• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೀದಿ ಪಕ್ಕದಲ್ಲಿ ದೊಂಬರ ಬೊಂಬು ಹೂಳಿ ನಿಂತವನಾಗಿ...

By Staff
|
Ravi Belagere on Thatskannada.com ರವಿ ಬೆಳಗೆರೆ
ಆಯ್ಕೆ ನಿಮ್ಮದು.

ನೂರಾರು ಜನರಿರುವ ಸರ್ಕಸ್‌ ಕಂಪೆನಿಯಲ್ಲಿ ಆನೆಯ ಕಾಲ ಕೆಳಗಿನ ಸ್ಟೂಲು ಎತ್ತಿಡುವವರಾಗಿ ಸೇರಿಕೊಳ್ಳುತ್ತೀರೋ? ನಿಮ್ಮದೇ ಒಂದು ಪುಟ್ಟ ದೊಂಬರ ಗುಂಪು ಕಟ್ಟಿಕೊಂಡು ರಸ್ತೆ ಪಕ್ಕದಲ್ಲಿ ಬೊಂಬು ಹೂಳಿ, ತಂತಿ ಬಿಗಿದು, ಅದರ ಮೇಲೆ ಉಸಿರು ಬಿಗಿಹಿಡಿದು ನಡೆದು... ತಟ್ಟಿದ ಚಪ್ಪಾಳೆಯೆಲ್ಲ ನನ್ನವೇ ಅನ್ನುತ್ತೀರೋ?

ನಾನು ಎರಡನ್ನೂ ಮಾಡಿ ಗೊತ್ತಿರುವವನು. ಯಾರದೋ ಶಾಲೆಗಳಲ್ಲಿ , ಕಾಲೇಜುಗಳಲ್ಲಿ ದುಡಿದೆ. ಒಂದು ಶಾಲೆಯನ್ನು ಹೇಗೆ ನಡೆಸಬಾರದು ಅಂತ ಅರ್ಥ ಮಾಡಿಕೊಂಡೆ. ಹತ್ತು ಹಲವು ಪತ್ರಿಕೆಗಳಲ್ಲಿ ದುಡಿದೆ. ಅವೆಲ್ಲವುಗಳಿಗಿಂತ ಭಿನ್ನವಾದ ಪತ್ರಿಕೆ ಮಾಡಬಹುದಲ್ಲಾ ಅಂತ ಕನಸು ಕಂಡೆ. ನಾನು ಅವತ್ತಿಗೂ ಇವತ್ತಿಗೂ team workನ ಎಂಜಾಯ್‌ ಮಾಡುವ ಮನುಷ್ಯ. ಆದರೆ ಟೀಮಿನ ಮಧ್ಯೆ ಇದ್ದೂ ಒಬ್ಬಂಟಿಯಾಗಿ ಕೂತು ಕೆಲಸ ಮಾಡುವುದನ್ನು ರೂಢಿಸಿಕೊಂಡಿದ್ದೇನೆ. ಒಂದು ಶಕ್ತ ಟೀಮು ಕಟ್ಟುವುದು ನನಗೆ ಗೊತ್ತು. ಆದರೆ ಟೀಮಿನಾಚೆಗೆ ನಿಂತು ಏಕಾಂಗಿಯಾಗಿ ಕೆಲಸ ಮಾಡುವುದು ನನಗೆ ಇಷ್ಟ.

