• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂಥ ವ್ಯತ್ಯಾಸವೇನಿಲ್ಲ ಜಿನ್ನಾ ಮತ್ತು ಆಡ್ವಾಣಿಯ ನಡುವೆ!

By Staff
|
Ravi Belagere on Thatskannada.com ರವಿ ಬೆಳಗೆರೆ
ಆಡ್ವಾಣಿ ದಡ್ಡರಾ?

At least, ಪ್ರವೀಣ್‌ ತೊಗಾಡಿಯಾ ಮತ್ತು ಆತನ ಪರಿವಾರದವರು ಹಾಗೆ ತಿಳಿದು ಕೊಂಡಂತಿದೆ! ಆದರೆ, ಯೋಚಿಸಿ ನೋಡಿ; ಆಡ್ವಾಣಿಯವರ ರಾಜಕೀಯ ಬದುಕಿನ ವಯಸ್ಸೇ ಅರ್ಧ ಶತಮಾನ ದಾಟಿದೆ. ಇವತ್ತಿಗೂ ಅವರ ಬುದ್ಧಿ ಮತ್ತು ದೇಹ ಅಲರ್ಟ್‌ ಆಗಿಯೇ ಇವೆ. ಅರುಳುಮರುಳು ಇನ್ನೂ ಅವರನ್ನು ಆವರಿಸಿಕೊಂಡಿಲ್ಲ. ಜೊತೆಗೆ, ಇವತ್ತಿನ ರಾಜಕೀಯ ಸ್ಥಿತ್ಯಂತರಗಳು ಹಾಗೂ ಸೂಕ್ಷ್ಮಗಳನ್ನೂ ಕೂಡ ಅವರು ಬೇರೆಲ್ಲರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.

ಅಂಥ ಮನುಷ್ಯ, ಅಷ್ಟೊಂದು ಅನುಭವದ ಮುತ್ಸದ್ಧಿ, ಪಾಕಿಸ್ತಾನದ ನೆಲದ ಮೇಲೆ ನಿಂತುಕೊಂಡು, ಯಾವ ಉದ್ದೇಶವೂ ಇಲ್ಲದೆ ಸುಖಾಸುಮ್ಮನೆ ಮಹಮ್ಮದ್‌ ಅಲಿ ಜಿನ್ನಾನನ್ನು ಸೆಕ್ಯುಲರ್‌ ಅಂತ ಹೊಗಳಿಬಿಡುತ್ತಾರೆಯೇ?ತಮ್ಮ ಮಾತು ಎಂತೆಂಥ ಪರಿಣಾಮಗಳನ್ನು ಉಂಟುಮಾಡಬಹುದು ಅನ್ನುವುದವರಿಗೆ ತಿಳಿದಿರಲಾರದೆ? ತಮ್ಮ ಪಕ್ಷದ ಪೋಷಕರ ಮನಃಸ್ಥಿತಿ ಅವರಿಗೆ ಗೊತ್ತಿಲ್ಲವೆ?ತೀರಾ ಅಷ್ಟೊಂದು ಪೆದ್ದರೆ ಅವರು?

