ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಲ್ಲಿಯಲ್ಲಿ ದೀಪಾವಳಿಯಂದು ದೇಶದ ಎದೆಗೆ ಬೆಳ್ಳಿ ಬಾಕು ಇರಿದರು!

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

‘ಶಾರುಖ್‌ ಖಾನ್‌ಗೆ ನಲವತ್ತು’ಅಂದರು. ಆಗ್ಲೇ ನಲವತ್ತಾ-ಅನಿಸಿತು. ನನ್ನ ಅತ್ಯಂತ ಇಷ್ಟದ ನಟ ಶಾರುಖ್‌. ಆತ ನನಗೆ ದಿಲೀಪ್‌ ಕುಮಾರ್‌ನನ್ನು ನೆನಪಿಗೆ ತರುತ್ತಾನೆ. ಆದರೆ ದಿಲೀಪ್‌ನನ್ನು ಮೀರಿಸಬಲ್ಲ ಕಲಾವಿದ. ಈ ಮಾತನ್ನು ಸ್ವತಃ ಅಮಿತಾಭ್‌ ಒಪ್ಪಿಕೊಂಡಿದ್ದಾನೆ. ಬಾಲಿವುಡ್‌ನ ಬಾದ್‌ಷಾ ಅಂದ್ರೆ ಶಾರುಖ್‌. ಅವನು ನನಗಿಂತ ದೊಡ್ಡ ಹೆಸರಿನ ನಟ ಅಂದಿದ್ದಾನೆ. ಅದು ಅಮಿತಾಭ್‌ನ ಸೌಜನ್ಯವೂ ಹೌದು. ಶಾರುಖ್‌ನ ತಾಕತ್ತೂ ಹೌದು.

ನಾನು ಅವನ ಎಲ್ಲ ಸಿನಿಮಾಗಳನ್ನೂ ನೋಡಿಲ್ಲ. ಅದರೆ ಖ್ಯಾತಿಗೆ ಬಂದ ಎಲ್ಲ ತರಹದ ಜನರ ಸಾಮಾಜಿಕ ವರ್ತನೆಗಳ ಬಗ್ಗೆ ಒಂದು ನಿಗಾ ಇಡುವುದು ನನ್ನ ಚಟ. ಅದು ರೂಢಿ. ವಿಶೇಷವಾಗಿ ನಟ-ನಟಿಯರಿಗೆ funny ಅನ್ನಿಸುವಂತಹ ಅತಿರೇಕಗಳಿರುತ್ತವೆ. ಅವರು ಭಾವುಕರು. ಕೆಲವು ಸಲ ಅತೀ ಆಡ್ತಾರೆ. ಎಲ್ಲ ಸಮರ್ಥನೀಯ. ಆದರೆ ಶಾರುಖ್‌ ಒಂದೆರಡು ಟೀವಿ ಕಾರ್ಯಕ್ರಮಗಳಲ್ಲಿ mild ಆಗಿ ಕುಡಿದು ಕಾಣಿಸಿಕೊಂಡಿದ್ದ ಎಂಬುದನ್ನು ಬಿಟ್ಟರೆ, ಸಲ್ಮಾನ್‌ ತರಹ ಚಿಲ್ಲರೆಯಲ್ಲ. ಅಮೀರ್‌ ಖಾನ್‌ನಲ್ಲಿ ಕಂಡಂತಹ deviationಗಳೂ ಈ ನಟನಲ್ಲಿ ಕಾಣಲಿಲ್ಲ. ದೊಡ್ಡ ಸ್ಕ್ಯಾಂಡಲುಗಳಿಲ್ಲ. ದುಡ್ಡಿನ ಹೇರಾಫೇರಿಗಳಲ್ಲಿ ಶಾರುಖ್‌ ಹೆಸರು ಕಾಣಿಸಿಕೊಂಡಿಲ್ಲ. ಎಲ್ಲಕ್ಕೂ ಮಿಗಿಲಾಗಿ, ಶಾರುಖ್‌ ಅದ್ಭುತ ನಟ. ‘ದೇವದಾಸ್‌’ನಂತಹ ಚಿತ್ರಗಳಲ್ಲಿ ಸ್ವಲ್ಪ ಪೇಲವವಾಗಿದ್ದಿರಬಹುದು ನಟನೆ. ಆದರೆ ಒಂದು anti hero ಪಾತ್ರವನ್ನು ಕೂಡ ಅದ್ಭುತವಾಗಿ ನಿರ್ವಹಿಸಿಕೊಂಡು ಹೋಗಿ ಬಿಡುವ ಅಭಿಜಾತ ಕಲಾವಿದ ಅವನು.