‘ನಮ್ಮ ಕನಸನ್ನು ನಾವು ಯಾವತ್ತಿಗೂ ಇನ್ನೊಬ್ಬರಿಗೆ ನನಸು ಮಾಡಲು ಬಿಡಕೂಡದು’ ಎಂಬುದು ನನ್ನ ಸಿದ್ಧಾಂತ. ನಿಮ್ಮ ಕನಸನ್ನು ಇನ್ನೊಬ್ಬರಿಗೆ ಎಕ್ಸ್‌ಪ್ಲೇನ್‌ ಮಾಡಬಹುದು. ಆದರೆ ಅರ್ಥ ಮಾಡಿಸಿಕೊಡುವುದು ಅಸಾಧ್ಯ. ನೀವೇನನ್ನೋ ಕನಸಿರುತ್ತೀರಿ. ಅವರು ಮತ್ತೇನನ್ನೋ ಅರ್ಥ ಮಾಡಿಕೊಂಡಿರುತ್ತಾರೆ. ಅವರ ಕೈಗೆ ಹಣ್ಣು-ಕಾಯಿ-ಕರ್ಪೂರ-ಪಂಚಾಮೃತ ಕೊಟ್ಟು ಪೂಜೆ ಮಾಡಿ ಅಂತ ಹೇಳಿದರೆ ಅವರು ಪೂಜೆಯೂ ಮಾಡಬಹುದು ; ಅದು ಶ್ರಾದ್ಧವೂ ಆಗಬಹುದು. ಕನಸು ಕೂಡ ಅಷ್ಟೆ. ಅದು ನಿಮ್ಮದೇ ಕೂಸು. ನೀವೇ ಹೊರಬೇಕು. ನೀವೇ ಹೆರಬೇಕು. ಪತ್ರಿಕೆ, ಶಾಲೆ, ಅರ್ಕೆಸ್ಟ್ರಾ, ಹೊಟೇಲು, ನೃತ್ಯತಂಡ-ನೀವು ಏನು ಬೇಕಾದರೂ ಮಾಡಲು ಹೊರಡಿ, ಆದರೆ ನೀವೇ ಮಾಡಿ. ನಿಮ್ಮ physical presence ಇಲ್ಲದೆ, ನಿಮ್ಮ ತೊಡಗಿಕೊಳ್ಳುವಿಕೆ ಇಲ್ಲದೆ, ನಿಮ್ಮ ತನ್ಮಯತೆ ಇಲ್ಲದೆ -ನೀವದನ್ನು ನಿಮ್ಮ ಕನಸಿನಂತೆ ನನಸು ಮಾಡಿಕೊಳ್ಳಲಾರಿರಿ.

ಯಾಕೆ ಈ ಮಾತು ಆರಂಭದಲ್ಲೇ ಹೇಳಿದೆನೆಂದರೆ, ಇಂಥದ್ದೊಂದು ಕನಸುಗಾರಿಕೆಯಿಲ್ಲದ ಮನುಷ್ಯ ಇನ್ನೊಬ್ಬರ ಸರ್ಕಸ್‌ ಕಂಪೆನಿಯಲ್ಲಿ ಆನೆ ಕಾಲ ಕೆಳಗಿನ ಸ್ಟೂಲು ಎತ್ತಿಡುತ್ತ ನೆಮ್ಮದಿಯಾಗಿ ಇದ್ದು ಬಿಡುವುದು ಲೇಸು. ಅದನ್ನು ನಾನು ಅವಮಾನ ಅಂತ ಭಾವಿಸುವುದಿಲ್ಲ. ಹಾಗೆ ಸ್ಟೂಲೆತ್ತಿಡುವವನೊಬ್ಬ ಇಲ್ಲದಿದ್ದರೆ ಸರ್ಕಸ್ಸು ಮುಗ್ಗರಿಸುತ್ತದೆ : ಕೇವಲ ಆನೆಯಲ್ಲ. ಅವನು ಟೀಮ್‌ವರ್ಕ್‌ನ ಒಂದು ಭಾಗ. ಅವನಿಗೆ ಜವಾಬ್ದಾರಿ ಬೇಕು. ದಕ್ಷತೆ ಬೇಕು. ಶಿಸ್ತು ಬೇಕು. ‘ ಈ ಟೀಮು ನನ್ನದು ’ ಎಂಬ devotion ಬೇಕು. ಕೆಲಸದೆಡೆಗೆ ಮಮಕಾರ ಬೇಕು. ಅದಿಲ್ಲದವನು ಕೇವಲ ಸರ್ಕಸ್ಸಿಗೆ ಪ್ರೇಕ್ಷಕನಾಗಬಲ್ಲ. ‘ನಾನು ಚಿಕ್ಕೋನಿದ್ದಾಗ ಎಂಥ ಸರ್ಕಸ್‌ ನೋಡಿದ್ದೆ ಗೊತ್ತಾ? ಆ ಕಂಪೆನಿ ಪಾಪ, ಸಮುದ್ರದಲ್ಲಿ ಮುಳುಗೋಯ್ತು ’ ಅಂತ ತುರುಬು ನೆನಪಿಸಿಕೊಂಡು ಸಿನಿಕತನದ ಮಾತಾಡಿಕೊಂಡು ತಿರುಗುತ್ತಾನೆ. Forget him.