Lal Krishna AdvaniActually, ಹೀಗಂದುಕೊಳ್ಳುವವರು ಪೆದ್ದರು, ಆಡ್ವಾಣಿಯಲ್ಲ! ಇವತ್ತಿನ ರಾಜಕಾರಣದಲ್ಲಿ. ನಮ್ಮ ದೇಶದಲ್ಲಿರುವ ಅತ್ಯಂತ ಚಾಣಾಕ್ಷ ರಾಜಕಾರಣಿಗಳ ಸಾಲಿನಲ್ಲಿ ಆಡ್ವಾಣಿ ಸುಲಭವಾಗಿ ನುಸುಳಬಲ್ಲರು. ಬಿಜೆಪಿಯಲ್ಲಂತೂ, ವಾಜಪೇಯಿ ಬಿಟ್ಟರೆ ಇರುವುದೇ ಒಬ್ಬ ಆಡ್ವಾಣಿ; ಆ ಮಟ್ಟದಲ್ಲಿ ನಿಲ್ಲುವ ಬುದ್ಧಿ ಮತ್ತೆ ಮತ್ತು stature ಇನ್ನೊಬ್ಬೇ ಒಬ್ಬ ನಾಯಕನೂ ಹುಡುಕಿದರೂ ಸಿಗಲಿಕ್ಕಿಲ್ಲ. ಬಿಜೆಪಿ ಇವತ್ತು ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯ ಅನ್ನಿಸುವಷ್ಟು ದೊಡ್ಡ ಮಟ್ಟಕ್ಕೆ ಬೆಳೆದುನಿಂತಿದ್ದರೆ, ಅದಕ್ಕೆ ಬಹುಮುಖ್ಯ ಕಾರಣ ಆಡ್ವಾಣಿ. ತೊಂಬತ್ತರ ದಶಕದ ಆರಂಭದಲ್ಲಿ ಗಾಳಿ ಯಾವ ಕಡೆ ಬೀಸುತ್ತಿದೆ ಅನ್ನುವುದನ್ನು ಚೆನ್ನಾಗಿ ಗುರುತಿಸಿ, ಕಾಂಗ್ರೆಸ್ಸೆಂಬ ಪುರಾತನ ಪಕ್ಷದ ನಾಯಕ ಮಣಿಗಳು ಸೆಕ್ಯುಲರಿಸಮ್ಮನ್ನು ಹ್ಯಾಗೆ ಹ್ಯಾಗೆಲ್ಲಾ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಅನ್ನುವುದನ್ನು ಅರ್ಥ ಮಾಡಿಕೊಂಡು, ಅದನ್ನೇ ಬಿಜೆಪಿಯ ಬುನಾದಿಗೊಂದು ಕಲ್ಲನ್ನಾಗಿ ಬಳಸಿದವರು ಅವರು. ರಥಯಾತ್ರೆಯ ಮೂಲಕ- ತಪ್ಪೋ ಸರಿಯೋ- ಹಿಂದೂಗಳದೊಂದು ಸೈನ್ಯ ಕಟ್ಟಿದವರು. ಆವತ್ತಿಗದು ತಮ್ಮ ರಾಜಕೀಯಕ್ಕೆ ಅಗತ್ಯ ಅಂತ ಅನ್ನಿಸಿತ್ತು, ಮಾಡಿದರು. ಮಾಡಿ ಗೆದ್ದರು. ಬಿಜೆಪಿ ಮೈಕೈ ತುಂಬಿಕೊಂಡಿತು. ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ಪಾರ್ಲಿಮೆಂಟಿನ ಸಿಂಹಾಸನದ ಮೇಲೂ ಕೂತೆದ್ದಿತು.