Sharukh Khanನಮ್ಮ ಇತ್ತೀಚಿನ ತಲೆಮಾರಿನ ಕನ್ನಡ ನಟರನ್ನು ಸುಮ್ಮನೆ ನೆನಪು ಮಾಡಿಕೊಂಡು ನೋಡಿ? ಎಷ್ಟು ಡಿಸ್‌ಅಪಾಯಿಂಟಿಂಗ್‌ ಅನ್ನಿಸುತ್ತದೆ ಸನ್ನಿವೇಶ. ನಗುನಗುತ್ತ ಮಾತನಾಡುವ, ಹುಡುಗಿಯರ ಮನೆಸೆಳೆಯುವ, ಅಂಗಿ ಬಿಚ್ಚಿ ನಿಲ್ಲಿಸಿದರೆ ಫೈಟ್‌ ಮಾಡಬಲ್ಲ ಬಿಡು ಅಂತಲಾದರೂ ಅನ್ನಿಸುವ, pleasing ಆದ ಮುಖಭಾವದ ಹುಡುಗರೇ ಕಾಣಿಸುವುದಿಲ್ಲ. ಒಬ್ಬನು ನೂರ ಇಪ್ಪತ್ತು ಕೇಜಿ, ಇನ್ನೊಬ್ಬ ಪರಮ ದುರಹಂಕಾರಿ, ಮತ್ತೊಬ್ಬನ ಹತ್ತಿರಕ್ಕೆ ಹೋದರೆ ಉಗಿದ ಪಾನ್‌ ಪರಾಗ್‌ ವಾಸನೆ, ಅವನ್ಯಾವನಿಗೋ ಹೈಟೇ ಇಲ್ಲ. ಮಗದೊಬ್ಬ ಜೋಕರ್‌ ಆಗಿದ್ದಾಗಲೇ ಎಷ್ಟು ಚೆನ್ನಾಗಿದ್ದ ಅನ್ನಿಸುತ್ತಾನೆ! ಇದು ಕನ್ನಡದ ಹೀರೋಗಳ ಪರಿಸ್ಥಿತಿ. ನೋಡಲಿಕ್ಕೆ ವಿಷ್ಣುವರ್ಧನ್‌ನ ನಂತರ ಮುಖ, ದೇಹ, ನಟನೆ ಎಲ್ಲವೂ ಚೆನ್ನಾಗಿದ್ದ ನಟ ಶಶಿಕುಮಾರ್‌. ಅಹಂಕಾರಕ್ಕೆ, ಅತಿರೇಕಕ್ಕೆ, ಕುಡಿತಕ್ಕೆ ಬಿದ್ದು ಶಾಶ್ವತವಾಗಿ ಮುಖ ಒಡೆದುಕೊಂಡುಬಿಟ್ಟ.

