• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾವು ಹಾರುವುದಕ್ಕೆ ನಮಗೆ ಅಮೆರಿಕದ ರೆಕ್ಕೆಗಳು ಬೇಕಿಲ್ಲ!

By Staff
|
Ravi Belagere on Thatskannada.com ರವಿ ಬೆಳಗೆರೆ
ಶ್ರೀಮಂತಿಕೆಯ ಪೊಗರು ಅಮೆರಿಕವನ್ನು ಹಾಗೆ ಮಾಡಿಬಿಟ್ಟಿದೆ. ಸೋವಿಯತ್‌ ಎಂಬ ಕಮ್ಯುನಿಸ್ಟ್‌ ಮಹಾಸಂಸ್ಥಾನ ಕುಸಿದ ದಿನದಿಂದಲೂ ಈ ಅಂಕಲ್‌ ಸ್ಯಾಮ್‌ ಕೊಬ್ಬಿರುವ ರೀತಿ ಬೆಚ್ಚಿ ಬೀಳಿಸುವಂಥದ್ದು. ಯಾರ ಅಂಕೆಯೂ ಇಲ್ಲ, ಯಾರ ಹೆದರಿಕೆಯೂ ಇಲ್ಲ. ವಿಶ್ವಸಂಸ್ಥೆಯೆಂಬ ಪ್ರಪಂಚದ ಅಂಪೈರನ್ನೂ ಅಮೆರಿಕ ನರ ಕಡಿದು ಕೂರಿಸಿಬಿಟ್ಟಿದೆ; ಹಾಗಿಲ್ಲವಾಗಿದ್ದರೆ ಮನಸೋ ಇಚ್ಛೆಅಫಘನಿಸ್ತಾನವನ್ನಾಗಲೀ ಇರಾಕನ್ನಾಗಲೀ ಧೂಳೀಪಟ ಮಾಡಲು ಅಮೆರಿಕಕ್ಕೆ ಸಾಧ್ಯವಾಗುತ್ತಿರಲಿಲ್ಲ. ಪ್ಯಾಲೆಸ್ತೀನಿಯರಿಗಾಗುತ್ತಿರುವ ಅನ್ಯಾಯವನ್ನು ನೋಡಿಕೊಂಡೂ ಕೋಫಿ ಅನ್ನನ್‌ ಸುಮ್ಮನೆ ಕಾಫಿ ಹೀರುತ್ತಾ ತನ್ನ ನ್ಯೂಯಾರ್ಕ್‌ ಬಂಗಲೆಯಲ್ಲಿ ಕೂರುತ್ತಿರಲಿಲ್ಲ.

ಆದರೆ, ಎಲ್ಲ ದೊಡ್ಡಣ್ಣಂದಿರಿಗೂ ತಮ್ಮ ಪೊಗರು-ಅಹಂ-ದೊಡ್ಡಸ್ತಿಕೆಗಳನ್ನೆಲ್ಲಾ ಕಳೆದುಕೊಂಡು ಮೂಲೆಗುಂಪಾಗಬೇಕಾದಂಥ ದಿನ ಬಂದೇ ಬರುತ್ತದೆ. ಬಹುಶಃ ಆ ದಿನಗಳ ಕ್ಷಣಗಣನೆಯೀಗ ಶುರುವಾಗಿದೆ!

ಅಮೆರಿಕದ ಡಾಲರುಗಳ ರಾಶಿಯಲ್ಲಿ ಮುಳುಗಿರುವವರಿಗೆ ಈ ಮಾತು ಅಪಥ್ಯವೆನ್ನಿಸಬಹುದು, ನಂಬಲಸಾಧ್ಯ ಅಂತಲೂ ಅನ್ನಿಸಬಹುದು. ಆದರೆ, ಈಗ್ಗೆ ಮೂರು ತಿಂಗಳ ಹಿಂದೆ ಅಮೆರಿಕದ್ದೇ ಒಂದು ಸರ್ಕಾರಿ ಪ್ರಾಯೋಜಿತ ಹಣಕಾಸು ಸಂಸ್ಥೆ ನೀಡಿರುವ ವರದಿಯ ಪ್ರಕಾರ, ಮುಂದಿನ ಹದಿನೈದು ವರ್ಷಗಳಲ್ಲಿ ಭಾರತ ಮತ್ತು ಚೀನಾ ಅಮೆರಿಕದಷ್ಟೇ ಶ್ರೀಮಂತ ರಾಷ್ಟ್ರಗಳಾಗಿರುತ್ತವೆ. ಮುಂದಿನ ಇಪ್ಪತ್ತೆೈದು ವರ್ಷಗಳೊಳಗೆ, ಸೂಪರ್‌ಪವರ್‌ ಮರ್ಯಾದೆ -ಅಂದರೆ ದೊಡ್ಡಣ್ಣನ ಪಟ್ಟ-ಏಷ್ಯಾಕ್ಕೆ ರವಾನೆಯಾಗುತ್ತದೆ! ಸುಮ್ಮನೆ ಯಾರೋ ಒಬ್ಬ ನಿರುದ್ಯೋಗಿ ಹಗಲುಗನಸು ಕಂಡು ಬರೆದುಕೊಟ್ಟ ವರದಿಯಲ್ಲ ಇದು. ಅದರ ಹಿಂದೆ ಕಳೆದ ಹತ್ತು ವರ್ಷಗಳಿಂದ ಜಗತ್ತಿನ ವಿವಿಧ ದೇಶಗಳಲ್ಲಿ ಆಗಿರುವ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳ ವಿವರವಾದ ಅಧ್ಯಯನವಿದೆ ; ಮತ್ತು, ಆ ಅಧ್ಯಯನವನ್ನಾಧರಿಸಿದ ವಿಶ್ಲೇಷಣೆಯಿದೆ.