ಆದರೆ ಈಗ ಆಡ್ವಾಣಿ ಬದಲಾಗಿದ್ದಾರೆ. ರಥಯಾತ್ರೆಯ ಆ್ಯಂಗ್ರಿ ಓಲ್ಡ್‌ ಮ್ಯಾನ್‌ ಅಲ್ಲ ಅವರೀಗ. ಬಿಜೆಪಿ ಅನ್ನುವ ಪಕ್ಷ ಬರೀ ಹಿಂದುತ್ವವಾದವನ್ನು ಕಟ್ಟಿಕೊಂಡು ಭಾರತವನ್ನು ಆಳಲು ಸಾಧ್ಯವಿಲ್ಲ ಅಂತ ಅವರಿಗರ್ಥವಾಗಿದೆ. ಬಿಜೆಪಿ ಅಧಿಕಾರಕ್ಕೆ ಬರಬೇಕಿದ್ದರೆ, ನಿತೀಶ್‌ಕುಮಾರ್‌, ಜಾರ್ಜ್‌ಫರ್ನಾಡೀಸ್‌, ಚಂದ್ರಬಾಬುನಾಯ್ಡು, ಜಯಲಲಿತಾ, ಇಂಥ ಅನೇಕ ಹೆಗಲುಗಳ ಆಸರೆ ಬೇಕೇಬೇಕು. ಅನ್ನುವುದು ಅವರಿಗೆ ಗೊತ್ತಾಗಿದೆ. ತಮ್ಮ ಮುಖಕ್ಕೆ ಹಿಂದುತ್ವದ ಕುಂಕುಮ ಮೆತ್ತಿಕೊಂಡಿದ್ದರಿಂದಲೇ ವಾಜಪೇಯಿ ಜೊತೆಗಿನ ರೇಸಿನಲ್ಲಿ ತಾವು ಸೋತಿದ್ದು ಅನ್ನುವುದೂ ಮನವರಿಕೆಯಾಗಿದೆ! ಸಮ್ಮಿಶ್ರ ಸರ್ಕಾರದ ಯುಗದಲ್ಲಿ ತಮ್ಮ ಮಿಲಿಟೆಂಟ್‌ ಹಿಂದುತ್ವವಾದೀ ನಿಲುವಿಗೆ ಜಾಗವಿಲ್ಲ ಅನ್ನುವುದು ಖಾತರಿಯಾಗಿದೆ. ಹಾಗಾಗೇ, ಈಗವರು ವಾಜಪೇಯಿ ಧರಿಸಿದ್ದಂಥದ್ದೇ ಒಂದು moderate ಮುಖವಾಡಕ್ಕೆ ಆರ್ಡರ್‌ ಕೊಟ್ಟು ಕೂತಿದ್ದಾರೆ!

ಬಹುಶಃ ಆಡ್ವಾಣಿ ವೈಯಕ್ತಿಕವಾಗಿ ಹಿಂದೂ ಮೂಲಭೂತವಾದಿಯೇನಿರಲಿಕ್ಕಿಲ್ಲ. ತಮ್ಮ ಮನೆಯಲ್ಲವರು ತೀರಾ ಆರೆಸ್ಸೆಸ್‌ ಹಾಗೂ ವಿಎಚ್‌ಪಿಗಳ ಹಾಗೆ ಮುಸ್ಲಿಮರನ್ನು ದ್ವೇಷಿಸಲಿಕ್ಕಿಲ್ಲ. ಅವರಿಗೆ ವೈಯಕ್ತಿಕ ನೆಲೆಯಲ್ಲಿ ಅನೇಕ ಮುಸ್ಲಿಂ ಫ್ರೆಂಡುಗಳಿರುವುದೇ ಇದಕ್ಕೆ ಸಾಕ್ಷಿ. ಅವರ ಕುಖ್ಯಾತ ರಥ ಯಾತ್ರೆಯಲ್ಲಿ ಅವರ ರಥದ ಸಾರಥ್ಯವಹಿಸಿದ್ದೂ ಒಬ್ಬ ಮುಸ್ಲಿಮನೇ ಅನ್ನುವುದು ಇನ್ನೊಂದು ಸಾಕ್ಷಿ. ಸಾಲದ್ದಕ್ಕೆ, ತಾವು ದೇವಸ್ಥಾನಗಳಿಗೆ ಹೋಗುವುದು ಕಡಿಮೆ ಅಂತಲೂ, ಮನೆಯಲ್ಲಿ ಪೂಜೆ- ಪುನಸ್ಕಾರಗಳು ಅಪರೂಪ ಅಂತಲೂ ಅವರೇ ಹೇಳಿಕೊಂಡಿದ್ದಾರೆ. ಅಂದರೆ, ಆಡ್ವಾಣಿ ಅನ್ನುವ ಮನುಷ್ಯ ಮೂಲಭೂತವಾಗಿ ಕಟ್ಟಾ ಹಿಂದುತ್ವವಾದಿಯೇನಲ್ಲ. ಆದರೆ, ಹಿಂದುತ್ವದ ಬಹಿರಂಗ ಮುಖ ಅವರ ರಾಜಕೀಯ ಬದುಕಿಗೆ ಅನಿವಾರ್ಯವಾಗಿತ್ತು. ಅಂಥದ್ದೊಂದು ಐಡೆಂಟಿಟಿಯನ್ನು ಬೆಳೆಸಿಕೊಳ್ಳುವುದರಿಂದ ಮಾತ್ರವೇ ಅವರಿಗೆ ಬಿಜೆಪಿಯಲ್ಲಿ ಬೆಳೆಯುವುದು ಸಾಧ್ಯವಿತ್ತು. ಹಾಗಾಗಿ, ನಿಜವಾದ ಆರೆಸ್ಸೆಸ್ಸಿಗರಿಗಿಂತಲೂ, ಭಜರಂಗಿಗಳಿಗಿಂತಲೂ ಉಗ್ರವಾದ ಹಿಂದೂ ಸೇನಾನಿಯಾಗಿ ಬಿಟ್ಟರು.