ಆದರೆ ದಕ್ಷತೆ, ಶಿಸ್ತು, ಪ್ರಾಮಾಣಿಕತೆಗಳಿರುವ ಮನುಷ್ಯ ಟೀಮಿನೊಂದಿಗೆ ಬೆಳೆಯುತ್ತಾನೆ. ಗೌರವ ಗಳಿಸಿಕೊಳ್ಳುತ್ತಾನೆ. ನನ್ನ ಕಚೇರಿಯಲ್ಲಿ ಸಂತೋಷ್‌, ಸೀನ ಮುಂತಾದವರನ್ನು ಈ ಕಾರಣಕ್ಕಾಗಿಯೇ ಸಂತೋಷಣ್ಣ , ಸೀನಣ್ಣ ಅಂತ ಇತರೆ ಹುಡುಗರು ಗೌರವದಿಂದ ಮಾತನಾಡಿಸುತ್ತಾರೆ : ನಾನೂ ಕೂಡ! ಏಕೆಂದರೆ ಒಂದು ಕಾಲಕ್ಕೆ ನಾನೂ ಇಂಥ ಟೀಮುಗಳಲ್ಲಿದ್ದವನೇ. ನಾನಿದ್ದ ಯಾವ ಟೀಮೂ ಸೋತಿಲ್ಲ. ನಾನು ಕೈಯಿರಿಸಿದ ಪತ್ರಿಕೆಗಳ ಸರ್ಕ್ಯುಲೇಶನ್ನು ಯಾವತ್ತಿಗೂ ಕುಸಿದಿಲ್ಲ. ನನಗೆ ನನ್ನದೇ ಆದ ಸ್ವಾತಂತ್ರ ಕೊಟ್ಟು ಕೈ ಬಿಟ್ಟರೆ ನೋಡನೋಡುತ್ತಲೇ ಒಂದು ಪುಟ್ಟ ಗೆಲುವನ್ನು ಸಾಧಿಸಿ ತೋರಿಸಬಲ್ಲೆ. ನನ್ನ ಈ ತಾಕತ್ತನ್ನು ಅರ್ಥಮಾಡಿಕೊಂಡಿದ್ದವರು ಶಾಮರಾಯರು. ಅವರ ಕನಸುಗಳನ್ನು ಅರ್ಥ ಮಾಡಿಕೊಂಡಿದ್ದವನು ನಾನು.

ಆದರೆ ಟೀಮ್‌ನಲ್ಲಿದ್ದವರ ಪೈಕಿಯೇ ಒಬ್ಬನ್ಯಾವನಿಗೋ ಹುಳ ಕಡಿಯುತ್ತದೆ. ಇನ್ನು ಸರ್ಕಸ್‌ ಕಂಪನಿ ಸಾಕು : ಬೀದಿ ಪಕ್ಕದಲ್ಲಿ ಒಂದು ದೊಂಬರ ಬೊಂಬು ಹೂಳುತ್ತೇನೆ ಅಂತ ತೀರ್ಮಾನಿಸುತ್ತಾನೆ. ಅಲ್ಲಿಂದ ಶುರುವಾಗುತ್ತದೆ ನೋಡಿ ಅವನ ತಾಕತ್ತಿಗೆ, ಕಷ್ಟ ಸಹಿಷ್ಣುತೆಗೆ, ಕ್ರಿಯೇಟಿವಿಟಿಗೆ ಛಾಲೆಂಜು. ಅವನಲ್ಲಿ ಕನಸು ಕುದಿಯಬೇಕು. ಬಸಿರೊಳಗೆ ಕೂಸು ಒದೆಯಬೇಕು. ಅದರ ಹೊರತು ಬೇರೆ ಏನನ್ನೂ ಮಾಡುವುದಿಲ್ಲ ಅಂತ ದೀಕ್ಷೆ ತೊಡಬೇಕು. ಆಳೆತ್ತರದ ಮನುಷ್ಯ ತನ್ನನ್ನು ತಾನು ಹಿಡಿಕೊಂಡು ತನ್ನದೇ ಮುಟಿಗೆಯಾಳಗಿನ ದಿವ್ಯ ಶಕ್ತಿಯಾಗಿಬಿಡಬೇಕು. ನಿಜಕ್ಕೂ ತನ್ನಲ್ಲಿ ಅಂಥದೊಂದು ಸ್ವತಂತ್ರ ದೊಂಬರ ತಂಡ ಕಟ್ಟುವ ತಾಕತ್ತಿದೆಯಾ? ಕೇಳಿಕೊಳ್ಳಬೇಕು.