ಭಾರತವೆಂಬ ಬಡದೇಶ ಇವತ್ತು ನಿಧಾನವಾಗಿ ಜಗತ್ತಿನ ನಾಲೆಡ್ಜ್‌ ಕ್ಯಾಪಿಟಲ್‌ ಆಗುತ್ತಿದೆಯೆಂಬುದು ಗೊತ್ತು ತಾನೆ? ಇಲ್ಲಿರುವಷ್ಟು ಬ್ರಿಲಿಯಂಟ್‌ ಸಾಫ್ಟ್‌ವೇರ್‌ ಇಂಜಿನಿಯರುಗಳು, ಇಲ್ಲಿರುವಷ್ಟು ಸಂಶೋಧಕರು, ಇಲ್ಲಿರುವಷ್ಟು ಡಾಕ್ಟರೇಟ್‌ ಸಾಹಿತಿಗಳು ಜಗತ್ತಿನ ಬೇರಾವ ದೇಶದಲ್ಲೂ ಇಲ್ಲ. ಉಹುಂ, ಅಮೆರಿಕ-ಚೀನಾಗಳಲ್ಲೂ ಇಲ್ಲ. ಹಾಗಾಗೇ ಭಾರತ ಸದ್ದಿಲ್ಲದಂತೆ ಜಗತ್ತಿನ ಸಮಸ್ತ ಬೆಳವಣಿಗೆಗಳ ಕೇಂದ್ರವಾಗುತ್ತಿದೆ. ಬೇಜವಾಬ್ದಾರಿ ನಾಯಕರುಗಳ ನಡುವೆಯೂ, ಇಲ್ಲೊಂದು ಮುಕ್ತ ಜ್ಞಾನದ ವಾತಾವರಣ ಮೂಡುತ್ತಿದೆ. ನಮ್ಮ ದೇಶಲನ್ನು ಸದೃಢವಾಗಿ ಕಟ್ಟಬೇಕೆನ್ನುವವರ ಸಂಖ್ಯೆ ಹೆಚ್ಚುತ್ತಿದೆ. ನಿರುದ್ಯೋಗ, ಬಡತನ ಮತ್ತು ಉಗ್ರವಾದಗಳ ಮಧ್ಯೆಯೂ ಒಂದು ಅಭಿವೃದ್ಧಿಮುಖಿಯಾದ ಸಮಾಜ ನಿರ್ಮಾಣಗೊಳ್ಳುತ್ತಿದೆ.

ನಿಜ, ನಾವು-ವಿಶೇಷವಾಗಿ ಜರ್ನಲಿಸ್ಟ್‌ಗಳು-ಪಾಸಿಟಿವ್‌ ಅಂಶಗಳನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಐಟಿ ಕ್ರಾಂತಿಯ ಹೊಳಪಿನ ಹಿಂದೆಯೂ ನಮ್ಮ ಕಣ್ಣಿಗೆ ಇಲ್ಲಿನ ಜಾತೀಯತೆಗಳು, ಕೋಮುಗಲಭೆಗಳು, ಭ್ರಷ್ಟ ರಾಜಕಾರಣಿಗಳು, ಅನಿಷ್ಠ ಬಡತನದ ಪಿಡುಗುಗಳು, ಇಂಥವೇ ಕಾಣುತ್ತವೆ. ಈ ದೇಶ ಯಾವತ್ತಾದರೊಂದು ದಿನ ಅಮೆರಿಕದ ಹಾಗಾಗುವುದು ಸಾಧ್ಯವಾ ಅಂತ ನಾವು ಅಪನಂಬಿಕೆಯ ಮಾತಾಡುತ್ತೇವೆ. Its impossible ಅಂತ ನಿಡುಸುಯ್ಯುತ್ತಾ ಸಿಗರೇಟು ಸೇದುತ್ತೇವೆ. ಮೇಲ್ನೋಟಕ್ಕೆ ಈ ಅಪನಂಬಿಕೆ ಸರಿ ಅಂತಲೂ ಅನ್ನಿಸುತ್ತದೆ. ಆದರೆ ಕಳೆದ ಹತ್ತು-ಹದಿನೈದು ವರ್ಷಗಳಲ್ಲಿ ಇಲ್ಲಾಗಿರುವ ಪ್ರಚಂಡ ಬದಲಾವಣೆಗಳನ್ನೊಮ್ಮೆ ಗಮನಿಸಿ ನೋಡಿ. ಕೇಳಿದ ತಕ್ಷಣ ಫೋನ್‌ ಕನೆಕ್ಷನ್‌ ಸಿಗುತ್ತದೆ ಅನ್ನುವಂಥ ದಿನಗಳು ಬರುತ್ತವೆಂಬ ನಂಬಿಕೆಯೇ ಹದಿನೈದು ವರ್ಷಗಳ ಹಿಂದೆ ನಮಗಿರಲಿಲ್ಲ. ಟೆಲಿಗ್ರಾಫ್‌ ಆಫೀಸಿನಲ್ಲಿ ಕೂತು, ಟ್ರಂಕ್‌ ಕಾಲ್‌ ಬುಕ್‌ ಮಾಡಿ, ಗಂಟೆಗಟ್ಟಲೆ ಕಾಯುವುದು ನಮಗೆ ಅಭ್ಯಾಸವಾಗಿಬಿಟ್ಟಿತ್ತು. ಫೋನ್‌ ಅನ್ನುವುದೊಂದು ಲಕ್ಷುರಿಯಾಗಿತ್ತು. ದೂರದರ್ಶನದ ಚಿತ್ರಹಾರ್‌ ಮತ್ತು ಭಾನುವಾರದ ಸಿನೆಮಾಗಳೇ ಜಗತ್ತಿನ ಅತ್ಯದ್ಭುತ ಟೀವಿ ಮನರಂಜನೆ ಅಂತ ನಾವು ನಂಬಿಕೊಂಡಿದ್ದೆವು. ಟೀವಿಯೂ ಲಕ್ಷುರಿಯಾಗಿತ್ತು. ಆ ದಿನಗಳಲ್ಲಿ ಇಲ್ಲಿ ಸಿಗುತ್ತಿದ್ದ ಐಷಾರಾಮಿ ಕಾರೆಂದರೆ, ತಿಮಿಂಗಲದಷ್ಟು ದೊಡ್ಡದಾದ ಕಾಂಟೆಸ್ಸಾ ಮಾತ್ರ. ವಂಡರ್‌ಫುಲ್‌ ಟೂ ವೀಲರೆಂದರೆ, ಬಜಾಜ್‌ ಚೇತಕ್‌! ಕಂಪ್ಯೂಟರ್‌ ಅನ್ನುವುದಂತೂ, ನಮಗೆ ಸಿನೆಮಾದಲ್ಲಿ ಮಾತ್ರ ಕಾಣಬಹುದಾದ್ದಂಥ ಮಾಯಾ ಯಂತ್ರ!

