• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವರ ಎತ್ತರವೂ ದೊಡ್ಡದು, ಮನಸ್ಸೂ ದೊಡ್ಡದು!

By Staff
|
Ravi Belagere on Thatskannada.com ರವಿ ಬೆಳಗೆರೆ
ರಂಗಭಟ್ಲ ಪಾಳಯಂ ಅಂತೊಂದು ಹಳ್ಳಿಯಿದೆ. ಉಹುಂ, ನೀವ್ಯಾರೂ ಅದರ ಹೆಸರನ್ನು ಕೇಳಿರಲು ಸಾಧ್ಯವಿಲ್ಲ. ಗುಂಟೂರು ಜಿಲ್ಲೆಯಲ್ಲಿದೆ ಅದು. ಆ ಹಳ್ಳಿಯ ಮಾತು ಬಿಡಿ ; ಅದರ ಹತ್ತಿರದಲ್ಲೇ ಇರುವ ಒಂದು ಪಟ್ಟಣದ ಹೆಸರನ್ನೂ ಕೇಳಿರುವ ಸಾಧ್ಯತೆಯಿಲ್ಲ ; ನಿಡುಬ್ರೊಲು! ನಾವೆಲ್ಲರೂ ಕೇಳಿರುವ ತೆನಾಲಿ ಅನ್ನುವ ಊರಿನಿಂದ ಸ್ವಲ್ಪ ದೂರದ ಊರು ಮತ್ತು ಹಳ್ಳಿ, ಇವು.

ಇಂಥ ಒಂದು ಕಗ್ಗಾಡಿನಂಥ ಕುಗ್ರಾಮದಲ್ಲಿ ಹುಟ್ಟಿದ ಮನುಷ್ಯ ಆತ. ಹೆಸರು, ತಾಡೇಪಲ್ಲಿ ಮೂರ್ತಿ. ಹಳ್ಳಿಯಲ್ಲೊಂದು ಶಾಲೆಯೂ ಇರದಿದ್ದರಿಂದ, ಆತ ಓದುವುದಕ್ಕೆಂದು ಕಾವೂರ್‌ಗೆ ಹೋಗುತ್ತಿದ್ದ. ಕಾವೂರ್‌ ಅನ್ನುವುದು, ಪಕ್ಕದಲ್ಲೇ ಇದ್ದ ಇನ್ನೊಂದು ಹಳ್ಳಿ. ಆಗಿನ ದಿನಗಳಲ್ಲಿ, ಆತನಿದ್ದ ಪರಿಸ್ಥಿತಿಯಲ್ಲಿ, ಅವನ ಹಳ್ಳಿಯ ಅವಸ್ಥೆಯಲ್ಲಿ, ಅವನು ಹೈಸ್ಕೂಲು ದಾಟುವುದೂ ಅನುಮಾನವಿತ್ತು. ಆದರೆ ಅವನು ಓದಿದ. ಪಿಯುಸಿ ಓದುವುದಕ್ಕಾಗಿ ಮಚಲೀಪಟ್ಟಣಂಗೆ ಹೋದ. ಅಲ್ಲಿನ ಹಿಂದೂ ಕಾಲೇಜಿನಲ್ಲೇ ಬಿಎಸ್ಸಿ ಮುಗಿಸಿದ. ಸಾಮಾನ್ಯ ಆಸಕ್ತಿಯವರು ಯಾರೂ ಆರಿಸಿಕೊಳ್ಳವಂಥ ಹವಾಮಾನ ವಿಜ್ಞಾನ ಮತ್ತು ಸಾಗರವಿಜ್ಞಾನವನ್ನು ಆರಿಸಿಕೊಂಡು, ಆಂಧ್ರ ಯೂನಿವರ್ಸಿಟಿಯಲ್ಲಿ ಎಂಎಸ್ಸಿ ಮಾಡಿದ. ಅದಾದ ಮೇಲೆ, ಚಿಕಾಗೋ ಯೂನಿವರ್ಸಿಟಿ ಹಾಗೂ ಕೆನಡಾದ ಮನಿಟೋಬಾ ಯೂನಿವರ್ಸಿಟಿಗಳು ಅವನನ್ನು ಕರೆದವು.

