ನ ? ಇವತ್ತಲ್ಲ ನಾಳೆ ಅಛೀವ್‌ ಮಾಡೇ ಮಾಡ್ತೀನಿ. ಇವತ್ತು ತಲೆ ಎಲ್ಲಾ ಮಾತಾಡಿದವರಿಗೆ ಉತ್ತರ ಕೊಡದೇನೇ ಇರ್ತೀನಾ? ಜೊತೆಗೆ ಅವಳೂ ಇರ್ತಾಳೆ. ಇವಳೊಬ್ಬಳಿದ್ರೆ ಸಾಕು: ಏನು ಬೇಕಾದ್ರೂ ಸಾಧಿಸ್ತೀನಿ. Stop that. ಮನಸ್ಸಿನ ಆ ವಟಗುಡುವಿಕೆಯನ್ನು ಗದರಿಸಿ ನಿಲ್ಲಿಸಿ. ಅದಕ್ಕೆ ಗೊತ್ತಿಲ್ಲ. ಅದು ನಿಜಕ್ಕೂ ಆಡಬೇಕಾದ ಮಾತುಗಳು ಬೇರೇನೋ ಇವೆ. ಹಾಗಂತ ನಾಳಿನಿಂದ ಏನು ಮಾಡಬೇಕು, ಎಷ್ಟು ಹೊತ್ತಿಗೆ ಎದ್ದೇಳ ಬೇಕು, ಎಷ್ಟು ದುಡಿಯಬೇಕು ಅಂತೆಲ್ಲ plan ಮಾಡಲು ಕೂತು ಬಿಡಬೇಡಿ. ಹಾಗೆ ಮಾಡಿದಿರಾದರೆ, ಮನಸ್ಸಿಗೆ ನಿಮ್ಮ ಮಾತನ್ನು ಕೇಳಿಸಿಕೊಂಡಂತಾಗುವುದಿಲ್ಲ.

Actually, ಮನಸು ಎಂಬುದು ಆಕಾರವಿಲ್ಲದ, ಸ್ವಂತಿಕೆಯಿಲ್ಲದ, ಯಾವ ಘನ ಉದ್ದೇಶವೂ ಇಲ್ಲದ, ಪೂರ್ವಾಗ್ರಹಗಳೂ ಇಲ್ಲದ, ಸದಾ ನಮ್ಮೊಂದಿಗೆ ಇದ್ದೂ ಇಲ್ಲದಂತಿರುವ ಒಂದು ವಿಚಿತ್ರ ಅಸ್ತಿತ್ವ. ಅದನ್ನು ನೀವು ಹೇಗೆ encourage ಮಾಡುತ್ತೀರೋ ಹಾಗೇ ಬೆಳೆದುಕೊಳ್ಳುತ್ತ ಹೋಗುತ್ತದೆ. ಅದಕ್ಕೆ ಸ್ವಂತಿಕೆ ಇರುವುದಿಲ್ಲ. ದೇವರಿಗೆ ಹಚ್ಚಿದರೆ ದೇವರಿಗೆ, ಬಾಟಲಿಗೆ ಹಚ್ಚಿದರೆ ಬಾಟಲಿಗೆ, ಅಧ್ಯಯನಕ್ಕೆ ಹಚ್ಚಿದರೆ ಅಧ್ಯಯನಕ್ಕೆ- ಹೀಗೆ ಯಾವುದಕ್ಕೆ ಬೇಕಾದರೂ ಹಬ್ಬಿಕೊಂಡು ಹೋಗಿಬಿಡಬಲ್ಲ ಒಳ್ಳೆಯದು.