ನನಗಿನ್ನೂ ಚೆನ್ನಾಗಿ ನೆನಪಿದೆ. ಅಭಿಮಾನಿ ಪ್ರಕಾಶನದಲ್ಲಿ ಕೆಲಸಕ್ಕಿದ್ದಾಗ, ಅದೇ ಮೊದಲ ಸಲ ಕಂಪೋಸಿಂಗಿಗೆಂದು ಅಲ್ಲಿಗೊಂದಿಷ್ಟು ಕಂಪ್ಯೂಟರುಗಳು ಬಂದಿದ್ದವು. ಅವುಗಳನ್ನು ನೋಡಿ ಇಡೀ ಆಫೀಸು ರೋಮಾಂಚನಗೊಂಡಿತ್ತು! ಕಂಪ್ಯೂಟರಿನಲ್ಲೇ ಕಂಪೋಸ್‌ ಮಾಡಿ, ಅಲ್ಲೇ ಪುಟ ವಿನ್ಯಾಸವನ್ನೂ ಮಾಡಬಹುದು ಅನ್ನುವುದೇ ನಮ್ಮ ಪಾಲಿಗೆ ನಂಬಲಸಾಧ್ಯವಾದ ವಿಷಯ! ಆ ಕಂಪ್ಯೂಟರುಗಳಿಗೆ ಅಂತ ಒಂದು ಏರ್‌ಕಂಡೀಷನ್ಡ್‌ ರೂಮು ಕಟ್ಟಿಸಿದ್ದೇನು, ಆ ರೂಮಿನೊಳಕ್ಕೆ ಯಾರೂ ಚಪ್ಪಲಿ ಹಾಕಿಕೊಳ್ಳುವಂತಿಲ್ಲ ಅಂತ ರೂಲು ಮಾಡಿದ್ದೇನು, ಕಂಪ್ಯೂಟರ್‌ ಸೆಕ್ಷೆನ್ನಿನವರಿಗಲ್ಲದೆ ಬೇರೆಯಾರಿಗೂ ಒಳಗೆ ಪ್ರವೇಶವಿಲ್ಲ ಅಂತ ನಿರ್ಬಂಧ ವಿಧಿಸಿದ್ದೇನು! ಇವತ್ತು ಅದನ್ನೆಲ್ಲ ನೆನಪಿಸಿಕೊಂಡರೆ ಸಿಲ್ಲಿ ಅನ್ನಿಸಿಬಿಡುತ್ತದೆ. ಆದರೆ ಅವತ್ತಿಗದು ವಿಚಿತ್ರ ಅಚ್ಚರಿ ಮತ್ತು ಆತಂಕದ ಸಂಗತಿ!

