• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಿಡ್ಡ ಲಂಗದ ಸಾನಿಯಾ ವಿರುದ್ಧ ಗಡ್ಡದ ಗುರುಗಳ ಗುಟುರು!

By Staff
|
Ravi Belagere on Thatskannada.com ರವಿ ಬೆಳಗೆರೆ
ಸಾನಿಯಾಳ ಡ್ರೆಸ್ಸು ಸರಿ ಇಲ್ಲ! she looks indecent.

ಹಾಗಂತ ನಮ್ಮ ದೇಶದ ಕೆಲವು ಸ್ವಯಂ ಘೋಷಿತ ಮುಸ್ಲಿಂ ಮುಖಂಡರುಗಳು ಕಿಡಿಕಿಡಿಯಾಗಿದ್ದಾರೆ. ಮುಸ್ಲಿಂ ಹುಡುಗಿಯಾಬ್ಬಳು ತೀರಾ ಹಾಗೆಲ್ಲಾ ಗಿಡ್ಡ ಸ್ಕರ್ಟು-ಟೈಟ್‌ ಟೀ ಷರ್ಟು ಹಾಕಿಕೊಂಡು ಆಡುವುದಾ? ತನ್ನ ಧರ್ಮದ ಚೌಕಟ್ಟು, sensibility ಅವಳಿಗೆ ಗೊತ್ತಿರಬೇಕು. ತನ್ನಂಥ ಕೋಟ್ಯಂತರ ಹುಡುಗಿಯರಿಗೆ ಮಾದರಿಯಾಗಬಲ್ಲವಳಿಗೆ ಒಂದಿಷ್ಟು ಜವಾಬ್ದಾರಿಯಿರಬೇಕು. ಮೈ ಕಾಣುವಂತೆ ಬಟ್ಟೆ ಧರಿಸಿ ಕಣಕ್ಕಿಳಿಯಬೇಕೆಂಬ ನಿಯಮವೇನೂ ಟೆನಿಸ್‌ನಲ್ಲಿ ಇಲ್ಲವಲ್ಲ? ಅಂದ ಮೇಲೆ ಯಾಕ್ಹೀಗೆ ಸಿನಿಮಾ ಸ್ಟಾರ್‌ ಥರ ಥಳುಕಬೇಕು?

ಧರ್ಮವನ್ನು ಮೂಗಿನೆದುರು ಇಟ್ಟು ಕೊಂಡು ನೋಡಿದಾಗ ಬಹುಶಃ ಈ ಎಲ್ಲ ಆಕ್ಷೇಪಗಳೂ-ಆಕ್ರೋಶಗಳೂ ಸರಿ ಅಂತಲೇ ಅನ್ನಿಸುತ್ತವೆ. ಸಾನಿಯಾ ಸ್ವತಃ ತಾನೊಬ್ಬ ದೈವಭಕ್ತೆ ಅಂತಲೂ ಧರ್ಮದ ಕಟ್ಟಾ ಅನುಯಾಯಿ ಅಂತಲೂ ಹೇಳಿಕೊಂಡಿರುವುದರಿಂದ, ಅವಳು ಧರ್ಮದ ಕಟ್ಟಳೆಗಳನ್ನು ಪಾಲಿಸಲೇ ಬೇಕು ಅಂತಲೂ ಅನ್ನಿಸುತ್ತದೆ.