ಇಂಥವು ಹಿಂದಿ ಚಿತ್ರರಂಗದಲ್ಲೂ ಆಗಿವೆ. ಕುಡಿದು, ಬಿದ್ದು, ಮುಖ ಕೆಡಿಸಿಕೊಂಡು, ಪೊಲೀಸರ ಪಾಲಾಗಿ, ಜೈಲಿಗೆ ಹೋಗಿ, ದೇಶವನ್ನೇ ಬಿಟ್ಟು ಹೋದವರೂ ಇದ್ದಾರೆ. ಆದರೆ king khan ಅನ್ನಿಸಿಕೊಂಡ ಶಾರುಖ್‌ ಇದ್ಯಾವುದನ್ನೂ ಹತ್ತಿರಕ್ಕೆ ಬಿಟ್ಟು ಕೊಳ್ಳದೆ ಘನತೆಯಿಂದ ಬದುಕಿದ. ಇವತ್ತು ಆತನಿಗೆ ನಲವತ್ತು ವರ್ಷ. ಇಂಗ್ಲಂಡಿನಲ್ಲೆಲ್ಲೋ ಷೂಟಿಂಗಿನಲ್ಲಿದ್ದಾನೆ. ಆತನ ಮುಂಬಯಿಯ ಮನೆಯಾದ ಮನ್ನತ್‌ನ ಎದುರು ಸಾವಿರಾರು ಅಭಿಮಾನಿಗಳು. ಎಲ್ಲರೂ greet ಮಾಡಲು ಬಂದಿದ್ದಾರೆ.

ಅರ್ಥ ಮಾಡಿಕೊಳ್ಳಿ : ಶಾರುಖ್‌ ಖಾನ್‌ ಒಬ್ಬ ಮುಸಲ್ಮಾನ ಈ ದೇಶಕ್ಕೆ ಇಲ್ಲಿನ ಕೋಟ್ಯಂತರ ಜನಕ್ಕೆ ಜಾತಿಯನ್ನು ಮೀರಿಯೂ ಒಬ್ಬ ನಟನನ್ನ, ಲೇಖಕನನ್ನ, ಕ್ರಿಕೆಟಿಗನನ್ನ, ಕವಿಯನ್ನ, ಪತ್ರಕರ್ತನನ್ನ, ರಾಜಕಾರಣಿಯನ್ನ ಪ್ರೀತಿಸಲು ಬರುತ್ತದೆ. ಆದರೆ ಭಾರತದ ಗಡಿಯಿಂದ ಕೆಲವೇ ಮೈಲುಗಳಾಚೆಗಿನ ಪಾಕಿಸ್ತಾನದ ಅಥವಾ ಆಜಾದ್‌ ಕಾಶ್ಮೀರದ ಒಂದು ಊರಿನಲ್ಲಿ ಒಬ್ಬೇ ಒಬ್ಬ ಹಿಂದುವನ್ನು, ಸಿಖ್ಖನನ್ನು, ಕ್ರಿಶ್ಚಿಯನ್ನನನ್ನು, ಯಹೂದಿಯನ್ನು, ಜೈನನನ್ನು,ಬೌದ್ಧನನ್ನು ಪ್ರೀತಿಸುವವರು ಸಿಗುತ್ತಾರಾ? ಹುಡುಕಿ ಕೊಂಡು ಬನ್ನಿ.

ಭಾರತೀಯ ಮುಸಲ್ಮಾನ ಬಿಜೆಪಿಯ ಅಭ್ಯರ್ಥಿಯನ್ನು ಗೆಲ್ಲಿಸಿದ್ದಿದೆ. ವಾಜಪೇಯಿಯನ್ನು ಇಷ್ಟಪಡುವ ಪ್ರಾಮಾಣಿಕ ಮುಸಲ್ಮಾನರಿದ್ದಾರೆ. ಪಾಕಿಸ್ತಾನದ ಮಹಮ್ಮದ್‌ ಅಲಿ ಜಿನ್ನಾನನ್ನು ‘ಒಂದು ಕಾಲಕ್ಕೆ ನಮ್ಮ ಟಿಳಕರ ವಕೀಲನಾಗಿದ್ದನಂತೆ’ ಅಂತ ಇಷ್ಟಪಡುವ ರಾಷ್ಟ್ರಪ್ರೇಮಿಗಳಿದ್ದಾರೆ. ಪಾಕಿಸ್ತಾನಿ ಮಗುವೊಂದು, ಈ ದೇವಿದಾಸ್‌ ಶೆಟ್ಟಿಯ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದರೆ ಮಗುವಿನ ಕೈಗೆ ಹೂವು ಕೊಟ್ಟ ಭಾರತೀಯರಲ್ಲಿ ಹಿಂದೂಗಳಿದ್ದರು, ಮುಸಲ್ಮಾನರಿದ್ದರು, ಕ್ರೆೃಸ್ತರಿದ್ದರು, ಯಾವ ಜಾತಿಗೂ-ಧರ್ಮಕ್ಕೂ ಸೇರದ ನನ್ನಂಥವರಿದ್ದರು.