ಜಿನ್ನಾದಾದರೂ ಇದೇ ಕಥೆ. ಜಿನ್ನಾ ಎಂದೂ ಕೂಡ ಒಬ್ಬ ಕಟ್ಟಾ ಮುಸ್ಲಿ ಮನಾಗಿರಲಿಲ್ಲ. ಅವನೊಬ್ಬ ನಾಸ್ತಿಕ. ದೇವರಲ್ಲೇ ಆತನಿಗೆ ನಂಬಿಕೆಯಿರಲಿಲ್ಲ. ವಿದೇಶಗಳಲ್ಲೇ ಓದಿ ಬೆಳೆದು ಬಂದವನಾದ್ದರಿಂದ, ಒಬ್ಬ ಕಟ್ಟಾಮುಸ್ಲಿಮನ ಮನೆಯಲ್ಲಿ ನಡೆಯಬೇಕಾದ ಯಾವ ಧಾರ್ಮಿಕ ವಿಧಿಗಳೂ ಜಿನ್ನಾನ ಮನೆಯಲ್ಲಿ ನಡೆಯುತ್ತಿರಲಿಲ್ಲ. ಆದರೂ ಜಿನ್ನಾ ಭರತ ಖಂಡದ ಸಮಸ್ತ ಕಟ್ಟಾ ಮುಸ್ಲಿಮರ ನಾಯಕನಾಗಿಬಿಟ್ಟ! ತನ್ನ ರಾಜಕೀಯ ಭವಿಷ್ಯದ ದೃಷ್ಟಿಯಿಂದ- ಮತ್ತು, ನೆಹರು ತನ್ನ ಮೇಲೆ ರಾಜ್ಯಭಾರ ಮಾಡುವುದನ್ನು ತಪ್ಪಿಸಿ ಕೊಳ್ಳುವ ಉದ್ದೇಶದಿಂದ-ಅವನಿಗೆ ಆ ಮುಖವಾಡ ಧರಿಸುವುದು ಅನಿವಾರ್ಯವಾಗಿತ್ತು.

ಈ ಹಿನ್ನೆಲೆಯಲ್ಲಿ ನೋಡಿದಾಗ, ಬಹುಶಃ ಜಿನ್ನಾ- ಆಡ್ವಾಣಿ ಇಬ್ಬರೂ ಸೇಮ್‌ ಟು ಸೇಮ್‌! ಜಿನ್ನಾವನ್ನು ‘ಸೆಕ್ಯುಲರ್‌’ ಅಂತ ಆಡ್ವಾಣಿ ಬಣ್ಣಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ, ಹಾಗೆ ಬಣ್ಣಿಸಿದ್ದರ ಟೈಮಿಂಗ್‌ ಮಾತ್ರ ಇಂಟರೆಸ್ಟಿಂಗ್‌.