ಅಂಥ ಮನಸ್ಸನ್ನು ನೀವು ನಿರ್ಮಿಸಿಕೊಂಡ ಪ್ರಶಾಂತ ಏಕಾಂತದಲ್ಲಿ ಕೂಡಿಸಿಕೊಂಡು ನಿಮ್ಮ ವ್ಯಕ್ತಿತ್ವದ ಬಗ್ಗೆ ಪ್ರಶ್ನೆ ಕೇಳಿ. ನಾನು ಒಳ್ಳೆಯವನಾ ? ಸಮರ್ಥನಾ ? ತಂಟೆ ಕೋರನಾ ? ಬೇಜವಾಬ್ದಾರಿಯಾ ? ಉಡಾಫೆಯಾ ? ಕರುಣಿಯಾ ? ಮಖೇಡಿಯಾ ? ಒರಟನಾ ? ಅಹಂಕಾರಿಯಾದ ? ವಂಚಕನಾ ? ಪೆದ್ದನಾ ?ಭೋಳೆಯಾ ?ಚಾಲೂನಾ ? ತೆಪರನಾ ? ಗಮ್ಯಹೀನನಾ ? ವಿವೇಕಿಯಾ ? ಯಡವಟ್ಟನಾ ? ಪಡಪೋಸಿಯಾ ? ತಾಕತ್ತುಳ್ಳವನಾ ? ಕಷ್ಟ ನಾನಾಗೇ ತಂದುಕೊಂಡೆನಾ ? ಅದು ತಾನಾಗೇ ಬಂತಾ ? ಎದುರಿಸಲು ಸಿದ್ಧನಿದ್ದೇನಾ ? ಜಾಗ ಖಾಲಿ ಮಾಡುವವನಾ ?

ನಿಮ್ಮ ಪ್ರತಿ ಪ್ರಶ್ನೆಗೂ ಮನಸ್ಸು ಪ್ರಾಮಾಣಿಕವಾಗಿ ಉತ್ತರಿಸುತ್ತದೆ. ನೀವಾಗೇ ಒತ್ತಾಯಿಸದ ಹೊರತು ಮನಸು ಸುಳ್ಳು ಹೇಳುವುದಿಲ್ಲ. ನಮ್ಮ ಗುಣ-ಅವಗುಣಗಳೆರಡೂ ಅದಕ್ಕೆ ಗೊತ್ತಿರುತ್ತದೆ. you must allow it to speak.

ಅದು ಹೇಳಿದ ಸತ್ಯಗಳನ್ನು ಒಪ್ಪಿಕೊಳ್ಳಬೇಕು. ಗೆಳೆಯರು ಹೇಳಿದ್ದನ್ನ ಒಪ್ಪಿಕೊಳ್ಳಲು ಅಹಂಕಾರ ಅಡ್ಡ ಬರುತ್ತದೆ. ಆದರೆ ನಮ್ಮದೇ ಮನಸು ತುಂಬ ನೇರವಾಗಿ, ಸ್ಪಷ್ಟವಾಗಿ, ನಾವೊಬ್ಬರೇ ಇರುವಾಗ ಹೇಳುತ್ತದಾದ್ದರಿಂದ ಅಹಂಕಾರ ಮತ್ತು ನಾಚಿಕೆಗಳಿಲ್ಲದೆ ಅದರ ಅಭಿಪ್ರಾಯವನ್ನು ಒಪ್ಪಬಹುದು, ಈ ಕೆಲಸಕ್ಕೆ ಆತ್ಮ ಸಾಕ್ಷಿ, ಆತ್ಮ ವಿಮರ್ಶೆ, self analysis, ಹಾಳು-ಮೂಳು ಅಂತ ಯಾವ ಹೆಸರೂ ಕೊಟ್ಟು ಕೊಳ್ಳಬೇಡಿ. ಇದಕ್ಕಿಂತ ದೊಡ್ಡ ಮೆಡಿಟೇಷನ್‌ ಮತ್ತೊಂದಿಲ್ಲ. ಮನಸಿನೊಂದಿಗೆ ಮಾತಿಗಿಳಿಯಿರಿ. ಏನನ್ನೂ ಬರೆದಿಟ್ಟುಕೊಳ್ಳಲು ಯತ್ನಿಸಬೇಡಿ. ಅದು ಮತ್ತೆ ಏಕಾಂತ ಕೆಡಿಸುತ್ತದೆ.