ಆದರೆ ದಿಲ್ಲಿಯಂತಹ ಪುರಾತನ ನಗರಿ, ದೀಪಾವಳಿ ಹಬ್ಬದ ಸಂಭ್ರಮ, ಮನೆಮನೆಯ ಮಂದಿಯೆಲ್ಲ ಮಾರುಕಟ್ಟೆಗೆ ಬರುತ್ತಾರೆ-ಸರಿಯಾಗಿ ಅದೆಲ್ಲವನ್ನೂ ನೋಡಿಕೊಂಡು ಮರಾಮೋಸದಲ್ಲಿ ಪರಾರಿಯಾಗುತ್ತಾನಲ್ಲ?ಅವನು ಯಾವ ಧರ್ಮದ, ಯಾವ ಜಾತಿಯ, ಯಾವ ರಕ್ತದ ಮನುಷ್ಯ?ಸೈನಿಕನಾಗಿದ್ದರೆ ಕಾಲೂರಿ ನಿಂತು ಯುದ್ಧ ಮಾಡುತ್ತಿದ್ದ. ಧಾರ್ಮಿಕನಾಗಿದ್ದರೆ ಕೈ ಮುಗಿದು ನಿಂತು ಮಾನವ ಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದ. ರಾಷ್ಟ್ರಪ್ರೇಮಿಯಾಗಿದ್ದಿದ್ದರೆ ತನ್ನ ರಾಷ್ಟ್ರದ ಏಳಿಗೆಗೆ ದುಡಿಯುತ್ತಿದ್ದ. ಧೀರನಾಗಿದ್ದರೆ ಸಾವಿರ ಪ್ರಾಣ ಉಳಿಸಲು ಹೋರಾಡುತ್ತಿದ್ದ. ಆದರೆ ದಿಲ್ಲಿಯ ಮಾರುಕಟ್ಟೆಯಲ್ಲಿ ಬಾಂಬು ಹೂಳಿದ ಮನುಷ್ಯ ಇದ್ಯಾವುದೂ ಅಲ್ಲ :

ಅವನು ಪಾಕಿಸ್ತಾನಿ !