Indo-Canadian scientist Tad Murthyಅಲ್ಲಿ ಹೋದ ಮನುಷ್ಯ, ಅಲ್ಲೇ ತಳವೂರಿಬಿಟ್ಟ. ಶಾಲೆಯೂ ಇಲ್ಲದಂಥ, ಲೈಟೂ ಇಲ್ಲದಂಥ ಹಳ್ಳಿಯಾಂದರಲ್ಲಿ ಹುಟ್ಟಿ ಬೆಳೆದ ಹುಡುಗ, ಈಗ್ಗೆ ಮೂವತ್ತು ವರ್ಷಗಳ ಹಿಂದೆಯೇ, ಕೆನಡಾ ಎಂಬ ಶ್ರೀಮಂತ ದೇಶಕ್ಕೆ ಒಂದು ತ್ಸುನಾಮಿ ಮುನ್ಸೂಚನಾ ವ್ಯವಸ್ಥೆ ರೂಪಿಸಿಕೊಟ್ಟ.

ನಮ್ಮವರು ಹೇಗೆಲ್ಲಾ ಬೆಳೆದು ಎಂತೆಂಥದ್ದನ್ನೆಲ್ಲಾ ಸಾಧಿಸಿಬಿಡುತ್ತಾರೋ ನೋಡಿ. ತ್ಸುನಾಮಿಗಳಿಗೆ ಸಂಬಂಧಪಟ್ಟಂತೆ ಇವತ್ತು ಜಗತ್ತಿನಲ್ಲಿ ಯಾರಾದರೊಬ್ಬರು ಸರ್ವಜ್ಞರು ಅಂತಿದ್ದರೆ ಅದುನಮ್ಮ ಈ ಮೂರ್ತಿಯವರೇ.

ಮೊನ್ನೆಯ ದುರಂತದ ಬೆನ್ನಲ್ಲಿ ಈ ಮನುಷ್ಯನನ್ನ ನಮ್ಮೆಲ್ಲರಿಗೂ ಪರಿಚಯಿಸಿ, ದುರಂತದ ಛಾಯೆಯಲ್ಲೂ ನಮ್ಮಲ್ಲೊಂದು ಹೆಮ್ಮೆ ಮೂಡುವಂತೆ ಮಾಡಿದ್ದು, ನಾವೆಲ್ಲರೂ ಹೆಮ್ಮೆಪಡಬಹುದಾದಂಥ ಇನ್ನೊಬ್ಬ achiever, ಚಿದಾನಂದ ರಾಜಘಟ್ಟ ! ತುಂಬಾ ಚಿಕ್ಕವಯಸ್ಸಿನಲ್ಲೇ ತುಂಬಾ ಎತ್ತರಕ್ಕೇರಿದ ಹುಡುಗ, ಈ ರಾಜಘಟ್ಟ. ಕನ್ನಡದ ಹುಡುಗ. ‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆ ಓದುವವರಿಗೆಲ್ಲಾ ತುಂಬಾ ಇಷ್ಟವಾಗುವ ವರದಿಗಾರ. ಅಮೆರಿಕದಲ್ಲಿ ಆ ಪತ್ರಿಕೆಯ ವಿಶೇಷ ಪ್ರತಿನಿಧಿ. ಇವತ್ತು ಪತ್ರಿಕೆಗಳಲ್ಲಿ ನಮಗೇನಾದರೂ ಅಮೆರಿಕವೆಂಬ ದೇಶದ ಅಹಂಕಾರಗಳೂ, ಉದ್ದಟತನಗಳೂ, ತಲ್ಲಣಗಳೂ, ಅಮೆರಿಕನ್ನರ ಅಪರೂಪದ ಔದಾರ್ಯಗಳೂ, ಅಲ್ಲಿನ ಭಾರತೀಯರ ಬದುಕಿನ ಖುಷಿಗಳೂ-ಸವಾಲುಗಳೂ ಅರ್ಥವಾಗುತ್ತಿದ್ದರೆ, ನಮ್ಮನ್ನು ತಟ್ಟುತ್ತಿದ್ದರೆ,ಅದಕ್ಕೆ ಕಾರಣ, ರಾಜಘಟ್ಟನಂತಹ ಅಪರೂಪದ ವರದಿಗಾರರು. ಈತನ ಒಳನೋಟಗಳೇ ತುಂಬಾ ಭಿನ್ನ , ಮತ್ತು ತುಂಬಾ ಆಕರ್ಷಕ. ಬುಷ್‌ನಂಥ ಪರಮ expressionless ಮನುಷ್ಯನ ಆಂತರ್ಯವನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳುವ, ಮತ್ತು ತಾನು ಅರ್ಥ ಮಾಡಿಕೊಂಡಿದ್ದನ್ನು ಅಷ್ಟೇ ಚೆನ್ನಾಗಿ ಅರ್ಥ ಮಾಡಿಸುವ ಶಕ್ತಿ ರಾಜಘಟ್ಟನಿಗಿದೆ. ಜೊತೆಗೆ, ದೂರದ ಅಮೆರಿಕದಲ್ಲಿದ್ದು ಕೊಂಡೇ, ಈ ದೇಶದ ಒಳಿತಿನ ಬಗ್ಗೆ ಚಿಂತಿಸುವ ಅಪ್ಪಟ ದೇಸೀ ಮನಸ್ಸೂ ಆತನಿಗಿದೆ. ‘ಟೈಮ್ಸ್‌...’ ನಲ್ಲಿ ಆತನನ್ನೂ ಓದಿದವರಿಗಿದು ಚೆನ್ನಾಗಿ ಗೊತ್ತು.