ಬರೀ ಒಂದೇ ಒಂದು ದಶಕದಲ್ಲಿ ನಾವು, ಕಂಪ್ಯೂಟರ್‌ ಮತ್ತು ಕಮ್ಯೂನಿಕೇಷನ್‌ ತಂತ್ರಜ್ಞಾನದ ಮಟ್ಟಿಗೆ ಅಮೆರಿಕಕ್ಕೆ ಸರಿಸಮವೆನ್ನಿಸುವ ಸ್ಥಿತಿ ತಲುಪಿಬಿಟ್ಟಿದ್ದೇವೆ. ಅಮೆರಿಕದ ಸಿಲಿಕಾನ್‌ ವ್ಯಾಲಿಯನ್ನೇ ಆಳುವ ಮಟ್ಟಕ್ಕೆ ನಮ್ಮವರು ಬೆಳೆದಿದ್ದಾರೆ. ಅನೇಕ ಸಾಫ್ಟ್‌ವೇರ್‌ ಆವಿಷ್ಕಾರಗಳು ಇಲ್ಲಿ ಅನಾವರಣಗೊಂಡ ನಂತರ ಅಮೆರಿಕಕ್ಕೆ ಕಾಲಿಡುತ್ತಿವೆ. ಬ್ಲೂ ಟೂತ್‌ ಎಂಬ ವೈರ್‌ಲೆಸ್‌ ತಂತ್ರಜ್ಞಾನದ ಅಭಿವೃದ್ಧಿಯಲ್ಲಂತೂ, ಬೆಂಗಳೂರಿನವೇ ಆದ ಕನ್ನಡಿಗರದ್ದೇ ಆದ ಎರಡು ಕಂಪನಿಗಳು ಅಗ್ರಸ್ಥಾನದಲ್ಲಿವೆ.

ಸಾಫ್ಟ್‌ವೇರ್‌ ಮಾತು ಬಿಡಿ ; ಟೆಕ್ಸ್‌ಟೈಲ್‌, ಮೆಡಿಸಿನ್‌, ಅಟೋಮೊಬೈಲ್ಸ್‌, ಬಾಹ್ಯಾಕಾಶ ತಂತ್ರಜ್ಞಾನ, ಹೀಗೆ ಎಲ್ಲದರಲ್ಲೂ ಅಮೆರಿಕದ ಕುತ್ತಿಗೆಗೆ ನಮ್ಮ ಉಸಿರು ತಾಕುವಷ್ಟು ಎತ್ತರಕ್ಕೆ ಬೆಳೆದುಬಿಟ್ಟಿದ್ದೇವೆ. ಇದಕ್ಕೆ ಕಾರಣವಾಗಿದ್ದು ಜಾಗತೀಕರಣ. ಈ ಗ್ಲೋಬಲೈಸೇಷನ್ನಿನ ಬೇರೆ ಅನಿಷ್ಠಗಳೇನೇ ಇರಲಿ, ಅದು ನಮ್ಮನ್ನು ವಿಸ್ತಾರಗೊಳಿಸಿತು, ನಮ್ಮವರಿಗೆ ನಮ್ಮ ಜ್ಞಾನ ಬಳಸಿಕೊಳ್ಳಲು ಅವಕಾಶಗಳು ಸಿಕ್ಕವು, ಕೌಶಲ್ಯ ಮತ್ತು ಅದರ ಅರಳುವಿಕೆಯ ಪರಿಧಿಗಳು ಬೆಳೆದವು, ನಮ್ಮ ದೇಶ ಮೊದಲಿಗಿಂತಲೂ ಕಾನ್ಫಿಡೆಂಟ್‌ ಆಯಿತು ಅನ್ನುವುದಂತೂ ಯಾರೂ ತಳ್ಳಿಹಾಕಲಾಗದ ಸತ್ಯ.

ಭಾರತ ಹೀಗೆ ತನ್ನ ಆಸರೆಯೇ ಇಲ್ಲದೆ ಬೆಳೆದು ನಿಂತಿರುವುದು ಅಮೆರಿಕವೆಂಬ selfcentered ದೇಶದ ಪಾಲಿಗೆ ಕಡಿಮೆ ಆಘಾತದ ವಿಷಯವೇನಲ್ಲ. ನಿರಂತರವಾಗಿ ತನ್ನ ಸಹಾಯ ಪಡೆಯುತ್ತಲೇ ಬಂದರೂ, ಪಾಕಿಸ್ತಾನ ಇವತ್ತು ಯಾವ ಸ್ಥಿತಿಯಲ್ಲಿದೆ ಅನ್ನುವುದೂ ಅಮೆರಿಕಕ್ಕೆ ಗೊತ್ತು. ತನ್ನ ದೊಡ್ಡಣ್ಣನ ಪಟ್ಟಕ್ಕೆ ್ಫಚೀನಾವೊಂದೇ ಸವಾಲಲ್ಲ ಅನ್ನುವುದು ಅದಕ್ಕರ್ಥವಾಗಿದೆ. ಹಾಗಾಗೇ, ಸಮಯ ಸಿಕ್ಕಿದಾಗಲೆಲ್ಲಾ ತನ್ನ ಕ್ಷುಲ್ಲಕ ಬುದ್ಧಿ ತೋರಿಸುತ್ತಾ ಬಂದಿದೆ.