ಅವನು ಯಾವತ್ತೂ, ಯಾವ ಸ್ಥಿತಿಯಲ್ಲೂ, ಯಾರಿಗೂ ಒಳ್ಳೆಯದನ್ನು ಮಾಡಲಾರ. ಮೊನ್ನೆ ಮೊನ್ನೆ ಭೂಕಂಪವಾದಾಗ ಎದೆಯ ಮೇಲೆ ಎರಡೂ ಕೈಯಿಟ್ಟುಕೊಂಡು ‘ಅಲ್ಲಾ ಹುವೇ, ನಮ್ಮ ದೇಶದ ಒಂದು ತಲೆ ಮಾರೇ ನಶಿಸಿಹೋಯಿತು’ ಅಂದು ಕಣ್ಣೀರಿಟ್ಟ ಪರ್ವೇಜ್‌ ಮುಷರ್ರಫ್‌. ಭಾರತ ಮಂಜು ಕರಗಿದಂತೆ ಕರಗಿತು. ಇಲ್ಲಿಂದ ಎಲ್ಲ ತರಹದ ನೆರವೂ ಪಕ್ಕದ ಮನೆಗೆ ಹೋಯಿತು. ನೀವು ನಂಬಲಿಕ್ಕಿಲ್ಲ ‘ಒಂದು ಸಲ ಪಾಕಿಸ್ತಾನಕ್ಕೆ ಹೋಗಿ ಬಂದು ಬಿಡಾಣ ಮಾರಾಯಾ...ಏನೇನು ಪರಿಸ್ಥಿತಿನೋ?’ ಅಂತ ನಾನು-ವಿಶ್ವೇಶ್ವರ ಭಟ್‌ ಮಾತಾಡಿಕೊಂಡಿದ್ದೆವು. ಮನುಷ್ಯನ ಸಂಕಟ ಹಾಗೆ ಮಿಡಿಯುವಂತೆ ಮಾಡುತ್ತದೆ. ಭೂಕಂಪದಿಂದಾಗಿ ತತ್ತರಿಸಿ ಹೋದ ಪಾಕಿಸ್ತಾನಕ್ಕೆ ಕೈಯೆತ್ತಿ ನೆರವು ನೀಡಿತು ಭಾರತ.

ಅದರ ಮಾತು ಹಾಗಿರಲಿ: ಭಾರತದಲ್ಲೇ ಇದ್ದು, ಈ ದೇಶದ ಎಲ್ಲ ಸವಲತ್ತೂ ತಿಂದು, ನಮ್ಮ ಯೋಧರನ್ನು ಗಡಿಯಲ್ಲಿ ನಿಲ್ಲಲಿಕ್ಕೂ ಬಿಡದೆ ಕಾಡುವ ಕಾಶ್ಮೀರಿಗಳಿಗಾಗಿ - ಅವರ ಕೈಗಳಲ್ಲಿ ಹತರಾದ ನಮ್ಮ ಯೋಧರ ಗೆಳೆಯರೇ ಎಂತೆಲ್ಲ ನೆರವು ನೀಡಿದರು. ಎಷ್ಟೆಲ್ಲ ಸೇವೆ ಮಾಡಿದರು!

ಇವರ್ಯಾರಿಗಾದರೂ ಋಣಭಾರ, ಮನುಷ್ಯತ್ವ ಇದೆಯಾ ಕೇಳಿ? ಅದೇ ಪಾಕ್‌ ಆಕ್ರಮಿತ ಮುಜಫರಾಬಾದ್‌ನ ಮತಾಂಧ ಜನ. ಅವರನ್ನು ಶ್ರೀನಗರ್‌ಗೆ ಬರಮಾಡಿಕೊಂಡವರು ಇದೇ ಕಾಶ್ಮೀರದ ‘ಭಾರತೀಯ ಜನ!’

ಅಲ್ಲಿಂದ ಅವರು ನೇರವಾಗಿ ಬಂದದ್ದು ದಿಲ್ಲಿಗೆ. ಇಲ್ಲಿ ಅವರನ್ನು ಬರಮಾಡಿಕೊಂಡದ್ದು ಅದೇ ಕಾಶ್ಮೀರಿ ಮುಸಲ್ಮಾನರು. ದಿಲ್ಲಿಯಲ್ಲಿ ಮೊದಲ ಬಾಂಬು ಸಿಡಿದ ಕೂಡಲೆ ಕಾಶ್ಮೀರದ ಶ್ರೀನಗರ್‌ಗೆ ಒಂದು ಮೊಬೈಲ್‌ ಕರೆ ಹೋಯಿತಂತೆ. ಅಲ್ಲಿಂದ ತಕ್ಷಣ ಮುಜಫರಾಬಾದ್‌ಗೆ ಇನ್ನೊಂದು ಕರೆ ಹೋಯಿತಂತೆ ! ತಿಳಿಸಿದ್ದಾದರೂ ಎಂತಹ ಸಂದೇಶ!