ಆದರೆ, ಆಟದಲ್ಲಿ ಧರ್ಮಕ್ಕೆ ಜಾಗವಿರುವುದಿಲ್ಲ ಅನ್ನುವುದನ್ನು ಮುಲ್ಲಾಗಳು ಮರೆತು ಬಿಡುತ್ತಾರೆ! ರಷ್ಯಾದಿಂದ ಜರ್ಮನಿಯಿಂದ ಅಷ್ಟೆಲ್ಲಾ ಹುಡುಗಿಯರು ಬಂದು ಟೆನಿಸ್‌ ಆಡುತ್ತಾರಲ್ಲಾ, ಅವರದು ಯಾವ ಧರ್ಮ ಅಂತ ಯಾರಿಗಾದರೂ ಗೊತ್ತಾ? ಅವರಲ್ಲಿ ಮುಸ್ಲಿಮರೂ ಇರಬಹುದು-ಕ್ರಿಶ್ಚಿಯನ್ನರೂ ಇರಬಹುದು, ಬೇರೆ ಮತಗಳವರೂ ಇರಬಹುದು. ಆದರೆ ಅವರು ಅದನ್ನು ತಮ್ಮ ಶರಟಿನ ತೋಳಿನ ಮೇಲೆ ಲಾಂಛನ ಮಾಡಿಕೊಂಡು ಧರಿಸುವುದಿಲ್ಲ. ಅಗಾಸ್ಸಿಯ ಆಟ ನೋಡಿ ಬೆರಗಾಗುವ ಜನ, ಅವನ ಧರ್ಮ ಯಾವುದಿರಬಹುದು ಅಂತ ಚಿಂತಿಸುತ್ತಾ ಕೂರುವುದಿಲ್ಲ. ಬರ್ಟೋಲಿ ಅನ್ನುವ ಹುಡುಗಿ ವಿರುದ್ಧ ಸಾನಿಯಾ ಗೆದ್ದಾಗ, ಕ್ರಿಶ್ಚಿಯನ್‌ ಹುಡುಗಿಯೆದುರು ಮುಸ್ಲಿಂ ಹುಡುಗಿಯಾಬ್ಬಳು ಗೆದ್ದು ಬಿಟ್ಟಳು ಅಂತ ಯಾರೂ ಯೋಚಿಸುವುದಿಲ್ಲ.

ಆಟ ಅನ್ನುವುದು ಧರ್ಮವನ್ನೂ ಮೀರಿದ್ದು. ಅದು ಮನುಷ್ಯರ ದೇಹ-ಮನಸ್ಸು-ಮತ್ತು ಕೌಶಲಗಳ ಮಧ್ಯದ ಸ್ಪರ್ಧೆ. ಅಲ್ಲಿ ಜಾಗವಿರುವುದು ಈ ಮೂರು ಅಂಶಗಳಿಗೆ ಮಾತ್ರ. ಇಂಡಿಯಾದ ಕ್ರಿಕೆಟ್‌ ಟೀಮಿನಲ್ಲಾದರೆ, ಮೂವರು ಮುಸಲ್ಮಾನರು -ಒಬ್ಬ ಸರ್ದಾರ್ಜಿ- ಇಬ್ಬರು ಕ್ರಿಶ್ಚಿಯನ್ನರು-ಐದು ಜನ ಹಿಂದೂಗಳು ಇದ್ದಾರೆ ಅಂತ ನಾವು ಲೆಕ್ಕ ಹಾಕಿಬಿಡುತ್ತೇವೆ; ಯಾಕೆಂದರೆ ಸ್ವಭಾವತಃ ನಮಗೆ ನಮ್ಮ ವರ ಜಾತಿ-ಮತ ಊಹಿಸುವುದು ಗೊತ್ತು. ಹೆಸರು ಕೇಳಿದರೆ ಸಾಕು, ಇವನು ಇದೇ ಕೋಮಿನವನು ಅಂತ ಥಟ್ಟನೆ ಗುರುತಿಸಿಬಿಡುತ್ತೇವೆ. ಆದರೆ ಬಿಂಬಾಬ್ವೆ ಅಥವಾ ಶ್ರೀಲಂಕಾ ತಂಡದಲ್ಲಿರುವ ಆಟಗಾರರ ಜಾತಿಗಳು ಒಳಪಂಗಡಗಳು ನಮಗೆ ಗೊತ್ತೆ? ಇಂಗ್ಲಂಡಿನ ಫುಟ್‌ಬಾಲ್‌ ಟೀಮಿನಲ್ಲಿ ಒಟ್ಟು ಎಷ್ಟು ಜಾತಿಯ ಆಟಗಾರರಿದ್ದಾರೆ ಅನ್ನುವುದು ಗೊತ್ತೆ?ಇಲ್ಲ ; ಅದನ್ನು ನಾವು ಊಹಿಸಲಾರೆವು. ಯಾಕೆಂದರೆ ಅವರ ಹೆಸರಿನಲ್ಲಿ, ದಿರಿಸಿನಲ್ಲಿ, ಆಟದಲ್ಲಿ, ಮುಖದಲ್ಲಿ, ನಡವಳಿಕೆಯಲ್ಲಿ, ಮಾತಿನಲ್ಲಿ ಅವರ ಜಾತಿಯ-ಧರ್ಮದ ಸೂಚನೆಗಳಿರುವುದಿಲ್ಲ. ಬಹುಶಃ ಬೇರೆ ದೇಶದ ಜನಕ್ಕೆ ನಮ್ಮ ಟೀಮಿನ ಬಗ್ಗೆಯೂ ಹೀಗೇ ಆಗಬಹುದು; ಅವರಿಗೂ ನಮ್ಮ ಆಟಗಾರರ ಧರ್ಮದ ಬಗ್ಗೆ ತಿಳಿಯದಿರಬಹುದು. ಯಾಕೆಂದರೆ, ಹೆಸರನ್ನು ಹೊರತುಪಡಿಸಿದಂತೆ ನಮ್ಮವರೂ ಕೂಡ ತಮ್ಮ ಧರ್ಮವನ್ನು ಎದೆಯ ಮೇಲಿನ ಆಭರಣದಂತೆ ಧರಿಸುವುದಿಲ್ಲ.