ಮೊದಲು, ನಾವು ಪೋಖ್ರಾನ್‌ನಲ್ಲಿ ಅಣುವಿಸ್ಫೋಟ ನಡೆಸಿದ್ದನ್ನೇ ನೆಪವಾಗಿಟ್ಟುಕೊಂಡು ನಮ್ಮ ಮೇಲೆ ನಿರ್ಬಂಧ ಹೇರಿತು. ನಾವು ಹತಾಶರಾಗಿ ಮಂಡಿಯೂರಿ ಕುಳಿತುಬಿಡುತ್ತೇವೆ ಅಂತ ನಿರೀಕ್ಷಿಸಿತ್ತು. ಅಣುವಿಜ್ಞಾನಿ ಡಾಕ್ಟರ್‌ ಚಿದಂಬರಂ ಅವರಿಗೆ ವೀಸಾ ನಿರಾಕರಿಸಿ, ನಮ್ಮ ಸ್ವಾಭಿಮಾನ ಕೆಣಕುವ ಪ್ರಯತ್ನವನ್ನೂ ಮಾಡಿತು. ಯಾವುದಕ್ಕೂ ಈ ದೇಶ ಜಗ್ಗುವುದಿಲ್ಲ ಅಂತ ಮನವರಿಕೆಯಾದ ಮೇಲೆ, ಯಾರೂ ಕೇಳದೆಯೇ ತಾನೇ ತಾನಾಗಿ ತನ್ನ ನಿರ್ಬಂಧ ತೆಗೆದುಹಾಕಿತು. ಬೆಳೆಯುತ್ತಿರುವ ಭಾರತದ ಆರ್ಥಿಕ ವ್ಯವಸ್ಥೆ ಹದಗೆಡಬಾರದು ಅನ್ನುವ ಕಾರಣಕ್ಕೆ ಹೀಗೆ ಮಾಡುತ್ತಿದ್ದೇವೆ ಅಂತ ಘೋಷಿಸಿತು! ಇದರ ಜೊತೆಯಲ್ಲೇ, ಪಾಕಿಸ್ತಾನವನ್ನು ಹಿಂದೆಂದಿಗಿಂತಲೂ ಹೆಚ್ಚು ಮುದ್ದು ಮಾಡತೊಡಗಿತು. ಟೆರರಿಸಂ ತವರೂರೇ ಪಾಕಿ ನೆಲ ಅಂತ ಗೊತ್ತಿದ್ದರೂ, ಟೆರರಿಸಂ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ನಮ್ಮ ಅತಿಮುಖ್ಯ ಪಾರ್ಟ್‌ನರ್‌ ಅಂತ ಬುಷ್‌ ಹೇಳಿಕೊಂದು ತಿರುಗಿದ. ಪಾಕಿಸ್ತಾನಕ್ಕೆ ಸಾವಿರಾರು ಕೋಟಿ ಡಾಲರುಗಳ ಭಕ್ಷೀಸು ಹರಿದುಹೋಯಿತು. ಕಾಶ್ಮೀರದ ವಿಷಯದಲ್ಲಿ ಸ್ವಲ್ಪ ಲಿಬರಲ್‌ ಆಗಿ ಮಾತಾಡಬೇಕು ಅಂತ ಭಾರತಕ್ಕೆ ತಾಕೀತು ಮಾಡಿತು. ಕಾಶ್ಮೀರವೆಂಬುದು ಎರಡು ದೇಶಗಳ ಮಧ್ಯದ ವಿಚಾರವೇ ಹೊರತು, ತನಗದರಲ್ಲಿ ಏನೂ ಪಾತ್ರವಿಲ್ಲ ಎಂದು ಹೇಳು ತ್ತಲೇ, ಆ ವಿಷಯವನ್ನು ಪದೇ ಪದೆ ಕೆದಕಿ ಜೀವಂತವಾಗಿಟ್ಟಿತು.

ಯಾಕೆಂದರೆ, ಕಾಶ್ಮೀರದ ಸಮಸ್ಯೆ ಇತ್ಯರ್ಥಗೊಂಡು, ಇಡೀ ಏಷ್ಯ ಒಂದಾಗುವುದು ಅಮೆರಿಕಕ್ಕೆ ಬೇಡ! ಇಲ್ಲಿ ಸದಾ ಒಂದು ಅಸಹನೀಯ ಟೆನ್ಷನ್‌ ಇರಬೇಕು, ಒಬ್ಬರ ಮೇಲೊಬ್ಬರಿಗೆ ಶಂಕೆಗಳಿರಬೇಕು, ಒಬ್ಬರನ್ನು ಕಂಡರೊಬ್ಬರಿಗೆ ಆಗದಂಥ ಸ್ಥಿತಿಯಿರಬೇಕು, ಯಾವಾಗ ಬೇಕಾದರೂ ಯುದ್ಧ ಸಿಡಿಯಬಹುದು ಅನ್ನುವಂಥ ಭಯವಿರಬೇಕು!

ಹಾಗಿದ್ದರಷ್ಟೇ ಅಮೆರಿಕದ ಬೇಳೆ ಬೇಯುವುದು ಮತ್ತು ಅಲ್ಲಿನ ಶಸ್ತ್ರಾಸ್ತ್ರ ಕಂಪನಿಗಳು ಉದ್ಧಾರವಾಗುವುದು! ಮೊನ್ನೆ, ಒಂದು ಕೈಯಲ್ಲಿ ಪಾಕಿಸ್ತಾನಕ್ಕೆ ಎಪ್ಪತ್ತು ಎಫ್‌-ಸಿಕ್ಸ್‌ಟೀನ್‌ ವಿಮಾನಗಳದೊಂದು ಗೊಂಚಲು ಕೊಟ್ಟು, ಇನ್ನೊಂದು ಕೈಯಿಂದ ಭಾರತಕ್ಕೆ ಶೇಕ್‌ಹ್ಯಾಂಡ್‌ ಕೊಡಲು ಬಂತಲ್ಲಾ ಆಧೂರ್ತ ದೇಶ? ಆ ನಾಟಕದ ಹಿಂದಿರುವುದೂ ಇದೇ ಉದ್ದೇಶ.