‘ಭಾರತದ ಕಾಫಿರರ ಹಬ್ಬದ ದಿನ ನಮ್ಮ ದೈವ ಸೈನಿಕರು ಬಾಂಬ್‌ ಸ್ಫೋಟಿಸುವಲ್ಲಿ ಯಶಸ್ವಿಯಾದರು!’

ಭೂಕಂಪವಾಗಿ, ಖಾಯಿಲೆಗಳು ಬಂದು, ತಲೆಮಾರೇ ನಶಿಸಿ ಹೋಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ‘ಅಮ್ಮಾ ತಾಯಿ’ಯಂತೆ ನಿಂತಿರುವ ಪಾಕಿಸ್ತಾನ್‌, ಭವಿಷ್ಯದ ಬೆಳಕು ಶಾಶ್ವತವಾಗಿ ನಶಿಸಿ ಹೋಗಿರುವ ಆಜಾದ್‌ ಕಾಶ್ಮೀರ್‌-ಆ ಬಿದ್ದ ಕಟ್ಟಡಗಳ ಅಡಿಯಿಂದ ಇವತ್ತಿಗೂ ಉಗ್ರವಾದಿಗಳನ್ನು ಕಳಿಸಿ ದಿಲ್ಲಿಯ ಎದೆಗೆ ಬಾಕು ತಿವಿಯುವ ಪ್ರಯತ್ನ ಮಾಡುತ್ತವೆಂದರೆ - ಇವರೊಂದಿಗೆ ಯಾವತ್ತಿಗಾದರೂ ಮೈತ್ರಿ ಸಾಧ್ಯವಾ? ಆ ಮಾತನ್ನಾದರೂ ಭಾರತ ಯಾಕೆ ಆಡಬೇಕು?

‘ದಿಲ್ಲಿ ಸ್ಫೋಟಗಳ ಬಗ್ಗೆ ನನಗೆ ಖೇದವಿದೆ ಅಂದಿದ್ದಾನೆ ಮುಷರ್ರಫ್‌. ಬಹುಶಃ ಉಗ್ರವಾದಿಗಳು ಅವನ ಕೈಮೀರಿ ಬೆಳೆದು ಬಿಟ್ಟಿರಬೇಕು’ ಅಂದೆ.

ಈಗಂತೂ ಅಫಘಾನಿಸ್ತಾನದ ಅಧಿಕೃತ ಸರ್ಕಾರ ಕೂಡ ಉಗ್ರಗಾಮಿಗಳನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಭಾರತದ ಅಕ್ಕಪಕ್ಕದ ಯಾವ ದೇಶದಲ್ಲೂ ಮುಸ್ಲಿಂ ಉಗ್ರರಿಗೆ ನೆಲೆ ಸಿಗಲು ಸಾಧ್ಯವಿಲ್ಲ. ಅವರೇನಿದ್ದರೂ ಪಾಕಿಸ್ತಾನವೆಂಬ ಪಾ ಯಖಾನೆಯಲ್ಲೇ ಹುಟ್ಟಬೇಕು, ಬೆಳೆಯಬೇಕು, ಅಲ್ಲಿಂದಲೇ ಬಂದೂಕು ಹೊತ್ತು ಕಾಶ್ಮೀರದ ಕಣಿವೆಗಿಳಿದು ಬರಬೇಕು.