ಅದಕ್ಕೆ ಇನ್ನೊಂದು ಸಾಕ್ಷಿ, ೊನ್ನೆ ರಾಜಘಟ್ಟ ಮಾಡಿರುವ ಮೂರ್ತಿಯವರ ಸಂದರ್ಶನ. ಎಲ್ಲೂ ಕೆಲಸಕ್ಕೆ ಬಾರದ, ಬುದ್ಧಿಜೀವಿಗಳನ್ನು ಮೆಚ್ಚಿಸುವಂಥ ಪ್ರಶ್ನೆಗಳಿಲ್ಲ. ಮೂರ್ತಿಯವರ ಉತ್ತರದಲ್ಲೂ ಕೂಡ, ಎಲ್ಲೂ ಹುಸಿ ಆಡಂಬರದ ಮಾತುಗಳಿಲ್ಲ. ಅಲ್ಲಿರುವುದು,ಒಂದು ಸರಳವಾದ, ಜನರ ಒಳಿತನ್ನು ಬಯಸುವಂಥ ಕಾಳಜಿ ಮಾತ್ರ. ಅನವಶ್ಯಕವಾಗಿ ಸರ್ಕಾರವನ್ನೂ -ಆಡಳಿತ ಯಂತ್ರವನ್ನೂ ದೂರುವಂಥ ಚಾಳಿಯೂ ಅಲ್ಲಿಲ್ಲ.

ನಮ್ಮ ದೇಶದಲ್ಲಿ ತ್ಸುನಾಮಿ ಮುನ್ಸೂಚನೆ ಕೂಡುವಂಥ ಒಂದು ವ್ಯವಸ್ಥೆ ಇಲ್ಲದಿರುವ ಬಗ್ಗೆ ಮೂರ್ತಿ ವಿಷಾದಪಟ್ಟಿದ್ದಾರೆಯೇ ಹೊರತು, ಅದಕ್ಕಾಗಿ ಸರ್ಕಾರವನ್ನು ನಿಂದಿಸಿಲ್ಲ. ಬದಲಿಗೆ , ತೀರಾ ಅಪರೂಪಕ್ಕೆ ನಡೆಯುವ ಇಂಥ ಅನಾಹುತಗಳ ಬಗ್ಗೆ ಸರ್ಕಾರ ಆದ್ಯತೆ ಆಧಾರದ ಮೇಲೆ ಕೆಲಸ ಮಾಡುವುದು ಸಾಧ್ಯವಿಲ್ಲ ಅಂತ ಹೇಳಿ, ನಮ್ಮ ಬುದ್ಧಿಜೀವಿಗಳ ಆಲೋಚನಾ ವಿಧಾನಕ್ಕೆ ಪರೋಕ್ಷವಾಗಿ ಚುಚ್ಚಿದ್ದಾರೆ. ಮೊನ್ನೆ ನಾವು ಹಿಂದೆಂದೂ ಕಂಡು- ಕೇಳಿರದಿದ್ದಂತಹ ತ್ಸುನಾಮಿ ನಮ್ಮ ದೇಶಕ್ಕೆ ಬಂದು ಬೆಚ್ಚಿ ಬೀಳಿಸಿತಲ್ಲಾ, ಆಗ ಅನೇಕ ಪತ್ರಿಕೆಗಳು, ಭಾರತಕ್ಕೆ ತ್ಸುನಾಮಿ ಅಪ್ಪಳಿಸಿದ್ದು ಇದೇ ಮೊದಲು ಅಂತ ಬರೆದವು. ಆದರೆ, ಅದು ಸುಳ್ಳು! ಮೂರ್ತಿಯವರ ಪ್ರಕಾರ, ಈ ಹಿಂದೆಯೇ ಎರಡು ಸಲ ಅಂಥ ರಾಕ್ಷಸೀ ಅಲೆಗಳು ನಮ್ಮ ನೆಲದ ರುಚಿಯನ್ನು ಕಂಡಿದ್ದವು !