Sania Mirzaಆಟ ಇರುವುದೇ ಹೀಗೆ. ಅದು ಹೀಗೇ ಇರಬೇಕು ಕೂಡ.

ಮುಸ್ಲಿಂ ಮುಖಂಡರು ಹೇಳಿರುವ ಹಾಗೆ ನಾಳೆ ಸಾನಿಯಾ ಏನಾದರೂ ಅವರಿಗೊಪ್ಪಿಗೆಯಾಗುವಂಥ ಡ್ರೆಸ್ಸನ್ನೂ-ಧರ್ಮದ ಲಾಂಛನವನ್ನೂ ಧರಿಸಿಬಿಟ್ಟರೆ, ಅವಳ ಆಟದಲ್ಲಿ ಅವಳ ಕೌಶಲ್ಯಕ್ಕಿಂತ ಅವಳ ಧರ್ಮ ನಮ್ಮ ಗಮನ ಸೆಳೆಯುತ್ತದೆ. Sania ceases to be a player. ಆಟದ ಮುಖ್ಯವಾಹಿನಿಯಿಂದ ಅವಳು ಹೊರಬೀಳುತ್ತಾಳೆ. ನಾಳೆ ಜರ್ಮನಿಯ ಯಹೂದಿಯಾಬ್ಬಳು ತಲೆಗೆ ಸ್ಕಾರ್ಫ್‌ ಕಟ್ಟಿಕೊಂಡು ಕಣಕ್ಕಿಳಿಯಬಹುದು ಮತ್ತಾವುದೋ ದೇಶದ- ಧರ್ಮದ ಹುಡುಗಿಯಾಬ್ಬಳು ತನ್ನ ಧರ್ಮದಲ್ಲಿ ಬಟ್ಟೆಯೇ ನಿಷಿದ್ಧ ಅಂತನ್ನುವ ಕಾರಣ ಮುಂದೊಡ್ಡಿ ಬರೀ ಕೈಯಲ್ಲೊಂದು ರ್ಯಾಕೆಟ್‌ ಹಿಡಿದು ಕೋರ್ಟಿ ಗಿಳಿಯಬಹುದು.