ಎಫ್‌-ಸಿಕ್ಸ್‌ಟೀನ್‌ ಅನ್ನುವುದು, ಪ್ರಪಂಚದಲ್ಲಿ ಸದ್ಯಕ್ಕೆ ಲಭ್ಯವಿರುವ ಅತ್ಯಂತ ಆಧುನಿಕ ಮತ್ತು ಅತಿಹೆಚ್ಚು ಯುದ್ಧಗಳಲ್ಲಿ ಬಳಕೆಯಾಗಿ ಯಶಸ್ಸು ಕಂಡ ಯುದ್ಧವಿಮಾನ. ಅದರ ಡಿಸೈನ್‌ ಮೂವತ್ತು ವರ್ಷಗಳಷ್ಟು ಹಳೆಯದಾದರೂ, it still has great value. ಪಾಕಿಸ್ತಾನವೆಂಬ ನಿರಂಕುಶ ದೇಶಕ್ಕೀಗ ಅಮೆರಿಕ ಅದನ್ನು ಕೊಟ್ಟುಬಿಟ್ಟಿದೆ. ಆ ದೇಶ ತಾನು ಹುಟ್ಟಿದ ದಿನದಿಂದ ಇದುವರೆಗೂ ಭಾರತದ ಕಡೆಗಲ್ಲದೇ ಬೇರಾವ ದಿಕ್ಕಿಗೂ ಒಂದೇ ಒಂದು ಗುಂಡನ್ನೂ ಹೊಡೆದಿಲ್ಲ-ಒಂದೇ ಒಂದು ಮಿಸೈಲನ್ನೂ ಹಾರಿಸಿಲ್ಲವೆಂಬುದು ಗೊತ್ತಿದ್ದರೂ, ಇದು ಭಾರತದ ವಿರುದ್ಧ ಯುದ್ಧ ಮಾಡುವುದಕ್ಕೆ ಕೊಟ್ಟ ಅಸ್ತ್ರವಲ್ಲ ; ಕೇವಲ ಪಾಕಿಸ್ತಾದ ರಕ್ಷಣೆಗಾಗಿ ಕೊಟ್ಟಿರುವಂಥದ್ದು. ಅಂತ ಹೇಳಿ ನಮ್ಮು ಮೂರ್ಖರನ್ನಾಗಿಸಲು ಪ್ರಯತ್ನಿಸಿದೆ. ಬೇಕಿದ್ದರೆ ನಿಮಗೂ ಒಂದಿಷ್ಟು ಎಫ್‌-ಸಿಕ್ಸ್‌ಟೀನನ್ನೋ ಎಫ್‌-ಎಯ್‌ಟೀನನ್ನೋ ಕೊಡ್ತೀವಿ ಬನ್ನಿ ಅಂತ ಔದಾರ್ಯ ಬೇರೆ ತೋರಿಸಿದೆ. ಭಾರತವೆಂಬ ದೇಶ ಜಗತ್ತಿನ ಪ್ರಬಲ ರಾಷ್ಟ್ರಗಳಲ್ಲೊಂದಾಗುವುದಕ್ಕೆ ್ಫಅಮೆರಿಕದ ಶಸ್ತ್ರಾಸ್ತ್ರ ತಂತ್ರಜ್ಞಾನ ಮತ್ತು ಬಿಜಿನೆಸ್‌ ಆಪರ್ಚುನಿಟಿಗಳ ಸಹಾಯ ಬೇಕೇ ಬೇಕು ಅನ್ನುವ ಅರ್ಥದಲ್ಲಿ ಭಾರತದಲ್ಲಿರುವ ಅಮೆರಿಕನ್‌ ಹೈಕಮೀಷನರ್‌ ಮಾತನಾಡಿದ್ದಾನೆ. ಉದ್ಧಟತನವೆನ್ನುವುದು ಇದಕ್ಕೇ.

ಅಮೆರಿಕಕ್ಕೆ ನಮ್ಮ ಏಳಿಗೆ ಕಟ್ಟಿಕೊಂಡು ಏನೇನೂ ಅಗಬೇಕಿಲ್ಲ ಅನ್ನುವುದು ಈಗಾಗಲೇ ಜಗಜ್ಜಾಹೀರಾಗಿರುವ ಸತ್ಯ. ಹಾಗೆ ನೋಡಿದರೆ, ತನ್ನೊಬ್ಬನನ್ನು ಬಿಟ್ಟು ಬೇರಾವ ದೇಶದ ಏಳಿಗೆಯೂ ಅಮೆರಿಕಕ್ಕೆ ಬೇಕಾಗಿಲ್ಲ ! ಅದರದೇನಿದ್ದರೂ ಪಕ್ಕಾ ವ್ಯಾಪಾರಿ ಬುದ್ಧಿ.