1945ರ ನವೆಂಬರ್‌27ರಂದು ಅರಬ್ಬೀ ಸಮುದ್ರದಾಳದಲ್ಲಿ ಎದ್ದ ಕಂಪನಗಳು, ನಾವೀಗ ಗುಜರಾತ್‌, ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕ ಅಂತ ಕರೆಯುವ ರಾಜ್ಯಗಳ ಕರಾವಳಿಗೆ ಹಂತಕ ಅಲೆಗಳನ್ನು ಅಟ್ಟಿದ್ದವು. ತ್ಸುನಾಮಿ ಆಗ ನಮ್ಮ ಕಾರವಾರದವರೆಗೂ ಬಂದಿತ್ತು ! ಹಾಗೆ ಬಡಿದ ಮೂರು ಅಲೆಗಳ ಪೈಕಿ, ಎರಡನೇ ಅಲೆಗಳ ಎತ್ತರ 11.8 ಮೀಟರು! ಮುನ್ನೂರೂ ಚಿಲ್ಲರೆ ಜನರು ಬಲಿಯಾಗಿದ್ದರು.

ಈ ಅನಾಹುತದ ಬೆನ್ನಲ್ಲೇ, ಕ್ರಕಟೋವಾ ಜ್ವಾಲಾಮುಖಿ ಸ್ಫೋಟಿಸಿದ್ದರಿಂದಾಗಿ, ನಾಗಪಟ್ಟಣಂ ಸೇರಿದಂತೆ ತಮಿಳು ನಾಡಿನ ಅನೇಕ ಕರಾವಳಿ ಪಟ್ಟಣಗಳನ್ನೂ ತ್ಸುನಾಮಿ ಅಪ್ಪಳಿಸಿತ್ತು.

ಎರಡೂ ಭಾರೀ ಗಾತ್ರದವೇ. ಆದರೆ, ಅದು ಎರಡನೇ ಮಹಾಯುದ್ಧದ ಕಾಲವಾದ್ದರಿಂದ, ಎರಡೂ ಕೂಡ ಇತಿಹಾಸಕಾರರ ಗಮನ ಸೆಳೆಯದೆ ಹೋಗಿಬಿಟ್ಟವು. ಬ್ರಿಟಿಷರಾಗಲೇ ಭಾರತ ಬಿಟ್ಟು ಹೊರಡುವ ಸನ್ನಾಹದಲ್ಲಿ ದ್ದಿದ್ದರಿಂದ ಅವರಂತೂ ಈ ಅನಾಹುತಗಳ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳಲಿಲ್ಲ.

ಮೂರ್ತಿಯವರ ಹತ್ತಿರ ಈ ಅವಘಡಗಳಿಗೆ ದಾಖಲೆಯಿದೆ. ಹಾಗಾಗಿ, ಭಾರತಕ್ಕೆ ತ್ಸುನಾಮಿ ಬಂದಿದ್ದು ಇದೇ ಮೊದಲು ಅಂತ ಹೇಳುವುದು ಸರಿಯಲ್ಲ ಅಂತ ಅವರು ಹೇಳಿದ್ದಾರೆ.