ಸುಳ್ಳೇ ಸ್ವತಂತ್ರರಾಗುತ್ತೇವೆಂದು ಹೊರಟ ಎಲ್ಲ ನಿರ್ದೇಶಕರು, ಸಂಪಾದಕರು, ಹೊಟೇಲು ಮಾಲಿಕರು, ಕ್ಷೌರದಂಗಡಿ ತೆರೆದವರು -ಉಹುಂ, ಎಲ್ಲರೂ ಯಶಸ್ವಿಯಾಗಿಲ್ಲ. ಅವರಿಗೆ ಕಸುಬು ಚೆನ್ನಾಗಿ ಗೊತ್ತಿರುತ್ತದೆ. ಆದರೆ ಕನಸಲು ಬಾರದು. ಚೆನ್ನಾದ ಕನಸು ಕಾಣುವವರೂ ಇರಬಹುದು. ಅವರಿಗೆ ದುಡಿಯಲು ಆಯಾಸ. ತಾವು ಬೇಕಾದರೆ ಕತ್ತೆ ದುಡಿಮೆ ಮಾಡಿಬಿಡುತ್ತಾರೆ ; ಆದರೊಂದು ಟೀಮು ಕಟ್ಟಲು ಬಾರದು. ತಾವೇ ಕಟ್ಟಿದ ಟೀಮಿನೊಂದಿಗೆ ಕಿತ್ತಾಡಿಕೊಳ್ಳುತ್ತಾರೆ. ತಾವು ಮಾಡಬೇಕಾದುದನ್ನು ಮತ್ತೊಬ್ಬರಿಗೆ ವಹಿಸಿ ಪಡಪೋಶಿಗಳಾಗಿ ಹೋಗುತ್ತಾರೆ. ತಾವು ಬೆಳೆಯುವುದಕ್ಕಿಂತ ಹೆಚ್ಚಾಗಿ, ತಾವು ಮೊದಲಿದ್ದ ಅಂಗಡಿಯನ್ನೋ, ತಂಡವನ್ನು ಹಾಳುಮಾಡುವುದು ಹೇಗೆ ಅಂತ ಹೊರಡು ಕ್ರಮೇಣ ಸರ್ವನಾಶವಾಗಿಬಿಡುತ್ತಾರೆ. ಅಂಥವರು ಟೀಮಿನಲ್ಲೊಬ್ಬರಾಗಿದ್ದು, ಆನೆ ಸ್ಟೂಲು ಎತ್ತಿಡುತ್ತ ಮುಂದುವರೆಯುವುದು ಅವರಿಗೇ ಕ್ಷೇಮ.