ಈ ಎಫ್‌- ಸಿಕ್ಸ್‌ಟೀನ್‌ ವಿಮಾನಗಳನ್ನು ಮಾಡೋದು, ಲಾಕ್‌ಹೀಡ್‌ ಮಾರ್ಟಿನ್‌ ಅನ್ನುವ ಒಂದು ಕಂಪನಿ. ಅದೀಗ ದಿವಾಳಿ ಅಂಚಿನಲ್ಲಿ ಬಂದು ನಿಂತಿದೆ. ಯಾಕೆಂದರೆ, ಅಮೆರಿಕದ ವಾಯುದಳದವರೇ ಆ ಕಂಪನಿಯಿಂದ ವಿಮಾನ ಕೊಳ್ಳುವುದನ್ನು ನಿಲ್ಲಿಸಿಬಿಟ್ಟಿದ್ದಾರೆ! ಅಮೆರಿಕನ್‌ ಏರ್‌ಫೋರ್ಸ್‌ ಪಾಲಿಗೆ ಎಫ್‌-ಸಿಕ್ಸ್‌ಟೀನ್‌ಗಳು ನಮ್ಮಲ್ಲಿನ ಅಂಬಾಸಡರ್‌ ಕಾರುಗಳಿದ್ದ ಹಾಗೆ ; outdated ! ಅಮೆರಿಕದೊಳಗೂ ಗಿರಾಕಿಗಳಿಲ್ಲ, ಹೊರದೇಶಗಳಲ್ಲೂ ಕೇಳುವವರಿಲ್ಲ ಅಂದರೆ ಗತಿಯೇನು? ಅದಕ್ಕೇ ಈಗ, ಏಕಾಏಕಿ ಹಿಂದಿನ ಸಕಲ ನಿರ್ಬಂಧಗಳನ್ನು ಸಡಿಲಿಸಿ, ಪಾಕಿಸ್ತಾನಕ್ಕೆ ವಿಮಾನಗಳ ಪಡೆ ಕಳಿಸಲು ಬುಷ್‌ ಅನುಮತಿ ಕೊಟ್ಟುಬಿಟ್ಟಿದ್ದಾನೆ. ಭಾರತಕ್ಕೂ ಒಂದುನೂರೋ-ನೂರಾಮೂವತ್ತೋ ಎಫ್‌-ಸಿಕ್ಸ್‌ಟೀನ್‌ ದಾಟಿಸಿಬಿಟ್ಟರೆ, ಅಲ್ಲಿಗೆ ಕಂಪನಿಯೂ ಉದ್ಧಾರವಾಗುತ್ತದೆ, ಭಾರತ-ಪಾಕ್‌ ಮಧ್ಯೆ ಟೆನ್ಷೆನ್‌ ಕಾಯ್ದುಕೊಳ್ಳಬೇಕೆಂಬ ತನ್ನ ಕುತಂತ್ರವೂ ಸಿದ್ಧಿಸುತ್ತದೆ ಅನ್ನುವ ಯೋಚನೆ ಅವನದ್ದು. ಅದಕ್ಕೇ, ನೀವೂ ಬೇಕಿದ್ರೆತಗೊಳ್ಳಿ ಅಂತೊಂದು ಆಫರ್‌ ಎಸೆದು ಕೂತಿದ್ದಾನೆ.

ಆದರೆ, ಭಾರತಕ್ಕಿವತ್ತು ಎಫ್‌-ಸಿಕ್ಸ್‌ಟೀನ್‌ಗಳು ಅನಿವಾರ್ಯವಲ್ಲ. ಈಗಾಗಲೇ ನಮ್ಮ ದೇಶದ ವಿಜ್ಞಾನಿಗಳೇ ತೇಜಸ್‌ ಅನ್ನುವ ಅತ್ಯಾಧುನಿಕ ಯುದ್ಧವಿಮಾನಗಳನ್ನು ನಿರ್ಮಿಸುವ ದಾರಿಯಲ್ಲಿದ್ದಾರೆ. ತಕ್ಷಣಕ್ಕೆ ಅಗತ್ಯಬಿದ್ದರೆ ಕೊಳ್ಳುವುದಕ್ಕೆ ಎಫ್‌-ಸಿಕ್ಸ್‌ಟೀನ್‌ಗೆ ಸಾಟಿಯಾಗಬಲ್ಲಂಥ ಅನೇಕ ಬೇರೆ ವಿಮಾನಗಳಿವೆ. ರಷ್ಯಾದ ಮಿಗ್‌-ಟ್ವೆಂಟಿನೈನ್‌ ಫಲ್‌ಕ್ರಮ್‌ ಇವತ್ತಿಗೂ ಅತ್ಯಂತ ಸದೃಢ ಅನ್ನುವ ನಂಬಿಕೆಯುಳಿಸಿಕೊಂಡಿದೆ. ಫ್ರಾನ್ಸಿನ ಮಿರೇಜ್‌-ಟೂಥೌಸೆಂಡ್‌ ಮತ್ತು ಸ್ವೀಡನ್ನಿನ ಗ್ರಿಪೆನ್‌ ಅನ್ನುವ ನಿಮಾನಗಳೂ ಪೈಪೋಟಿಯಲ್ಲಿವೆ. ನಮ್ಮ ಏರ್‌ಫೋರ್ಸ್‌ ಮುಖ್ಯಸ್ಥ ಹೇಳಿರುವ ಹಾಗೆ, the options are open!