ಸುಮ್ಮನೆ ಒಂದು issue, ಒಂದು ಪ್ರಶ್ನೆ ಕೈಗೆತ್ತಿಕೊಳ್ಳಿ. ನಾನು ಬೇಜವಾಬ್ದಾರಿಯಾ -ಅಂತ ಮನಸ್ಸಿನೆದುರು ಪ್ರಶ್ನೆಯಿಟ್ಟು ಸುಮ್ಮನಾಗಿ. ನೀವು ಜವಾಬ್ದಾರಿ ಮರೆತು ನಡೆದುಕೊಂಡ ಒಂದೊಂದು ಘಟನೆಯನ್ನು ಅದು ನಿಮ್ಮೆದುರು ಹರವುತ್ತ ಹೋಗುತ್ತದೆ. ಹೌದು, ನಾನು ಬೇಜವಾಬ್ದಾರಿ ಮನುಷ್ಯ ಅಂತ ಸಂಕೋಚವಿಲ್ಲದೆ ಒಪ್ಪಿಕೊಂಡಾದ ಮೇಲೆ, ಪ್ರತೀ ಸಲದ ನಿಮ್ಮ ಬೇಜವಾಬ್ದಾರಿ ವರ್ತನೆಗೆ ಒಂದೇ ಕಾರಣವಿತ್ತಾ ? ಬೇರೆಬೇರೆ ಕಾರಣಗಳಿದ್ದವಾ -ಅಂತ ಕೇಳಿಕೊಳ್ಳಿ. ಸಾಮಾನ್ಯವಾಗಿ ಕಾರಣ ಒಂದೇ ಇರುತ್ತದೆ.

ಉದಾಹರಣೆಗೆ ಯಾವುದೋ ವಿಲಾಸಕ್ಕೆ ಬಿದ್ದಿರುತ್ತೇವೆ. ನಮ್ಮೆಲ್ಲ ಜವಾಬ್ದಾರಿಯುತ ವರ್ತನೆಯನ್ನು ದಾರಿ ತಪ್ಪಿಸುವುದಕ್ಕೆ, just ಒಂದು ವಿಲಾಸ ಸಾಕು. ತಕ್ಷಣ ಅದನ್ನು ತಿರಸ್ಕರಿಸಿ ಬಿಡಿ. ನಿಮ್ಮ ವರ್ತನೆಯಲ್ಲಿ ಜವಾಬ್ಧಾರಿತನ ಬಂದುಬಿಡುತ್ತದೆ. ನಿಮ್ಮ ವಿಲಾಸ ಯಾವುದು ಎಂಬುದನ್ನು ಗುರುತಿಸುವ ಕೆಲಸ ಬುದ್ಧಿಗೆ ಬಿಡಿ. ‘ರಾತ್ರಿ ಎರಡು ಪೆಗ್‌ ಕಡಿಮೆ ಹಾಕಿದ್ದಿದದ್ದರೆ, ಬೆಳಗ್ಗೆ ಇಂಟರ್‌ವ್ಯೂ ಇನ್ನಷ್ಟು ಯಶಸ್ವಿಯಾಗಿ ಎದುರಿಸುತ್ತಿದ್ದೇನೆನೋ ? ’ ಅಂತ ನಿಮಗೆ ಅನ್ನಿಸುವುದು -ಮನಸ್ಸಿನೊಂದಿಗೆ ಏಕಾಂತದಲ್ಲಿ ಮಾತಿಗೆ ಕುಳಿತಾಗಲೇ.