ಹೀಗೆಲ್ಲಾ ಆಗಬಹುದು ಅನ್ನುವ ಆತಂಕವಿದ್ದಿದ್ದರಿಂದಲೇ ಎಲ್ಲ ಆಟಗಳೂ ತಮತಮಗೆ ಹೊಂದುವಂಥದ್ದೊಂದು ಡ್ರೆಸ್‌ ಕೋಡ್‌ ರೂಪಿಸಿಕೊಂಡವು. ಚೆಡ್ಡಿ-ಟೀಷರ್ಟ್‌ ಹಾಕಿ ಕೊಂಡು ಕೂಡ ಕ್ರಿಕೆಟ್‌ ಆಡುವುದು ಕಡ್ಡಾಯವಾಗಿ ದೊಗಲೆ-ದೊಗಲೆ ಪ್ಯಾಂಟು-ಶರ್ಟು ಧರಿಸಿ ಆಡಬೇಕೆಂಬ ನಿಯಮ ಜಾರಿ ಮಾಡಲಾಯಿತು. ಸ್ಕಿನ್‌-ಟೈಟ್‌ ಫುಲ್‌ ಸೂಟ್‌ ಧರಿಸಿ ಸ್ವಿಮ್‌ ಮಾಡಬಹುದಾದರೂ, ಬಟ್ಟೆ ಮತ್ತು ನೀರಿನ ನಡುವಿನ friction ಂದಾಗಿ ಈಜುಗಾರರ ಸಾಮರ್ಥ್ಯ ಕುಗ್ಗುತ್ತದಾದ್ದರಿಂದ, ಈಜು ಸ್ಪರ್ಧೆಗೆ swim suitಗಳನ್ನು ಕಡ್ಡಾಯ ಮಾಡಲಾಯಿತು. ಹೀಗೆ ಪ್ರತಿಯಾಂದು ಆಟಕ್ಕೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದೊಂದು ಮೂಲ ಭೂತ ಡ್ರೆಸ್‌ ಕೋಡ್‌ ಹುಟ್ಟಿ ಕೊಂಡಿತು.

ಟೆನಿಸ್‌ನಲ್ಲಿ ಮೊದಮೊದಲೆಲ್ಲಾ ಹುಡುಗಿಯರಿಗೆ ಈಗಿನಂಥ ಗಿಡ್ಡ- ಸ್ಕರ್ಟು-ಗಿಡ್ಡ ಟೀಶರ್ಟು ಇರಲಿಲ್ಲ. ಬಿಲ್ಲಿ ಜೀನ್‌ ಕಿಂಗ್‌ರಂಥವರ ಕಾಲದ ವಿಡಿಯೋಗಳನ್ನು ನೋಡಿ; ಆಗೆಲ್ಲಾ ಇದ್ದಿದ್ದು ಮೊಳಕಾಲಿನಿಂದ ಕೆಳಗಿನವರೆಗೂ ಜೋತುಬೀಳುತ್ತಿದ್ದ ಉದ್ದ ಲಂಗ ಮತ್ತು ಫುಲ್‌ಸ್ಲೀವ್‌ ಶರ್ಟು! ಇಂಥ ಡ್ರೆಸ್‌ ಹಾಕಿಕೊಂಡು ಆಡುವುದು ಕಷ್ಟ ಅಂತಾದ ಮೇಲೆ ಲಂಗದ ಸೈಜು ಕುಗ್ಗಿತು, ಟೀ ಶರ್ಟ್‌ ಸ್ವಲ್ಪ ಟೈಟಾಯಿತು. ಮಹಿಳೆಯರ ಟೆನಿಸ್‌ಗೆ ಜನರೇ ಬರುವುದಿಲ್ಲ ಅನ್ನುವ ಕೊರಗು ಶುರುವಾದಾಗ, ಮಾರ್ಕೆಟಿಂಗ್‌ ಪ್ರಭೃತಿಗಳು ಲಂಗವನ್ನೂ ಇನ್ನೂ ಸ್ಪಲ್ಪ shrink ಮಾಡಿದರು. ಅವತ್ತಿನ ದಿನಗಳಲ್ಲಿ ಅವರು ಹೀಗೆ ಮಾಡುವುದು ಅನಿವಾರ್ಯವಾಗಿತ್ತು. ಆಟಗಾರ್ತಿಯರ ಕೈಕಾಲು ನೋಡುವುದಕ್ಕೆಂದೇ ಜನ ಹಿಂಡುಹಿಂಡಾಗಿ ಬಂದರು. ಆರ್ಥಿಕವಾಗಿ ಮಹಿಳಾ ಟೆನಿಸ್‌ ಗಟ್ಟಿಯಾಯಿತು. ಜೊತೆಗೆ, ಆಟದ ಮಟ್ಟ ಕೂಡ ಹೆಚ್ಚಿತು.