ಅಮೆರಿಕ ಯಾವತ್ತಿದ್ದರೂ ವಿಶ್ವಾಸಕ್ಕೆ ಅರ್ಹವಲ್ಲದ ದೇಶ. ನಾವು ಎಫ್‌-ಸಿಕ್ಸ್‌ಟೀನ್‌- ಅಥವಾ ಅಮೆರಿಕದ ಬೇರಾವುದೇ ಯುದ್ಧವಿಮಾನ ಕೊಂಡುಕೊಂಡರೆ, ಅದರ ನಿರ್ವಹಣೆಗಾಗಿ ನಾವು ಅಮರಿಕವನ್ನೇ ಅವಲಂಬಿಸಬೇಕು. ಅವುಗಳ ಸ್ಪೇರ್‌ ಪಾರ್ಟುಗಳಿಗಾಗಿ ಅಮೆರಿಕದ ಕಂಪನಿಗಳಿಗೆ ಜೋತುಬೀಳಬೇಕು. ಹೀಗಿರುವಾಗ, ನಾಳೆ ದಿಢೀರನೆ ಅಮೆರಿಕ ಮತ್ತೇನಾದರೂ ನಿರ್ಬಂಧ ವಿಧಿಸಿ ಕೂತುಬಿಟ್ಟರೆ ಗತಿಯೇನು? ನಮ್ಮ ಶತ್ರು ದೇಶಕ್ಕೂ ಅದೇ ವಿಮಾನಗಳನ್ನೇ ಸಪ್ಲೈ ಮಾಡಿರುವುದರಿಂದ, ಮತ್ತು ಪಾಕ್‌ ಪರವಾದ ಅದರ ಆಜನ್ಮ ಒಲವು ಈಗಾಗಲೇ ಸಾಬೀತಾಗಿರುವುದರಿಂದ, ಅದು ಎಲ್ಲೋ ಏನೋ ತಾರಾತಿಕಡಿ ಮಾಡುವುದಿಲ್ಲವೆಂಬ ವಿಶ್ವಾಸ ಇಟ್ಟುಕೊಳ್ಳುವುದಾದರೂ ಹ್ಯಾಗೆ ಸಾಧ್ಯ?

ಇದೆಲ್ಲಾ ಗೊತ್ತಿರುವುದರಿಂದಲೇ, ಪ್ರಣಬ್‌ ಮುಖರ್ಜಿ, ನೋಡೋಣ... ಅಗತ್ಯಬಿದ್ದರೆ, ನಮಗೆ ಸರಿಹೊಂದುವಂತಿದ್ದರೆ ತರಿಸಿಕೊಳ್ಳೋಣ... ಅತ್ಯಂತ ಡಿಪ್ಲೊಮ್ಯಾಟಿಕ್‌ ಆಗಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ. ಅತ್ಯುತ್ಸಾಹ ತೋರಿಸಲು ಹೋಗಿಲ್ಲ. ಮತ್ತು, ಅಮೆರಿಕ ಆಫರ್‌ ಮಾಡಿದ್ದೇ ನಮ್ಮ ಭಾಗ್ಯ ಅನ್ನುವಹಾಗೆ ಆಡಿಲ್ಲ. ಇಂತಹ non-committal ಮಾತುಗಳನ್ನಾಡುವುದು, ದೊಡ್ಡಣ್ಣನ ಬೆದರಿಕೆಗೆ ಜಗ್ಗದಿರುವಂತೆ ಸೆಟೆದು ನಿಲ್ಲುವುದು ನಮಗ್ಯಾಕೆ ಸಾಧ್ಯವಾಗುತ್ತದೆಂದರೆ, ನಮ್ಮಲ್ಲಿನ್ನೂ ಡೆಮಾಕ್ರಸಿಯಿದೆ! ಮತ್ತು ಅದು ಹಿಂದೆಂದಿಗಿಂತಲೂ ಶಕ್ತಿಯುತವಾಗಿದೆ. ಇಲ್ಲಿ ಯಾವುದೇ ಒಬ್ಬ ಮನುಷ್ಯ ತನ್ನ ತಿಕ್ಕಲುತನಗಳಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ಹಾಗಾಗೇ, ಯಾವ ಬಣ್ಣದ ರಾಜಕಾರಣಿಯಾದರೂ ಕೂಡ, ವಿದೇಶಾಂಗ ವ್ಯವಹಾರ ಮತ್ತು ದೇಶದ ರಕ್ಷಣೆಯ ವಿಷಯ ಬಂದಾಗ ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕಾಗುತ್ತದೆ. ಪಾಕಿಸ್ತಾನದ ಹಾಗೆ ದೊಡ್ಡಣ್ಣನ ಕಾಲಿಗೆ ಮೂಗುಜ್ಜುವ ಪರಿಸ್ಥಿತಿ ನಮಗೆಂದೂ ಬರುವುದಿಲ್ಲ.

ಇಂಥದ್ದೊಂದು ಡೆಮಾಕ್ರಸಿ ಇರುವುದಕ್ಕೇ ನಾವು ಹೆಮ್ಮೆ ಪಡಬೇಕು ಕಣ್ರೀ!

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಪೂರಕ ಓದಿಗೆ-

ಬುಷ್‌ ಬರಬೇಡವೆಂದದ್ದು ಮೋದಿಯನ್ನಾ : ನಿರ್ಗತಿಕ ಭಾರತವನ್ನಾ?

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more