ನಾನು ಶಾಮರಾಯರಿಂದ ಬೇರ್ಪಟ್ಟು ರಸ್ತೆ ಪಕ್ಕದಲ್ಲಿ ದೊಂಬರ ಬೊಂಬು ಹೂಳಿದ ದಿನ ನನ್ನ ಗುರುವಾಗಿ- ಗುರಿಯಾಗಿ ಇದ್ದುದು ಶಾಮರಾಯರಲ್ಲ ; ಅಲ್ಲಿದ್ದುದು ನನ್ನ ಹಸಿವು, ನನ್ನ ಅನ್ನ! ಶಾಮರಾಯರೊಂದಿಗೆ ಜಗಳವಾಡಿಕೊಂಡು ಹೊರಬಿದ್ದಿದ್ದೆನಾದರೂ, ದ್ವೇಷ ನನ್ನನ್ನು motivate ಮಾಡುತ್ತಿರಲಿಲ್ಲ. Motivate ಮಾಡುತ್ತಿದ್ದುದು ಹಸಿವು. ಅದಕ್ಕಿಂತ ಅದ್ಭುತ ಗುರುವು ಮತ್ತೊಂದಿಲ್ಲ. ಆದರೆ ಶಾಮರಾಯರ ಅನೇಕ ಗುಣಗಳು (ಬಹುಶಃ ಅವರೊಂದಿಗೆ ಇದ್ದೂ ಇದ್ದೂ) ನನಗೆ ಬಂದುಬಿಟ್ಟಿದ್ದವು. ವಿಪರೀತ ವರ್ಕೋಹಾಲಿಕ್‌ ಆದೆ. ವ್ಯಾಪಾರ-ವಹಿವಾಟುಗಳಲ್ಲಿ ವಹಿಸಬೇಕಾಗಿದ್ದ ಅಷ್ಟೂ ಎಚ್ಚರಿಕೆಗಳನ್ನು ನನ್ನವಾಗಿಸಿಕೊಂಡಿದ್ದೆ. ಸುದ್ದಿಗಷ್ಟೇ ಅಲ್ಲ, ಮಾರಾಟಕ್ಕೆ ಹೇಗೆ ಶಕ್ತ network ಕಟ್ಟಬೇಕು ಎಂಬುದನ್ನು ಅರ್ಥಮಾಡಿಕೊಂಡಿದ್ದೆ. ಈ ತೆರನಾದ ಪತ್ರಿಕೋದ್ಯಮ ಹತ್ತು ವರ್ಷಗಳ ನಂತರ ಹೇಗಿರಬಹುದು, ನನ್ನನ್ನು ಎಲ್ಲಿಗೆ ಒಯ್ಯಬಹುದು ಅಂತ ಊಹಿಸಬಲ್ಲವನಾಗಿದ್ದೆ.

ಕಂಪ್ಯೂಟರಿನೆದುರಿಗೆ ಕುಳಿತು ಅಕ್ಷರ ಜೋಡಿಸುವುದರಿಂದ ಹಿಡಿದು, ಎಷ್ಟು ಮುದ್ರಣ ಕಾಗದ ದಾಸ್ತಾನು ಮಾಡಿದರೆ ಎಷ್ಟು ಹಣ ಉಳಿಯಲು ಸಾಧ್ಯ ಅಂತ ಲೆಕ್ಕ ಹಾಕುವತನಕ ಪ್ರತಿಯಾಂದನ್ನೂ ಕಲಿತುಕೊಂಡಿದ್ದೆ. ಆದರೂ ರಸ್ತೆ ಬದಿಯಲ್ಲಿ ಹೂಳಿದ ದೊಂಬರ ಬೊಂಬು ಕಡಿಮೆ ಕಷ್ಟವನ್ನೇನೂ ಕೊಟ್ಟಿಲ್ಲ. ಎಷ್ಟು ಸಲ ಆಯತಪ್ಪಿ ಬಿದ್ದೆನೋ?ಎಷ್ಟುಸಲ ಮೂಕ ಪೆಟ್ಟಾಗಿ ನರಳಿದೆನೋ? ಆದರೆ ಬಿದ್ದ ಪ್ರತಿ ಚಪ್ಪಾಳೆಯೂ ನನ್ನದೇ ಅಂತ ಎತ್ತಿಟ್ಟುಕೊಳ್ಳುವ ಸಡಗರವಿತ್ತಲ್ಲ? ಅದು ಆಯಾಸ ಮರೆಸಿತು. ಪ್ರತಿ ಅಪಘಾತವೂ ಕಸುಬಿನ ಹೊಸ ರೆಬೆ-ಕೊಂಬೆ-ಟಿಸಿಲುಗಳನ್ನು ಪರಿಚಯಿಸಿತು. ಈವತ್ತು ಮರಹತ್ತಿದ ಮುದ್ದುಕೋತಿ ಹಲ್ಲು ಕಿರಿಯುತ್ತದೆ.

ಹೊಸಬರು ದೊಂಬರ ಬೊಂಬು ಹತ್ತ ಹೊರಟಾಗ ಕೈ ಚಾಚುತ್ತದೆ. ಪಕ್ಕದಲ್ಲಿ ಜಾಗ ಮಾಡಿಕೊಡುತ್ತದೆ. Come with me.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more