ಭಾರತದ ಜನಸಂಖ್ಯೆಯಲ್ಲಿ ಎಂಬತ್ತೆೈದು ಪರ್ಸೆಂಟ್‌ ಹಿಂದೂಗಳೇ ಇದ್ದರೂ, ಎಲ್ಲ ಹಿಂದುಗಳೂ ಬಿಜೆಪಿಗಳಲ್ಲ, ಆರೆಸ್ಸೆಸ್ಸಿಗರಲ್ಲ. In fact, ಮುಕ್ಕಾಲು ಭಾಗಕ್ಕಿಂತಲೂ ಹೆಚ್ಚು ಹಿಂದೂಗಳು ಆರೆಸ್ಸೆಸ್ಸಿನಿಂದಾಚೆಗೇ ಇರುವಂಥವರು. ಅಂದರೆ, ಹಿಂದುತ್ವವನ್ನು ಅಡ್ವಾಣಿಯಾಗಲೀ, ಬಿಜೆಪಿಯಾಗಲೀ ನೇರವಾಗಿ ಮಾರಾಟ ಮಾಡಲು ಸಾಧ್ಯವಿರುವುದು ಇಡೀ ಭಾರತದ ಕೇವಲ ಹತ್ತು- ಹದಿನೈದು ಪರ್ಸೆಂಟ್‌ ಜನರಿಗೆ ಮಾತ್ರ. ಇದಕ್ಕೆ ವ್ಯತಿರಿಕ್ತವಾಗಿ, ಮೈನಾರಿಟಿಗಳ ಹದಿನೈದು ಪರ್ಸೆಂಟ್‌ ಪೈಕಿ ಬಹುತೇಕ ಎಲ್ಲವೂ ಬಿಜೆಪಿಯೇತರ ಪಕ್ಷಗಳಿಗೇ ಮೀಸಲು. ಇದರರ್ಥ ; ಬರೀ ಹಿಂದುತ್ವವಾದದಿಂದ ಅಧಿಕಾರದ ಗದ್ದುಗೆ ಪಡೆಯುವುದು ಅಸಾಧ್ಯ!

ವಾಜಪೇಯಿಗಿದು ಮುಂಚೆಯೇ ಅರ್ಥವಾಗಿಬಿಟ್ಟಿತ್ತು. ಒಂದು moderate ಇಮೇಜು ಬೆಳೆಸಿಕೊಂಡು, ಎಲ್ಲ ಪಕ್ಷದವರಿಗೂ ಸಲ್ಲುವವರಾಗಿ ನಿಂತು, ಅಧಿಕಾರ ದಕ್ಕಿಸಿಕೊಂಡರು. ಈಗ, ಅವರು ಅಧಿಕಾರ ಕಳೆದುಕೊಂಡ ಮೇಲೆ, ಮತ್ತೆ ಬಿಜೆಪಿಯಲ್ಲಿ ತೊಗಾಡಿಯಾಗಳ-ಆರೆಸ್ಸೆಸ್‌ಗಳ ಗಾಳಿ ಜೋರಾಗಿ ಬೀಸುತ್ತಿದೆ. ಕಟ್ಟಾ ಹಿಂದುತ್ವವಾದಿಗಳು ಪಕ್ಷವನ್ನು ಹೈಜಾಕ್‌ ಮಾಡತೊಡಗಿದ್ದಾರೆ. ಇದರ ಅಪಾಯ ಆಡ್ವಾಣಿ-ವಾಜಪೇಯಿ ಇಬ್ಬರಿಗೂ ಗೊತ್ತಿದೆ. ಇದನ್ನು ತಡೆಯಲಿಕ್ಕಿರುವ ಒಂದೇ ದಾರಿಯೆಂದರೆ, ಆಡ್ವಾಣಿ ಆದಷ್ಟೂ ಬೇಗ ಮತ್ತು ಆದಷ್ಟೂ credible ಅನ್ನಿಸುವಂಥ ಸೆಕ್ಯುಲರ್‌ ಇಮೇಜು ಬೆಳೆಸಿಕೊಳ್ಳುವುದು; ಮತ್ತು ಅದರ ಆಧಾರದ ಮೇಲೆ ಆರೆಸ್ಸೆಸ್‌ಗಳ ಜೊತೆ ನೇರವಾಗಿ ಸಂಘರ್ಷಕ್ಕಿಳಿಯುವುದು. ಆರೆಸ್ಸೆಸ್‌- ವಿಎಚ್‌ಪಿಗಳಿಲ್ಲದೆಯೂ ಬಿಜೆಪಿ ಉಳಿದು ಬೆಳೆಯಬಲ್ಲದು ಅನ್ನುವ ಕಾನ್ಫಿಡೆನ್ಸ್‌ ತೋರಿಸಿಕೊಳ್ಳುವುದು.