ಹಾಗಿದ್ದರೆ, ನಮ್ಮ ಸರಕಾರ ಇಂಥದ್ದೊಂದು ಆಘಾತದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಿತ್ತಲ್ಲವೇ? ಒಂದು ಮುನ್ಸೂಚನಾ ವ್ಯವಸ್ಥೆಯನ್ನು ಸ್ವಾತಂತ್ರ್ಯ ಬಂದ ಇಷ್ಟು ವರ್ಷಗಳಲ್ಲಿ ಮಾಡಿಕೊಳ್ಳಬೇಕಿತ್ತಲ್ಲವೇ? ಅಂತ ಕೇಳಿದರೆ, ಮೂರ್ತಿ ನಕ್ಕು ಅಡ್ಡಡ್ಡ ತಲೆಯಾಡಿಸಿಬಿಡುತ್ತಾರೆ! ಯಾಕೆಂದರೆ , ಯಾವಾಗಲೋ ಅರವತ್ತು ವರ್ಷಕ್ಕೊಮ್ಮೆ ಬರುವ ಮಾದರಿಯ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳದಿರುವುದು ಅವರ ಪ್ರಕಾರ ಸಹಜ. ಅಲ್ಲದೆ, ತ್ಸುನಾಮಿ ಮುನ್ಸೂಚನಾ ವ್ಯವಸ್ಥೆ ಮಾಡಿಕೊಳ್ಳುವುದು ಕಡಿಮೆ ಖರ್ಚಿನದ್ದೇನೂ ಅಲ್ಲ. ಹಾಗಾಗಿ, ಅಂದೊಂದರ ಮೇಲೇ ಸಂಪನ್ಮೂಲಗಳನ್ನು ಅನಗತ್ಯವಾಗಿ ಖರ್ಚು ಮಾಡುವುದು ವೇಸ್ಟು. ಅದರ ಬದಲಿಗೆ, ಈಗಿರುವ ಹವಾಮಾನ ಇಲಾಖೆಯಲ್ಲಿ ಅಥವಾ ರಾಷ್ಟ್ರೀಯ ಸಾಗರ ವಿಜ್ಞಾನ ಸಂಸ್ಥೆಯಲ್ಲೇ, ತ್ಸುನಾಮಿ ಮುನ್ನೆಚ್ಚರಿಕೆ ಬಗ್ಗೆಯೂ ಒಂದು ವಿಭಾಗ ಮಾಡಬಹುದು. ಕಡಿಮೆ ಖರ್ಚಿನಲ್ಲಿ. ಅದಕ್ಕೆ ಬೇಕಿರುವುದು, ಆ ವ್ಯವಸ್ಥೆಯನ್ನು ಒಂದು ಕ್ಷಣವೂ ಬಿಡದಂತೆ ನಿರಂತರವಾಗಿ ಮಾನಿಟರ್‌ ಮಾಡುವ ಜನ ಅಷ್ಟೇ, ಅಂತೆಲ್ಲಾ ಬಹಳ ಪ್ರಾಕ್ಟಿಕಲ್‌ ಆದ ಸಲಹೆಗಳು ಮೂರ್ತಿಯವರ ಹತ್ತಿರ ಇವೆ. ಭೂಕಂಪದ ಪತ್ತೆಗೆಂದು ಈಗಾಗಲೇ ದೇಶದ ನೆಲದಲ್ಲಿ ಹೂತಿಟ್ಟಿರುವ ಭೂಕಂಪ ಮಾಪಕಗಳನ್ನೇ ಈ ಕೆಲಸಕ್ಕೆ ಉಪಯೋಗಿಸಬಹುದು ಅಂತಲೂ ಅವರು ಹೇಳಿದ್ದಾರೆ.

ಈ ಮೂರ್ತಿಯವರ ನೇತೃತ್ವದಲ್ಲಿ ಈಗಾಗಲೇ ಆಂಧ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳು , ಒಂದು ಅತ್ಯಂತ ಸುಸಜ್ಜಿತವಾದ, ಫೂಲ್‌-ಪ್ರೂಫ್‌ ಆದ ಪ್ರವಾಹ ಮುನ್ಸೂಚನಾ ವ್ಯವಸ್ಥೆಯನ್ನು ಸಿದ್ಧ ಮಾಡಿ ಇಟ್ಟುಕೊಂಡಿವೆ. ಪ್ರವಾಹವನ್ನೆದುರಿಸಲು ಈ ಎರಡು ರಾಜ್ಯಗಳು ಬೇರೆಲ್ಲ ಕ್ಕಿಂತಲೂ ಹೆಚ್ಚು ಸಶಕ್ತವಾಗಿವೆ.