ಬಿಲ್ಲಿ ಜೀನ್‌ ಕಿಂಗ್‌, ಮಾರ್ಟಿನಾ ನವ್ರಾಟಿಲೋವಾ, ಕ್ರಿಸ್‌ ಎವರ್ಟ್‌ರಂಥವರಿಂದಾಗಿ ಮಹಿಳಾ ಟೆನ್ನಿಸ್‌ಗೆ ಸ್ಟಾರ್‌ ವ್ಯಾಲ್ಯೂ ಬಂದಿತು. ಅವರ ಆಟವೂ ಗಂಡಸರ ಆಟದಷ್ಟೇ ಆಕರ್ಷಕ ಅನ್ನುವುದು ಸಾಬೀತಾಯಿತು. ಅಷ್ಟಾದ ಮೇಲೆ, ಡ್ರೆಸ್‌ ಅಷ್ಟು ಇಂಪಾರ್ಟೆಂಟ್‌ ಅನ್ನಿಸಲಿಲ್ಲ. ಡ್ರೆಸ್‌ ಕಡೆಯಿಂದ ಜನರ ಗಮನ ಆಟದ ಕಡೆಗೆ ಹರಿಯಿತು. ಆಡಲಿಕ್ಕೆ ಅಡ್ಡಿಯಾಗದಷ್ಟು ಮಟ್ಟದ ಸ್ಕರ್ಟ್‌ ಮತ್ತು ತುಂಬಾ ದೊಗಲೆಯಲ್ಲದ ಟೀಶರ್ಟ್‌ ಇದ್ದರೆ ಸಾಕು ಅನ್ನುವ ತೀರ್ಮಾನಕ್ಕೆ ಟೆನಿಸ್‌ ಫೆಡರೇಷನ್‌ಗಳು ಬಂದವು. ಈ ಮೂಲಭೂತ ಚೌಕಟ್ಟಿಗೆ ಹೊಂದುವಂತೆ ಯಾರು ಎಂಥ ಡ್ರೆಸ್‌ ಬೇಕಿದ್ದರೂ ಹಾಕಬಹುದು ಅನ್ನುವಂತಾಯಿತು. ಕೆಲವು ಟೂರ್ನಿಗಳು ಮಾತ್ರ, ಈ ಚೌಕಟ್ಟಿಗೆ ತಮ್ಮದೂ ಒಂದೆರಡು ಕಂಡೀಷನ್‌ಗಳನ್ನು ಸೇರಿಸಿ, ತಮಗೆ ಬೇಕಾದಂತೆ ನಿಯಮ ರೂಪಿಸಿಕೊಂಡವು. ಉದಾಹರಣೆಗೆ, ವಿಂಬಲನ್ನಿನಲ್ಲಿ ಯಾರೂ ಬಣ್ಣ - ಬಣ್ಣದ ಡ್ರೆಸ್‌ಧರಿಸಿ ಆಡುವಂತಿಲ್ಲ; ಬಿಳಿ ಬಣ್ಣ ಅಲ್ಲಿ ಕಡ್ಡಾಯ.