ಅಲ್ಲಿ ನೀವು ಮಿದುಳಿಗೆ ಹಿರೇತನ ಕೊಟ್ಟಿರೋ? ‘ಅಯ್ಯೋ, ಎರಡು ಪೆಗ್‌ಗೆಲ್ಲ ಎಫಿಷಿಯನ್ಸಿ ಕಡಿಮೆ ಆಗಿಬಿಡುತ್ತಾ ? ಇಂಟರ್‌ವ್ಯೂ ಮಾಡಿದ ನನ್ಮಗಾನೇ ಸರಿಯಿರಲಿಲ್ಲ’ ಎಂಬ ಉತ್ತರ ಹುಡುಕಿ ಬಿಡುತ್ತದೆ. ಅದೇ ಮಾತನ್ನ ಗೆಳೆಯರಿಗೆ ಹೇಳಿಕೊಂಡಿರೋ? ಇರ್ಲಿ ಬಿಡು, ಗುರೂ, ಇನ್ನೊಂದು ಇಂಟರ್‌ ವ್ಯೂ ಸಿಗದೆ ಇರುತ್ತಾ ? ನಿಜವಾದ ಎಫಿಷಿಯನ್ಸಿ ಗೊತ್ತಾಗದೇ ಇರುತ್ತಾ ? ಅಂದು ಬಿಡುತ್ತಾರೆ. ಆದರೆ ತಿಳಿ ನೀರಿನಂಥ ಮನಸು ಮಾತ್ರ ಯಾರೂ ಇಲ್ಲದ ಏಕಾಂತದಲ್ಲಿ, ‘ನೀನು ಕುಡೀದೇನೇ ಹೋಗಿದ್ದಿದ್ರೆ ಪರ್‌ ಫಾರ್ಮೆನ್ಸ್‌ ಆದ್ಭುತವಾಗಿರ್ತಾ ಇತ್ತು’ ಅಂತ ಮುಖಕ್ಕೆ ಹೊಡೆದಂತೆ ಸತ್ಯ ಹೇಳಿ ಸುಮ್ಮನಾಗುತ್ತದೆ.

ಏಕಾಂತದಲ್ಲಿನ ಮನಸು ಇಂಥ ಸತ್ಯಗಳನ್ನು ಸಂಕೋಚವಿಲ್ಲದೆ ಹೇಳುವುದರಿಂದಲೇ ನಮಗೆ ಏಕಾಂತ ‘ಬೋರು ’ ಅನ್ನಿಸುತ್ತದೆ. ಅದು ಒಬ್ಬಂಟಿತನ ಅನ್ನಿಸುತ್ತದೆ. ನಾವು ಹೇಳಿಕೊಳ್ಳಬಯಸುವ ಸುಳ್ಳುಗಳಿಗೆ ನಮಗೆ ಕಂಪನಿ ಬೇಕು. ಗೆಳೆಯರ ನೆರವು, ಕಾಮದ ನೆರವು-ಹುಡುಕಿಕೊಂಡು ಹೋಗುತ್ತೇವೆ. ಸುಳ್ಳೇ ನಮ್ಮ ಸುತ್ತ ‘ಸದ್ದು-ಜಂಗುಳಿ’ ಸೃಷ್ಟಿಸಿಕೊಳ್ಳುತ್ತೇವೆ. ಯಾರೂ ಸಿಗದಿದ್ದರೆ ಯಾರಿಗಾದರೂ ಫೋನಾದರೂ ಮಾಡುತ್ತೇವೆ. ಸಿನೇಮಕ್ಕೆ ಹೊರಡುತ್ತೇವೆ. ಒಟ್ಟಿನಲ್ಲಿ ಕೋಣೆಯ ಕದ ತೆರೆದು ಬಿಡುತ್ತೇವೆ.

ನಮಗೆ ನಾವೇ ಎಂಥ ಮೋಸ ಮಾಡಿಕೊಳ್ಳುತ್ತೇವೆ: ಅಲ್ಲವಾ ?

(ಸ್ನೇಹಸೇತು: ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more