ಆಡ್ವಾಣಿಗಿದು ಅಸಾಧ್ಯವೇನಲ್ಲ. ತೊಗಾಡಿಯಾ ಅಂಡ್‌ ಕೋ ಅದೆಷ್ಟೇ ದಾಂಧಲೆ ಮಾಡಿದರೂ, ಇವತ್ತಿಗೂ ಬಿಜೆಪಿಯ ಮುಕ್ಕಾಲು ಭಾಗ ಅಡ್ವಾಣಿ ಹಾಗೂ ವಾಜಪೇಯಿಯವರ ಬೆನ್ನಿಗೇ ಇದೆ.

ಇದು ಗೊತ್ತಿರುವುದರಿಂದಲೇ ಆಡ್ವಾಣಿ ಒಂದು ರಿಸ್ಕ್‌ತೆಗೆದುಕೊಂಡಿದ್ದಾರೆ. ಪಾಕಿಸ್ತಾನದ ಕರೆದ ತಕ್ಷಣ ಆರೆಸ್ಸೆಸ್ಸಿಗರು ಬೇಡ ಅಂತ ಹೇಳಿದ್ದನ್ನೂ ಲೆಕ್ಕಿಸದೆ, ಆ ದೇಶದ ಪ್ರವಾಸಕ್ಕೆ ಹೋಗಿದ್ದಾರೆ. ಜಿನ್ನಾನನ್ನು ಸೆಕ್ಯುಲರ್‌ ಅಂತ ಕರೆಯುವುದರ ಮೂಲಕ ತಾವೂ ಸೆಕ್ಯುಲರ್‌ ಅನ್ನಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಭಾರತ-ಪಾಕಿಸ್ತಾನಗಳ ಮಧ್ಯದ ಸಂಬಂಧ ಕೆಡುವುದಿದ್ದರೆ ಅದು ಮೂಲಭೂತ ವಾದಿಗಳಿಂದ ಮಾತ್ರವೇ ಹೊರತು ಮತ್ಯಾರಿಂದಲೂ ಅಲ್ಲ ಅನ್ನುವ ಮೂಲಕ ಪರೋಕ್ಷವಾಗಿ ವಿಎಚ್‌ಪಿಯನ್ನು ಚುಚ್ಚಿದ್ದಾರೆ. ತಾವು ಭಾರತದ ಪ್ರಧಾನಿಯಾಗಲಿಕ್ಕೆ ಎಲ್ಲ ರೀತಿಯಲ್ಲೂ ಅರ್ಹರು ಅನ್ನುವ ಇಮೇಜನ್ನು ಜಗತ್ತಿನೆದುರು-ಮತ್ತು ಅದಕ್ಕಿಂತಲೂ ಮುಖ್ಯವಾಗಿ, ಎನ್‌ಡಿಎ ಮಿತ್ರ ಪಕ್ಷಗಳೆದುರು-ಢಾಳಾಗಿ ಬಿಚ್ಚಿಡುವ ಯತ್ನ ಮಾಡಿದ್ದಾರೆ. ತಮ್ಮ ಮಾತಿಗೆ, ನಡವಳಿಕೆಗಳಿಗೆ ತಮ್ಮ ಸಹಸಂಘಿಗಳು ಹ್ಯಾಗೆ ಉರಿದುಬೀಳುತ್ತಾರೆ ಅನ್ನುವುದು ಗೊತ್ತಿದ್ದೂ ಹೀಗೆ ಮಾಡಿದ್ದಾರೆ. ಯಾಕೆಂದರೆ, ಅವರು ಉರಿದುಬೀಳುವುದೇ ಅವರಿಗೆ ಬೇಕಾಗಿದೆ!