ಹೀಗೆ ಸೈಜಿನಲ್ಲಿ ರಿಯಾಯಿತಿಗಳು-ನಿಯಮದಲ್ಲಿ ಬದಲಾವಣೆಗಳು ಬಂದವಾದರೂ, ಅಷ್ಟರಲ್ಲಾಗಲೇ ಮಹಿಳಾ ಟೆನಿಸ್‌ ಗಿಡ್ಡ ಸ್ಕರ್ಟು ಟೈಟ್‌ ಟೀ ಶರ್ಟಿನ ಅನುಕೂಲಕ್ಕೆ ಹೊಂದಿಕೊಂಡಿತ್ತು. ಹಾಗಾಗಿ ಅದೇ ಖಾಯಮ್ಮಾಗಿ ಹೋಯಿತು.

ಇಡೀ ಟೆನಿಸ್‌ ಜಗತ್ತೇ ಹೀಗಿರುವಾಗ ಸಾನಿಯಾ ಯಾಕೆ ಬದಲಾಗಬೇಕು?

ಕರ್ಮಠ ಮನಸ್ಸುಗಳು ಮಾತ್ರ ಡ್ರೆಸ್ಸಿನ ಬಗ್ಗೆ ಈ ಪರಿ funnyಯಾಗಿರಲು ಸಾಧ್ಯ. ಯಾವುದಾದರೂ ಬ್ರಾಹ್ಮಣ ಮಠಗಳಿಗೆ ದೇವಸ್ಥಾನಗಳಿಗೆ ಹೋಗಿ ನೋಡಿ; ಅಲ್ಲಿ ಗಂಡಸರು ಶರಟು-ಬನಿಯನ್ನು ತೆಗೆಯದೆ ಒಳಕ್ಕೆ ಹೋಗುವಂತೆಯೇ ಇಲ್ಲ! ಬ್ರಾಹ್ಮಣರ ಸಾಲಿನಲ್ಲಿ ಊಟಕ್ಕೆ ಕೂರುವುದಕ್ಕೆ ಎದೆಯ ಮೇಲೊಂದು ಜನಿವಾರ ಕಡ್ಡಾಯವಾಗಿ ಇರಲೇಬೇಕು.

ಇದು ಆಯಾ ಧರ್ಮದ ನಂಬಿಕೆ ಅಂದುಕೊಂಡು ಸುಮ್ಮನಾಗಿಬಿಡಬಹುದು. ಆದರೆ ಇಂಥ ಕರ್ಮಠತನಗಳು ನಮ್ಮ ಬದುಕಿನೊಳಕ್ಕೇ ಲಗ್ಗೆಯಿಡಬಾರದಲ್ಲ? ಡ್ರೆಸ್‌ ಇರುವುದು ನಮ್ಮ ವ್ಯಕ್ತಿತ್ವದ expressionಗಾಗಿ ಅಷ್ಟೆ. ಎಲ್ಲೆಲ್ಲಿ ಯಾವ ಯಾವ ಸಂದರ್ಭ-ಸನ್ನಿವೇಶದಲ್ಲಿ, ಯಾವ್ಯಾವ ವೃತ್ತಿಯಲ್ಲಿ ಹೇಗಿರಬೇಕೋ ಹಾಗಿರಬೇಕು ಅನ್ನುವುದಷ್ಟೇ ನಮ್ಮ ಉಡುಪಿನ ಬಗ್ಗೆ ನಾವು ಹಾಕಿಕೊಳ್ಳಬಹುದಾದ ಚೌಕಟ್ಟು. ಕಾಲೇಜ್‌ ಉಪನ್ಯಾಸಕಿಯಾಬ್ಬಳು ತೀರಾ ಮಾಡೆಲ್‌ ಥರ ಡ್ರೆಸ್‌ ಮಾಡಿಕೊಂಡರೆ ಆಕೆಯ ವಿದ್ಯಾರ್ಥಿಗಳು ಅವಳನ್ನು ಗುರು ಅಂತ ನೋಡುವುದು ಹೇಗೆ ಸಾಧ್ಯ? ಪ್ರೆೃಮರಿ ಟೀಚರ್‌ಗಳು ಅಡ್ಡಾದಿಡ್ಡಿ ಡ್ರೆಸ್‌ ಮಾಡಿಕೊಂಡರೆ ಮಕ್ಕಳಲ್ಲಿ ಗಾಂಭೀರ್ಯ ಹೇಗೆ ಬಂದೀತು? ಸೇಲ್ಸ್‌ಮ್ಯಾನೊಬ್ಬ ಬರ್ಮುಡಾ-ಟೀಶರ್ಟ್‌ ಹಾಕಿಕೊಂಡು ಕೆಲಸಕ್ಕೆ ಹೋದರೆ ಯಾರು ತಾನೇ ಅವನನ್ನು ಒಳಗೆ ಬಿಟ್ಟುಕೊಂಡಾರು?