ಇಂಥವರ ನೆರವು ನಮ್ಮ ದೇಶಕ್ಕೆ ಬೇಕು. ನನಗೆ ಒಂದೇ ಒಂದು ಪೈಸೆಯೂ ಬೇಡ; ಭಾರತ ಸರ್ಕಾರ ಕೇಳಿಕೊಂಡರೆ ಸಾಕು,ಒಂದು ತ್ಸುನಾಮಿ ವಾರ್ನಿಂಗ್‌ ಸಿಸ್ಟಮ್ಮನ್ನು ಸಿದ್ಧ ಮಾಡಿ ಕೊಡುವುದಕ್ಕೆ ನಾನು ರೆಡಿ ಅಂತ ಅವರೀಗಾಗಲೇ ತಮ್ಮ ಆಸಕ್ತಿಯನ್ನು ಹೊರಗೆಡವಿಬಿಟ್ಟಿದ್ದಾರೆ. ಕೆನಡಾ ಎಂಬ ಶ್ರೀಮಂತ ದೇಶಕ್ಕೆ ಅತ್ಯಂತ ದುಬಾರಿ ವೆಚ್ಚದಲ್ಲಿ ತಮ್ಮ ಜೀವಮಾನದ ಜ್ಞಾನವನ್ನೆಲ್ಲಾ ಎರಕ ಹೊಯ್ದು ಅವರು ಮಾಡಿಕೊಟ್ಟಂಥ ವ್ಯವಸ್ಥೆ ಅದು. ಅದನ್ನೇ, ಅಲ್ಲಿಗಿಂತ ಕಡಿಮೆ ಖರ್ಚಿನಲ್ಲಿ ಕೆಲಸ ಮಾಡುವ ಹಾಗೆ ಬದಲಿಸಿ, ಉಚಿತವಾಗಿ ಮಾಡಿಕೊಡಲು ಅವರು ಮುಂದೆ ಬಂದಿದ್ದಾರೆ.

ಆದರೆ, ಉಚಿತ ಸೇವೆಗೆ ನಮ್ಮಲ್ಲಿ ಯಾವತ್ತೂ ಬೆಲೆಯಿಲ್ಲ. ವಿಶೇಷವಾಗಿ ಸರ್ಕಾರದಲ್ಲಿ. ಯಾಕೆಂದರೆ, ಅಲ್ಲಿನವರು ತಮ್ಮ ಪ್ರತಿಯಾಂದು ‘ಸೇವೆ’ಯನ್ನೂ ಮಾರಾಟಕಿಟ್ಟು ಬಿಟ್ಟಿದ್ದಾರಲ್ಲ ! ಹಾಗಾಗಿ, ಸರ್ಕಾರ ಇನ್ನೂ ತುಟಿ ಬಿಚ್ಚಿಲ್ಲ. ತ್ಸುನಾಮಿ ಮುನ್ಸೂಚನಾ ವ್ಯವಸ್ಥೆ ಬಗ್ಗೆ ಮಾತಾಡಿಲ್ಲ.

ಆದರೆ, ಹಾಗಂತ, ನಿರಾಶೆಗೊಳ್ಳುವ- ಕ್ರುದ್ಧರಾಗುವ ಅಗತ್ಯವೇನಿಲ್ಲ ಬಿಡಿ ; ಮೂರ್ತಿಯವರಂಥ ಎತ್ತರದ ಸಾಧಕರು ಒಂದಲ್ಲಾ ಒಂದು ದಿನ ಈ ದೇಶದ ವ್ಯವಸ್ಥೆಯನ್ನು ಬದಲಿಸಿಯೇ ಬದಲಿಸುತ್ತಾರೆ. ಯಾಕೆಂದರೆ, ನಮ್ಮ ನಡುವೆಯೇ ಅನೇಕ ಭಾವೀ ಮೂರ್ತಿಗಳಿದ್ದಾರೆ !

(ಸ್ನೇಹ ಸೇತು : ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more