ಇಂತಹ ಘಟನೆಗಳು ನಡೆದಾಗಲೆಲ್ಲ ನನಗೆ ದೋಸ್ತಿ, ಮಾತುಕತೆ, ಹಳೆಯ ಬಾಂಧವ್ಯ, ಒಳರಸ್ತೆ, ಲಾಹೋರದ ಬಸ್ಸು, ಮತ್ತೆ ರೈಲು, ಮುಷರ್ರಫ್‌ಗೆ ಸ್ವಾಗತ, ಅಲ್ಲಿಗೆ ನಮ್ಮ ಪ್ರಧಾನಿ-ಇಂತಹ ಮಾತುಗಳ ಬಗ್ಗೆ ವಿಶ್ವಾಸ ನಶಿಸುತ್ತ ಹೋಗುತ್ತದೆ. ಪಾಕಿಸ್ತಾನ ಶತ್ರು ದೇಶ ಅಂತೀರಲ್ರೀ?ಅಲ್ಲಿನ ಜನ ಏನು ಅನ್ಯಾಯ ಮಾಡಿದಾರ್ರೀ?ಜನ ಒಳ್ಳೆಯವರೇ. ಅವರೂ ಮನುಷ್ಯರಲ್ವಾ?’ ಅಂತ ಮಾತಾಡುವ ನಮ್ಮ ಸೆಕ್ಯುಲರ್‌ ಮಿತ್ರರ ಬಗ್ಗೆ ಬೇಸರ ಮೂಡುತ್ತದೆ.

ದೇಶವೆಂದರೆ ನೆಲವಲ್ಲ : ‘ದೇಶವೆಂದರೆ ಜನಗಳು’ ಅಂತ ಇವರೇ ಹೇಳುತ್ತಾರೆ. ಉಗ್ರಗಾಮಿಗಳೆಂದರೆ ದೇವರಲ್ಲ, ರಾಕ್ಷಸರಲ್ಲ : ಉಗ್ರಗಾಮಿಗಳು ಮನುಷ್ಯರೇ. ಆದರೆ ಮನುಷ್ಯತ್ವ ಮರೆತವರು. ಪ್ರಾಣಿಗಳಂತಾಗಿದ್ದಾರೆ. ಪ್ರಾಣಿ ತಹಬಂದಿಗೆ ಬಾರದಾದಾಗ ಮನುಷ್ಯ ಏನು ಮಾಡುತ್ತಾನೋ, ಅದನ್ನು ತಕ್ಷಣ ಮಾಡಬೇಕಿದೆ.

ಕೊನೆಯ ಮಾತು :

‘ಕರ್ನಾಟಕದಲ್ಲಿ ಉಗ್ರರ ಆಟ ನಡೆಯೋದಿಲ್ಲ’ ಅಂದರಂತೆ ಧರಂ ಸಿಂಗ್‌.

ಅವರ ಆಶಯ ಒಳ್ಳೆಯದೇ. ಆದರೆ ನಮ್ಮ ಪೊಲೀಸ್‌ ಇಲಾಖೆಯಲ್ಲಿ ಆ್ಯಂಟಿ ಟೆರರಿಸ್ಟ್‌ ಸ್ಕ್ವ್ಯಾಡ್‌ ಅಂತ ಒಂದು ವಿಭಾಗವಿದೆ. ಅಲ್ಲಿರುವ ಅಧಿಕಾರಿಗಳಿಗ್ಯಾರಿಗಾದರೂ ಉಗ್ರರ ಬಗ್ಗೆ, ಉಗ್ರರ ಸಂಘಟನೆಗಳ ಬಗ್ಗೆ ಏನಾದರೂ ಗೊತ್ತಿದೆಯಾ ಕೇಳಿ?

By the way, ಉಗ್ರರು ಅಂತ ಧರಂ ಸಿಂಗ್‌ ಅಂದಿದ್ದು ಉಗ್ರಪ್ಪನ ಆಸುಪಾಸಿನ ಮಂದಿಯ ಬಗೆಗಲ್ಲ ತಾನೆ?

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)


ಶಾರುಖ್‌ ಬಗ್ಗೆ ಇನ್ನಷ್ಟು :
ಎಲ್ಲರ ಹೆಂಡತಿಯರಿಗೂ ಶಾರುಖ್‌ ಪತ್ನಿ ಬುದ್ಧಿಬರಲೆಂದು ಧೇನಿಸುತ್ತಾ..


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X