ಇಂಥ ನಿಯಮಗಳು ಕಟ್ಟಳೆಗಳು ಮುಖ್ಯ. ಮತ್ತು ಇವು ಅಗತ್ಯ ಕೂಡ. ನೋಡುವವರಿಗೆ ನಾವು presentable ಅಂತ ಅನ್ನಿಸಬೇಕು. ಮನೆಯಲ್ಲಿ ಮಾತ್ರ ಹಾಕಿಕೊಳ್ಳಬಹುದಾದಂಥ ನೈಟಿಯನ್ನೂ-ಲುಂಗಿಯನ್ನೂ ತೊಟ್ಟು ಪೇಟೆಯ ಬೀದಿಗಿಳಿದರೆ, it’s indecent. ಅವು ನಮ್ಮ ಮೈಯನ್ನು ಪೂರ್ತಿ ಮುಚ್ಚುತ್ತವೆ ಅನ್ನುವುದೇನೋ ನಿಜವೇ ಆದರೂ, ಸಾರ್ವಜನಿಕ ಸ್ಥಳಗಳಲ್ಲಿ ಅವು ಹೊಂದುವುದಿಲ್ಲ. ಟೆನ್ನಿಸ್‌ ಕೋರ್ಟ್‌ನಲ್ಲಿ ಗಿಡ್ಡಲಂಗ ಹಾಕಿಕೊಂಡು ಆಡುವುದಕ್ಕಿಂತ ನಿಜಕ್ಕೂ ಅಸಭ್ಯ ಅಂತನ್ನಿಸುವುದು ಹೀಗೆ ನಮ್ಮ ಪರಿಸರಕ್ಕೆ ಹೊಂದದಂತೆ ಡ್ರೆಸ್‌ ಮಾಡಿಕೊಂಡಾಗ. ಮೊನ್ನೆ ಸಿನೆಮಾ ತರಬೇತಿ ಶಿಬಿರವೊಂದರಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುವುದಕ್ಕೆ ಚಿತ್ರನಟಿ ರಕ್ಷಿತಾ ಹೋಗಿದ್ದಳು. ಕೆಳಗೆ ನೆಲದ ಮೇಲೆ ಕುಳಿತ ಹುಡುಗರೆದುರು, ಅವರಿಗೆ ಹತ್ತಿರದಲ್ಲೇ ಒಂದು ಪುಟ್ಟ ಕಟ್ಟೆಯ ಮೇಲೆ ಇವಳು ಕಾಲು ಚಾಚಿ ಕುಳಿತಿದ್ದಳು. ಅವಳು ಹಾಕಿದ್ದ ಡ್ರೆಸ್ಸು ಸಿನೆಮಾದ ಡ್ಯಾನ್ಸ್‌ಗೆ ಹಾಕುವಂಥದ್ದೇ.

ಅಸಭ್ಯ ಅಂದರೆ, ಇದು.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more