ಹಾಗಂತ ಆಡ್ವಾಣಿಯವರು ಏಕಾಏಕಿ ತಮ್ಮ ಹಿಂದುತ್ವದ ವೋಟ್‌ಬ್ಯಾಂಕನ್ನೇನೂ ಪೂರ್ತಿಯಾಗಿ ಮರೆತಿಲ್ಲ. ಜಿನ್ನಾನನ್ನು ಹೊಗಳಿದ ಬೆನ್ನಲ್ಲೇ ಅವರು ಪಾಕಿಸ್ತಾನದಲ್ಲಿ ದೇವಸ್ಥಾನವೊಂದಕ್ಕೆ ಹೋಗಿ, ಅದರ ಜೀರ್ಣೋದ್ಧಾರದ ಕೆಲಸವನ್ನು ಉದ್ಘಾಟನೆ ಮಾಡಿ ಬಂದಿದ್ದಾರೆ. ರಾಜಕೀಯದ ಮಟ್ಟಿಗೆ ಇದೊಂದು historical event. ಇದುವರೆಗೂ ಯಾವ ರಾಜಕೀಯ ಮುಖಂಡರೂ ಬೇರೊಂದು ದೇಶದಲ್ಲಿ ದೇವಸ್ಥಾನವನ್ನಾಗಲೀ- ಮಸೀದಿಯನ್ನಾಗಲೀ ಉದ್ಘಾಟನೆ ಮಾಡಿದ ಉದಾಹರಣೆಯಿಲ್ಲ. Its against political ethics. ಆದರೆ ಆಡ್ವಾಣಿ ಮಾಡಿದ್ದಾರೆ. ಯಾಕೆಂದರೆ, ಹೀಗೆ ಮಾಡುವ ಮೂಲಕ, ಪಾಕಿಸ್ತಾನದಲ್ಲಿರುವ ಹಿಂದೂಗಳ ಜವಾಬ್ದಾರಿ ಭಾರತದ್ದು ಅನ್ನುವ, ಮತ್ತು ಭಾರತ-ಪಾಕಿಸ್ತಾನಗಳೆರಡೂ ನಿಸ್ಸಂದೇಹವಾಗಿ ಎಂದೆಂದೂ ಒಂದಾಗಲಾರದ ಎರಡು ದೇಶಗಳು ಅನ್ನುವ ಸೂಕ್ಷ್ಮ ಸಂದೇಶವನ್ನವರು ಕೊಟ್ಟಿದ್ದಾರೆ! ಜಿನ್ನಾ ವಿಷಯದಲ್ಲಿ ಸೆಕ್ಯುಲರ್‌ ಕಾರ್ಡನ್ನು ಬಳಸಿದ ಅವರು, ದೇವಸ್ಥಾನದ ವಿಷಯದಲ್ಲಿ ತಮ್ಮ ಹಿಂದುತ್ವದ ಕಾರ್ಡನ್ನೂ ಅತ್ಯಂತ ಸಮರ್ಥವಾಗಿ ಬಳಸಿದ್ದಾರೆ. Hes a seasoned politician!

ಈಗ ಬಿಜೆಪಿ-ಆರೆಸ್ಸೆಸ್‌ ಮಧ್ಯೆ ಅಖಾಡಾ ಸಿದ್ಧವಾಗಿದೆ. ಕುಸ್ತಿಯ ಕಣದ ಸುತ್ತಲೂ ಎನ್‌ಡಿಎ ಮಿತ್ರ ಪಕ್ಷಗಳು ಬಿಟ್ಟ ಕಣ್ಣು ಬಿಟ್ಟುಕೊಂಡು ಕೂತಿವೆ. ಹೋರಾಟ ಶುರುವಾಗಲಿದೆ. ಹಂಡ್ರೆಡ್‌ ಪರ್ಸೆಂಟ್‌ ಎಂಟರಟೈನ್‌ಮೆಂಟ್‌ ಗ್ಯಾರಂಟಿ; ಟೀವಿ ಆನ್‌ ಮಾಡಿ ಇಟ್ಟುಕೊಳ್ಳಿ!

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more